ಆ್ಯಲಿಟರೆಸಿಯ ಕುರಿತಾಗಿ ಎಚ್ಚರಿಕೆಯಿಂದಿರ್ರಿ
ಒಂದು ಹೊಸ ನಮೂನೆಯ ಓದುವ ಸಮಸ್ಯೆಯು ನಮ್ಮ ಲೋಕದಲ್ಲಿ ವ್ಯಾಪಕವಾಗಿ ಪರಿಣಾಮ ಬೀರುತ್ತಿದೆ. ಇದು ಆ್ಯಲಿಟರೆಸಿ (ವಾಚನನಾಸಕ್ತಿ) ಎಂದು ಕರೆಯಲ್ಪಡುತ್ತದೆ. “ಓದಲು ಶಕ್ತರಾಗಿರುವ ಯೋಗ್ಯತೆ ಅಥವಾ ಸ್ಥಿತಿಯಲ್ಲಿರುವುದಾದರೂ ಹಾಗೆ ಮಾಡಲು ನಿರಾಸಕ್ತರಾಗಿರುವುದು” ಎಂದು ಇದರ ಅರ್ಥನಿರೂಪಣೆ ಮಾಡಲಾಗುತ್ತದೆ.a (ಮೆರಿಯಮ್-ವೆಬ್ಸ್ಟರ್ಸ್ ಕಲೀಜಿಅಟ್ ಡಿಕ್ಷನರಿ, ಟೆನ್ತ್ ಎಡಿಷನ್) ಹೌದು, ಓದುವುದು—ಒಂದು ಕಾಲದಲ್ಲಿ ಸುಖಾನುಭವದೋಪಾದಿ ಅತ್ಯಾಸಕ್ತಿಯುಳ್ಳದ್ದಾಗಿದ್ದಂತಹದ್ದು—ಈಗ ಅನೇಕವೇಳೆ ಒಂದು ಬೇಸರದ ಕೆಲಸದೋಪಾದಿ ಧಿಕ್ಕರಿಸಲ್ಪಡುತ್ತದೆ. “ಓದಲಿಕ್ಕಾಗಿ ನೀವು ಹೆಣಗಾಡಬೇಕು ಮತ್ತು ಅದು ವಿನೋದಕರವಲ್ಲ” ಎಂದು 12 ವರ್ಷ ಪ್ರಾಯದ ಹುಡುಗಿಯೊಬ್ಬಳು ದೂರಿದಳು.
ಅನೇಕ ವಯಸ್ಕರು ಸಹ ವಾಚನನಾಸಕ್ತರಾಗಿದ್ದಾರೆ. ಉದಾಹರಣೆಗಾಗಿ, ಅಮೆರಿಕವು 97 ಪ್ರತಿಶತ ಸಾಕ್ಷರತೆಯನ್ನು ಹೆಮ್ಮೆಯಿಂದ ಪ್ರತಿಪಾದಿಸುತ್ತದೆ; ಆದರೂ ಅಮೆರಿಕದ ವಯಸ್ಕರಲ್ಲಿ ಸುಮಾರು ಅರ್ಧಭಾಗದಷ್ಟು ಜನರು, ಪುಸ್ತಕಗಳು ಅಥವಾ ಪತ್ರಿಕೆಗಳನ್ನು ವಿರಳವಾಗಿ ಓದುತ್ತಾರೆ! ಸ್ಪಷ್ಟವಾಗಿಯೇ, ಓದುವ ಸಾಮರ್ಥ್ಯವು ಯಾವಾಗಲೂ ಓದುವ ಬಯಕೆಯಿಂದ ಸರಿಹೊಂದಿಸಲ್ಪಡುವುದಿಲ್ಲ. ಸುಶಿಕ್ಷಿತರ ನಡುವೆ ಸಹ ಇದು ಸತ್ಯವಾಗಿದೆ. “ನಾನು ಇಡೀ ದಿನ ಪರಿಶ್ರಮದ ಕೆಲಸಮಾಡಿ, ಬಳಲಿ ಮನೆಗೆ ಬರುವಾಗ, ಒಂದು ಪುಸ್ತಕವನ್ನು ಎತ್ತಿಕೊಳ್ಳುವ ಬದಲಿಗೆ, ಟಿವಿಯನ್ನು ಆನ್ ಮಾಡುತ್ತೇನೆ. ಇದು ಹೆಚ್ಚು ಸುಲಭ” ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪದವೀಧರನೊಬ್ಬನು ಹೇಳುತ್ತಾನೆ.
ಓದುವಿಕೆಗೆ ಏನು ಸಂಭವಿಸಿದೆ? ಇತ್ತೀಚಿನ ದಶಕಗಳಲ್ಲಿ ಅದರ ಜನಪ್ರಿಯತೆಯು, ಗಮನವನ್ನು ಬಲವಂತದಿಂದ ಸೆಳೆಯುವ ಮಾಧ್ಯಮಕ್ಕೆ ವಶವಾಗಿದೆ. “ಈಗ ನಮಗೆ ನಮ್ಮ ಎಮ್ಟಿವಿ (MTV), ಮತ್ತು ನಮ್ಮ ವಿಸಿಆರ್ (VCR) ಹಾಗೂ ನಿಂಟೆಂಡೊ (ವಿಡಿಯೊ ಗೇಮ್ಸ್ನ ಟ್ರೇಡ್ಮಾರ್ಕ್) ಮತ್ತು ವಾಕ್ಮ್ಯಾನ್—ಇರುವಾಗ, ಪುಸ್ತಕವೊಂದನ್ನು ಪ್ರಯಾಸಕರವಾಗಿ ಓದುವುದರ ಪ್ರತೀಕ್ಷೆಯು, ಕಡಿಮೆ ಚಟುವಟಿಕೆಗಳಿದ್ದ ಸಮಯಗಳಲ್ಲಿ ಇದ್ದಷ್ಟು ಸುಲಭವಾಗಿ ತೋರುವುದಿಲ್ಲ” ಎಂದು ಫಾರ್ಟ್ಯೂನ್ ಪತ್ರಿಕೆಯಲ್ಲಿ ಸ್ಟ್ರಾಟ್ಫರ್ಡ್ ಪಿ. ಷೆರ್ಮನ್ ಬರೆಯುತ್ತಾರೆ. ಓದುವಿಕೆಯ ಅತ್ಯಂತ ಹೆಚ್ಚು ಸಮಯವನ್ನು ಕಬಳಿಸುವ ಪ್ರತಿಸ್ಪರ್ಧಿಯು ಟೆಲಿವಿಷನ್ ಆಗಿದೆ. ವಾಸ್ತವವಾಗಿ, 65 ವರ್ಷ ಪ್ರಾಯದಷ್ಟಕ್ಕೆ ಸಾಮಾನ್ಯ ಅಮೆರಿಕದವನು ತನ್ನ ಜೀವಿತದ ಒಂಬತ್ತು ವರ್ಷಗಳನ್ನು ಟಿವಿ ವೀಕ್ಷಣೆಯಲ್ಲಿ ವ್ಯಯಿಸಿರುತ್ತಾನೆ!
ಓದುವಿಕೆಯ ಪ್ರತಿಫಲಗಳು ಎಷ್ಟೋ ವೇಳೆ ಕಂಪಿಸುವ ಪರದೆಗೆ ಬಲಿಕೊಡಲ್ಪಡುವುದರಿಂದ, ಈ ಕೆಳಗಿನವುಗಳನ್ನು ಪರಿಗಣಿಸುವುದು ಹಿತಕರ.
ಓದುವಿಕೆಯ ಪ್ರಯೋಜನಗಳು
ಓದುವಿಕೆಯು ಭಾವನಾಶಕ್ತಿಯನ್ನು ಪ್ರಚೋದಿಸುತ್ತದೆ. ಟೆಲಿವಿಷನ್ ನಿಮ್ಮ ಪರವಾಗಿ ಚಿಂತನೆಯನ್ನು ಮಾಡುತ್ತದೆ. ಪ್ರತಿಯೊಂದು ವಿಷಯವು ಬಿಡಿಸಿ ಹೇಳಲ್ಪಡುತ್ತದೆ: ಮುಖದ ಭಾವನೆಗಳು, ಧ್ವನಿಯ ಏರಿಳಿತಗಳು, ಮತ್ತು ರಂಗದೃಶ್ಯ.
ಹಾಗಿದ್ದರೂ, ಓದುವಿಕೆಯ ಮೂಲಕ ನೀವು ಪಾತ್ರಧಾರಿಗಳನ್ನು ಆರಿಸಿ, ವೇದಿಕೆಯನ್ನು ಸಜ್ಜುಗೊಳಿಸಿ, ಅಭಿನಯವನ್ನು ನಿರ್ದೇಶಿಸುತ್ತೀರಿ. “ನಿಮಗೆ ಎಷ್ಟೊಂದು ಸ್ವಾತಂತ್ರ್ಯವಿದೆ” ಎಂದು 10 ವರ್ಷ ಪ್ರಾಯದ ಹುಡುಗನೊಬ್ಬನು ಹೇಳುತ್ತಾನೆ. “ಪ್ರತಿಯೊಬ್ಬ ವ್ಯಕ್ತಿಯೂ ಹೇಗೆ ಕಾಣಬೇಕೆಂದು ನೀವು ಬಯಸುತ್ತೀರೋ ಅದೇ ರೀತಿಯಲ್ಲಿ ಅವನು ಕಾಣುವಂತೆ ನೀವು ಮಾಡಸಾಧ್ಯವಿದೆ. ನೀವು ಟಿವಿಯಲ್ಲಿ ಏನನ್ನಾದರೂ ನೋಡುವುದಕ್ಕಿಂತಲೂ ಒಂದು ಪುಸ್ತಕವನ್ನು ನೀವು ಓದುವಾಗ, ವಿಷಯಗಳು ಹೆಚ್ಚಾಗಿ ನಿಮ್ಮ ಹತೋಟಿಯಲ್ಲಿರುತ್ತವೆ.” ಡಾ. ಬ್ರೂನೊ ಬೆಟಲ್ಹೈಮ್ ಗಮನಿಸಿದಂತೆ, “ಟೆಲಿವಿಷನ್ ಭಾವನಾಶಕ್ತಿಯನ್ನು ಸೆರೆಹಿಡಿಯುತ್ತದೆ, ಆದರೆ ಅದನ್ನು ಬಿಡುಗಡೆಮಾಡುವುದಿಲ್ಲ. ಒಂದು ಒಳ್ಳೆಯ ಪುಸ್ತಕವು ಆ ಕೂಡಲೆ ಪ್ರಚೋದನೆಯನ್ನೀಯುತ್ತದೆ ಮತ್ತು ಮನಸ್ಸನ್ನು ಸ್ವತಂತ್ರಗೊಳಿಸುತ್ತದೆ.”
ಓದುವಿಕೆಯು ಶಾಬ್ದಿಕ ಕೌಶಲಗಳನ್ನು ವಿಕಸಿಸುತ್ತದೆ. “ಹುಡುಗನಾಗಲಿ ವಯಸ್ಕನಾಗಲಿ ಟೆಲಿವಿಷನ್ ಅನ್ನು ಹೆಚ್ಚಾಗಿ ವೀಕ್ಷಿಸುವ ಮೂಲಕ ಹೆಚ್ಚು ಒಳ್ಳೆಯ ವೀಕ್ಷಕನಾಗಿ ಪರಿಣಮಿಸುವುದಿಲ್ಲ” ಎಂದು ಮ್ಯಾಸಚೂಸೆಟ್ಸ್ ವಿಶ್ವವಿದ್ಯಾನಿಲಯದ ರೆಜಿನಲ್ಡ್ ಡ್ಯಾಮರಾಲ್ ದಾಖಲಿಸುತ್ತಾರೆ. “ಟೆಲಿವಿಷನ್ ಅನ್ನು ವೀಕ್ಷಿಸಲು ಅಗತ್ಯವಿರುವ ಕೌಶಲಗಳು ಎಷ್ಟು ಅಸಂಯುಕ್ತವಾಗಿವೆಯೆಂದರೆ, ಟೆಲಿವಿಷನ್ ವೀಕ್ಷಿಸುವ ಅಸಾಮರ್ಥ್ಯದ ಕುರಿತಾಗಿ ನಾವು ಇದುವರೆಗೂ ಕೇಳಿಲ್ಲ.”
ಇದಕ್ಕೆ ವ್ಯತಿರಿಕ್ತವಾಗಿ, ಓದುವಿಕೆಯು ಶಾಬ್ದಿಕ ಕೌಶಲಗಳನ್ನು ಅಗತ್ಯಪಡಿಸುತ್ತದೆ ಮತ್ತು ವಿಕಸಿಸುತ್ತದೆ; ಇದು ಮಾತು ಮತ್ತು ಬರಹದೊಂದಿಗೆ ಬಿಡಿಸಿಕೊಳ್ಳಲಾಗದ ರೀತಿಯಲ್ಲಿ ಸಂಬಂಧವನ್ನು ಹೊಂದಿದೆ. ಪ್ರಾಢ ಶಾಲೆಯ ಇಂಗ್ಲಿಷ್ ಶಿಕ್ಷಕನೊಬ್ಬನು ಹೇಳುವುದು: “ವಿದ್ಯಾರ್ಥಿಯೋಪಾದಿ ನಿಮ್ಮ ಯಶಸ್ಸು ನಿಮ್ಮ ಶಬ್ದಭಂಡಾರದ ಮೇಲೆ, ನೀವು ಓದಿದಂತೆ ಯಾವ ವಿಷಯವನ್ನು ಅರ್ಥಮಾಡಿಕೊಳ್ಳಬಲ್ಲಿರಿ ಮತ್ತು ನೀವು ಬರೆದಂತೆ ಹೇಗೆ ವಿಚಾರಮಾಡಬಲ್ಲಿರಿ ಎಂಬುದರ ಮೇಲೆ ಬಹಳವಾಗಿ ಹೊಂದಿಕೊಂಡಿದೆ ಎಂಬುದರ ಕುರಿತು ಯಾವುದೇ ಪ್ರಶ್ನೆಯಿಲ್ಲ, ಮತ್ತು ಓದುವುದರ ಹೊರತಾಗಿ ಒಂದು ಒಳ್ಳೆಯ ಶಬ್ದಭಂಡಾರವನ್ನು ವೃದ್ಧಿಗೊಳಿಸಲು ಬೇರೆ ಯಾವುದೇ ಮಾರ್ಗ ಇಲ್ಲ—ಒಂದೂ ಇಲ್ಲ.”
ಓದುವಿಕೆಯು ತಾಳ್ಮೆಯನ್ನು ಪ್ರವರ್ಧಿಸುತ್ತದೆ. ತಾನು ಏನನ್ನು ನೋಡುತ್ತಿದ್ದೇನೆ ಎಂಬುದರ ಕುರಿತು ಸ್ವತಃ ಆಲೋಚಿಸಲಿಕ್ಕಾಗಿ ವೀಕ್ಷಕನಿಗೆ ಸಮಯವನ್ನು ಕೊಡದೇ, ಕೇವಲ ಒಂದು ತಾಸಿನಲ್ಲಿ ಟಿವಿ ಪರದೆಯ ಮೇಲೆ ಒಂದು ಸಾವಿರಕ್ಕಿಂತಲೂ ಹೆಚ್ಚಿನ ಆಕೃತಿಗಳು ಥಟ್ಟನೆ ಕಾಣಿಸಿಕೊಳ್ಳಬಹುದು. “ಈ ತಂತ್ರಕೌಶಲವು ಅಕ್ಷರಶಃ ಅಲ್ಪಸಮಯದ ಲಕ್ಷ್ಯಾವಧಿಯನ್ನು ಯೋಜಿಸುತ್ತದೆ” ಎಂದು ಡಾ. ಮ್ಯಾಥ್ಯೂ ಡೂಮಾಂಟ್ ಹೇಳುತ್ತಾರೆ. ಕೆಲವು ಅಧ್ಯಯನಗಳು, ಆವೇಗಪರ ನಿರ್ಣಯ ಮಾಡುವಿಕೆ ಮತ್ತು ಅಸ್ತಿಮಿತತೆಯೊಂದಿಗೆ—ಮಕ್ಕಳು ಹಾಗೂ ವಯಸ್ಕರು ಇಬ್ಬರಲ್ಲಿಯೂ—ವಿಪರೀತ ಟಿವಿ ವೀಕ್ಷಣೆಗೆ ಸಂಬಂಧಿಸುವುದು ಆಶ್ಚರ್ಯಕರವಲ್ಲ.
ಓದುವಿಕೆಯು ತಾಳ್ಮೆಯನ್ನು ಅಗತ್ಯಪಡಿಸುತ್ತದೆ. “ವಾಕ್ಯಗಳು, ಪ್ಯಾರಗ್ರಾಫ್ಗಳು, ಮತ್ತು ಪುಟಗಳು, ನಿಧಾನವಾಗಿ, ಅನುಕ್ರಮವಾಗಿ, ಮತ್ತು ನಿಶ್ಚಯವಾಗಿ ಅಂತರ್ದೃಷ್ಟಿಯುಳ್ಳವುಗಳಾಗಿರದೆ ತರ್ಕಸಾಮರ್ಥ್ಯಕ್ಕನುಗುಣವಾಗಿ ಪ್ರಕಾಶಗೊಳ್ಳುತ್ತವೆ” ಎಂದು ನಿವೇದನೆ ಪರಿಣತ ನೀಲ್ ಪೋಸ್ಟ್ಮನ್ ಬರೆಯುತ್ತಾರೆ. ತನ್ನದೇ ಆದ ರೀತಿಯಲ್ಲಿ ಓದುಗನು, ಪುಟದಲ್ಲಿರುವ ವಿಷಯವನ್ನು ಅರ್ಥವಿವರಣೆಮಾಡಿಕೊಳ್ಳಬೇಕು, ಅಂದಾಜುಮಾಡಬೇಕು, ಮತ್ತು ಸ್ವತಃ ಆಲೋಚಿಸಿಕೊಳ್ಳಬೇಕು. ಓದುವಿಕೆಯು, ತಾಳ್ಮೆಯನ್ನು ಕೇಳಿಕೊಳ್ಳುವ ಮತ್ತು ಅದನ್ನು ವಿಕಸಿಸುವ ಜಟಿಲವಾದ ವಿಸಂಕೇತನಾ ಕಾರ್ಯವಿಧಾನವಾಗಿದೆ.
ಒಂದು ಸಮತೂಕದ ನೋಟ
ಓದುವಿಕೆಯ ಪ್ರಯೋಜನಗಳ ಹೊರತಾಗಿ, ಟೆಲಿವಿಷನಿಗೆ ಅದರದ್ದೇ ಅದ ಉತ್ಕೃಷ್ಟತೆಗಳೂ ಇವೆಯೆಂಬುದು ಒಪ್ಪಿಕೊಳ್ಳತಕ್ಕದ್ದೇ. ಕೆಲವು ವಿಧಗಳ ಸಮಾಚಾರವನ್ನು ತಿಳಿಯಪಡಿಸುವುದರಲ್ಲಿ ಇದು ಓದುವಿಕೆಯನ್ನೂ ಅತಿಶಯಿಸಬಲ್ಲದು.b ಚಿತ್ತಾಕರ್ಷಕವಾದ ಟಿವಿ ಪ್ರದರ್ಶನವೊಂದು, ಓದುವಿಕೆಯಲ್ಲಿ ಆಸಕ್ತಿಯನ್ನು ಸಹ ಪ್ರಚೋದಿಸಬಲ್ಲದು. “ಮಕ್ಕಳ ಸಾಹಿತ್ಯವನ್ನು ಮತ್ತು ವಿಜ್ಞಾನವನ್ನು ದೃಶ್ಯೀಕರಿಸುವ ಟಿವಿ ಕಾರ್ಯಕ್ರಮಗಳು, ಆ ವಿಷಯಗಳು ಮತ್ತು ಅವುಗಳಿಗೆ ಸಂಬಂಧಿಸಿದ ವಿಷಯಗಳ ಕುರಿತಾದ ಪುಸ್ತಕಗಳನ್ನು ಹುಡುಕಿಕೊಂಡುಹೋಗುವಂತೆ ಮಕ್ಕಳನ್ನು ಪ್ರಭಾವಿಸುತ್ತವೆ” ಎಂದು ದಿ ಎನ್ಸೈಕ್ಲೊಪೀಡಿಯ ಅಮೆರಿಕಾನ ಹೇಳುತ್ತದೆ.
ಒಂದು ಸಮತೂಕದ ನೋಟವು ಆವಶ್ಯಕ. ಮುದ್ರಿತ ಪುಟ ಮತ್ತು ಟೆಲಿವಿಷನ್ ಎರಡು ವಿಭಿನ್ನ ಮಾಧ್ಯಮಗಳಾಗಿವೆ. ಪ್ರತಿಯೊಂದಕ್ಕೂ ಅಂತರ್ಗತವಾದ ಸಾಮರ್ಥ್ಯಗಳೂ ಪರಿಮಿತಿಗಳೂ ಇವೆ. ಪ್ರತಿಯೊಂದನ್ನೂ ಉಪಯೋಗಿಸಸಾಧ್ಯವಿದೆ ಅಥವಾ ದುರುಪಯೋಗಿಸಸಾಧ್ಯವಿದೆ. ಹೌದು, ಒಬ್ಬನು ತನ್ನನ್ನು ಪ್ರತ್ಯೇಕಿಸಿಕೊಳ್ಳುವಂತಹ ಹಂತದ ತನಕ ವಿಪರೀತವಾಗಿ ಓದುವುದು, ವಿಪರೀತ ಟಿವಿ ವೀಕ್ಷಣೆಯಷ್ಟೇ ವಿನಾಶಕರವಾಗಿರಸಾಧ್ಯವಿದೆ.—ಜ್ಞಾನೋಕ್ತಿ 18:1; ಪ್ರಸಂಗಿ 12:12.
ಆದರೂ, ಓದುವಿಕೆಯು ಅನೇಕವೇಳೆ ದೃಶ್ಯ ಗಮನಹರಣಕ್ಕಿಂತ ಲಘುವಾದದ್ದೆಂದು ಎಣಿಸಲ್ಪಡುತ್ತದೆ. ವೃತ್ತಪತ್ರಿಕೆಯನ್ನು ಮಾರುವ ಜಪಾನೀಯನೊಬ್ಬನು ಪ್ರಲಾಪಿಸುವುದು, “ನಾವು ವಾಚಕರ ಸಂಸ್ಕೃತಿಯನ್ನು ಬಿಟ್ಟು ಪ್ರೇಕ್ಷಕರದ್ದಕ್ಕೆ ತಿರುಗುತ್ತಿದ್ದೇವೆ.” ಇದು ವಿಶೇಷವಾಗಿ ಯುವ ಜನರ ನಡುವೆ ಗಮನಿಸಲ್ಪಟ್ಟಿದೆ. ಫಲಿತಾಂಶವಾಗಿ, ಅವರಲ್ಲಿ ಅನೇಕರು ವಾಚನನಾಸಕ್ತರಾಗಿ ಬೆಳೆಯುತ್ತಾರೆ ಮತ್ತು ತದನಂತರ ಪರಿಣಾಮಗಳನ್ನು ಅನುಭವಿಸುತ್ತಾರೆ. ಆದುದರಿಂದ, ಓದಲಿಕ್ಕಾಗಿ ಬಯಕೆಯನ್ನು ವಿಕಸಿಸಿಕೊಳ್ಳುವಂತೆ ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಸಹಾಯ ಮಾಡಬಲ್ಲರು?
ಹೆತ್ತವರು ಸಹಾಯ ಮಾಡಬಲ್ಲ ವಿಧ
ಮಾದರಿಯನ್ನಿಡಿರಿ. “ಒಳ್ಳೆಯ ಓದುಗರನ್ನು ಬೆಳೆಸುವ ವಿಧ” ಎಂಬ ಶಿರೋನಾಮವುಳ್ಳ ನ್ಯೂಸ್ವೀಕ್ನ ಲೇಖನವು ಈ ಸೂಚಿತ ಬುದ್ಧಿವಾದವನ್ನು ಕೊಡುತ್ತದೆ: “ನೀವು ಟಿವಿಯ ಮುಂದೆ ಅತ್ಯಧಿಕ ಸಮಯವನ್ನು ಕಳೆಯುವವರಾಗಿರುವಲ್ಲಿ, ಬಹುಶಃ ನಿಮ್ಮ ಮಗುವೂ ಹಾಗೆ ಮಾಡುವುದು. ಇನ್ನೊಂದು ಕಡೆಯಲ್ಲಿ, ನೀವು ಒಂದು ಒಳ್ಳೆಯ ಪುಸ್ತಕದೊಂದಿಗೆ ಸಂತೋಷದಿಂದ ಮುದುರಿಕೊಂಡು ಕುಳಿತುಕೊಂಡಿರುವುದನ್ನು ನಿಮ್ಮ ಮಕ್ಕಳು ನೋಡುವುದಾದರೆ, ನೀವು ಓದುವಿಕೆಯ ಪ್ರಯೋಜನಗಳನ್ನು ಬೋಧಿಸುತ್ತೀರಿ ಮಾತ್ರವಲ್ಲದೆ, ಅದನ್ನು ಅಭ್ಯಾಸಿಸುತ್ತೀರಿ ಎಂಬ ಕಲ್ಪನೆಯನ್ನು ಅವರು ಪಡೆದುಕೊಳ್ಳುವರು.” ಇನ್ನೂ ಹೆಚ್ಚಾಗಿ, ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ಕೇಳಿಸುವಂತೆ ಗಟ್ಟಿಯಾಗಿ ಓದುತ್ತಾರೆ. ಹಾಗೆ ಮಾಡುವುದರಲ್ಲಿ, ಅವರು ಒಂದು ಆದರಣೀಯ ಬಂಧವನ್ನು ಸೃಷ್ಟಿಸುತ್ತಾರೆ—ದುಃಖಕರವಾಗಿ ಇದು ಇಂದು ಅನೇಕ ಕುಟುಂಬಗಳಲ್ಲಿ ಇಲ್ಲದೆ ಹೋಗುತ್ತಿರುವಂತಹ ವಿಷಯವಾಗಿದೆ.
ಒಂದು ಗ್ರಂಥಾಲಯವನ್ನು ಆರಂಭಿಸಿರಿ. “ಪುಸ್ತಕಗಳಿರಲಿ—ತುಂಬಾ ಪುಸ್ತಕಗಳಿರಲಿ” ಎಂದು ಡಾ. ಥಿಯೊಡೋರ್ ಐಸಕ್ ರೂಬಿನ್ ಶಿಫಾರಸ್ಸು ಮಾಡುತ್ತಾರೆ. “ಅವು ಲಭ್ಯವಿದ್ದುದರಿಂದ ಮತ್ತು ಇತರರೆಲ್ಲರೂ ಅವುಗಳನ್ನು ಓದುತ್ತಿದ್ದುದರಿಂದ, ನಾನು ಅವುಗಳನ್ನು ಓದುತ್ತಿದ್ದುದನ್ನು ಜ್ಞಾಪಿಸಿಕೊಳ್ಳುತ್ತೇನೆ.” ಪುಸ್ತಕಗಳು ಸುಲಭವಾಗಿ ಲಭ್ಯವಿರುವುದಾದರೆ ಮಕ್ಕಳು ಓದುವರು. ಪುಸ್ತಕಗಳು ಅವರ ಸ್ವಂತ ವೈಯಕ್ತಿಕ ಗ್ರಂಥಾಲಯದ ಭಾಗವಾಗಿರುವಲ್ಲಿ, ಓದುವ ಪ್ರೇರಣೆಯು ಇನ್ನೂ ಹೆಚ್ಚು ಮಹತ್ವದ್ದಾಗಿರುವುದು.
ಓದುವಿಕೆಯನ್ನು ಆನಂದದಾಯಕವಾದುದಾಗಿ ಮಾಡಿರಿ. ಒಂದು ಮಗುವು ಓದಲು ಇಷ್ಟಪಡುವುದಾದರೆ, ಕಲಿಕೆಯ ಅರ್ಧ ಹೋರಾಟವು ಜಯಿಸಲ್ಪಡುತ್ತದೆ ಎಂದು ಹೇಳಲ್ಪಟ್ಟಿದೆ. ಆದುದರಿಂದ ನಿಮ್ಮ ಮಗುವಿಗೆ ಓದುವುದನ್ನು ಒಂದು ಆಹ್ಲಾದಕರ ಅನುಭವವನ್ನಾಗಿ ಮಾಡಿರಿ. ಹೇಗೆ? ಮೊದಲಾಗಿ, ಟೆಲಿವಿಷನ್ ನೋಡುವ ಸಮಯದ ಕುರಿತು ಪರಿಮಿತಿಗಳನ್ನು ಇಡಿರಿ; ಇದು ಬಹುಮಟ್ಟಿಗೆ ಯಾವಾಗಲೂ ಓದುವಿಕೆಯ ಮೇಲೆ ಆದ್ಯತೆಯನ್ನು ಪಡೆಯುತ್ತದೆ. ಎರಡನೆಯದಾಗಿ, ಓದುವಿಕೆಗೆ ಸಹಾಯಕವಾಗಿರುವ ಒಂದು ವಾತಾವರಣವನ್ನು ನಿರ್ಮಿಸಿರಿ; ನಿಶ್ಶಬ್ದವಾದ ಸಮಯಗಳು ಮತ್ತು ಒಳ್ಳೆಯ ಬೆಳಕಿನ ಸೌಕರ್ಯವಿರುವ ವೈಯಕ್ತಿಕ ಗ್ರಂಥಾಲಯದಂತಹ ಪ್ರಶಾಂತ ಸ್ಥಳಗಳು, ಓದುವಿಕೆಯನ್ನು ಆಹ್ವಾನಿಸುತ್ತವೆ. ಮೂರನೆಯದಾಗಿ, ಓದುವಿಕೆಯನ್ನು ಬಲಾತ್ಕರಿಸಬೇಡಿ. ಓದಲಿಕ್ಕಾಗಿ ವಸ್ತುವಿಷಯಗಳನ್ನೂ ಸಂದರ್ಭಗಳನ್ನೂ ಲಭ್ಯಗೊಳಿಸಿರಿ, ಆದರೆ ಮಗುವು ಆ ಬಯಕೆಯನ್ನು ವಿಕಸಿಸಿಕೊಳ್ಳುವಂತೆ ಬಿಡಿರಿ.
ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ಓದಿಹೇಳುವುದನ್ನು ಆರಂಭದ ಪ್ರಾಯದಲ್ಲೇ ಆರಂಭಿಸುತ್ತಾರೆ. ಇದು ಪ್ರಯೋಜನಕರವಾಗಿರಸಾಧ್ಯವಿದೆ. ಮೂರರ ಪ್ರಾಯದಷ್ಟಕ್ಕೆ, ಈ ಮಾತುಗಳನ್ನು ಅದಕ್ಕೆ ನಿರರ್ಗಳವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲದಿರುವುದಾದರೂ, ಸಾಮಾನ್ಯವಾದ ವಯಸ್ಕ ಸಂಭಾಷಣೆಯಲ್ಲಿ ಅದು ಉಪಯೋಗಿಸುವಂತಹ ಅಧಿಕಾಂಶ ಭಾಷೆಯನ್ನು ಒಂದು ಮಗುವು ಅರ್ಥಮಾಡಿಕೊಳ್ಳುತ್ತದೆ ಎಂದು ಕೆಲವು ಪರಿಣತರು ಹೇಳುತ್ತಾರೆ. “ಮಕ್ಕಳು ಭಾಷೆಯನ್ನು ಬಾಯಿಯಿಂದ ಹೇಳಲು ಕಲಿಯುವುದಕ್ಕಿಂತಲೂ, ಅದನ್ನು ಹೆಚ್ಚು ಬೇಗನೆ ಮತ್ತು ಹೆಚ್ಚು ತ್ವರಿತವಾದ ಪ್ರಮಾಣದಲ್ಲಿ ಅರ್ಥಮಾಡಿಕೊಳ್ಳಲು ಕಲಿಯಲಾರಂಭಿಸುತ್ತಾರೆ” ಎಂದು ಜೀವನದ ಮೊದಲ ಮೂರು ವರ್ಷಗಳು (ಇಂಗ್ಲಿಷ್) ಎಂಬ ಪುಸ್ತಕವು ಹೇಳುತ್ತದೆ. ತಿಮೊಥೆಯನ ಕುರಿತಾಗಿ ಬೈಬಲು ಹೇಳುವುದು: “ಶೈಶವದಿಂದಲೂ ನಿನಗೆ ಪರಿಶುದ್ಧಗ್ರಂಥಗಳ ಪರಿಚಯವಾಯಿತಲ್ಲಾ.” (2 ತಿಮೊಥೆಯ 3:15, NW) ಶಿಶು ಎಂಬ ಶಬ್ದವು, ಇನ್ಫ್ಯಾನ್ಸ್ ಎಂಬ ಲ್ಯಾಟಿನ್ ಶಬ್ದದಿಂದ ಬಂದಿತೆಂದು ಪತ್ತೆಹಚ್ಚಲಾಗಿದ್ದು, ಅಕ್ಷರಶಃ “ಮಾತುಬಾರದವನು” ಎಂಬರ್ಥವನ್ನು ಹೊಂದಿದೆ. ಹೌದು, ತಿಮೊಥೆಯನು ಶಾಸ್ತ್ರೀಯ ಮಾತುಗಳನ್ನು ನುಡಿಯಸಾಧ್ಯವಿರುವುದಕ್ಕೆ ತೀರ ಮೊದಲೇ, ಅವುಗಳನ್ನು ಕೇಳಿದ್ದನು.
ಬೈಬಲು—ಒಂದು ಅತ್ಯುತ್ತಮ ಸಹಾಯಕ
“ಬೈಬಲು ಸಾಹಿತ್ಯಾತ್ಮಕ ಕೃತಿಯ ಭಯಭಕ್ತಿಹುಟ್ಟಿಸುವ ಸಂಗ್ರಹಣವಾಗಿದೆ” ಎಂದು ತನ್ನ ಸಾಹಿತ್ಯಾತ್ಮಕ ಪರಿಸರದಲ್ಲಿ ಬೈಬಲು (ಇಂಗ್ಲಿಷ್) ಎಂಬ ಪುಸ್ತಕವು ಹೇಳುತ್ತದೆ. ವಾಸ್ತವವಾಗಿ, ಅದರ 66 ಪುಸ್ತಕಗಳು ಯುವಕರೂ ವೃದ್ಧರೂ ಏಕರೂಪವಾಗಿ ಪಾಠಗಳನ್ನು ಕಲಿಯಬಲ್ಲಂತಹ ಕವಿತೆಯ ರೂಪಗಳು, ಹಾಡುಗಳು, ಮತ್ತು ಐತಿಹಾಸಿಕ ವೃತ್ತಾಂತಗಳನ್ನು ಒಳಗೊಂಡಿವೆ. (ರೋಮಾಪುರ 15:4) ಇನ್ನೂ ಹೆಚ್ಚಾಗಿ, ಬೈಬಲು ‘ದೈವಪ್ರೇರಿತವಾಗಿದ್ದು, ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.’—2 ತಿಮೊಥೆಯ 3:16.
ಹೌದು, ಅತ್ಯಾವಶ್ಯಕವಾದ, ಲಭ್ಯವಿರುವ ಓದುವ ವಸ್ತುವಿಷಯವು ದೇವರ ವಾಕ್ಯವಾದ ಬೈಬಲಾಗಿದೆ. ಸಕಾರಣದಿಂದಲೇ ಪ್ರತಿಯೊಬ್ಬ ಇಸ್ರಾಯೇಲ್ಯ ಅರಸನು, ಶಾಸ್ತ್ರವಚನಗಳ ಒಂದು ವೈಯಕ್ತಿಕ ಪ್ರತಿಯನ್ನು ಇಟ್ಟುಕೊಳ್ಳುವಂತೆಯೂ “ಜೀವಮಾನದ ದಿನಗಳೆಲ್ಲಾ ಅದರಲ್ಲಿ ಓದಿಕೊಳ್ಳುತ್ತಾ” ಇರುವಂತೆಯೂ ಅಗತ್ಯಪಡಿಸಲ್ಪಟ್ಟಿದ್ದನು. (ಧರ್ಮೋಪದೇಶಕಾಂಡ 17:18, 19) ಮತ್ತು ಶಾಸ್ತ್ರವಚನಗಳನ್ನು “ತಗ್ಗು ದನಿಯಲ್ಲಿ”—ಅಂದರೆ, ಸ್ವತಃ ಅವನು ಮೆತ್ತನೆಯ ಧ್ವನಿಯಲ್ಲಿ—“ಹಗಲಿರುಳು” ಓದುವಂತೆ ಯೆಹೋಶುವನಿಗೆ ಆಜ್ಞೆಯು ಕೊಡಲ್ಪಟ್ಟಿತ್ತು.—ಯೆಹೋಶುವ 1:8, NW.
ಬೈಬಲಿನ ಭಾಗಗಳು ಓದಲು ಸುಲಭವಾಗಿಲ್ಲ ಎಂಬುದು ಅಂಗೀಕಾರಾರ್ಹ. ಅವು ಏಕಾಗ್ರತೆಯನ್ನು ಕೇಳಿಕೊಳ್ಳಬಹುದು. ಜ್ಞಾಪಿಸಿಕೊಳ್ಳಿರಿ, ಪೇತ್ರನು ಬರೆದುದು: “ನವಜಾತ ಶಿಶುಗಳಂತೆ ವಾಕ್ಯಕ್ಕೆ ಸೇರಿರುವ ಅಮಿಶ್ರಿತ ಹಾಲಿಗಾಗಿ ಹಂಬಲವನ್ನು ಕಲ್ಪಿಸಿಕೊಳ್ಳಿರಿ.” (1 ಪೇತ್ರ 2:2, NW) ರೂಢಿಯೊಂದಿಗೆ, ದೇವರ ವಾಕ್ಯದ “ಹಾಲಿ”ನ ಕಡೆಗೆ ಓಲುವುದು, ತನ್ನ ತಾಯಿಯ ಹಾಲಿಗಾಗಿರುವ ಶಿಶುವಿನ ಸಹಜ ಹಂಬಲಿಕೆಯಷ್ಟು ಸ್ವಾಭಾವಿಕವಾಗಿ ಪರಿಣಮಿಸಸಾಧ್ಯವಿದೆ. ಬೈಬಲನ್ನು ಓದಲಿಕ್ಕಾಗಿ ಪರಿಗಣನೆಯನ್ನು ಬೆಳೆಸಿಕೊಳ್ಳಸಾಧ್ಯವಿದೆ.c ಈ ಪ್ರಯತ್ನವು ಸಾರ್ಥಕವೇ ಸರಿ. “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ” ಎಂಬುದಾಗಿ ಕೀರ್ತನೆಗಾರನು ಬರೆದನು. (ಕೀರ್ತನೆ 119:105) ನಮ್ಮ ತೊಂದರೆಭರಿತ ಸಮಯಗಳಲ್ಲಿ ನಮಗೆಲ್ಲರಿಗೆ ಅಂತಹ ಮಾರ್ಗದರ್ಶನೆಯ ಅಗತ್ಯವಿಲ್ಲವೊ?
[ಅಧ್ಯಯನ ಪ್ರಶ್ನೆಗಳು]
a ಆ್ಯಲಿಟರೆಸಿಯನ್ನು “ಅನಕ್ಷರತೆ”—“ಓದುವ ಅಥವಾ ಬರೆಯುವ ಅಸಾಮರ್ಥ್ಯ”—ಯೆಂದು ತಪ್ಪಾಗಿ ಗ್ರಹಿಸಬಾರದು.
b ಈ ವಿಷಯದ ಅಂಗೀಕಾರದಿಂದ, ವಾಚ್ ಟವರ್ ಸೊಸೈಟಿಯು ಇತ್ತೀಚಿಗಿನ ವರ್ಷಗಳಲ್ಲಿ, ತನ್ನ ಮುದ್ರಿತ ವಿಷಯಗಳ ಉತ್ಪಾದನೆಯನ್ನು ವಿವಿಧ ಬೈಬಲ್ ಸಂಬಂಧಿತ ವಿಷಯಗಳ ಮೇಲಿರುವ ವಿಡಿಯೊಕ್ಯಾಸೆಟ್ಗಳಿಂದ ಅನುಬಂಧಿಸಿದೆ.
c ಬೈಬಲಿನ ಜ್ಞಾನಕ್ಕಾಗಿ ಹಂಬಲವನ್ನು ಕಲ್ಪಿಸಿಕೊಳ್ಳುವಂತೆ ಮಕ್ಕಳಿಗೆ ಸಹಾಯ ಮಾಡಲಿಕ್ಕಾಗಿ, ಬೈಬಲ್ ಕಥೆಗಳ ನನ್ನ ಪುಸ್ತಕ (ಇಂಗ್ಲಿಷ್) ಮತ್ತು ಮಹಾ ಬೋಧಕನಿಗೆ ಕಿವಿಗೊಡುವುದು ಎಂಬಂತಹ, ಸರಳೀಕರಿಸಲ್ಪಟ್ಟ ಬೈಬಲ್ ಅಧ್ಯಯನ ಸಹಾಯಕಗಳನ್ನು ವಾಚ್ ಟವರ್ ಸೊಸೈಟಿಯು ಉತ್ಪಾದಿಸಿದೆ. ಎರಡು ಪುಸ್ತಕಗಳು ಆಡಿಯೊಕ್ಯಾಸೆಟ್ಗಳಲ್ಲಿ ಸಹ ದೊರೆಯುತ್ತವೆ.