ಭರವಸೆಯಿಡಬೇಕೊ ಬಾರದೊ?
ಭರವಸೆಯಿಡಬೇಕೊ ಬಾರದೊ ಎಂಬುದನ್ನು ತಿಳಿದುಕೊಳ್ಳುವುದು ಕಷ್ಟಕರವಾಗಿರಸಾಧ್ಯವಿದೆ. ವಿಶೇಷವಾಗಿ ಎಲ್ಲಿ ವಂಚನೆ ಮತ್ತು ವಿಶ್ವಾಸಘಾತಕತೆಗಳು ಹೆಚ್ಚು ವ್ಯಾಪಕವಾಗಿವೆಯೋ ಅಂತಹ ಒಂದು ಲೋಕದಲ್ಲಿ, ಯಾವುದೇ ಮಾರ್ಗಕ್ಕೆ ತನ್ನದೇ ಆದ ಅಪಾಯಗಳಿವೆ. ಆದರೂ ತೊಂದರೆಯ ಸಮಯದಲ್ಲಿ ನಮಗೆ ಬೆಂಬಲವನ್ನು ಕೊಡುವ ಭರವಸಾರ್ಹರಾದ ಸ್ನೇಹಿತರು ನಮಗೆಲ್ಲರಿಗೆ ಬೇಕಾಗಿದ್ದಾರೆ. (ಜ್ಞಾನೋಕ್ತಿ 17:17) ಸುಮಾರು ಎರಡು ಸಾವಿರ ವರ್ಷಗಳ ಹಿಂದೆ, ರೋಮನ್ ಬರಹಗಾರನಾದ ಫೆಡ್ರಸ್, ಆ ಉಭಯಸಂಕಟವನ್ನು ಈ ರೀತಿ ವ್ಯಕ್ತಪಡಿಸಿದನು: “ಭರವಸೆಯಿಡಬೇಕೊ ಬಾರದೊ ಎಂಬುದು ಅಪಾಯಕರವಾಗಿದೆ.”
ಭರವಸೆಯಿಡುವುದು ಅಪಾಯಕರವಾಗಿರಸಾಧ್ಯವಿದೆ
ಬೇರೆ ಯಾರಾದರೊಬ್ಬರ ಮೇಲೆ ಭರವಸೆಯಿಡುವುದು ಏಕೆ ಅಪಾಯಕರವಾಗಿರಬಹುದು? ಒಳ್ಳೇದು, ಸೈಕಾಲಜಿ ಟುಡೆ ಎಂಬ ಪತ್ರಿಕೆಯಲ್ಲಿ ಕೊಡಲ್ಪಟ್ಟಂತಹ ಎಚ್ಚರಿಕೆಯನ್ನು ಪರಿಗಣಿಸಿರಿ. ಜನರ ಭರವಸೆಯ ಶೋಷಣೆ ಮಾಡುವಂತಹ ಕೆಲವರನ್ನು ಅದು, “ತಮ್ಮ ಸುತ್ತಲಿರುವವರನ್ನು ವಂಚಿಸಲು ಹಾಗೂ ಅಧೀನಪಡಿಸಿಕೊಳ್ಳಲು ಮತ್ತು ಅವರ ಜೀವಿತಗಳನ್ನು ಹಾನಿಗೊಳಿಸಲು, ಮೋಹಕ ಶಕ್ತಿ ಮತ್ತು ಗೋಸುಂಬೆಯಂಥ ನಟನೆಯನ್ನು ಉಪಯೋಗಿ”ಸುವ “ಬೇಟೆಯಾಡಿ ತಿನ್ನುವವ”ರೋಪಾದಿ ವರ್ಣಿಸುತ್ತದೆ. ಸ್ಪಷ್ಟವಾಗಿಯೇ, ಅಂತಹ ವಂಚಕರು ಸುತ್ತಲೂ ಇರುವುದರಿಂದ, ಒಬ್ಬರ ಮೇಲೆ ವಿಪರೀತವಾಗಿ ಭರವಸೆಯಿಡುವವರಾಗಿರುವುದು ಖಂಡಿತವಾಗಿಯೂ ಅಪಾಯಕರವಾಗಿದೆ.
ತೀರ ಹೆಚ್ಚಾಗಿ ಭರವಸೆಯಿಡುವವರಾದ ಯಾರಾದರೊಬ್ಬರು ಮೋಸಹೋಗುವವರಾಗಿರಬಹುದು ಮತ್ತು ಫಲಿತಾಂಶವಾಗಿ, ಸುಲಭವಾಗಿ ವಂಚಿಸಲ್ಪಡಬಹುದು ಮತ್ತು ಶೋಷಣೆ ಮಾಡಲ್ಪಡಬಹುದು. ಮೋಸಹೋಗುವಿಕೆಯ ಒಂದು ಸುಪ್ರಸಿದ್ಧವಾದ ಉದಾಹರಣೆಯು, ಅತಿಸೂಕ್ಷ್ಮಗ್ರಾಹಕನಾದ ಪರಿಣತ ಪತ್ತೇದಾರ ಷರ್ಲಕ್ ಹೋಮ್ಸ್‌ನ ನಿರ್ಮಾಪಕನಾದ ಸರ್ ಆರ್ಥರ್ ಕೋನನ್ ಡಾಯ್ಲ್ ಆಗಿದ್ದರು. 1917ರಲ್ಲಿ ಇಬ್ಬರು ಯುವ ಹುಡುಗಿಯರಾದ ಎಲ್ಸಿ ರೈಟ್ ಮತ್ತು ಅವಳ ರಕ್ತಸಂಬಂಧಿಯಾದ ಫ್ರಾನ್ಸಸ್ ಗ್ರಿಫಿತ್ಸ್, ಕಾಟಿಂಗ್‌ಲೀ, ಇಂಗ್ಲೆಂಡ್‌ನಲ್ಲಿನ ತಮ್ಮ ಮನೆಯ ತೋಟದಲ್ಲಿ ಅವರು ಗಂಧರ್ವರೊಂದಿಗೆ ಆಟವಾಡಿದ್ದರೆಂದು ಪ್ರತಿಪಾದಿಸಿದರು. ಅದನ್ನು ರುಜುಪಡಿಸಲು ಪ್ರಯತ್ನಿಸಲಿಕ್ಕಾಗಿ ಅವರು ಗಂಧರ್ವರ ಛಾಯಾಚಿತ್ರಗಳನ್ನು ಸಹ ಉತ್ಪಾದಿಸಿದರು.
ತನ್ನ ಮಗನ ಮರಣಾನಂತರ ಪ್ರೇತಾರಾಧನೆಯಲ್ಲಿ ತೀವ್ರವಾಗಿ ಆಸಕ್ತನಾಗಿದ್ದ ಕೋನನ್ ಡಾಯ್ಲ್, ಅವರ ಮೇಲೆ ಭರವಸೆಯಿಟ್ಟರು ಮತ್ತು ಆ ಕಾಲದಲ್ಲಿನ ಅನೇಕ ಜನರು ನಂಬಿದಂತೆ, ಗಂಧರ್ವರ ಕುರಿತಾದ ಕಥೆಗಳನ್ನು ನಂಬಿದರು. ಸುಮಾರು 55 ವರ್ಷಗಳ ಬಳಿಕ, ಅದೆಲ್ಲವೂ ತಮಾಷೆಯ ಮೋಸವಾಗಿತ್ತು ಮತ್ತು ತಾವು ಛಾಯಾಚಿತ್ರಗಳನ್ನು ತೆಗೆಯುವುದಕ್ಕೆ ಮೊದಲು ಪುಸ್ತಕವೊಂದರಿಂದ “ಗಂಧರ್ವರನ್ನು” ಕತ್ತರಿಸಿ ತೆಗೆದಿದ್ದೆವೆಂಬುದನ್ನು ಆ ಇಬ್ಬರು ಹುಡುಗಿಯರು ಒಪ್ಪಿಕೊಂಡರು. ಯಾರಾದರೊಬ್ಬರು ತಮ್ಮ ಕಥೆಯನ್ನು ನಂಬಿರುವುದಕ್ಕಾಗಿ ಫ್ರಾನ್ಸಸ್ ಗ್ರಿಫಿತ್ಸ್ ಆಶ್ಚರ್ಯ ವ್ಯಕ್ತಪಡಿಸಿದಳು. ಅವಳು ಹೇಳಿದ್ದು: “ಯಾರಾದರೊಬ್ಬರು, ಗಂಧರ್ವರು ನೈಜವಾಗಿದ್ದರು ಎಂಬುದನ್ನು ನಂಬುವಷ್ಟರಮಟ್ಟಿಗೆ ಹೇಗೆ ಮೋಸಹೋಗುವವರಾಗಿರಸಾಧ್ಯವಿದೆ ಎಂಬುದು ನನಗೆ ಯಾವಾಗಲೂ ಒಂದು ರಹಸ್ಯವಾಗಿತ್ತು.”—ಹೋಕ್ಸರ್ಸ್ ಆ್ಯಂಡ್ ದೇಅರ್ ವಿಕ್ಟಿಮ್ಸ್.
ಕೋನನ್ ಡಾಯ್ಲ್ ಸಿಕ್ಕಿಬಿದ್ದಂತಹ ಬಲೆಯನ್ನು ನೀವು ನೋಡಬಲ್ಲಿರೊ? ಅವನು ಆ ಕಥೆಯನ್ನು ಪ್ರಶ್ನಾರಹಿತವಾಗಿ ನಂಬಿದನು, ಯಾಕೆಂದರೆ ಅದು ಸತ್ಯವಾದದ್ದಾಗಿರುವಂತೆ ಅವನು ಬಯಸಿದನು. ಲೇಖಕನಾದ ನಾರ್ಮನ್ ಮಾಸ್ ಹೇಳುವುದು: “ನಮ್ಮ ಗ್ರಹಣ ಶಕ್ತಿಗಳು ರೂಢಿಯಿಂದ ಮಂಕುಗೊಳಿಸಲ್ಪಡುವುದರಿಂದಲೂ ವಿಷಯಗಳ ಕಡೆಗೆ ಅರ್ಧನಿಮೀಲಿತ ನೇತ್ರಗಳ ಮೂಲಕ ನೋಡುವುದರಿಂದಲೂ ನಾವು ಸುಲಭವಾಗಿ ಮೂರ್ಖರಾಗಸಾಧ್ಯವಿದೆ. . . . ಕೆಲವೊಮ್ಮೆ, ನಾವು ಒಂದು ವಿಚಾರವನ್ನು ಸತ್ಯವೆಂದು ಸ್ವೀಕರಿಸುತ್ತೇವೆ, ಯಾಕೆಂದರೆ ಅದು ಸತ್ಯವಾದದ್ದಾಗಿರುವಂತೆ ನಾವು ಬಯಸುವ ಯಾವುದೋ ಒಂದು ವಿಷಯವಾಗಿರುತ್ತದೆ.” (ದ ಪ್ಲೆಷರ್ಸ್ ಆಫ್ ಡಿಸೆಪ್‌ಷನ್) ನಮ್ಮ ಸಾಮಾನ್ಯ ಶಕಕ್ಕೆ ಸುಮಾರು 350 ವರ್ಷಗಳ ಹಿಂದೆ, ಪ್ರಸಿದ್ಧ ಗ್ರೀಕ್ ವಾಗ್ಮಿಯಾಗಿದ್ದ ಡಿಮಾಸ್ತೆನೀಸ್‌ನಿಂದ ಕೊಡಲ್ಪಟ್ಟ ಎಚ್ಚರಿಕೆಯನ್ನು ಅದು ಪ್ರತಿಧ್ವನಿಸುತ್ತದೆ: “ಎಲ್ಲವುಗಳಲ್ಲಿ ಅತ್ಯಂತ ಸುಲಭವಾದ ವಿಷಯವು ಒಬ್ಬನು ಸ್ವತಃ ವಂಚಿಸಿಕೊಳ್ಳುವುದೇ ಆಗಿದೆ, ಏಕೆಂದರೆ ಒಬ್ಬ ಮನುಷ್ಯನು ಏನನ್ನು ಆಶಿಸುತ್ತಾನೋ ಅದನ್ನು ಅವನು ಸಾಮಾನ್ಯವಾಗಿ ಸತ್ಯವಾದದ್ದಾಗಿ ನಂಬುತ್ತಾನೆ.” ಕೇವಲ ನಮ್ಮ ಅನಿಸಿಕೆಗಳಲ್ಲಿ ಭರವಸೆಯನ್ನಿಡುವುದು ಅಪಾಯಕರವಾಗಿರಸಾಧ್ಯವಿದೆ.
ನಿಶ್ಚಯವಾಗಿ, ಇದು ಒಂದು ತೀರ ವಿಪರೀತವಾದ ಉದಾಹರಣೆಯಾಗಿದೆ ಮತ್ತು ನೀವೆಂದಾದರೂ ಮೂರ್ಖರಾಗಿರುತ್ತಿದ್ದುದಕ್ಕಿಂತಲೂ ಕೋನನ್ ಡಾಯ್ಲ್ ಹೆಚ್ಚು ಮೂರ್ಖರಾಗಿದ್ದರು ಎಂದು ನೀವು ಆಲೋಚಿಸಬಹುದು. ಆದರೆ ವಂಚಿಸಲ್ಪಡುವವರಾಗಿರುವ ಅಪಾಯದಲ್ಲಿರುವವರು, ಮೋಸಹೋಗುವವರು ಮಾತ್ರವೇ ಆಗಿರುವುದಿಲ್ಲ. ಜಾಗರೂಕರೂ ಸಾಮಾನ್ಯವಾಗಿ ಮುಂಜಾಗ್ರತೆಯುಳ್ಳವರೂ ಆಗಿರುವ ಅನೇಕ ಜನರು, ಭರವಸಾರ್ಹ ಜನರಂತೆ ತೋರುವವರಿಂದ ಮೂರ್ಖರಾಗಿಸಲ್ಪಟ್ಟಿದ್ದಾರೆ ಮತ್ತು ವಂಚಿಸಲ್ಪಟ್ಟಿದ್ದಾರೆ.
ಭರವಸೆಯಿಡದಿರುವುದು ಅಪಾಯಕರವಾಗಿರಸಾಧ್ಯವಿದೆ
ಆದರೂ, ಯಾರ ಮೇಲಾದರೂ ಯಾವುದರ ಮೇಲಾದರೂ ಭರವಸೆಯಿಡದಿರುವುದರಲ್ಲಿ ಅಪಾಯಗಳಿವೆ. ಅವಿಶ್ವಾಸವು ನಾಶಕಾರಿಯಾದ ತುಕ್ಕುಹಿಡಿಯುವಿಕೆಯಂತಿದೆ. ಇದು ಯಾವುವು ಅನ್ಯಥಾ ಸಂತೋಷಕರವಾದ, ನಿಕಟ ಸಂಬಂಧಗಳಾಗಿರಬಹುದೋ ಅವುಗಳನ್ನು ಕೊರೆದುಹಾಕಿ ನಾಶಮಾಡಬಲ್ಲದು. ಆಳವಾಗಿ ಬೇರೂರಿರುವ ಸಿನಿಕತೆ ಮತ್ತು ಮೊಂಡುತನದ ಅವಿಶ್ವಾಸವು ನಿಮ್ಮನ್ನು ಬಹಳ ಅಸಂತೋಷಿಯಾದ, ಸ್ನೇಹಿತನಿಲ್ಲದ ವ್ಯಕ್ತಿಯನ್ನಾಗಿ ಮಾಡಬಲ್ಲದು. ಇತರ ಜನರೊಂದಿಗಿನ ಸಂಬಂಧಗಳಿಗೆ ಅದು ಎಷ್ಟು ಹಾನಿಕರವಾಗಿರಬಲ್ಲದೆಂದರೆ, “ಭರವಸೆಯಿಡದಿರುವುದಕ್ಕಿಂತಲೂ ಕೆಲವೊಮ್ಮೆ ಮೋಸಗೊಳಿಸಲ್ಪಡುವುದು ಹೆಚ್ಚು ಸಂತೋಷಕರವಾದದ್ದಾಗಿದೆ” ಎಂದು ಇಂಗ್ಲಿಷ್ ಬರಹಗಾರ ಸ್ಯಾಮ್ಯಲ್ ಜಾನ್ಸನ್ ಬರೆದರು.
ಅವಿಶ್ವಾಸವು ನಿಮ್ಮ ಶಾರೀರಿಕ ಆರೋಗ್ಯವನ್ನು ಸಹ ಅಪಾಯಕ್ಕೆ ಈಡುಮಾಡಬಲ್ಲದು. ಕೋಪದಂತಹ ಪ್ರಬಲವಾದ ಭಾವಾವೇಶಗಳು ನಿಮ್ಮನ್ನು ಹೃದಯಾಘಾತದಂತಹ ಅಪಾಯಕ್ಕೆ ಒಡ್ಡಬಲ್ಲವು ಎಂಬುದರ ಅರಿವು ನಿಮಗಿರಬಹುದು. ಆದರೆ ಭರವಸೆರಹಿತರಾಗಿರುವುದು ಅದನ್ನೇ ಉಂಟುಮಾಡಬಲ್ಲದೆಂಬುದನ್ನು ಕೆಲವು ಸಂಶೋಧನೆಯು ಸೂಚಿಸುತ್ತದೆಂಬುದು ನಿಮಗೆ ತಿಳಿದಿತ್ತೊ? ಶಾಟಲೇನ್ ಪತ್ರಿಕೆಯು ಹೇಳುವುದು: “ತಮ್ಮ ನಡವಳಿಕೆಯ ಕಾರಣ ಹೃದ್ರೋಗವನ್ನು ವಿಕಸಿಸಿಕೊಳ್ಳುವ ತಮ್ಮ ಸಾಧ್ಯತೆಗಳನ್ನು ಅಧಿಕಗೊಳಿಸಿಕೊಳ್ಳಬಹುದಾದವರು, ಹಠಾತ್ತನೆ ಸುಲಭವಾಗಿ ಕೋಪಗೊಳ್ಳುವ ಜನರು ಮಾತ್ರವೇ ಆಗಿರುವುದಿಲ್ಲ. ಸಿನಿಕರೂ ಅವಿಶ್ವಾಸವುಳ್ಳವರೂ ಆಗಿರುವ ಪ್ರವೃತ್ತಿಯುಳ್ಳವರಾಗಿರುವಂತಹ, ದ್ವೇಷದ ನವಿರಾದ ರೂಪಗಳು ಸಹ ನಿಮ್ಮನ್ನು ಅಪಾಯಕ್ಕೊಡ್ಡಬಲ್ಲವು ಎಂದು ಹೊಸ ಸಂಶೋಧನೆಯು ಸೂಚಿಸುತ್ತದೆ.”
ನಿಮ್ಮ ಹೆಜ್ಜೆಗಳನ್ನು ಜಾಗರೂಕತೆಯಿಂದ ಪರಿಗಣಿಸಿರಿ
ನೀವೇನು ಮಾಡಬಲ್ಲಿರಿ? ಈ ವಿಷಯದ ಕುರಿತಾಗಿ ಬೈಬಲು ಕೆಲವೊಂದು ಒಳ್ಳೆಯ ಬುದ್ಧಿವಾದವನ್ನು ಕೊಡುತ್ತದೆ. “ಮೂಢನು ಯಾವ ಮಾತನ್ನಾದರೂ ನಂಬುವನು” ಎಂದು ಜ್ಞಾನೋಕ್ತಿ 14:15 ಹೇಳುತ್ತದೆ. ಇದು ವಿನಾಶಕರ ಸಿನಿಕತೆಯಾಗಿರುವುದಿಲ್ಲ. ಇದು ಮುಂಜಾಗ್ರತೆಗಾಗಿರುವ ಅಗತ್ಯದ ವಾಸ್ತವಿಕವಾದ ಜ್ಞಾಪನವಾಗಿದೆ. ಅಕೃತ್ರಿಮನಾದ, ಅನನುಭವಿ ವ್ಯಕ್ತಿಯು ಮಾತ್ರವೇ, ತಾನು ಕೇಳುವ ಪ್ರತಿಯೊಂದು ಮಾತಿನ ಮೇಲೆ ಅವಿವೇಕದಿಂದ ಭರವಸೆಯಿಡುತ್ತಾನೆ. ಸಕಾರಣದಿಂದಲೇ ಬೈಬಲ್ ಜ್ಞಾನೋಕ್ತಿಯು ಮುಂದುವರಿಸುವುದು: “ಜಾಣನು ತನ್ನ ನಡತೆಯನ್ನು [“ಹೆಜ್ಜೆಗಳನ್ನು,” NW] ಚೆನ್ನಾಗಿ ಗಮನಿಸುವನು.” ಇಂಗ್ಲಿಷ್ ನಾಟಕಕಾರನಾದ ವಿಲಿಯಮ್ ಷೇಕ್ಸ್‌ಪಿಯರ್ ಬರೆದುದು: “ಲೊಡ್ಡಾದ ಹಲಗೆಗಳ ಮೇಲೆ ಭರವಸೆಯಿಡಬೇಡಿರಿ.” ಒಂದು ಆಳವಾದ ಪಾತದ ಮೇಲಿನ ಸೇತುವೆಯ ಮೇಲಿರುವ ಹಲಗೆಗಳು ಲೊಡ್ಡಾಗಿರಬಹುದೆಂದು ನೆನಸಿ, ಅವುಗಳ ಮೇಲೆ ಹೆಜ್ಜೆಯಿಡುವವನು ತೀರ ಮೂರ್ಖನಾಗಿರಸಾಧ್ಯವಿದೆ. ಹಾಗಾದರೆ, ನಿಮ್ಮ ಭರವಸೆಯನ್ನು ಅನುಚಿತವಾಗಿಡದಂತೆ ಮಾಡಲು ನೀವು ‘ನಿಮ್ಮ ಹೆಜ್ಜೆಗಳನ್ನು ಪರಿಗಣಿಸ’ಸಾಧ್ಯವಿದೆ ಹೇಗೆ?
ನಾವು ಕೇಳುವಂತಹ ಪ್ರತಿಯೊಂದು ವಿಷಯವನ್ನು ಕೇವಲ ಅವಿವೇಕದಿಂದ ಅಂಗೀಕರಿಸುವುದಕ್ಕೆ ಬದಲಾಗಿ, ಜನರು ಹೇಳುವ ವಿಷಯವನ್ನು ಪರೀಕ್ಷಿಸುವಂತೆ ಬೈಬಲು ನಮಗೆ ಉತ್ತೇಜಿಸುತ್ತದೆ. “ಅಂಗಳವು ಆಹಾರವನ್ನು ರುಚಿನೋಡುವಂತೆ ಕಿವಿಯು ಮಾತುಗಳನ್ನು ವಿವೇಚಿಸು [“ಪರೀಕ್ಷಿಸು,” NW]ತ್ತದಲ್ಲಾ” ಎಂದು ಅದು ಹೇಳುತ್ತದೆ. (ಯೋಬ 34:3) ಅದು ಸತ್ಯವಾಗಿರುವುದಿಲ್ಲವೊ? ಸಾಮಾನ್ಯವಾಗಿ ಆಹಾರವನ್ನು ನುಂಗುವುದಕ್ಕೆ ಮೊದಲು ನಾವು ಅದರ ರುಚಿ ನೋಡುವುದಿಲ್ಲವೊ? ನಾವು ಜನರ ನುಡಿಗಳನ್ನು ಮತ್ತು ಕೃತ್ಯಗಳನ್ನು ಅಂಗೀಕರಿಸುವ ಮೊದಲು, ಅವುಗಳನ್ನೂ ಪರೀಕ್ಷಿಸಬೇಕು. ನಾವು ಅವನ ವಿಶ್ವಾಸಾರ್ಹ ಆಧಾರಗಳನ್ನು ಪರೀಕ್ಷೆ ಮಾಡುವಲ್ಲಿ, ಯಥಾರ್ಥನಾಗಿರುವ ಯಾರೊಬ್ಬನೂ ತಪ್ಪು ತಿಳಿದುಕೊಳ್ಳುವುದಿಲ್ಲ. “ಒಂದು ಸಲ ಅವನು ನನ್ನನ್ನು ವಂಚಿಸುವುದಾದರೆ, ಅದು ಅವನಿಗೆ ನಾಚಿಕೆಗೇಡಾಗಿದೆ; ಅವನು ಎರಡು ಬಾರಿ ನನ್ನನ್ನು ವಂಚಿಸುವುದಾದರೆ, ಅದು ನನಗೆ ನಾಚಿಕೆಗೇಡಾಗಿದೆ” ಎಂದು ಹೇಳುವ ಸ್ಕಾಟಿಷ್ ನಾಣ್ಣುಡಿಯಿಂದ, ಒಂದು ವಿಷಯವು ನೈಜವಾಗಿದೆಯೆಂದು ನಾವು ಪರೀಕ್ಷಿಸಿ ನೋಡಬೇಕೆಂಬುದು ಬೆಂಬಲಿಸಲ್ಪಡುತ್ತದೆ.
ಅಪೊಸ್ತಲ ಪೌಲನು ಬುದ್ಧಿವಾದ ನೀಡಿದ್ದು: “ಎಲ್ಲವನ್ನೂ ಪರೀಕ್ಷೆಗೆ ಒಳಪಡಿಸಿರಿ.” (1 ಥೆಸಲೊನೀಕ 5:21, ಟುಡೇಸ್ ಇಂಗ್ಲಿಷ್ ವರ್ಷನ್) “ಪರೀಕ್ಷೆ” ಎಂಬ ಶಬ್ದಕ್ಕೆ ಅಪೊಸ್ತಲ ಪೌಲನಿಂದ ಉಪಯೋಗಿಸಲ್ಪಟ್ಟ ಪದವು, ಬೆಲೆಬಾಳುವ ಲೋಹಗಳು ಅಪ್ಪಟವಾಗಿದ್ದವೊ ಇಲ್ಲವೊ ಎಂಬುದನ್ನು ಅವಲೋಕಿಸಲಿಕ್ಕಾಗಿ ಅವುಗಳನ್ನು ಪರಿಶೋಧಿಸುವುದರೊಂದಿಗಿನ ಸಂಬಂಧದಲ್ಲಿಯೂ ಉಪಯೋಗಿಸಲ್ಪಟ್ಟಿತು. ಯುಕ್ತಾಯುಕ್ತಪರಿಜ್ಞಾನವುಳ್ಳ ವ್ಯಕ್ತಿಯೊಬ್ಬನು ಯಾವಾಗಲೂ, ತಾನು ಕೊಂಡುಕೊಳ್ಳುತ್ತಿರುವುದು ಅಪ್ಪಟವಾಗಿತ್ತು ಎಂಬುದನ್ನು ಅವಲೋಕಿಸಲು ಅದನ್ನು ಪರೀಕ್ಷಿಸಿ ನೋಡುತ್ತಾನೆ. ಇಲ್ಲದಿದ್ದರೆ ಯಾವುದು ಸ್ವರ್ಣಮಕ್ಷಿಕಾ—ಚಿನ್ನದಂತೆ ತೋರಿದ, ಆದರೆ ವಾಸ್ತವವಾಗಿ ನಿಷ್ಪ್ರಯೋಜಕವಾಗಿದ್ದ ಒಂದು ವಸ್ತು—ಎಂದು ಕರೆಯಲ್ಪಡುತ್ತದೋ ಅದನ್ನು ಕೊಂಡುಕೊಂಡಿರಬಹುದು.
ವಿವೇಚನೆಯುಳ್ಳವರೂ ಸಮತೂಕವುಳ್ಳವರೂ ಆಗಿರ್ರಿ
ಸಹಜವಾಗಿ, ಈ ವಿಷಯದಲ್ಲಿ ನಾವು ವಿವೇಚನೆಯುಳ್ಳವರಾಗಿರಲು ಮತ್ತು ಇತರರ ಕುರಿತು ವಿಪರೀತ ಸಂಶಯಾಸ್ಪದರಾಗದಿರಲು ಬಯಸುತ್ತೇವೆ. (ಫಿಲಿಪ್ಪಿ 4:5) ಯಾರಿಗೇ ಆಗಲಿ ಕೆಟ್ಟ ಹೇತುಗಳನ್ನು ಆರೋಪಿಸುವುದರಲ್ಲಿ ಆತುರರಾಗಿರದಿರ್ರಿ. ಹೇತುಗಳನ್ನು ತಪ್ಪಾಗಿ ವ್ಯಾಖ್ಯಾನ ಮಾಡುವುದು, ಒಳ್ಳೆಯ, ನಿಕಟವಾದ ಸಂಬಂಧಗಳನ್ನು ಧ್ವಂಸಮಾಡಲಿಕ್ಕಿರುವ ಅತ್ಯಂತ ಶೀಘ್ರ ಮಾರ್ಗವಾಗಿರಸಾಧ್ಯವಿದೆ. ಕಷ್ಟಕರವಾದ ಸನ್ನಿವೇಶಗಳು ಏಳುವಾಗ ಕೆಟ್ಟ ಹೇತುಗಳಿಗಾಗಿ ಅವರ ಮೇಲೆ ಆರೋಪ ಹೊರಿಸುವುದಕ್ಕೆ ಬದಲಾಗಿ, ನಿಮಗೆ ಯಾವುದು ಅತ್ಯುತ್ತಮವಾಗಿದೆಯೊ ಅದನ್ನೇ ಮಾಡಲು ನಿಮ್ಮ ಸ್ನೇಹಿತರು ಬಯಸುತ್ತಾರೆ ಎಂದು ಭಾವಿಸಿಕೊಳ್ಳುವುದು ಸಾಮಾನ್ಯವಾಗಿ ಅತ್ಯುತ್ತಮವಾಗಿದೆ.
ಇತರರ ಅಪರಿಪೂರ್ಣತೆಗಳು ಮತ್ತು ತಪ್ಪುಗಳನ್ನು ಲಘುವಾಗಿ ಕಾಣಿರಿ. “ಸ್ನೇಹಿತನೊಬ್ಬನಿಂದ ವಿಶ್ವಾಸಘಾತಕಗೊಳಿಸಲ್ಪಡುವುದು, ಭರವಸೆಯ ಉಲ್ಲಂಘನೆಯನ್ನು ಅರ್ಥೈಸುತ್ತದೆ” ಎಂದು ಬರಹಗಾರರಾದ ಕ್ರಿಸ್ಟಿನ್ ವಾನ್ ಕ್ರೈಸ್‌ಲರ್ ಹೇಳುತ್ತಾರೆ. ಆದರೂ, ಅಂತಹ ವಿಶ್ವಾಸಘಾತಕತೆಯು ಅನುದ್ದೇಶಪೂರ್ವಕವಾಗಿರಬಹುದು ಅಥವಾ ಈಗ ತೀವ್ರವಾಗಿ ವಿಷಾದಪಟ್ಟಿರುವಂತಹ ಬಲಹೀನತೆಯ ಫಲಿತಾಂಶವಾಗಿದ್ದಿರಬಹುದು. ಆದುದರಿಂದ, ಅವರು ಮುಂದುವರಿಸುವುದು: “ವಿಶ್ವಾಸಘಾತಕತೆಯ ಕುರಿತಾಗಿ ಸದಾ ಚಿಂತಿಸದಿರ್ರಿ—ಅಥವಾ ಅದು ಇತರರ ಮೇಲೆ ಭರವಸೆಯಿಡುವುದರಿಂದ ನಿಮ್ಮನ್ನು ತಡೆಯುವಂತೆ ಬಿಡಬೇಡಿರಿ.” ಇತರರೊಂದಿಗೆ ಭರವಸಾರ್ಹವಾದ ಸಂಬಂಧಗಳನ್ನು ಕಟ್ಟುವುದರಿಂದ ಬರಸಾಧ್ಯವಿರುವ ಸಂತೋಷಗಳಿಂದ ನಿಮ್ಮನ್ನು ಕಠೋರವಾದ, ನಕಾರಾತ್ಮಕವಾದ ಅನುಭವಗಳು ವಂಚಿಸುವಂತೆ ಬಿಡಬೇಡಿರಿ.
ಸಮತೂಕವುಳ್ಳವರಾಗಿರ್ರಿ. ಜನರ ಮೌಲ್ಯಮಾಪನ ಮಾಡುವಾಗ ನೀವು ಕಣ್ತಡೆಹಾಕುವ ಅಗತ್ಯವಿಲ್ಲ; ಮುಂಜಾಗ್ರತೆಯುಳ್ಳ ವ್ಯಕ್ತಿಯೊಬ್ಬನು ಜಾಗರೂಕನಾಗಿ ಉಳಿಯುತ್ತಾನೆ. ಇನ್ನೊಂದು ಕಡೆಯಲ್ಲಿ, ಅವರಿಂದ ಸಾಧ್ಯವಿರುವುದೆಲ್ಲವನ್ನೂ ಇತರರು ಮಾಡುತ್ತಿದ್ದಾರೆಂದು ಭಾವಿಸಲು ನಾವು ಪ್ರಯತ್ನಿಸಬೇಕು, ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು, ಮತ್ತು ಸಾಧ್ಯವಿರುವಾಗೆಲ್ಲಾ “ಇತರರ ಮೇಲೆ ಭರವಸೆಯಿಡುವುದನ್ನು ಅಭ್ಯಾಸಿಸಬೇಕು” ಎಂದು ಡಾಕ್ಟರ್ ರೆಡ್‌ಫರ್ಡ್ ವಿಲಿಯಮ್ಸ್ ಸಲಹೆ ನೀಡುತ್ತಾರೆ. ಎಂದಿಗೂ ಭರವಸೆಯಿಡದಿರುವುದಕ್ಕಿಂತಲೂ ಅತ್ಯಧಿಕವಾಗಿ ಭರವಸೆಯಿಡುವುದು ಹೆಚ್ಚು ಉತ್ತಮವಾದದ್ದಾಗಿರಬಹುದು.
“ಪರಸ್ಪರವಾಗಿ ಒಡೆದು ಪುಡಿಮಾಡುವ ಪ್ರವೃತ್ತಿಯುಳ್ಳ ಒಡನಾಡಿಗಳಿದ್ದಾರೆ”—ಅಂದರೆ, ನಿಮ್ಮ ಭರವಸೆಯನ್ನು ಶೋಷಿಸಲು ಪ್ರಯತ್ನಿಸುವ ಜನರು—ಎಂದು ಬೈಬಲಿನ ಜ್ಞಾನೋಕ್ತಿ ಪುಸ್ತಕದ ಬರಹಗಾರನು ಒಪ್ಪಿಕೊಳ್ಳುತ್ತಾನೆ. ಲೋಕವು ಅವರಿಂದ ತುಂಬಿದೆ. ಆದರೆ ಅವರು ಭರವಸಾರ್ಹರಾಗಿದ್ದಾರೆ ಎಂಬುದನ್ನು ಪ್ರದರ್ಶಿಸಲು ಇತರರಿಗೆ ಸಮಯ ಮತ್ತು ಅವಕಾಶವನ್ನು ಕೊಡಿರಿ, ಮತ್ತು ವಾಸ್ತವವಾಗಿ, ‘ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ’ ಮಿತ್ರರನ್ನು ನೀವು ಕಂಡುಕೊಳ್ಳುವಿರಿ.—ಜ್ಞಾನೋಕ್ತಿ 18:24, NW.
ಹಾಗಾದರೆ, ನಿಮ್ಮ ಭರವಸೆಯು ಶೋಷಣೆ ಮಾಡಲ್ಪಡುವುದು ಅಥವಾ ವಿಶ್ವಾಸಘಾತಗೊಳಿಸಲ್ಪಡುವುದು ಎಂಬ ಯಾವುದೇ ಭಯವಿಲ್ಲದೆ, ನೀವು ಸಂಪೂರ್ಣವಾಗಿ ಭರವಸೆಯಿಡಸಾಧ್ಯವಿರುವ ಯಾರಾದರೂ—ಏನಾದರೂ—ಇದ್ದಾರೊ? ಹೌದು ನಿಶ್ಚಯವಾಗಿ ಇದ್ದಾರೆ. ಸಂಪೂರ್ಣ ವಿಶ್ವಾಸದಿಂದ ನೀವು ನಿಮ್ಮ ಭರವಸೆಯನ್ನು ಎಲ್ಲಿ ಇಡಸಾಧ್ಯವಿದೆ ಎಂಬ ವಿಷಯವನ್ನು, ಮುಂದಿನ ಲೇಖನವು ಸಂಕ್ಷಿಪ್ತವಾಗಿ ಪರಿಗಣಿಸುವುದು.
[ಪುಟ 7 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು [“ಹೆಜ್ಜೆಗಳನ್ನು,” NW] ಚೆನ್ನಾಗಿ ಗಮನಿಸುವನು.”—ಜ್ಞಾನೋಕ್ತಿ 14:15
[ಪುಟ 8 ರಲ್ಲಿರುವ ಚಿತ್ರ]
ಇತರರ ಅಪರಿಪೂರ್ಣತೆಗಳು ಮತ್ತು ತಪ್ಪುಗಳನ್ನು ಲಘುವಾಗಿ ಕಾಣಿರಿ