ಜಗತ್ತನ್ನು ಗಮನಿಸುವುದು
ಓದುವ ಮತ್ತು ಬರೆಯುವ ಸಾಮರ್ಥ್ಯವನ್ನು ಕಳೆದುಕೊಳ್ಳುವುದು
ಅಭ್ಯಾಸದ ಕೊರತೆಯ ಕಾರಣದಿಂದಾಗಿ ಜರ್ಮನಿಯಲ್ಲಿ ಸುಮಾರು 30 ಲಕ್ಷ ಜನರು ಚೆನ್ನಾಗಿ ಓದುವ ಮತ್ತು ಬರೆಯುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. ವಾಚನ ಸಂಸ್ಥೆಯ ಸೆಕ್ರಿಟರಿಯಾದ ಯೋಹಾನಸ್ ರಿಂಗ್, ಇಲೆಕ್ಟ್ರಾನಿಕ್ ಮಾಧ್ಯಮದಿಂದ ಮಾಡಲ್ಪಟ್ಟ ಪ್ರಗತಿಯು ಈ ಸಮಸ್ಯೆಯನ್ನು ಉಲ್ಬಣಮಾಡುತ್ತಿದೆಯೆಂಬುದಾಗಿ ವಿವರಿಸಿದರು. ಅನಕ್ಷರತೆಯನ್ನು ಎದುರಿಸುವುದರ ಕುರಿತಾದ ವಿಶ್ವ ಸಮ್ಮೇಳನದಲ್ಲಿ, ಈ ರೀತಿಯ ಅನಕ್ಷರತೆಯಲ್ಲಿನ ವೃದ್ಧಿಯು, ಭಾಗಶಃ ಟೆಲಿವಿಷನ್, ಕಂಪ್ಯೂಟರ್‌ಗಳು, ಮತ್ತು ವಿಡಿಯೊ ಆಟಗಳ ವ್ಯಾಪಕವಾದ ಉಪಯೋಗದ ಕಾರಣದಿಂದಲೇ ಆಗಿದೆ ಎಂದು ರಿಂಗ್ ಹೇಳಿದರೆಂದು ಫ್ರಾಂಕ್‌ಫುರ್ಟರ್ ಆಲ್ಜಿಮೈನ ಟ್ಸೈಟುಂಗ್ ವರದಿಸುತ್ತದೆ.
ಯೋಚಿಸಲಿಕ್ಕಾಗಿ ಕುಡಿಯಿರಿ
ಮನಸ್ಸನ್ನು ಕೇಂದ್ರೀಕರಿಸುವುದರಲ್ಲಿ ತೊಂದರೆಯಿದೆಯೊ? ಬಹುಶಃ ನೀವು ಹೆಚ್ಚು ನೀರನ್ನು ಕುಡಿಯುವ ಅಗತ್ಯವಿದೆಯೆಂದು ಏಷಿಯವೀಕ್ ಸಲಹೆ ನೀಡುತ್ತದೆ. ಇತ್ತೀಚೆಗೆ ಹಾಂಗ್ ಕಾಂಗ್‌ನ ಕೆಲವು ಶಾಲಾಮಕ್ಕಳ ಶಿಕ್ಷಕರಿಗೆ ಮತ್ತು ಹೆತ್ತವರಿಗೆ, ಬಹಳಷ್ಟು ನೀರನ್ನು ಕುಡಿಯುತ್ತಿರುವುದು ವಿದ್ಯಾರ್ಥಿಗಳಿಗೆ ನೀರಸವನ್ನು ಹೊಡೆದೋಡಿಸಲು ಸಹಾಯ ಮಾಡುತ್ತದೆಂಬ ಸಲಹೆಯನ್ನು ಕೊಡಲಾಯಿತೆಂದು ಆ ಪತ್ರಿಕೆಯು ವರದಿಸುತ್ತದೆ. ಮಕ್ಕಳು ಒಂದು ದಿನಕ್ಕೆ 8ರಿಂದ 15 ಗ್ಲಾಸ್‌ಗಳಷ್ಟು ನೀರನ್ನು ಕುಡಿಯಬೇಕೆಂದು ಹೆತ್ತವರಿಗೆ ಹೇಳಲಾಯಿತು. ದ ಲರ್‌ನಿಂಗ್ ಬ್ರೆಯ್ನ್ ಎಂಬ ಪುಸ್ತಕವನ್ನು ಉದಾಹರಿಸುತ್ತಾ, ನಿರ್ಜಲೀಕರಣವು ನ್ಯೂನ ಕಲಿಕೆಗೆ ನಡಿಸಬಲ್ಲದೆಂಬುದನ್ನು ಸೂಚಿಸುವ ಅಭ್ಯಾಸಗಳ ಕಡೆಗೆ ಆ ವರದಿಯು ನಿರ್ದೇಶಿಸುತ್ತದೆ. ಶುದ್ಧವಾದ, ಸ್ವಚ್ಛ ನೀರನ್ನು ಕುಡಿಯುವುದು, ವಾಸ್ತವವಾಗಿ ದ್ರವಗಳನ್ನು ಹೊರಹಾಕುವಂತೆ ದೇಹವನ್ನು ಪ್ರಚೋದಿಸುವ ತಂಪು ಪಾನೀಯಗಳು, ಕಾಫಿ, ಚಹ, ಅಥವಾ ಜೂಸ್‌ಗಳನ್ನೂ ಕುಡಿಯುವುದಕ್ಕಿಂತಲೂ ಹೆಚ್ಚು ಉತ್ತಮವಾದದ್ದಾಗಿದೆ ಎಂದು ಏಷಿಯವೀಕ್ ಹೇಳುತ್ತದೆ.
ಅದ್ಭುತ ಮರ
ದುಬಾರಿ ಖರ್ಚಿನ ರಾಸಾಯನಿಕಗಳ ಉಪಯೋಗವಿಲ್ಲದೆ, ಕುಡಿಯುವ ನೀರನ್ನು ಶುದ್ಧೀಕರಿಸಬಲ್ಲ ಬೀಜಗಳನ್ನು ಬ್ರಿಟಿಷ್ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಉತ್ತರ ಭಾರತದ ಮರಿಂಗ ಓಲೀಫರ ಎಂಬ ಮರದ ಪುಡಿಮಾಡಲ್ಪಟ್ಟ ಬೀಜಗಳು ನೀರಿನಲ್ಲಿ ಹಾಕಲ್ಪಟ್ಟಾಗ, ಬ್ಯಾಕ್ಟೀರಿಯಗಳನ್ನು ಹಾಗೂ ವೈರಸ್‌ಗಳನ್ನು ಆಕರ್ಷಿಸಿ, ಅವುಗಳಿಗೆ ಅಂಟಿಕೊಳ್ಳುತ್ತವೆ, ತದನಂತರ ಬ್ಯಾಕ್ಟೀರಿಯ ಮತ್ತು ವೈರಸ್‌ಗಳೊಂದಿಗೆ ಅವುಗಳನ್ನು ತೆಗೆದುಬಿಡಸಾಧ್ಯವಿದೆ ಅಥವಾ ಶೋಧಕ ಪದರಗಳಲ್ಲಿ ತಡೆದಿಡಸಾಧ್ಯವಿದೆಯೆಂದು ಲಂಡನಿನ ದ ಟೈಮ್ಸ್ ವರದಿಸುತ್ತದೆ. ಈ ಸರ್ವತೋಮುಖ ಶಕ್ತಿಯ ಬೀಜಗಳನ್ನು, ಅಡಿಗೆ ಎಣ್ಣೆ, ಸಾಬೂನು, ಕಾಂತಿವರ್ಧಕಗಳು, ಲ್ಯಾಂಪ್ ಇಂಧನ, ಮತ್ತು ಚರ್ಮದ ಸೋಂಕುಗಳಿಗಾಗಿರುವ ಮುಲಾಮನ್ನು ಮಾಡಲಿಕ್ಕಾಗಿಯೂ ಉಪಯೋಗಿಸಸಾಧ್ಯವಿದೆ. ಈ ಮರವನ್ನು ಬೆಳೆಸುವುದು ಸುಲಭವಾಗಿದೆ, ಇದು ಅನಾವೃಷ್ಟಿಯನ್ನು ತಾಳಿಕೊಳ್ಳುತ್ತದೆ, ವಾಯುತಡೆಯೋಪಾದಿ ಕಾರ್ಯನಡಿಸಬಲ್ಲದು, ಹಾಗೂ ಕಾಗದವನ್ನು ತಯಾರಿಸಲಿಕ್ಕಾಗಿ ಇಂಧನವನ್ನೂ ತಿರುಳನ್ನೂ ಒದಗಿಸಬಲ್ಲದು. ಪರಿಣಾಮವಾಗಿ, ಪ್ರತಿವರ್ಷ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಫಲಿಸುವ ಲಕ್ಷಾಂತರ ಮರಣಗಳನ್ನು ತಡೆಗಟ್ಟಲು ಸಹಾಯ ಮಾಡುವ ಬೀಜಗಳನ್ನು ಉತ್ಪಾದಿಸಲಿಕ್ಕಾಗಿ, ಈ ಮರಗಳನ್ನು ನೆಡುವುದನ್ನು ಸಂಶೋಧಕರು ಶಿಫಾರಸ್ಸು ಮಾಡುತ್ತಾರೆ.
ಕೀಟನಾಶಕದ ಉಪಯೋಗದ ಕುರಿತಾದ ಎಚ್ಚರಿಕೆ
ಬರ್ಕ್‌ಲಿಯಲ್ಲಿನ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಸಂಶೋಧಕರಿಗನುಸಾರ, ಅಮೆರಿಕದವರು ಕೀಟನಾಶಕಗಳಿಂದ ಸಿಂಪಡಿಸಲ್ಪಟ್ಟ ಹಣ್ಣುಗಳು ಮತ್ತು ತರಕಾರಿಗಳಿಗಿಂತಲೂ, ಮನೆಯ ಉತ್ಪನ್ನಗಳ ಮೂಲಕ ಕೀಟನಾಶಕಗಳಿಗೆ ಹೆಚ್ಚು ಮಹತ್ತರವಾಗಿ ಒಡ್ಡಲ್ಪಡುತ್ತಾರೆ. ಜಿರಲೆ ಸೀಕರಗಳು, ತೂಗಾಡುವ ನೊಣಕಾಗದಗಳು, ಚಿಗಟ ಮಂಜುಗಳು, ಕೀಟನಿರೋಧಕ ಗೋಲಿಗಳು ಮತ್ತು ತದ್ರೀತಿಯ ಉತ್ಪನ್ನಗಳು ವಿಷಕರವಾದ ರಾಸಾಯನಿಕಗಳನ್ನು ಒಳಗೊಂಡಿವೆ. ವರ್ಷವೊಂದಕ್ಕೆ ಸಾವಿರಗಟ್ಟಲೆ ವಿಷಕಾರಕಗಳನ್ನು ಉಂಟುಮಾಡುವುದಲ್ಲದೆ, ಅನೇಕ ರಾಸಾಯನಿಕಗಳು ದೀರ್ಘಾವಧಿಯ ಆರೋಗ್ಯಾಪಾಯಗಳನ್ನು ತಂದೊಡ್ಡುತ್ತವೆ. ಯುಸಿ ಬರ್ಕ್‌ಲಿ ವೆಲ್ನೆಸ್ ಲೆಟರ್ ಹೆಚ್ಚು ಸುರಕ್ಷಿತವಾದ ಪರ್ಯಾಯಗಳನ್ನು ಶಿಫಾರಸ್ಸು ಮಾಡುತ್ತದೆ: ಕೀಟಗಳನ್ನು ದೂರಮಾಡಲಿಕ್ಕಾಗಿ, ಕಿಟಕಿ ತೆರೆಗಳನ್ನು ರಿಪೇರಿ ಮಾಡಿರಿ ಅಥವಾ ಅಳವಡಿಸಿರಿ ಹಾಗೂ ಕೀಟಗಳನ್ನು ದೂರವಿಡಲು ನೆಲಗಳ ಮತ್ತು ಗೋಡೆಗಳ ಸಂದುಗಳನ್ನು ಮುಚ್ಚಿ ಭದ್ರಪಡಿಸಿರಿ; ಆಹಾರಗಳನ್ನೂ ಕಸವನ್ನೂ ಪ್ಲ್ಯಾಸ್ಟಿಕ್ ಚೀಲಗಳಲ್ಲಿ ಹಾಕಿ ಭದ್ರಪಡಿಸಿರಿ; ನೊಣಗಳ ಜಜ್ಜುಬಡಿಯನ್ನು ಉಪಯೋಗಿಸಿರಿ; ರೊಟ್ಟಿಚೂರುಗಳನ್ನು ಗುಡಿಸಿರಿ; ನೆಲಹಾಸುಗಳನ್ನು ಆವಿಯಿಂದ ಸ್ವಚ್ಛಗೊಳಿಸಿರಿ; ಉಣ್ಣೆಗಳನ್ನು ಆಗಾಗ್ಗೆ ಶುಚಿಮಾಡಿ, ಸೀಲ್‌ಮಾಡಲ್ಪಟ್ಟ ಚೀಲಗಳಲ್ಲಿಡಿರಿ. ಜಿರಲೆಗಳು ಪಟ್ಟುಹಿಡಿಯುವುದಾದರೆ, ಅಂಟಿನ ಬೋನುಗಳನ್ನು ಉಪಯೋಗಿಸುವ ಮೂಲಕ ಅಥವಾ ಕ್ಯಾಬಿನೆಟ್‌ಗಳ ಹಿಂದೆ ಬೋರಿಕ್ ಆ್ಯಸಿಡ್ ಅನ್ನು ಸಿಂಪಡಿಸಲು ಪ್ರಯತ್ನಿಸಿರಿ, ಆದರೆ ಮಕ್ಕಳನ್ನು ಮತ್ತು ಸಾಕುಪ್ರಾಣಿಗಳನ್ನು ಈ ಉತ್ಪನ್ನಗಳೊಂದಿಗೆ ಸಂಪರ್ಕಮಾಡುವುದರಿಂದ ಸಂರಕ್ಷಿಸಿರಿ ಎಂದು ವೆಲ್ನೆಸ್ ಲೆಟರ್ ಸಲಹೆ ನೀಡುತ್ತದೆ.
ಹಾವುಕಡಿತಗಳು—ಮಾಡಬಾರದ ವಿಷಯಗಳು
ಹಾವುಕಡಿತಕ್ಕೆ ಆಹುತಿಯಾದವರಿಗೆ ಚಿಕಿತ್ಸೆನೀಡುವ ವಿಷಯದಲ್ಲಿ, ಪರಿಣತರು ಯಾವಾಗಲೂ ಒಪ್ಪುವುದಿಲ್ಲ. ಆದರೂ, ಎಫ್‌ಡಿಎ ಕನ್‌ಸ್ಯೂಮರ್ ಪತ್ರಿಕೆಗನುಸಾರ, ಅಮೆರಿಕದ ಅಧಿಕಾಂಶ ವೈದ್ಯಕೀಯ ವೃತ್ತಿಪರರು, “ಯಾವುದನ್ನು ಮಾಡಬಾರದು ಎಂಬುದರ ಕುರಿತಾಗಿರುವ ತಮ್ಮ ದೃಷ್ಟಿಕೋನಗಳಲ್ಲಿ ಬಹುಮಟ್ಟಿಗೆ ಒಮ್ಮತವುಳ್ಳವರಾಗಿ”ದ್ದಾರೆ. ವೈದ್ಯಕೀಯ ಸೌಕರ್ಯದಿಂದ ನೀವು 30ರಿಂದ 40 ನಿಮಿಷಗಳೊಳಗಿನ ದೂರದಲ್ಲಿರುವುದಾದರೆ, ನಿಮಗೆ ಈ ಸಲಹೆಯು ಕೊಡಲ್ಪಟ್ಟಿದೆ: ಕಚ್ಚಲ್ಪಟ್ಟ ಸ್ಥಳಕ್ಕೆ ಮಂಜುಗಡ್ಡೆಯನ್ನು ಹಚ್ಚಬೇಡಿರಿ, ರಕ್ತತಡೆಪಟ್ಟಿ ಅಥವಾ ಇಲೆಕ್ಟ್ರಿಕ್ ಷಾಕನ್ನು ಉಪಯೋಗಿಸಬೇಡಿರಿ, ಮತ್ತು ಆ ಗಾಯದಲ್ಲಿ ಕಚ್ಚು ಮಾಡಬೇಡಿರಿ. ಹಾವು ವಿಷಕರವಾದದ್ದಾಗಿ ಕಂಡುಬರಲಿ ಅಥವಾ ಕಂಡುಬರದಿರಲಿ, ಎಲ್ಲಾ ಹಾವುಕಡಿತಗಳು ವೈದ್ಯಕೀಯ ತುರ್ತುಚಿಕಿತ್ಸೆಗಳಾಗಿ ಉಪಚರಿಸಲ್ಪಡಬೇಕು, ಮತ್ತು ಬಲಿಯಾದವನನ್ನು ಆ ಕೂಡಲೆ ಆಸ್ಪತ್ರೆಗೆ ಕೊಂಡೊಯ್ಯಬೇಕು ಎಂಬುದು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಒಂದು ಶಿಫಾರಸ್ಸಾಗಿದೆ. ಅತ್ಯುತ್ತಮವಾದ ತಡೆಗಟ್ಟುವ ಸೂಕ್ತಕ್ರಮವು ಏನೆಂದರೆ “ಹಾವುಗಳ ಗೊಡವೆಗೆ ಹೋಗಬೇಡಿರಿ. ಅನೇಕ ಜನರು ಹಾವೊಂದನ್ನು ಕೊಲ್ಲಲು ಅಥವಾ ಅದನ್ನು ತೀರ ಸಮೀಪದಿಂದ ನೋಡಲು ಪ್ರಯತ್ನಿಸಿದ್ದರ ಕಾರಣದಿಂದಾಗಿ ಅವುಗಳಿಂದ ಕಚ್ಚಲ್ಪಟ್ಟಿದ್ದಾರೆ” ಎಂದು ಎಫ್‌ಡಿಎ ಕನ್‌ಸ್ಯೂಮರ್ ಹೇಳುತ್ತದೆ.
ಪ್ರಾಣಿ ಪ್ರಿಯರಿಗೆ ಜ್ಞಾಪನ
ನೀವು ಒಬ್ಬ ಪ್ರಾಣಿ ಪ್ರಿಯರಾಗಿದ್ದೀರೊ? ಹಾಗಿರುವಲ್ಲಿ, ಸ್ನೇಹಪರವಾದೊಂದು ನಾಯಿಯು ನಿಮ್ಮ ಮುಖವನ್ನು ಅಥವಾ ನಿಮ್ಮ ಕೈಗಳನ್ನು ನೆಕ್ಕಿರುವುದು ತೀರ ಸಂಭವನೀಯ. ಹಾಗಿದ್ದರೂ, ಮಾನಿಟೊಬ ವಿಶ್ವವಿದ್ಯಾನಿಲಯದಲ್ಲಿನ ಒಬ್ಬ ಪರೋಪಜೀವಿಶಾಸ್ತ್ರಜ್ಞರಾದ ಲೇನ್ ಗ್ರಾಹಮ್‌ರಿಗನುಸಾರ, ನೀವು ಮರಿ ಪರೋಪಜೀವಿಗಳು ಅಥವಾ ಲಾಡಿಹುಳುಗಳನ್ನು ಹತ್ತಿಸಿಕೊಳ್ಳಬಹುದಾದ ಸಾಧ್ಯತೆಯಿರುತ್ತದೆ. “ನಿಮ್ಮ ನಾಯಿಯ ಬಾಯಿಯು ನಿಮ್ಮ ಬಾಯಿಗೆ ತೀರ ಸಮೀಪವಾಗುವಂತೆ ಬಿಡದಿರುವುದು ಅತ್ಯುತ್ತಮವಾದದ್ದಾಗಿದೆ” ಎಂದು ವಿನ್ನಿಪೆಗ್ ಫ್ರೀ ಪ್ರೆಸ್ ವರದಿಸುತ್ತದೆ. ಸ್ವತಃ ತಮ್ಮನ್ನು ಸ್ವಚ್ಛಗೊಳಿಸಿಕೊಳ್ಳಲಿಕ್ಕಾಗಿ ನಾಯಿಗಳು ತಮ್ಮ ನಾಲಗೆಗಳನ್ನು ಉಪಯೋಗಿಸಿಕೊಳ್ಳುತ್ತವೆ; ಮತ್ತು ಅವುಗಳ ನಾಲಗೆಗಳು ವಾಷ್‌ಬೋರ್ಡ್‌ನಂತಿರುವುದರಿಂದ, ಮಲ ಮೈಲಿಗೆಯೂ ಒಳಗೊಂಡಿರುವ ಅನೇಕ ವಸ್ತುಗಳನ್ನು ಅವು ಶೇಖರಿಸಿಕೊಳ್ಳುತ್ತವೆ. ನಾಯಿಮರಿಗಳು “ತುಪ್ಪುಳದ ಕ್ರಿಮಿಭರಿತ ಕಂತೆಗಳನ್ನು ಹೊಂದಿರುವುದಕ್ಕೆ ಕುಪ್ರಸಿದ್ಧ”ವಾಗಿವೆಯೆಂದು ಆ ವಾರ್ತಾಪತ್ರಿಕೆಯು ದಾಖಲಿಸಿತು. ಅಸ್ವಸ್ಥರಾಗುವ ಅವಕಾಶಗಳು ಕಡಿಮೆಯಾಗಿರುವುದಾದರೂ, ಸಲಹೆ ಏನೆಂದರೆ, “ಸುರಕ್ಷಿತತೆಯ ಕಾರಣಗಳಿಗಾಗಿ, ದೀರ್ಘಸಮಯದ ಯಾವುದೇ ನಾಯಿ ನೆಕ್ಕುವಿಕೆಯ ಘಟನಾವಳಿಯ ಬಳಿಕ, ನಿಮ್ಮ ಹಾಗೂ ನಿಮ್ಮ ಚಿಕ್ಕ ಮಕ್ಕಳ ಕೈಗಳನ್ನೂ ಮುಖವನ್ನೂ ತೊಳೆಯಿರಿ.”