ಬೈಬಲಿನ ದೃಷ್ಟಿಕೋನ
ನೀವು ಮೃತರಿಗೆ ಭಯಪಡಬೇಕೊ?
ಮೃತರ ವಿಷಯವನ್ನು ಉಲ್ಲೇಖಿಸಿರಿ, ಮತ್ತು ಅನೇಕ ಜನರು ಅದರ ಕುರಿತಾಗಿ ಯಾವುದೇ ಹೆಚ್ಚಿನ ವಿಷಯವನ್ನು ಮಾತಾಡುವುದರಿಂದ ದೂರವಿರುತ್ತಾರೆ. ಆದರೂ ಕೆಲವರು, ಆ ವಿಷಯದೊಂದಿಗೆ ಕೇವಲ ಅಹಿತಕರರಾಗಿದ್ದಾರೆ ಮಾತ್ರವಲ್ಲ, ಅವರು ಭಯದಿಂದ ತಾಕಿಸಲ್ಪಡುತ್ತಾರೆ. ಆದುದರಿಂದ ಲೋಕದಾದ್ಯಂತವಾಗಿರುವ ಸಂಸ್ಕೃತಿಗಳಲ್ಲಿ, ಮೃತರ ಭಯಕ್ಕೆ ಸಂಬಂಧಿಸಿದ ಪದ್ಧತಿಗಳನ್ನು ಮತ್ತು ಸಂಸ್ಕಾರಗಳನ್ನು ಕಂಡುಕೊಳ್ಳುವುದು ಅಸಾಮಾನ್ಯವಾದ ವಿಷಯವಾಗಿರುವುದಿಲ್ಲ. ಉದಾಹರಣೆಗಾಗಿ, ಸಬ್ ಸಹಾರದ ಆಫ್ರಿಕದಲ್ಲಿ ಕಂಡುಕೊಳ್ಳಲ್ಪಡುವ ಪದ್ಧತಿಗಳತ್ತ ನಾವು ನೋಟವನ್ನು ಹರಿಸೋಣ.
ಪಶ್ಚಿಮ ಆಫ್ರಿಕದ ನಗರದಲ್ಲಿನ ಒಬ್ಬ ಮಹಿಳೆಯು, ತನ್ನ ಕುಟುಂಬದ ಸದಸ್ಯನೊಬ್ಬನು ಮೃತನಾದ ಅನಂತರ ಏನು ಸಂಭವಿಸಿತೆಂಬುದರ ಕುರಿತಾಗಿ ಕಣ್ಣಿಗೆ ಕಟ್ಟುವಂಥ ರೀತಿಯಲ್ಲಿ ಜ್ಞಾಪಿಸಿಕೊಳ್ಳುತ್ತಾಳೆ. ಅವಳು ಹೇಳುವುದು: “ಒಬ್ಬ ಸಂಬಂಧಿಕಳು, ಮೃತನಾದ ವ್ಯಕ್ತಿಗೆ ಒಂದು ತಟ್ಟೆ ಆಹಾರವನ್ನು ಕ್ರಮವಾಗಿ ತಯಾರಿಸಿ, ಅವನು ಮಲಗುವ ಕೋಣೆಯಲ್ಲಿ ಜಾಗರೂಕವಾಗಿ ಇಡುತ್ತಿದ್ದಳು. ಅವಳು ಅಲ್ಲಿರದಿದ್ದಾಗ, ನಾನು ಹೋಗಿ, ಆಹಾರವನ್ನು ತಿನ್ನುತ್ತಿದ್ದೆ. ಆ ಸಂಬಂಧಿಕಳು ಹಿಂದಿರುಗಿದಾಗ, ಅವಳು ಬಹಳ ಸಂತೋಷಿತಳಾಗುತ್ತಿದ್ದಳು! ಇಷ್ಟವಾದವುಗಳನ್ನು ಆ ಮೃತ ವ್ಯಕ್ತಿಯು ಪಡೆದುಕೊಂಡಿದ್ದನೆಂದು ಅವಳು ನಂಬಿದಳು. ಇದು ಸ್ವಲ್ಪ ಸಮಯದ ವರೆಗೆ, ನಾನು ಅಸ್ವಸ್ಥಳಾಗುವ ತನಕ ಮುಂದುವರಿಯಿತು. ನಾನು ನನ್ನ ಹಸಿವನ್ನು ಕಳೆದುಕೊಂಡೆ, ಮತ್ತು ಯಾವುದೇ ಆಹಾರವನ್ನು ತಿನ್ನುವುದಕ್ಕೆ ಅಸಾಧ್ಯವಾಯಿತು. ಇದು ನನ್ನಲ್ಲಿ ತೀವ್ರ ಭಯವನ್ನು ಉಂಟುಮಾಡಿತು! ನನ್ನ ಅಸ್ವಸ್ಥತೆಯು ನಮ್ಮ ಮೃತ ಸಂಬಂಧಿಕನಿಂದ ಉಂಟುಮಾಡಲ್ಪಟ್ಟಿದ್ದು ಎಂದು ನನ್ನ ಸಂಬಂಧಿಕರಲ್ಲಿ ಅನೇಕರು ತೀರ್ಮಾನಿಸಿದರು. ಅವನು ಕುಟುಂಬದಲ್ಲಿನ ಯಾರೋ ಒಬ್ಬರಲ್ಲಿ ಕೋಪಗೊಂಡಿರಬೇಕು ಎಂದು ಅವರು ನೆನಸಿದರು.”
ಅದೇ ನಗರದಲ್ಲಿ, ಒಂದು ಕುಟುಂಬಕ್ಕೆ ಅವಳಿ ಮಕ್ಕಳಿದ್ದು, ಒಂದು ಸತ್ತರೆ, ಮನೆಯಲ್ಲಿ ಯಾರೊಬ್ಬರೂ ಸತ್ತವನ ಕುರಿತು ಮಾತಾಡದಿರಬಹುದು. ಸತ್ತ ಅವಳಿಯ ಕುರಿತು ಯಾರಾದರೊಬ್ಬರೂ ಕೇಳುವಲ್ಲಿ, ಕುಟುಂಬವು ಸಾಂಪ್ರದಾಯಿಕವಾಗಿ ಉತ್ತರಿಸುವುದು: “ಅವನು, ಇಲ್ಲವೇ ಅವಳು, ಉಪ್ಪನ್ನು ಖರೀದಿಸಲು ಹೊರಹೋದರು.” ಸತ್ಯವು ನುಡಿಯಲ್ಪಡುವಲ್ಲಿ ಬದುಕಿರುವ ಅವಳಿಯ ಜೀವವು ತೆಗೆಯಲ್ಪಡುವುದೆಂದು ಅವರು ಬಲವಾಗಿ ನಂಬುತ್ತಾರೆ.
ಮುಂದೆ, ಈ ದೃಶ್ಯವನ್ನು ಚಿತ್ರಿಸಿಕೊಳ್ಳಿರಿ: ಮೂವರು ಹೆಂಡತಿಯರಿದ್ದ ಒಬ್ಬ ಮನುಷ್ಯನು ಮೃತನಾಗಿದ್ದಾನೆ. ಅಂತ್ಯಸಂಸ್ಕಾರದ ಮರುದಿನ, ಹೆಂಡತಿಯರಿಗಾಗಿ ವಿಶೇಷವಾದ ಶ್ವೇತ ವರ್ಣದ ಉಡುಗೆಯು ತಯಾರಿಸಲ್ಪಟ್ಟಿದೆ. ಅದೇ ಸಮಯದಲ್ಲಿ, ಮನೆಯ ಹತ್ತಿರ ಮರ ಮತ್ತು ಜೊಂಡು ಚಾವಣಿಯಿಂದ ಮಾಡಲ್ಪಟ್ಟ ಒಂದು ವಿಶೇಷವಾದ ಸ್ನಾನಗೃಹವು ಕಟ್ಟಲ್ಪಟ್ಟಿದೆ; ಅಲ್ಲಿ ಈ ಮಹಿಳೆಯರು ಸ್ನಾನಮಾಡಿ, ಶ್ವೇತ ವರ್ಣದ ಉಡುಪನ್ನು ತೊಡುವರು. ಅವರನ್ನು ಮತ್ತು ಅವರಿಗೆ ನೆರವನ್ನೀಯಲು ನೇಮಿಸಲ್ಪಟ್ಟ ಒಬ್ಬ ಮಹಿಳೆಯನ್ನು ಹೊರತುಪಡಿಸಿ ಯಾರೊಬ್ಬರೂ ಆ ಸ್ಥಳವನ್ನು ಪ್ರವೇಶಿಸುವಂತಿಲ್ಲ. ಈ ವಿಶೇಷವಾದ ಸ್ನಾನಗೃಹದಿಂದ ಹೊರಬರುತ್ತಿರುವಾಗ, ಆ ಮಹಿಳೆಯರ ಮುಖಗಳು ಮರೆಮಾಡಲ್ಪಟ್ಟಿರುತ್ತವೆ. ಆ ಮಹಿಳೆಯರು “ರಕ್ಷಣೆ”ಗಾಗಿ ಸೆಬೇ ಎಂಬ ಒಂದು ಹಗ್ಗದ ಕಂಠಹಾರವನ್ನೂ ಧರಿಸಿಕೊಳ್ಳುತ್ತಾರೆ. 100 ದಿವಸಗಳ ವರೆಗೆ ಪ್ರತಿ ಶುಕ್ರವಾರ ಮತ್ತು ಸೋಮವಾರ ಈ ವಿಧ್ಯುಕ್ತವಾದ ಶುದ್ಧೀಕರಿಸುವಿಕೆಯು ಮಾಡಲ್ಪಡುತ್ತದೆ. ಈ ಕಾಲಾವಧಿಯಲ್ಲಿ ಅವರು ಒಬ್ಬ ಗಂಡಸಿನಿಂದ ನೇರವಾಗಿ ಏನನ್ನೇ ಆಗಲಿ ತೆಗೆದುಕೊಳ್ಳಸಾಧ್ಯವಿಲ್ಲ. ಒಬ್ಬ ಗಂಡಸು ಅವರಿಗೆ ಏನನ್ನಾದರೂ ಕೊಡಲು ಬಯಸುವಲ್ಲಿ, ಅವನು ಮೊದಲಾಗಿ ಅದನ್ನು ನೆಲದ ಮೇಲೆ ಅಥವಾ ಮೇಜೊಂದರ ಮೇಲೆ ಇಡತಕ್ಕದ್ದು. ಅನಂತರ ಆ ಮಹಿಳೆಯು ಅದನ್ನು ತೆಗೆದುಕೊಳ್ಳುವಳು. ಈ ಮಹಿಳೆಯರ ಹಾಸಿಗೆಯ ಮೇಲೆ ಕುಳಿತುಕೊಳ್ಳಲು ಅಥವಾ ಮಲಗಲು ಯಾರೊಬ್ಬರಿಗೂ ಅನುಮತಿಯಿರುವುದಿಲ್ಲ. ಅವರು ಮನೆಯನ್ನು ಬಿಟ್ಟುಹೋಗುವಾಗಲೆಲ್ಲಾ, ಅವರಲ್ಲಿ ಪ್ರತಿಯೊಬ್ಬರೂ ಒಂದು ವಿಶೇಷವಾದ ಕೋಲನ್ನು ಒಯ್ಯತಕ್ಕದ್ದು. ಈ ಕೋಲನ್ನು ಪಡೆದಿರುವುದು ತಮ್ಮ ಮೃತ ಗಂಡನು ತಮ್ಮನ್ನು ಆಕ್ರಮಿಸುವುದರಿಂದ ತಡೆಗಟ್ಟುವುದೆಂದು ಅವರು ನೆನಸುತ್ತಾರೆ. ಈ ಮೇಲಿನ ಸಲಹೆಗಳು ಪಾಲಿಸಲ್ಪಡದಿರುವಲ್ಲಿ, ಆ ಮೃತ ಗಂಡನು ಕೋಪಗೊಂಡು, ತಮಗೆ ಹಾನಿಮಾಡಸಾಧ್ಯವಿದೆ ಎಂಬುದಾಗಿ ಅವರು ಭಾವಿಸುತ್ತಾರೆ.
ಇಂಥ ಅನುಭವಗಳು ಲೋಕದ ಆ ಭಾಗದಲ್ಲಿ ಸರ್ವಸಾಮಾನ್ಯವಾಗಿವೆ. ಆದರೂ, ಈ ರೀತಿಯ ಪದ್ಧತಿಗಳು ಆಫ್ರಿಕ ದೇಶಕ್ಕೆ ಅಸಾಧಾರಣವೇನೂ ಆಗಿರುವುದಿಲ್ಲ.
ಮೃತರ ಭಯವು ವ್ಯಾಪಕವಾಗಿದೆ
ಅನೇಕ ಜನರು ತಮ್ಮ ಮೃತ ಪೂರ್ವಜರನ್ನು ವೀಕ್ಷಿಸುವ ವಿಧದ ಕುರಿತು ಮುಂದಿನ ವಿಷಯವನ್ನು ಒಂದು ಎನ್‌ಸೈಕ್ಲೊಪೀಡಿಯ, ಎನ್‌ಕಾರ್ಟ ಹೇಳುತ್ತದೆ: “ಮೃತರಾದ ಸಂಬಂಧಿಕರು . . . ಶಕ್ತಿಶಾಲಿ ಆತ್ಮಿಕ ಜೀವಿಗಳಾಗಿ ಪರಿಣಮಿಸಿದ್ದಾರೆಂದು ಅಥವಾ ಕಡಿಮೆ ಸಂಭಾವ್ಯವಾಗಿ, ದೇವರ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆಂದು ನಂಬಲಾಗುತ್ತದೆ. [ಈ ಕಲ್ಪನೆ]ಯು, ಪೂರ್ವಜರು ತಮ್ಮ ಜೀವಂತರಾಗಿರುವ ಸಂಬಂಧಿಕರ ವ್ಯವಹಾರಗಳಲ್ಲಿ ಇನ್ನೂ ಆಸಕ್ತಿಯುಳ್ಳ, ಸಮಾಜದ ಕ್ರಿಯಾಶೀಲ ಸದಸ್ಯರಾಗಿದ್ದಾರೆಂಬ ನಂಬಿಕೆಯ ಮೇಲೆ ಆಧರಿತವಾಗಿದೆ. ಇದು ಪಶ್ಚಿಮ ಆಫ್ರಿಕದ ಸಮಾಜ (ಬಂಟು ಮತ್ತು ಷೋನಾ)ಗಳಲ್ಲಿ, ಪಾಲಿನೀಷಿಯ ಮತ್ತು ಮೆಲನೀಷಿಯ (ಡೊಬೂ ಮತ್ತು ಮನಸ್)ದಲ್ಲಿ, ಇಂಡೊ ಯೂರೋಪಿಯನ್ ಜನರ (ಪುರಾತನ ಸ್ಕ್ಯಾಂಡಿನೇವಿಯದ ನಿವಾಸಿಗಳು ಮತ್ತು ಜರ್ಮನರು) ನಡುವೆ, ಮತ್ತು ವಿಶೇಷವಾಗಿ ಚೀನಾ ಮತ್ತು ಜಪಾನಿನಲ್ಲಿ ವ್ಯಾಪಕವಾಗಿ ದಾಖಲಿಸಲ್ಪಟ್ಟಿದೆ. ಒಟ್ಟಿನಲ್ಲಿ, ಪೂರ್ವಜರು ತಮ್ಮ ಜೀವಂತರಾಗಿರುವ ಸಂಬಂಧಿಕರ ಘಟನೆಗಳ ದಿಕ್ಕನ್ನು ಪ್ರಭಾವಿಸಲು ಅಥವಾ ಹಿತವನ್ನು ನಿಯಂತ್ರಿಸಲು ವಿಶೇಷ ಶಕ್ತಿಗಳನ್ನು ಹೊಂದಿರುತ್ತಾ, ಮಹತ್ತಾದ ಅಧಿಕಾರವನ್ನು ಪ್ರಯೋಗಿಸುತ್ತಾರೆಂದು ನಂಬಲಾಗುತ್ತದೆ. ಕುಟುಂಬದ ರಕ್ಷಣೆಯು ಅವರ ಮುಖ್ಯ ಆಸ್ಥೆಗಳಲ್ಲಿ ಒಂದಾಗಿದೆ. ಅವರು ಅತ್ಯುಚ್ಚ ದೇವರು, ಅಥವಾ ದೇವತೆಗಳು, ಮತ್ತು ಜನರ ನಡುವೆ ಮಧ್ಯಸ್ಥಗಾರರಾಗಿದ್ದಾರೆಂದೂ, ಸ್ವಪ್ನಗಳ ಮತ್ತು ವಶೀಕರಣದ ಮೂಲಕ ಜೀವಿಸುತ್ತಿರುವವರೊಂದಿಗೆ ಸಂವಾದಮಾಡಶಕ್ತರೆಂದೂ ಪರಿಗಣಿಸಲ್ಪಡುತ್ತಾರೆ. ಅವರೆಡೆಗಿರುವ ಮನೋಭಾವವು ಹೆದರಿಕೆ ಮತ್ತು ಪೂಜ್ಯಭಾವನೆ—ಎರಡೂ—ಆಗಿದೆ. ಕಡೆಗಣಿಸಲ್ಪಡುವಲ್ಲಿ, ಪೂರ್ವಜರು ರೋಗವನ್ನು ಮತ್ತು ಇತರ ದೌರ್ಭಾಗ್ಯಗಳನ್ನು ಉಂಟುಮಾಡಬಹುದು. ಶಾಂತಿಗಾಗಿ ಕಾಣಿಕೆ, ಬಿನ್ನಹ, ಪ್ರಾರ್ಥನೆ, ಮತ್ತು ಬಲಿ—ಇವು ಜೀವಿಸುತ್ತಿರುವವರು ತಮ್ಮ ಪೂರ್ವಜರೊಂದಿಗೆ ಸಂವಾದಮಾಡಬಲ್ಲ ಹಲವಾರು ವಿಧಗಳಾಗಿವೆ.”
ನಿಶ್ಚಯವಾಗಿಯೂ, ಮೃತರ ಭಯದಿಂದ ಕುಟುಂಬವೊಂದರ ಆದಾಯವು ಬರಿದಾಗಸಾಧ್ಯವಿದೆ. ಅನೇಕ ವೇಳೆ, ಮೃತರಾದವರಿಗೆ ಭಯಪಡಬೇಕೆಂದು ಬಲವಾಗಿ ನಂಬುವವರಿಂದ, ಆಹಾರ ಮತ್ತು ಪಾನೀಯವನ್ನು ಕೇಳಿಕೊಳ್ಳುವ ಪರಿಷ್ಕಾರವಾದ ವ್ರತಾಚರಣೆಗಳು, ಬಲಿಗಾಗಿ ಸಜೀವ ಪ್ರಾಣಿಗಳು ಮತ್ತು ದುಬಾರಿ ಉಡುಪು ತಗಾದೆಮಾಡಲ್ಪಡುತ್ತದೆ.
ಆದರೆ ಮೃತ ಸಂಬಂಧಿಕರು ಅಥವಾ ಪೂರ್ವಜರು ನಿಜವಾಗಿಯೂ ಹೆದರಿಕೆ ಮತ್ತು ಪೂಜ್ಯಭಾವನೆಯನ್ನು ಹಕ್ಕೊತ್ತಾಯಪಡಿಸುವ ಸ್ಥಿತಿಯಲ್ಲಿದ್ದಾರೋ? ದೇವರ ವಾಕ್ಯವಾದ ಬೈಬಲು ಏನು ಹೇಳುತ್ತದೆ?
ಮೃತರು ನಿಮಗೆ ಹಾನಿಮಾಡಬಲ್ಲರೋ?
ಇಂಥ ನಂಬಿಕೆಗಳನ್ನು ಬೈಬಲು ಸಮ್ಮತಿಸುತ್ತದೆ ಎಂಬುದನ್ನು ತಿಳಿಯಲು ನೀವು ಆಸಕ್ತರಾಗಿರಬಹುದು. ಧರ್ಮೋಪದೇಶಕಾಂಡ ಪುಸ್ತಕದಲ್ಲಿ, ಮೃತರ ಭಯಕ್ಕೆ ಸಂಬಂಧಿಸಿದ ಆಚರಣೆಗಳು ಉಲ್ಲೇಖಿಸಲ್ಪಟ್ಟಿವೆ. ಅದು ಹೇಳುವುದು: “ಮಾಟಗಾರರು, ತಂತ್ರಗಾರರು, ಸತ್ತವರನ್ನು ವಿಚಾರಿಸುವವರು, ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ.” (ಓರೆಅಕ್ಷರಗಳು ನಮ್ಮವು.)—ಧರ್ಮೋಪದೇಶಕಾಂಡ 18:10-12.
ಅಂಥ ಸಂಸ್ಕಾರಗಳನ್ನು ಯೆಹೋವ ದೇವರು ಖಂಡಿಸಿದನೆಂಬುದನ್ನು ಗಮನಿಸಿರಿ. ಏಕೆ? ಏಕೆಂದರೆ ಅವು ಸುಳ್ಳಿನ ಮೇಲೆ ಆಧರಿತವಾಗಿವೆ. ಮೃತರ ಸಂಬಂಧದಲ್ಲಿನ ಅಗ್ರಗಣ್ಯವಾದ ಸುಳ್ಳು, ಪ್ರಾಣವು ಜೀವಿಸುತ್ತಾ ಇರುತ್ತದೆ ಎಂಬುದೇ. ಉದಾಹರಣೆಗಾಗಿ, ದ ಸ್ಟ್ರೇಟ್ ಪಾತ್ ಎಂಬ ಪತ್ರಿಕೆಯು ಸತ್ತವರಿಗೆ ಏನು ಸಂಭವಿಸುತ್ತದೆ ಎಂಬುದರ ಕುರಿತು ಇದನ್ನು ಹೇಳಿತು: “ಮರಣವು ಪ್ರಾಣದ ನಿರ್ಗಮನಕ್ಕಿಂತ ಹೆಚ್ಚಿನದ್ದೇನೂ ಆಗಿರುವುದಿಲ್ಲ. . . . ಸಮಾಧಿಯು ಕೇವಲ ದೇಹಕ್ಕಾಗಿರುವ ಒಂದು ಸ್ಥಳವಾಗಿದೆಯೇ ಹೊರತು, ಪ್ರಾಣಕ್ಕಲ್ಲ.”
ಬೈಬಲ್ ಇದನ್ನು ಸಮ್ಮತಿಸುವುದಿಲ್ಲ. ಯೆಹೆಜ್ಕೆಲ 18:4ನ್ನು ಸ್ವತಃ ಓದಿರಿ: “ಇಗೋ, ಸಕಲ ನರಪ್ರಾಣಿ [“ಪ್ರಾಣ,” NW]ಗಳು ನನ್ನವೇ; ತಂದೆಯೇನು, ಮಗನೇನು, ನರಪ್ರಾಣಿ [“ಪ್ರಾಣ,” NW]ಗಳೆಲ್ಲವೂ ನನ್ನಧೀನದಲ್ಲಿವೆ; ಪಾಪಮಾಡುವ ಪ್ರಾಣಿಯೇ [“ಪ್ರಾಣ,” NW] ಸಾಯುವನು.” ಹಾಗೂ, ಮೃತರ ಸ್ಥಿತಿಯ ಕುರಿತು ಪ್ರಸಂಗಿ 9:5ರಲ್ಲಿ ದೇವರ ವಾಕ್ಯದಲ್ಲಿ ಸ್ಫುಟವಾಗಿ ಸವಿಸ್ತಾರವಾಗಿ ಹೀಗೆ ಹೇಳಲ್ಪಟ್ಟಿತು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” ಇದು ಮೃತರಿಗಾಗಿ ಇಡಲ್ಪಡುವ ಆಹಾರವು, ಜೀವಿಸುತ್ತಿರುವವರಾದ ಯಾರಾದರೊಬ್ಬರಿಂದ ತಿನ್ನಲ್ಪಡುವ ಹೊರತು, ಏಕೆ ಸೇವಿಸಲ್ಪಡುವುದಿಲ್ಲವೆಂಬುದನ್ನು ವಿವರಿಸುತ್ತದೆ.
ಹಾಗಿದ್ದರೂ, ಬೈಬಲು ಸಮಾಧಿಯಲ್ಲಿರುವವರಿಗಾಗಿ ನಿರೀಕ್ಷೆಯನ್ನು ನೀಡುತ್ತದೆ. ಅವರು ಪುನಃ ಜೀವಿಸಬಲ್ಲರು! ಬೈಬಲು ಒಂದು “ಪುನರುತ್ಥಾನ”ದ ಕುರಿತು ಮಾತಾಡುತ್ತದೆ. (ಯೋಹಾನ 5:28, 29; 11:25; ಅ. ಕೃತ್ಯಗಳು 24:15) ಇದು ದೇವರ ತಕ್ಕ ಕಾಲದಲ್ಲಿ ನೆರವೇರುವುದು. ಈ ನಡುವೆ, ಮೃತರನ್ನು “ಎಚ್ಚರಗೊಳಿಸು”ವುದಕ್ಕಾಗಿರುವ ದೇವರ ಸಮಯವು ಬರುವ ತನಕ, ಅವರು ಪ್ರಜ್ಞೆಯಿಲ್ಲದೆ ಸಮಾಧಿಯಲ್ಲಿ ‘ನಿದ್ರೆಮಾಡುತ್ತಿರುವರು.’—ಯೋಹಾನ 11:11-14; ಕೀರ್ತನೆ 13:3.
ಜನರು ಸಾಮಾನ್ಯವಾಗಿ ಅಜ್ಞಾತವಾಗಿರುವ ವಿಷಯಕ್ಕೆ ಭಯಪಡುತ್ತಾರೆ. ನಿಷ್ಕೃಷ್ಟ ಜ್ಞಾನವು ಒಬ್ಬ ವ್ಯಕ್ತಿಯನ್ನು ನಿರಾಧಾರವಾದ ಮೂಢನಂಬಿಕೆಗಳಿಂದ ಸ್ವತಂತ್ರಗೊಳಿಸಬಲ್ಲದು. ಸಮಾಧಿಯಲ್ಲಿರುವವರ ಸ್ಥಿತಿಯ ಕುರಿತಾದ ಸತ್ಯವನ್ನು ಬೈಬಲು ನಮಗೆ ನೀಡುತ್ತದೆ. ಸರಳವಾಗಿ ಹೇಳುವುದಾದರೆ, ನೀವು ಮೃತರ ಕುರಿತು ಭಯಪಡುವ ಅಗತ್ಯವಿಲ್ಲ!—ಯೋಹಾನ 8:32.