ಹೊರತೋರಿಕೆಗಳಿಂದ ವಂಚಿತರಾಗಬೇಡಿರಿ
ನಾವು ಕಾಡಿನಲ್ಲಿ ಒಬ್ಬ ಸ್ನೇಹಿತೆಯ ಬೆಚ್ಚಗಿನ ಮನೆಯಲ್ಲಿ ಉಳಿದುಕೊಂಡಿದ್ದೆವು. ಮತ್ತು ನಾವು ಕೆಳಗೆ ಆಕೆಯ ಅರೆ ತಳಮನೆಯಲ್ಲಿ ಮಲಗಿದೆವು. ಆ ಕಾರಣ, ಒಳಗಿನಿಂದ ನಮಗೆ ಕಿಟಕಿಗಳು ಕಣ್ಣಿನ ಮಟ್ಟದಲ್ಲಿಯೂ ಹೊರಗಿನಿಂದ ನೆಲದ ಮಟ್ಟದಲ್ಲಿಯೂ ಇದ್ದವು. ಪ್ರಥಮ ಮುಂಜಾನೆ, ಸುಮಾರು ಆರು ಗಂಟೆಗೆ, ವಾಸದ ಮಹಡಿಯ ವಿವಿಧ ಭಾಗಗಳಿಂದ ಬರುತ್ತಿರುವಂತೆ ತೋರಿದ ವಿಚಿತ್ರವಾದ ಜೋಡು ತಟ್ಟುವಿಕೆಗೆ ನಾನು ಎಚ್ಚರಗೊಂಡೆ. ಕುತೂಹಲಪಡುತ್ತ, ನಾನು ಎದ್ದು, ಶೀತಕ (ರಿಫ್ರಿಜೆರೇಟರ್) ಅಥವಾ ತಾಪಕ (ಹೀಟರ್)ವು ಸದ್ದುಮಾಡುತ್ತಿದೆಯೊ ಎಂದು ನೋಡಲು ಅಡುಗೆ ಮನೆಗೆ ಹೋದೆ. ಅವೆರಡೂ ಶಬ್ದಮಾಡುತ್ತಿರಲಿಲ್ಲ. ತಬ್ಬಿಬ್ಬಾಗಿ, ಥಟ್ಟನೆ ಆ ಸದ್ದು ಕುಟುಂಬ ಕೋಣೆಯಿಂದ ಬರುವುದನ್ನು ಕೇಳಿದೆ. ನಾನು ನಿಶಬ್ದವಾಗಿ ಒಳಗೆ ನಡೆದಾಗ, ನನ್ನ ಬೆರಗಿಗೆ, ಹೊರಗೆ ಉಜ್ವಲವಾದ ಕೆಂಬಣ್ಣದ ಕಾರ್ಡಿನಲ್ ಹಕ್ಕಿಯೊಂದು ಕಿಟಕಿಕನ್ನಡಿಗಳ ಮೇಲೆ ಆಕ್ರಮಣ ಮಾಡುವುದನ್ನು ನೋಡಿದೆ! ಅದು ಮನೆಯ ಸುತ್ತಲೂ, ಎಲ್ಲೆಲ್ಲಿ ನೆಲಮಟ್ಟದ ಕಿಟಕಿಯಿತ್ತೊ—ಮಲಗುವ ಕೋಣೆ, ಸ್ನಾನದ ಕೋಣೆ, ಟಿವಿ ಕೋಣೆ—ಅಲ್ಲಲ್ಲಿ ಕಿಟಕಿಯಿಂದ ಕಿಟಕಿಗೆ ಹಾರಿತು. ನಾನು ದಿಗ್ಭ್ರಮೆಗೊಂಡೆ.
ನಾನು ಸದ್ದುಮಾಡದೆ ಕಿಟಕಿಯನ್ನು ಸಮೀಪಿಸಿದಾಗ, ಈ ರಹಸ್ಯದ ಗುಟ್ಟನ್ನು ಕಂಡುಹಿಡಿದೆ—ಹೊರಗೆ, ಕೆಲವೇ ಇಂಚುಗಳ ದೂರದಲ್ಲಿ, ಹೆಣ್ಣು ಕಾರ್ಡಿನಲ್ ಪಕ್ಷಿಯೊಂದು ಸಂತೃಪ್ತಿಯಿಂದ ಬೀಜಗಳನ್ನು ಕುಕ್ಕುತ್ತ ಕುಳಿತಿತ್ತು. ಆದರೆ ಆ ಗಂಡುಪಕ್ಷಿ ಕಿಟಕಿಗಳ ಮೇಲೆ ಏಕೆ ದಾಳಿಮಾಡುತ್ತಿತ್ತು? ಅದು ತನ್ನ ಸ್ವಂತ ಪ್ರತಿಬಿಂಬವನ್ನು ಒಂದು ಪ್ರತಿಸ್ಪರ್ಧಿ ಕಾರ್ಡಿನಲೆಂದು ತಪ್ಪಭಿಪ್ರಯಿಸಿದ್ದ ಕಾರಣ, ಅದನ್ನು ಬೆದರಿಸಿ ಓಡಿಸಲು ಪ್ರಯತ್ನಿಸುತ್ತಿತ್ತೆಂಬುದು ವ್ಯಕ್ತ! ಅದು ತೋರಿಕೆಗಳಿಂದ ವಂಚಿಸಲ್ಪಟ್ಟಿತ್ತು.
ಆ ಪಕ್ಷಿಯ ವಿಚಿತ್ರ ವರ್ತನೆಯ ಹೇತು ಇದಾಗಿತ್ತೆಂದು ನಾನು ಬಳಿಕ ದೃಢಪಡಿಸಿಕೊಂಡೆ. ದ ಕಾರ್ಡಿನಲ್ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ, ಜೂನ್ ಆಸ್ಬರ್ನ್, ಗಂಡು ಕಾರ್ಡಿನಲ್, “ತನ್ನ ಪ್ರದೇಶವು, ಮಧ್ಯೆ ಬರುವ ತನ್ನ ಜಾತಿಯ ಗಂಡುಗಳಿಂದ ಭದ್ರವಾಗಿರುವಂತೆ ನಿಶ್ಚಯಮಾಡಿಕೊಳ್ಳಲು ಅಗತ್ಯವಿರುವುದನ್ನೆಲ್ಲ ಮಾಡುತ್ತದೆ. . . . ಈ ಮಧ್ಯೆ ತಲೆಹಾಕುವವರನ್ನು [ಅದು] ಓಡಿಸಿಬಿಡುತ್ತದೆ ಮಾತ್ರವಲ್ಲ, ಅದು ಕಾರಿನ ಹಬ್ಕ್ಯಾಪ್ಗಳು, ಕಾರಿನ ಕನ್ನಡಿಗಳು ಅಥವಾ ದೃಶ್ಯ ಕಿಟಕಿಗಳು ಮತ್ತು ಗಾಜಿನ ಜಾರುದ್ವಾರಗಳಲ್ಲಿ ಕೂಡ ತನ್ನ ಸ್ವಂತ ಪ್ರತಿಬಿಂಬಕ್ಕೆ ಢಿಕ್ಕಿಹೊಡೆಯುತ್ತದೆಂಬುದು ಜ್ಞಾತವಾಗಿದೆ,” ಎಂದು ಹೇಳುತ್ತಾರೆ. ಆ ಬಳಿಕ ಅವರು, ನಾವು ಒಪ್ಪಸಾಧ್ಯವಿದ್ದ ಒಂದು ಹೇಳಿಕೆಯನ್ನು ಕೂಡಿಸುತ್ತಾರೆ: “ಒಬ್ಬ ಮನೆಯ ಯಜಮಾನನ ಶಾಂತ ಜೀವನಕ್ಕೆ ಇದು ತೀರ ಭಂಗ ತರಬಲ್ಲದು.” ನಾವು ಪ್ರತಿದಿನ ಬೆಳಗ್ಗೆ ಅದು ಸರಿಯೆಂಬುದನ್ನು ಕಂಡುಹಿಡಿದೆವು.
ಈ ಆಂತರಿಕ ನಿರ್ಬಂಧದ ಗಂಡು ವರ್ತನೆಯನ್ನು ನಿಲ್ಲಿಸಲು ಏನು ಮಾಡಸಾಧ್ಯವಿದೆ? ಲೇಖಕಿ ಆಸ್ಬರ್ನ್ ಸೂಚಿಸುವುದು: “ಕೆಲವು ಸಲ ಶಾಂತಿ ಮತ್ತು ಮೌನವನ್ನು ಪುನಸ್ಸ್ಥಾಪಿಸಲು . . . ಪಕ್ಷಿಯನ್ನು ಈ ಬಹುಮಟ್ಟಿಗೆ ಆತ್ಮಹತ್ಯಾತ್ಮಕ ಆಕ್ರಮಣಗಳಿಂದ ತಡೆಯಲು, ಹೊಳೆಯುವಂತಹ ಮೇಲ್ಮೈಗಳನ್ನು ಮುಚ್ಚುವುದು ಅಗತ್ಯವಾಗಿ ಪರಿಣಮಿಸುತ್ತದೆ.”—ದತ್ತಲೇಖನ.