ಅಪಾಯವನ್ನು ಹೇಗೆ ಕಡಮೆಮಾಡಸಾಧ್ಯವಿದೆ?
ಪರಿಧಮನಿ ರೋಗವು (ಕ್ಯಾಡ್) ಅನೇಕ ತಳಿಶಾಸ್ತ್ರೀಯ, ಪರಿಸರೀಯ ಮತ್ತು ಜೀವನ ಶೈಲಿಯ ಸಂಗತಿಗಳೊಂದಿಗೆ ಜೊತೆಗೂಡಿದೆ. ಅನೇಕ ವರ್ಷಗಳಿಂದ, ಇಲ್ಲವೆ ದಶಕಗಳಿಂದ ಈ ಸಂಗತಿಗಳಲ್ಲಿ ಜತೆಗೂಡಿರುವ ಒಂದೊ ಹೆಚ್ಚೊ ಅಪಾಯಗಳಿಂದಾಗಿ ಕ್ಯಾಡ್ ಅಥವಾ ಹೃದಯಾಘಾತವು ಸಂಭವಿಸಸಾಧ್ಯವಿದೆ.
ವಯಸ್ಸು, ಲಿಂಗ ಮತ್ತು ಆನುವಂಶೀಯತೆ
ವಯಸ್ಸು ಹೆಚ್ಚಾದಂತೆ ಹೃದಯಾಘಾತದ ಅಪಾಯ ಹೆಚ್ಚುತ್ತದೆ. ಸುಮಾರು 55 ಪ್ರತಿಶತ ಹೃದಯಾಘಾತಗಳು, 65ಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ಸಂಭವಿಸುತ್ತವೆ. ಹೃದಯಾಘಾತಗಳಿಂದ ಸಾಯುವವರಲ್ಲಿ ಸುಮಾರು 80 ಪ್ರತಿಶತ ಜನರು, 65 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು.
ಐವತ್ತಕ್ಕೂ ಕೆಳಗಿನ ಪುರುಷರು ಅದೇ ಪ್ರಾಯದ ಸ್ತ್ರೀಯರ ಗುಂಪಿಗಿಂತ ಹೆಚ್ಚು ಅಪಾಯಸ್ಥಿತಿಯಲ್ಲಿದ್ದಾರೆ. ಋತುಬಂಧಾನಂತರ, ರಕ್ಷಕ ಚೋದಕಸ್ರಾವವಾದ ಎಸ್ಟ್ರಜನ್ನಲ್ಲಿ ಕಡಿದಾದ ಇಳಿತವಾಗುವುದರಿಂದ ಒಬ್ಬ ಸ್ತ್ರೀಯ ಅಪಾಯ ಹೆಚ್ಚುತ್ತದೆ. ಕೆಲವು ಅಂದಾಜುಗಳಿಗನುಸಾರ, ಎಸ್ಟ್ರಜನ್ ಭರ್ತಿ ಚಿಕಿತ್ಸೆಯು, ಕೆಲವು ಕ್ಯಾನ್ಸರ್ಗಳ ಅಪಾಯ ಹೆಚ್ಚಿಸಬಹುದಾದರೂ, ಸ್ತ್ರೀಯರ ಹೃದ್ರೋಗ ಅಪಾಯವನ್ನು 40 ಅಥವಾ ಹೆಚ್ಚು ಪ್ರತಿಶತಗಳಷ್ಟು ಕಡಮೆಮಾಡಬಹುದು.
ಆನುವಂಶೀಯತೆಯು ಮುಖ್ಯ ಪಾತ್ರವನ್ನು ವಹಿಸಸಾಧ್ಯವಿದೆ. ಯಾರ ಹೆತ್ತವರಿಗೆ 50 ವರ್ಷ ಪ್ರಾಯಕ್ಕಿಂತ ಮೊದಲು ಆಘಾತವಾಗಿತ್ತೊ, ಅವರಿಗೆ ಆಘಾತವಾಗುವ ಹೆಚ್ಚಿನ ಅಪಾಯವಿದೆ. ಹೆತ್ತವರಿಗೆ 50 ವರ್ಷ ಪ್ರಾಯದ ಅನಂತರ ಆಘಾತವಾಗಿದ್ದರೂ, ಅಧಿಕ ಅಪಾಯಸಂಭವವಿರುತ್ತದೆ. ಕುಟುಂಬದಲ್ಲಿ ಹೃದ್ರೋಗದ ಇತಿಹಾಸವಿರುವಾಗ, ಸಂತತಿಯವರು ತದ್ರೀತಿಯ ಸಮಸ್ಯೆಗಳನ್ನು ವಿಕಸಿಸಿಕೊಳ್ಳುವುದು ಹೆಚ್ಚು ಸಂಭವನೀಯ.
ಕಲೆಸ್ಟರಾಲ್ ಪ್ರಭಾವ
ಒಂದು ವಿಧದ ಕೊಬ್ಬಾದ ಕಲೆಸ್ಟರಾಲ್, ಜೀವಕ್ಕೆ ಆವಶ್ಯಕ. ಪಿತ್ತಜನಕಾಂಗವು ಅದನ್ನು ಉತ್ಪನ್ನಮಾಡುತ್ತದೆ, ರಕ್ತವು ಅದನ್ನು ಜೀವಕಣಗಳಿಗೆ, ಲೈಪೊಪ್ರೋಟೀನ್ಗಳೆಂಬ ಸೂಕ್ಷ್ಮಪರಮಾಣುಗಳಲ್ಲಿ ಒಯ್ಯುತ್ತದೆ. ಇವುಗಳಲ್ಲಿ ಎರಡು ವಿಧಗಳಿವೆ—ಕಡಮೆ ನಿಬಿಡವಾದ ಲೈಪೊಪ್ರೋಟೀನ್ಗಳು (ಎಲ್ಡಿಎಲ್ ಕಲೆಸ್ಟರಾಲ್) ಮತ್ತು ಹೆಚ್ಚು ನಿಬಿಡವಾದ ಲೈಪೊಪ್ರೋಟೀನ್ಗಳು (ಏಚ್ಡಿಎಲ್ ಕಲೆಸ್ಟರಾಲ್). ತೀರ ಜಾಸ್ತಿ ಎಲ್ಡಿಎಲ್ ಕಲೆಸ್ಟರಾಲ್ ರಕ್ತದಲ್ಲಿ ಸಾಂದ್ರೀಕರಿಸುವಾಗ, ಕಲೆಸ್ಟರಾಲ್ ಪರಿಧಮನಿ ರೋಗ (ಕ್ಯಾಡ್)ವನ್ನು ಬರಿಸುವ ಅಪಾಯಾಂಶವಾಗಿ ಪರಿಣಮಿಸುತ್ತದೆ.
ಏಚ್ಡಿಎಲ್, ಅಂಗಾಂಶಗಳಿಂದ ಕಲೆಸ್ಟರಾಲನ್ನು ತೆಗೆದು, ಎಲ್ಲಿ ಅದು ಮಾರ್ಪಡಿಸಲ್ಪಟ್ಟು ದೇಹದಿಂದ ವಿಸರ್ಜಿಸಲ್ಪಡುತ್ತದೊ ಆ ಪಿತ್ತಜನಕಾಂಗಕ್ಕೆ ಒಯ್ಯುವ ಮೂಲಕ ಒಂದು ರಕ್ಷಕ ಪಾತ್ರವನ್ನು ವಹಿಸುತ್ತದೆ ಎಂದೆಣಿಸಲಾಗುತ್ತದೆ. ಎಲ್ಡಿಎಲ್ ಜಾಸ್ತಿಯಿದ್ದು ಏಚ್ಡಿಎಲ್ ಕಡಮೆಯಿದ್ದರೆ, ಹೃದ್ರೋಗದ ಅಪಾಯ ಹೆಚ್ಚು. ಎಲ್ಡಿಎಲ್ ಮಟ್ಟವನ್ನು ಇಳಿಸುವುದರಿಂದ ಈ ಅಪಾಯದಲ್ಲಿ ಗಮನಾರ್ಹವಾದ ಇಳಿತವು ಪರಿಣಮಿಸಬಲ್ಲದು. ಆಹಾರಪಥ್ಯಕ್ರಮಗಳು ಚಿಕಿತ್ಸೆಯಲ್ಲಿ ನೆತ್ತಿಗಲ್ಲಾಗಿವೆ ಮತ್ತು ವ್ಯಾಯಾಮವು ಸಹಾಯಕರವಾಗಿರಬಲ್ಲದು. ವಿವಿಧ ಔಷಧಗಳು ಪರಿಣಾಮಗಳನ್ನು ತರಬಲ್ಲವಾದರೂ, ಕೆಲವು ಅಹಿತಕರವಾದ ಪಕ್ಕ ಪರಿಣಾಮಗಳನ್ನು ತರಬಲ್ಲವು.a
ಕಲೆಸ್ಟರಾಲ್ ಮತ್ತು ಪೂರಿತ ಕೊಬ್ಬುಗಳು (ಸ್ಯಾಟ್ಯುರೇಟೆಡ್ ಫ್ಯಾಟ್ಸ್) ಕಡಮೆಯಿರುವ ಆಹಾರಪಥ್ಯವು ಶಿಫಾರಸ್ಸು ಮಾಡಲ್ಪಡುತ್ತದೆ. ಬೆಣ್ಣೆಯಂತಹ ಪೂರಿತ ಕೊಬ್ಬುಗಳು ಹೆಚ್ಚಿರುವ ಆಹಾರಗಳನ್ನು, ಕನೋಲ ಎಣ್ಣೆ ಅಥವಾ ಆಲಿವ್ ಎಣ್ಣೆಯಂತಹ ಕೊಬ್ಬು ಕಡಮೆಯಿರುವ ಆಹಾರಗಳಿಂದ ಬದಲಿಸುವುದು, ಎಲ್ಡಿಎಲ್ಅನ್ನು ಕಡಮೆಮಾಡಿ ಏಚ್ಡಿಎಲ್ಅನ್ನು ಕಾಪಾಡಬಲ್ಲದು. ಇನ್ನೊಂದು ಪಕ್ಕದಲ್ಲಿ, ಹೆಚ್ಚಿನ ಮಾರ್ಜರಿನ್ ಬೆಣ್ಣೆಯಲ್ಲಿ ಮತ್ತು ವನಸ್ಪತಿ ಕೊಬ್ಬಿನ ಉತ್ಪನ್ನಗಳಲ್ಲಿ ಕಂಡುಬರುವ, ಜಲಜನಕ ಸಂಯುಕ್ತ (ಹೈಡ್ರೋಜನೇಟೆಡ್) ಅಥವಾ ಆಂಶಿಕ ಜಲಜನಕ ಸಂಯುಕ್ತ ವನಸ್ಪತಿ ಎಣ್ಣೆಗಳು, ಎಲ್ಡಿಎಲ್ಅನ್ನು ಹೆಚ್ಚಿಸಿ ಏಚ್ಡಿಎಲ್ಅನ್ನು ತಗ್ಗಿಸಬಲ್ಲವೆಂದು ಅಮೆರಿಕನ್ ಜರ್ನಲ್ ಆಫ್ ಪಬ್ಲಿಕ್ ಹೆಲ್ತ್ ಗಮನಿಸುತ್ತದೆ. ಜಾಸ್ತಿ ಕೊಬ್ಬು ಇರುವ ಮಾಂಸವನ್ನು ಕಡಮೆ ತಿಂದು, ಕೋಳಿ ಅಥವಾ ಟರ್ಕಿಯ ಕಡಮೆ ಕೊಬ್ಬು ಇರುವ ಮಾಂಸಗಳಿಂದ ಭರ್ತಿಮಾಡುವುದನ್ನು ಸಹ ಶಿಫಾರಸ್ಸು ಮಾಡಲಾಗುತ್ತದೆ.
ವಿಟಮಿನ್ ಇ, ಬೇಟ-ಕ್ಯಾರಟೀನ್ ಮತ್ತು ವಿಟಮಿನ್ ಸಿಗಳು, ಪ್ರಾಣಿಗಳಲ್ಲಿ ಅಪಧಮನಿಕಾಠಿನ್ಯ (ಆ್ಯಥರೋಸ್ಕ್ಲರೋಸಿಸ್)ವನ್ನು ನಿಧಾನಿಸಬಲ್ಲವೆಂದು ಅಧ್ಯಯನಗಳು ತೋರಿಸಿವೆ. ಇವು ಮಾನವರಲ್ಲಿ ಹೃದಯಾಘಾತಗಳ ವ್ಯಾಪ್ತಿಗಳನ್ನು ಸಹ ಇಳಿಸಬಹುದೆಂದು ಒಂದು ಅಧ್ಯಯನ ತೀರ್ಮಾನಿಸಿತು. ಬೇಟ-ಕ್ಯಾರಟೀನ್ ಮತ್ತು ಇತರ ಕರಾಟನೊಯಿಡ್ಗಳು ಹಾಗೂ ವಿಟಮಿನ್ ಸಿ ಹೇರಳವಾಗಿರುವ ಟೊಮಾಟೊ, ಕಡು ಹಸಿರು ಸೊಪ್ಪು, ಕ್ಯಾಪ್ಸಿಕಮ್ ಮೆಣಸು, ಕ್ಯಾರಟ್ಗಳು, ಗೆಣಸು ಮತ್ತು ಕರಬೂಜ ಹಣ್ಣುಗಳಂತಹ, ಕಾಯಿಪಲ್ಯ ಮತ್ತು ಹಣ್ಣುಗಳ ದೈನಂದಿನ ತಿನ್ನುವಿಕೆಯು, ಪರಿಧಮನಿ ರೋಗದಿಂದ ತುಸು ರಕ್ಷೆಯನ್ನು ಕೊಟ್ಟೀತು.
ವಿಟಮಿನ್ ಬಿ6 ಮತ್ತು ಮ್ಯಾಗ್ನೀಸಿಯಮ್ ಕೂಡ ಉಪಯುಕ್ತವೆಂದು ಹೇಳಲಾಗುತ್ತದೆ. ಬಾರ್ಲಿ ಮತ್ತು ಓಟ್ಗಳಂತಹ ಇಡೀ ಧಾನ್ಯಗಳು ಹಾಗೂ ಕಾಳು, ದ್ವಿದಳ ಧಾನ್ಯ, ಕೆಲವು ಬೀಜಗಳು ಮತ್ತು ಕರಟಕಾಯಿಗಳು ಸಹಾಯಕರವಾಗಿರಬಲ್ಲವು. ಇದಕ್ಕೆ ಕೂಡಿಕೆಯಾಗಿ, ಸ್ಯಾಮನ್, ಮ್ಯಾಕರೆಲ್, ಹೆರಿಂಗ್ ಅಥವಾ ಟ್ಯೂನದಂತಹ ಮೀನುಗಳನ್ನು ಕಡಮೆ ಪಕ್ಷ ವಾರಕ್ಕೆರಡು ಬಾರಿ ತಿನ್ನುವುದು, ಅವುಗಳಲ್ಲಿ ಓಮೆಗ-3 ಮತ್ತು ಬಹುಅಪೂರಿತ ಕೊಬ್ಬಿನ ಆಮ್ಲಗಳು (ಪಾಲಿಅನ್ಸ್ಯಾಟ್ಯುರೇಟೆಡ್ ಫ್ಯಾಟಿ ಆ್ಯಸಿಡ್ಸ್) ಹೇರಳವಾಗಿರುವುದರಿಂದ, ಪರಿಧಮನಿ ರೋಗದ ಅಪಾಯವನ್ನು ಕಡಮೆಮಾಡಬಹುದೆಂದು ಯೋಚಿಸಲಾಗುತ್ತದೆ.
ಕುಳಿತು ಕೆಲಸಮಾಡುವ ಜೀವನ ಶೈಲಿ
ಕುಳಿತು ಕೆಲಸ ಮಾಡುವ ಜನರಿಗೆ ಹೃದಯಾಘಾತದ ಅಪಾಯ ಹೆಚ್ಚು. ಅವರು ದಿನದಲ್ಲಿ ಹೆಚ್ಚಿನ ಭಾಗವನ್ನು ದೈಹಿಕವಾಗಿ ನಿಷ್ಕ್ರಿಯರಾಗಿ ಕಳೆದು, ಕ್ರಮವಾಗಿ ವ್ಯಾಯಾಮ ಮಾಡುವುದಿಲ್ಲ. ಭಾರೀ ತೋಟಗಾರಿಕೆ, ನಿಧಾನ ಓಟ, ಹೆಚ್ಚು ಭಾರದ ವಸ್ತುಗಳನ್ನು ಎತ್ತುವುದು ಅಥವಾ ಹಿಮ ಗೋರುವುದು—ಇಂತಹ ಶ್ರಮದ ಚಟುವಟಿಕೆಗಳ ಬಳಿಕ ಈ ಜನರಲ್ಲಿ ಹೃದಯಾಘಾತಗಳು ಅನೇಕ ಬಾರಿ ಸಂಭವಿಸುತ್ತವೆ. ಆದರೆ ಕ್ರಮವಾಗಿ ವ್ಯಾಯಾಮ ಮಾಡುವವರಲ್ಲಿ ಈ ಅಪಾಯವು ಕಡಮೆಯಾಗುತ್ತದೆ.
ವಾರಕ್ಕೆ ಮೂರೊ ನಾಲ್ಕೊ ಬಾರಿ 20-30 ನಿಮಿಷ ಜೋರಾಗಿ ನಡೆಯುವುದು ಸಹ ಒಂದು ಆಘಾತದ ಅಪಾಯವನ್ನು ತಗ್ಗಿಸಬಹುದು. ಕ್ರಮದ ವ್ಯಾಯಾಮವು ಹೃದಯದ ಪಂಪುಮಾಡುವ ಸಾಮರ್ಥ್ಯವನ್ನು ಹೆಚ್ಚಿಸಿ, ತೂಕ ತಗ್ಗಿಸಲು ನೆರವಾಗುವುದು ಮತ್ತು ಕಲೆಸ್ಟರಾಲ್ ಮಟ್ಟಗಳನ್ನು ಕೆಳಗಿಳಿಸಿ ರಕ್ತದೊತ್ತಡವನ್ನು ಕಡಮೆಮಾಡಬಹುದು.
ಏರೊತ್ತಡ, ಅಧಿಕ ತೂಕ ಮತ್ತು ಮಧುಮೇಹ
ಅಧಿಕ ರಕ್ತದೊತ್ತಡ (ಹೈಪರ್ಟೆನ್ಶನ್)ವು ಅಪಧಮನಿಯ ಗೋಡೆಗಳನ್ನು ಘಾಸಿಗೊಳಿಸಿ, ಎಲ್ಡಿಎಲ್ ಕಲೆಸ್ಟರಾಲ್ ಅಪಧಮನಿಯ ಪದರವನ್ನು ಪ್ರವೇಶಿಸುವಂತೆ ಮಾಡಿ, ಪೊರೆ (ಪ್ಲ್ಯಾಕ್)ಯ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಪೊರೆಯ ಇಡುಗೆಗಳು ವೃದ್ಧಿಯಾಗುವಾಗ, ರಕ್ತ ಪ್ರವಾಹಕ್ಕೆ ಹೆಚ್ಚು ತಡೆಯುಂಟಾಗುತ್ತದೆ, ಹಾಗೆಯೇ ರಕ್ತದೊತ್ತಡದಲ್ಲಿ ಏರಿಕೆಯಾಗುತ್ತದೆ.
ಸಮಸ್ಯೆಯಿದೆಯೆಂಬುದಕ್ಕೆ ಹೊರಗಣ ಸೂಚನೆಯೇ ಇಲ್ಲದಿರಬಹುದಾದ ಕಾರಣ, ರಕ್ತದೊತ್ತಡವನ್ನು ಕ್ರಮವಾಗಿ ಪರೀಕ್ಷಿಸಿ ನೋಡಬೇಕು. ವ್ಯಾಕೋಚನ ಒತ್ತಡ (ಡಯಸ್ಟಾಲಿಕ್ ಪ್ರೆಷರ್, ಅತಿ ಕೆಳಗಣ ನಂಬರ್)ದ ಪ್ರತಿ ಒಂದು ಪಾಯಿಂಟ್ ಕಮ್ಮಿಗೆ ಹೃದಯಾಘಾತದ ಅಪಾಯವು 2ರಿಂದ 3 ಪ್ರತಿಶತ ಕಡಮೆಯಾಗಬಹುದು. ರಕ್ತದೊತ್ತಡವನ್ನು ಕೆಳಗಿಳಿಸಲು ಔಷಧವು ಪರಿಣಾಮಕಾರಿಯಾಗಬಹುದು. ಆಹಾರಪಥ್ಯ ಮತ್ತು ಕೆಲವು ಸಂದರ್ಭಗಳಲ್ಲಿ ಉಪ್ಪು ಸೇವನೆಯನ್ನು ಮಿತಿಗೊಳಿಸುವುದು, ತೂಕ ಕಮ್ಮಿಗಾಗಿ ಮಾಡುವ ಕ್ರಮದ ವ್ಯಾಯಾಮದೊಂದಿಗೆ ರಕ್ತದೊತ್ತಡವನ್ನು ಹತೋಟಿಯಲ್ಲಿಡಲು ಸಹಾಯಮಾಡಸಾಧ್ಯವಿದೆ.
ವಿಪರೀತ ತೂಕವು ಅಧಿಕ ರಕ್ತದೊತ್ತಡವನ್ನು ಮತ್ತು ಕೊಬ್ಬಿನ ವೈಪರೀತ್ಯಗಳನ್ನು ಉತ್ತೇಜಿಸುತ್ತದೆ. ಬೊಜ್ಜು ಬರದಂತೆ ನೋಡಿಕೊಳ್ಳುವುದು ಅಥವಾ ಅದಕ್ಕೆ ಚಿಕಿತ್ಸೆ ನಡೆಸುವುದು ಮಧುಮೇಹವನ್ನು ಪ್ರತಿರೋಧಿಸುವ ಒಂದು ಪ್ರಧಾನ ಮಾರ್ಗ. ಮಧುಮೇಹವು ಪರಿಧಮನಿ ರೋಗವನ್ನು ವೇಗವೃದ್ಧಿಸುವಂತೆ ಮಾಡಿ, ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಧೂಮಪಾನಮಾಡುವುದು
ಪರಿಧಮನಿ ರೋಗದ ಬೆಳವಣಿಗೆಯಲ್ಲಿ ಸಿಗರೇಟ್ ಸೇದುವಿಕೆಯು ಒಂದು ಬಲವಾದ ಅಂಶ. ಅಮೆರಿಕದಲ್ಲಿ ಅದು ಎಲ್ಲ ಹೃದ್ರೋಗಗಳ ಸುಮಾರು 20 ಪ್ರತಿಶತಕ್ಕೆ ನೇರವಾಗಿ ಮತ್ತು 55ರ ಕೆಳಗಣ ವಯಸ್ಸಿನ ಸ್ತ್ರೀಯರ ಹೃದಯಾಘಾತಗಳಲ್ಲಿ ಸುಮಾರು 50 ಪ್ರತಿಶತಕ್ಕೆ ಕಾರಣಭೂತವಾಗಿದೆ. ಸಿಗರೇಟ್ ಸೇದುವಿಕೆಯು ರಕ್ತದೊತ್ತಡವನ್ನು ಹೆಚ್ಚಿಸಿ, ನಿಕೊಟೀನ್ ಮತ್ತು ಕಾರ್ಬನ್ ಮನಾಕ್ಸೈಡ್ನಂತಹ ವಿಷ ರಾಸಾಯನಿಕ ದ್ರವ್ಯಗಳನ್ನು ರಕ್ತಪ್ರವಾಹದೊಳಗೆ ಸೇರಿಸುತ್ತದೆ. ಸರದಿಯಾಗಿ, ಈ ರಾಸಾಯನಿಕ ದ್ರವ್ಯಗಳು ಅಪಧಮನಿಗಳನ್ನು ಹಾನಿಗೊಳಿಸುತ್ತವೆ.
ಧೂಮಪಾಯಿಗಳು ತಮ್ಮ ಹೊಗೆಗೆ ಒಡ್ಡಲ್ಪಡುವವರನ್ನು ಸಹ ಅಪಾಯಕ್ಕೊಳಪಡಿಸುತ್ತಾರೆ. ಧೂಮಪಾಯಿಗಳೊಂದಿಗೆ ಜೀವಿಸುವ ಧೂಮಪಾನಮಾಡದವರಿಗೆ ಹೃದಯಾಘಾತದ ಹೆಚ್ಚುವರಿದ ಅಪಾಯವಿದೆಯೆಂದು ಅಧ್ಯಯನಗಳು ತೋರಿಸುತ್ತವೆ. ಹೀಗೆ, ಧೂಮಪಾನವನ್ನು ಬಿಟ್ಟುಬಿಡುವ ಮೂಲಕ ಒಬ್ಬ ವ್ಯಕ್ತಿಯು ತನ್ನ ಸ್ವಂತ ಅಪಾಯವನ್ನು ಮಾತ್ರವಲ್ಲ, ಸೇದದಿರುವ ಪ್ರಿಯರ ಜೀವಗಳನ್ನೂ ರಕ್ಷಿಸಬಹುದಾಗಿದೆ.
ಒತ್ತರ
ತೀವ್ರ ಭಾವನಾತ್ಮಕ ಅಥವಾ ಮಾನಸಿಕ ಒತ್ತರಕ್ಕೊಳಗಾಗಿರುವಾಗ, ಪರಿಧಮನಿ ರೋಗವಿರುವವರು, ಆರೋಗ್ಯಕರವಾದ ಅಪಧಮನಿಗಳಿರುವ ಜನರಿಗಿಂತ ಹೃದಯಾಘಾತ ಮತ್ತು ತತ್ಕ್ಷಣದ ಹೃದಯಾಘಾತ ಮರಣದ ಸಂಬಂಧದಲ್ಲಿ ಎಷ್ಟೋ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ. ಒಂದು ಅಧ್ಯಯನಕ್ಕನುಸಾರ, ಒತ್ತರವು ಪೊರೆ ತುಂಬಿರುವ ಅಪಧಮನಿಯು ಸಂಕುಚಿತವಾಗುವಂತೆ ಮಾಡಬಲ್ಲದು, ಮತ್ತು ಇದು, ರಕ್ತಪ್ರವಾಹವನ್ನು 27 ಪ್ರತಿಶತದಷ್ಟೂ ಕಡಮೆಮಾಡಬಲ್ಲದು. ತುಸು ರೋಗಾವಸ್ಥೆಯಲ್ಲಿರುವ ಅಪಧಮನಿಯಲ್ಲಿಯೂ ಗಮನಾರ್ಹವಾದ ಸಂಕೋಚನವು ಕಂಡುಬಂತು. ಕಠಿನ ಒತ್ತರವು ಅಪಧಮನಿಯ ಗೋಡೆಗಳಲ್ಲಿರುವ ಪೊರೆಯು ಒಡೆಯುವ ಪರಿಸರವನ್ನು ಸೃಷ್ಟಿಸಿ, ಹೃದಯಾಘಾತವನ್ನು ಉಂಟುಮಾಡಬಲ್ಲದೆಂದು ಇನ್ನೊಂದು ಅಧ್ಯಯನವು ಸೂಚಿಸಿತು.
ಕನ್ಸೂಮರ್ ರಿಪೋರ್ಟ್ಸ್ ಆನ್ ಹೆಲ್ತ್ ಹೇಳುವುದು: “ಕೆಲವು ಜನರು ದುರ್ಭಾವದಿಂದ ಜೀವನವನ್ನು ಸಾಗಿಸುವಂತೆ ಕಾಣುತ್ತದೆ. ಅವರು ತಪ್ಪು ಹುಡುಕುವವರೂ, ಸಿಟ್ಟುಗೊಳ್ಳುವವರೂ, ಸುಲಭವಾಗಿ ಕೆರಳಿಸಲ್ಪಡುವವರೂ ಆಗಿರುತ್ತಾರೆ. ಹೆಚ್ಚಿನ ಜನರು ಚಿಕ್ಕ ಕೆರಳಿಕೆಗಳನ್ನು ಅಲಕ್ಷ್ಯಮಾಡುತ್ತಾರಾದರೂ, ವಿರೋಧ ಭಾವದವರು ಭಾವಾತ್ಮಕವಾಗಿ ವಿಪರೀತ ಪ್ರತಿಕ್ರಿಯೆಯನ್ನು ತೋರಿಸುತ್ತಾರೆ.” ಅಸ್ಥಿಗತವಾದ ಸಿಟ್ಟು ಮತ್ತು ವಿರೋಧಭಾವವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಹೃದಯ ಮಿಡಿತವನ್ನು ವೃದ್ಧಿಸುತ್ತದೆ, ಪಿತ್ತಜನಕಾಂಗವು ಕಲೆಸ್ಟರಾಲ್ಅನ್ನು ರಕ್ತಪ್ರವಾಹದೊಳಕ್ಕೆ ಸುರಿಸುವಂತೆ ಉತ್ತೇಜಿಸುತ್ತದೆ. ಇದು ಪರಿಧಮನಿಗಳನ್ನು ಹಾನಿಗೊಳಿಸಿ ಪರಿಧಮನಿ ರೋಗಕ್ಕೆ ನೆರವಾಗುತ್ತದೆ. ಸಿಟ್ಟು, ಹೃದಯಾಘಾತದ ಅಪಾಯವನ್ನು ಇಮ್ಮಡಿಸುತ್ತದೆಂದು ಯೋಚಿಸಲಾಗುತ್ತದೆ, ಮತ್ತು ಇದು ಕಡಮೆ ಪಕ್ಷ ಎರಡು ತಾಸುಗಳ ತನಕವಾದರೂ ನೇರವಾದ ಅಪಾಯವಾಗಿ ಉಳಿಯುತ್ತದೆ. ಯಾವುದು ಸಹಾಯಮಾಡಬಲ್ಲದು?
ದ ನ್ಯೂ ಯಾರ್ಕ್ ಟೈಮ್ಸ್ಗನುಸಾರ, ಭಾವಾತ್ಮಕ ತಿಕ್ಕಾಟಗಳಲ್ಲಿ ಶಾಂತರಾಗಿ ಉಳಿಯಲು ಪ್ರಯತ್ನಿಸಿದವರು, ಹೃದಯಾಘಾತದ ತಮ್ಮ ಅಪಾಯವನ್ನು ಕಡಮೆಮಾಡಶಕ್ತರಾಗಬಹುದೆಂದು ಡಾ. ಮರೀ ಮಿಟ್ಲ್ಮ್ಯಾನ್ ಹೇಳಿದರು. ಇದು ಶತಮಾನಗಳ ಹಿಂದೆ ಬೈಬಲ್ನಲ್ಲಿ ದಾಖಲೆಯಾಗಿರುವ ಮಾತುಗಳನ್ನು ಸರಿಸುಮಾರಾಗಿ ಹೋಲುತ್ತದೆ: “ಶಾಂತಿಗುಣವು [“ಶಾಂತ ಹೃದಯವು,” NW] ದೇಹಕ್ಕೆ ಜೀವಾಧಾರವು.”—ಜ್ಞಾನೋಕ್ತಿ 14:30.
ಒತ್ತರದ ಕೆಳಗಿರುವುದು ಹೇಗಿತ್ತೆಂದು ಅಪೊಸ್ತಲ ಪೌಲನಿಗೆ ತಿಳಿದಿತ್ತು. ಪ್ರತಿದಿನ ತನ್ನೊಳಗೆ ನುಗ್ಗಿಬಂದ ಚಿಂತೆಗಳ ಕುರಿತು ಅವನು ಮಾತಾಡಿದನು. (2 ಕೊರಿಂಥ 11:24-28) ಆದರೆ ಅವನು ದೇವರಿಂದ ಸಹಾಯವನ್ನು ಅನುಭವಿಸಿ ಬರೆದುದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.”—ಫಿಲಿಪ್ಪಿ 4:6, 7.
ಹೃದಯ ಸಮಸ್ಯೆಗಳಿಗೆ ಸಂಬಂಧಿಸಿದ ಇತರ ಸಂಗತಿಗಳು ಇವೆಯಾದರೂ, ಇಲ್ಲಿ ಚರ್ಚಿಸಲ್ಪಟ್ಟಿರುವ ಸಂಗತಿಗಳು, ಒಬ್ಬ ವ್ಯಕ್ತಿಯು ತಕ್ಕ ಕ್ರಮವನ್ನು ಕೈಕೊಳ್ಳಲಾಗುವಂತೆ ಅಪಾಯಗಳನ್ನು ಗುರುತಿಸಲು ಸಹಾಯಮಾಡಬಲ್ಲವು. ಆದರೆ ಕೆಲವರು, ಹೃದಯಾಘಾತದ ಫಲಾಂತರದೊಂದಿಗೆ ಜೀವಿಸಲೇಬೇಕಾದವರ ಜೀವನ ಹೇಗಿದೆ ಎಂದು ತಿಳಿಯಲು ಕುತೂಹಲಿಗಳಾಗಿದ್ದಾರೆ. ಪುನರಾರೋಗ್ಯವು ಎಷ್ಟರ ಮಟ್ಟಿಗೆ ಸಾಧ್ಯ?
[ಅಧ್ಯಯನ ಪ್ರಶ್ನೆಗಳು]
a ಎಚ್ಚರ! ಪತ್ರಿಕೆಯು, ವೈದ್ಯಕೀಯ, ವ್ಯಾಯಾಮದ ಅಥವಾ ಆಹಾರಪಥ್ಯಕ್ರಮದ ಚಿಕಿತ್ಸೆಗಳನ್ನು ಸಮರ್ಥಿಸುವುದಿಲ್ಲವಾದರೂ, ಸುಸಂಶೋಧಿತ ಮಾಹಿತಿಯನ್ನು ನೀಡುತ್ತದೆ. ತಾನು ಏನು ಮಾಡುತ್ತೇನೆಂದು ಒಬ್ಬೊಬ್ಬ ವ್ಯಕ್ತಿಯು ನಿರ್ಣಯಿಸತಕ್ಕದ್ದು.
[ಪುಟ 0 ರಲ್ಲಿರುವ ಚಿತ್ರಗಳು]
ಧೂಮಪಾನ, ಸುಲಭವಾಗಿ ಸಿಟ್ಟಿಗೇಳುವುದು, ಕೊಬ್ಬು ಇರುವ ಆಹಾರವನ್ನು ಸೇವಿಸುವುದು ಮತ್ತು ಕುಳಿತು ಕೆಲಸಮಾಡುವ ಜೀವನ ನಡೆಸುವುದು—ಇವು ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಲ್ಲವು