ಈ ಕೂಡೂ ಜಿಂಕೆ ಜ್ಞಾಪಿಸಿಕೊಳ್ಳಲ್ಪಡುತ್ತದೆ
ದಕ್ಷಿಣ ಆಫ್ರಿಕದಲ್ಲಿನ ಎಚ್ಚರ! ಸುದ್ದಿಗಾರರಿಂದ
ಮನತಟ್ಟುವ ಸುರುಳಿಯಾಕಾರದ ಕೊಂಬುಗಳು ಮತ್ತು ವಿಶಿಷ್ಟವಾದ ಕಿವಿಗಳುಳ್ಳ ಒಂದು ಚೆಲುವಾದ ಗಂಡು ಕೂಡೂ—ಜಿಂಕೆ—ಪೂರ್ಣವಾಗಿ ಬೆಳೆದಿರುವಾಗ, ಭುಜದೆತ್ತರಕ್ಕೆ ಹತ್ತಿರ ಹತ್ತಿರ 150 ಸೆಂಟಿಮೀಟರ್ಗಳಷ್ಟಿರುತ್ತದೆ. ಹೆಣ್ಣು ಜಿಂಕೆಗೆ ಸಾಮಾನ್ಯವಾಗಿ ಕೊಂಬುಗಳಿಲ್ಲದಿರುವುದಾದರೂ ಅದು ಸಹ ತನ್ನ ದೊಡ್ಡ ಕಿವಿಗಳಿಂದ ಗುರುತಿಸಲ್ಪಡುತ್ತದೆ. ಕೂಡೂ ನಾಚಿಕೆ ಸ್ವಭಾವದ ಒಂದು ಪ್ರಾಣಿ; ಯಾವಾಗಲೂ ಎಚ್ಚರವಾಗಿದ್ದು, ಆಶ್ರಯಕ್ಕಾಗಿ ಓಡಿಹೋಗಲು ಸಿದ್ಧವಾಗಿರುತ್ತದೆ. ಹಾಗಿರುವುದರಿಂದ, ಸಿಂಬಾವ್ವೆಯಲ್ಲಿರುವ ಕ್ಯಾರನ್ಗೆ ಸಂಭವಿಸಿದ್ದು ಗಮನಾರ್ಹವಾದ ವಿಷಯ.
ಆ್ಯಫ್ರಿಕನ್ ವೈಲ್ಡ್ಲೈಫ್ ಪತ್ರಿಕೆಯಲ್ಲಿ ವರದಿಸಲ್ಪಟ್ಟಂತೆ, ತಂತಿ ಬೇಲಿಯೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದ ಒಂದು ಪುಟ್ಟ ಹೆಣ್ಣು ಕೂಡೂ ಮರಿಯು, ಕಾಪಾಡಲ್ಪಟ್ಟು, ಕ್ಯಾರನ್ಗೆ ನೀಡಲ್ಪಟ್ಟಿತು. ಆಕೆ ಅದಕ್ಕೆ ಕೆಲವೊಂದು ವಾರಗಳ ತನಕ ಸೀಸೆಹಾಲುಣಿಸಿದಳು. ಅದು ಕ್ಯಾರನ್ ಮತ್ತು ಆಕೆಯ ಕುಟುಂಬವು ಜೀವಿಸುತ್ತಿದ್ದ ಡೈರಿಯ ಆಸುಪಾಸಿನಲ್ಲಿದ್ದು, ಅನೇಕ ವೇಳೆ ಮಕ್ಕಳು ಹಾಗೂ ನಾಯಿಗಳೊಂದಿಗೆ ಆಟವಾಡುತ್ತಾ ಹಸನಾಗಿ ಬೆಳೆಯಿತು. ಆದರೂ ಅದು ಕಾಡಿನೊಳಕ್ಕೆ ಅಲೆದಾಡುತ್ತಾ, ಯಾವಾಗಲಾದರೊಮ್ಮೆ ಹಿಂದಿರುಗುತ್ತಾ, ಹೆಚ್ಚುಕಡಿಮೆ ಪೂರ್ಣವಾಗಿ ಬೆಳೆದಾಗ, ಇನ್ನು ಮುಂದೆ ಡೈರಿಯ ಸಮೀಪದಲ್ಲಿ ಕಾಣದೆಹೋಯಿತು.
ಸುಮಾರು ಎರಡು ವರ್ಷಗಳ ಅನಂತರ, ಡೈರಿಯ ರಸ್ತೆಯಲ್ಲಿ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ, ತನ್ನ ಕಾರು ಹತ್ತಿರ ಬಂದರೂ ಬೆದರಿ ದೂರ ಓಡದಿದ್ದ ಒಂದು ಗರ್ಭಿಣಿ ಹೆಣ್ಣು ಕೂಡೂವನ್ನು ನೋಡಲು ಕ್ಯಾರನ್ ಆಶ್ಚರ್ಯಗೊಂಡಳು. ಆಕೆ ಅದರೆಡೆಗೆ ನಡೆಯಲು ಪ್ರಾರಂಭಿಸಿದಾಗಲೂ ಅದು ಓಡಿಹೋಗಲಿಲ್ಲ. ಇಷ್ಟರಲ್ಲೇ ಆಕೆ ತಾನು ಸೀಸೆಹಾಲುಣಿಸಿದ ಅದೇ ಪ್ರಾಣಿಯು ಇದಾಗಿರಬೇಕೆಂದು ಗ್ರಹಿಸಿದಳು. ಆದುದರಿಂದ ಆಕೆ ನಿಶ್ಶಬ್ದವಾಗಿ ಅದರ ಹತ್ತಿರ ಹೋಗುತ್ತಾ ಮೃದುವಾಗಿ ಮಾತಾಡಿದಳು. ಆ ಕೂಡೂ ತಾಯಿ ಆಕೆಯನ್ನೂ ಗುರುತಿಸಿತ್ತು, ಏಕೆಂದರೆ ಅದು ತನ್ನನ್ನು ತಬ್ಬಿಕೊಳ್ಳುವಂತೆ ಆಕೆಯನ್ನು ಅನುಮತಿಸಿದಾಗ, ತನ್ನ ತಲೆಯನ್ನು ಬಾಗಿಸಿ, ಆಕೆಯನ್ನು ಮೂಗಿನಿಂದ ತೋಡಿತು!
ಒಂದೆರಡು ತಿಂಗಳುಗಳ ಅನಂತರ, ಆ ಕೂಡೂ ತಾಯಿ ಪುನಃ ರಸ್ತೆಯ ಸಮೀಪದಲ್ಲಿತ್ತು—ಈ ಸಲ ಒಂದು ಪುಟ್ಟ ಮರಿಯೊಂದಿಗೆ. ಆ ಮರಿಯು, ಪುನಃ ಒಮ್ಮೆ ತನ್ನನ್ನು ಮುದ್ದುಮಾಡುವಂತೆ ಅನುಮತಿಸಿದ ತನ್ನ ತಾಯಿಯಿಂದ ಹೆಮ್ಮೆಯಿಂದ ಪರಿಚಯಿಸಲ್ಪಡುತ್ತಿರುವಂತೆ ಕ್ಯಾರನ್ಗೆ ತೋರಿತು. ಆ ಕೂಡೂ ತಾಯಿಯು ನಿಜವಾಗಿಯೂ ಕ್ಯಾರನ್ಗಾಗಿ ಕಾಯುತ್ತಿತೋ ಎಂಬಂತೆ ತೋರಿದಂಥ ಒಂದು ವಿಷಯವು ಕೆಲವೊಂದು ವಾರಗಳ ಬಳಿಕ ಸಂಭವಿಸಿತು.
ಮತ್ತೆ ಒಂದೆರಡು ತಿಂಗಳುಗಳು ಕಳೆದವು, ಮತ್ತು ತನ್ನ ಕತ್ತಿನ ಸುತ್ತಲೂ ಕುಣಿಕೆಯನ್ನು ಹೊಂದಿದ್ದ ಇದೇ ಕೂಡೂ ತಾಯಿಯನ್ನು ನೋಡಿದ್ದನ್ನು ಕೆಲವು ಫಾರ್ಮ್ ಕಾರ್ಮಿಕರು ವರದಿಸಿದರು. ಆ ಕುಣಿಕೆಯನ್ನು ತೆಗೆದುಹಾಕಲು ಅವರು ಆ ತಾಯಿಯ ಹತ್ತಿರ ಹೋಗಲು ಪ್ರಯತ್ನಿಸಿದ್ದರಾದರೂ, ಆ ತಾಯಿಯು ಓಡಿಹೋಗಿತ್ತು. ಆದುದರಿಂದ ಕ್ಯಾರನ್ ಅದನ್ನು ಕಾಡಿನಲ್ಲಿ ಹುಡುಕುತ್ತಾ ಹೊರಟಳು. ಆಕೆ ಹೋದಂತೆ ಅದನ್ನು ಕರೆಯುತ್ತಾ ಇದ್ದಳು. ಶೀಘ್ರವೇ, ಅದು ಆಕೆಯ ಮುಂದಿತ್ತು. ಕ್ಯಾರನ್ ವಿಚಾರಪೂರ್ಣವಾಗಿ ತನ್ನೊಂದಿಗೆ ಸ್ವಲ್ಪ—ಆ ತಾಯಿ ಬಲು ಇಷ್ಟಪಡುವ—ಬ್ರೆಡ್ಡನ್ನು ತೆಗೆದುಕೊಂಡುಬಂದಿದ್ದಳು. ಈ ಸ್ವಾದಿಷ್ಟ ತಿಂಡಿಯನ್ನು ಕೊಡುತ್ತಿದ್ದ ಹಾಗೆ, ಕ್ಯಾರನ್ಳ ಪತಿಯು ಆ ನೋಯಿಸುವ ಕುಣಿಕೆಯನ್ನು ಕತ್ತರಿಸಿಹಾಕಿದನು.
ಮನುಷ್ಯ ಹಾಗೂ ಮೃಗದ ನಡುವೆ ಇಷ್ಟು ದೀರ್ಘಕಾಲ ಬಾಳಿದ ಸುಲಭಗ್ರಾಹ್ಯ ಬಂಧವು ಈ ಕುಟುಂಬಕ್ಕೆ ಹೆಚ್ಚಿನ ಸಂತೋಷವನ್ನು ತಂದಿತು.