ಜಗತ್ತನ್ನು ಗಮನಿಸುವುದು
ಸೆಲ್ಯುಲರ್ ಫೋನಿನ ಅಪಾಯ ಸಂಭವ
ಸೆಲ್ಯುಲರ್ ಫೋನುಗಳಿಂದ ಹೊರಸೂಸಲ್ಪಡುವ ರೇಡಿಯೋ ತರಂಗಗಳು, ಆಸ್ಪತ್ರೆಯ ವೈದ್ಯಕೀಯ ಸಜ್ಜೊಂದಿಗೆ ಗಂಭೀರತರದ ಸಮಸ್ಯೆಗಳನ್ನು ಉಂಟುಮಾಡಬಲ್ಲವೆಂದು ಜಪಾನಿನಲ್ಲಿ ನಡೆಸಲ್ಪಟ್ಟ ಇತ್ತೀಚಿನ ಒಂದು ಅಧ್ಯಯನವು ದೃಢೀಕರಿಸಿದೆ. “ಒಂದು ಪರೀಕ್ಷೆಯಲ್ಲಿ, ಸೆಲ್ಯುಲರ್ ಫೋನೊಂದು 45 ಸೆಂಟಿಮೀಟರ್‌ಗಳಷ್ಟು ದೂರದಲ್ಲಿ ಉಪಯೋಗಿಸಲ್ಪಟ್ಟಾಗ ಹೃದಯ-ಶ್ವಾಸಕೋಶ ಯಂತ್ರವೊಂದು ನಿಂತುಹೋಯಿತು,” ಎಂದು ಅಸಾಹಿ ಈವ್‌ನಿಂಗ್ ನ್ಯೂಸ್ ಹೇಳುತ್ತದೆ. ದ್ರವ ಪೂರಣ ಪಂಪುಗಳ ಹಾಗೂ ಕ್ಯಾನ್ಸರ್ ನಿರೋಧಕ ಔಷಧಗಳ ಸರಬರಾಯಿ ಮಾಡುವ ಪಂಪುಗಳ ಅಲಾರ್ಮ್‌ಗಳು, ಸಜ್ಜಿನ 75 ಸೆಂಟಿಮೀಟರುಗಳ ಪರಿಧಿಯೊಳಗೆ ಒಂದು ಸೆಲ್ಯುಲರ್ ಫೋನು ಉಪಯೋಗಿಸಲ್ಪಟ್ಟಾಗ, ವಿಶಿಷ್ಟವಾದ ಶಬ್ದವನ್ನು ಮಾಡಿದವು ಎಂಬುದನ್ನು ಸಹ ಸಂಶೋಧಕರು ಕಂಡುಹಿಡಿದರು. ಎಕ್ಸ್-ರೇ ಯಂತ್ರಗಳು ಮತ್ತು ಟೊನಾಮೀಟರ್ (ಸ್ಥಾಯಿ ಮಾಪಕ)ಗಳು ಸಹ ಹಾನಿಗೊಂಡವು. ಈ ಕಂಡುಹಿಡಿತಗಳ ಮೇಲಾಧರಿಸಿ, ಅಂಚೆ ಮತ್ತು ದೂರವಾಣಿಗಳ ಇಲಾಖೆಯು, ಶಸ್ತ್ರಚಿಕಿತ್ಸಾ ಕೊಠಡಿಗಳು ಹಾಗೂ ತುರ್ತುಚಿಕಿತ್ಸಾ ವಿಭಾಗಗಳ ಒಳಗೆ ಸೆಲ್ಯುಲರ್ ಫೋನ್‌ಗಳನ್ನು ತೆಗೆದುಕೊಂಡು ಹೋಗದಿರುವಂತೆ ಶಿಫಾರಸ್ಸು ಮಾಡುತ್ತದೆ. ಒಂದು ಸಮೀಕ್ಷೆಗನುಸಾರ, ಟೋಕಿಯೋದಲ್ಲಿನ ಸುಮಾರು 25 ವೈದ್ಯಕೀಯ ಸಂಸ್ಥೆಗಳು, ಈಗಾಗಲೇ ಸೆಲ್ಯುಲರ್ ಫೋನ್‌ಗಳ ಉಪಯೋಗದ ನಿಯಮಗಳನ್ನು ನಿಯಂತ್ರಿಸಿವೆ, ಇವುಗಳಲ್ಲಿ 12 ಒಟ್ಟಾರೆ ಸೆಲ್ಯುಲರ್ ಫೋನ್‌ಗಳನ್ನೇ ನಿಷೇಧಿಸಿವೆ.
ಸ್ವಾಭಾವಿಕ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳುವುದು
ಮಗುವೊಂದರ ಬೆಳವಣಿಗೆಯು, ಕೇವಲ ಆನುವಂಶಿಕತೆಗಿಂತಲೂ ಇತರ ವಿಷಯಗಳಿಂದ ಹೆಚ್ಚಾಗಿ ಬಾಧಿಸಲ್ಪಡುತ್ತದೆ ಎಂದು ಸಾರ್ನಲ್ ಡೋ ಬ್ರಾಸಿಲ್‌ನಲ್ಲಿನ ಒಂದು ವರದಿಯು ಹೇಳುತ್ತದೆ. ಮಧ್ಯಮ ವರ್ಗದ ಕುಟುಂಬಗಳ ಮಧ್ಯೆಯೂ ನ್ಯೂನ ಪೌಷ್ಟಿಕಾಂಶವು ಸಾಮಾನ್ಯವಾಗಿದೆ ಎಂಬುದನ್ನು ಕೂಡಿಸುತ್ತಾ “ಒಳ್ಳೆಯ ಪೌಷ್ಟಿಕಾಂಶವು ಸರಿಯಾದ ಬೆಳವಣಿಗೆ ಆಗುವುದನ್ನು ಖಾತ್ರಿಪಡಿಸುತ್ತದೆ,” ಎಂದು ವಾರ್ತಾಪತ್ರಿಕೆಯು ಗಮನಿಸುತ್ತದೆ. “ಬೆಳವಣಿಗೆಗೆ ಮತ್ತೊಂದು ಅತ್ಯಾವಶ್ಯಕವಾದ ಉದ್ದೀಪಕವು ಕ್ರಮವಾದ ವ್ಯಾಯಾಮವೇ” ಎಂದು ಎಂಡೋಕ್ರಿನಾಲಜಿಯ ಪ್ರೊಫೆಸರರಾದ ಆ್ಯಮೆಲ್ಯೋ ಗೋಡಾಯ್ ಮಾಟಾಸ್ ಗಮನಿಸಿದರು. “ತಾಸುಗಟ್ಟಲೆ ವಿಶ್ರಾಮಭರಿತ ನಿದ್ರೆಯು ಸಿಗುತ್ತಿದೆಯೋ ಎಂಬುದನ್ನು ಸಹ ನೋಡಬೇಕು, ಏಕೆಂದರೆ ಮಗುವು ನಿದ್ರಿಸುತ್ತಿರುವಾಗ ಮಾತ್ರವೇ ಬೆಳವಣಿಗೆಯ ಹಾರ್ಮೋನ್ ಸ್ರವಿಸುತ್ತದೆ” ಎಂದು ಅವರು ಹೇಳಿದರು. ಅಂತೆಯೇ ಭಾವನಾತ್ಮಕ ಸಮಸ್ಯೆಗಳು ಮಗುವೊಂದರ ಬೆಳವಣಿಗೆಯನ್ನು ಮಂದಗೊಳಿಸಬಲ್ಲವು. ಎಂಡೋಕ್ರಿನಾಲಜಿ ತಜ್ಞರಾದ ವಾಲ್‌ಮೀರ್ ಕೋಟೀನ್ಯೂಗನುಸಾರ, “ನಿರಂತರವಾಗಿ ತಾಸುಗಟ್ಟಲೆ ಟೆಲಿವಿಷನ್ ಅನ್ನು—ವಿಶೇಷವಾಗಿ ಹಿಂಸಾತ್ಮಕ ಚಲನ ಚಿತ್ರಗಳನ್ನು—ವೀಕ್ಷಿಸುವುದು ಮಗುವಿನ ನಿದ್ರೆಗೆ ಹಾನಿಕಾರಕವಾಗಿದೆ ಮತ್ತು ಸ್ವಸ್ಥ ವಿಕಸನವನ್ನು ಕೆಡಿಸಬಹುದು.”
ಆಶಾವಾದಿತ್ವ ಸ್ವಸ್ಥಕರವಾಗಿರಸಾಧ್ಯ
ಫಿನ್‌ಲೆಂಡ್‌ನಲ್ಲಿ ನಡೆಸಲ್ಪಟ್ಟ ಇತ್ತೀಚಿನ ಒಂದು ಅಧ್ಯಯನವು, ಆಶಾವಾದಿತ್ವವು ಒಳ್ಳೆಯ ಆರೋಗ್ಯವನ್ನು ಪ್ರವರ್ಧಿಸುವಾಗ, ನಿರಾಶಾವಾದಿತ್ವವು ಮಾನಸಿಕ ಮತ್ತು ಶಾರೀರಿಕ ಅಸ್ವಸ್ಥತೆಯ ಗಂಡಾಂತರವನ್ನು ಹೆಚ್ಚಿಸುತ್ತದೆಂಬ ನಂಬಿಕೆಯನ್ನು ಪುನರ್‌ದೃಢೀಕರಿಸಿತು. 4ರಿಂದ 10 ವರ್ಷಗಳ ಅವಧಿಯಲ್ಲಿ, 42 ಮತ್ತು 60ರ ವಯಸ್ಸಿನ ನಡುವೆಯಿರುವ ಸುಮಾರು 2,500 ಪುರುಷರು ಅವಲೋಕಿಸಲ್ಪಟ್ಟರು. ಸೈನ್ಸ್ ನ್ಯೂಸ್ ಪತ್ರಿಕೆಗನುಸಾರ, “ಸಾಧಾರಣದಿಂದ ಹೆಚ್ಚಿನ ಪ್ರಮಾಣದ ನಿರಾಶಾವಾದಿಗಳಾದ ವ್ಯಕ್ತಿಗಳು ಸತ್ತುಹೋದರು . . . ಕಡಿಮೆ ಅಥವಾ ನಿರಾಶೆಯೇ ಇಲ್ಲವೆಂದು ವರದಿಸುತ್ತಿರುವವರ ಪ್ರಮಾಣಕ್ಕಿಂತ ಎರಡರಿಂದ ಮೂರು ಪಟ್ಟು ಹೆಚ್ಚು; ಮೊದಲನೆಯ ಗುಂಪು ಹೆಚ್ಚು ಪದೇ ಪದೇ ಕ್ಯಾನ್ಸರ್ ಮತ್ತು ಹೃದಯಾಘಾತಗಳನ್ನು ಸಹ ವಿಕಸಿಸಿಕೊಂಡಿತು.”
ನನ್‌ಗಳು ಕರಾಟೆಯನ್ನು ಕಲಿಯುತ್ತಾರೆ
ಮಹಿಳೆಯರ ವಿರುದ್ಧವಾಗಿ ಹೆಚ್ಚುತ್ತಿರುವ ಹಿಂಸೆಯ ಬೆದರಿಕೆಯನ್ನು ಎದುರಿಸುತ್ತಾ, ದಕ್ಷಿಣ ಭಾರತದ, ತಮಿಳುನಾಡು ರಾಜ್ಯದ, ಮಾದವರಮ್‌ನಲ್ಲಿನ ಸೆಂಟ್ ಆ್ಯನ್ಸ್ ಕೇಂದ್ರದ ನನ್‌ಗಳ ಒಂದು ಗುಂಪು, ಕರಾಟೆ ತರಬೇತಿಯನ್ನು ಪಡೆದುಕೊಳ್ಳಲು ಆರಂಭಿಸಿದೆ. ಆಲ್ ಇಂಡಿಯ ಈಶಿನ್‌ರ್ಯೂ ಕರಾಟೆ ಅಸೋಸಿಯೇಶನ್‌ನ ಅಧ್ಯಕ್ಷರಾದ ಶೀಹನ್ ಹುಸೇನಿ, ಒಬ್ಬ ಕರಾಟೆ ಉಪದೇಶಕನೋಪಾದಿ ತಾನು ಕಳೆದ 24ಕ್ಕಿಂತಲೂ ಹೆಚ್ಚು ವರ್ಷಗಳಲ್ಲಿ ತರಬೇತಿಗೊಳಿಸಿರುವ ಇತರ ಸ್ತ್ರೀಯರಿಗಿಂತಲೂ ನನ್‌ಗಳು ಹೆಚ್ಚು ಉತ್ತಮವಾಗಿ ಕಲಿತಿದ್ದಾರೆಂಬುದಾಗಿ ಹೇಳುತ್ತಾರೆ. ‘ಅವರಲ್ಲಿರುವ ಸುಪ್ತ ಶಕ್ತಿ ಮತ್ತು ಶಿಸ್ತುಕ್ರಮವು ಅದಕ್ಕೆ ಸಂಬಂಧಿಸಿದ್ದಾಗಿದೆ ಎಂದು ನಾನು ಭಾವಿಸುತ್ತೇನೆ’ ಎಂಬುದಾಗಿ ಅವರು ಹೇಳುತ್ತಾರೆ. ನನ್‌ಗಳು ಉಪಯೋಗಿಸುವಂತೆ ಕಲಿಸಲಾಗುತ್ತಿರುವ ಒಂದು ಸಾಧನವು ಸ್ಯಾನ್ ಕೋ ಎಂದು ಕರೆಯಲ್ಪಡುತ್ತದೆ. ಇದಕ್ಕೆ ಒಂದು ಶಿಲುಬೆಯಂಥ ಆಕಾರ ಕೊಡಲ್ಪಟ್ಟಿದೆ ಮತ್ತು “ಈ ಸಾಧನವನ್ನು ಉಪಯೋಗಿಸುವುದು, ಆಕ್ರಮಣಕಾರನನ್ನು ಕೊಲ್ಲಲು ಕೂಡ ಶಕ್ತವಾಗಿದೆ,” ಎಂದು ಹುಸೇನಿ ಪ್ರತಿಪಾದಿಸುತ್ತಾರೆ.
ಪೈ ಮೌಲ್ಯ
ಪೈ, ಶಾಲೆಯಲ್ಲಿ ಅನೇಕರು ಕಲಿತಿರುವಂತೆ, ವೃತ್ತಿವೊಂದರ ಪರಿಧಿಗೂ ವ್ಯಾಸಕ್ಕೂ ಇರುವ ಪ್ರಮಾಣವಾಗಿದೆ. ಅನೇಕ ಜನರು ಪೈ ಸ್ಥೂಲ ಮೌಲ್ಯ—3.14159—ದೊಂದಿಗೆ ಸುಲಭವಾದ ವಿಧದಲ್ಲಿ ಕೆಲಸಮಾಡಬಲ್ಲರು. ಪೈ ಒಂದು ನಿಖರವಾದ ಸಂಖ್ಯೆಯಾಗಿಲ್ಲವಾದುದರಿಂದ, ಪೈ ದಶಮಾಂಶ ಮೌಲ್ಯಕ್ಕೆ ಅಂತ್ಯವಿಲ್ಲ. 18ನೇ ಶತಮಾನದಲ್ಲಿ, 100 ದಶಮಾಂಶ ಸ್ಥಾನಗಳಿಗೆ ನಿಷ್ಕೃಷ್ಟವಾದ ಒಂದು ಮೌಲ್ಯವು ಪಡೆಯಲ್ಪಟ್ಟಿತು ಮತ್ತು 1973ರಲ್ಲಿ ಇಬ್ಬರು ಫ್ರೆಂಚ್ ಗಣಿತಶಾಸ್ತ್ರಜ್ಞರು ಹತ್ತು ಲಕ್ಷ ದಶಮಾಂಶ ಸ್ಥಾನಗಳನ್ನು ಪಡೆದರು. ಈಗ, ಜಪಾನಿನ ಟೋಕಿಯೋ ವಿಶ್ವವಿದ್ಯಾನಿಲಯದ ಯಾಸೂಮಾಸಾ ಕಾನಾಡಾ, ಕಂಪ್ಯೂಟರಿನ ಮಾಧ್ಯಮದ ಮೂಲಕ ಈ ಮೌಲ್ಯವನ್ನು 600 ಕೋಟಿಗಳಿಗಿಂತಲೂ ಹೆಚ್ಚಿನ ದಶಮಾಂಶ ಸ್ಥಾನಗಳಿಗೆ ಲೆಕ್ಕಮಾಡಿದ್ದಾರೆ. “ಜ್ಞಾತ ವಿಶ್ವವನ್ನು ಸುತ್ತುವ ಒಂದು ವೃತ್ತದ ಪರಿಧಿಯನ್ನು ಜಲಜನಕ ಪರಮಾಣುವಿನ ವ್ಯಾಸದೊಳಗಿನ ವರೆಗೆ ಲೆಕ್ಕಿಸಲು ಕೇವಲ 39 ದಶಮಾಂಶ ಸಂಖ್ಯೆಗಳು ಸಾಕಷ್ಟಾಗಿರುವುದರಿಂದ” ಆ ಸಂಖ್ಯೆಗೆ ಯಾವ ಊಹ್ಯ ಉಪಯೋಗವೂ ಇಲ್ಲ, ಎಂದು ಲಂಡನಿನ ದ ಟೈಮ್ಸ್ ಗಮನಿಸುತ್ತದೆ. ಪೈ ಲೆಕ್ಕಮಾಡುವ “ಸವಾಲನ್ನು” ತಾನು ಆನಂದಿಸುತ್ತೇನೆಂದು ಪ್ರೊಫೆಸರ್ ಕಾನಾಡಾ ಹೇಳಿದರು. ಆದರೆ ಅವರ ಫಲಿತಾಂಶವನ್ನು ಪಠಿಸಲು ಪ್ರಯತ್ನಿಸದಿರಿ. “ಪ್ರತಿ ಸೆಕೆಂಡಿಗೆ ಒಂದು ಅಂಕೆಯನ್ನು ನಿಲ್ಲಿಸದೆ ಪಠಿಸುವಲ್ಲಿ, ಅದಕ್ಕೆ ಸುಮಾರು 200 ವರ್ಷಗಳು ತಗಲುವುವು” ಎಂದು ದ ಟೈಮ್ಸ್ ಹೇಳುತ್ತದೆ.
ಎಮ್ಮೆಯ ಸಿಡುಬು ಭಾರತವನ್ನು ವಿನಾಶಕರವಾಗಿ ಬಾಧಿಸುತ್ತದೆ
‘ಸಿಡುಬಿನ ವೈರಸ್ ಗುಂಪಿಗೇ ಸೇರುವ ಒಂದು ವೈರಸ್’ನಿಂದ ಉಂಟಾಗುವ ಎಮ್ಮೆಯ ಸಿಡುಬು, ಪಶ್ಚಿಮ ಭಾರತದ ಬೀಡ್ ಜಿಲ್ಲೆಯಲ್ಲಿ ಕಂಡುಹಿಡಿಯಲ್ಪಟ್ಟಿದೆ ಎಂದು ದ ಟೈಮ್ಸ್ ಆಫ್ ಇಂಡಿಯ ವರದಿಸುತ್ತದೆ. ಎಮ್ಮೆಯ ಸಿಡುಬು, ಸಿಡುಬಿಗಿಂತಲೂ ಕಡಿಮೆ ವಿಷಮಯವಾಗಿರುವುದಾದರೂ, ಅದರ ಹರಡುವಿಕೆಯ ಕುರಿತಾಗಿ ವಿಜ್ಞಾನಿಗಳು ಚಿಂತಿತರಾಗಿದ್ದಾರೆ. “ಆ ವೈರಸನ್ನು ಬಹಳ ಜಾಗರೂಕವಾಗಿ ಗಮನಿಸಬೇಕು,” ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ನಿರ್ದೇಶಕರಾದ, ಡಾ. ಕಲ್ಯಾಣ್ ಬ್ಯಾನರ್ಜಿ ಹೇಳುತ್ತಾರೆ. “ಅದು ಎಷ್ಟು ಗಂಭೀರತರದ್ದು ಎಂಬುದನ್ನು ನಾವು ಹೇಳಸಾಧ್ಯವಿಲ್ಲ.” ವೈದ್ಯಕೀಯ ಸೌಕರ್ಯಗಳು ಸ್ವಲ್ಪವೇ ಇರುವ ದೂರದ ಗ್ರಾಮೀಣ ಪ್ರದೇಶಗಳಲ್ಲಿ, ಈ ಎಮ್ಮೆಯ ಸಿಡುಬು ಹರಡುವ ಸಾಧ್ಯತೆಯಿರುವುದೇ ಒಂದು ದೊಡ್ಡ ಚಿಂತೆಯ ವಿಷಯವಾಗಿದೆ. ಎಮ್ಮೆಯ ಸಿಡುಬು ಮನುಷ್ಯರಲ್ಲಿ, ವಿಪರೀತ ಜ್ವರ, ದುಗ್ಧರಸ ಗ್ರಂಥಿಗಳ ಊದುವಿಕೆ, ದೇಹದ ಮೇಲೆ ಅನೇಕ ಗುಳ್ಳೆಗುರುತುಗಳು ಮತ್ತು ಸಾಮಾನ್ಯ ಬಲಹೀನತೆಯನ್ನು ಉಂಟುಮಾಡುತ್ತದೆ.