ಎಚ್ಚರ! ಪತ್ರಿಕೆಯು ಇದನ್ನು 1990ರಲ್ಲಿ ವರದಿಸಿತು
ಇತ್ತೀಚೆಗೆ, “ಹುಚ್ಚು ದನ ರೋಗ”ದ ಹರಡುವಿಕೆಯು ಯೂರೋಪಿನಲ್ಲಿ ಬಹು ಭಯವನ್ನು ಉಂಟುಮಾಡಿದೆ. ಈ ರೋಗವು ಮನುಷ್ಯರಿಗೂ ಹರಡಸಾಧ್ಯವಿದೆ ಎಂದು ಅನೇಕರು ಭಯಪಡುತ್ತಾರೆ. ರೋಗಗ್ರಸ್ಥ ಪ್ರಾಣಿಗಳ ಮಾಂಸದ ಸೇವನೆಗೆ ಮತ್ತು ಮಾನವನ ಕೇಂದ್ರ ನರವ್ಯೂಹದ ಒಂದು ಪ್ರಗತಿಪರ ಹಾಗೂ ಅನಿವಾರ್ಯ ಮರಣಕಾರಿ ರೋಗವಾದ ಕ್ರೋಯಿಟ್ಸ್ಫೆಲ್ಟ್-ಯಾಕೊಪಿನ ಬೆಳವಣಿಗೆಗೆ ಸಂಬಂಧವಿದೆ ಎಂಬುದಾಗಿಯೂ ಅನೇಕರು ನಂಬುತ್ತಾರೆ. ಹುಚ್ಚು ದನ ರೋಗದ ವಾರ್ತೆಯು ಹರಡಿದಂತೆಯೆ, ದನದ ಮಾಂಸದ ಸೇವನೆ ಕಡಿಮೆಯಾಯಿತೆಂಬುದು ಆಶ್ಚರ್ಯವೇನಲ್ಲ.
ಆಸಕ್ತಿಕರವಾಗಿ, ಇಟಲಿಯ ನಿಯತಕಾಲಿಕ ಪತ್ರಿಕೆಯಾದ ಟುಟ್ಒರೇಡ್ಜೋವಿನ ಮೇ 1996ರ ಸಂಚಿಕೆಯಲ್ಲಿ ಸ್ಟೇಫಾನ್ಯಾ ಫಾರ್ರಾರೀ ಬರೆದದ್ದು: “1990ರಲ್ಲೇ ಈ ವಿಪತ್ಕಾರಕ ರೋಗದ ಕುರಿತು ಈಗಾಗಲೇ ತಿಳಿಸಿರುವ ಒಂದು ಪತ್ರಿಕೆಯನ್ನು ನಾವು ಕಂಡುಕೊಂಡಿದ್ದೇವೆ—ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ಎಚ್ಚರ! ಪತ್ರಿಕೆ.” ಅವಳು ಸೂಚಿಸಿದ ಲೇಖನವು, ನವೆಂಬರ್ 8, 1990ರ (ಕನ್ನಡದಲ್ಲಿ ಎಪ್ರಿಲ್ 8, 1992) ಪ್ರತಿಯಲ್ಲಿ ಕಂಡುಬಂದ “ಬ್ರಿಟನ್ನಿನ ‘ಹುಚ್ಚು ದನ’ ಉಭಯಸಂಕಟ” ಎಂಬ ಶಿರೋನಾಮವುಳ್ಳದ್ದು. ಮೊದಲಿನ ನಾಲ್ಕು ಪ್ಯಾರಾಗ್ರಾಫ್ಗಳನ್ನು ಉಲ್ಲೇಖಿಸಿದ ಬಳಿಕ, “ಲೋಕವ್ಯಾಪಕವಾಗಿ ಜನರಿಗೆ ಈ ವಿಷಯವನ್ನು ಗಮನಕ್ಕೆ ತರುವ ಆರು ವರ್ಷಗಳ ಮೊದಲೇ” ಈ ಲೇಖನವು ಪ್ರಕಾಶಿಸಲ್ಪಟ್ಟಿತು ಎಂಬುದಕ್ಕೆ ಫಾರ್ರಾರೀ ತನ್ನ ಆಶ್ಚರ್ಯವನ್ನು ವ್ಯಕ್ತಪಡಿಸಿದಳು. ಅವಳು ಮುಂದುವರಿಸಿದ್ದು: “ನಂಬಲು ಕಷ್ಟಕರವಾದ ಸದ್ಯೋಚಿತವಾಗಿರುವ ಸಮಾಚಾರವನ್ನು ವರದಿಮಾಡಿದ ಈ 1990ರ ಲೇಖನವನ್ನು ನೋಡಿದ ಮೇಲೆ, ಕೆಲವರು ಹೀಗೆ ಹೇಳಿದ್ದಾರೆ: ‘ಅಂತಹ ಒಂದು ಗಂಭೀರವಾದ ಮತ್ತು ಮುಖ್ಯವಾದ ವಿಷಯದ ಕುರಿತು ಯೆಹೋವನ ಸಾಕ್ಷಿಗಳಿಗೆ ಮೊದಲೇ ತಿಳಿದಿತ್ತಾದರೆ, ಅವರು ಇದನ್ನು ಎಲ್ಲರ—ಅವರ ಸಭೆಗೆ ಸೇರಿರದವರಿಗೂ—ಗಮನಕ್ಕೆ ಏಕೆ ತರಲಿಲ್ಲ?’ ಪ್ರಾಮಾಣಿಕರಾಗಿ ತಿಳಿಸುವುದಾದರೆ: 1990ರಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು ನಮ್ಮ ಮನೆಯ ಬಾಗಿಲನ್ನು ತಟ್ಟಿ, ನಮಗೆ ಬೈಬಲನ್ನು ಹಾಗೂ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲಾದ ಆ ಲೇಖನವನ್ನು ತೋರಿಸಿರುತ್ತಿದ್ದಲ್ಲಿ, ಒಂದು ವಿಭಿನ್ನ ಧರ್ಮವನ್ನು ಅನುಸರಿಸುವ ನಮ್ಮಲ್ಲಿ ಎಷ್ಟು ಮಂದಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೆವು?”
ಹಿಂದೆ 1990ರಲ್ಲಿ, “ಬ್ರಿಟನ್ನಿನ ‘ಹುಚ್ಚು ದನ’ ಉಭಯಸಂಕಟ” ಎಂಬ ಲೇಖನವು ಪ್ರಕಾಶಿಸಲ್ಪಟ್ಟಾಗ, ಎಚ್ಚರ! ಪತ್ರಿಕೆಯು, 62 ಭಾಷೆಗಳಲ್ಲಿ, ಹೆಚ್ಚುಕಡಿಮೆ 1.2 ಕೋಟಿ ಪ್ರತಿಗಳ ಸರಾಸರಿ ಮುದ್ರಣವನ್ನು ಪಡೆದಿತ್ತು. ಲೋಕವ್ಯಾಪಕವಾಗಿ 200ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಯೆಹೋವನ ಸಾಕ್ಷಿಗಳು ಈ ಸಮಯೋಚಿತ ಪತ್ರಿಕೆಯನ್ನು ಹಂಚುವುದರಲ್ಲಿ ಕಾರ್ಯಮಗ್ನರಾಗಿದ್ದರು. ಇಂದು, ಎಚ್ಚರ! ಪತ್ರಿಕೆಯು 81 ಭಾಷೆಗಳಲ್ಲಿ, 1,83,50,000 ಪ್ರತಿಗಳ ಸರಾಸರಿ ಮುದ್ರಣವನ್ನು ಪಡೆದಿದೆ. ಈ ಪತ್ರಿಕೆಯು ಬೋಧಪ್ರದವಾದ ಹಾಗೂ ಸದ್ಯೋಚಿತವಾದ ಲೇಖನಗಳನ್ನು ಪ್ರಕಾಶಿಸುತ್ತಾ ಮುಂದುವರಿದಿದೆ. ಎಚ್ಚರ! ಪತ್ರಿಕೆಯ ಮುಂದಿನ ಪ್ರತಿಗಳನ್ನು ನೀವು ಪಡೆದುಕೊಳ್ಳಲು ಇಚ್ಛಿಸುವಲ್ಲಿ, ಸ್ಥಳಿಕವಾಗಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿರಿ ಅಥವಾ ಪುಟ 5ರಲ್ಲಿ ಪಟ್ಟಿ ಮಾಡಲ್ಪಟ್ಟಿರುವ ಅತಿ ಹತ್ತಿರದ ಸೂಕ್ತವಾದ ವಿಳಾಸಕ್ಕೆ ಬರೆಯಿರಿ.