ವಲಸೆಹೋಗುವುದರ ಕಷ್ಟನಷ್ಟವನ್ನು ಲೆಕ್ಕಿಸಿರಿ!
ದಕ್ಷಿಣ ಆಫ್ರಿಕದ ಎಚ್ಚರ! ಸುದ್ದಿಗಾರರಿಂದ
ಇನ್ನೊಂದು ದೇಶಕ್ಕೆ ವಲಸೆಹೋಗುವುದರ ಕುರಿತು ನೀವು ಆಲೋಚಿಸುತ್ತಿದ್ದೀರೋ? ನೀವು ಕಷ್ಟನಷ್ಟವನ್ನು ಲೆಕ್ಕಿಸಿದ್ದೀರೊ? ಕೇವಲ ಹಣಕಾಸಿನ ನಷ್ಟವನ್ನು ನಾವು ಅರ್ಥೈಸುತ್ತಿಲ್ಲ. ಎಷ್ಟೆಂದರೂ, ಹೆಚ್ಚಿನ ಜನರು ಹೇಗಿದ್ದರೂ ಆರ್ಥಿಕ ಭದ್ರತೆಯನ್ನು ಪಡೆಯುವುದಕ್ಕಾಗಿಯೇ ವಲಸೆಹೋಗುವುದನ್ನು ಪರಿಗಣಿಸುತ್ತಾರೆ. ನಿಜವಾಗಿ ವಲಸೆಹೋದ ನಂತರವೇ ಕಂಡುಬರುವ ಮರೆಯಾಗಿರುವ ನಷ್ಟವನ್ನೇ ನಾವು ಅರ್ಥೈಸುವುದು. ಅಷ್ಟರಲ್ಲಿ ನಿಮ್ಮ ಹೆಜ್ಜೆಗಳನ್ನು ಹಿಂದಕ್ಕೆ ಇಡಲು ಸಾಮಾನ್ಯವಾಗಿ ಅದು ತೀರ ತಡವಾಗಿರುತ್ತದೆ. ಮುಂದಿನ ಅಂಶಗಳು ನಿಮ್ಮನ್ನು ಗಾಬರಿಪಡಿಸಬೇಕೆಂದು ಉದ್ದೇಶಿಸಿದವುಗಳಲ್ಲ, ಆದರೆ ಅವು ಗಣನೆಗೆ ಯೋಗ್ಯವಾದವುಗಳು:
“ಒಂದು ಹೊಸ ಭಾಷೆಯನ್ನು ಕಲಿಯುವುದು ದೀನತೆಯನ್ನೂ ಪ್ರಯತ್ನವನ್ನೂ ಕೇಳಿಕೊಳ್ಳುತ್ತದೆ. ತನ್ನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಕಾರಣ, ಸಣ್ಣ ಮಕ್ಕಳು ಸಹ ತನ್ನನ್ನು ವಿಚಿತ್ರನೆಂದು ಯೋಚಿಸುತ್ತಾರೆ ಎಂಬುದನ್ನು ಕಂಡುಕೊಳ್ಳುವುದು ಒಬ್ಬ ವಯಸ್ಕನಿಗೆ ಎದೆಗುಂದಿಸುವಂತಹದ್ದಾಗಿದೆ. ತಮ್ಮ ತಪ್ಪುಗಳ ಕಾರಣ ನಿರಂತರವಾಗಿ ನಗೆಗೆ ಗುರಿಯಾಗುವುದನ್ನು, ತಮ್ಮ ದೀನತೆಯ ಒಂದು ದೊಡ್ಡ ಪರೀಕ್ಷೆಯಾಗಿ ಅನೇಕ ಜನರು ಕಂಡುಕೊಳ್ಳುತ್ತಾರೆ. ಸ್ಥಳಿಕ ಭಾಷೆಯನ್ನು ಮಾತಾಡಲಾರದ ವಿದೇಶೀಯರಿಗೆ ಜೀವಿತವು ಅಸಹನೀಯವಾಗಿ ಒಂಟಿತನದ್ದಾಗಿರುತ್ತದೆ.”—ರೋಸ್ಮೆರೀ, ಜಪಾನಿನಲ್ಲಿನ ಒಬ್ಬ ಮಿಷನೆರಿ.
ಬದುಕಲು ಬೇಕಾಗಿರುವಷ್ಟರ ಮಟ್ಟಿಗೆ ಭಾಷೆಯು ನಿಮಗೆ ತಿಳಿದಿದೆ ಎಂಬುದಾಗಿ ನೀವು ಬಹುಶಃ ಯೋಚಿಸುತ್ತೀರಿ. ಆದರೆ, ವಲಸೆ ಬಂದಿರುವುದರ ಕುರಿತು ಸಂತೋಷದಿಂದಿರುವಂತೆ, ನಿಮ್ಮ ಇಡೀ ಕುಟುಂಬವು ಸಾಕಷ್ಟು ಮಟ್ಟಿಗೆ ಭಾಷೆಯನ್ನು ತಿಳಿದಿದೆ ಎಂದು ನೀವು ನಿಶ್ಚಯವಾಗಿದ್ದೀರೋ?
ಕೆಲವು ಸದಸ್ಯರನ್ನು, ಅವರ ಇಚ್ಛೆಗೆ ವಿರುದ್ಧವಾಗಿ ವಲಸೆಹೋಗಲು ಮನವೊಪ್ಪಿಸಿದ್ದರೆ, ಕುಟುಂಬದ ಮೇಲೆ ಯಾವ ಪರಿಣಾಮವಾದೀತು? “[ಮೆಕ್ಸಿಕೊದ] ಕೆಲವು ಸ್ತ್ರೀಯರಿಗೆ, ವಲಸೆಹೋಗಬೇಕೆಂದು ಮಾಡಲಾದ ತೀರ್ಮಾನದ ಕುರಿತು ತಮ್ಮ ಅಭಿಪ್ರಾಯವನ್ನು ಕೊಡುವ ಅವಕಾಶವಿರಲಿಲ್ಲ, ಮತ್ತು ಅವರಿಗೆ ಎಂದೂ ವಲಸೆಹೋಗಲು ಇಷ್ಟವೂ ಇರಲಿಲ್ಲ, ಅಥವಾ ಅವರು ವಲಸೆಹೋದ ಅನಂತರವೂ ಅಮೆರಿಕದಲ್ಲಿ ಉಳಿಯಲು ಇಷ್ಟಪಡಲಿಲ್ಲ,” ಎನ್ನುತ್ತದೆ ಸೈಕಾಲೊಜಿ ಆಫ್ ವಿಮೆನ್ ಕ್ವಾರ್ಟರ್ಲಿ ಪತ್ರಿಕೆ. ಇಂತಹ ಸಂದರ್ಭಗಳಲ್ಲಿ, ಒಂದು ಬಲಾತ್ಕಾರದ ವಲಸೆಹೋಗುವಿಕೆಯು ಕುಟುಂಬದ ಐಕ್ಯವನ್ನು ಹಾಳುಮಾಡಸಾಧ್ಯವಿದೆ. ಆದರೆ ಸಂಸಾರ ನಿರ್ವಾಹಕನೊಬ್ಬನೇ ವಲಸೆಹೋದರೆ ಆಗೇನು?
ದಕ್ಷಿಣ ಆಫ್ರಿಕದ ಒಂದು ಸಣ್ಣ ಗ್ರಾಮೀಣ ದೇಶದಲ್ಲಿ, ನಿರ್ದಿಷ್ಟವಾದ ಯಾವುದೇ ಒಂದು ಸಮಯದಲ್ಲಿ, 50 ಪ್ರತಿಶತಕ್ಕಿಂತಲೂ ಹೆಚ್ಚಿನ “ವಯಸ್ಕ ಗಂಡಸರು ಮನೆಯಲ್ಲಿ ಗೈರುಹಾಜರಿರುತ್ತಾರೆ,” ಎಂದು ಆಫ್ರಿಕದಲ್ಲಿ ಜನಸಂಖ್ಯೆ, ವಲಸೆಹೋಗುವಿಕೆ, ಮತ್ತು ನಗರೀಕರಣ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಅಂದಾಜು ಮಾಡಲಾಗಿದೆ. ಈ ಗೈರುಹಾಜರಿಯು, ಕುಟುಂಬದ ಸಂತುಷ್ಟಿಯನ್ನೂ ಸ್ಥಿರತೆಯನ್ನೂ ಅಪಹರಿಸಸಾಧ್ಯವಿದೆ. ವಿವಾಹ ಸಂಗಾತಿಯು ಅನೈತಿಕತೆಗೆ ಬಲಿಬೀಳುವಂತಹ ಸಾಧ್ಯತೆಯನ್ನೂ ಇದು ತಂದೊಡ್ಡುತ್ತದೆ. ಕುಟುಂಬವು, ವಲಸೆಹೋಗಲು ನಿರ್ಧರಿಸಲಿ ಅಥವಾ ನಿರ್ಧರಿಸದಿರಲಿ, ಅದು ಒಂದಾಗಿ ಉಳಿಯಲು ಸಾಧ್ಯವಾದರೆ ಎಷ್ಟೊಂದು ಒಳ್ಳೆಯದು! ಕುಟುಂಬದ ಐಕ್ಯವು, ಹಣದಿಂದ ಖರೀದಿಸಲಾಗದ ಒಂದು ವಿಷಯವಾಗಿದೆ.
ಆಮೇಲೆ, ಪೂರ್ವಕಲ್ಪಿತ ಅಭಿಪ್ರಾಯದೊಂದಿಗೆ ನಿಭಾಯಿಸುವ ದೊಡ್ಡ ಹೊರೆಯಿದೆ. “ಇಂಗ್ಲೆಂಡಿಗೆ ವಲಸೆಹೋಗುವ ತನಕ ನನಗೆ ‘ಬಣ್ಣ’ ಭೇದದ ಸಮಸ್ಯೆಯು ತಿಳಿದಿರಲಿಲ್ಲ,” ಎಂಬುದಾಗಿ ಭಾರತದಿಂದ ವಲಸೆಹೋದವಳೊಬ್ಬಳು ಜ್ಞಾಪಕಮಾಡಿಕೊಳ್ಳುತ್ತಾಳೆ. “ಆ [ಅರಿವು] ಭೀಕರವಾದದ್ದು. ಒಂದು ಕಟುವಾದ ಧಕ್ಕೆ. ಈ ಎಲ್ಲಾದರಿಂದ ತಪ್ಪಿಸಿಕೊಳ್ಳಲು ನನಗೆ ಭಾರತಕ್ಕೆ ಹಿಂದಿರುಗಬೇಕೆನಿಸಿತು.”—ದಿ ಅನ್ಮೆಲ್ಟಿಂಗ್ ಪಾಟ್.
ಆದುದರಿಂದ, ವಲಸೆಹೋಗುವುದರ ಮೊದಲು ನಿಮ್ಮನ್ನು ನೀವೇ ಕೇಳಿಕೊಳ್ಳಿರಿ: ‘ಅನ್ಯ ಮಾರ್ಗಗಳಾವುವು? ಮನೆಯಲ್ಲಿಯೇ ಹೊಂದಾಣಿಕೆಗಳನ್ನು ನಾವು ಮಾಡಸಾಧ್ಯವಿಲ್ಲವೆ? ಇನ್ನೊಂದು ದೇಶಕ್ಕೆ ವಲಸೆಹೋಗುವುದು ನಿಜವಾಗಿಯೂ ಉಪಯುಕ್ತವಾಗಿದೆಯೋ?’ ಅದು ಉಪಯುಕ್ತವಿರಬಹುದು ಅಥವಾ ಇಲ್ಲದಿರಬಹುದು, ಆದರೆ ನೀವು ನಿರ್ಧಾರವನ್ನು ಮಾಡುವ ಮೊದಲು, ಯೇಸುವಿನಿಂದ ಬರುವ ಈ ಉತ್ತಮ ಬುದ್ಧಿವಾದವನ್ನು ಗಣನೆಗೆ ತೆಗೆದುಕೊಳ್ಳಿರಿ: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು—ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕಮಾಡುವದಿಲ್ಲವೇ?”—ಲೂಕ 14:28.