ಆಫ್ರಿಕದ ನಗಾರಿಗಳು ನಿಜವಾಗಿಯೂ ಮಾತನಾಡುತ್ತವೆಯೆ?
ನೈಜಿರೀಯದ ಎಚ್ಚರ! ಸುದ್ದಿಗಾರರಿಂದ
ಇಸವಿ 1876-77ರಲ್ಲಿ ಕಾಂಗೋ ನದಿಯ ದಿಕ್ಕಿನಲ್ಲಿ ಪರಿಶೋಧಕ ಹೆನ್ರಿ ಸ್ಟ್ಯಾನ್ಲಿ ಪ್ರಯಾಣಿಸುತ್ತಿದ್ದಾಗ, ಸ್ಥಳಿಕ ನಗಾರಿಬಡಿಯುವಿಕೆಯ ಒಳಿತುಗಳನ್ನು ಯೋಚಿಸಲು ಅವನಿಗೆ ಅವಕಾಶವೇ ಇರಲಿಲ್ಲ. ಅವನಿಗೆ ಹಾಗೂ ಅವನ ಸಹಪ್ರಯಾಣಿಕರಿಗೆ, ನಗಾರಿಗಳಿಂದ ರವಾನಿಸಲ್ಪಡುತ್ತಿದ್ದ ಸಂದೇಶವನ್ನು, ಸಾಮಾನ್ಯವಾಗಿ ಒಂದು ಶಬ್ದದಲ್ಲಿ ಸಾರಾಂಶಿಸಸಾಧ್ಯವಿತ್ತು: ಯುದ್ಧ. ಅವರಿಗೆ ಕೇಳಿಬರುತ್ತಿದ್ದ ಅಸ್ಪಷ್ಟ ಮೊಳಗುವಿಕೆಯು, ಅವರು ಇನ್ನೇನು ಈಟಿಗಳಿಂದ ಸಜ್ಜಿತರಾದ ಕ್ರೂರಿ ರಣಯೋಧರಿಂದ ಆಕ್ರಮಿಸಲ್ಪಡಲಿರುವರು ಎಂಬುದನ್ನು ಅರ್ಥೈಸಿತು.
ನಗಾರಿಗಳು ಯುದ್ಧಕ್ಕಾಗಿ ಒಟ್ಟುಗೂಡುವಂತೆ ಆಜ್ಞಾಪಿಸುವುದಕ್ಕಿಂತಲೂ ಎಷ್ಟೋ ಹೆಚ್ಚು ವಿಷಯಗಳನ್ನು ವ್ಯಕ್ತಪಡಿಸಬಲ್ಲವು ಎಂಬುದನ್ನು ಸ್ಟ್ಯಾನ್ಲಿ ತಿಳಿದುಕೊಂಡದ್ದೇ ಆಮೇಲೆ—ಹೆಚ್ಚು ಶಾಂತಿಯುಕ್ತ ಸಮಯಗಳಲ್ಲಿ. ಕಾಂಗೋ ನದಿಯ ಪಕ್ಕದಲ್ಲಿ ವಾಸಿಸಿದ ಒಂದು ಕುಲಸಂಬಂಧಿತ ಗುಂಪನ್ನು ವರ್ಣಿಸುತ್ತಾ ಸ್ಟ್ಯಾನ್ಲಿ ಬರೆದುದು: “[ಅವರು] ವಿದ್ಯುತ್ ಸಂಜ್ಞೆಗಳನ್ನು ಇನ್ನೂ ಪಡೆದುಕೊಂಡಿಲ್ಲವಾದರೂ, ಅಷ್ಟೇ ಪರಿಣಾಮಕಾರಿಯಾದ ಸಂವಾದದ ಒಂದು ವ್ಯವಸ್ಥೆಯನ್ನು ಪಡೆದುಕೊಂಡಿದ್ದಾರೆ. ವಿಭಿನ್ನ ಭಾಗಗಳಲ್ಲಿ ಬಡಿಯಲ್ಪಡುವ ಅವರ ಬೃಹತ್ ನಗಾರಿಗಳು ಬಾಯಿಮಾತಿನಲ್ಲಿ ಹೇಳಿದಷ್ಟೆ ಸ್ಫುಟವಾಗಿ ನಗಾರಿಗಳ ಭಾಷೆಯಲ್ಲಿ ಪರಿಣತರಾದವರಿಗೆ ವಿಷಯವನ್ನು ರವಾನಿಸುತ್ತವೆ.” ನಗಾರಿಬಡಿಯುವವರು ತುತೂರಿ ಅಥವಾ ಒಂದು ಸೈರನಿನ ಒಂದು ಸಂಜ್ಞೆಗಿಂತಲೂ ಹೆಚ್ಚಿನದ್ದನ್ನು ಕಳುಹಿಸಿದರು ಎಂಬುದನ್ನು ಸ್ಟ್ಯಾನ್ಲಿ ಗ್ರಹಿಸಿದನು; ನಗಾರಿಗಳು ನಿರ್ದಿಷ್ಟ ಸಂದೇಶಗಳನ್ನು ರವಾನಿಸಶಕ್ತವಿದ್ದವು.
ಅಂಥ ಸಂದೇಶಗಳನ್ನು ಹಳ್ಳಿಯಿಂದ ಹಳ್ಳಿಗೆ ಪ್ರಸಾರಣಮಾಡಸಾಧ್ಯವಿತ್ತು. ಕೆಲವು ನಗಾರಿಗಳ ಶಬ್ದವು, ವಿಶೇಷವಾಗಿ ಅವು ರಾತ್ರಿಯ ಹೊತ್ತಿನಲ್ಲಿ ತೇಲುತೆಪ್ಪ ಅಥವಾ ಬೆಟ್ಟಶಿಖರದಿಂದ ಬಡಿಯಲ್ಪಡುತ್ತಿದ್ದರೆ, ಎಂಟರಿಂದ ಹನ್ನೊಂದು ಕಿಲೊಮೀಟರುಗಳಷ್ಟು ದೂರದ ವರೆಗೆ ಕೇಳಿಸುತ್ತಿತ್ತು. ದೂರದಲ್ಲಿದ್ದ ನಗಾರಿಬಾರಿಸುವವರು ಸಂದೇಶಗಳನ್ನು ಆಲಿಸಿ, ಅರ್ಥಮಾಡಿಕೊಂಡು, ಇತರರಿಗೆ ರವಾನಿಸಿದರು. ಇಂಗ್ಲಿಷ್ ಪ್ರಯಾಣಿಕ ಎ. ಬಿ. ಲಾಯ್ಡ್ 1899ರಲ್ಲಿ ಬರೆದುದು: “ಸಂದೇಶವೊಂದನ್ನು ಒಂದು ಹಳ್ಳಿಯಿಂದ—160 ಕಿಲೊಮೀಟರುಗಳಿಗಿಂತಲೂ ಹೆಚ್ಚು ದೂರದಲ್ಲಿರುವ—ಇನ್ನೊಂದು ಹಳ್ಳಿಗೆ ಎರಡು ಗಂಟೆಗಳಿಗಿಂತಲೂ ಕಡಿಮೆ ಸಮಯದಲ್ಲಿ ಕಳುಹಿಸಸಾಧ್ಯವಿದೆ ಎಂಬ ವಿಷಯವು ನನಗೆ ಹೇಳಲಾಯಿತು, ಮತ್ತು ತೀರ ಕಡಿಮೆ ಸಮಯದಲ್ಲಿ ಸಂದೇಶವನ್ನು ರವಾನಿಸಸಾಧ್ಯವಿದೆ ಎಂಬುದನ್ನು ನಾನು ನಿಜವಾಗಿಯೂ ನಂಬುತ್ತೇನೆ.”
20ನೇ ಶತಮಾನದಲ್ಲೂ, ಮಾಹಿತಿಯನ್ನು ರವಾನಿಸುವುದರಲ್ಲಿ ನಗಾರಿಗಳು ಒಂದು ಮಹತ್ವದ ಪಾತ್ರವನ್ನು ವಹಿಸುವುದನ್ನು ಮುಂದುವರಿಸಿದವು. 1965ರಲ್ಲಿ ಪ್ರಕಾಶಿಸಲ್ಪಟ್ಟ, ಆಫ್ರಿಕದ ಸಂಗೀತ ಸಾಧನಗಳು (ಇಂಗ್ಲಿಷ್) ಎಂಬ ಪುಸ್ತಕವು ಹೇಳಿದ್ದು: “ಮಾತನಾಡುವ ನಗಾರಿಗಳು, ಟೆಲಿಫೋನ್ಗಳು ಹಾಗೂ ಟೆಲಿಗ್ರಾಫ್ಗಳಾಗಿ ಉಪಯೋಗಿಸಲ್ಪಡುತ್ತವೆ. ಎಲ್ಲ ರೀತಿಯ ಸಂದೇಶಗಳು ಕಳುಹಿಸಲ್ಪಡುತ್ತವೆ. ಜನನ, ಮರಣ, ವಿವಾಹ, ಕ್ರೀಡಾ ಚಟುವಟಿಕೆ, ನೃತ್ಯ ಹಾಗೂ ದೀಕ್ಷೆಕೊಡುವಿಕೆಯ ಆಚರಣೆಗಳು; ಸರಕಾರಿ ಸಂದೇಶಗಳು ಹಾಗೂ ಯುದ್ಧದ ಕುರಿತಾಗಿ ಪ್ರಕಟನೆಯನ್ನು ಮಾಡಲು ಸಂದೇಶಗಳು ಕಳುಹಿಸಲ್ಪಡುತ್ತವೆ. ಕೆಲವೊಮ್ಮೆ ನಗಾರಿಗಳು ಗಾಳಿಮಾತು ಅಥವಾ ಹಾಸ್ಯಗಳನ್ನು ಹೇಳುತ್ತವೆ.”
ಆದರೆ ನಗಾರಿಗಳು ಹೇಗೆ ಸಂವಾದಿಸಿದವು? ಯೂರೋಪ್ ಹಾಗೂ ಬೇರೆ ಕಡೆಗಳಲ್ಲಿ, ಸಂದೇಶಗಳು ಟೆಲಿಗ್ರಾಫ್ ತಂತಿಗಳಲ್ಲಿ ವಿದ್ಯುತ್ ಆವೇಗಗಳ ಮೂಲಕ ಕಳುಹಿಸಲ್ಪಟ್ಟವು. ಪದಗಳು ಹಾಗೂ ವಾಕ್ಯಗಳನ್ನು ಒಮ್ಮೆಗೆ ಒಂದು ಅಕ್ಷರದಂತೆ ರಚಿಸಸಾಧ್ಯವಾಗುವಂತೆ, ಅಕ್ಷರಮಾಲೆಯ ಪ್ರತಿಯೊಂದು ಅಕ್ಷರಕ್ಕೆ ಅದರದ್ದೇ ಆದ ಒಂದು ಸ್ವಂತ ಸಂಕೇತವನ್ನು ಕೊಡಲಾಯಿತು. ಆದರೆ ಮಧ್ಯ ಆಫ್ರಿಕದ ಜನರಿಗೆ ಲಿಖಿತ ಭಾಷೆಯಿರಲಿಲ್ಲವಾದುದರಿಂದ ನಗಾರಿಗಳು ಪದಗಳನ್ನು ರಚಿಸಲಿಲ್ಲ. ಆಫ್ರಿಕದ ನಗಾರಿಬಾರಿಸುವವರು ಒಂದು ಭಿನ್ನ ವ್ಯವಸ್ಥೆಯನ್ನು ಉಪಯೋಗಿಸಿದರು.
ನಗಾರಿಯ ಭಾಷೆ
ನಗಾರಿಯ ಸಂವಾದವನ್ನು ಅರ್ಥಮಾಡಿಕೊಳ್ಳಲು ಇರುವ ಕೀಲಿಕೈ ಆಫ್ರಿಕದ ಭಾಷೆಗಳನ್ನು ತಿಳಿದುಕೊಳ್ಳುವುದರ ಮೇಲೆ ಅವಲಂಬಿಸಿದೆ. ಮಧ್ಯ ಹಾಗೂ ಪಶ್ಚಿಮ ಆಫ್ರಿಕದ ಅನೇಕ ಭಾಷೆಗಳು ಆವಶ್ಯಕವಾಗಿ ದ್ವಿಧ್ವನಿಯದ್ದಾಗಿವೆ—ಮಾತನಾಡಲ್ಪಡುವ ಪ್ರತಿಯೊಂದು ಪದದ ಪ್ರತಿಯೊಂದು ಅಕ್ಷರಕ್ಕೆ ಎರಡು ಮೂಲಭೂತ ಧ್ವನಿಗಳಲ್ಲಿ ಒಂದು ಧ್ವನಿಯಿದೆ, ಒಂದೋ ಏರುಧ್ವನಿ ಇಲ್ಲವೇ ತಗ್ಗುಧ್ವನಿ. ಧ್ವನಿಯ ಬದಲಾವಣೆಯು ಪದವನ್ನು ಬದಲಾಯಿಸುತ್ತದೆ. ಉದಾಹರಣೆಗೆ, ಸಾಎರ್ನ ಕೆಲಿ ಭಾಷೆಯಿಂದ ಬರುವ ಲೀಸಾಕಾ ಎಂಬ ಪದವನ್ನು ತೆಗೆದುಕೊಳ್ಳಿರಿ. ಎಲ್ಲ ಮೂರು ಅಕ್ಷರಗಳು ತಗ್ಗುಧ್ವನಿಯಲ್ಲಿ ಉಚ್ಚರಿಸಲ್ಪಡುವಾಗ, ಆ ಪದವು “ಕೆಸರು ಅಥವಾ ಜವುಗು ಪ್ರದೇಶ” ಎಂಬ ಅರ್ಥವನ್ನೂ, ಅಕ್ಷರಗಳ ತಗ್ಗು-ತಗ್ಗು-ಏರುಧ್ವನಿಯ ಉಚ್ಚಾರಣೆಯು “ವಾಗ್ದಾನ” ಎಂಬ ಪದವನ್ನು, ತಗ್ಗು-ಏರು-ಏರುಧ್ವನಿಯ ರಾಗಾಲಾಪನೆಯು “ವಿಷ” ಎಂಬುದನ್ನು ಅರ್ಥೈಸುತ್ತದೆ.
ಸಂದೇಶಗಳನ್ನು ಒಯ್ಯಲಿಕ್ಕಾಗಿ ಉಪಯೋಗಿಸಲ್ಪಡುವ ಆಫ್ರಿಕದ ಸೀಳು-ನಗಾರಿಗಳಿಗೂ ಎರಡು ದ್ವಿಧ್ವನಿಗಳಿವೆ, ಏರುಧ್ವನಿ ಹಾಗೂ ತಗ್ಗುಧ್ವನಿ. ತದ್ರೀತಿಯಲ್ಲಿ, ಚರ್ಮಹೊದಿಕೆಯುಳ್ಳ ನಗಾರಿಗಳು ಸಂದೇಶವೊಂದನ್ನು ಕಳುಹಿಸುವಾಗ, ಅವುಗಳನ್ನು ಜೋಡಿಗಳಾಗಿ ಉಪಯೋಗಿಸಲಾಗುತ್ತವೆ, ಒಂದು ನಗಾರಿ ಏರುಧ್ವನಿಯನ್ನು ಹಾಗೂ ಇನ್ನೊಂದು ತಗ್ಗುಧ್ವನಿಯನ್ನು ಹೊಂದಿರುತ್ತವೆ. ಹೀಗೆ, ನಗಾರಿಬಡಿಯುವದರಲ್ಲಿ ನಿಪುಣನಾಗಿರುವವನೊಬ್ಬನು ಆಡು ಭಾಷೆಯನ್ನು ರಚಿಸುವ ಪದಗಳ ಧ್ವನಿ ನಮೂನೆಯನ್ನು ಅನುಕರಿಸುವ ಮೂಲಕ ಸಂವಾದಿಸುತ್ತಾನೆ. ಆಫ್ರಿಕದ ಮಾತನಾಡುವ ನಗಾರಿಗಳು (ಇಂಗ್ಲಿಷ್) ಪುಸ್ತಕವು ಹೇಳುವುದು: “ನಗಾರಿ ಭಾಷೆಯೆಂದು ಕರೆಯಲ್ಪಡುವ ಈ ಭಾಷೆಯು ಬುಡಕಟ್ಟಿನ ಆಡು ಭಾಷೆಯಷ್ಟೇ ಅಗತ್ಯವಾದದ್ದಾಗಿದೆ.”
ದ್ವಿಧ್ವನಿ ಭಾಷೆಗೆ ಸಾಮಾನ್ಯವಾಗಿ ತದ್ರೂಪದ ಧ್ವನಿಗಳು ಹಾಗೂ ಅಕ್ಷರಗಳೊಂದಿಗಿರುವ ಅನೇಕ ಪದಗಳಿವೆ ಎಂಬುದು ನಿಶ್ಚಯ. ಉದಾಹರಣೆಗೆ, ಕೆಲಿ ಭಾಷೆಯಲ್ಲಿ, ಸುಮಾರು 130 ನಾಮಪದಗಳಿಗೆ ಶಾಂಗೋ (ತಂದೆ)ದಂಥ ಒಂದೇ ಧ್ವನಿ ನಮೂನೆ (ಏರು-ಏರುಧ್ವನಿ) ಇದೆ. 200ಕ್ಕಿಂತಲೂ ಹೆಚ್ಚಿನ ನಾಮಪದಗಳಿಗೆ ನ್ಯಾಂಗೋ (ತಾಯಿ)ದಂಥ ಒಂದೇ ನಮೂನೆ (ತಗ್ಗು-ಏರುಧ್ವನಿ) ಇದೆ. ಗೊಂದಲವನ್ನು ತಪ್ಪಿಸಲು, ನಗಾರಿಬಾರಿಸುವವರು ಅಂಥ ಪದಗಳಿಗೆ—ಕೇಳುಗನು ಹೇಳಲ್ಪಡುತ್ತಿರುವ ವಿಷಯವನ್ನು ಅರ್ಥಮಾಡಿಕೊಳ್ಳಶಕ್ತನಾಗಲಿಕ್ಕೆ ಸಾಕಾಗುವಷ್ಟು ವ್ಯತ್ಯಾಸವನ್ನು ಒಳಗೊಂಡ ಚುಟುಕಾದ ಪ್ರಸಿದ್ಧ ವಾಕ್ಸರಣಿಯಲ್ಲಿ ಅವುಗಳನ್ನು ಸೇರಿಸಿ—ಒಂದು ಪೂರ್ವಾಪರವನ್ನು ಒದಗಿಸುತ್ತಾರೆ.
ಸೀಳು-ನಗಾರಿಗಳೊಂದಿಗೆ ಮಾತನಾಡುವುದು
ಮಾತನಾಡುವ ನಗಾರಿಯಲ್ಲಿರುವ ಒಂದು ವಿಧವು, ಮರದ ಸೀಳು-ನಗಾರಿಯಾಗಿದೆ. (ಪುಟ 19ರಲ್ಲಿರುವ ಚಿತ್ರವನ್ನು ನೋಡಿರಿ.) ಅಂಥ ನಗಾರಿಗಳು ಮರದ ಕಾಂಡದಲ್ಲಿ ಒಂದು ಕುಳಿಯನ್ನು ಕೊರೆಯುವ ಮೂಲಕವಾಗಿ ರಚಿಸಲ್ಪಡುತ್ತವೆ. ಎರಡೂ ತುದಿಯಲ್ಲಿ ಚರ್ಮ ತೊಗಲು ಇರುವುದಿಲ್ಲ. ಛಾಯಾಚಿತ್ರದಲ್ಲಿರುವ ನಗಾರಿಗೆ ಎರಡು ಸೀಳುಗಳಿರುವುದಾದರೂ, ಅನೇಕ ನಗಾರಿಗಳಿಗೆ ಒಂದೇ ಒಂದು ಉದ್ದವಾದ ಸೀಳು ಇರುತ್ತದೆ. ಸೀಳಿನ ಒಂದು ಅಂಚಿನ ಮೇಲಿನ ಒಂದು ಬಡಿತವು ಏರುಧ್ವನಿಯನ್ನು ಉಂಟುಮಾಡುತ್ತದೆ; ಇನ್ನೊಂದು ಅಂಚಿನ ಮೇಲಿನ ಒಂದು ಬಡಿತವು ತಗ್ಗುಧ್ವನಿಯನ್ನು ಉಂಟುಮಾಡುತ್ತದೆ. ಸೀಳು-ನಗಾರಿಗಳು ಸಾಮಾನ್ಯವಾಗಿ ಸುಮಾರು ಒಂದು ಮೀಟರ್ ಉದ್ದವಾಗಿರುತ್ತವಾದರೂ, ಅವು ಅರ್ಧ ಮೀಟರಿನಷ್ಟು ಚಿಕ್ಕವೂ ಅಥವಾ ಎರಡು ಮೀಟರುಗಳಷ್ಟು ಉದ್ದವೂ ಆಗಿರಸಾಧ್ಯವಿದೆ. ವ್ಯಾಸವು 20 ಸೆಂಟಿಮೀಟರುಗಳಿಂದ ಒಂದು ಮೀಟರಿನಷ್ಟರ ವರೆಗೆ ವ್ಯಾಪಿಸಬಹುದು.
ಸೀಳು-ನಗಾರಿಗಳು ಹಳ್ಳಿಯಿಂದ ಹಳ್ಳಿಗೆ ಬರೀ ಸಂದೇಶಗಳನ್ನು ಕಳುಹಿಸುವುದಕ್ಕಿಂತಲೂ ಹೆಚ್ಚು ವಿಷಯಗಳಿಗಾಗಿ ಉಪಯೋಗಿಸಲ್ಪಟ್ಟವು. ಕ್ಯಾಮರೂನಿನ ಲೇಖಕ ಫ್ರ್ಯಾನ್ಸ್ಸ್ ಬಿಬೇ, ಕುಸ್ತಿಪಂದ್ಯದ ಸ್ಪರ್ಧೆಗಳಲ್ಲಿ ಈ ನಗಾರಿಗಳ ಪಾತ್ರವನ್ನು ವರ್ಣಿಸಿದನು. ಹಳ್ಳಿಯ ಚೌಕದಲ್ಲಿ ಎರಡು ವಿರೋಧ ಪಕ್ಷದ ತಂಡಗಳು ಸಂಧಿಸಲು ಸಿದ್ಧವಾದಾಗ, ನಗಾರಿಗಳು ಅವರ ಗುಣಗಾನವನ್ನು ಹಾಡಿದಂತೆ, ಚ್ಯಾಂಪಿಯನ್ಗಳು ಸೀಳು-ನಗಾರಿಗಳ ತಾಳಕ್ಕೆ ತಕ್ಕಂತೆ ಕುಣಿದರು. ಒಂದು ಪಕ್ಕದ ನಗಾರಿಯು ಹೀಗೆ ಘೋಷಿಸಬಹುದು: “ಚ್ಯಾಂಪಿಯನ್, ನಿನಗೆ ಸಮಾನನಾದವನನ್ನು ನೀನು ಎಂದಾದರೂ ಸಂಧಿಸಿದ್ದೀಯೋ? ನಿನ್ನನ್ನು ಪ್ರತಿಸ್ಪರ್ಧಿಸಲು ಯಾರಿಗೆ ಸಾಧ್ಯ ಹೇಳು? ಈ ಬಡಪಾಯಿ ಜೀವಿಗಳು . . . ಅವರು ಒಬ್ಬ ಚ್ಯಾಂಪಿಯನ್ ಎಂದು ಕರೆಯುವ ಯಾವುದೋ ಬಡಪಾಯಿ [ವ್ಯಕ್ತಿ]ಯ ಮೂಲಕ ನಿನ್ನನ್ನು ಸೋಲಿಸಸಾಧ್ಯವೆಂದು ಭಾವಿಸುತ್ತಾರೆ . . . , ನಿನ್ನನ್ನು ಯಾರೂ ಎಂದೂ ಸೋಲಿಸಸಾಧ್ಯವಿಲ್ಲ.” ಪ್ರತಿಸ್ಪರ್ಧಿ ಶಿಬಿರದಲ್ಲಿರುವ ಸಂಗೀತಕಾರರು ಈ ಸ್ನೇಹಪರ ಕೆಣಕುನುಡಿಗಳನ್ನು ಅರ್ಥಮಾಡಿಕೊಂಡು, ಗಾದೆಯ ರೂಪದ ಒಂದು ಪ್ರತ್ಯುತ್ತರವನ್ನು ತಕ್ಷಣವೇ ಬಾರಿಸುತ್ತಾರೆ: “ಆ ಪುಟ್ಟ ಕೋತಿಯು . . . ಆ ಪುಟ್ಟ ಕೋತಿಯು . . . ಮರದ ಮೇಲೇರಲು ಬಯಸುತ್ತಾನೆ, ಆದರೆ ಅವನು ಬೀಳುವನೆಂದು ಪ್ರತಿಯೊಬ್ಬರೂ ನೆನಸುತ್ತಾರೆ. ಆದರೆ ಆ ಪುಟ್ಟ ಕೋತಿಯು ಮೊಂಡುಸ್ವಭಾವದ್ದಾಗಿದ್ದು, ಅವನು ಮರದಿಂದ ಕೆಳಗೆ ಬೀಳುವುದಿಲ್ಲ, ಈ ಪುಟ್ಟ ಕೋತಿಯು ತುತ್ತತುದಿಗೆ ಏರಿಯೇ ಏರುತ್ತಾನೆ.” ಕುಸ್ತಿಪಂದ್ಯದ ಸ್ಪರ್ಧೆಯಾದ್ಯಂತ ಈ ನಗಾರಿಗಳು ಮನೋರಂಜಿಸುತ್ತಾ ಇರುತ್ತವೆ.
ಎಲ್ಲದಕ್ಕಿಂತಲೂ ಅತ್ಯುತ್ತಮವಾಗಿ ಮಾತನಾಡುವ ನಗಾರಿಗಳು
ಒತ್ತಡ ನಗಾರಿಗಳು ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತವೆ. ಬಲಭಾಗದ ಚಿತ್ರದಲ್ಲಿ ನೀವು ನೋಡುವ ನಗಾರಿ ಡೂನ್ಡೂನ್ ಎಂದು ಕರೆಯಲ್ಪಡುತ್ತದೆ, ಇದು ನೈಜಿರೀಯದ ಪ್ರಸಿದ್ಧ ಯೊರೂಬ ಮಾತನಾಡುವ ನಗಾರಿಯಾಗಿದೆ. ಮರಳುಗಡಿಯಾರದಂಥ ಆಕಾರವಿರುವ ಈ ನಗಾರಿಗೆ ಪ್ರತಿಯೊಂದು ತುದಿಯಲ್ಲಿ, ತೆಳುವಾದ, ಹದಮಾಡಲ್ಪಟ್ಟ ಆಡುಚರ್ಮದಿಂದ ಮಾಡಲ್ಪಟ್ಟ ತೊಗಲಿದೆ. ಈ ತೊಗಲುಗಳು ಚರ್ಮದ ಪಟ್ಟಿಗಳ ಮೂಲಕ ಜೋಡಿಸಲ್ಪಟ್ಟಿವೆ. ಪಟ್ಟಿಗಳು ಕಿವುಚಲ್ಪಡುವಾಗ, ತೊಗಲಿನ ಮೇಲಿನ ತುಯ್ತವು ಹೆಚ್ಚಾಗುತ್ತದೆ. ಹೀಗೆ, ಅದು ಅಷ್ಟಮ ಸ್ವರ ಅಥವಾ ಅದಕ್ಕಿಂತಲೂ ಹೆಚ್ಚಿನ ಸ್ವರವನ್ನು ವ್ಯಾಪಿಸುವ ಸ್ವರಗಳನ್ನು ಉತ್ಪಾದಿಸಸಾಧ್ಯವಿದೆ. ಬಾಗಿರುವ ಬಡಿಗೋಲನ್ನು ಉಪಯೋಗಿಸುವ ಹಾಗೂ ನಾದಗಳ ಶ್ರುತಿ ಹಾಗೂ ತಾಳವನ್ನು ಬದಲಾಯಿಸುವ ಮೂಲಕ, ನಗಾರಿಬಡಿಯುವುದರಲ್ಲಿ ನಿಪುಣನೊಬ್ಬನು ಮಾನವ ಸ್ವರದ ಏಳುಬೀಳುಗಳನ್ನು ಅನುಕರಿಸಬಲ್ಲನು. ಹೀಗೆ ನಗಾರಿಬಾರಿಸುವವರು, ನಗಾರಿ ಭಾಷೆಗೆ ಅರ್ಥವಿವರಣೆಯನ್ನು ಕೊಟ್ಟು, ನುಡಿಸಬಲ್ಲ ಇತರ ನಗಾರಿಬಡಿಯುವವರೊಂದಿಗೆ “ಸಂಭಾಷಣೆಗಳನ್ನು” ನಡೆಸಬಲ್ಲರು.
1976ರ ಮೇ ತಿಂಗಳಿನಲ್ಲಿ ನಗಾರಿಗಳನ್ನು ಬಳಸುತ್ತಾ ಸಂವಾದಿಸಲು ನಗಾರಿಬಾರಿಸುವವರಿಗಿರುವ ಗಮನಾರ್ಹವಾದ ಸಾಮರ್ಥ್ಯವನ್ನು, ಯೊರೂಬ ಮುಖಂಡನೊಬ್ಬನ ದರ್ಬಾರಿನ ಸಂಗೀತಕಾರರಿಂದ ಪ್ರದರ್ಶಿಸಲ್ಪಟ್ಟಿತು. ಸಭಿಕರಲ್ಲಿ ಕೆಲವರು ಪ್ರಮುಖ ನಗಾರಿಬಾರಿಸುವವನಿಗೆ ಆಜ್ಞೆಗಳ ಮಾಲೆಯನ್ನು ಪಿಸುಗುಟ್ಟಿದರು, ಅವನು ಪ್ರತಿಯಾಗಿ, ಸಭಾಂಗಣದಿಂದ ಬಹು ದೂರದಲ್ಲಿದ್ದ ಮತ್ತೊಬ್ಬ ಸಂಗೀತಕಾರನಿಗೆ ಆ ಆಜ್ಞೆಗಳನ್ನು ನಗಾರಿಬಾರಿಸಿ ತಿಳಿಸಿದನು. ನಗಾರಿಬಾರಿಸಿ ತಿಳಿಸಿದ ಆಜ್ಞೆಗಳಿಗೆ ಪ್ರತಿಕ್ರಿಯಿಸುತ್ತಾ, ಆ ಸಂಗೀತಕಾರನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋದನು ಹಾಗೂ ಅವನು ಏನೇನು ಮಾಡುವಂತೆ ಕೇಳಿಕೊಳ್ಳಲ್ಪಟ್ಟನೋ ಅದನ್ನೆಲ್ಲ ಅವನು ಮಾಡಿದನು.
ನಗಾರಿಬಾರಿಸಿ ಸಂದೇಶವನ್ನು ಕಳುಹಿಸುವುದನ್ನು ಕಲಿತುಕೊಳ್ಳುವುದು ಸುಲಭವಲ್ಲ. ಬರಹಗಾರನಾದ ಐ. ಲಾವ್ಯೀ ಅವಲೋಕಿಸಿದ್ದು: “ಯೊರೂಬ ನಗಾರಿಬಾರಿಸುವುದು ಜಟಿಲವೂ ಕಷ್ಟಕರವಾದ ಕಲೆಯೂ ಆಗಿದ್ದು, ಅನೇಕ ವರ್ಷಗಳ ಅಭ್ಯಾಸವನ್ನು ಕೇಳಿಕೊಳ್ಳುತ್ತದೆ. ನಗಾರಿಬಾರಿಸುವವನಿಗೆ ಮಹತ್ತರ ಕೈಕುಶಲತೆ ಹಾಗೂ ತಾಳದ ಗ್ರಹಿಕೆಯನ್ನು ಪಡೆದುಕೊಳ್ಳುವುದು ಆವಶ್ಯಕವಾಗಿದೆ ಮಾತ್ರವಲ್ಲ ಆ ಪಟ್ಟಣದ ಕಾವ್ಯ ಹಾಗೂ ಇತಿಹಾಸದ ವಿಷಯವಾಗಿ ಒಂದು ಒಳ್ಳೆಯ ಜ್ಞಾಪಕಶಕ್ತಿಯನ್ನೂ ಪಡೆದಿರುವ ಆವಶ್ಯಕತೆಯಿದೆ.”
ಇತ್ತೀಚಿನ ದಶಕಗಳಲ್ಲಿ ಆಫ್ರಿಕನ್ ನಗಾರಿಗಳು ಸಂಗೀತದ ಸ್ಥಾನದಲ್ಲಿ ಇನ್ನೂ ಒಂದು ಮಹತ್ವದ ಪಾತ್ರವನ್ನು ಉಳಿಸಿಕೊಂಡಿವೆಯಾದರೂ, ಅವು ಮೊದಲು ಮಾತನಾಡುತ್ತಿದ್ದಷ್ಟು ಹೆಚ್ಚಾಗಿ ಮಾತನಾಡುತ್ತಿಲ್ಲ. ಆಫ್ರಿಕದ ಸಂಗೀತ ಸಾಧನಗಳು ಎಂಬ ಪುಸ್ತಕವು ಹೇಳುವುದು: “ನಗಾರಿಗಳ ಮೇಲೆ ಸಂದೇಶಗಳನ್ನು ನುಡಿಸಲು ಕಲಿಯುವುದು ತುಂಬ ಕಷ್ಟಕರವಾದುದರಿಂದ, ಈ ಕಲೆಯು ಆಫ್ರಿಕದಿಂದ ಕ್ಷಿಪ್ರವಾಗಿ ಕಣ್ಮರೆಯಾಗುತ್ತಿದೆ.” ವಾರ್ತಾಮಾಧ್ಯಮದ ವಿಶೇಷಜ್ಞರಾದ ರಾಬರ್ಟ್ ನಿಕಾಲ್ಸ್ ಇದಕ್ಕೆ ಕೂಡಿಸುವುದು: “ಯಾವುದರ ಸ್ವರಗಳು ಮೈಲುಗಳ ವರೆಗೆ ಪಯಣಿಸಿದವೋ ಹಾಗೂ ಯಾವುದರ ಮುಖ್ಯ ಕಾರ್ಯವು ಸಂದೇಶಗಳನ್ನು ಒಯ್ಯುವುದಾಗಿತ್ತೋ ಆ ಹಿಂದಿನ ಬೃಹತ್ ಗಾತ್ರದ ನಗಾರಿಗಳು, ನಿರ್ನಾಮಕ್ಕಾಗಿಯೇ ಇಡಲ್ಪಟ್ಟಿವೆ.” ಈ ದಿನಗಳಲ್ಲಿ ಹೆಚ್ಚಿನ ಜನರು ಟೆಲಿಫೋನನ್ನು ಉಪಯೋಗಿಸುವುದು ಹೆಚ್ಚು ಅನುಕೂಲಕರವಾದ ವಿಷಯವಾಗಿ ಕಂಡುಕೊಳ್ಳುತ್ತಾರೆ.
[ಪುಟ 20 ರಲ್ಲಿರುವ ಚಿತ್ರಗಳು]
ಸೀಳು-ನಗಾರಿ
[ಪುಟ 20 ರಲ್ಲಿರುವ ಚಿತ್ರಗಳು]
ಯೊರೂಬ ಮಾತನಾಡುವ ನಗಾರಿ