ನಮ್ಮ ವಾಚಕರಿಂದ
ಬೈಯುವಿಕೆ “ನೋಯಿಸುವ ನುಡಿಗಳಿಂದ ಗುಣವಾಗಿಸುವ ನುಡಿಗಳಿಗೆ” (ನವೆಂಬರ್ 8, 1996) ಎಂಬ ಲೇಖನಮಾಲೆಯು, ಯೆಹೋವನು ನಮ್ಮ ಕುರಿತಾಗಿ ಎಷ್ಟೊಂದು ಚಿಂತಿಸುತ್ತಾನೆಂದು ತೋರಿಸಿರುವ ಅನೇಕಾನೇಕ ಲೇಖನಗಳಲ್ಲಿ ಕೇವಲ ಒಂದಾಗಿದೆ. “ಮದ್ಯವ್ಯಸನಿಗಳು ಮತ್ತು ಅವರ ಕುಟುಂಬಗಳಿಗಾಗಿ ಸಹಾಯ” (ಇಂಗ್ಲಿಷ್, ಮೇ 22, 1992), “ಸ್ತ್ರೀಯರು—ಗೌರವಕ್ಕೆ ಯೋಗ್ಯರು” (ಇಂಗ್ಲಿಷ್, ಜುಲೈ 8, 1992), “ವಿವಾಹ ವಿಚ್ಛೇದದ ಮಕ್ಕಳಿಗೆ ಸಹಾಯ” (ಇಂಗ್ಲಿಷ್, ಎಪ್ರಿಲ್ 22, 1991), ಮತ್ತು “ಗೃಹ ಜೀವನದ ಹಿಂಸಾಚಾರ ಎಂದಾದರೂ ಅಂತ್ಯಗೊಳ್ಳುವುದೆ?” (ಮೇ 8, 1993) ಎಂಬ ವಿಷಯಗಳ ಕುರಿತಾದ ಲೇಖನಗಳು, ಒಬ್ಬ ಮದ್ಯವ್ಯಸನಿ ಗಂಡನ ಕೈಗಳಲ್ಲಿ ಅನೇಕ ವರ್ಷಗಳ ಭಾವನಾತ್ಮಕ ಅಪಪ್ರಯೋಗದ ಉದ್ದಕ್ಕೂ ನನಗೆ ಆಸರೆ ನೀಡಿವೆ. ಈ ಲೇಖನಗಳನ್ನು ನಾನು ಆನಂದ ಹಾಗೂ ವ್ಯಥೆಯ ಕಣ್ಣೀರಿನೊಂದಿಗೆ ಓದಿದ್ದೇನೆ. ನಮ್ಮ ಅತ್ಯಂತ ಖಾಸಗಿಯಾದ ಭಯಗಳು, ವೇದನೆಗಳು, ಮತ್ತು ದುರವಸ್ಥೆಗಳನ್ನು ಬಲ್ಲಾತನಾದ ದೇವರಿಗಾಗಿ ನನ್ನ ಹೃದಯವು ಗಣ್ಯತೆಯಿಂದ ತುಂಬಿ ತುಳುಕುತ್ತದೆ.
ಜೆ. ಕೆ., ಕೆನಡ
ಮೇಲಿನ ಲೇಖನಗಳು ನನ್ನನ್ನು ಗಾಢವಾಗಿ ಪ್ರೇರಿಸಿದವು. ನಾನು ನನ್ನ ಗಂಡನೊಂದಿಗೆ ಇದ್ದ ಪರಿಸ್ಥಿತಿಯನ್ನು ಅವು ನಿಖರವಾಗಿ ವರ್ಣಿಸಿದವು. ಪ್ರತಿಯೊಂದು ವಾಕ್ಯದೊಂದಿಗೆ ನಾನು ಮನಪೂರ್ವಕವಾಗಿ ಒಪ್ಪಿಕೊಳ್ಳಬಲ್ಲೆ. ನೀವು ಸ್ತ್ರೀಯರನ್ನು ಬಹಳ ಪ್ರೀತಿಪೂರ್ವಕವಾಗಿ ಉಪಚರಿಸುತ್ತೀರಿ, ಮತ್ತು ಇದರಿಂದ, ಈ ಸಂಸ್ಥೆಯು ಯೆಹೋವನಿಂದ ಉಪಯೋಗಿಸಲ್ಪಡುತ್ತಿದೆ ಎಂಬ ವಿಷಯವು ನನಗೆ ದೃಢವಾಗುತ್ತದೆ.
ಪಿ. ಎಸ್., ಜರ್ಮನಿ
ಮೇಲಿನ ಲೇಖನಗಳು, ನನ್ನ ನಾಲಗೆಯನ್ನು ಹತೋಟಿಯಲ್ಲಿಡುವುದರ ಮೂಲಕ ನನ್ನ ಬಲಹೀನತೆಯ ವಿರುದ್ಧ ಹೋರಾಡುವುದನ್ನು ಮುಂದುವರಿಸುವಂತೆ ನನ್ನನ್ನು ಪ್ರೋತ್ಸಾಹಿಸಿದವು. ನನ್ನ ಗಂಡನನ್ನು ನಾನು ಹೇಗೆ ಉಪಚರಿಸುತ್ತಿರಬೇಕೆಂದು ಈಗ ನನಗೆ ಗೊತ್ತಿದೆ. ನಾನು ಆ ಲೇಖನಗಳನ್ನು ಕಣ್ಣೀರಿನೊಂದಿಗೆ ಓದಿದೆ.
ಜಿ. ಐ., ಆಸ್ಟ್ರೀಯ
ನಾನು ಅನೇಕ ವರ್ಷಗಳಿಂದ ನನ್ನ ಗಂಡನ ಶಾಬ್ದಿಕ ಹಿಂಸಾಚಾರದ ಬಲಿಪಶುವಾಗಿದ್ದೇನೆ. ದೇವರ ಆತ್ಮದ ಫಲಗಳನ್ನು ಬೆಳೆಸಿಕೊಳ್ಳುವ ಮೂಲಕ ಮತ್ತು ನನ್ನನ್ನು ಪೂರ್ಣ ಸಮಯದ ಸಾರುವ ಕೆಲಸದಲ್ಲಿ ಕಾರ್ಯಮಗ್ನಳಾಗಿರಿಸಿಕೊಳ್ಳುವ ಮೂಲಕ, ಹತಾಶೆಗೆ ಒಳಗಾಗುವುದನ್ನು ದೂರವಿರಿಸಲು ನನಗೆ ಸಾಧ್ಯವಾಗಿದೆ. ನಿಮ್ಮ ಲೇಖನಗಳು—ಯಾರೊ ಒಬ್ಬರು ಸಮಸ್ಯೆಯನ್ನು ಅರ್ಥಮಾಡಿಕೊಳ್ಳುತ್ತಾರೆಂದು—ನಾನು ಒಬ್ಬೊಂಟಿಗಳೆಂಬ ಅನಿಸಿಕೆಯನ್ನು ಕಡಿಮೆಮಾಡಿದವು.
ಎಮ್. ಎನ್., ಇಟಲಿ
ಈ ಮೊದಲು ನಿಮ್ಮ ಲೇಖನಗಳಲ್ಲಿ ಹೆಚ್ಚಿನವುಗಳನ್ನು ನಾನು ಓದಿರುವೆನು, ಆದರೆ ಈ ಲೇಖನಗಳು ನನ್ನನ್ನು ಗಾಢವಾಗಿ ಪ್ರಭಾವಿಸಿದವು. 9ನೆಯ ಪುಟದಲ್ಲಿರುವ ಛಾಯಾಚಿತ್ರವನ್ನು ನೋಡುವುದು, ನನ್ನ ತಾಯಿ ಅಥವಾ ನನ್ನ ಸಹೋದರಿಯನ್ನು ನೋಡುತ್ತಿರುವಂತೆ ಇತ್ತು. ಅವರು ಅನೇಕ ವರ್ಷಗಳ ಕಾಲ ತಮ್ಮ ಗಂಡಂದಿರ ಕೈಗಳಲ್ಲಿ ಕಷ್ಟಾನುಭವಿಸಿದ್ದಾರೆ. ಈ ರೀತಿಯಲ್ಲಿ ಕಷ್ಟಾನುಭವಿಸುತ್ತಿದ್ದಾರೆಂದು ನನಗೆ ತಿಳಿದಿದ್ದ ಇತರರಿಗೆ ಈ ಲೇಖನಗಳ ಪ್ರತಿಗಳನ್ನು ಮಾಡಿ, ನಾನು ಕಳುಹಿಸಿದೆ. ಎಲ್ಲಿ ಪ್ರತಿಯೊಂದು ವಿಧದ ನಿಂದಾತ್ಮಕ ನುಡಿಯು ಇಲ್ಲವಾಗಿರುವುದೊ, ಆ ದೇವರ ನೂತನ ಲೋಕವನ್ನು ನಾವು ಎದುರುನೋಡುತ್ತೇವೆ.
ಬಿ. ಪಿ., ಕೆನ್ಯ
ತನ್ನ ಹೆಂಡತಿಯನ್ನು ಬೈಯುತ್ತಿದ್ದ ನನ್ನ ಸೋದರಮಾವನಿಗೆ ನಾನು ಈ ಪತ್ರಿಕೆಯನ್ನು ಕೊಟ್ಟಾಗ, ಅದನ್ನು ಅವನು ಹಲವಾರು ಬಾರಿ ಓದಿದನು. ಅವನು ಇನ್ನು ಮುಂದೆ ತನ್ನ ಹೆಂಡತಿಯನ್ನು ಅಪಪ್ರಯೋಗಿಸಲಿಲ್ಲವೆಂದು ಮತ್ತು ಅವರ ಮನೆಯಲ್ಲಿ ಇನ್ನು ಮುಂದೆ ಯಾವ ಕ್ಷೋಭೆಯೂ ಇರಲಿಲ್ಲವೆಂಬುದನ್ನು ನಾವು ಗಮನಿಸಿದೆವು. ತಮ್ಮನ್ನೇ ತಾವು ಅರ್ಥಮಾಡಿಕೊಳ್ಳುವಂತೆ ಅವರಿಗೆ ಸಹಾಯ ಮಾಡಿದುದಕ್ಕಾಗಿ ಅವನು ಮತ್ತು ಅವನ ಹೆಂಡತಿಯು—ಇಬ್ಬರೂ—ನನಗೆ ಉಪಕಾರ ಸಲ್ಲಿಸುತ್ತಾ ಇರುತ್ತಾರೆ. ಆ ಉಪಕಾರಗಳನ್ನು ನಾನು ಎಚ್ಚರ! ಪತ್ರಿಕೆಗೆ ವರ್ಗಾಯಿಸಲು ಬಯಸುತ್ತೇನೆ.
ಎಫ್. ಎಫ್., ನೈಜೀರಿಯ
ಮಾರ್ಗದರ್ಶನ “ಬೈಬಲಿನ ದೃಷ್ಟಿಕೋನ: ನೀವು ಯಾರ ಮಾರ್ಗದರ್ಶನದ ಮೇಲೆ ಭರವಸೆಯಿಡಬಲ್ಲಿರಿ?” (ಡಿಸೆಂಬರ್ 8, 1996) ಎಂಬ ಲೇಖನವನ್ನು ನಾನು ನಿಜವಾಗಿಯೂ ಆನಂದಿಸಿದೆ. ಅದು ನನಗೆ ಬಹಳ ಸಾಂತ್ವನದಾಯಕವೂ ಪ್ರೋತ್ಸಾಹಕರವೂ ಆಗಿತ್ತು. ಇತರ ಅನೇಕರಂತೆ, ಗತಕಾಲದಲ್ಲಿ ನಾನು ಮಾರ್ಗದರ್ಶನೆಗಾಗಿ ಯಾರ ಮೇಲೆ ಆತುಕೊಂಡೆನೊ ಅವರು ನನ್ನ ಕೈಬಿಟ್ಟುಬಿಟ್ಟಾಗ ನಾನು ಬಹಳವಾಗಿ ನಿರಾಶಳಾಗಿದ್ದೆ. ತನ್ನ ತಂದೆಯ ಕೈಯನ್ನು ಹಿಡಿದುಕೊಂಡಿರುವ ಒಂದು ಮಗುವಿನ ದೃಷ್ಟಾಂತವು, ನನ್ನಲ್ಲಿ ಕಣ್ಣೀರನ್ನು ಬರಿಸಿತು. ಯೆಶಾಯ 41:13ರಲ್ಲಿ, ಯೆಹೋವನು ತನ್ನ ಜನರ ‘ಕೈಯನ್ನು ಹಿಡಿದು’ಕೊಳ್ಳುವನೆಂದು ಹೇಳುವ ಸಂಗತಿಯನ್ನು ತಿಳಿದುಕೊಳ್ಳುವುದು, ಬಹಳಷ್ಟು ಹೃದಯೋಲ್ಲಾಸಗೊಳಿಸುವಂತಹದ್ದಾಗಿದೆ.
ಎಮ್. ಎಸ್., ಅಮೆರಿಕ
ನಾನು 17 ವರ್ಷ ಪ್ರಾಯದವಳಾಗಿದ್ದೇನೆ ಮತ್ತು ಇತ್ತೀಚೆಗೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಒಬ್ಬ ಸ್ನೇಹಿತೆಯು, ಪ್ರಾರ್ಥಿಸುವಂತೆ ಮತ್ತು ಏನಾದರೂ ಆತ್ಮಿಕ ವಿಷಯವನ್ನು ಓದುವಂತೆ ನನಗೆ ಹೇಳಿದಳು. “ನೀವು ಯಾರ ಮಾರ್ಗದರ್ಶನದ ಮೇಲೆ ಭರವಸೆಯಿಡಬಲ್ಲಿರಿ?” ಎಂಬ ಲೇಖನವನ್ನು ಓದಿದ ಬಳಿಕ, ನಿರೀಕ್ಷೆಯನ್ನು ಬಿಟ್ಟುಬಿಡುವ ಬದಲು, ನನ್ನ ಸ್ವರ್ಗೀಯ ತಂದೆಯ ಕೈಯನ್ನು ಇನ್ನೂ ಗಟ್ಟಿಯಾಗಿ ಹಿಡಿದುಕೊಳ್ಳಲು ನಾನು ನಿರ್ಧರಿಸಿದ್ದೇನೆ!
ಕೆ. ಜಿ., ಅಮೆರಿಕ
ಒತ್ತೆಯಾಳುಗಳು ನನ್ನ ಶಿಕ್ಷಾವಧಿಯನ್ನು ಪೂರ್ತಿಗೊಳಿಸಲು ಇನ್ನೂ ಎರಡು ವರ್ಷಗಳಿರುವ ಒಬ್ಬ ಸೆರೆವಾಸಿ ನಾನು. “ಸೆರೆಮನೆಯ ಬಂಡಾಯದ ಸಮಯದಲ್ಲಿ ನಾವು ಒತ್ತೆಯಾಳುಗಳಾಗಿದ್ದೆವು” (ಇಂಗ್ಲಿಷ್, ನವೆಂಬರ್ 8, 1996) ಎಂಬ ಲೇಖನವನ್ನು ನಾನು ಎರಡು ಬಾರಿ ಓದಿದೆ. ಪ್ರತಿಬಾರಿ, ಅದು ಆನಂದಾಶ್ರುಗಳನ್ನು ಬರಮಾಡಿತು ಮತ್ತು ನನ್ನ ಕಂಠವು ಬಿಗಿದುಕೊಂಡಿತು. ಈ ಸೆರೆಮನೆಗೆ ಯೆಹೋವನ ಸಾಕ್ಷಿಗಳ ಭೇಟಿಗಳನ್ನು ನಾನು ಯಾವಾಗಲೂ ಎದುರುನೋಡುತ್ತೇನೆ. ಆ ಭೇಟಿಗಳು ಬಹಳ ಚೈತನ್ಯದಾಯಕವಾಗಿರುತ್ತವೆ!
ಜೆ. ಕೆ., ಅಮೆರಿಕ
ಈ ಮೊದಲು ಒಂದು ಲೇಖನದ ಕುರಿತು ನಾನೆಂದಿಗೂ ನಿಮಗೆ ಪತ್ರ ಬರೆದಿಲ್ಲ, ಆದರೆ ಒತ್ತೆಯಾಳುಗಳ ಕುರಿತಾದ ಈ ಲೇಖನವು ನಂಬಿಕೆಯನ್ನು ಬಹು ಬಲಪಡಿಸುವಂತಹದ್ದಾಗಿತ್ತು. ತನ್ನ ಜನರು ಸಂಕಟದಲ್ಲಿರುವಾಗ ಯೆಹೋವನು ಅವರನ್ನು ಖಂಡಿತವಾಗಿ ಬಲಪಡಿಸುತ್ತಾನೆಂಬ ನವೀಕೃತ ಆಶ್ವಾಸನೆಯನ್ನು ಅದು ನನಗೆ ನೀಡಿತು.
ಕೆ. ಡಿ., ಅಮೆರಿಕ