ಜಾರ್ಜಿಯ—ಒಂದು ಪುರಾತನ ಪರಂಪರೆಯು ಸಂರಕ್ಷಿಸಲ್ಪಡುತ್ತದೆ
ಎಚ್ಚರ! ಸುದ್ದಿಗಾರರಿಂದ
ಎಲ್ಲಿ ಕೆಲವು ಜನರು 100 ಮತ್ತು ಅದಕ್ಕಿಂತಲೂ ಹೆಚ್ಚು ಪ್ರಾಯದ ವರೆಗೆ ಜೀವಿಸುತ್ತಾರೊ, ಆ 4,600 ಮೀಟರುಗಳಷ್ಟು ಎತ್ತರದ ಮಂಜುನೆತ್ತಿಯ ಪರ್ವತಗಳ ನಡುವೆ ನೆಲೆಸಿರುವ ಫಲದಾಯಕ ಕಣಿವೆಗಳ ದೇಶದಲ್ಲಿ ಜೀವಿಸಲು ನೀವು ಬಯಸುವಿರೊ? ಜಾರ್ಜಿಯದ ನಿವಾಸಿಗಳಿಗೆ, ಅದು ಕೇವಲ ಒಂದು ಕನಸಲ್ಲ, ಅದೊಂದು ನೈಜತೆಯಾಗಿದೆ.
ಜಾರ್ಜಿಯ, ಯೂರೋಪ್ ಮತ್ತು ಏಷ್ಯದ ಮಧ್ಯದಲ್ಲಿರುವ ಭೌಗೋಲಿಕ ಹಾಗೂ ಸಾಂಸ್ಕೃತಿಕ ಮೇರೆಯ ಸಾಲಿನಲ್ಲಿ ನೆಲೆಸಿದೆ. ಪುರಾತನ ಸಮಯಗಳಲ್ಲಿ, ಜಾರ್ಜಿಯ ಪ್ರಖ್ಯಾತ ಸಿಲ್ಕ್ ಹಾದಿ—ಚೈನಕ್ಕೆ ಹೋಗಲು ಮಾರ್ಕೋ ಪೊಲೋ ಬಳಸಿದ ಅದೇ ಹಾದಿ—ಯಲ್ಲಿ ಒಂದು ಪ್ರಮುಖ ನಿಲ್ಲೆಡೆಯಾಗಿತ್ತು. ಪೂರ್ವ ಹಾಗೂ ಪಶ್ಚಿಮದ ನಡುವಿನ ಈ ಸಂಬಂಧದಿಂದ ಜಾರ್ಜಿಯ ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಪ್ರಯೋಜನಪಡೆಯಿತಾದರೂ, ಈ ಮಾರ್ಗದಿಂದ ಹಾದುಹೋಗುವುದು ಸಾರ್ಥಕವೆಂಬುದನ್ನು ಕೆಲವೊಮ್ಮೆ ದಾಳಿಗಾರರೂ ಕಂಡುಕೊಂಡರು. ಒಂದು ಅಂದಾಜಿನ ಪ್ರಕಾರ, ಜಾರ್ಜಿಯದ ರಾಜಧಾನಿ ನಗರವಾದ ಟಬಿಲಸೀ 29 ಬಾರಿ ನಾಶಗೊಳಿಸಲ್ಪಟ್ಟಿದೆ! ಇಂದು, ಟಬಿಲಸೀ, ಬಹುಕಾಲದಿಂದಿರುವ ವಾಸ್ತುಶಿಲ್ಪೀಯ ಸ್ಮಾರಕ ಕಟ್ಟಡಗಳೊಂದಿಗೆ ಸೇರಿರುವ ಆಧುನಿಕ ಕಟ್ಟಡಗಳು ಹಾಗೂ ಒಂದು ಸುರಂಗಮಾರ್ಗವಿರುವ, ಕಾರ್ಯನಿರತ ಮತ್ತು ಉಲ್ಲಾಸಕರ ನಗರವಾಗಿದೆ.
ಜಾರ್ಜಿಯನ್ ಭೂಪ್ರದೇಶದ ಸುಮಾರು 87 ಪ್ರತಿಶತದಷ್ಟು ಪ್ರದೇಶವು ಪರ್ವತಮಯವಾಗಿದೆ. ಟ್ರೌಟ್ ಮೀನುಗಳಿಂದ ತುಂಬಿರುವ 25,000 ನದಿಗಳು, ಹಿಮಮಯ ಹಾಗೂ ನಿರ್ಜನ ಮಲೆನಾಡುಗಳಿಂದ ಇಳಿದುಬಂದು, ತಗ್ಗುಪ್ರದೇಶಗಳ ಮುಖಾಂತರ ಹರಿದುಹೋಗುತ್ತವೆ. ದೇಶದ ತೃತೀಯಾಂಶಕ್ಕಿಂತಲೂ ಹೆಚ್ಚಿನ ಭಾಗವು ಕಾಡಾಗಿದೆ ಇಲ್ಲವೆ ಪೊದೆಗಳಿಂದ ತುಂಬಿದೆ. ಜಾರ್ಜಿಯದ ಉತ್ತರ ಮೇರೆಯಲ್ಲಿರುವ ಕಾಕಸಸ್ ಪರ್ವತ ಶ್ರೇಣಿಯು, ಉತ್ತರ ದಿಕ್ಕಿನಿಂದ ಬರುವ ಕಡು ಶೀತ ಹವಾಮಾನದಿಂದ ದೇಶದ ಒಳಭಾಗವನ್ನು ಕಾಪಾಡುತ್ತದೆ. ಕಪ್ಪು ಸಮುದ್ರದಿಂದ ಬರುವ ತೇವಾಂಶದಿಂದ ಕೂಡಿರುವ ಹವೆಯಿಂದ ಪಶ್ಚಿಮ ಜಾರ್ಜಿಯ ಬೆಚ್ಚಗಾಗಿರುವಂತೆ ಈ ಸನ್ನಿವೇಶವು ಅನುಮತಿಸುತ್ತದೆ—ರಜಾನುಭವಿಗಳಿಗೆ ಜಾರ್ಜಿಯ ಒಂದು ಅಚ್ಚುಮೆಚ್ಚಿನ ಗಮ್ಯಸ್ಥಾನವಾಗಿರುವುದಕ್ಕೆ ಇದೊಂದು ಕಾರಣವಾಗಿದೆ. ಈ ಹಿತವಾದ ವಾಯುಗುಣವು, ಲೋಕದ ಅತ್ಯಂತ ಹಳೆಯ ಮತ್ತು ಅತ್ಯುತ್ತಮವಾದ ದ್ರಾಕ್ಷಾರಸ ತಯಾರಿಕೆಯ ಪರಂಪರೆಗಳಲ್ಲಿ ಒಂದಕ್ಕೆ ನೆರವನ್ನೂ ನೀಡಿದೆ. ವಾಸ್ತವದಲ್ಲಿ, ಜಾರ್ಜಿಯ 500 ವಿಭಿನ್ನ ಪ್ರಕಾರಗಳ ದ್ರಾಕ್ಷಿಹಣ್ಣುಗಳನ್ನೂ ದ್ರಾಕ್ಷಾಮದ್ಯವನ್ನೂ ಉತ್ಪಾದಿಸುತ್ತದೆ!
ಹಾಗಿದ್ದರೂ, ಜಾರ್ಜಿಯದ ಅತ್ಯಂತ ಮಹಾನ್ ಸ್ವತ್ತು, ಅದರ ಜನರಾಗಿದ್ದಾರೆ. ಅವರು ಅನೇಕಾನೇಕ ಯುಗಗಳಿಂದ ತಮ್ಮ ಶೌರ್ಯ, ಚುರುಕುಬುದ್ಧಿ, ಮತ್ತು ಬಹು ಧಾರಾಳವಾದ ಅತಿಥಿಸತ್ಕಾರ, ಅಲ್ಲದೆ ತಮ್ಮ ವಿನೋದಪ್ರವೃತ್ತಿ ಹಾಗೂ ಬದುಕನ್ನು ಪ್ರೀತಿಸುವುದಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಅವರ ಸಂಸ್ಕೃತಿಯು ಸಂಗೀತ ಹಾಗೂ ನೃತ್ಯದಲ್ಲಿ ಸಮೃದ್ಧವಾಗಿದ್ದು, ಜಾರ್ಜಿಯನ್ ಮನೆಗಳಲ್ಲಿ ಊಟದ ತರುವಾಯ ಜನರು ಮೇಜಿನ ಸುತ್ತ ಕುಳಿತಿರುವಾಗ ಜನಪದ ಗೀತೆಗಳು ಈಗಲೂ ಹಾಡಲ್ಪಡುತ್ತವೆ.
ಜಾರ್ಜಿಯಕ್ಕೆ, ಐದನೆಯ ಶತಮಾನದಿಂದ ಅಸ್ತಿತ್ವದಲ್ಲಿರುವ ದೀರ್ಘ ಸಮಯದ ಸಾಹಿತ್ಯ ಚರಿತ್ರೆಯೂ ಇದೆ. ಅಪೂರ್ವವೂ ಸುಂದರವೂ ಆದ ಜಾರ್ಜಿಯನ್ ಅಕ್ಷರಮಾಲೆಯನ್ನು ಬಳಸುತ್ತಾ, ಬೈಬಲು ಭಾಷಾಂತರಿಸಲ್ಪಟ್ಟ ಅತ್ಯಂತ ಆದಿಯ ಭಾಷೆಗಳಲ್ಲಿ ಜಾರ್ಜಿಯನ್ ಭಾಷೆ ಒಂದಾಗಿತ್ತು. ಈ ಎಲ್ಲ ಸಂಸ್ಕೃತಿಯು, ಜಾರ್ಜಿಯದ ಗತಕಾಲ—ಆಧುನಿಕ ದೇಶದಲ್ಲಿ ಸಂರಕ್ಷಿಸಲ್ಪಟ್ಟ ಒಂದು ಪುರಾತನ ಪರಂಪರೆ—ದೊಂದಿಗೆ ಒಂದು ಜೀವಂತ ಕೊಂಡಿಯನ್ನು ಹೊಸೆಯುತ್ತದೆ.
[ಪುಟ 25 ರಲ್ಲಿರುವ ಚಿತ್ರ ಕೃಪೆ]
Pat O’Hara/Corbis
[ಪುಟ 26 ರಲ್ಲಿರುವ ಚಿತ್ರ]
1. ಜಾರ್ಜಿಯನ್ ಬೈಬಲ್
2. ಕೆಲವು ನಿವಾಸಿಗಳು 100 ಮತ್ತು ಅದಕ್ಕಿಂತಲೂ ಹೆಚ್ಚು ಪ್ರಾಯದ ವರೆಗೆ ಜೀವಿಸುತ್ತಾರೆ!
3. ಟಬಿಲಸೀಯಲ್ಲಿ ಒಂದು ನಿಬಿಡವಾದ ರಸ್ತೆ
[ಕೃಪೆ]
Dean Conger/Corbis