ಬೈಬಲಿನ ದೃಷ್ಟಿಕೋನ
ಕ್ರೈಸ್ತ ಏಕತೆಯು ವೈವಿಧ್ಯಕ್ಕೆ ಪರವಾನಗಿ ನೀಡುತ್ತದೊ?
ಕ್ರೈಸ್ತ ಸಭೆಯಲ್ಲಿ ಏಕತೆಯು ಅತ್ಯಾವಶ್ಯಕವಾಗಿದೆ. ಸೈದ್ಧಾಂತಿಕ ನಂಬಿಕೆಯಲ್ಲಿ ಅನೈಕ್ಯವು ಉಗ್ರವಾದ ಜಗಳಗಳು, ಮನಸ್ತಾಪ, ವೈರತ್ವಕ್ಕೂ ಅವಕಾಶಕೊಡುವುದು. (ಅ. ಕೃತ್ಯಗಳು 23:6-10) “ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ” ಎಂಬುದಾಗಿ ಬೈಬಲು ಹೇಳುತ್ತದೆ. (1 ಕೊರಿಂಥ 14:33) ಆದಕಾರಣ, ಒಮ್ಮತದಲ್ಲಿ ಮಾತಾಡುವಂತೆ ಮತ್ತು ಒಂದೇ ಮನಸ್ಸು ಹಾಗೂ ಒಂದೇ ವಿಚಾರಸರಣಿಯಲ್ಲಿ ಐಕ್ಯರಾಗಿರುವಂತೆ ಕ್ರೈಸ್ತರಿಗೆ ಬುದ್ಧಿವಾದವು ನೀಡಲ್ಪಟ್ಟಿದೆ.—1 ಕೊರಿಂಥ 1:10.
ಈ ಮಾತುಗಳು ಮತ್ತು ತದ್ರೀತಿಯ ಬೈಬಲ್ ಉದ್ಧರಣಗಳು, ಪ್ರತಿಯೊಂದು ವಿಷಯದಲ್ಲಿ ಕ್ರೈಸ್ತರೊಳಗೆ ಕಟ್ಟುನಿಟ್ಟಿನ ಏಕರೂಪತೆಯನ್ನು ಉತ್ತೇಜಿಸುತ್ತಿವೆಯೊ? (ಯೋಹಾನ 17:20-23; ಗಲಾತ್ಯ 3:28) ಬೈಬಲಿನಲ್ಲಿ ವರ್ಣಿಸಲ್ಪಟ್ಟಿರುವ ನಿಜ ಕ್ರೈಸ್ತತ್ವವು, ವ್ಯಕ್ತಿಗತ ವ್ಯಕ್ತಿತ್ವಗಳ ಸಂಬಂಧದಲ್ಲಿ ವೈವಿಧ್ಯತೆಯನ್ನು ನಿರುತ್ಸಾಹಗೊಳಿಸುತ್ತದೊ? ಎಲ್ಲ ಕ್ರೈಸ್ತರು ಯಾವುದೊ ರೀತಿಯ ಅನಮ್ಯ ಅಚ್ಚಿನೊಳಗೆ ಹೊಂದಿಕೊಳ್ಳುವಂತೆ ಅಪೇಕ್ಷಿಸಲ್ಪಟ್ಟಿರುತ್ತಾರೊ?
ದೇವರು ನಮ್ಮನ್ನು ವ್ಯಕ್ತಿಗತವಾಗಿ ಆಕರ್ಷಿಸುತ್ತಾನೆ
ಬೈಬಲು ಜನಸಮೂಹಗಳ ನಿರಂಕುಶ ನಿಯಂತ್ರಣಕ್ಕಾಗಿರುವ ಕೇವಲ ಮತ್ತೊಂದು ಸಾಧನವೆಂದು ಕೆಲವು ಜನರು ಬಲವಾಗಿ ನಂಬುತ್ತಾರೆ. ಬೈಬಲು ಆ ವಿಧದಲ್ಲಿ ಕೆಲವು ಪಂಗಡಗಳಿಂದ ದುರುಪಯೋಗಿಸಲ್ಪಟ್ಟಿದೆ ಎಂಬುದು ನಿಜ. ಆದರೆ ಯೇಸು ಶಾಸ್ತ್ರಗಳ ಮತ್ತು ಅದರ ದೈವಿಕ ಗ್ರಂಥಕರ್ತನ ಕುರಿತು ತೀರ ಭಿನ್ನವಾದ ನೋಟವನ್ನು ಚಿತ್ರಿಸಿದನು. ತನ್ನ ಪ್ರತಿಯೊಂದು ಜೀವಿಗಳಲ್ಲಿ ತೀವ್ರವಾದ ಆಸ್ತಕಿಯುಳ್ಳವನೋಪಾದಿ ಅವನು ದೇವರನ್ನು ವರ್ಣಿಸಿದನು.
ಯೋಹಾನ 6:44ರಲ್ಲಿ ಯೇಸು ವಿವರಿಸಿದ್ದು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.” ಇಲ್ಲಿ ಉಪಯೋಗಿಸಲ್ಪಟ್ಟ ಕ್ರಿಯಾಪದವು, ದೇವರು ಜನರ ಇಚ್ಛೆಗೆ ವಿರುದ್ಧವಾಗಿ ಅವರನ್ನು ಎಳೆಯುತ್ತಾನೆಂಬುದನ್ನು ಸೂಚಿಸುವುದಿಲ್ಲ. ಬದಲಿಗೆ, ದೇವರು ನಮ್ಮಲ್ಲಿ ಹೃತ್ಪೂರ್ವಕ ಬಯಕೆಯನ್ನು ಕೆರಳಿಸುತ್ತಾ, ಕೋಮಲವಾಗಿ ಆಕರ್ಷಿಸುತ್ತಾನೆ. ಒಬ್ಬ ಬೈಬಲ್ ಪಂಡಿತನು ಅದನ್ನು ಹೇಳುವಂತೆ, ‘ನಂಬುವಂತೆ ಮನಸ್ಸನ್ನು ಓಲೈಸಲಿಕ್ಕಾಗಿ ದೇವರಿಂದ ಬರುವ ಒಂದು ಪ್ರಭಾವ’ವಿರುತ್ತದೆ. ಸೃಷ್ಟಿಕರ್ತನು ಮಾನವ ಕುಟುಂಬವನ್ನು ವ್ಯಕ್ತಿತ್ವವಿರದ ಸಮೂಹವಾಗಿ ವೀಕ್ಷಿಸುವುದಿಲ್ಲ. ಆತನು ವ್ಯಕ್ತಿಗಳ ಮೌಲ್ಯಮಾಪನ ಮಾಡಿ, ಯೋಗ್ಯವಾದ ಹೃದಯವಿರುವವರನ್ನು ತನ್ನ ಕಡೆಗೆ ಕೋಮಲವಾಗಿ ಎಳೆದುಕೊಳ್ಳುತ್ತಾನೆ.—ಕೀರ್ತನೆ 11:5; ಜ್ಞಾನೋಕ್ತಿ 21:2; ಅ. ಕೃತ್ಯಗಳು 13:48.
ಅಪೊಸ್ತಲ ಪೌಲನು ಎಷ್ಟೊಂದು ಹೊಂದಿಕೆಸ್ವಭಾವವುಳ್ಳವನಾಗಿದ್ದನು ಎಂಬುದನ್ನು ಗಮನಿಸಿ. ಅವನು ವ್ಯಕ್ತಿಗಳ ವಿಶೇಷ ಅಗತ್ಯಗಳನ್ನು ಗುರುತಿಸಿ, ಕೆಲವೊಂದು ದೃಷ್ಟಿಕೋನಗಳು ನಿರ್ದಿಷ್ಟ ಜನಾಂಗಗಳು ಇಲ್ಲವೆ ಹಿನ್ನೆಲೆಗಳವರಿಗೆ ಸಾಮಾನ್ಯವಾಗಿದ್ದವೆಂದು ಅಂಗೀಕರಿಸಿದನು. ಅನಂತರ ಅವನು ತನ್ನ ಪ್ರಸ್ತಾವನೆಯನ್ನು ಅದಕ್ಕನುಸಾರ ಹೊಂದಿಸಿದನು. ಅವನು ಬರೆದುದು: “ಯೆಹೂದ್ಯರನ್ನು ಸಂಪಾದಿಸಿಕೊಳ್ಳುವದಕ್ಕೆ ಯೆಹೂದ್ಯರಿಗೆ ಯೆಹೂದ್ಯನಂತಾದೆನು. . . . ಬಲವಿಲ್ಲದವರನ್ನು ಸಂಪಾದಿಸುವದಕ್ಕೆ ಅವರಿಗೆ ಬಲವಿಲ್ಲದವನಾದೆನು. ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾಗಿದ್ದೇನೆ.”—1 ಕೊರಿಂಥ 9:20-22.
ಸ್ಪಷ್ಟವಾಗಿಯೇ ಪೌಲನು ಜನರನ್ನು ಏಕಪ್ರಕಾರವಾಗಿ ವೀಕ್ಷಿಸಲಿಲ್ಲ ಇಲ್ಲವೆ ಅವರೆಲ್ಲರನ್ನು ಒಂದೇ ವಿಧದಲ್ಲಿ ಉಪಚರಿಸಲಿಲ್ಲ. ಅವರಿಗೆ ಈ ಉತ್ತೇಜನವನ್ನು ಅವನು ನೀಡಿದನು: “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.” (ಕೊಲೊಸ್ಸೆ 4:6) ಹೌದು, ಪೌಲನು ಮತ್ತು ಇತರ ಕ್ರೈಸ್ತರು, ಪ್ರತಿಯೊಬ್ಬ ವ್ಯಕ್ತಿಗೆ ಸಹಾಯ ಮಾಡುವ ಸಲುವಾಗಿ ಪರಸ್ಪರರ ಅದ್ವಿತೀಯತೆಯನ್ನು ಗುರುತಿಸಿ, ಗೌರವಿಸಬೇಕಿತ್ತು.
ದೇವರ ಮೂಲ ಉದ್ದೇಶ
ವ್ಯಕ್ತಿಗತವಾಗಿ ಒಬ್ಬ ವ್ಯಕ್ತಿಗಾಗಿರುವ ಈ ಗೌರವವು, ಒಬ್ಬನು ಕ್ರೈಸ್ತ ಸಭೆಯ ಭಾಗವಾದ ಮೇಲೂ ಮುಂದುವರಿಯುತ್ತದೆ. ದೇವರ ಜನರು ಸಂಪೂರ್ಣ ಏಕರೂಪತೆ ಮತ್ತು ಅಧಿಕಾರದಲ್ಲಿರುವವರ ಇಷ್ಟಗಳಿಗೆ ಖಂಡಿತವಾದ ಅನುಸರಣೆಯಲ್ಲಿ ಮುಳುಗಿಹೋಗುವುದಿಲ್ಲ. ಬದಲಿಗೆ, ಅವರು ವೈವಿಧ್ಯಮಯ ವ್ಯಕ್ತಿತ್ವಗಳಲ್ಲಿ ಆನಂದಿಸಿ, ವಿಭಿನ್ನ ಸಾಮರ್ಥ್ಯಗಳು, ಹವ್ಯಾಸಗಳು, ಮತ್ತು ಅಭಿಪ್ರಾಯಗಳುಳ್ಳವರಾಗಿದ್ದಾರೆ. ಪ್ರತಿಯೊಬ್ಬರ ವ್ಯಕ್ತಿತ್ವವು ಒಂದು ಕಾಟ ಇಲ್ಲವೆ ಅನಿಷ್ಟವಾಗಿ ವೀಕ್ಷಿಸಲ್ಪಡುವುದಿಲ್ಲ. ಅದು ದೇವರ ಮೂಲ ಉದ್ದೇಶದ ಭಾಗವಾಗಿದೆ.
ಆದಕಾರಣ, ನೀತಿವಂತರಿಗಾಗಿ ಬೈಬಲಿನಲ್ಲಿ ವಾಗ್ದಾನಿಸಲ್ಪಟ್ಟ ಹೊಸ ಲೋಕದಲ್ಲಿ, ಮಾನವರ ಮಧ್ಯದಲ್ಲಿರುವ ಪರಿಪೂರ್ಣತೆಯು ಭಾರಿ ವೈವಿಧ್ಯಕ್ಕೆ ಪರವಾನಗಿ ನೀಡುವುದು. (2 ಪೇತ್ರ 3:13) “ಪರಿಪೂರ್ಣತೆ” ಎಂಬ ತಲೆಬರಹದ ಕೆಳಗೆ, ಶಾಸ್ತ್ರಗಳ ಒಳನೋಟa (ಇಂಗ್ಲಿಷ್) ಎಂಬ ಬೈಬಲ್ ಎನ್ಸೈಕ್ಲೊಪೀಡಿಯ ಈ ಮುಂದಿನ ಹೇಳಿಕೆಗಳನ್ನು ಸೂಕ್ತವಾಗಿಯೇ ಮಾಡುತ್ತದೆ: “ಜನರು ಅನೇಕ ವೇಳೆ ಭಾವಿಸಿಕೊಳ್ಳುವಂತೆ, ಪರಿಪೂರ್ಣತೆ ವೈವಿಧ್ಯಕ್ಕೆ ಅಂತ್ಯವನ್ನು ಅರ್ಥೈಸುವುದಿಲ್ಲ. ಯೆಹೋವನ ‘ಪರಿಪೂರ್ಣ ಚಟುವಟಿಕೆಯ’ ಉತ್ಪನ್ನವಾಗಿರುವ ಪ್ರಾಣಿ ಪ್ರಪಂಚದಲ್ಲಿ (ಆದಿ[ಕಾಂಡ] 1:20-24; ಧರ್ಮೋ[ಪದೇಶಕಾಂಡ] 32:4), ಹೇರಳವಾದ ವೈವಿಧ್ಯತೆಯಿದೆ.”
ಒಳನೋಟ ಕೂಡಿಸುವುದು: “ಭೂಗೃಹದ ಪರಿಪೂರ್ಣತೆಯು ತದ್ರೀತಿಯಲ್ಲಿ ವೈವಿಧ್ಯತೆ, ಬದಲಾವಣೆ, ಇಲ್ಲವೆ ವ್ಯತ್ಯಾಸಕ್ಕೆ ಅಸಂಬದ್ಧವಾಗಿರುವುದಿಲ್ಲ: ಅದು ಸರಳ ಹಾಗೂ ಜಟಿಲ, ಸಾದಾ ಹಾಗೂ ಅಲಂಕಾರಕ, ಹುಳಿ ಹಾಗೂ ಸಿಹಿ, ಒರಟಾದ ಹಾಗೂ ನಯವಾದ, ಹುಲ್ಲುಗಾವಲುಗಳು ಹಾಗೂ ಕಾಡುಗಳು, ಪರ್ವತಗಳು ಹಾಗೂ ಕಣಿವೆಗಳಿಗೆ ಪರವಾನಗಿ ನೀಡುತ್ತದೆ. ಅದು ವಸಂತಕಾಲದ ಹುರಿದುಂಬಿಸುವ ಲವಲವಿಕೆಯನ್ನು, ಅದರ ಬಾನ್ನೀಲಿ ಆಕಾಶಗಳೊಂದಿಗೆ ಬೇಸಗೆಯ ಉಷ್ಣವನ್ನು, ಶರತ್ಕಾಲದ ಬಣ್ಣಗಳ ಸೌಂದರ್ಯವನ್ನು, ಆಗ ತಾನೆ ಬಿದ್ದ ಹಿಮದ ಶುದ್ಧವಾದ ರಮ್ಯತೆಯನ್ನು ಒಳಗೊಳ್ಳುತ್ತದೆ. (ಆದಿ[ಕಾಂಡ] 8:22) ಹೀಗೆ ಪರಿಪೂರ್ಣ ಮಾನವರು ತದ್ರೀತಿಯ ವ್ಯಕ್ತಿತ್ವ, ಕೌಶಲಗಳು, ಮತ್ತು ಸಾಮರ್ಥ್ಯಗಳ ವಿಷಯದಲ್ಲಿ ಏಕಪ್ರಕಾರದವರಾಗಿರುವುದಿಲ್ಲ.”
ಇತರರಿಗಾಗಿ ಚಿಂತೆ
ಹಾಗಿದ್ದರೂ, ನಿಜ ಕ್ರೈಸ್ತತ್ವವು ನಮ್ಮ ಸುತ್ತಲಿರುವ ಜನರಿಗಾಗಿ ಸ್ವಾರ್ಥಮಗ್ನ ಅನಾದಾರವನ್ನು ನಿರುತ್ತೇಜಿಸುತ್ತದೆ. ಇತರರನ್ನು ಎಡವಿಸುವುದರಿಂದ ದೂರವಿರಲು, ಅಪೊಸ್ತಲ ಪೌಲನು ತನ್ನ ಜೀವನ ಹಾಗೂ ನಡತೆಯ ಪ್ರತಿಯೊಂದು ಅಂಶವನ್ನು ಸೂಕ್ಷ್ಮವಾಗಿ ಗಮನಿಸಿದನು. ಕೊರಿಂಥದಲ್ಲಿದ್ದ ಸಭೆಗೆ ತಾನು ಬರೆದ ಪತ್ರದಲ್ಲಿ ಅವನು ಹೇಳಿದ್ದು: “ನಿಂದೆಗೆ ಅವಕಾಶಕೊಡದೆ ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ.” (2 ಕೊರಿಂಥ 6:3) ಕೆಲವೊಮ್ಮೆ, ನಾವು ನಮ್ಮ ವೈಯಕ್ತಿಕ ಬಯಕೆಗಳಿಗೆ ಕಡಿವಾಣಹಾಕಿ, ನಮ್ಮ ಸ್ವಂತ ಇಷ್ಟಗಳಿಗಿಂತ ಇತರರ ಅಗತ್ಯಗಳಿಗೆ ಪ್ರಮುಖತೆಯನ್ನು ಕೊಡಬೇಕು. ಉದಾಹರಣೆಗೆ, ರೋಮ್ನಲ್ಲಿದ್ದ ಕ್ರೈಸ್ತರಿಗೆ ಪೌಲನು ಬರೆದುದು: “ಮಾಂಸ ತಿನ್ನುವದನ್ನಾಗಲಿ ದ್ರಾಕ್ಷಾರಸ ಕುಡಿಯುವದನ್ನಾಗಲಿ ನಿನ್ನ ಸಹೋದರನಿಗೆ ಅಡ್ಡಿಯನ್ನುಂಟುಮಾಡುವ ಬೇರೆ ಯಾವದನ್ನಾಗಲಿ ಬಿಟ್ಟುಬಿಡುವದೇ ಒಳ್ಳೇದು.”—ರೋಮಾಪುರ 14:21.
ತದ್ರೀತಿಯಲ್ಲಿ ಇಂದು, ತನ್ನ ಕುಡಿತವನ್ನು ನಿಯಂತ್ರಿಸಿಕೊಳ್ಳುವ ವಿಷಯದಲ್ಲಿ ಸಮಸ್ಯೆಯಿರುವ ಒಬ್ಬನ ಉಪಸ್ಥಿತಿಯಲ್ಲಿ ವ್ಯಕ್ತಿಯೊಬ್ಬನು ಮದ್ಯಪಾನವನ್ನು ಮಾಡದಿರುವುದರಿಂದ ದೂರವಿರಲು ಆರಿಸಿಕೊಳ್ಳಬಹುದು. (1 ಕೊರಿಂಥ 10:23, 24) ಇದು ಮತ್ತೊಬ್ಬ ವ್ಯಕ್ತಿಯ ಇಷ್ಟಕ್ಕೆ ಹೊಂದಿಕೊಳ್ಳಲು ಒತ್ತಾಯದಿಂದಲ್ಲ, ದಯೆ ಹಾಗೂ ಪ್ರೀತಿಯ ಒಂದು ಉದಾತ್ತ ಕ್ರಿಯೆಯಾಗಿ ಮಾಡಲ್ಪಡುತ್ತದೆ. “ಕ್ರಿಸ್ತನು ಸಹ ತನ್ನ ಸುಖವನ್ನು ನೋಡಿಕೊಳ್ಳಲಿಲ್ಲ.” ಯೇಸು ಒಬ್ಬ ವ್ಯಕ್ತಿಯಾಗಿದ್ದನಾದರೂ, ಇತರರ ಭಾವನೆಗಳಿಗೆ ಕೇಡುಮಾಡುತ್ತಾ ತನ್ನ ಇಷ್ಟಗಳನ್ನು ಒತ್ತಿಹೇಳಲಿಲ್ಲ.—ರೋಮಾಪುರ 15:3.
ಆದರೂ, ನಿಜ ಕ್ರೈಸ್ತತ್ವದ ಅತ್ಯಂತ ಚೈತನ್ಯದಾಯಕ ಅಂಶಗಳಲ್ಲೊಂದು ಯಾವುದೆಂದರೆ, ಬೈಬಲ್ ಮಾರ್ಗದರ್ಶನಗಳ ಮೇರೆಗಳೊಳಗೆ ವೈಯಕ್ತಿಕ ಸ್ವಾತಂತ್ರ್ಯಗಳು ಹಾಗೂ ಇಷ್ಟಗಳಿಗಾಗಿರುವ ಅದರ ಗೌರವ. ದೇವರು ನಮ್ಮನ್ನು ಭಿನ್ನರೂ ಅದ್ವಿತೀಯರೂ ಆಗಿರುವಂತೆ ಮಾಡಿದನೆಂದು ಇದು ಕಲಿಸುತ್ತದೆ. 1 ಕೊರಿಂಥ 2:11ರಲ್ಲಿ ನಾವು ಓದುವುದು: “ಮನುಷ್ಯನ ಒಳಗಿನ ಆಲೋಚನೆಗಳು ಅವನಲ್ಲಿರುವ ಜೀವಾತ್ಮಕ್ಕೆ ಹೊರತು ಮತ್ತಾರಿಗೆ ತಿಳಿಯುವದು?” ನಾವು ಸಾಧ್ಯವಾದಷ್ಟು ಮಟ್ಟಿಗೆ ಇತರರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ನಮ್ಮಿಂದ ಮತ್ತು ನಮ್ಮ ಸೃಷ್ಟಿಕರ್ತನಿಂದ ಮಾತ್ರ ಅರ್ಥವಾಗುವ ಅದ್ವಿತೀಯತೆ ನಮ್ಮಲ್ಲಿ ಪ್ರತಿಯೊಬ್ಬರಿಗಿದೆ ಎಂಬುದನ್ನು ಈ ವಚನವು ಸೂಚಿಸುತ್ತದೆ. ನಮಗೆ ಬೇಕಾದಂತೆ ನಾವು ಪ್ರಕಟಪಡಿಸುವ “ಹೃದಯದ ನಿಗೂಢ ವ್ಯಕ್ತಿ” (NW) ನಮ್ಮಲ್ಲಿದ್ದಾನೆ.—1 ಪೇತ್ರ 3:4.
ಏಕತೆ ಮತ್ತು ವೈವಿಧ್ಯತೆ—ಒಂದು ಸೂಕ್ಷ್ಮವಾದ ಸಮತೆ
ಕ್ರೈಸ್ತ ಸಮತೆಯ ವಿಷಯದಲ್ಲಿ ಅಪೊಸ್ತಲ ಪೌಲನು ಒಳ್ಳೆಯ ಮಾದರಿಯನ್ನಿಟ್ಟನು. ಕ್ರಿಸ್ತನ ಅಪೊಸ್ತಲನೋಪಾದಿ ಅವನಿಗೆ ಅಧಿಕಾರವಿದ್ದರೂ, ಇತರರ ಮೇಲೆ ತನ್ನ ಅಭಿಪ್ರಾಯವನ್ನು ಹೇರದಿರುವಂತೆ ಅವನು ಜಾಗರೂಕನಾಗಿದ್ದನು.
ದೃಷ್ಟಾಂತಕ್ಕೆ, ಈ ಅಪರಿಪೂರ್ಣ ಲೋಕದಲ್ಲಿ ಅವಿವಾಹಿತರಾಗಿರುವುದರ ಲಾಭಗಳ ಕುರಿತು ಪೌಲನಿಗೆ ಬಲವಾದ ಅಭಿಪ್ರಾಯವಿತ್ತು. ಅವನು ಈ ವಿಷಯವನ್ನು ಬರೆದ ಸಮಯದಲ್ಲಿ ಸ್ವತಃ ಅವಿವಾಹಿತನಾಗಿದ್ದನು: “[ಮದುವೆಮಾಡಿಕೊಂಡ]ವರಿಗೆ ಶರೀರಸಂಬಂಧವಾಗಿ ಕಷ್ಟ ಸಂಭವಿಸುವದು,” ಮತ್ತು “[ವಿಧವೆಯು] ಮದುವೆಮಾಡಿಕೊಳ್ಳುವದಕ್ಕಿಂತಲೂ ಇದ್ದ ಹಾಗೆಯೇ ಇರುವದು ಆಕೆಗೆ ಸುಖವೆಂದು ನನ್ನ ಅಭಿಪ್ರಾಯ.” ಅವನ ಮಾತುಗಳು ದೇವರ ಪ್ರೇರಿತ ವಾಕ್ಯದ ಭಾಗವಾದವೆಂಬ ವಾಸ್ತವಾಂಶವು, ಅವನ ಅಭಿಪ್ರಾಯದಲ್ಲಿ ಯಾವ ತಪ್ಪೂ ಇರಲಿಲ್ಲವೆಂಬುದನ್ನು ಸೂಚಿಸುತ್ತದೆ. ಆದರೂ, ಅವನು ಹೀಗೂ ವಿವರಿಸಿದನು: “ನೀನು ಮದುವೆಮಾಡಿಕೊಂಡರೂ ಪಾಪವಿಲ್ಲ.”—1 ಕೊರಿಂಥ 7:28, 40.
ಪೌಲನು ಈ ಮಾತುಗಳಿಂದ ಅಂಗೀಕರಿಸಿದಂತೆ, ಹೆಚ್ಚಿನ ಅಪೊಸ್ತಲರು ವಿವಾಹಿತರಾಗಿದ್ದರೆಂಬುದು ಸ್ಪಷ್ಟ: “ಕ್ರೈಸ್ತ ಸಹೋದರಿಯಾಗಿರುವ ಹೆಂಡತಿಯನ್ನು ಕರಕೊಂಡು ಸಂಚರಿಸುವದಕ್ಕೆ ಮಿಕ್ಕಾದ ಅಪೊಸ್ತಲರಂತೆಯೂ ಕರ್ತನ ತಮ್ಮಂದಿರಂತೆಯೂ ಕೇಫನಂತೆಯೂ ನಮಗೆ ಹಕ್ಕಿಲ್ಲವೇ.” (1 ಕೊರಿಂಥ 9:5) ಈ ವಿಷಯದಲ್ಲಿ ತಾವು ಪೌಲನ ಆಯ್ಕೆಗಿಂತ ಭಿನ್ನವಾದ ಆಯ್ಕೆಯನ್ನು ಮಾಡಸಾಧ್ಯವಿತ್ತೆಂದು ಮತ್ತು ಅವನು ಆಗಲೂ ಅವರನ್ನು ಗೌರವಿಸಲಿದ್ದನೆಂದು ಕ್ರೈಸ್ತರಿಗೆ ಗೊತ್ತಿತ್ತು.
ದೇವರ ಆರಾಧಕರು ತಮ್ಮ ಅದ್ವಿತೀಯ ವ್ಯಕ್ತಿತ್ವಕ್ಕೆ ಅನುಗುಣವಾಗಿ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಲು ಮೊದಲಿನಿಂದಲೂ ಅನುಮತಿಸಲ್ಪಟ್ಟಿದ್ದಾರೆ. ವಾಸ್ತವದಲ್ಲಿ, ಬೈಬಲನ್ನು ಬರೆಯುವಾಗ ಬೈಬಲ್ ಬರಹಗಾರರು ವ್ಯಕ್ತಿಗತ ಶೈಲಿಯನ್ನು ಉಪಯೋಗಿಸುವಂತೆಯೂ ದೇವರು ಅವರಿಗೆ ಅನುಮತಿ ನೀಡಿದನು. ಉದಾಹರಣೆಗೆ, ನೆಹೆಮೀಯನು ತನ್ನ ವೃತ್ತಾಂತವನ್ನು ಖುದ್ದಾಗಿ ಬರೆದರೂ ದೀನನಾಗಿದ್ದನು. (ನೆಹೆಮೀಯ 5:6, 19) ಮತ್ತೊಂದು ಕಡೆಯಲ್ಲಿ, ವಿನಯದಿಂದ ಅಪೊಸ್ತಲ ಯೋಹಾನನು ತನ್ನ ಸುವಾರ್ತಾ ವೃತ್ತಾಂತದಲ್ಲಿ ಒಮ್ಮೆಯೂ ತನ್ನ ಸ್ವಂತ ಹೆಸರನ್ನು ಬಳಸಲಿಲ್ಲ ಮತ್ತು ತನಗೆ ನಿರ್ದೇಶಿಸಿಕೊಂಡದ್ದೂ ವಿರಳ. ದೇವರು ಎರಡೂ ಶೈಲಿಗಳನ್ನು ಸಮ್ಮತಿಸಿದನು ಮತ್ತು ಅವುಗಳನ್ನು ಬೈಬಲಿನಲ್ಲಿ ರಕ್ಷಿಸಿಟ್ಟನು.
ಶಾಸ್ತ್ರಗಳಾದ್ಯಂತ ಸಮತೆ ಹಾಗೂ ವಿವೇಚನೆಯ ತದ್ರೀತಿಯ ಉದಾಹರಣೆಗಳಿವೆ. ಸ್ಪಷ್ಟವಾಗಿ, ಕ್ರೈಸ್ತ ಏಕತೆಯು ವೈವಿಧ್ಯಕ್ಕೆ ಪರವಾನಗಿ ನೀಡುತ್ತದೆ. ನಿಶ್ಚಯವಾಗಿಯೂ, ಆತ್ಮಿಕ ಗುಣಗಳ ಕೊರತೆಯಿರುವಾಗ ಹಿನ್ನೆಲೆಗಳು ಹಾಗೂ ಅಭಿಪ್ರಾಯಗಳ ವೈವಿಧ್ಯವು ಅನೈಕ್ಯಕ್ಕೆ ನಡೆಸಬಲ್ಲದು. (ರೋಮಾಪುರ 16:17, 18) ಆದರೆ ನಾವು ‘ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾದ ಪ್ರೀತಿಯನ್ನು ಧರಿಸಿಕೊಳ್ಳು’ವಾಗ, ನಾವು ಇತರರ ಅಪೂರ್ವ ವ್ಯಕ್ತಿತ್ವಗಳನ್ನು ಸ್ವೀಕರಿಸಲು ಮತ್ತು ಆನಂದಿಸಲು ಕಲಿತುಕೊಳ್ಳುತ್ತೇವೆ.—ಕೊಲೊಸ್ಸೆ 3:14.
“ಆದದರಿಂದ ಕ್ರಿಸ್ತನು ನಿಮ್ಮನ್ನು ಸೇರಿಸಿಕೊಂಡಂತೆ ನೀವು ಸಹ ಒಬ್ಬರನ್ನೊಬ್ಬರು ಸೇರಿಸಿಕೊಂಡು ದೇವರ ಮಹಿಮೆಯನ್ನು ಪ್ರಕಾಶಪಡಿಸಿರಿ,” ಎಂದು ಬೈಬಲು ಹೇಳುತ್ತದೆ. (ರೋಮಾಪುರ 15:7) ದೇವರ ಆತ್ಮದ ಸಹಾಯದಿಂದ, ಸಭೆಯಲ್ಲಿ ಅದ್ವಿತೀಯ ವ್ಯಕ್ತಿತ್ವಗಳ ವೈವಿಧ್ಯದಲ್ಲಿ ಆನಂದಿಸುವಾಗ ಏಕತೆಯನ್ನು ಕಾಪಾಡಿಕೊಳ್ಳುವ ಸೂಕ್ಷ್ಮವಾದ ಸಮತೆಯನ್ನು ಕ್ರೈಸ್ತರು ಸಾಧಿಸಬಲ್ಲರು.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 14 ರಲ್ಲಿರುವ ಚಿತ್ರ]
ಸೃಷ್ಟಿಕರ್ತನು ಮಾನವ ಕುಟುಂಬವನ್ನು ವ್ಯಕ್ತಿತ್ವವಿರದ ಸಮೂಹವಾಗಿ ವೀಕ್ಷಿಸುವುದಿಲ್ಲ
[ಪುಟ 15 ರಲ್ಲಿರುವ ಚಿತ್ರ]
ನಮ್ಮಿಂದ ಮತ್ತು ನಮ್ಮ ಸೃಷ್ಟಿಕರ್ತನಿಂದ ಮಾತ್ರ ಅರ್ಥವಾಗುವ ಅದ್ವಿತೀಯತೆ ನಮ್ಮಲ್ಲಿ ಪ್ರತಿಯೊಬ್ಬರಿಗಿದೆ