ಹದಿವಯಸ್ಕ ಅಪರಾಧಿಗಳು—ಕಾರಣಗಳೇನು?
ಸಾಮಾನ್ಯವಾಗಿ ಬಾಲಾಪರಾಧಿಗಳು ಬಡ ಕುಟುಂಬಗಳಿಂದ ಬಂದವರಾಗಿರುತ್ತಾರೆ, ಆದರೆ “ಒಳ್ಳೆಯ ಮನೆತನ”ದಿಂದ ಬರುವ ಹುಡುಗರು ದುಷ್ಕಾರ್ಯಕ್ಕೆ ಕೈಹಾಕುವುದು ತುಂಬ ಅಪರೂಪದ ವಿಷಯ ಎಂಬ ಜನಪ್ರಿಯ ಅಭಿಪ್ರಾಯ ನಿಮಗಿದೆಯೊ? ಏಷಿಯದಲ್ಲಿನ ಕೆಲವು ಸಂಗತಿಗಳು, ಆ ದೃಷ್ಟಿಕೋನವನ್ನು ಒಪ್ಪುತ್ತವೆಂದು ಕೆಲವರಿಗೆ ಅನಿಸಿತು. “ಈಗ ಪರಿಸ್ಥಿತಿಯು ಹಾಗಿಲ್ಲ. ಏಷಿಯದಾದ್ಯಂತ ಇರುವ ಪೊಲೀಸ್ ಸಂಖ್ಯಾಸಂಗ್ರಹಣಗಳು ಹಾಗೂ ಮೊಕದ್ದಮೆಯ ಕಥೆಗಳು ತೋರಿಸುವುದೇನೆಂದರೆ, ಒಳ್ಳೆಯ ಮನೆತನಗಳಿಂದ ಬರುವ ಅನೇಕ ಮಂದಿ ಹದಿವಯಸ್ಕರು ಕದಿಯುತ್ತಾರೆ, ವಿದ್ವಂಸಕರಾಗುತ್ತಾರೆ, ಅಮಲೌಷಧಗಳನ್ನು ಸೇವಿಸುತ್ತಾರೆ ಮತ್ತು ವೇಶ್ಯೆಯರ ಬಳಿಗೆ ಹೋಗುತ್ತಾರೆ” ಎಂದು ಏಷಿಯ ಮ್ಯಾಗಸಿನ್ ವರದಿಸುತ್ತದೆ.
ಉದಾಹರಣೆಗಾಗಿ, ಜಪಾನಿನಲ್ಲಿ ಘೋರಾಪರಾಧದ ಮೊಕದ್ದಮೆಗೆ ಗುರಿಯಾಗುವ ಎಲ್ಲ ಹದಿವಯಸ್ಕರಲ್ಲಿ ಅರ್ಧದಷ್ಟು ಮಂದಿ, ಮಧ್ಯಮವರ್ಗದ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಬ್ಯಾಂಗ್ಕಾಕ್ನಲ್ಲಿಯೂ ಇದೇ ರೀತಿಯ ಸನ್ನಿವೇಶವಿದೆ. “ಹಿಂದಿನ ಸಮಯಗಳಲ್ಲಿ, ಹಣದ ಕೊರತೆಯ ಕಾರಣ ಹದಿವಯಸ್ಕರು ದುಷ್ಕೃತ್ಯಗಳಿಗೆ ಕೈಹಾಕುತ್ತಿದ್ದರು. ಆದರೆ ಇಂದು, ಇಲ್ಲಿರುವ ಹದಿವಯಸ್ಕರಲ್ಲಿ 50 ಪ್ರತಿಶತಕ್ಕಿಂತಲೂ ಹೆಚ್ಚಿನವರು, ಮಧ್ಯಮವರ್ಗದ ಮನೆತನಗಳಿಂದ ಬಂದವರಾಗಿದ್ದು, ಅವರಿಗೆ ಯಾವುದೇ ರೀತಿಯ ಹಣಕಾಸಿನ ತೊಂದರೆಗಳಿರುವುದಿಲ್ಲ” ಎಂದು ಮ್ಯುಹಿಟ ಟ್ರೈನಿಂಗ್ ಸ್ಕೂಲ್ನ ಮುಖ್ಯಸ್ಥ ಆ್ಯಡಿಸೈ ಅಹಾಪನನ್ ಹೇಳುತ್ತಾರೆ.
ಉದ್ಯೋಗಸ್ಥ ತಾಯಂದಿರು, ವಿವಾಹ ವಿಚ್ಛೇದದ ಪ್ರಮಾಣಗಳಲ್ಲಿ ಹೆಚ್ಚಳ, ಮತ್ತು ಜೀವಿತದ ಕುರಿತಾದ ಪ್ರಾಪಂಚಿಕ ಮನೋವೃತ್ತಿಯೇ ಈ ಸನ್ನಿವೇಶಕ್ಕೆ ಕಾರಣವಾಗಿದೆಯೆಂದು ಕೆಲವರು ಹೇಳುತ್ತಾರೆ. ಸಿಂಗಾಪುರದಲ್ಲಿರುವ ಸಂಸ್ಥಾವಲಂಬಿ ಜನರ ವಸತಿಗೃಹದ ಸಹಾಯಕ ನಿರ್ದೇಶಕರಾದ ಎಡ್ಡಿ ಜೇಕಬ್ ಹೀಗೆ ಹೇಳುತ್ತಾರೆ: “ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದಿರುವ ಕುಟುಂಬಗಳೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ; ಅಂದರೆ, ಹೆತ್ತವರು ವಿವಾಹ ವಿಚ್ಛೇದ ಪಡೆದುಕೊಂಡಿರುವ, ಅಥವಾ ಒಂಟಿ ಹೆತ್ತವರಿರುವ, ಅಥವಾ ಇಬ್ಬರೂ ಹೆತ್ತವರು ಕೆಲಸಮಾಡುತ್ತಿದ್ದು, ಮಕ್ಕಳ ಬಗ್ಗೆ ಅಲಕ್ಷ್ಯ ಮನೋಭಾವವಿರುವ ಕುಟುಂಬಗಳಲ್ಲಿ ಬೆಳೆಯುವ ಮಕ್ಕಳಿಗೆ ಹೀಗೆ ಸಂಭವಿಸುತ್ತದೆ. ಮಕ್ಕಳು ತಮ್ಮ ಮೌಲ್ಯಗಳನ್ನು ಮನೆಯಿಂದಲೇ ಕಲಿಯುತ್ತಾರೆ.”
ಯುವ ಜನರು ಹೆಚ್ಚೆಚ್ಚು ದಂಗೆಕೋರರಾಗಿರುವುದು, ನಮ್ಮ ಸಮಯಗಳ ಒಂದು ವಿಶೇಷ ಗುರುತಾಗಿರುವುದೆಂದು ಬೈಬಲು ಮುಂತಿಳಿಸಿತು. (2 ತಿಮೊಥೆಯ 3:1, 2) ಕುಟುಂಬಗಳ ಆರ್ಥಿಕ ಪರಿಸ್ಥಿತಿಯು ಹೇಗೇ ಇರಲಿ, ಅವು ಒಗ್ಗಟ್ಟಿನಿಂದ ಇರುವುದರ ಮೌಲ್ಯವನ್ನು ಅದೇ ಗ್ರಂಥವು ಕುಟುಂಬಗಳಿಗೆ ಕೊಡಬಲ್ಲದು. ಬೈಬಲು ಪರಿಶೀಲನೆಗೆ ಅರ್ಹವಾದ ಪುಸ್ತಕವಾಗಿದೆ, ಏಕೆಂದರೆ “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.” (2 ತಿಮೊಥೆಯ 3:16) ಏಷಿಯದಲ್ಲಿರುವ ಹಾಗೂ ಇಡೀ ಲೋಕದಾದ್ಯಂತವಿರುವ ಯೆಹೋವನ ಸಾಕ್ಷಿಗಳು, ಕುಟುಂಬವಾಗಿ ಬೈಬಲನ್ನು ಅಭ್ಯಾಸಿಸುವುದರಿಂದ ಬರುವ ಪ್ರತಿಫಲಗಳನ್ನು ಅನುಭವಿಸುತ್ತಿದ್ದಾರೆ. ನೀವು ಸಹ ಬೈಬಲ್ ಅಭ್ಯಾಸ ಮಾಡುವಂತೆ ನಿಮಗೆ ಸಹಾಯ ಮಾಡಲು ಅವರು ಸಂತೋಷಪಡುತ್ತಾರೆ.
[ಪುಟ 42 ರಲ್ಲಿರುವ ಚಿತ್ರ]
ಅಪರಾಧ ಪ್ರವೃತ್ತಿ ಅಥವಾ ದೇವರ ಮೆಚ್ಚುಗೆ—ಇದು ನಿಮ್ಮ ಆಯ್ಕೆಯಾಗಿದೆ