ಬೈಬಲಿನ ದೃಷ್ಟಿಕೋನ
ಕ್ರೈಸ್ತರು ಪ್ರಭು ಭೋಜನವನ್ನು (ಮಾಸ್) ಯಾವ ದೃಷ್ಟಿಕೋನದಲ್ಲಿ ನೋಡಬೇಕು?
“ಕ್ಯಾಥೊಲಿಕನೊಬ್ಬನು ಪ್ರಭು ಭೋಜನಕ್ಕೆ ತಪ್ಪಿಸಿಕೊಳ್ಳುವಲ್ಲಿ, ಅದೊಂದು ಪಾಪವಾಗಿದೆ ಎಂದು ಚರ್ಚು ಪರಿಗಣಿಸುತ್ತದೆ” ಎಂದು ಇತ್ತೀಚೆಗೆ ಪೋಪ್ ಜಾನ್ ಪಾಲ್ II ಪುನರ್ದೃಡೀಕರಿಸಿದರು ಎಂದು ನ್ಯೂ ಯಾರ್ಕ್ ಟೈಮ್ಸ್ ಹೇಳುತ್ತದೆ. ಮತ್ತು ಕ್ಯಾಥೊಲಿಕರು ಸಹ ಇದಕ್ಕೆ ಸಮ್ಮತಿಯನ್ನು ನೀಡುತ್ತಾರೆ. ಪ್ರಭು ಭೋಜನವೆಂದರೇನು? ಚರ್ಚು ಮತ್ತು ಬೈಬಲು ಇದಕ್ಕೆ ಒಮ್ಮತವಾಗಿದೆಯೋ?
ಕ್ಯಾಥೊಲಿಕರು ಪ್ರಶ್ನಿಸಲ್ಪಡುವ ವಿಷಯಗಳು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ, ಕ್ಯಾಥೊಲಿಕ್ ಪಾದ್ರಿ ಮಾರ್ಟಿನ್ ಜೆ. ಸ್ಕಾಟ್ ಪ್ರಭು ಭೋಜನವನ್ನು ಈ ರೀತಿಯಲ್ಲಿ ಅರ್ಥನಿರೂಪಿಸುತ್ತಾರೆ: “ಪ್ರಭು ಭೋಜನವು ಕ್ರಿಸ್ತನ ದೇಹ ಹಾಗೂ ಮಾಂಸದ ರಕ್ತರಹಿತ ಯಜ್ಞವಾಗಿದೆ. ಕಲ್ವೇರಿಯಲ್ಲಿ ಸಂಭವಿಸಿದ್ದು, ಕ್ರಿಸ್ತನ ರಕ್ತಮಯ ಯಜ್ಞವಾಗಿತ್ತು. ಪ್ರಭು ಭೋಜನವು ವಾಸ್ತವವಾಗಿ ಶಿಲುಬೆಯ ಯಜ್ಞವೇ. ಇದು ರೂಪಕಾಲಂಕಾರವಲ್ಲ ಇಲ್ಲವೇ ಅತಿಶಯೋಕ್ತಿಯಲ್ಲ.” ಅವರು ಇನ್ನೂ ಕೂಡಿಸುವುದು: “ಪ್ರಭು ಭೋಜನವು ನಮ್ಮನ್ನು ದೇವರ ಪುತ್ರನ ವೇದಿಗೆ ಕರತಂದು, ದೇವರಿಗೆ ಯಜ್ಞವನ್ನು ಅರ್ಪಿಸಲು ಅವಕಾಶವನ್ನು ಕಲ್ಪಿಸಿಕೊಡುತ್ತದೆ.”
ಪ್ರಭು ಭೋಜನವು ಶಾಸ್ತ್ರೀಯವಾಗಿದೆಯೊ?
ಪ್ರಭು ಭೋಜನವು ಶಾಸ್ತ್ರೀಯ ಬೋಧನೆಯ ಮೇಲೆ ಆಧಾರಿತವಾಗಿದೆ ಎಂದು ಸಂಪ್ರದಾಯಿ ಕ್ಯಾಥೊಲಿಕರು ನಂಬುತ್ತಾರೆ. ಇದಕ್ಕೆ ಪ್ರಮಾಣವನ್ನು ನೀಡುತ್ತಾ, ಅವರು ಕಡೇ ಭೋಜನವೆಂದು ಸಾಮಾನ್ಯವಾಗಿ ಕರೆಯಲ್ಪಡುವ ಸಮಯದಲ್ಲಿ ಯೇಸು ನುಡಿದ ಮಾತುಗಳನ್ನು ಎತ್ತಿತೋರಿಸುತ್ತಾರೆ. ಯೇಸು ತನ್ನ ಅಪೊಸ್ತಲರಿಗೆ ರೊಟ್ಟಿ ಮತ್ತು ದ್ರಾಕ್ಷಾರಸವನ್ನು ಹಂಚಿದಾಗ, ರೊಟ್ಟಿಯ ಕುರಿತಾಗಿ ಅವನು ಹೇಳಿದ್ದು: “ಇದು ನನ್ನ ದೇಹವಾಗಿದೆ.” ದ್ರಾಕ್ಷಾರಸಕ್ಕೆ ಸೂಚಿಸುತ್ತಾ ಹೇಳಿದ್ದು: “ಇದು ನನ್ನ ರಕ್ತವಾಗಿದೆ.” (ಮತ್ತಾಯ 26:26-28)a ಯೇಸು ಈ ಮಾತುಗಳನ್ನು ನುಡಿದಾಗ, ಅವನು ವಾಸ್ತವದಲ್ಲಿ ರೊಟ್ಟಿ ಮತ್ತು ದ್ರಾಕ್ಷಾರಸವನ್ನು ತನ್ನ ದೇಹ ಹಾಗೂ ರಕ್ತವಾಗಿ ಪರಿವರ್ತಿಸಿದನು ಎಂದು ಕ್ಯಾಥೊಲಿಕರು ನಂಬುತ್ತಾರೆ. ಆದರೂ ಸಂಪ್ರದಾಯಿ ಕ್ಯಾಥೊಲಿಕರು ಶಾಸ್ತ್ರವಚನಗಳ ಅಕ್ಷರಾರ್ಥದ ಮೇಲೆ ತೀರ ಅವಲಂಬಿತರಾಗಬಾರದು. ಉದಾಹರಣೆಗೆ, ಯೇಸು ‘ನಾನೇ ನಿಜವಾದ ದ್ರಾಕ್ಷೇಬಳ್ಳಿ’ ಎಂದು ಹೇಳಿದಾಗ ಅವನು ನಿಜವಾಗಿಯೂ ದ್ರಾಕ್ಷೇಬಳ್ಳಿಯಾಗಿ ರೂಪಾಂತರಗೊಂಡನು ಎಂಬುದನ್ನು ಇದು ಅರ್ಥೈಸಲಿಲ್ಲ. (ಯೋಹಾನ 15) ಅದೇ ರೀತಿಯಲ್ಲಿ, ‘ಆ ಬಂಡೆ ಕ್ರಿಸ್ತನೇ’ ಎಂದು ಹೇಳಲ್ಪಡುವಾಗ, ಕ್ರಿಸ್ತನು ನಿಜವಾಗಿಯೂ ಬಂಡೆಯಾಗಿ ಪರಿಣಮಿಸಿದನು ಎಂದು ಇದು ಅರ್ಥೈಸಲಿಲ್ಲ. (1 ಕೊರಿಂಥ 10:4) ಹೀಗೆ, ಮತ್ತಾಯ 26:26-28ರಲ್ಲಿರುವ ವಿಷಯಗಳು, ರೊಟ್ಟಿ ಹಾಗೂ ದ್ರಾಕ್ಷಾರಸವು ಕಡೇ ಭೋಜನದ ಸಮಯದಲ್ಲಿ ಯೇಸುವಿನ ಅಕ್ಷರಾರ್ಥಕ ದೇಹ ಹಾಗೂ ರಕ್ತವಾಗಿ ಮಾರ್ಪಟ್ಟಿತು ಎಂಬುದನ್ನು ರುಜುಪಡಿಸುವುದಿಲ್ಲ.
“ಪರಲೋಕದಿಂದ ಇಳಿದುಬಂದ ಜೀವವುಳ್ಳ ರೊಟ್ಟಿಯು ನಾನೇ; . . . ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ” ಎಂದು ಒಮ್ಮೆ ಯೇಸು ಹೇಳಿದ ವಿಷಯವನ್ನು ಯಾರಾದರೊಬ್ಬರು ಜ್ಞಾಪಿಸಿಕೊಳ್ಳಬಹುದು. (ಯೋಹಾನ 6:51, 54) ಯೇಸುವಿನ ಮಾತಿಗೆ ಕಿವಿಗೊಡುತ್ತಿದ್ದ ಕೆಲವರು ಅವನ ಮಾತುಗಳನ್ನು ಅಕ್ಷರಾರ್ಥವಾಗಿ ಎಣಿಸಿ, ಗಾಬರಿಯಾದರು. (ಯೋಹಾನ 6:60) ಆದರೆ ನಾವು ಹೀಗೆ ಕೇಳಬಹುದು, ಆ ಸಂದರ್ಭದಲ್ಲಿ ಯೇಸು ತನ್ನ ದೇಹವನ್ನು ರೊಟ್ಟಿಯಾಗಿ ಪರಿವರ್ತಿಸಿದನೋ? ಖಂಡಿತವಾಗಿಯೂ ಇಲ್ಲ! ಅವನು ಸಾಂಕೇತಿಕವಾಗಿ ಮಾತಾಡುತ್ತಿದ್ದನು. ಅವನು ತನ್ನನ್ನು ರೊಟ್ಟಿಗೆ ಹೋಲಿಸಿಕೊಂಡನು, ಏಕೆಂದರೆ ತನ್ನ ಯಜ್ಞದ ಮೂಲಕ ಮಾನವಕುಲಕ್ಕೆ ಜೀವವನ್ನು ಕೊಡುವಾತನಾಗಿದ್ದನು. ಯೋಹಾನ 6:35, 40 ಸ್ಪಷ್ಟವಾಗಿ ಹೇಳುವುದೇನೆಂದರೆ, ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವ ಮೂಲಕ ತಿನ್ನುವ ಮತ್ತು ಕುಡಿಯುವ ಕಾರ್ಯಗಳು ಮಾಡಲ್ಪಡುವುವು.
ಪ್ರಭು ಭೋಜನವು ಕ್ಯಾಥೊಲಿಕ್ ಚರ್ಚಿನ ಮುಖ್ಯ ಸಂಸ್ಕಾರವಾಗಿರುವ ಕಾರಣ, ಶಾಸ್ತ್ರವಚನಗಳು ಅದನ್ನು ಬೆಂಬಲಿಸುತ್ತವೆಂದು ಒಬ್ಬನು ನಿರೀಕ್ಷಿಸಬಹುದು. ಆದರೆ ಅವು ಬೆಂಬಲಿಸುವುದಿಲ್ಲ. ದ ಕ್ಯಾಥೊಲಿಕ್ ಎನ್ಸೈಕ್ಲೊಪಿಡೀಯ (1913 ಸಂಪುಟ) ಕಾರಣವನ್ನು ವಿವರಿಸುತ್ತದೆ. ಅದು ಹೇಳಿದ್ದು: “ನಮ್ಮ ಸಿದ್ಧಾಂತದ ಮುಖ್ಯ ಮೂಲವು . . . ಸಂಪ್ರದಾಯವಾಗಿದೆ. ಇದು ಆದಿಯಿಂದಲೂ ಪ್ರಭು ಭೋಜನದ ಯಜ್ಞದ, ಬೇಡಿ ಪಡೆಯುವ [ಕೋರುವ] ಮೌಲ್ಯವನ್ನು ಘೋಷಿಸುತ್ತದೆ.” ಹೌದು, ರೋಮನ್ ಕ್ಯಾಥೊಲಿಕ್ ಪ್ರಭು ಭೋಜನವು ಸಂಪ್ರದಾಯದ ಮೇಲೆ ಅವಲಂಬಿತವಾಗಿದೆ, ಬೈಬಲಿನ ಮೇಲಲ್ಲ.
ಎಷ್ಟೇ ಪ್ರಾಮಾಣಿಕವಾಗಿ ಪ್ರಭು ಭೋಜನವು ನಡೆಸಲ್ಪಡಲಿ, ಬೈಬಲಿಗೆ ವಿರುದ್ಧವಾಗಿರುವ ಸಂಪ್ರದಾಯವನ್ನು ದೇವರು ಅಂಗೀಕರಿಸುವುದಿಲ್ಲ. ಯೇಸು ತನ್ನ ದಿನದಲ್ಲಿದ್ದ ಧಾರ್ಮಿಕ ಮುಖಂಡರನ್ನು ಈ ರೀತಿಯಲ್ಲಿ ನಿಂದಿಸಿದನು: “ನಿಮ್ಮ ಸಂಪ್ರದಾಯದ ನಿಮಿತ್ತ ದೇವರ ವಾಕ್ಯವನ್ನು ನಿರರ್ಥಕ ಮಾಡಿದ್ದೀರಿ.” (ಮತ್ತಾಯ 15:6) ಯೇಸು ದೇವರ ವಾಕ್ಯವನ್ನು ಮೌಲ್ಯವುಳ್ಳದ್ದಾಗಿ ಎಣಿಸಿದ ಕಾರಣ, ಪವಿತ್ರ ಶಾಸ್ತ್ರವಚನಗಳ ಬೆಳಕಿನಲ್ಲಿ ಪ್ರಭು ಭೋಜನದ ಕುರಿತಾದ ಬೋಧನೆಯನ್ನು ನಾವು ಪರೀಕ್ಷಿಸೋಣ.
ಕ್ರಿಸ್ತನು ಯಜ್ಞಾರ್ಪಣೆಯನ್ನು ಮಾಡಿದನು—ಎಷ್ಟು ಬಾರಿ?
ಪ್ರತಿ ಬಾರಿ ಪ್ರಭು ಭೋಜನವನ್ನು ಆಚರಿಸುವಾಗ, ಯೇಸು ಯಜ್ಞಾರ್ಪಿಸಲ್ಪಡುತ್ತಾನೆ ಎಂದು ಕ್ಯಾಥೊಲಿಕ್ ಚರ್ಚು ಕಲಿಸುತ್ತದೆ. ಆದರೆ, ಅವನು ನಿಜವಾಗಿಯೂ ಮೃತನಾಗುವುದಿಲ್ಲ ಮತ್ತು ಹೀಗೆ ಆ ಯಜ್ಞವು ರಕ್ತರಹಿತವಾಗಿದೆ ಎಂದು ಅದು ಪ್ರತಿಪಾದಿಸುತ್ತದೆ. ಈ ದೃಷ್ಟಿಕೋನವನ್ನು ಬೈಬಲು ಒಪ್ಪುತ್ತದೋ? ಇದರ ಕುರಿತಾಗಿ ಇಬ್ರಿಯ 10:12, 14 ಏನು ಹೇಳುತ್ತದೆ ಎಂಬುದನ್ನು ಗಮನಿಸಿರಿ: “ಆದರೆ [ಯೇಸು] ಪಾಪನಿವಾರಣೆಗೋಸ್ಕರ ನಿರಂತರವಾಗಿ ನಿಲ್ಲುವ ಒಂದೇ ಯಜ್ಞವನ್ನು ಸಮರ್ಪಿಸಿ ದೇವರ ಬಲಗಡೆಯಲ್ಲಿ ಕೂತುಕೊಂಡನು. ಪವಿತ್ರರಾಗುತ್ತಿರುವವರನ್ನು ಒಂದೇ ಸಮರ್ಪಣೆಯಿಂದ ನಿರಂತರವಾಗಿ ಸಿದ್ಧಿಗೆ ತಂದಿದ್ದಾನಷ್ಟೆ.”
ಆದರೆ, ಒಬ್ಬ ಪ್ರಾಮಾಣಿಕ ಕ್ಯಾಥೊಲಿಕನು ಹೀಗೆ ಆಕ್ಷೇಪಿಸಬಹುದು: ‘ನಾವೆಲ್ಲರೂ ಅನೇಕ ಬಾರಿ ಪಾಪವನ್ನು ಮಾಡುವ ಕಾರಣ, ಯೇಸು ಅನೇಕ ವೇಳೆ ತನ್ನನ್ನು ನೀಡಿಕೊಳ್ಳಬೇಕಲ್ಲವೋ?’ ಇಬ್ರಿಯ 9:25, 26ರಲ್ಲಿ ಬೈಬಲು ಉತ್ತರವನ್ನು ಕೊಡುತ್ತದೆ. ಅದು ಹೇಳುವುದು: “[ಕ್ರಿಸ್ತನು] ತನ್ನನ್ನು ಅನೇಕ ಸಾರಿ ಸಮರ್ಪಿಸಬೇಕಾಗಿಲ್ಲ . . . ಆದರೆ ಒಂದೇ ಸಾರಿ ಯುಗಗಳ ಸಮಾಪ್ತಿಯಲ್ಲೇ ಆತನು ಪಾಪನಿವಾರಣೆ ಮಾಡಬೇಕೆಂಬ ಉದ್ದೇಶದಿಂದ ತನ್ನನ್ನು ಯಜ್ಞಮಾಡಿಕೊಳ್ಳುವವನಾಗಿ ಪ್ರತ್ಯಕ್ಷನಾದನು.” ಇದನ್ನು ಜಾಗರೂಕವಾಗಿ ಗಮನಿಸಿರಿ: ಕ್ರಿಸ್ತನು “ತನ್ನನ್ನು ಅನೇಕ ಸಾರಿ ಸಮರ್ಪಿಸಬೇಕಾಗಿಲ್ಲ.” ರೋಮಾಪುರ 5:19ರಲ್ಲಿ ಅಪೊಸ್ತಲ ಪೌಲನು ಕಾರಣವನ್ನು ವಿವರಿಸುತ್ತಾನೆ: “ಒಬ್ಬನ [ಆದಾಮ] ಅವಿಧೇಯತ್ವದಿಂದ ಎಲ್ಲರೂ ಹೇಗೆ ಪಾಪಿಗಳಾದರೋ ಹಾಗೆಯೇ ಒಬ್ಬನ [ಯೇಸು] ವಿಧೇಯತ್ವದಿಂದ ಎಲ್ಲರೂ ನೀತಿವಂತರಾಗುವರು.” ಆದಾಮನ ಅವಿಧೇಯತೆಯ ಒಂದೇ ಒಂದು ಕೃತ್ಯವು ನಮ್ಮೆಲ್ಲರನ್ನೂ ಮೃತ್ಯುವಿಗೆ ಅಧೀನರಾಗುವಂತೆ ಮಾಡಿತು. ನಮ್ಮ ಪಾಪಗಳು ಈಗ ಕ್ಷಮಿಸಲ್ಪಡುವಂತೆ ಮತ್ತು ಭವಿಷ್ಯತ್ತಿನಲ್ಲಿ ನಿತ್ಯ ಜೀವವನ್ನು ಅನುಭವಿಸಲಿಕ್ಕಾಗಿ ಆ ಯಜ್ಞದಲ್ಲಿ ನಂಬಿಕೆಯನ್ನಿಡುವವರೆಲ್ಲರಿಗಾಗಿ ಯೇಸುವಿನ ಒಂದೇ ಒಂದು ಪ್ರಾಯಶ್ಚಿತ್ತ ಕೃತ್ಯವು ಆಧಾರವನ್ನು ನೀಡಿತು.
ಯೇಸು ಒಮ್ಮೆ ಯಜ್ಞಾರ್ಪಿಸಲ್ಪಡುತ್ತಾನೋ ಅನೇಕ ಬಾರಿಯೋ ಎಂಬುದರಲ್ಲಿ ವ್ಯತ್ಯಾಸವೇನಿದೆ? ಯೇಸುವಿನ ಯಜ್ಞದ ಮೌಲ್ಯಕ್ಕಾಗಿ ಗಣ್ಯತೆಯನ್ನು ತೋರಿಸುವುದೇ ಮುಖ್ಯವಾದ ವಿಷಯವಾಗಿದೆ. ಅದು ಕೊಡಲ್ಪಟ್ಟದ್ದರಲ್ಲಿಯೇ ಬಹಳ ಅಮೂಲ್ಯವಾದ, ಪರಿಪೂರ್ಣವಾದ, ಎಂದಿಗೂ ಪುನರಾವರ್ತಿಸುವ ಅಗತ್ಯವಿರದ ಅತ್ಯಂತ ಮಹಾನ್ ಕೊಡುಗೆಯಾಗಿದೆ.
ಯೇಸುವಿನ ಯಜ್ಞವು ಜ್ಞಾಪಿಸಿಕೊಳ್ಳುವುದಕ್ಕೆ ಅರ್ಹವಾಗಿದೆ. ಆದರೆ ಆ ಒಂದು ಸಂದರ್ಭವನ್ನು ಜ್ಞಾಪಿಸಿಕೊಳ್ಳುವುದಕ್ಕೂ ಅದನ್ನು ಪುನರಾವರ್ತಿಸುವುದಕ್ಕೂ ವ್ಯತ್ಯಾಸವಿದೆ. ಉದಾಹರಣೆಗೆ, ದಂಪತಿಗಳು ವಿವಾಹದ ವಾರ್ಷಿಕೋತ್ಸವನ್ನು ಆಚರಿಸುತ್ತಿರುವಾಗ, ವಿಧ್ಯುಕ್ತ ಆಚರಣೆಯನ್ನು ಪುನರಾವರ್ತಿಸದೆ, ತಮ್ಮ ವಿವಾಹದ ದಿನವನ್ನು ಜ್ಞಾಪಿಸಿಕೊಳ್ಳಬಹುದು. ಪ್ರತಿ ವರ್ಷ, ಯೆಹೋವನ ಸಾಕ್ಷಿಗಳು ಯೇಸುವಿನ ಮರಣದ ವಾರ್ಷಿಕೋತ್ಸವವನ್ನು ಆಚರಿಸುತ್ತಾರೆ. ಹೀಗೆ ಮಾಡುವುದರ ಮೂಲಕ ಅವರು, “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ”—ಯಜ್ಞಾರ್ಪಿಸುವುದಕ್ಕಾಗಿಯಲ್ಲ—ಎಂಬ ಯೇಸುವಿನ ಆಜ್ಞೆಯನ್ನು ಅನುಸರಿಸುತ್ತಾರೆ. (ಲೂಕ 22:19) ಅಷ್ಟುಮಾತ್ರವಲ್ಲದೆ, ಈ ಕ್ರೈಸ್ತರು ತಮ್ಮ ಜೀವಿತಗಳನ್ನು, ಕ್ರಿಯೆಗಳನ್ನು, ನಂಬಿಕೆಗಳನ್ನು ಪವಿತ್ರ ಶಾಸ್ತ್ರವಚನಗಳಿಗೆ ಹೊಂದಿಕೆಯಲ್ಲಿ ತರುತ್ತಾ, ಯೇಸು ಕ್ರಿಸ್ತನ ಮುಖಾಂತರ ಯೆಹೋವನೊಂದಿಗೆ ಒಂದು ಆದರದ ಸಂಬಂಧವನ್ನು ವಿಕಸಿಸಲಿಕ್ಕಾಗಿ ವರ್ಷದಾದ್ಯಂತ ಪ್ರಯತ್ನಿಸುತ್ತಾರೆ.
ಅನೇಕ ವೇಳೆ ಇದು, ಅವರು ತಮ್ಮ ಆಲೋಚನಾ ರೀತಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದನ್ನು ಅಗತ್ಯಪಡಿಸುತ್ತದೆ. ಮಾನವನ ಸಂಪ್ರದಾಯಕ್ಕಿಂತಲೂ ದೇವರ ವಾಕ್ಯಕ್ಕೆ ನಿಷ್ಠೆಯಿಂದ ಬೆಂಬಲ ಕೊಡುವುದಾದರೆ, ತಮಗೆ ಆಶೀರ್ವಾದವು ಸಿಗುವುದು ಎಂಬ ಜ್ಞಾನವನ್ನು ಪಡೆದುಕೊಳ್ಳುವುದರಲ್ಲಿ ಯೆಹೋವನ ಸಾಕ್ಷಿಗಳು ಆನಂದಿಸುತ್ತಾರೆ. ಮತ್ತು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ, ಒಂದೇ ಬಾರಿ ಸುರಿಸಲ್ಪಟ್ಟ ಯೇಸುವಿನ ಯಜ್ಞಾರ್ಪಿತ ರಕ್ತದಲ್ಲಿ ನಂಬಿಕೆಯನ್ನಿಡುವಲ್ಲಿ, ಅದು ಅವರನ್ನು ಪಾಪದಿಂದ ಶುದ್ಧಮಾಡುವುದು.—1 ಯೋಹಾನ 1:8, 9.
[ಅಧ್ಯಯನ ಪ್ರಶ್ನೆಗಳು]
a ಈ ಲೇಖನದಲ್ಲಿರುವ ಎಲ್ಲ ಶಾಸ್ತ್ರವಚನಗಳ ಉದ್ಧರಣೆಗಳು ಕ್ಯಾಥೊಲಿಕ್ ನ್ಯೂ ಜೆರೂಸಲೇಮ್ ಬೈಬಲ್ನಿಂದ ತೆಗೆಯಲ್ಪಟ್ಟಿವೆ.
[ಪುಟ 19 ರಲ್ಲಿರುವ ಚಿತ್ರ]
ಸೆಂಟ್ ಗೈಲ್ಸ್ (ವಿವರ) ಪ್ರಭು ಭೋಜನ
[ಕೃಪೆ]
Erich Lessing/Art Resource, NY