ಹೊಡೆತಕ್ಕೊಳಗಾಗಿರುವ ಸ್ತ್ರೀಯರಿಗೆ ಸಹಾಯ
ಹಿಂಸಾಚಾರಕ್ಕೆ ಬಲಿಯಾಗಿರುವಂಥ ಸ್ತ್ರೀಯರಿಗೆ ಸಹಾಯಮಾಡಲು ಏನು ಮಾಡಸಾಧ್ಯವಿದೆ? ಮೊದಲಾಗಿ, ಅವರು ಯಾವ ಕಷ್ಟತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಒಬ್ಬನು ಅರ್ಥಮಾಡಿಕೊಳ್ಳಬೇಕಾಗಿದೆ. ಕೆಲವೊಮ್ಮೆ ಪತ್ನಿಯರನ್ನು ಹೊಡೆಯುವ ಗಂಡಂದಿರಿಂದ ಕೇವಲ ಶಾರೀರಿಕ ಹಾನಿಯು ಮಾತ್ರವೇ ಉಂಟುಮಾಡಲ್ಪಡುವುದಿಲ್ಲ. ತಾವು ಅಯೋಗ್ಯರಾಗಿದ್ದೇವೆ ಮತ್ತು ನಿಸ್ಸಹಾಯಕರಾಗಿದ್ದೇವೆ ಎಂಬ ಅನಿಸಿಕೆಯನ್ನು ಇಂತಹ ಸ್ತ್ರೀಯರಲ್ಲಿ ಹುಟ್ಟಿಸಲಿಕ್ಕಾಗಿ, ಮಾತಿನ ಬೆದರಿಕೆಗಳು ಮತ್ತು ಹೆದರಿಸುವಿಕೆಗಳು ಸಹ ಸಾಮಾನ್ಯವಾಗಿ ಒಳಗೂಡಿರುತ್ತವೆ.
ಆರಂಭದ ಲೇಖನದಲ್ಲಿ ಯಾರ ಕಥೆಯು ತಿಳಿಸಲ್ಪಟ್ಟಿದೆಯೋ ಆ ರೊಕ್ಸಾನಾಳನ್ನು ಪರಿಗಣಿಸಿರಿ. ಕೆಲವೊಮ್ಮೆ ಅವಳ ಪತಿ ಚುಚ್ಚು ಮಾತುಗಳಿಂದ ಇರಿಯುತ್ತಾರೆ. ರೊಕ್ಸಾನಾ ಹೀಗೆ ನಿವೇದಿಸುತ್ತಾಳೆ: “ಅವರು ನನ್ನನ್ನು ತುಚ್ಛವಾದ ಹೆಸರುಗಳಿಂದ ಕರೆಯುತ್ತಾರೆ. ಅವರು ಹೀಗನ್ನುತ್ತಾರೆ: ‘ನೀನು ಶಾಲೆಯನ್ನು ಅರ್ಧದಲ್ಲೇ ಬಿಟ್ಟ ದಡ್ಡಿ. ನಾನಿಲ್ಲದೆ ನೀನು ಈ ಮಕ್ಕಳನ್ನು ಹೇಗೆ ಸಾಕಬಲ್ಲೆ? ನೀನು ಸೋಮಾರಿ, ಕೆಲಸಕ್ಕೆ ಬಾರದ ತಾಯಿಯಾಗಿದ್ದೀ. ಒಂದುವೇಳೆ ನೀನು ನನ್ನನ್ನು ಬಿಟ್ಟು ಹೋದರೂ, ಸರಕಾರೀ ಅಧಿಕಾರಿಗಳು ಮಕ್ಕಳನ್ನು ನಿನ್ನ ವಶಕ್ಕೆ ಒಪ್ಪಿಸುತ್ತಾರೆಂದು ನೀನು ನೆನಸಿದ್ದೀಯಾ?’”
ಹಣದ ವಿಷಯದಲ್ಲಿ ಕಟ್ಟುನಿಟ್ಟಾದ ನಿರ್ಬಂಧವನ್ನು ಹಾಕುವ ಮೂಲಕ ರೊಕ್ಸಾನಾಳ ಪತಿ ಅವಳ ಮೇಲಿನ ಹತೋಟಿಯನ್ನು ಕಾಪಾಡಿಕೊಳ್ಳುತ್ತಾನೆ. ಅವಳು ಕಾರನ್ನು ಉಪಯೋಗಿಸಲು ಬಿಡುವುದಿಲ್ಲ, ಮತ್ತು ಅವಳು ಏನು ಮಾಡುತ್ತಿದ್ದಾಳೆ ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ಇಡೀ ದಿನ ಫೋನ್ ಮಾಡುತ್ತಿರುತ್ತಾನೆ. ಒಂದುವೇಳೆ ಅವಳು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವುದಾದರೆ, ಆ ಕೂಡಲೆ ಅವನು ಕೋಪೋದ್ರಿಕ್ತನಾಗುತ್ತಾನೆ. ಇದರ ಪರಿಣಾಮವಾಗಿ, ಎಂದಿಗೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಬಾರದು ಎಂಬ ತೀರ್ಮಾನವನ್ನು ರೊಕ್ಸಾನಾ ಮಾಡಿದ್ದಾಳೆ.
ಈಗ ನೋಡಿರುವಂತೆ, ಪತಿ ಅಥವಾ ಪತ್ನಿಯರ ಮೇಲಿನ ದೌರ್ಜನ್ಯವು ನಿಜವಾಗಿಯೂ ತುಂಬ ಜಟಿಲವಾದ ವಿಷಯವಾಗಿದೆ. ಅಂಥವರಿಗೆ ಉತ್ತೇಜನ ಹಾಗೂ ಸಹಾಯವನ್ನು ನೀಡುವ ಸಲುವಾಗಿ, ಸಹಾನುಭೂತಿಯಿಂದ ಕಿವಿಗೊಡಿರಿ. ಸಾಮಾನ್ಯವಾಗಿ ದೌರ್ಜನ್ಯಕ್ಕೆ ಒಳಗಾಗಿರುವ ವ್ಯಕ್ತಿಗೆ, ತನಗೆ ಏನಾಗುತ್ತಿದೆ ಎಂಬುದರ ಕುರಿತು ಮನಬಿಚ್ಚಿ ಮಾತಾಡುವುದು ತುಂಬ ಕಷ್ಟಕರವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಅಂಥ ವ್ಯಕ್ತಿಯು ತನ್ನದೇ ಆದ ಧಾಟಿಯಲ್ಲಿ ಪರಿಸ್ಥಿತಿಯೊಂದಿಗೆ ವ್ಯವಹರಿಸುತ್ತಿರುವಾಗ, ಅವಳನ್ನು ಬಲಪಡಿಸುವುದೇ ನಿಮ್ಮ ಗುರಿಯಾಗಿರಬೇಕು.
ಹೊಡೆತಕ್ಕೊಳಗಾಗಿರುವ ಕೆಲವು ಸ್ತ್ರೀಯರು ಅಧಿಕಾರಿಗಳ ಸಹಾಯವನ್ನು ಪಡೆದುಕೊಳ್ಳುವ ಅಗತ್ಯವಿರಬಹುದು. ಕೆಲವೊಮ್ಮೆ, ಪೊಲೀಸರ ಮಧ್ಯಬರುವಿಕೆಯಂತಹ ನಿರ್ಣಾಯಕ ಕ್ರಮವು, ದೌರ್ಜನ್ಯ ನಡೆಸುತ್ತಿರುವ ಪುರುಷನು ತನ್ನ ಕೃತ್ಯಗಳ ಗಂಭೀರತೆಯನ್ನು ಅರಿತುಕೊಳ್ಳುವಂತೆ ಮಾಡಸಾಧ್ಯವಿದೆ. ಆದರೂ, ಬಂದೆರಗಿರುವ ವಿಪತ್ತು ಮುಗಿದ ಕೂಡಲೆ, ಅವನ ವರ್ತನಾ ರೀತಿಯನ್ನು ಬದಲಾಯಿಸಲಿಕ್ಕಾಗಿ ಇದ್ದ ಯಾವುದೇ ಪ್ರಚೋದನೆಯು ಸಹ ಮಾಯವಾಗಿಹೋಗುತ್ತದೆ ಎಂಬುದು ಒಪ್ಪಿಕೊಳ್ಳತಕ್ಕದ್ದೇ.
ಹೊಡೆತಕ್ಕೊಳಗಾಗಿರುವ ಪತ್ನಿಯು ತನ್ನ ಪತಿಯನ್ನು ಬಿಟ್ಟುಹೋಗಬೇಕೋ? ಬೈಬಲು ವೈವಾಹಿಕ ಪ್ರತ್ಯೇಕವಾಸವನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಅದೇ ಸಮಯದಲ್ಲಿ, ಹೊಡೆತಕ್ಕೊಳಗಾಗಿರುವ ಒಬ್ಬ ಪತ್ನಿಯು ತನ್ನ ಆರೋಗ್ಯ ಹಾಗೂ ತನ್ನ ಜೀವವನ್ನೇ ಅಪಾಯಕ್ಕೊಡ್ಡುವಂತಹ ಒಬ್ಬ ಪುರುಷನೊಂದಿಗೆ ಉಳಿಯುವಂತೆಯೂ ಅದು ಹಂಗಿಗೊಳಪಡಿಸುವುದಿಲ್ಲ. ಕ್ರೈಸ್ತ ಅಪೊಸ್ತಲ ಪೌಲನು ಬರೆದುದು: “ಹೆಂಡತಿಯು . . . ಒಂದು ವೇಳೆ ಅಗಲಿದರೂ ಪುರುಷಸಹವಾಸವಿಲ್ಲದೆ ಇರಬೇಕು, ಇಲ್ಲವೆ ಗಂಡನ ಸಂಗಡ ಸಮಾಧಾನವಾಗಬೇಕು.” (ಓರೆ ಅಕ್ಷರಗಳು ನಮ್ಮವು.) (1 ಕೊರಿಂಥ 7:10-16) ವಿಪರೀತ ಸನ್ನಿವೇಶಗಳಲ್ಲಿ ಪತಿಪತ್ನಿಯರು ಪ್ರತ್ಯೇಕವಾಗುವುದನ್ನು ಬೈಬಲು ನಿಷೇಧಿಸುವುದಿಲ್ಲವಾದ್ದರಿಂದ, ಈ ವಿಷಯದಲ್ಲಿ ಒಬ್ಬ ಸ್ತ್ರೀಯು ಯಾವ ಹೆಜ್ಜೆಯನ್ನು ತೆಗೆದುಕೊಳ್ಳುತ್ತಾಳೋ ಅದು ಅವಳ ವೈಯಕ್ತಿಕ ನಿರ್ಣಯವಾಗಿರುವುದು. (ಗಲಾತ್ಯ 6:5) ಒಬ್ಬ ಪತ್ನಿಯು ತನ್ನ ಪತಿಯನ್ನು ಬಿಟ್ಟುಹೋಗುವಂತೆ ಯಾರೊಬ್ಬರೂ ಅವಳನ್ನು ಒತ್ತಾಯಿಸಬಾರದು; ಅದೇ ಸಮಯದಲ್ಲಿ, ಹೊಡೆತಕ್ಕೊಳಗಾಗಿರುವ ಒಬ್ಬ ಸ್ತ್ರೀಯ ಆರೋಗ್ಯ, ಜೀವ ಮತ್ತು ಆತ್ಮಿಕತೆಯು ಬೆದರಿಕೆಗೊಳಗಾಗಿರುವಾಗ, ಅವಳು ದೌರ್ಜನ್ಯ ನಡೆಸುತ್ತಿರುವ ಪುರುಷನೊಂದಿಗೇ ಉಳಿಯುವಂತೆ ಯಾರೊಬ್ಬರೂ ಅವಳನ್ನು ಒತ್ತಾಯಿಸಬಾರದು.
ಪತ್ನಿಯರನ್ನು ಹೊಡೆಯುವವರಿಗೆ ಯಾವುದಾದರೂ ನಿರೀಕ್ಷೆ ಇದೆಯೋ?
ಪತ್ನಿಯರ ಮೇಲೆ ದೌರ್ಜನ್ಯ ನಡೆಸುವುದು, ಬೈಬಲ್ ಮೂಲತತ್ತ್ವಗಳ ಉಲ್ಲಂಘನೆಯಾಗಿದೆ. ಎಫೆಸ 4:29, 31ರಲ್ಲಿ ನಾವು ಓದುವುದು: “ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು . . . ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ.”
ಕ್ರಿಸ್ತನ ಹಿಂಬಾಲಕನೆಂದು ಹೇಳಿಕೊಳ್ಳುವ ಒಬ್ಬ ಪತಿಯು ಒಂದುವೇಳೆ ತನ್ನ ಪತ್ನಿಯ ಮೇಲೆ ದೌರ್ಜನ್ಯ ನಡೆಸುವುದಾದರೆ, ತಾನು ತನ್ನ ಪತ್ನಿಯನ್ನು ಪ್ರೀತಿಸುತ್ತೇನೆ ಎಂದು ಅವನು ನಿಜವಾಗಿಯೂ ಹೇಳಲಾರನು. ಒಂದುವೇಳೆ ಅವನು ತನ್ನ ಪತ್ನಿಯನ್ನು ದುರುಪಚರಿಸುವಲ್ಲಿ, ಅವನ ಎಲ್ಲ ಸತ್ಕಾರ್ಯಗಳಿಗೆ ಯಾವ ಬೆಲೆಯಾದರೂ ಇರುವುದೋ? “ಹೊಡೆದಾಡು”ವಂತಹ ಒಬ್ಬ ವ್ಯಕ್ತಿಯು, ಕ್ರೈಸ್ತ ಸಭೆಯಲ್ಲಿ ವಿಶೇಷ ಸುಯೋಗಗಳಿಗೆ ಅರ್ಹನಾಗುವುದಿಲ್ಲ. (1 ತಿಮೊಥೆಯ 3:3; 1 ಕೊರಿಂಥ 13:1-3) ವಾಸ್ತವದಲ್ಲಿ, ಕ್ರೈಸ್ತನೆಂದು ಹೇಳಿಕೊಳ್ಳುವ ಯಾವನೇ ವ್ಯಕ್ತಿಯು, ಆಗಿಂದಾಗ್ಗೆ ಮತ್ತು ಯಾವುದೇ ಪಶ್ಚಾತ್ತಾಪವನ್ನು ತೋರಿಸದೆ ಕೋಪೋದ್ರೇಕಗೊಳ್ಳುತ್ತಾ ಇರುವಲ್ಲಿ, ಅಂಥವನನ್ನು ಕ್ರೈಸ್ತ ಸಭೆಯಿಂದ ಬಹಿಷ್ಕರಿಸಸಾಧ್ಯವಿದೆ.—ಗಲಾತ್ಯ 5:19-21; 2 ಯೋಹಾನ 9, 10.
ಹಿಂಸಾತ್ಮಕ ಸ್ವಭಾವವಿರುವ ಪುರುಷರು ತಮ್ಮ ನಡತೆಯನ್ನು ಬದಲಾಯಿಸಸಾಧ್ಯವಿದೆಯೋ? ಕೆಲವರು ತಮ್ಮ ನಡತೆಯನ್ನು ಬದಲಾಯಿಸಿದ್ದಾರೆ. ಆದರೂ, ಸಾಮಾನ್ಯವಾಗಿ ತನ್ನ ಪತ್ನಿಯನ್ನು ಹೊಡೆಯುವಂಥ ಒಬ್ಬ ವ್ಯಕ್ತಿಯು, (1) ತನ್ನ ನಡತೆಯು ಅಯೋಗ್ಯವಾಗಿದೆ ಎಂಬುದನ್ನು ಒಪ್ಪಿಕೊಳ್ಳುವಲ್ಲಿ, (2) ತನ್ನ ಜೀವನಮಾರ್ಗವನ್ನು ಬದಲಾಯಿಸಲು ಬಯಸುವಲ್ಲಿ, ಮತ್ತು (3) ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸುವಲ್ಲಿ ಮಾತ್ರ, ತನ್ನ ನಡತೆಯನ್ನು ಬದಲಾಯಿಸುವನು. ಬೈಬಲು ಬದಲಾವಣೆಯನ್ನು ಉಂಟುಮಾಡಲಿಕ್ಕಾಗಿರುವ ಪ್ರಬಲ ಪ್ರಭಾವವಾಗಿರಸಾಧ್ಯವಿದೆ ಎಂಬುದನ್ನು ಯೆಹೋವನ ಸಾಕ್ಷಿಗಳು ಕಂಡುಕೊಂಡಿದ್ದಾರೆ. ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನ ಮಾಡುವ ಅನೇಕ ಆಸಕ್ತ ವ್ಯಕ್ತಿಗಳು, ದೇವರಿಗೆ ಸಂತೋಷವನ್ನುಂಟುಮಾಡುವ ಬಲವಾದ ಬಯಕೆಯನ್ನು ಬೆಳೆಸಿಕೊಂಡಿದ್ದಾರೆ. ಯೆಹೋವ ದೇವರ ಕುರಿತು, “ಹಿಂಸಾಚಾರವನ್ನು ಪ್ರೀತಿಸುವ ಯಾವುದೇ ವ್ಯಕ್ತಿಯನ್ನು ಆತನು ಕಟುವಾಗಿ ದ್ವೇಷಿಸುತ್ತಾನೆ” ಎಂಬುದನ್ನು ಈ ಹೊಸ ಬೈಬಲ್ ವಿದ್ಯಾರ್ಥಿಗಳು ತಿಳಿದುಕೊಂಡಿದ್ದಾರೆ. (ಕೀರ್ತನೆ 11:5, NW) ಪತ್ನಿಯನ್ನು ಹೊಡೆಯುವವನು ತನ್ನ ನಡತೆಯನ್ನು ಬದಲಾಯಿಸಬೇಕಾದರೆ, ಅವಳನ್ನು ಹೊಡೆಯದಿರುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಬೇಕಾಗಿದೆ ಎಂಬುದಂತೂ ಸ್ಪಷ್ಟ. ತನ್ನ ಪತ್ನಿಯ ಕಡೆಗೆ ಸಂಪೂರ್ಣವಾಗಿ ಹೊಸ ಮನೋಭಾವವನ್ನು ಬೆಳೆಸಿಕೊಳ್ಳುವುದೂ ಅದರಲ್ಲಿ ಒಳಗೂಡಿದೆ.
ಒಬ್ಬ ಪುರುಷನು ದೇವರ ಜ್ಞಾನವನ್ನು ಪಡೆದುಕೊಂಡಾಗ, ತನ್ನ ಪತ್ನಿಯನ್ನು ಒಬ್ಬ ಸೇವಕಿಯಾಗಿ ಅಲ್ಲ, ಬದಲಾಗಿ ಒಬ್ಬ “ಸಹಕಾರಿ”ಯಾಗಿ ಮತ್ತು ಅವಳನ್ನು ತುಚ್ಛವಾಗಿ ಅಲ್ಲ ಬದಲಾಗಿ ‘ಮಾನಕ್ಕೆ’ ಯೋಗ್ಯಳಾದವಳಾಗಿ ಪರಿಗಣಿಸಲು ಕಲಿಯುತ್ತಾನೆ. (ಆದಿಕಾಂಡ 2:18; 1 ಪೇತ್ರ 3:7) ಅವನು ಸಹಾನುಭೂತಿಯನ್ನು ತೋರಿಸಲು ಮತ್ತು ತನ್ನ ಪತ್ನಿಯ ದೃಷ್ಟಿಕೋನಕ್ಕೆ ಕಿವಿಗೊಡಬೇಕಾದ ಆವಶ್ಯಕತೆಯನ್ನೂ ಗ್ರಹಿಸುತ್ತಾನೆ. (ಆದಿಕಾಂಡ 21:12; ಪ್ರಸಂಗಿ 4:1) ಯೆಹೋವನ ಸಾಕ್ಷಿಗಳು ಏರ್ಪಡಿಸುವಂತಹ ಬೈಬಲ್ ಅಧ್ಯಯನದ ಕಾರ್ಯಕ್ರಮವು, ಅನೇಕ ದಂಪತಿಗಳಿಗೆ ತುಂಬ ಸಹಾಯಮಾಡಿದೆ. ಒಂದು ಕ್ರೈಸ್ತ ಕುಟುಂಬದಲ್ಲಿ ದಬ್ಬಾಳಿಕೆ ನಡೆಸುವವ, ಪೀಡಕ, ಇಲ್ಲವೆ ಗೂಂಡಾ ವ್ಯಕ್ತಿಗೆ ಯಾವುದೇ ಅವಕಾಶವಿಲ್ಲ.—ಎಫೆಸ 5:25, 28, 29.
“ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು.” (ಇಬ್ರಿಯ 4:12) ಹೀಗೆ, ಬೈಬಲಿನಲ್ಲಿರುವ ವಿವೇಕವು, ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸುವಂತೆ ದಂಪತಿಗಳಿಗೆ ಸಹಾಯಮಾಡಬಲ್ಲದು ಮತ್ತು ಅವುಗಳೊಂದಿಗೆ ವ್ಯವಹರಿಸುವ ಧೈರ್ಯವನ್ನೂ ಅವರಿಗೆ ನೀಡಬಲ್ಲದು. ಅದಕ್ಕಿಂತಲೂ ಹೆಚ್ಚಾಗಿ, ಯೆಹೋವನ ಸ್ವರ್ಗೀಯ ರಾಜನು ಸರ್ವ ವಿಧೇಯ ಮಾನವಕುಲದ ಮೇಲೆ ಆಳ್ವಿಕೆ ನಡೆಸುವಾಗ, ಯಾವುದೇ ಹಿಂಸಾಚಾರವಿಲ್ಲದಂಥ ಒಂದು ಲೋಕವನ್ನು ನೋಡುವ ನಿಶ್ಚಿತ ಹಾಗೂ ಸಾಂತ್ವನದಾಯಕ ನಿರೀಕ್ಷೆಯೂ ಬೈಬಲಿನಲ್ಲಿದೆ. ಬೈಬಲು ಹೇಳುವುದು: “ಸಹಾಯಕ್ಕಾಗಿ ಮೊರೆಯಿಡುವ ಬಡವರನ್ನು, ಹಾಗೂ ಬಾಧಿತರನ್ನು ಮತ್ತು ಅಸಹಾಯಕರನ್ನು ಆತನು ಉದ್ಧರಿಸುವನು. ಆತನು ಅವರನ್ನು ದಬ್ಬಾಳಿಕೆಯಿಂದಲೂ ಹಿಂಸಾಚಾರದಿಂದಲೂ ವಿಮೋಚಿಸುವನು.”—ಕೀರ್ತನೆ 72:12, 14, NW. (g01 11/8)
[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]
ಒಂದು ಕ್ರೈಸ್ತ ಕುಟುಂಬದಲ್ಲಿ ದಬ್ಬಾಳಿಕೆ ನಡೆಸುವವ, ಪೀಡಕ, ಇಲ್ಲವೆ ಗೂಂಡಾ ವ್ಯಕ್ತಿಗೆ ಯಾವುದೇ ಅವಕಾಶವಿಲ್ಲ
[ಪುಟ 8ರಲ್ಲಿರುವ ಚೌಕ]
ತಪ್ಪಭಿಪ್ರಾಯಗಳನ್ನು ಸರಿಪಡಿಸುವುದು
• ಹೊಡೆತಕ್ಕೊಳಗಾಗಿರುವ ಪತ್ನಿಯರೇ ತಮ್ಮ ಗಂಡಂದಿರ ಕೃತ್ಯಗಳಿಗೆ ಕಾರಣರಾಗಿದ್ದಾರೆ.
ತಮ್ಮ ಪತ್ನಿಯರೇ ತಮ್ಮನ್ನು ಕೆರಳಿಸಿದರೆಂದು ವಾದಿಸುವ ಮೂಲಕ, ಪತ್ನಿಯರನ್ನು ಹೊಡೆಯುವ ಗಂಡಂದಿರು ತಮ್ಮ ಕೃತ್ಯಗಳಿಗೆ ತಾವೇ ಕಾರಣರೆಂಬುದನ್ನು ಅಲ್ಲಗಳೆಯುತ್ತಾರೆ. ಈ ಹೆಂಡತಿಯೊಂದಿಗೆ ವ್ಯವಹರಿಸುವುದು ತುಂಬ ಕಷ್ಟ, ಆದುದರಿಂದ ಕೆಲವೊಮ್ಮೆ ಅವಳ ಗಂಡನು ತನ್ನ ನಿಯಂತ್ರಣವನ್ನು ಕಳೆದುಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ ಎಂಬ ವಿಚಾರವನ್ನು ಕುಟುಂಬದ ಕೆಲವು ಸ್ನೇಹಿತರು ಸಹ ಒಪ್ಪಿಕೊಳ್ಳಬಹುದು. ಆದರೆ ಇದು ದೌರ್ಜನ್ಯಕ್ಕೆ ಬಲಿಯಾದ ವ್ಯಕ್ತಿಯನ್ನು ದೂಷಿಸಿ, ಹೊಡೆದಾಟಕ್ಕೆ ಮುನ್ನುಗ್ಗುವ ವ್ಯಕ್ತಿಯು ಮಾಡಿದ್ದೇ ಸರಿಯೆಂದು ಸಮರ್ಥಿಸುವುದಕ್ಕೆ ಸಮಾನವಾಗಿದೆ. ನಿಜವಾಗಿ ಹೇಳುವುದಾದರೆ, ಹೊಡೆತಕ್ಕೊಳಗಾಗಿರುವ ಪತ್ನಿಯರು ಅನೇಕವೇಳೆ ತಮ್ಮ ಗಂಡಂದಿರನ್ನು ಸಮಾಧಾನಪಡಿಸಲಿಕ್ಕಾಗಿ ಅಸಾಧಾರಣವಾದ ಪ್ರಯತ್ನಗಳನ್ನು ಮಾಡುತ್ತಾರೆ. ಅಷ್ಟುಮಾತ್ರವಲ್ಲ, ಯಾವುದೇ ಸನ್ನಿವೇಶಗಳ ಕೆಳಗೆ ಒಬ್ಬನು ತನ್ನ ಸಂಗಾತಿಯನ್ನು ಹೊಡೆಯುವುದು ಎಂದೂ ಸರಿಯೆಂದು ಸಮರ್ಥಿಸಲ್ಪಡುವುದಿಲ್ಲ. ಪತ್ನಿಯನ್ನು ಹೊಡೆಯುವವ—ಒಂದು ಮನೋವೈಜ್ಞಾನಿಕ ಪಾರ್ಶ್ವಚಿತ್ರ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ನ್ಯಾಯಾಲಯಗಳಿಂದ ಚಿಕಿತ್ಸೆಗೆ ಕಳುಹಿಸಲ್ಪಟ್ಟ ಪುರುಷರು, ಹಿಂಸಾಚಾರದ ಗೀಳು ಹಿಡಿದವರಾಗಿದ್ದಾರೆ. ಅವರು ತಮ್ಮ ಕೋಪ ಹಾಗೂ ಖಿನ್ನತೆಯನ್ನು ಮನಸ್ಸಿನಿಂದ ಹೊರತೆಗೆಯಲಿಕ್ಕಾಗಿ, ನಿಯಂತ್ರಣವನ್ನು ಪಡೆದುಕೊಳ್ಳುವ ಮಾರ್ಗವಾಗಿ ಮತ್ತು ಘರ್ಷಣೆಗಳನ್ನು ಬಗೆಹರಿಸುವುದಕ್ಕಾಗಿ, ಹಾಗೂ ಒತ್ತಡವನ್ನು ಕಡಿಮೆಮಾಡುವುದಕ್ಕಾಗಿ ಹಿಂಸಾಚಾರವನ್ನು ಉಪಯೋಗಿಸುತ್ತಾರೆ. . . . ಅನೇಕವೇಳೆ, ಹಿಂಸಾಚಾರಕ್ಕೆ ತಾವೇ ಕಾರಣರಾಗಿದ್ದೇವೆ ಎಂಬುದನ್ನು ಅವರು ಒಪ್ಪಿಕೊಳ್ಳುವುದೂ ಇಲ್ಲ ಅಥವಾ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ.”
• ಮದ್ಯಪಾನವು ಒಬ್ಬ ವ್ಯಕ್ತಿಯು ತನ್ನ ಪತ್ನಿಯನ್ನು ಹೊಡೆಯುವಂತೆ ಮಾಡುತ್ತದೆ.
ಕುಡಿತದ ಅಮಲಿನಲ್ಲಿರುವಾಗ ಪುರುಷರು ಹೆಚ್ಚು ಹಿಂಸಾತ್ಮಕ ಮನೋಭಾವದವರಾಗಿರುತ್ತಾರೆ ಎಂಬುದು ಒಪ್ಪತಕ್ಕ ವಿಷಯವೇ. ಆದರೆ, ಮದ್ಯಪಾನದ ಮೇಲೆ ದೋಷಾರೋಪ ಹೊರಿಸುವುದು ಸಮಂಜಸವಾಗಿದೆಯೋ? “ಅಮಲೇರಿದವನಾಗಿರುವುದು, ಪತ್ನಿಯನ್ನು ಹೊಡೆಯುವಂಥ ಒಬ್ಬ ವ್ಯಕ್ತಿಗೆ ತನ್ನ ನಡತೆಗಾಗಿ ತನ್ನನ್ನಲ್ಲ, ಬದಲಾಗಿ ಬೇರೇನನ್ನಾದರೂ ದೂರುವುದಕ್ಕೆ ಒಂದು ಕಾರಣವನ್ನು ಕೊಡುತ್ತದಷ್ಟೇ” ಎಂದು, ಹಿಂಸಾಚಾರವು ಮನೆಯಲ್ಲಿ ಆರಂಭವಾಗುವಾಗ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಕೆ. ಜೆ. ವಿಲ್ಸನ್ ಬರೆಯುತ್ತಾರೆ. ಅವರು ಮುಂದುವರಿಸುವುದು: “ನಮ್ಮ ಸಮಾಜದಲ್ಲಿ, ಅಮಲೇರಿರುವಂಥ ಒಬ್ಬ ವ್ಯಕ್ತಿಯಿಂದ ಮಾಡಲ್ಪಡುವ ಗೃಹ ಹಿಂಸಾಚಾರವು ಹೆಚ್ಚು ಸುಲಭವಾಗಿ ಅರ್ಥಮಾಡಿಕೊಳ್ಳಲ್ಪಡುವಂತೆ ತೋರುತ್ತದೆ. ಯಾರ ಮೇಲೆ ದೌರ್ಜನ್ಯವು ನಡೆಸಲ್ಪಡುತ್ತಿದೆಯೋ ಆ ಸ್ತ್ರೀಯು, ತನ್ನ ಸಂಗಾತಿಯು ದೌರ್ಜನ್ಯ ನಡೆಸುವವನಾಗಿದ್ದಾನೆ ಎಂದಲ್ಲ, ಅದಕ್ಕೆ ಬದಲಾಗಿ ಅವನು ಕುಡುಕನಾಗಿದ್ದಾನೆ ಅಥವಾ ಮದ್ಯವ್ಯಸನಿಯಾಗಿದ್ದಾನೆ ಎಂದು ಪರಿಗಣಿಸಬಲ್ಲಳು.” ವಿಲ್ಸನ್ ಸೂಚಿಸುವಂತೆ, ಇಂತಹ ಪರಿಗಣನೆಯು, “ಒಂದುವೇಳೆ ಆ ಪುರುಷನು ಕುಡಿಯುವುದನ್ನು ನಿಲ್ಲಿಸುವಲ್ಲಿ ಹಿಂಸಾಚಾರವೂ ನಿಂತುಹೋಗಬಹುದು” ಎಂಬ ಸುಳ್ಳು ನಿರೀಕ್ಷೆಯನ್ನು ಒಬ್ಬ ಸ್ತ್ರೀಗೆ ಕೊಡಬಲ್ಲದು.
ಇತ್ತೀಚೆಗೆ, ಕುಡಿಯುವುದು ಮತ್ತು ಪತ್ನಿಯನ್ನು ಹೊಡೆಯುವುದು—ಇವೆರಡೂ ಬೇರೆ ಬೇರೆ ರೀತಿಯ ಸಮಸ್ಯೆಗಳಾಗಿವೆ ಎಂದು ಅನೇಕ ಸಂಶೋಧಕರು ಪರಿಗಣಿಸುತ್ತಾರೆ. ಏನೇ ಆದರೂ, ಅಮಲೌಷಧ ಮತ್ತು ಮದ್ಯಸೇವನೆಯ ದುಶ್ಚಟವಿರುವ ಪುರುಷರಲ್ಲಿ ಅನೇಕರು ತಮ್ಮ ಸಂಗಾತಿಗಳಿಗೆ ಹೊಡೆಯುವುದಿಲ್ಲ. ಪುರುಷರು ಸ್ತ್ರೀಯರಿಗೆ ಹೊಡೆಯುವಾಗ (ಇಂಗ್ಲಿಷ್) ಎಂಬ ಪುಸ್ತಕದ ಲೇಖಕರು ಹೀಗೆ ಬರೆಯುತ್ತಾರೆ: “ಹೊಡೆತಕ್ಕೊಳಗಾಗಿರುವ ಸ್ತ್ರೀಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದರಲ್ಲಿ, ಅವಳನ್ನು ಹೆದರಿಸುವುದರಲ್ಲಿ, ಮತ್ತು ಅವಳನ್ನು ನಿಗ್ರಹಿಸುವುದರಲ್ಲಿ ಪಡೆದುಕೊಳ್ಳುವ ಯಶಸ್ಸಿನ ಮೂಲಕ, ಹೊಡೆಯುವಿಕೆಯು ಮೂಲಭೂತವಾಗಿ ಮುಂದುವರಿಯುತ್ತಾ ಹೋಗುತ್ತದೆ. . . . ಮದ್ಯಪಾನಮಾಡುವ ಹಾಗೂ ಅಮಲೌಷಧವನ್ನು ಸೇವಿಸುವ ದುಶ್ಚಟವು, ಪತ್ನಿಯನ್ನು ಹೊಡೆಯುವಂಥ ವ್ಯಕ್ತಿಯ ಜೀವನಶೈಲಿಯ ಒಂದು ಭಾಗವಾಗಿರುತ್ತದೆ ಅಷ್ಟೇ. ಆದರೆ ಮದ್ಯಪಾನ ಹಾಗೂ ಅಮಲೌಷಧವು ಹಿಂಸಾಚಾರವನ್ನು ಪ್ರಚೋದಿಸುತ್ತದೆ ಎಂದು ಊಹಿಸುವುದು ತಪ್ಪಾಗಿದೆ.”
• ಪತ್ನಿಯನ್ನು ಹೊಡೆಯುವವರು ಎಲ್ಲರೊಂದಿಗೂ ಹಿಂಸಾತ್ಮಕವಾಗಿಯೇ ವರ್ತಿಸುತ್ತಾರೆ.
ಅನೇಕವೇಳೆ ಪತ್ನಿಯನ್ನು ಹೊಡೆಯುವಂಥ ಒಬ್ಬ ವ್ಯಕ್ತಿಯು ಇತರರ ಮನಸ್ಸಿಗೆ ಹಿಡಿಸುವಂಥ ಒಬ್ಬ ಸ್ನೇಹಿತನಾಗಿರುತ್ತಾನೆ. ಅವನಿಗೆ ಎರಡು ರೀತಿಯ ವ್ಯಕ್ತಿತ್ವಗಳಿರುತ್ತವೆ. ಆದುದರಿಂದಲೇ, ಕುಟುಂಬದ ಸ್ನೇಹಿತರು ಅವನು ನಡಿಸುವ ಹಿಂಸಾಚಾರದ ಕೃತ್ಯಗಳನ್ನು ನಂಬಲಸಾಧ್ಯವಾದದ್ದೆಂದು ಕಂಡುಕೊಳ್ಳಬಹುದು. ಆದರೂ, ಪತ್ನಿಯನ್ನು ಹೊಡೆಯುವವನು, ಅವಳ ಮೇಲೆ ದಬ್ಬಾಳಿಕೆ ನಡೆಸುವ ಒಂದು ಮಾರ್ಗದೋಪಾದಿ ಪಾಶವೀಯತೆಯನ್ನು ಆಯ್ಕೆಮಾಡಿಕೊಂಡಿರುತ್ತಾನೆ ಎಂಬುದಂತೂ ಸತ್ಯ.
• ಸ್ತ್ರೀಯರು ತಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ಆಕ್ಷೇಪಿಸುವುದಿಲ್ಲ.
ತಪ್ಪಿಸಿಕೊಳ್ಳುವ ಮಾರ್ಗವೇ ಇಲ್ಲದಿರುವಂತಹ ಒಬ್ಬ ಸ್ತ್ರೀಯ ನಿಸ್ಸಹಾಯಕ ಸನ್ನಿವೇಶವನ್ನು ಅರ್ಥಮಾಡಿಕೊಳ್ಳದಿರುವುದರಿಂದ ಈ ರೀತಿಯ ಕಲ್ಪನೆಯು ಉದಯವಾಗಿರಬಹುದು. ಹೊಡೆತಕ್ಕೊಳಗಾಗುವಂಥ ಒಬ್ಬ ಪತ್ನಿಗೆ ಅವಳ ಸ್ನೇಹಿತರು ಒಂದೆರಡು ವಾರಗಳ ವರೆಗೆ ಆಶ್ರಯವನ್ನು ನೀಡಬಹುದು, ಆದರೆ ತದನಂತರ ಅವಳು ಏನು ಮಾಡುವಳು? ಒಂದು ಉದ್ಯೋಗವನ್ನು ಕಂಡುಕೊಳ್ಳುವುದು, ಬಾಡಿಗೆ ನೀಡುವುದು ಮತ್ತು ಮಕ್ಕಳನ್ನು ನೋಡಿಕೊಳ್ಳುವಂತಹ ಪ್ರತೀಕ್ಷೆಗಳು ಅವಳನ್ನು ಎದೆಗುಂದಿಸಬಹುದು. ಅಷ್ಟುಮಾತ್ರವಲ್ಲ, ಮಕ್ಕಳೊಂದಿಗೆ ಮನೆಬಿಟ್ಟುಹೋಗುವುದನ್ನು ಕಾನೂನು ಸಹ ನಿಷೇಧಿಸಬಹುದು. ಕೆಲವು ಸ್ತ್ರೀಯರು ಮನೆಬಿಟ್ಟುಹೋಗಲು ಪ್ರಯತ್ನಿಸಿದ್ದಾರಾದರೂ, ಅವರನ್ನು ಬೆನ್ನಟ್ಟಿಕೊಂಡು ಹೋಗಿ ಹಿಡಿಯಲಾಗಿದೆ ಮತ್ತು ಒತ್ತಾಯದಿಂದ ಅಥವಾ ಮರುಳುಮಾಡಲ್ಪಟ್ಟು ಹಿಂದೆ ಕರೆತರಲಾಗಿದೆ. ಇದನ್ನೆಲ್ಲಾ ಅರ್ಥಮಾಡಿಕೊಳ್ಳಲಾರದಂಥ ಸ್ನೇಹಿತರು, ಅಂತಹ ಸ್ತ್ರೀಯರು ದೌರ್ಜನ್ಯವನ್ನು ಆಕ್ಷೇಪಿಸುವುದೇ ಇಲ್ಲ ಎಂಬ ತಪ್ಪಭಿಪ್ರಾಯವನ್ನು ವ್ಯಕ್ತಪಡಿಸಬಹುದು.