ಸಮಾಧಿಗಳು ಪುರಾತನ ನಂಬಿಕೆಗಳ ಕುರಿತಾದ ಮಾಹಿತಿಯನ್ನು ಒದಗಿಸುತ್ತವೆ
ನೀವು ಸಾವಿರಾರು ವರ್ಷಗಳ ಹಿಂದೆ ಜೀವಿಸುತ್ತಿದ್ದೀರೆಂದು ಊಹಿಸಿಕೊಳ್ಳಿರಿ. ಬ್ಯಾಬಿಲೋನಿಯದ ಸುಮೇರ್ನಲ್ಲಿ ತುಂಬ ಏಳಿಗೆಹೊಂದುತ್ತಿರುವ ಊರ್ ಎಂಬ ಪಟ್ಟಣದಲ್ಲಿ ನೀವಿದ್ದೀರಿ. ಸುಮೇರಿಯನರ ಒಂದು ದೊಡ್ಡ ಮೆರವಣಿಗೆಯು ಪಟ್ಟಣದಿಂದ ಹೊರಟು ಸ್ಮಶಾನವನ್ನು ಪ್ರವೇಶಿಸಿದೆ, ಮತ್ತು ಈಗ ಒಂದು ಇಳಿಜಾರಿನಲ್ಲಿ ಸಾಗುತ್ತಾ, ಇತ್ತೀಚಿಗೆ ಮೃತಪಟ್ಟ ರಾಜನೊಬ್ಬನ ಸಮಾಧಿಯೊಳಗೆ ಹೋಗುತ್ತಿದೆ. ಆ ಸಮಾಧಿಯ ಗೋಡೆಗಳಿಗೆ ಮತ್ತು ನೆಲಕ್ಕೆ ಚಾಪೆಗಳು ಅಂಟಿಸಲ್ಪಟ್ಟಿವೆ, ಹಾಗೂ ಆ ಕೊಠಡಿಯು ಶೋಭಾಯಮಾನವಾದ ಸುಮೇರಿಯನ್ ಕಲೆಯಿಂದ ಅಲಂಕರಿಸಲ್ಪಟ್ಟಿದೆ. ಸಮಾಧಿಯೊಳಗೆ ಹೋಗುತ್ತಿರುವ ಸೈನಿಕರು, ಸೇವಕರು ಮತ್ತು ಸ್ತ್ರೀಯರನ್ನು ಒಳಗೊಂಡ ಮೆರವಣಿಗೆಯೊಂದಿಗೆ ಸಂಗೀತಗಾರರು ಸಹ ಜೊತೆಗೂಡಿದ್ದಾರೆ. ಅವರೆಲ್ಲರೂ ತುಂಬ ಆಡಂಬರದ ಉಡಿಗೆತೊಡಿಗೆಯನ್ನು ಧರಿಸಿ ದೇದೀಪ್ಯಮಾನವಾಗಿ ಕಾಣುತ್ತಿದ್ದಾರೆ. ಅಧಿಕಾರಿಗಳು ಹೆಮ್ಮೆಯಿಂದ ತಮ್ಮ ಸ್ಥಾನಗಳ ಬಿರುದುಪದಕಗಳನ್ನು ಧರಿಸಿಕೊಂಡಿದ್ದಾರೆ. ಈ ವರ್ಣರಂಜಿತ ಗುಂಪಿನಲ್ಲಿ, ಎತ್ತುಗಳು ಅಥವಾ ಕತ್ತೆಗಳಿಂದ ಎಳೆಯಲ್ಪಡುತ್ತಿದ್ದು ಪುರುಷರು ಓಡಿಸುತ್ತಿರುವ ರಥಗಳಿವೆ ಮತ್ತು ಅಶ್ವಪಾಲರು ಕುದುರೆಗಳ ಪಕ್ಕದಲ್ಲೇ ನಡೆಯುತ್ತಿದ್ದಾರೆ. ಇವರೆಲ್ಲರೂ ತಮ್ಮ ತಮ್ಮ ಸ್ಥಳಗಳಲ್ಲಿ ನಿಲ್ಲುತ್ತಾರೆ, ಮತ್ತು ಸಂಗೀತವಾದನದೊಂದಿಗೆ ಒಂದು ಧಾರ್ಮಿಕ ಸಂಸ್ಕಾರವು ನಡೆಸಲ್ಪಡುತ್ತದೆ.
ಧಾರ್ಮಿಕ ಕಾರ್ಯಕಲಾಪಗಳು ಮುಗಿದ ಬಳಿಕ ಸಂಗೀತಗಾರನಿಂದ ಹಿಡಿದು ಸೇವಕನ ವರೆಗೆ ಪ್ರತಿಯೊಬ್ಬರು, ಈ ಸಮಾರಂಭಕ್ಕೆ ಬರುವಾಗ ತಮ್ಮೊಂದಿಗೆ ತಂದಿದ್ದ ಜೇಡಿಮಣ್ಣಿನ, ಕಲ್ಲಿನ ಅಥವಾ ಲೋಹದ ಚಿಕ್ಕ ಕಪ್ಪನ್ನು ತೆಗೆದುಕೊಂಡು ಅದನ್ನು ಒಂದು ತಾಮ್ರದ ಪಾತ್ರೆಯಲ್ಲಿ ಅದ್ದಿ, ವಿಶೇಷವಾಗಿ ತಯಾರಿಸಲ್ಪಟ್ಟಿರುವ ದ್ರವವನ್ನು ಕುಡಿಯುತ್ತಾರೆ. ತದನಂತರ ಎಲ್ಲರೂ ವ್ಯವಸ್ಥಿತ ರೀತಿಯಲ್ಲಿ ಕೆಳಗೆ ಮಲಗುತ್ತಾರೆ, ತಮ್ಮ ಚಾಪೆಗಳ ಮೇಲೆ ಆರಾಮವಾಗಿ ಮೈಚಾಚುತ್ತಾರೆ, ನಿದ್ರೆಗೆ ಜಾರಿ ಸಾಯುತ್ತಾರೆ. ಕೂಡಲೆ ಯಾರಾದರೊಬ್ಬರು ಪ್ರಾಣಿಗಳನ್ನು ಹತಿಸುತ್ತಾರೆ. ಕೆಲಸಗಾರರು ಆ ಸುರಂಗದ ಹಾದಿಯನ್ನು ಮಣ್ಣಿನಿಂದ ತುಂಬಿಸಿ, ಸಮಾಧಿಯನ್ನು ಮುಚ್ಚಿಬಿಡುತ್ತಾರೆ. ಆ ಸುಮೇರಿಯನರು ನಂಬುವಂತೆ, ಅವರ ರಾಜ-ದೇವನು ಈಗ ಹೂಳಲಾಗಿರುವ ಅವನ ರಥದಲ್ಲಿ ತನ್ನ ನಿಷ್ಠಾವಂತ ಸೇವಕರು ಹಾಗೂ ಸೈನಿಕರೊಂದಿಗೆ ಕಣ್ಣುಕೋರೈಸುವಷ್ಟು ಪ್ರಭಾವಶೀಲ ರೀತಿಯಲ್ಲಿ ಮುಂದಿನ ಲೋಕಕ್ಕೆ ಪ್ರಯಾಣಿಸುತ್ತಿದ್ದಾನೆ.
ಸರ್ ಲೆನರ್ಡ್ ವೂಲೀ ಎಂಬ ಪುರಾತತ್ತ್ವಜ್ಞನು ದಕ್ಷಿಣ ಇರಾಕ್ನಲ್ಲಿ ಕೆಲಸಮಾಡುತ್ತಿದ್ದಾಗ, ಮೇಲೆ ವರ್ಣಿಸಲ್ಪಟ್ಟಿರುವಂಥದ್ದೇ ರೀತಿಯ ರಾಜಮನೆತನದ 16 ಸಮಾಧಿಗಳನ್ನು ಪುರಾತನ ಊರ್ ಪಟ್ಟಣದ ಸ್ಮಶಾನದಲ್ಲಿ ಕಂಡುಕೊಂಡನು. ಇದು ತೀರ ಘೋರವಾಗಿದ್ದರೂ ಗಮನಾರ್ಹವಾದ ಕಂಡುಹಿಡಿತವಾಗಿತ್ತು. “ಮೆಸಪೊಟೇಮಿಯದ ಪ್ರಾಕ್ತನಶಾಸ್ತ್ರದಲ್ಲೇ ಸರಿಸಾಟಿಯಿಲ್ಲದ್ದಾಗಿ ಉಳಿದಿರುವ ಈ ಸಮಾಧಿಗಳಲ್ಲಿರುವ ಸಂಪತ್ತಿನಲ್ಲಿ ಅತ್ಯಂತ ಪ್ರಸಿದ್ಧವಾದ ಸುಮೇರಿಯನ್ ಕಲಾ ವಸ್ತುಗಳು ಒಳಗೂಡಿದ್ದು, ಈಗ ಅವು ಬ್ರಿಟಿಷ್ ಮ್ಯೂಸಿಯಮ್ನಲ್ಲಿ ಹಾಗೂ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯ ಮ್ಯೂಸಿಯಮ್ನಲ್ಲಿ ಪ್ರದರ್ಶನಕ್ಕಿಡಲ್ಪಟ್ಟಿವೆ” ಎಂದು ಸಮಾಧಿಗಳು, ಗೋರಿಗಳು ಮತ್ತು ಮಮಿಗಳು (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಪಾಲ್ ಬಾನ್ ಬರೆದನು.
ಆದರೆ, ಪುರಾತನ ಊರ್ ಪಟ್ಟಣದ ಸಮಾಧಿಗಳು ಅಸಾಮಾನ್ಯವಾದವುಗಳೇನಾಗಿರಲಿಲ್ಲ—ಮಾನವರ ಹಾಗೂ ಪ್ರಾಣಿಗಳ ಬಲಿಯಂಥ ಭೀಕರ ಅಂಶಗಳಲ್ಲಿ ಸಹ ಅವು ಅದ್ವಿತೀಯವಾಗಿರಲಿಲ್ಲ. ಅನೇಕ ಪುರಾತನ ನಾಗರಿಕತೆಗಳಲ್ಲಿ, ಕುಲೀನರು ಮತ್ತು ರಾಜಮನೆತನದವರು ತಮ್ಮ ಮರಣ ಹಾಗೂ ಮರಣೋತ್ತರ ಜೀವನದ ಸಂಬಂಧದಲ್ಲಿ ಅತ್ಯಧಿಕ ಪ್ರಮಾಣದ ಪ್ರಯತ್ನ ಮತ್ತು ಸಂಪನ್ಮೂಲಗಳನ್ನು ವ್ಯಯಿಸಿದರು—ಕೆಲವೊಮ್ಮೆ ಇದರಲ್ಲಿ ತೀರ ಕ್ರೂರವಾದ ವಿಷಯಗಳೂ ಒಳಗೂಡಿರುತ್ತಿದ್ದವು. ಕಲಾತ್ಮಕ ವೈಭವದಿಂದ ಕೂಡಿದ್ದು ಧನಸಂಪತ್ತುಗಳಿಂದ ತುಂಬಿದ್ದ ಅವರ ಸಮಾಧಿಗಳು ಅನೇಕವೇಳೆ ಬದುಕುತ್ತಿರುವವರ ಅರಮನೆಗಳಿಗಿಂತ ಮಿಗಿಲಾಗಿರುತ್ತಿದ್ದವು. ಆದರೆ, ಇಂದು ಆ ಸಮಾಧಿಗಳು ಹಾಗೂ ನಿರಾಡಂಬರವಾದ ಇತರ ಗೋರಿಗಳು ಗತಕಾಲದ ಕುರಿತಾದ ಮಾಹಿತಿಯನ್ನು ಒದಗಿಸುತ್ತಾ ಪುರಾತನ ಜನರ ಹಾಗೂ ಅಳಿದುಹೋಗಿರುವ ನಾಗರಿಕತೆಗಳ ನಂಬಿಕೆಗಳು, ಸಂಸ್ಕೃತಿ, ಕಲಾತ್ಮಕ ಹಾಗೂ ತಾಂತ್ರಿಕ ಕೌಶಲಗಳನ್ನು ಪರೀಕ್ಷಿಸುವಂತೆ ನಮಗೆ ಅವಕಾಶ ಮಾಡಿಕೊಡುತ್ತವೆ.
ಇತರರ ಜೊತೆಗೂಡಿ ವೈಭವದಲ್ಲಿ ಕ್ಷಯಿಸುವುದು
ಇಸವಿ 1974ರಲ್ಲಿ, ಚೀನಾದಲ್ಲಿರುವ ಶಿಯೊನ್ ಪಟ್ಟಣದ ಹತ್ತಿರ ರೈತರು ಒಂದು ಬಾವಿಯನ್ನು ತೋಡುತ್ತಿದ್ದರು. ಆದರೆ ನೀರನ್ನು ಕಂಡುಕೊಳ್ಳುವುದಕ್ಕೆ ಬದಲಾಗಿ ಅವರು ಜೇಡಿಮಣ್ಣಿನ ಮನುಷ್ಯಾಕೃತಿಗಳು, ಕಂಚಿನ ಅಡ್ಡಬಿಲ್ಲು ಯಂತ್ರವಿನ್ಯಾಸಗಳು ಮತ್ತು ಬಾಣದತುದಿಯ ಅವಶೇಷಗಳನ್ನು ಕಂಡುಕೊಂಡರು. ಆಕಸ್ಮಿಕವಾಗಿ ಅವರು ಸಜೀವ ಗಾತ್ರಕ್ಕಿಂತಲೂ ದೊಡ್ಡದಾದ 7,000 ಜೇಡಿಮಣ್ಣಿನ ಸೈನಿಕರು ಮತ್ತು ಕುದುರೆಗಳಿಂದ ರಚಿತವಾಗಿದ್ದ, 2,100 ವರ್ಷದಷ್ಟು ಹಳೆಯ ಕಂದುಗೆಂಪು ಬಣ್ಣದ ಜೇಡಿಮಣ್ಣಿನ ಚಿನ್ ಸೇನಾದಳವನ್ನು ಕಂಡುಹಿಡಿದರು—ಎಲ್ಲರೂ ಮಿಲಿಟರಿ ಸೈನ್ಯವ್ಯೂಹವನ್ನು ರಚಿಸಿ ನಿಂತಿರುವಂತೆಯೇ ಹೂಳಲ್ಪಟ್ಟಿದ್ದರು! ಚೀನಾದಲ್ಲಿರುವ ರಾಜಮನೆತನದ ಅತಿ ದೊಡ್ಡ ಸಮಾಧಿಯ ಒಂದು ಭಾಗವಾಗಿರುವ ಈ ಜೇಡಿಮಣ್ಣಿನ ಚಿನ್ ಸೇನಾದಳವು, ಸಾ.ಶ.ಪೂ. 221ರಲ್ಲಿ ಚೀನಾದ ಪ್ರತಿಸ್ಪರ್ಧಿ ರಾಜ್ಯಗಳನ್ನು ಒಂದುಗೂಡಿಸಿದ ಚಿನ್ ಶರ್ ಹ್ವಾಂಗ್ ಡೇ ಎಂಬ ಚಕ್ರವರ್ತಿಯಿಂದ ಈ ಹೆಸರನ್ನು ಪಡೆದುಕೊಂಡಿದೆ.
ಚಿನ್ನ ಸಮಾಧಿ ಸೌಧವನ್ನು ಭೂಗತ ಅರಮನೆಯಾಗಿ ವರ್ಣಿಸಸಾಧ್ಯವಿದೆ. ಆದರೆ ಅವನನ್ನು ಜೇಡಿಮಣ್ಣಿನ ಸೇನಾದಳದೊಂದಿಗೆ ಏಕೆ ಹೂತುಹಾಕಲಾಗಿತ್ತು? ಕ್ವಿನ್ ಜೇಡಿಮಣ್ಣಿನ ಸೇನಾದಳ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಸಾನ್ ವನ್ಲೀ ವಿವರಿಸುವಂತೆ, ಚಿನ್ನ “ಸಮಾಧಿ ಸೌಧವು ಕ್ವಿನ್ ಚಕ್ರಾಧಿಪತ್ಯದ ಪ್ರತೀಕವಾಗಿದೆ [ಮತ್ತು] ಕ್ವಿನ್ ಶರ್ ಹ್ವಾಂಗ್ಡಿ [ಚಿನ್ ಶರ್ ಹ್ವಾಂಗ್ ಡೇ] ಬದುಕಿದ್ದಾಗ ಆನಂದಿಸಿದ್ದ ಸಕಲ ವೈಭವ ಮತ್ತು ಅಧಿಕಾರವನ್ನು ಅವನ ಮರಣಾನಂತರವೂ ಅವನಿಗೆ ಒದಗಿಸುವ ಉದ್ದೇಶವುಳ್ಳದ್ದಾಗಿತ್ತು.” ಈಗ ಈ ಸಮಾಧಿಯು, ಹತ್ತಿರದಲ್ಲೇ ಇರುವ 400 ಸಮಾಧಿಗಳು ಹಾಗೂ ಕುಳಿಗಳನ್ನು ಒಳಗೂಡಿರುವಂಥ ವಿಸ್ತಾರವಾದ ಒಂದು ಮ್ಯೂಸಿಯಮ್ನ ಭಾಗವಾಗಿದೆ.
ಈ ಸಮಾಧಿಯನ್ನು ಕಟ್ಟಲಿಕ್ಕಾಗಿ, “ಚಕ್ರಾಧಿಪತ್ಯದ ಎಲ್ಲ ಭಾಗಗಳಿಂದಲೂ 7,00,000 ಮಂದಿ ಪುರುಷರು ಅಧಿಕೃತವಾಗಿ ಸೇರಿಸಿಕೊಳ್ಳಲ್ಪಟ್ಟರು” ಎಂದು ಸಾನ್ ತಿಳಿಸುತ್ತಾನೆ. ಸಾ.ಶ.ಪೂ. 210ರಲ್ಲಿ ಚಿನ್ ಮರಣಪಟ್ಟ ಬಳಿಕವೂ ನಿರ್ಮಾಣಕಾರ್ಯವು ಮುಂದುವರಿಯಿತು ಮತ್ತು ಒಟ್ಟು 38 ವರ್ಷಗಳ ವರೆಗೆ ನಡೆಯಿತು. ಆದರೆ ಹೂಳಲ್ಪಟ್ಟ ಚಿನ್ನ ಸಹಚರರಲ್ಲಿ ಎಲ್ಲರೂ ಜೇಡಿಮಣ್ಣಿನ ಬೊಂಬೆಗಳಾಗಿರಲಿಲ್ಲ. ಬಂಜೆಯರಾಗಿದ್ದ ಚಿನ್ನ ಉಪಪತ್ನಿಯರು ಸಹ ಅವನೊಂದಿಗೆ ಹೂಳಲ್ಪಡಬೇಕು ಎಂದು ಚಿನ್ನ ಉತ್ತರಾಧಿಕಾರಿಯು ಆಜ್ಞೆಯನ್ನು ಹೊರಡಿಸಿದನು. ಇದರ ಫಲಿತಾಂಶವಾಗಿ “ಅಪಾರ” ಸಂಖ್ಯೆಯ ಜನರು ಮರಣಪಟ್ಟರು ಎಂದು ಇತಿಹಾಸಗಾರರು ತಿಳಿಸುತ್ತಾರೆ. ಇಂಥ ರೂಢಿಗಳು ಬೇರೆ ದೇಶಗಳಲ್ಲೂ ಅನುಸರಿಸಲ್ಪಡುತ್ತಿದ್ದವು.
ಮೆಕ್ಸಿಕೊ ಸಿಟಿಯ ಈಶಾನ್ಯ ದಿಕ್ಕಿನಲ್ಲಿ ಪುರಾತನ ಟೇಓಟೀವಾಕಾನ್ ನಗರದ ಅವಶೇಷಗಳಿವೆ. ಈ ನಗರದಲ್ಲಿ ‘ಮೃತರ ಬೀದಿ’ (ಸ್ಟ್ರೀಟ್ ಆಫ್ ದ ಡೆಡ್) ಎಂಬ ಬೀದಿಯಿತ್ತು. ಈ ಮುಂಚೆ ಉಲ್ಲೇಖಿಸಲ್ಪಟ್ಟಿರುವ ಬಾನ್ ಬರೆಯುವುದು: “ಜಗತ್ತಿನಲ್ಲೇ ಅತಿ ಪ್ರಸಿದ್ಧ ವಾಸ್ತುಶಿಲ್ಪೀಯ ಸ್ಮಾರಕಗಳಲ್ಲಿ ಕೆಲವು ಈ ಬೀದಿಯುದ್ದಕ್ಕೂ ಇವೆ.” ಇವುಗಳಲ್ಲಿ ಸಾ.ಶ. ಮೊದಲನೆಯ ಶತಮಾನದಲ್ಲಿ ಕಟ್ಟಲಾಗಿದ್ದ ಸೂರ್ಯನ ಪಿರಮಿಡ್ ಮತ್ತು ಚಂದ್ರನ ಪಿರಮಿಡ್ ಹಾಗೂ ಕೆಟ್ಸಲ್ಕ್ವಾಸಲ್ನ ದೇವಾಲಯದ ಅವಶೇಷಗಳು ಸಹ ಒಳಗೂಡಿವೆ.
ಸೂರ್ಯನ ಪಿರಮಿಡ್ನ ಒಳಭಾಗವು, ಬಹುಶಃ ಯಾಜಕರೊಂದಿಗೆ ಉನ್ನತ ಅಂತಸ್ತಿನ ವ್ಯಕ್ತಿಗಳನ್ನು ಹೂಣಿಡಲಿಕ್ಕಾಗಿದ್ದ ಕೊಠಡಿಯಂತೆ ತೋರುತ್ತದೆ. ಸಮೀಪದಲ್ಲಿರುವ ಸಾಮೂಹಿಕ ಗೋರಿಗಳಲ್ಲಿ ಕಂಡುಕೊಳ್ಳಲ್ಪಟ್ಟಿರುವ ಮಾನವ ಕಳೇಬರಗಳು, ಪಿರಮಿಡ್ನ ಒಳಗಿರುವವರನ್ನು ಸಂರಕ್ಷಿಸಲಿಕ್ಕಾಗಿ ರಣಭಟರನ್ನು ಬಲಿಕೊಟ್ಟಿದ್ದಿರಸಾಧ್ಯವಿದೆ ಎಂಬುದನ್ನು ಸೂಚಿಸುತ್ತವೆ. ವಿಶಿಷ್ಟ ರೀತಿಯ ಹೂಳುವಿಕೆಗಳು, ಈ ನಿವೇಶನದಲ್ಲಿ ಸುಮಾರು 200 ಜನರ ಕಳೇಬರಗಳು ಇವೆ ಮತ್ತು ಇವುಗಳಲ್ಲಿ ಈ ಸ್ಮಾರಕಗಳ ಉದ್ಘಾಟನಾ ಕಾರ್ಯಕ್ರಮದ ಭಾಗವಾಗಿ ಬಲಿಕೊಡಲ್ಪಟ್ಟಿದ್ದಿರಬಹುದಾದ ಮಕ್ಕಳ ಕಳೇಬರಗಳು ಸಹ ಸೇರಿವೆ ಎಂಬುದನ್ನು ಪುರಾತತ್ತ್ವಜ್ಞರು ನಂಬುವಂತೆ ಮಾಡಿದವು.
ದೋಣಿಯ ಮೂಲಕ ಇಲ್ಲವೆ ಕುದುರೆ ಸವಾರಿಯ ಮೂಲಕ ಮರಣೋತ್ತರ ಜೀವನವನ್ನು ಪ್ರವೇಶಿಸುವುದು
ಸುಮಾರು 1,000 ವರ್ಷಗಳ ಹಿಂದೆ ಯೂರೋಪನ್ನೇ ತಲ್ಲಣಗೊಳಿಸಿದ ಸ್ಕ್ಯಾಂಡಿನೇವಿಯದ ಸಮುದ್ರಯಾನಿ ರಣವೀರರಾಗಿದ್ದ ವೈಕಿಂಗ್ ಜನರು ಸಹ, ಮರಣಾನಂತರ ಸುಖಭೋಗದ ಭೂಜೀವನದಲ್ಲಿ ಆನಂದಿಸುವ ನಿರೀಕ್ಷೆಯುಳ್ಳವರಾಗಿದ್ದರು. ಮೃತ ವ್ಯಕ್ತಿಗಳು ತಮ್ಮ ಕುದುರೆಗಳ ಮೇಲೆ ಸವಾರಿಮಾಡಿಕೊಂಡು ಅಥವಾ ತಮ್ಮ ನೀಳದೋಣಿಗಳಲ್ಲಿ ತೇಲಿಕೊಂಡು ಮುಂದಿನ ಲೋಕಕ್ಕೆ ಹೋಗುತ್ತಾರೆ ಎಂದು ಅವರು ನಂಬುತ್ತಿದ್ದರು. ಹೀಗಿರುವುದರಿಂದ, ವೈಕಿಂಗ್ ಜನರ ಹೆಣಹೂಳುವ ಸ್ಥಳಗಳಲ್ಲಿ ಹತಿಸಲ್ಪಟ್ಟ ಕುದುರೆಗಳ ಅಸ್ಥಿಪಂಜರಗಳಿಂದ ಹಿಡಿದು ನೀಳದೋಣಿಗಳ ಕೊಳೆಯುತ್ತಿರುವ ಮರದ ತುಂಡುಗಳ ವರೆಗೆ ಯಾವುದೇ ವಸ್ತುಗಳು ಕಾಣಸಿಗಬಹುದು. ವೈಕಿಂಗ್ ಜನರ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಗ್ವಿನ್ ಜೋನ್ಸ್ ಬರೆಯುವುದು: “ಭೂಮಿಯ ಮೇಲಿದ್ದಾಗ ಆರಾಮಭರಿತವಾದ ಮತ್ತು ಗೌರವಾರ್ಹವಾದ ಜೀವನವನ್ನು ನಡೆಸಿದಂತೆಯೇ ಮರಣಾನಂತರವೂ ತದ್ರೀತಿಯ ಜೀವನವನ್ನು ಸಾಧ್ಯಗೊಳಿಸುವ ಪ್ರತಿಯೊಂದು ವಿಷಯವನ್ನೂ ಮೃತ ಪುರುಷನಿಗೆ ಅಥವಾ ಸ್ತ್ರೀಗೆ ಒದಗಿಸಲಾಗುತ್ತಿತ್ತು . . . ಡೆನ್ಮಾರ್ಕ್ನ ಲಾಥ್ಬ್ಯೂನಲ್ಲಿ [ಹೂತುಹೋದ] ಹಡಗಿನ ಮೇಲೆಯೇ . . . ಅದರ ಲಂಗರು ಇತ್ತು, ಒಡೆಯನ ಯಾತ್ರೆಯು ಕೊನೆಗೊಳ್ಳುವಾಗ ಕೆಳಗಿಳಿಸಲ್ಪಡಲು ಸಿದ್ಧವಾಗಿ ಇಡಲ್ಪಟ್ಟಿತ್ತು.”
ವೈಕಿಂಗ್ ಜನರು ಯುದ್ಧಪ್ರಿಯರಾಗಿದ್ದರು ಮತ್ತು ಕಾದಾಡುತ್ತಿರುವಾಗ ಮರಣಪಟ್ಟಲ್ಲಿ ಅಸ್ಗಾರ್ಡ್ ಎಂದು ಕರೆಯಲ್ಪಡುವ ಸ್ಥಳವಾದ ದೇವತೆಗಳ ನಿವಾಸಕ್ಕೆ ತಾವು ಹೋಗುವೆವೆಂದು ನಂಬುತ್ತಿದ್ದರು. “ಅಲ್ಲಿ ಅವರು ದಿನವೆಲ್ಲಾ ಕಾದಾಡಬಹುದಿತ್ತು ಮತ್ತು ರಾತ್ರಿಯೆಲ್ಲಾ ಊಟಮಾಡಬಹುದಿತ್ತು” ಎಂದು ವರ್ಲ್ಡ್ ಬುಕ್ ಎನ್ಸೈಕ್ಲಪೀಡೀಯ ಹೇಳುತ್ತದೆ. ವೈಕಿಂಗ್ ಜನರ ಹೂಳುವಿಕೆಯಲ್ಲಿಯೂ ಮಾನವ ಬಲಿಯು ಒಳಗೂಡಿತ್ತು. “ಒಬ್ಬ ಮುಖಂಡನು ಮೃತಪಡುವಲ್ಲಿ, ಅವನೊಂದಿಗೆ ಯಾರು ಸಾಯಲು ಸಿದ್ಧರಿದ್ದೀರಿ ಎಂದು ದಾಸರನ್ನು ಮತ್ತು ಸೇವಕರನ್ನು ಕೇಳಲಾಗುತ್ತಿತ್ತು” ಎಂದು ದ ವೈಕಿಂಗ್ಸ್ ಎಂಬ ಪುಸ್ತಕವು ತಿಳಿಸುತ್ತದೆ.
ಉತ್ತರ ಯೂರೋಪ್ನ ಪುರಾತನ ಕೆಲ್ಟರು, ಒಂದು ಸಾಲವನ್ನು ಮುಂದಿನ ಲೋಕಕ್ಕೂ ಮುಂದೂಡಸಾಧ್ಯವಿದೆ ಎಂದು ನಂಬಿದ್ದರು—ಸಾಲ ತೀರಿಸುವುದನ್ನು ಮುಂದೂಡಲು ಇದೊಂದು ಜಾಣ ನೆಪವಾಗಿದ್ದಿರಬಹುದು! ಮೆಸಪೊಟೇಮಿಯದಲ್ಲಿ ಮಕ್ಕಳನ್ನು ಆಟದ ಸಾಮಾನುಗಳೊಂದಿಗೆ ಹೂಳಲಾಗುತ್ತಿತ್ತು. ಪುರಾತನ ಬ್ರಿಟನ್ನ ಕೆಲವು ಭಾಗಗಳಲ್ಲಿ, ಸೈನಿಕರು ತಮ್ಮ ಮುಂದಿನ ಜೀವನ ಯಾತ್ರೆಯನ್ನು ಹಸಿವೆಯಿಂದ ಆರಂಭಿಸದಿರುವಂತೆ ಕುರಿಗಳ ಕಾಲುಗಳಂಥ ಆಹಾರಪದಾರ್ಥಗಳೊಂದಿಗೆ ಅವರನ್ನು ಹೂಳಲಾಗುತ್ತಿತ್ತು. ಮಧ್ಯ ಅಮೆರಿಕದಲ್ಲಿ ಮಾಯಾ ರಾಜಮನೆತನದವರನ್ನು ಹೂಳುವಾಗ, ಸಾಂದ್ರೀಕರಿಸಿದ ತೇವಾಂಶ ಹಾಗೂ ಶ್ವಾಸದ ಪ್ರತೀಕವಾಗಿದ್ದ ಜೇಡ್ ಶಿಲೆಯ ವಸ್ತುಗಳನ್ನು ಅವರೊಂದಿಗೆ ಇರಿಸಲಾಗುತ್ತಿತ್ತು. ಮರಣಾನಂತರ ಜೀವನವು ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳುವುದೇ ಇದರ ಉದ್ದೇಶವಾಗಿದ್ದಿರಬಹುದು.
ಸಾ.ಶ.ಪೂ. 1,000ದ ಸ್ವಲ್ಪ ಸಮಯಾನಂತರ, ಇಂದು ಬಲ್ಗೇರಿಯ, ಉತ್ತರ ಗ್ರೀಸ್ ಮತ್ತು ಟರ್ಕಿಯ ಭಾಗವಾಗಿರುವ ಒಂದು ಪ್ರಾಂತದಲ್ಲಿ ಥ್ರೇಸಿಯನ್ನರು ಜೀವಿಸುತ್ತಿದ್ದರು. ಇವರು ಭೀತಿಹುಟ್ಟಿಸುವಂಥ ಜನರಾಗಿದ್ದರೂ, ಕುಶಲ ಅಕ್ಕಸಾಲಿಗರೆಂಬ ಹೆಸರನ್ನೂ ಪಡೆದಿದ್ದರು. ಥ್ರೇಸಿಯನ್ನರ ಮುಖ್ಯಸ್ಥರು ರಥಗಳು, ಕುದುರೆಗಳು, ಅತ್ಯುತ್ತಮ ಆಯುಧಗಳು, ಅಷ್ಟುಮಾತ್ರವಲ್ಲ ಅವರ ಪತ್ನಿಯರೊಂದಿಗೂ ವೈಭವಭರಿತ ರೀತಿಯಲ್ಲಿ ಹೂಳಲ್ಪಡುತ್ತಿದ್ದರು ಎಂಬುದನ್ನು ಅವರ ಸಮಾಧಿಗಳು ಬಯಲುಪಡಿಸುತ್ತವೆ. ವಾಸ್ತವದಲ್ಲಿ, ಬಲಿಯಾಗಿ ಅರ್ಪಿಸಲ್ಪಟ್ಟು ತನ್ನ ಪತಿಯ ಪಕ್ಕದಲ್ಲೇ ಹೂಳಲ್ಪಡುವುದನ್ನು ಒಬ್ಬ ಥ್ರೇಸಿಯನ್ ಪತ್ನಿಯು ದೊಡ್ಡ ಸನ್ಮಾನವಾಗಿ ಪರಿಗಣಿಸುತ್ತಿದ್ದಳು!
ಸ್ವಲ್ಪ ಸಮಯಾನಂತರ ಮತ್ತು ಇದಕ್ಕೆ ಸಮೀಪದಲ್ಲೇ ಅಂದರೆ ಕಪ್ಪು ಸಮುದ್ರದ ಉತ್ತರ ಭಾಗದಲ್ಲಿ ಹೂಣರು ವಾಸಿಸುತ್ತಿದ್ದರು. ಈ ಯುದ್ಧಪ್ರಚೋದಕರು ತಮ್ಮಿಂದ ಹತರಾದವರ ತಲೆಬುರುಡೆಗಳಿಂದ ತಯಾರಿಸಲ್ಪಟ್ಟ ಕಪ್ಗಳಲ್ಲಿ ಕುಡಿಯುತ್ತಿದ್ದರು ಮತ್ತು ಅವರ ತಲೆಬುರುಡೆಯ ಚರ್ಮದಿಂದ ಮಾಡಲ್ಪಟ್ಟ ಮೇಲಂಗಿಗಳನ್ನು ಧರಿಸುತ್ತಿದ್ದರು. ಹೂಣರ ಒಂದು ಸಮಾಧಿಯಲ್ಲಿ ಒಬ್ಬ ಸ್ತ್ರೀಯ ಅಸ್ಥಿಪಂಜರವು ಸಿಕ್ಕಿತು; ಅವಳ ಪಕ್ಕದಲ್ಲಿ ಗಾಂಜಾ ಅಥವಾ ಭಂಗಿ ಇತ್ತು. ಅವಳ ತಲೆಬುರುಡೆಯಲ್ಲಿ ಮೂರು ತೂತುಗಳು ಕೊರೆಯಲ್ಪಟ್ಟಿದ್ದವು; ಇದು ಊತ ಮತ್ತು ಅದರಿಂದ ಉಂಟಾಗುವ ನೋವನ್ನು ಕಡಿಮೆಗೊಳಿಸಲಿಕ್ಕಾಗಿರಬಹುದು. ಮುಂದಿನ ಲೋಕದಲ್ಲಿ ಅವಳು ತಲೆನೋವಿಗೆ ಉಪಶಮನವನ್ನು ಪಡೆದುಕೊಳ್ಳಲಿಕ್ಕಾಗಿ ಅವಳ ಬಳಿ ಏನಾದರೂ ಇರಲಿ ಎಂಬ ಉದ್ದೇಶದಿಂದ ಆ ಗಾಂಜಾ ಇಡಲ್ಪಟ್ಟಿದ್ದಿರಬಹುದು.
ಐಗುಪ್ತ್ಯರ ಮರಣೋತ್ತರ ಜೀವನ
ಕೈರೋ ನಗರದ ಬಳಿಯಿರುವ ಈಜಿಪ್ಟ್ನ ಪಿರಮಿಡ್ಗಳು ಮತ್ತು ಲಕ್ಸರ್ನ ಬಳಿಯ ‘ರಾಜರ ಕಣಿವೆ’ಯಲ್ಲಿರುವ ಸಮಾಧಿಗಳು, ಎಲ್ಲ ಪುರಾತನ ಸಮಾಧಿಗಳಲ್ಲೇ ಅತ್ಯಂತ ಪ್ರಸಿದ್ಧವಾದವುಗಳಾಗಿವೆ. ಆರಂಭದ ಐಗುಪ್ತ್ಯರು “ಸಮಾಧಿ”ಗಾಗಿ ಮತ್ತು “ಮನೆ”ಗಾಗಿ ಪಾರ್ ಎಂಬ ಒಂದೇ ಪದವನ್ನು ಉಪಯೋಗಿಸುತ್ತಿದ್ದರು. “ಆದುದರಿಂದ, ಬದುಕಿರುವಾಗ ಒಂದು ಮನೆ ಮತ್ತು ಮರಣಾನಂತರ ಒಂದು ಮನೆ ಇರುತ್ತಿತ್ತು” ಎಂದು ಪುರಾತನ ಐಗುಪ್ತದಲ್ಲಿ ಮಮಿಗಳು, ದಂತಕಥೆ ಮತ್ತು ಮಾಟಮಂತ್ರ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಕ್ರಿಸ್ಟೀನ್ ಎಲ್ ಮಹಡೇ ಹೇಳುತ್ತಾಳೆ. ಅವಳು ಮತ್ತೂ ತಿಳಿಸುವುದು: “[ಐಗುಪ್ತ್ಯರ] ನಂಬಿಕೆಗಳಿಗನುಸಾರ, ಅವರ ಅಸ್ತಿತ್ವದ ಇತರ ಅಂಶಗಳಾಗಿರುವ ಕಾ, ಬಾ ಮತ್ತು ಆಕ್ಗಳ ಉಳಿಯುವಿಕೆಗಾಗಿ ಶರೀರದ ಉಳಿಯುವಿಕೆಯು ಅಗತ್ಯವಾಗಿತ್ತು.”
‘ಕಾ’ ಎಂಬುದು ಭೌತಿಕ ಶರೀರದ ಒಂದು ಆತ್ಮಿಕ ನಕಲಾಗಿದ್ದು, ಅದಕ್ಕೆ ಸ್ವಂತ ಪ್ರತೀಕ್ಷೆಗಳು, ಬಯಕೆಗಳು ಮತ್ತು ಆವಶ್ಯಕತೆಗಳು ಇರುತ್ತಿದ್ದವು. ಮರಣಾನಂತರ ಈ ‘ಕಾ’ ದೇಹವನ್ನು ಬಿಟ್ಟು ಸಮಾಧಿಯಲ್ಲಿ ವಾಸಿಸುತ್ತಿತ್ತು. ಒಬ್ಬ ವ್ಯಕ್ತಿಯು ಬದುಕಿರುವ ಸಮಯದಲ್ಲಿ ಅವನಿಗೆ ಏನೆಲ್ಲ ಅಗತ್ಯವಿತ್ತೋ ಅದೆಲ್ಲಾ ಮರಣಾನಂತರ ‘ಕಾ’ ಎಂಬುದಕ್ಕೆ ಅಗತ್ಯವಿರುವುದರಿಂದ, “ಸಮಾಧಿಯಲ್ಲಿ ಇಡಲ್ಪಟ್ಟಿರುವ ಸಾಮಾನುಗಳು ಮೂಲಭೂತವಾಗಿ ಅದರ ಆವಶ್ಯಕತೆಗಳನ್ನು ತೃಪ್ತಿಪಡಿಸಲಿಕ್ಕಾಗಿದ್ದವು” ಎಂದು ಎಲ್ ಮಹಡೇ ಬರೆಯುತ್ತಾಳೆ. ‘ಬಾ’ ಎಂಬುದನ್ನು ಒಬ್ಬ ವ್ಯಕ್ತಿಯ ಗುಣಲಕ್ಷಣ ಅಥವಾ ವ್ಯಕ್ತಿತ್ವಕ್ಕೆ ಹೋಲಿಸಸಾಧ್ಯವಿದೆ ಮತ್ತು ಇದು ಮಾನವ ತಲೆಯಿರುವ ಒಂದು ಪಕ್ಷಿಯಾಗಿ ಚಿತ್ರಿಸಲ್ಪಡುತ್ತಿತ್ತು. ‘ಬಾ’ ಎಂಬುದು ಜನನದ ಸಮಯದಲ್ಲಿ ದೇಹವನ್ನು ಪ್ರವೇಶಿಸಿ ಮರಣದಲ್ಲಿ ದೇಹವನ್ನು ಬಿಟ್ಟುಹೋಗುತ್ತಿತ್ತು. ಮೂರನೆಯ ಅಂಶವಾಗಿರುವ ‘ಆಕ್,’ ಮಮಿಯ ಮೇಲೆ ಮಾಟಮಂತ್ರದ ಶಕ್ತಿಯುಳ್ಳ ಪದಗಳನ್ನು ನುಡಿದಾಗ ಅದರಿಂದ “ಹೊರಬರುವಂಥ”ದ್ದಾಗಿತ್ತು.a ‘ಆಕ್’ ಎಂಬುದು ದೇವತೆಗಳ ಲೋಕದಲ್ಲಿ ವಾಸಿಸುತ್ತಿತ್ತು.
ಒಬ್ಬ ವ್ಯಕ್ತಿಯನ್ನು ಮೂರು ಅಸ್ತಿತ್ವಗಳಾಗಿ ವಿಭಾಗಿಸುವ ಮೂಲಕ ಐಗುಪ್ತ್ಯರು, ಮಾನವರನ್ನು ಎರಡು ಅಸ್ತಿತ್ವಗಳಾಗಿ ಅಂದರೆ ದೇಹ ಮತ್ತು ಪ್ರಜ್ಞೆಯಿರುವ “ಆತ್ಮ” ಎಂದು ವಿಭಾಗಿಸಿದಂಥ ಪುರಾತನ ಗ್ರೀಕ್ ತತ್ತ್ವಜ್ಞಾನಿಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋದರು. ಈ ಗ್ರೀಕ್ ಬೋಧನೆಯು ಈಗ ಸಹ ಒಂದು ಜನಪ್ರಿಯ ಬೋಧನೆಯಾಗಿದೆಯಾದರೂ, ಬೈಬಲ್ ಈ ವಿಚಾರಧಾರೆಯನ್ನು ಬೆಂಬಲಿಸುವುದಿಲ್ಲ. ಅದು ಹೀಗೆ ತಿಳಿಸುತ್ತದೆ: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.”—ಪ್ರಸಂಗಿ 9:5.
ಮರಣದ ವಿಷಯವು ಇಷ್ಟೇಕೆ ಮನಸ್ಸನ್ನು ಕಾಡುತ್ತದೆ?
ಇತಿಹಾಸಪೂರ್ವ ಧರ್ಮ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಈ. ಓ. ಜೇಮ್ಸ್ ಬರೆಯುವುದು: “ಮನುಷ್ಯನು ಎದುರಿಸಿರುವಂಥ . . . ಎಲ್ಲ ಸನ್ನಿವೇಶಗಳಲ್ಲೇ ಮರಣವು ಅತಿ ಹೆಚ್ಚು ಕ್ಷೋಭೆದಾಯಕವಾದ ಮತ್ತು ವಿಧ್ವಂಸಕರವಾದ ಸನ್ನಿವೇಶವಾಗಿದೆ . . . ಆದುದರಿಂದ, ಮೃತರ ಕುರಿತಾದ ಆರಾಧನಾ ವಿಧಿಗಳು ಇಂಥ ಗಣ್ಯ ಸ್ಥಾನವನ್ನು ಆಕ್ರಮಿಸಿರುವುದರಲ್ಲಿ ಮತ್ತು ಇದು ಪ್ರಥಮವಾಗಿ ಅಸ್ತಿತ್ವಕ್ಕೆ ಬಂದಂದಿನಿಂದಲೂ ಮಾನವ ಸಮಾಜದಲ್ಲಿ ಮಹತ್ವಪೂರ್ಣ ಪಾತ್ರವನ್ನು ವಹಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ.”
ನಿಜವಾದ ವಿವೇಕದ ಅತಿ ಪುರಾತನ ಗ್ರಂಥವಾಗಿರುವ ಬೈಬಲ್, ಮರಣವನ್ನು ಮಾನವರ ಶತ್ರುವೆಂದು ಕರೆಯುತ್ತದೆ. (1 ಕೊರಿಂಥ 15:26) ಇದೆಷ್ಟು ಸೂಕ್ತವಾದದ್ದಾಗಿದೆ! ಮರಣವು ಸಂಪೂರ್ಣವಾದ ಅಂತ್ಯವಾಗಿದೆ ಎಂಬ ವಿಚಾರವನ್ನು ಪ್ರತಿಯೊಂದು ಕುಲ ಮತ್ತು ನಾಗರಿಕತೆಯು ಬಲವತ್ತಾಗಿ ವಿರೋಧಿಸಿದೆ. ಇನ್ನೊಂದು ಕಡೆಯಲ್ಲಿ, ಆದಿಕಾಂಡ 3:19ರಲ್ಲಿ ಬೈಬಲು ಪ್ರತಿಯೊಂದು ಗೋರಿಯಲ್ಲಿ ನಿಜವಾಗಿಯೂ ಏನು ಸಂಭವಿಸುತ್ತದೆ ಎಂಬುದನ್ನು ನಿಷ್ಕೃಷ್ಟವಾಗಿ ತಿಳಿಸುತ್ತದೆ: “ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.” ಆದರೆ, ಬೈಬಲ್ ಅನೇಕ ಮೃತ ಮಾನವರ ಸಂಬಂಧದಲ್ಲಿ “ಸ್ಮರಣೆಯ ಸಮಾಧಿ” (NW) ಎಂಬ ಅಭಿವ್ಯಕ್ತಿಯನ್ನು ಸಹ ಉಪಯೋಗಿಸುತ್ತದೆ. ಏಕೆ? ಏಕೆಂದರೆ ದೇವರು ಗೋರಿಯಲ್ಲಿರುವ ಅನೇಕರನ್ನು—ಸಂಪೂರ್ಣವಾಗಿ ವಿಘಟಿಸಲ್ಪಟ್ಟಿರುವವರನ್ನು ಸಹ—ಪುನರುತ್ಥಾನಗೊಳಿಸಿ, ಒಂದು ಪರದೈಸ್ ಭೂಮಿಯಲ್ಲಿ ನಿತ್ಯಜೀವವನ್ನು ಆನಂದಿಸುವ ಅವಕಾಶವನ್ನು ಅವರಿಗೆ ಕೊಡುವ ಸಂತೋಷಭರಿತ ಸಮಯಕ್ಕಾಗಿ ಕಾಯುತ್ತಿದ್ದಾರೆ.—ಲೂಕ 23:43; ಯೋಹಾನ 5:28, 29.
ಅಷ್ಟರ ವರೆಗೆ ಮೃತರು ಪ್ರಜ್ಞಾರಹಿತ ಸ್ಥಿತಿಯಲ್ಲಿರುತ್ತಾರೆ. ಯೇಸು ಅವರ ಸ್ಥಿತಿಯನ್ನು ನಿದ್ರೆಗೆ ಹೋಲಿಸಿದನು. (ಯೋಹಾನ 11:11-14) ಅಂಥ ಸ್ಥಿತಿಯಲ್ಲಿರುವ ಒಬ್ಬ ವ್ಯಕ್ತಿಗೆ ಹೂಳಲ್ಪಟ್ಟ ಸಾಮಾನುಗಳ ಅಥವಾ ಪರಿಚಾರಕರ ಆವಶ್ಯಕತೆಯಿರುವುದಿಲ್ಲ. ವಾಸ್ತವದಲ್ಲಿ, ಬಹುತೇಕ ಬಾರಿ ಹೂಳಲ್ಪಟ್ಟ ನಿಕ್ಷೇಪದ ಫಲಾನುಭವಿಗಳು ಆ ಗೋರಿಗಳಲ್ಲಿರುವ ಮೃತರಾಗಿರುವುದಿಲ್ಲ ಬದಲಾಗಿ ಬದುಕಿರುವವರು ಅಂದರೆ ಗೋರಿ ದರೋಡೆಕೋರರಾಗಿರುತ್ತಾರೆ! ಮೃತರ ಸ್ಥಿತಿಯ ಕುರಿತಾದ ಅದರ ಬೋಧನೆಗೆ ಹೊಂದಿಕೆಯಲ್ಲಿ ಬೈಬಲ್ ಹೇಳುವುದು: “ನಾವು ಲೋಕದೊಳಕ್ಕೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು.” (1 ತಿಮೊಥೆಯ 6:7) ಮರಣಕ್ಕೆ ಸಂಬಂಧಪಟ್ಟ ಪುರಾತನ ಮತ್ತು ಕೆಲವೊಮ್ಮೆ ಆಧುನಿಕ ಆರಾಧನಾ ವಿಧಿಗಳ ಕ್ರೂರವಾದ ಹಾಗೂ ಅನಾಗರಿಕ ಪದ್ಧತಿಗಳಿಂದ ‘ಬಿಡುಗಡೆಮಾಡುವಂಥ’ ಈ ಸತ್ಯಕ್ಕಾಗಿ ಕ್ರೈಸ್ತರು ಎಷ್ಟು ಆಭಾರಿಗಳಾಗಿದ್ದಾರೆ!—ಯೋಹಾನ 8:32.
ಇಂಥ ಪದ್ಧತಿಗಳು ನಿಶ್ಚಯವಾಗಿಯೂ ಅರ್ಥರಹಿತವಾಗಿವೆಯಾದರೂ, ಪುರಾತನ ಜನರ ಆಡಂಬರದ ಸಮಾಧಿಗಳು ಸಂಪೂರ್ಣವಾಗಿ ನಿಷ್ಪ್ರಯೋಜಕವೇನಾಗಿರುವುದಿಲ್ಲ. ಆ ಸಮಾಧಿಗಳೊಳಗಿನ ಅನೇಕಾನೇಕ ಕಲಾವಸ್ತುಗಳು ಮತ್ತು ಮೃತರ ಕಳೇಬರಗಳು ಇಲ್ಲದಿರುತ್ತಿದ್ದರೆ, ಅತಿ ಪುರಾತನ ಕಾಲದ ಮತ್ತು ಅದರ ಅಳಿದುಹೋದ ನಾಗರಿಕತೆಗಳ ಕುರಿತಾದ ನಮ್ಮ ಜ್ಞಾನವು ಖಂಡಿತವಾಗಿಯೂ ಅಸ್ಪಷ್ಟವಾಗಿರುತ್ತಿತ್ತು. (g05 12/8)
[ಪಾದಟಿಪ್ಪಣಿ]
a “ಮಮಿ” ಎಂಬ ಪದವು ಮೂಮೀಯಾ ಎಂಬ ಅರೇಬಿಕ್ ಪದದಿಂದ ಬಂದದ್ದಾಗಿದೆ; ಇದರ ಅರ್ಥ “ಬಿಟ್ಯುಮನ್ [ಡಾಂಬರು]” ಅಥವಾ “ಕಪ್ಪು ರಾಳ” ಎಂದಾಗಿದೆ. ಈ ಪದವು ಮೂಲತಃ ಕೃತಕ ರಾಳದಲ್ಲಿ ನೆನೆಸಲ್ಪಡುತ್ತಿದ್ದ ಶವಗಳಿಗೆ ಕೊಡಲ್ಪಟ್ಟಿತ್ತು, ಏಕೆಂದರೆ ಅವು ಕಪ್ಪಾಗಿ ತೋರುತ್ತಿದ್ದವು. ಈಗಲಾದರೊ ಆ ಪದವನ್ನು, ಆಕಸ್ಮಿಕವಾಗಿರಲಿ ಅಥವಾ ಉದ್ದೇಶಪೂರ್ವಕವಾಗಿರಲಿ ಕೆಟ್ಟುಹೋಗದೆ ಸಂರಕ್ಷಿಸಲ್ಪಟ್ಟಿರುವ ಯಾವುದೇ ಮಾನವ ಅಥವಾ ಪ್ರಾಣಿಯ ದೇಹಕ್ಕೆ ಅನ್ವಯಿಸಲಾಗುತ್ತದೆ.
[ಪುಟ 24ರಲ್ಲಿರುವ ಚೌಕ/ಚಿತ್ರಗಳು]
ಪುರಾತನ ಜನರು ಎಷ್ಟು ಆರೋಗ್ಯವಂತರಾಗಿದ್ದರು?
ಸಮಾಧಿಗಳಲ್ಲಿ ಕಂಡುಕೊಳ್ಳಲ್ಪಟ್ಟ ಕಳೇಬರಗಳನ್ನು ವಿಶೇಷವಾಗಿ ಮಮೀಕರಿಸಿದ ಕಳೇಬರಗಳನ್ನು ಮತ್ತು ಸಸ್ಯಾಂಗಾರ ಭೂಮಿಯಲ್ಲಿ, ಬಿಸಿಯಾದ ಮರುಭೂಮಿಯ ಮರಳಿನಲ್ಲಿ, ಹಿಮ ಹಾಗೂ ಮಂಜಿನಲ್ಲಿ ನೈಸರ್ಗಿಕವಾಗಿ ಮಮೀಕರಿಸಲ್ಪಟ್ಟ ಶವಗಳನ್ನು ಪರೀಕ್ಷಿಸುವ ಮೂಲಕ ವಿಜ್ಞಾನಿಗಳು ನಮ್ಮ ಪುರಾತನ ಪೂರ್ವಜರ ಆರೋಗ್ಯದ ಕುರಿತು ಹೆಚ್ಚು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ನಿರ್ದಿಷ್ಟವಾಗಿ ತಳಿವಿಜ್ಞಾನದಲ್ಲಿನ ಪ್ರಗತಿಯು, ಫರೋಹರು ಮತ್ತು ಅವರ ರಾಣಿಯರ ಕುಟುಂಬ ಸಂಬಂಧಗಳು ಹಾಗೂ ಇಂಕ ನಾಗರಿಕತೆಯ ಕನ್ಯೆಯರ ರಕ್ತದ ಗುಂಪುಗಳಂಥ ಅನೇಕ ವಿವರಗಳನ್ನು ಕಂಡುಹಿಡಿಯಲು ವಿಜ್ಞಾನಿಗಳಿಗೆ ಪ್ರಬಲವಾದ ಹೊಸ ಸಾಧನಗಳನ್ನು ಒದಗಿಸಿದೆ. ಸಂಧಿವಾತ ಮತ್ತು ಚರ್ಮದ ಮೇಲಿನ ಸಣ್ಣ ಗಂಟುಗಳನ್ನು (ನರಹುಲಿ) ಸೇರಿಸಿ ನಾವು ಇಂದು ಅನುಭವಿಸುವಂಥ ಅನೇಕ ಆರೋಗ್ಯ ಸಮಸ್ಯೆಗಳಿಂದ ಪುರಾತನ ಜನರು ಸಹ ಬಾಧಿತರಾಗಿದ್ದರು ಎಂಬುದನ್ನು ಈ ಅಧ್ಯಯನಗಳು ಬಯಲುಪಡಿಸಿವೆ.
ವಿಶೇಷವಾಗಿ ಪುರಾತನ ಐಗುಪ್ತ್ಯರು ಹೆಚ್ಚು ಕಾಯಿಲೆಗಳಿಂದ ಬಳಲುತ್ತಿದ್ದರೆಂದು ತೋರುತ್ತದೆ; ನೈಲ್ ನದಿಯಿಂದ ಮತ್ತು ನೀರಾವರಿ ಕಾಲುವೆಗಳಿಂದ ಅವರಿಗೆ ಅಂಟಿಕೊಂಡಿದ್ದ ಅಸಂಖ್ಯಾತ ಪರೋಪಜೀವಿಗಳು—ಚಪ್ಪಟೆಹುಳುವಿನಿಂದ ಹಿಡಿದು ಗಿನಿಹುಳು ಮತ್ತು ಲಾಡಿಹುಳುವಿನ ತನಕ—ಬಹುಮಟ್ಟಿಗೆ ಇದಕ್ಕೆ ಕಾರಣವಾಗಿದ್ದವು. ಇದು ಸಾ.ಶ.ಪೂ. 1513 ರಲ್ಲಿ ಇಸ್ರಾಯೇಲ್ ಜನಾಂಗವನ್ನು ಐಗುಪ್ತದಿಂದ ವಿಮೋಚಿಸಿದ ಬಳಿಕ ದೇವರು ಇಸ್ರಾಯೇಲ್ಯರಿಗೆ ನುಡಿದ ಮಾತುಗಳನ್ನು ನೆನಪಿಗೆ ತರುತ್ತದೆ: ‘ನಿಮ್ಮ ಅನುಭವಕ್ಕೆ ಬಂದ ಪ್ರಕಾರ ಐಗುಪ್ತದೇಶದಲ್ಲಿ ಪ್ರಬಲವಾಗಿರುವ ಕ್ರೂರವ್ಯಾಧಿಗಳನ್ನು [ಯೆಹೋವನು] ನಿಮಗೆ ಬರಗೊಡಿಸನು.’—ಧರ್ಮೋಪದೇಶಕಾಂಡ 7:15.
[ಕೃಪೆ]
© R Sheridan/ANCIENT ART & ARCHITECTURE COLLECTION LTD
[ಪುಟ 20ರಲ್ಲಿರುವ ಚಿತ್ರ]
ಊರ್ನ ರಾಜಮನೆತನದ ಸಮಾಧಿಯೊಂದರಲ್ಲಿ ಹೂಳಲ್ಪಟ್ಟ ಪರಿಚಾರಕಿಯೊಬ್ಬಳ ಸುಮೇರಿಯನ್ ತಲೆಯುಡಿಗೆ ಮತ್ತು ಆಭರಣಗಳು
[ಕೃಪೆ]
© The British Museum
[ಪುಟ 21ರಲ್ಲಿರುವ ಚಿತ್ರಗಳು]
ಜೇಡಿಮಣ್ಣಿನ ಚಿನ್ ಸೇನಾದಳ—ಪ್ರತಿಯೊಬ್ಬ ಸೈನಿಕನನ್ನೂ ವಿಶಿಷ್ಟವಾದ ಮುಖಲಕ್ಷಣಗಳೊಂದಿಗೆ ಕೆತ್ತಲಾಗಿತ್ತು
[ಕೃಪೆ]
ಒಳಚಿತ್ರ: Erich Lessing/Art Resource, NY; © Joe Carini / Index Stock Imagery
[ಪುಟ 23ರಲ್ಲಿರುವ ಚಿತ್ರ]
ಮೆಕ್ಸಿಕೋದ ಟೇಓಟೀವಾಕಾನ್ ನಗರದಲ್ಲಿರುವ ಸೂರ್ಯನ ಪಿರಮಿಡ್ ಮತ್ತು ಮೃತರ ಬೀದಿ
[ಕೃಪೆ]
ಮೇಲೆ: © Philip Baird www.anthroarcheart.org; ವರ್ಣಕಲೆ: Pictorial Archive (Near Eastern History) Est.
[ಪುಟ 23ರಲ್ಲಿರುವ ಚಿತ್ರಗಳು]
ಎಡಭಾಗದಲ್ಲಿ: ಐಗುಪ್ತ್ಯರ ಅರಸನಾಗಿದ್ದ ಟುಟಂಕಮೇನನ ಶವಸಂಸ್ಕಾರಕ್ಕೆ ಸಂಬಂಧಪಟ್ಟ ಚಿನ್ನದ ಮುಖವಾಡ; ಕೆಳಗೆ: ‘ಬಾ’ವನ್ನು ಮಾನವ ತಲೆಯಿರುವ ಪಕ್ಷಿಯಾಗಿ ಚಿತ್ರಿಸುತ್ತಿರುವ ಸಮಾಧಿಯಲ್ಲಿನ ವರ್ಣಕಲೆ