ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 4/08 ಪು. 3-4
  • ಅಪರಾಧಗಳು ಅಂಕೆಮೀರಿವೆಯೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಪರಾಧಗಳು ಅಂಕೆಮೀರಿವೆಯೋ?
  • ಎಚ್ಚರ!—2008
  • ಅನುರೂಪ ಮಾಹಿತಿ
  • ಇಷ್ಟೊಂದು ಪಾತಕಗಳೇಕೆ?
    ಕಾವಲಿನಬುರುಜು—1990
  • ಪೊಲೀಸರು ಅವರ ಭವಿಷ್ಯವೇನು?
    ಎಚ್ಚರ!—2002
  • ಪಾತಕದ ಅಂತ್ಯ ಈಗ ಸಮೀಪ!
    ಕಾವಲಿನಬುರುಜು—1990
ಎಚ್ಚರ!—2008
g 4/08 ಪು. 3-4

ಅಪರಾಧಗಳು ಅಂಕೆಮೀರಿವೆಯೋ?

◼ ಮಾನಸಿಕ ಅಸ್ವಸ್ಥತೆಯಿದ್ದ ವಿದ್ಯಾರ್ಥಿಯೊಬ್ಬನು ಮಾರಕಾಸ್ತ್ರಗಳೊಂದಿಗೆ ಶಾಲೆಗೆ ಬಂದು ತನ್ನ ಸಹಪಾಠಿಗಳನ್ನು ಹಾಗೂ ಶಿಕ್ಷಕರನ್ನು ಗುಂಡಿಕ್ಕಿ ಕೊಲ್ಲುತ್ತಾನೆ.

◼ ಪುಟ್ಟ ಹುಡುಗಿಯೊಬ್ಬಳ ಅಪಹರಣವಾಗುತ್ತದೆ; ಅವಳ ಹೆತ್ತವರಿಗಾಗುವ ಸಂಕಟ ಹೇಳತೀರದು.

◼ ಹದಿವಯಸ್ಕನೊಬ್ಬನು ತಾನು ಕೇವಲ ಮೋಜಿಗಾಗಿ ಒಬ್ಬನ ಕೊಲೆಮಾಡಿ, ಆ ಶವವನ್ನು ತನ್ನ ಗೆಳೆಯರಿಗೆ ತೋರಿಸಿದೆನೆಂದು ಒಪ್ಪುತ್ತಾನೆ. ಅವನ ಗೆಳೆಯರಾದರೊ ಅನೇಕ ವಾರಗಳ ತನಕ ಆ ಸಂಗತಿಯನ್ನು ಗುಟ್ಟಾಗಿಟ್ಟರು.

◼ ಒಬ್ಬ ವಿಕೃತಕಾಮಿ ಇತರ ಶಿಶುಕಾಮಿಗಳಿಗೆ, ಮಕ್ಕಳನ್ನು ಬಲೆಗೆ ಹಾಕಿಕೊಳ್ಳುವುದು ಹೇಗೆಂದು ಇಂಟರ್‌ನೆಟ್‌ನಲ್ಲಿ ಸಲಹೆಗಳನ್ನು ಕೊಡುತ್ತಾನೆ.

ಇವೆಲ್ಲವೂ, ಈಗೀಗ ಸುದ್ದಿಯಲ್ಲಿರುವ ಆಘಾತಕರ ಅಪರಾಧಗಳಲ್ಲಿ ಕೆಲವೊಂದು ಮಾತ್ರ. ನಿಮ್ಮ ನೆರೆಹೊರೆಯಲ್ಲಿ ವಿಶೇಷವಾಗಿ ರಾತ್ರಿಸಮಯದಲ್ಲಿ ನೀವು ಸುರಕ್ಷಿತರೊ? ನೀವಾಗಲಿ ನಿಮ್ಮ ಕುಟುಂಬ ಸದಸ್ಯರಾಗಲಿ ಯಾವುದಾದರೂ ಅಪರಾಧಕೃತ್ಯಕ್ಕೆ ಗುರಿಯಾಗಿದ್ದೀರೊ? ಅಪರಾಧ, ಹಿಂಸಾಕೃತ್ಯಗಳ ಭಯ ತಮ್ಮನ್ನು ಕಾಡುತ್ತಿದೆ ಎಂದು ಲೋಕವ್ಯಾಪಕವಾಗಿ ಲಕ್ಷಾಂತರ ಮಂದಿ ಒಪ್ಪಿಕೊಳ್ಳುತ್ತಾರೆ. ಇದು, ಒಂದುಕಾಲದಲ್ಲಿ ಬಹುಮಟ್ಟಿಗೆ ಸುರಕ್ಷಿತವೆಂದು ಎಣಿಸಲಾಗುತ್ತಿದ್ದ ದೇಶಗಳಲ್ಲೂ ಸತ್ಯ. ಬೇರೆಬೇರೆ ದೇಶಗಳಿಂದ ಬಂದಿರುವ ವರದಿಗಳ ಈ ತುಣುಕುಗಳನ್ನು ಪರಿಗಣಿಸಿರಿ.

ಜಪಾನ್‌: ಏಷ್ಯಾ ಟೈಮ್ಸ್‌ ವರದಿಸುವುದು: “ಒಂದು ಕಾಲದಲ್ಲಿ ಜಪಾನ್‌, ಲೋಕದ ಅತಿ ಸುರಕ್ಷಿತ ದೇಶಗಳಲ್ಲಿ ಒಂದಾಗಿತ್ತು . . . ಆದರೆ ಈಗ ವೈಯಕ್ತಿಕ ಸುರಕ್ಷೆಯ ಆ ಪ್ರಜ್ಞೆಯು ಹಳೇಕಾಲದ ಮಾತಾಗಿಬಿಟ್ಟಿದೆ. ತಾವೊಂದು ಸುರಕ್ಷಿತ ದೇಶದಲ್ಲಿ ಜೀವಿಸುತ್ತಿದ್ದೇವೆಂಬ ಅನಿಸಿಕೆಯ ಸ್ಥಾನದಲ್ಲಿ, ಅಪರಾಧ ಹಾಗೂ ಜಾಗತಿಕ ಭಯೋತ್ಪಾದನೆಯ ಅತೀವ ಆತಂಕವು ಜನರ ಮನಸ್ಸನ್ನು ಹೊಕ್ಕಿದೆ.”

ಲ್ಯಾಟಿನ್‌ ಅಮೆರಿಕ: 2006 ರ ಒಂದು ವಾರ್ತಾ ವರದಿಗನುಸಾರ, ಬ್ರಸಿಲ್‌ ದೇಶದ ಗಣ್ಯವ್ಯಕ್ತಿಗಳು ಸಾಪೌಲೂ ನಗರದಲ್ಲಿ ‘ಗೆರಿಲ್ಲ ಯುದ್ಧ’ ನಡೆಯುವುದೆಂದು ಹೇಳುತ್ತಿದ್ದಾರೆ. ಆಗಾಗ್ಗೆ ಅನೇಕ ವಾರಗಳ ತನಕ ನಡೆಯುವ ಹಿಂಸಾಚಾರದಿಂದಾಗಿ ಈ ದೇಶದ ರಾಷ್ಟ್ರಾಧ್ಯಕ್ಷರು, ಅಲ್ಲಿನ ಬೀದಿಗಳನ್ನು ಕಾಯಲಿಕ್ಕಾಗಿ ತಕ್ಷಣವೇ ಸೇನಾಪಡೆಯನ್ನು ಕಳುಹಿಸಿದರು. ಮಧ್ಯ ಅಮೆರಿಕ ಹಾಗೂ ಮೆಕ್ಸಿಕೊದಲ್ಲಿ “ಕಡಿಮೆಪಕ್ಷ 50,000 ಯುವಕರುಳ್ಳ ಗ್ಯಾಂಗ್‌ಗಳಿರುವುದರಿಂದ, ಆ ಪ್ರದೇಶದ ಅಧಿಕಾರಿಗಳು ಸದಾ ಎಚ್ಚೆತ್ತಿರಬೇಕಾಗುತ್ತದೆ” ಎಂದು ಟ್ಯೆಂಪೊಸ್‌ ಡೆಲ್‌ ಮುಂಡೊ ಎಂಬ ವಾರ್ತಾಪತ್ರಿಕೆಯ ಒಂದು ವರದಿ ಹೇಳುತ್ತದೆ. “ಇಸವಿ 2005 ರಲ್ಲೇ ಈ ಯುವಕರ ಗ್ಯಾಂಗ್‌ಗಳು ಎಲ್‌ ಸಾಲ್ವಡಾರ್‌, ಹೊಂಡುರಾಸ್‌, ಗ್ವಾಟೆಮಾಲಾದಲ್ಲಿ ಸುಮಾರು 15,000 ಮಂದಿಯನ್ನು ಕೊಂದುಹಾಕಿದರು” ಎಂದು ಆ ಪತ್ರಿಕೆ ಕೂಡಿಸಿ ಹೇಳುತ್ತದೆ.

ಕೆನಡ: “ಗ್ಯಾಂಗ್‌ಗಳ ವೃದ್ಧಿಯಿಂದಾಗಿ ಅಪರಾಧ-ತಜ್ಞರು ಚಿಂತಿತರಾಗಿದ್ದಾರೆ” ಎಂದು 2006 ರಲ್ಲಿ ಯು.ಎಸ್‌.ಎ. ಟುಡೇ ವಾರ್ತಾಪತ್ರಿಕೆಯು ಹೇಳಿತು. “ಟೊರಾಂಟೊದಲ್ಲಿ 73 ಬೀದಿ ಪುಂಡರ ಗ್ಯಾಂಗ್‌ಗಳಿವೆ . . . ಎಂಬುದನ್ನು ಪೊಲೀಸರು ಪತ್ತೆಹಚ್ಚಿದರು.” ಅದೇ ಮೂಲಕ್ಕನುಸಾರ, ನಗರಗಳಲ್ಲಿ ಬೆಳೆಯುತ್ತಿರುವ ‘ಗ್ಯಾಂಗ್‌ ಸಂಸ್ಕೃತಿ’ ಯನ್ನು ಅಡಗಿಸುವುದಕ್ಕೆ ಯಾವುದೇ ಸುಲಭ ಪರಿಹಾರವಿಲ್ಲವೆಂದು ಟೊರಾಂಟೊವಿನ ಮುಖ್ಯ ಪೊಲೀಸ್‌ ಅಧಿಕಾರಿ ಒಪ್ಪಿಕೊಂಡರು.

ದಕ್ಷಿಣ ಆಫ್ರಿಕ: ಅಪರಾಧ ಸಂಶೋಧಕನಾದ ಪ್ಯಾಟ್ರಿಕ್‌ ಬರ್ಟನ್‌ ಎಂಬವನು, ಫೈನಾನ್ಶಲ್‌ ಮೇಲ್‌ ಎಂಬ ಪತ್ರಿಕೆಯಲ್ಲಿ ಹೇಳಿದ್ದು: “ದಕ್ಷಿಣ ಆಫ್ರಿಕದಲ್ಲಿನ ಯುವ ಜನರ ಜೀವನದ ಪ್ರತಿಯೊಂದೂ ಭಾಗವು ಅಪರಾಧದ ಭಯದಿಂದ ತುಂಬಿಕೊಂಡಿದೆ.” ಅಪರಾಧ ಎಂದು ಹೇಳುವಾಗ ಅದರಲ್ಲಿ, “ಭೀಕರವಾದ ಶಸ್ತ್ರಸಜ್ಜಿತ ಸುಲಿಗೆಗಳು, ವಾಹನ ಅಪಹರಣಗಳು ಹಾಗೂ ಬ್ಯಾಂಕ್‌ ದರೋಡೆಗಳು” ಸೇರಿವೆ ಎಂದು ಆ ಪತ್ರಿಕೆ ಹೇಳುತ್ತದೆ.

ಫ್ರಾನ್ಸ್‌: ಇಲ್ಲಿನ ಬಹುಮಹಡಿ-ಕಟ್ಟಡಗಳ ಅನೇಕ ನಿವಾಸಿಗಳು “ವಿರೂಪಗೊಂಡ ಮೆಟ್ಟಲ ಸಾಲುಗಳನ್ನು ಹತ್ತುವಾಗ, ಅಪಾಯದ ಕಾರಣ ನಿಷಿದ್ಧ ಕ್ಷೇತ್ರಗಳಾಗಿಬಿಟ್ಟಿರುವ ಕಾರ್‌ ಪಾರ್ಕಿಂಗ್‌ ಅನ್ನು ಪ್ರವೇಶಿಸುವಾಗ, ಮತ್ತು ಕತ್ತಲಾದ ನಂತರ ಅಪಾಯಕಾರಿ ಆಗಿಬಿಟ್ಟಿರುವ ಸಾರ್ವಜನಿಕ ಸಾರಿಗೆಯ ವಾಹನಗಳನ್ನು ಬಳಸುವಾಗ” ದಿನದಿನವೂ ಭೀತಿಯಿಂದಿರುತ್ತಾರೆ.​—⁠ಗಾರ್ಡಿಯನ್‌ ವೀಕ್ಲಿ.

ಯುನೈಟೆಡ್‌ ಸ್ಟೇಟ್ಸ್‌: ಸಂಘಟಿತ ಗ್ಯಾಂಗ್‌ಗಳು ಅಪರಾಧದ ಅಲೆಯ ಅಬ್ಬರವನ್ನು ಹೆಚ್ಚಿಸುತ್ತಿವೆ. ದ ನ್ಯೂ ಯಾರ್ಕ್‌ ಟೈಮ್ಸ್‌ ನಲ್ಲಿ ಬಂದ ಒಂದು ವರದಿಗನುಸಾರ, ಸರಿಸುಮಾರು 17,000 ಮಂದಿ ಯುವಕಯುವತಿಯರು (ನಾಲ್ಕೇ ವರ್ಷಗಳಲ್ಲಿ 10,000 ಸದಸ್ಯರ ವೃದ್ಧಿ), 700 ಗ್ಯಾಂಗ್‌ಗಳಲ್ಲಿ ಯಾವುದಾದರೊಂದಕ್ಕೆ ಸೇರಿರುತ್ತಾರೆ ಎಂದು ಒಂದು ಸಮೀಕ್ಷೆ ವರದಿಸಿತು.

ಬ್ರಿಟನ್‌: ಮಕ್ಕಳು ಮತ್ತು ಅಪರಾಧಗಳ ಕುರಿತ ಯುನಿಸೆಫ್‌ ವರದಿ ಬಗ್ಗೆ, ಲಂಡನಿನ ದ ಟೈಮ್ಸ್‌ ಪತ್ರಿಕೆ ಹೇಳಿದ್ದು: “ಬ್ರಿಟನಿನ ಜನರಲ್ಲಿ ಹೆಚ್ಚೆಚ್ಚು ಯುವಜನರು ಗುಂಡೇಟಿನಿಂದ ಸಾಯುತ್ತಿದ್ದಾರೆ. . . . ಗನ್‌ ಬಳಸಿ ಪಾತಕ ನಡೆಸುವವರು ಮತ್ತು ಅದಕ್ಕೆ ಗುರಿಯಾಗುವವರ ವಯಸ್ಸು ಚಿಕ್ಕದಾಗುತ್ತಾ ಬರುತ್ತಿದೆ.” ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿರುವ ಜೈಲುವಾಸಿಗಳ ಸಂಖ್ಯೆಯು ಬಹುಮಟ್ಟಿಗೆ 80,000 ಕ್ಕೇರಿದೆ.

ಕೆನ್ಯ: ಒಂದು ವಾರ್ತಾ ಸುದ್ದಿಗನುಸಾರ, ದಟ್ಟ ವಾಹನಸಂಚಾರವಿದ್ದ ಹೆದ್ದಾರಿಯಲ್ಲಿ ಒಬ್ಬ ತಾಯಿ ಹಾಗೂ ಮಗಳು ಹಾದುಹೋಗುತ್ತಿದ್ದ ಕಾರ್‌-ಅಪಹರಣಕಾರರಿಗೆ ದಾರಿಮಾಡಿಕೊಡಲಿಕ್ಕಾಗಿ ತಮ್ಮ ವಾಹನವನ್ನು ಕೂಡಲೇ ಪಕ್ಕಕ್ಕೆ ಸರಿಸಲಿಲ್ಲ ಎಂಬ ಕಾರಣಕ್ಕೆ ಅವರಿಗೆ ಗುಂಡಿಕ್ಕಲಾಯಿತು. ಕೆನ್ಯದ ರಾಜಧಾನಿ ನೈರೋಬಿಯು ಕಾರ್‌-ಅಪಹರಣಗಳು, ಬಲಾತ್ಕಾರ ಸುಲಿಗೆಗಳು ಮತ್ತು ಮನೆಯವರನ್ನು ಬೆದರಿಸಿ ದೋಚುವುದರಂಥ ಎಲ್ಲ ಪ್ರಕಾರದ ಅಪರಾಧಗಳಿಗಾಗಿ ಕುಖ್ಯಾತವಾಗಿಬಿಟ್ಟಿದೆ.

ಹಾಗಾದರೆ ಅಪರಾಧಗಳು ತ್ವರಿತವಾಗಿ ಅಂಕೆಮೀರಿ ಹೋಗುತ್ತಿವೆಯೋ? ಅಪರಾಧಕ್ಕೆ ಮೂಲ ಕಾರಣವೇನು? ಮುಂದೊಂದು ದಿನ ಜನರು ನಿಜ ಶಾಂತಿ ಹಾಗೂ ಭದ್ರತೆಯಲ್ಲಿ ಜೀವಿಸುವರೆಂದು ನಿರೀಕ್ಷಿಸಲು ಏನಾದರೂ ಆಧಾರವಿದೆಯೊ? ಈ ಪ್ರಶ್ನೆಗಳನ್ನು ಮುಂದಿನ ಲೇಖನಗಳಲ್ಲಿ ಪರಿಶೀಲಿಸಲಾಗುವುದು. (g 2/08)

[ಪುಟ 3ರಲ್ಲಿರುವ ಚಿತ್ರ]

Robson Fernandes/Agencia Estado/WpN

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ