“ನಾಳೆಯ ವಿಷಯವಾಗಿ ಚಿಂತಿಸಬೇಡಿರಿ”
ರೀನಾಳ ಸಹನೆಯ ಕಟ್ಟೆಯೊಡೆಯಿತು. ಆಕೆಯ ಗಂಡ ಮನುಗೆ ಸರಿಯಾಗಿ ಕೆಲಸ ಇಲ್ಲದೆ ಮೂರಕ್ಕಿಂತ ಹೆಚ್ಚು ವರ್ಷಗಳಾಗಿದ್ದವು. ಆ ದಿನವನ್ನು ಆಕೆ ನೆನಪಿಸಿಕೊಳ್ಳುವುದು: “ಚಿಂತೆ ನನ್ನನ್ನು ಒಳಗಿಂದೊಳಗೆ ಸುಡುತ್ತಾ ಇತ್ತು. ಮುಂದೇನಾಗುತ್ತದೋ ಎಂದು ತಿಳಿಯದೆ ತುಂಬ ನಿರಾಶಳಾಗುತ್ತಿದ್ದೆ.” ತಮಗೆ ಮುಖ್ಯವಾಗಿ ಬೇಕಾದದ್ದೆಲ್ಲವೂ ಸಿಗುತ್ತಿದೆ ಎಂದು ವಿವರಿಸುತ್ತಾ ಮನು ಆಕೆಯ ಚಿಂತೆ ತಗ್ಗಿಸಲು ಪ್ರಯತ್ನಿಸುತ್ತಿದ್ದನು. “ಆದರೆ ನಿಮಗಿನ್ನೂ ಒಂದು ಪಕ್ಕಾ ಕೆಲಸ ಇಲ್ಲವಲ್ಲಾ! ತಿಂಗಳುತಿಂಗಳು ಮನೆಗೆ ಏನಾದರೂ ಆದಾಯ ಬರಲೇಬೇಕಲ್ವಾ?” ಎಂದು ರೀನಾ ಗೋಗರೆದಳು.
ಕೆಲಸಹೋದಾಗ ಮನುಷ್ಯನಿಗೆ ಚಿಂತೆಹುಟ್ಟುವುದು ಸಹಜ. ‘ನಾನೆಷ್ಟು ಸಮಯ ಕೆಲಸ ಇಲ್ಲದೇ ಇರಬೇಕಾದೀತು? ಇನ್ನೊಂದು ಕೆಲಸ ಸಿಗುವ ತನಕ ಇದ್ದ ಹಣವನ್ನು ಮನೆ ಖರ್ಚಿಗೆ ಹೇಗೆ ಹೊಂದಿಸಲಿ?’ ಎಂದು ನಿರುದ್ಯೋಗಿ ಯೋಚಿಸುತ್ತಿರುತ್ತಾನೆ.
ಈ ರೀತಿಯ ಚಿಂತೆ ಸಾಮಾನ್ಯ. ಆದರೆ ಅದನ್ನು ತಗ್ಗಿಸಬಹುದು. ಈ ನಿಟ್ಟಿನಲ್ಲಿ ಯೇಸು ಕ್ರಿಸ್ತನು ಕೊಟ್ಟ ಸಲಹೆ ಹೀಗಿದೆ: “ನಾಳೆಯ ವಿಷಯವಾಗಿ ಚಿಂತಿಸಬೇಡಿರಿ. . . . ಆ ದಿನದ ಪಾಡು ಆ ದಿನಕ್ಕೆ ಸಾಕು.”—ಮತ್ತಾಯ 6:34, NIBV.
ನಿಮಗಿರುವ ಚಿಂತೆಯೇನೆಂದು ಗುರುತಿಸಿ
ಸಮಸ್ಯೆಯೇ ಇಲ್ಲದ ಹಾಗೆ ನಡೆದುಕೊಳ್ಳಬೇಕೆಂದು ಯೇಸು ಹೇಳುತ್ತಿರಲಿಲ್ಲ. ಅದೇ ಸಮಯ ನಾಳೆ ಏನಾಗಬಹುದೋ ಎಂದು ಚಿಂತಿಸುತ್ತಾ ಇದ್ದರೆ ಇಂದು ನಮಗಿರುವ ಭಾವನಾತ್ಮಕ ಹೊರೆ ಹೆಚ್ಚಾಗುತ್ತದೆ ಅಷ್ಟೇ. ನಾಳೆ ಒಳ್ಳೇದಾಗುವುದೋ ಕೆಟ್ಟದ್ದಾಗುವುದೋ ಇದ್ಯಾವುದರ ಮೇಲೂ ನಮಗೆ ನಿಯಂತ್ರಣವಿಲ್ಲ ಎಂಬುದು ಸತ್ಯ. ಆದರೆ ಈ ಹೊತ್ತು ಏನು ನಡೆಯುತ್ತಿದೆಯೋ ಅದನ್ನು ನಿಭಾಯಿಸಲು ನಾವು ಖಂಡಿತವಾಗಿಯೂ ಕ್ರಮಕೈಗೊಳ್ಳಬಹುದು.
ಇದನ್ನು ಹೇಳುವುದು ಸುಲಭ ಆದರೆ ಮಾಡುವುದು ಕಷ್ಟ ಅಲ್ಲವೇ? ಖಂಡಿತ ಹೌದು! ರೇಶ್ಮಾ ಎಂಬಾಕೆಯ ಗಂಡ 12 ವರ್ಷಗಳಿಂದ ಮಾಡುತ್ತಿದ್ದ ಕೆಲಸ ಕಳಕೊಂಡನು. ಆಕೆಯನ್ನುವುದು: “ಇಂಥ ಸನ್ನಿವೇಶದಲ್ಲಿ ಭಾವನೆಗಳು ತೀವ್ರವಾಗಿರುವುದರಿಂದ ಯಾವುದರ ಬಗ್ಗೆಯೂ ತರ್ಕಬದ್ಧವಾಗಿ ಯೋಚಿಸಲು ಕಷ್ಟವಾಗುತ್ತದೆ. ಆದರೆ ನಾವದನ್ನು ಮಾಡಲೇಬೇಕಿತ್ತು. ಆದುದರಿಂದ ನನ್ನನ್ನೇ ನಿಯಂತ್ರಿಸಿಕೊಳ್ಳಲು ಪ್ರಯತ್ನಿಸಿದೆ. ‘ಹೀಗ್ಹೀಗೆ ಆಗ್ಬಹುದು’ ಎಂಬ ನನ್ನ ಭಯ ಸುಳ್ಳಾದಾಗ, ಚಿಂತೆಮಾಡುವುದು ಒಳ್ಳೇದಲ್ಲ ಎಂಬ ಪಾಠ ಕಲಿತೆ. ಸದ್ಯದ ಪರಿಸ್ಥಿತಿ ಹಾಗೂ ಸದ್ಯದ ಸಮಸ್ಯೆಗಳ ಮೇಲೆ ಗಮನಕೇಂದ್ರೀಕರಿಸುವ ಮೂಲಕ ಎಲ್ಲ ಮಾನಸಿಕ ಒತ್ತಡವನ್ನು ದೂರಮಾಡಿದೆವು.”
ನಿಮ್ಮನ್ನೇ ಕೇಳಿಕೊಳ್ಳಿ: ‘ನನಗೆ ಯಾವುದರ ಬಗ್ಗೆ ತುಂಬ ಚಿಂತೆಯಾಗುತ್ತದೆ? ನನಗಿರುವ ಭಯ ನಿಜವಾಗುವ ಸಾಧ್ಯತೆ ಎಷ್ಟಿದೆ? ಏನಾಗಬಹುದು ಏನಾಗಲಿಕ್ಕಿಲ್ಲ ಎಂದು ಚಿಂತಿಸುವುದರಲ್ಲೇ ನನ್ನೆಷ್ಟು ಶಕ್ತಿ ವ್ಯಯವಾಗುತ್ತದೆ?’
ತೃಪ್ತರಾಗಿರಲು ಕಲಿಯಿರಿ
ನಮ್ಮ ಮನೋಭಾವ ನಮ್ಮ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, “ಅನ್ನವಸ್ತ್ರಗಳಿದ್ದರೆ ಸಾಕು, ನಾವು ಈ ವಿಷಯಗಳಲ್ಲಿ ತೃಪ್ತರಾಗಿರುವೆವು” ಎಂಬ ಮನೋಭಾವ ನಮಗಿರುವಂತೆ ಬೈಬಲ್ ಪ್ರೇರಿಸುತ್ತದೆ. (1 ತಿಮೊಥೆಯ 6:8) ತೃಪ್ತರಾಗಿರುವುದರ ಅರ್ಥವೇನು? ನಮ್ಮ ಬಯಕೆಗಳಿಗೆ ಮಿತಿಯಿಟ್ಟು, ನಮ್ಮ ದೈನಂದಿನ ಅಗತ್ಯಗಳು ಪೂರೈಸಲ್ಪಟ್ಟಾಗ ಅಷ್ಟರಲ್ಲೇ ಸಂತೃಪ್ತರಾಗಿರುವುದೇ. ‘ಇನ್ನೂ ಬೇಕು’ ಎಂಬ ಆಸೆಯ ಬೆನ್ನುಹತ್ತಿದರೆ ಬದುಕನ್ನು ಸರಳಗೊಳಿಸುವ ಪ್ರಯತ್ನ ನೆಲಕಚ್ಚುವುದು.—ಮಾರ್ಕ 4:19.
ರೀನಾ ತನ್ನ ಪರಿಸ್ಥಿತಿಯನ್ನು ಇದ್ದ ಹಾಗೆ ನೋಡಲಾರಂಭಿಸಿದಾಗ ತೃಪ್ತ ಮನೋಭಾವ ಬೆಳೆಸಿಕೊಳ್ಳಲು ಶಕ್ತಳಾದಳು. ಅವಳನ್ನುವುದು: “ನಮಗೆ ವಿದ್ಯುಚ್ಛಕ್ತಿ, ಉರುವಲು ಇಲ್ಲದ ಅಥವಾ ತಲೆ ಮೇಲೆ ಸೂರಿಲ್ಲದೆ ಬೀದಿಯಲ್ಲಿರಬೇಕಾದ ಸ್ಥಿತಿ ಬರಲಿಲ್ಲ. ನಿಜವಾದ ಸಮಸ್ಯೆಯೇನಾಗಿತ್ತೆಂದರೆ ನಮಗೆ ಸರಳವಾಗಿ ಜೀವಿಸಿ ಅಭ್ಯಾಸವಿರಲಿಲ್ಲ. ನಮ್ಮ ಹಿಂದಿನ ಜೀವನ ಮಟ್ಟವನ್ನೇ ಮುಂದುವರಿಸಿಕೊಂಡು ಹೋಗಬೇಕೆಂಬ ನನ್ನಾಸೆ ನನ್ನ ಸಂಕಟವನ್ನು ಹೆಚ್ಚಿಸಿತು ಏಕೆಂದರೆ ಅದು ಆಗುವ ಹೋಗುವ ಕೆಲಸವಾಗಿರಲಿಲ್ಲ.”
ತನ್ನ ಅತೃಪ್ತಿಗೆ ಕಾರಣ ಪರಿಸ್ಥಿತಿಗಳಲ್ಲ ತನ್ನ ಮನೋಭಾವವೇ ಎಂಬುದನ್ನು ರೀನಾ ಬೇಗನೆ ಗ್ರಹಿಸಿದಳು. “ಹೇಗಿದ್ದೆವು ಹೇಗಾದೆವು ಎಂದು ಕೊರಗುತ್ತಾ ಕೂರುವ ಬದಲು ನಾವಿದ್ದ ಸ್ಥಿತಿಯನ್ನು ನಾನು ಒಪ್ಪಿಕೊಳ್ಳಲೇಬೇಕಾಯಿತು. ದೇವರು ನಮಗೆ ಪ್ರತಿದಿನವೂ ಏನನ್ನು ಒದಗಿಸುತ್ತಾ ಇದ್ದನೋ ಅದರಲ್ಲೇ ತೃಪ್ತಳಾಗಿರಲು ಕಲಿತಾಗ ನನ್ನ ಸಂತೋಷ ಹೆಚ್ಚಾಯಿತು” ಅನ್ನುತ್ತಾಳೆ ಅವಳು.
ನಿಮ್ಮನ್ನೇ ಕೇಳಿಕೊಳ್ಳಿ: ‘ನನ್ನ ಇವತ್ತಿನ ಅಗತ್ಯಗಳು ಪೂರೈಸಲ್ಪಟ್ಟಿವೆಯೋ? ಹಾಗಿದ್ದಲ್ಲಿ ನಾಳಿನ ಬಗ್ಗೆ ಯಾಕೆ ಚಿಂತಿಸಬೇಕು? ನಾಳೆಯೂ ನನ್ನ ಅಗತ್ಯಗಳು ಪೂರೈಸಲ್ಪಡುವವಲ್ಲಾ?’
ಹಾಗಾದರೆ ನಾವು ಸರಿಯಾದ ಮನೋಭಾವವನ್ನು ಬೆಳೆಸಿಕೊಳ್ಳುವುದೇ ಸ್ವಲ್ಪ ಹಣದಲ್ಲಿ ಜೀವನ ನಡೆಸುವ ಸವಾಲನ್ನು ಜಯಿಸಲು ಇಡುವ ಪ್ರಥಮ ಹೆಜ್ಜೆ ಆಗಿದೆ. ಆದರೆ ಕೆಲಸ ಕಳಕೊಂಡ ಕಾರಣ ನಿಮ್ಮ ಬಳಿ ಹಣ ಕಡಿಮೆ ಇರುವಾಗ ಯಾವ ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಬಲ್ಲಿರಿ? (g10-E 07)
[ಪುಟ 5ರಲ್ಲಿರುವ ಚೌಕ]
ಪಟ್ಟುಹಿಡಿದರೆ ಪ್ರತಿಫಲ ಖಂಡಿತ!
ಹಲವಾರು ವಾರಗಳ ವರೆಗೆ ಕೆಲಸಕ್ಕಾಗಿ ಅಲೆದಾಡಿದ ಸುಪ್ರೀತ್ಗೆ ತನ್ನ ಮುಂದಿದ್ದ ಅವಕಾಶದ ಎಲ್ಲ ಕದಗಳು ಮುಚ್ಚಿಕೊಂಡಿವೆಯೆಂದು ಅನಿಸಿತು. “ಬಸ್ಸ್ಟಾಪ್ನಲ್ಲಿ ಕಾಯುತ್ತಾ ಇದ್ದರೂ ಯಾವ ಬಸ್ಸೂ ಬರದಿದ್ದ ಹಾಗಿತ್ತು ನನ್ನ ಸ್ಥಿತಿ” ಎಂದನವನು. ಆದುದರಿಂದ ಅವನು ತನ್ನಿಂದ ಸಾಧ್ಯವಿದ್ದ ಒಂದು ವಿಷಯಮಾಡಲು ನಿರ್ಣಯಿಸಿದನು. ಅದೇನೆಂದರೆ, ತನ್ನ ಕೌಶಲದ ಅಷ್ಟೇನೂ ಅಗತ್ಯವಿಲ್ಲದಂತೆ ತೋರುತ್ತಿದ್ದ ಕಂಪೆನಿಗಳನ್ನು ಸೇರಿಸಿ ಹಲವಾರು ಕಂಪೆನಿಗಳಿಗೆ ಅರ್ಜಿಹಾಕಿದನು. ಈ ಅರ್ಜಿಗಳಿಗೆ ಸಿಕ್ಕಿದ ಪ್ರತಿಯೊಂದು ಪ್ರತಿಕ್ರಿಯೆಯಲ್ಲಿ ಆಸಕ್ತಿವಹಿಸಿ ಪ್ರತಿಯೊಂದು ಇಂಟರ್ವ್ಯೂಗಾಗಿ ಚೆನ್ನಾಗಿ ತಯಾರಿಮಾಡಿದನು. “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ” ಎಂಬ ವಿಚಾರ ಅವನ ಮನಸ್ಸಲ್ಲಿತ್ತು. (ಜ್ಞಾನೋಕ್ತಿ 21:5) “ಒಂದು ಕಂಪೆನಿಯಲ್ಲಿ ನನ್ನನ್ನು ಎರಡು ಬಾರಿ ಇಂಟರ್ವ್ಯೂ ಮಾಡಿದರು. ಆ ಇಂಟರ್ವ್ಯೂಗಳಲ್ಲಿ ಕಂಪೆನಿಯ ಉನ್ನತ ಹುದ್ದೆಯ ಮ್ಯಾನೇಜರುಗಳು ನೂರಾರು ಪ್ರಶ್ನೆ ಕೇಳಿದರು. ಆದರೆ ಆಮೇಲೆ ನನ್ನನ್ನು ಕೆಲಸಕ್ಕಿಟ್ಟುಕೊಂಡರು!” ಅನ್ನುತ್ತಾನೆ ಅವನು. ಹೀಗೆ ಸುಪ್ರೀತ್ ಪಟ್ಟುಹಿಡಿದದ್ದರಿಂದ ಕೂನೆಗೂ ಪ್ರತಿಫಲ ಸಿಕ್ಕಿತು.
[ಪುಟ 6ರಲ್ಲಿರುವ ಚೌಕ/ಚಿತ್ರ]
ಆದಾಯಕ್ಕಿಂತಲೂ ಅಮೂಲ್ಯ
ಯಾವುದು ಮುಖ್ಯ? ನಿಮ್ಮ ವ್ಯಕ್ತಿತ್ವವೋ ನಿಮ್ಮ ಆದಾಯವೋ? ಬೈಬಲಿನ ಈ ಎರಡು ಆಣಿಮುತ್ತುಗಳನ್ನು ಪರಿಗಣಿಸಿರಿ.
“ವಕ್ರಮಾರ್ಗಿಯಾದ ಐಶ್ವರ್ಯವಂತನಿಗಿಂತ ನಿರ್ದೋಷವಾಗಿ ನಡೆಯುವ ದರಿದ್ರನು ಶ್ರೇಷ್ಠನು.”—ಜ್ಞಾನೋಕ್ತಿ 28:6.
“ದ್ವೇಷವಿರುವಲ್ಲಿ ಕೊಬ್ಬಿದ ದನದ ಮಾಂಸಕ್ಕಿಂತಲೂ ಪ್ರೇಮವಿರುವಲ್ಲಿ ಸೊಪ್ಪಿನ ಊಟವೇ ಉತ್ತಮ.”—ಜ್ಞಾನೋಕ್ತಿ 15:17.
ಒಬ್ಬ ವ್ಯಕ್ತಿಯ ಸಂಪಾದನೆ ಕಡಿಮೆಯಾದ ಮಾತ್ರಕ್ಕೆ ಅವನ ವ್ಯಕ್ತಿತ್ವದ ಮೌಲ್ಯ ಕಡಿಮೆಯಾಗುವುದಿಲ್ಲ. ಇದನ್ನೇ ರೀನಾ ತನ್ನ ಮಕ್ಕಳಿಗೆ ಹೇಳಿದಳು: “ಎಷ್ಟೋ ಮಂದಿ ಅಪ್ಪಂದಿರು ಕೆಲಸ ಕಳಕೊಂಡಾಗ ತಮ್ಮ ಕುಟುಂಬಗಳನ್ನೇ ಬಿಟ್ಟುಹೋಗಿದ್ದಾರೆ. ಆದರೆ ನಿಮ್ಮ ಅಪ್ಪ ಈಗಲೂ ನಿಮ್ಮೊಟ್ಟಿಗೆ ಇದ್ದಾರೆ. ಅವರು ನಿಮ್ಮನ್ನೆಷ್ಟು ಪ್ರೀತಿಸುತ್ತಾರೆ, ನಿಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸಲು ಎಷ್ಟು ಸಹಾಯ ಮಾಡಿದ್ದಾರೆಂದು ನೀವೇ ನೋಡಿದ್ದೀರಲ್ಲಾ? ಇಂಥ ಅಪ್ಪ ಎಲ್ಲಿ ಹುಡುಕಿದರೂ ಸಿಗುವುದಿಲ್ಲ ಮಕ್ಕಳೇ!”