ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g16 ನಂ. 3 ಪು. 10-11
  • ಸಮಸ್ಯೆ ಬಗ್ಗೆ ಮಾತಾಡೋದು ಹೇಗೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಮಸ್ಯೆ ಬಗ್ಗೆ ಮಾತಾಡೋದು ಹೇಗೆ?
  • ಎಚ್ಚರ!—2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸಮಸ್ಯೆ
  • ನಿಮಗಿದು ತಿಳಿದಿರಲಿ
  • ನೀವೇನು ಮಾಡಬಹುದು?
  • ಅತ್ತೆ-ಮಾವ ಜೊತೆ ಹೊಂದಿಕೊಂಡು ಹೋಗುವುದು ಹೇಗೆ?
    ಎಚ್ಚರ!—2015
  • ಸುಖ ಸಂಸಾರ ಸಾಧ್ಯ!
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಸಮಸ್ಯೆಗಳನ್ನು ಬಗೆಹರಿಸುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಮದುವೆಯ ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರೈಸುವುದು ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಇನ್ನಷ್ಟು
ಎಚ್ಚರ!—2016
g16 ನಂ. 3 ಪು. 10-11
ಹೆಂಡತಿಯ ಮಾತನ್ನು ಕೇಳಿಸಿಕೊಳ್ಳುತ್ತಿರುವ ಗಂಡ

ಸುಖೀ ಸಂಸಾರಕ್ಕೆ ಸಲಹೆಗಳು | ವೈವಾಹಿಕ ಜೀವನ

ಸಮಸ್ಯೆ ಬಗ್ಗೆ ಮಾತಾಡೋದು ಹೇಗೆ?

ಸಮಸ್ಯೆ

ಸಮಸ್ಯೆಯನ್ನು ಪರಿಹರಿಸಬೇಕು ಅಂತಾನೇ ನಿಮ್ಮ ಸಂಗಾತಿ ಜೊತೆ ಮಾತಾಡ್ತೀರ. ಆದರೆ ನೀವು ಮಾತಾಡಿದಾಗೆಲ್ಲಾ ಅದಿನ್ನೂ ದೊಡ್ಡದಾಗುತ್ತಾ ಇದೆಯಾ? ಚಿಂತೆ ಮಾಡ್ಬಡಿ, ನಿಮ್ಮ ಪರಿಸ್ಥಿತಿಯನ್ನು ಸುಧಾರಿಸಬಹುದು. ಆದರೆ ಅದಕ್ಕಿಂತ ಮುಂಚೆ, ಪುರುಷರು ಮಾತಾಡೋದಕ್ಕೂ ಸ್ತ್ರೀಯರು ಮಾತಾಡೋದಕ್ಕೂ ಇರುವ ವ್ಯತ್ಯಾಸವನ್ನು ನೀವು ತಿಳಿದುಕೊಳ್ಳಬೇಕು.a

ನಿಮಗಿದು ತಿಳಿದಿರಲಿ

ಪುರುಷರಿಗೆ ಸಮಸ್ಯೆಗೆ ಪರಿಹಾರ ಯೋಚಿಸುವ ಸ್ವಭಾವವಿದ್ದರೆ ಸ್ತ್ರೀಯರಿಗೆ ಸಮಸ್ಯೆ ಬಗ್ಗೆ ಮಾತಾಡುವ ಸ್ವಭಾವವಿರುತ್ತದೆ

ಪರಿಹಾರ ಹುಡುಕುವುದಕ್ಕಿಂತ ಮುಂಚೆ ಸಮಸ್ಯೆ ಬಗ್ಗೆ ಮಾತಾಡೋಕೆ ಸ್ತ್ರೀಯರು ಇಷ್ಟಪಡುತ್ತಾರೆ. ನಿಜ ಏನೆಂದರೆ, ಮಾತಾಡೋದೇ ಸಮಸ್ಯೆಗೆ ಕೆಲವೊಮ್ಮೆ ಪರಿಹಾರ ಆಗಿರುತ್ತೆ.

“ನನ್ನ ಭಾವನೆಗಳನ್ನು ಹೇಳಿಕೊಂಡಾಗ, ನನ್ನ ಗಂಡ ನನ್ನನ್ನ ಅರ್ಥ ಮಾಡಿಕೊಂಡಾಗ ನನಗೆ ನೆಮ್ಮದಿ ಅನಿಸುತ್ತೆ. ಮಾತಾಡಿದ ಸ್ವಲ್ಪ ಹೊತ್ತಲ್ಲೇ ನನ್ನ ಮನಸ್ಸಿನ ಭಾರ ಎಲ್ಲಾ ಇಳಿದಂತಿರುತ್ತೆ.”—ಶಾಲಿನಿ.b

“ಮನಸ್ಸು ನೆಮ್ಮದಿಯಿಂದ ಇರಬೇಕೆಂದರೆ ನನ್ನ ಭಾವನೆಗಳನ್ನ ನನ್ನ ಗಂಡನಿಗೆ ಹೇಳಿಬಿಡಬೇಕು. ಇಲ್ಲಾಂದರೆ ಬೇರೆ ಯಾವ ಕೆಲಸಾನೂ ಮಾಡೋಕಾಗಲ್ಲ.”—ಅಮೃತ.

“ನಾನು ಮಾತಾಡ್ತಿರುವಾಗ ಏನೆಲ್ಲಾ ಆಯ್ತು ಅಂತ ಯೋಚಿಸಿ ಸಮಸ್ಯೆಗೆ ಕಾರಣ ಏನಂತ ಕಂಡುಹಿಡಿತಾ ಇರ್ತೀನಿ. ಇದೊಂದು ಥರ ಪತ್ತೆದಾರಿ ಕೆಲಸ.”—ಮಮತ.

ಪುರುಷರು ಮೊದಲು ಪರಿಹಾರ ಹುಡುಕುವುದರ ಬಗ್ಗೆ ಯೋಚಿಸುತ್ತಾರೆ. ಸಮಸ್ಯೆಗಳಿಗೆ ಪರಿಹಾರ ಹುಡುಕಿದರೇನೇ ಪುರುಷರಿಗೆ ಒಂದು ಥರ ನೆಮ್ಮದಿ. ಹೆಂಡತಿ ತನ್ನ ಮೇಲೆ ಭರವಸೆ ಇಡಬೇಕಾದರೆ ತಾನು ಆಕೆಯ ಸಮಸ್ಯೆಗಳನ್ನ ಚಿಟಿಕೆ ಹೊಡೆಯೊಷ್ಟರಲ್ಲಿ ಪರಿಹರಿಸಿಬಿಡಬೇಕು ಅಂತ ಗಂಡಂದಿರು ನೆನೆಸುತ್ತಾರೆ. ಆದರೆ, ಹೆಂಡತಿ ಅವನ ಸಲಹೆಯನ್ನು ಸ್ವೀಕರಿಸದಿದ್ದರೆ ಅವನಿಗೆ ಮುಂದೆ ಏನು ಮಾಡಬೇಕು ಅಂತ ಗೊತ್ತಾಗಲ್ಲ. “ಸಮಸ್ಯೆಗೆ ಪರಿಹಾರ ಬೇಡ ಅಂದಮೇಲೆ, ಯಾಕೆ ಆ ಸಮಸ್ಯೆ ಬಗ್ಗೆ ಸುಮ್ಮನೆ ಮಾತಾಡಬೇಕು” ಎನ್ನುತ್ತಾನೆ ಕಾರ್ತಿಕ್‌.

“ಸಲಹೆ ಕೊಡೋದಕ್ಕೆ ಮುಂಚೆ ಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳೋದು ತುಂಬ ಪ್ರಾಮುಖ್ಯ. ಹಾಗಾಗಿ, ಸಮಸ್ಯೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೀರ, ಅದನ್ನು ಕೇಳಿ ನಿಮಗೂ ಬೇಜಾರಾಯ್ತು ಅಂತ ನಿಮ್ಮ ಸಂಗಾತಿಗೆ ಹೇಳಿ. ಆದರೆ ನೆನಪಿಡಿ, ನಿಮ್ಮ ಸಂಗಾತಿಗೆ ಬೇಕಾಗಿರೋದು ಪರಿಹಾರ ಅಲ್ಲ, ಅವರು ಹೇಳೋದನ್ನು ಚೆನ್ನಾಗಿ ಕೇಳಿಸಿಕೊಳ್ಳುವವರು ಅಷ್ಟೇ” ಎಂದು ದಿ ಸೆವೆನ್‌ ಪ್ರಿನ್ಸಿಪಲ್ಸ್‌ ಫಾರ್‌ ಮೇಕಿಂಗ್‌ ಮ್ಯಾರೇಜ್‌ ವರ್ಕ್‌ ಎಂಬ ಪುಸ್ತಕ ಹೇಳುತ್ತದೆ.

ನೀವೇನು ಮಾಡಬಹುದು?

ಗಂಡಂದಿರು: ತಾಳ್ಮೆಯಿಂದ ಕೇಳಿಸಿಕೊಳ್ಳೋದನ್ನು ಅಭ್ಯಾಸಮಾಡಿಕೊಳ್ಳಿ. “ಹೆಂಡತಿ ಹೇಳಿದ್ದನ್ನೆಲ್ಲಾ ಕೇಳಿಸಿಕೊಂಡ ಮೇಲೆ, ‘ಕೇಳಿಸ್ಕೊಂಡು ಏನೂ ಉಪಯೋಗ ಇಲ್ವಲ್ಲಾ’ ಅಂತ ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ. ಆದರೆ, ನನ್ನ ಹೆಂಡತಿಗೆ ಬೇಕಾಗಿದ್ದು ಇದೇ” ಎಂದು ತರುಣ್‌ ಹೇಳುತ್ತಾರೆ. “ಹೆಂಡತಿ ಮಾತಾಡುವಾಗ ಮಧ್ಯೆ ಬಾಯಿ ಹಾಕದೆ ಅವಳು ಹೇಳುವುದನ್ನು ಕೇಳಿಸಿಕೊಳ್ಳುವುದು ತುಂಬ ಒಳ್ಳೇದು ಅಂತ ನನಗನಿಸುತ್ತೆ. ಆಕೆ ಮಾತಾಡಿದ ಮೇಲೆ, ‘ನಿಮ್ಮ ಜೊತೆ ಮಾತಾಡಿ, ನನ್ನ ಮನಸ್ಸು ಹಗುರ ಆಯ್ತು ರೀ’ ಅಂತಾಳೆ” ಎಂದು ಸ್ಟೀಫನ್‌ ಹೇಳುತ್ತಾರೆ.

ಪ್ರಯತ್ನಿಸಿ ನೋಡಿ: ಮುಂದಿನ ಸಲ ಸಮಸ್ಯೆ ಬಗ್ಗೆ ನಿಮ್ಮ ಹೆಂಡತಿ ಮಾತಾಡುವಾಗ, ನೇರವಾಗಿ ಪರಿಹಾರ ಹೇಳೋಕೆ ಹೋಗಬೇಡಿ. ಮಾತಾಡುವಾಗ ಆಕೆಯನ್ನು ನೋಡುತ್ತಾ, ಹೇಳೋದನ್ನ ಚೆನ್ನಾಗಿ ಕೇಳಿಸಿಕೊಳ್ಳಿ. ತಲೆಯಾಡಿಸುವ ಮೂಲಕ ಅವರು ಹೇಳ್ತಿರೋದನ್ನು ನೀವು ಕೇಳಿಸಿಕೊಳ್ಳುತ್ತಿದ್ದೀರ ಅಂತ ತೋರಿಸಿ. “ನನ್ನ ಹೆಂಡತಿಗೆ, ಅವಳನ್ನು ಅರ್ಥಮಾಡಿಕೊಂಡು, ಅವಳು ಹೇಳೋದನ್ನ ಕೇಳ್ತಿದ್ದರೆ ಅಷ್ಟೇ ಸಾಕು” ಅಂತಾರೆ ಜಾರ್ಜ್‌.—ಬೈಬಲಿನ ತತ್ವ: ಯಾಕೋಬ 1:19.

ಹೆಂಡತಿಯರು: ನಿಮಗೆ ಏನು ಬೇಕಂತ ನಿರ್ದಿಷ್ಟವಾಗಿ ಹೇಳಿ. “ನಮಗೇನು ಬೇಕಂತ ನಮ್ಮ ಸಂಗಾತಿನೇ ತಿಳಿದುಕೊಳ್ಳಬೇಕು ಅಂತ ನಾವು ನಿರೀಕ್ಷಿಸುತ್ತೇವೆ. ಆದರೆ ಕೆಲವೊಮ್ಮೆ ನಾವೇ ನೇರವಾಗಿ ಏನು ಬೇಕಂತ ಕೇಳಿಬಿಡಬೇಕು” ಅಂತಾರೆ ಚಿತ್ರ. “ನಿಮ್ಮ ಹತ್ತಿರ ಒಂದು ವಿಷಯ ಹೇಳಬೇಕು. ದಯವಿಟ್ಟು ನಾನು ಹೇಳೋದನ್ನ ಕೇಳಿಸಿಕೊಳ್ಳುತ್ತೀರಾ?” ಎಂದು ಹೇಳೋದು ಒಂದೊಳ್ಳೇ ದಾರಿ ಅಂತಾರೆ ಯಾಮಿನಿ.

ಪ್ರಯತ್ನಿಸಿ ನೋಡಿ: ಸಮಸ್ಯೆ ಹೇಳೋ ಮುಂಚೆ ನಿಮ್ಮ ಗಂಡ ನಿಮಗೆ ಪರಿಹಾರ ಹೇಳಿದರೆ, ನೀವು ಹೇಳೋದನ್ನ ಅವರು ಕೇಳಿಸಿಕೊಳ್ಳುವುದೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳಬೇಡಿ. ನಿಮಗೆ ಸಹಾಯ ಮಾಡಬೇಕು ಅನ್ನೋದು ಅವರ ಬಯಕೆ. “ಬೇಜಾರು ಮಾಡಿಕೊಳ್ಳುವ ಬದಲು, ‘ನನ್ನ ಮಾತನ್ನು ಕೇಳಿಸಿಕೊಳ್ಳಬೇಕು ಅಂತ ಅವರಿಗಿಷ್ಟ ಇದೆ, ಆದರೆ ಪರಿಹಾರ ಹುಡುಕೋಕೆ ಪ್ರಯತ್ನಿಸುತ್ತಿದ್ದಾರೆ’ ಅಂತ ಅರ್ಥ ಮಾಡಿಕೊಳ್ಳುತ್ತೀನಿ” ಅಂತಾರೆ ಎಸ್ತೇರ್‌.—ಬೈಬಲಿನ ತತ್ವ: ರೋಮನ್ನರಿಗೆ 12:10.

ಇಬ್ಬರೂ ಏನು ಮಾಡಬಹುದು?: ಬೇರೆಯವರು ನಮ್ಮ ಜೊತೇಲಿ ಹೇಗೆ ನಡೆದುಕೊಳ್ಳಬೇಕು ಅಂತ ನಾವು ಬಯಸುತ್ತೇವೋ ಹಾಗೇ ನಾವೂ ಅವರ ಜೊತೆ ನಡೆದುಕೊಳ್ಳಬೇಕು. ಆದ್ದರಿಂದ, ಸಮಸ್ಯೆಗಳ ಬಗ್ಗೆ ಮಾತಾಡುವಾಗ ನಿಮ್ಮ ಸಂಗಾತಿಯೊಂದಿಗೆ ಹೇಗೆ ಮಾತಾಡಿದರೆ ಚೆನ್ನಾಗಿರುತ್ತೆ ಅಂತ ಯೋಚಿಸಿ. (1 ಕೊರಿಂಥ 10:24) “ನೀವು ಗಂಡನಾಗಿದ್ದರೆ ಕೇಳಿಸಿಕೊಳ್ಳುವುದನ್ನು ಕಲಿಯಿರಿ. ನೀವು ಹೆಂಡತಿಯಾಗಿದ್ದರೆ ಗಂಡ ನೀಡುವ ಸಲಹೆಗಳಿಗೂ ಕಿವಿಗೊಡಿ. ಈ ರೀತಿ ಹೊಂದುಕೊಂಡು ಹೋದರೆ ಇಬ್ಬರಿಗೂ ಪ್ರಯೋಜನ ಸಿಗುತ್ತದೆ” ಅಂತಾರೆ ಮೈಕಲ್‌.—ಬೈಬಲಿನ ತತ್ವ: 1 ಪೇತ್ರ 3:8. ◼ (g16-E No. 3)

a ಇಲ್ಲಿ ತಿಳಿಸುವ ಲಕ್ಷಣಗಳು ಎಲ್ಲಾ ಗಂಡ-ಹೆಂಡತಿಯರಲ್ಲಿ ಇಲ್ಲದೇ ಇರಬಹುದು. ಆದರೂ ಈ ಸಲಹೆಗಳನ್ನು ಅನ್ವಯಿಸಿಕೊಂಡರೆ ಗಂಡ-ಹೆಂಡತಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಮಾತಾಡಲು ಸಹಾಯವಾಗುತ್ತದೆ.

b ಈ ಲೇಖನದಲ್ಲಿ ಹೆಸರುಗಳನ್ನು ಬದಲಿಸಲಾಗಿದೆ.

ಬೈಬಲಿನ ನುಡಿಮುತ್ತುಗಳು

  • ‘ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಆಗಿರು.’—ಯಾಕೋಬ 1:19.

  • “ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.”—ರೋಮನ್ನರಿಗೆ 12:10.

  • ‘ಏಕಮನಸ್ಸುಳ್ಳವರೂ ಸಹೋದರ ಮಮತೆಯುಳ್ಳವರೂ ಆಗಿರಿ.’—1 ಪೇತ್ರ 3:8.

ಯಾವಾಗ ಮಾತಾಡೋದು?

“ಸಮಯೋಚಿತವಾದ ವಚನದಲ್ಲಿ ಎಷ್ಟೋ ಸ್ವಾರಸ್ಯ!” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 15:23) ಇದರರ್ಥ ತಪ್ಪಾದ ಸಮಯದಲ್ಲಿ ಮಾತಾಡಿದರೆ ಅಪಾಯ ಖಂಡಿತ.

“ತಪ್ಪಾದ ಸಮಯದಲ್ಲಿ ಮಾತಾಡಿದರೆ ಸಮಸ್ಯೆ ಇನ್ನೂ ದೊಡ್ಡದಾಗುತ್ತದೆ.”—ಶಾಲಿನಿ.

“ಹಸಿವಿದ್ದಾಗ ಸುಸ್ತಾಗಿದ್ದಾಗ ಸಮಸ್ಯೆ ಬಗ್ಗೆ ಮಾತಾಡಲೇಬೇಡಿ.”—ಅಮೃತ.

“ಒಂದು ಸಲ ನನ್ನ ಗಂಡ ಕೆಲಸದಿಂದ ಮನೆಗೆ ಬಂದ ತಕ್ಷಣ ನನಗಾದ ಬೇಜಾರಿನ ಬಗ್ಗೆ ಹೇಳೋಕೆ ಶುರು ಮಾಡಿದೆ. ಮಾತಾಡ್ತಾ ಮಧ್ಯದಲ್ಲೇ ನಿಲ್ಲಿಸಿ, ‘ಛೇ ಅವರು ಎಷ್ಟು ಸುಸ್ತಾಗಿ ಬಂದಿದ್ದಾರೆ, ನನ್ನ ಕಥೆ ಹೇಳಿ ಅವರನ್ನ ಇನ್ನೂ ಸುಸ್ತು ಮಾಡುತ್ತಾ ಇದ್ದೀನಿ’ ಅಂತ ಮನಸ್ಸಿನಲ್ಲಿ ಅಂದುಕೊಂಡೆ. ‘ಉಳಿದದ್ದನ್ನು ಊಟ ಆದ ಮೇಲೆ ಹೇಳ್ತೀನಿ ರೀ’ ಅಂದೆ. ಅದಕ್ಕವರು ನಂಗೆ ಥ್ಯಾಂಕ್ಸ್‌ ಹೇಳಿದ್ರು. ಊಟ ಆದ ಮೇಲೆ ಇಬ್ಬರೂ ಸಮಾಧಾನವಾಗಿ ಮಾತಾಡಿದ್ವಿ.”—ಮಮತ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ