ಅಧ್ಯಾಯ 4
ನಿರರ್ಗಳವಾಗಿ ಭಾಷಣ ನೀಡುವುದು
ಗಟ್ಟಿಯಾಗಿ ಓದುವ ಸಮಯದಲ್ಲಿ ಕೆಲವು ಅಭಿವ್ಯಕ್ತಿಗಳನ್ನು ಉಚ್ಚರಿಸುವಾಗ ನೀವು ಮುಗ್ಗರಿಸುತ್ತೀರೊ? ಅಥವಾ, ಭಾಷಣ ಕೊಡಲಿಕ್ಕಾಗಿ ನೀವು ಸಭಿಕರ ಮುಂದೆ ಹೋಗುವಾಗ, ಕೆಲವೊಮ್ಮೆ ಸರಿಯಾದ ಪದಕ್ಕಾಗಿ ಹುಡುಕಾಡುತ್ತಿದ್ದೀರೆಂದು ನಿಮಗನಿಸುತ್ತದೊ? ಹಾಗಿರುವಲ್ಲಿ, ನಿಮಗೆ ನಿರರ್ಗಳವಾಗಿ ಮಾತಾಡುವ ವಿಷಯದಲ್ಲಿ ಸಮಸ್ಯೆಯಿದೆ. ನಿರರ್ಗಳವಾಗಿ ಮಾತಾಡುವಂಥ ಒಬ್ಬ ವ್ಯಕ್ತಿಯು ಯಾವ ರೀತಿಯಲ್ಲಿ ಓದುತ್ತಾನೆ ಹಾಗೂ ಮಾತನಾಡುತ್ತಾನೆಂದರೆ, ಅವನ ಮಾತುಗಳೂ ಆಲೋಚನೆಗಳೂ ಸಾಕಷ್ಟು ಸರಾಗವಾಗಿ ಹರಿಯುತ್ತವೆ. ಅವನು ಸದಾ ಮಾತಾಡುತ್ತಾ ಇರುತ್ತಾನೆ, ಅತಿ ಶೀಘ್ರವಾಗಿ ಮಾತಾಡುತ್ತಾನೆ ಇಲ್ಲವೆ ಸ್ವಲ್ಪವೂ ಆಲೋಚಿಸದೆ ಮಾತಾಡುತ್ತಾನೆಂದು ಇದರ ಅರ್ಥವಲ್ಲ. ಅವನ ಭಾಷಣವು ಹಿತಕರವಾಗಿರುತ್ತದೆ ಮತ್ತು ಆಕರ್ಷಕವಾಗಿರುತ್ತದೆಂಬುದು ಇದರ ಅರ್ಥ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ನಿರರ್ಗಳತೆಗೆ ವಿಶೇಷ ಗಮನವನ್ನು ಕೊಡಲಾಗುತ್ತದೆ.
ನಿರರ್ಗಳತೆಯ ಕೊರತೆಗೆ ಅನೇಕ ಅಂಶಗಳು ಕಾರಣವಾಗಿರಬಹುದು. ಈ ಕೆಳಗಿನ ಅಂಶಗಳಲ್ಲಿ ಯಾವುದಕ್ಕಾದರೂ ನೀವು ವಿಶೇಷ ಗಮನವನ್ನು ಕೊಡಬೇಕಾಗಿದೆಯೋ? (1) ಇತರರ ಮುಂದೆ ಓದುವಾಗ, ಕೆಲವು ಪದಗಳು ಅಪರಿಚಿತವಾಗಿರುವುದು ಹಿಂಜರಿಕೆಯನ್ನು ಉಂಟುಮಾಡಬಹುದು. (2) ಅನೇಕ ಕಡೆಗಳಲ್ಲಿ ನಿಲ್ಲಿಸಿ ನಿಲ್ಲಿಸಿ ಮಾತಾಡುವುದು, ತುಂಡುತುಂಡಾದ ಮಾತಾಗಿ ಪರಿಣಮಿಸಬಹುದು. (3) ತಯಾರಿಯ ಕೊರತೆಯು ಈ ಸಮಸ್ಯೆಗೆ ಕಾರಣವಾಗಿರಬಹುದು. (4) ಒಂದು ಗುಂಪಿನ ಮುಂದೆ ಮಾತಾಡುವಾಗ, ನಿರರ್ಗಳತೆಯ ಕೊರತೆಗೆ ಕಾರಣವಾಗಿರುವ ಸಾಮಾನ್ಯ ಅಂಶವು, ಭಾಷಣದ ವಿಷಯವನ್ನು ತಾರ್ಕಿಕವಾಗಿ ಸಂಘಟಿಸದಿರುವುದೇ ಆಗಿದೆ. (5) ಮಿತವಾದ ಶಬ್ದಭಂಡಾರವು, ಒಬ್ಬ ವ್ಯಕ್ತಿಯು ಸರಿಯಾದ ಪದಗಳಿಗಾಗಿ ಹುಡುಕಾಡುವಾಗ ಅವನು ಸ್ವಲ್ಪ ಹಿಂಜರಿಯುವಂತೆ ಮಾಡಬಹುದು. (6) ತೀರ ಹೆಚ್ಚು ಪದಗಳನ್ನು ಒತ್ತಿಹೇಳುವಾಗ, ನಿರರ್ಗಳತೆಗೆ ತಡೆಯುಂಟಾಗಬಹುದು. (7) ವ್ಯಾಕರಣ ನಿಯಮಗಳ ಪರಿಚಯದ ಕೊರತೆಯು ಈ ಸಮಸ್ಯೆಗೆ ಹೆಚ್ಚನ್ನು ಕೂಡಿಸಬಹುದು.
ನಿಮ್ಮ ಭಾಷಣದಲ್ಲಿ ನಿರರ್ಗಳತೆಯ ಕೊರತೆ ಇರುವುದಾದರೆ, ರಾಜ್ಯ ಸಭಾಗೃಹದಲ್ಲಿರುವ ಸಭಿಕರು ಅಕ್ಷರಾರ್ಥವಾಗಿ ಎದ್ದು ಹೊರಗೆ ಹೋಗಲಿಕ್ಕಿಲ್ಲವಾದರೂ, ಅವರ ಮನಸ್ಸುಗಳು ಅಲೆದಾಡಬಹುದು. ಇದರ ಫಲವಾಗಿ, ನೀವು ಏನು ಹೇಳುತ್ತೀರೋ ಅದರಲ್ಲಿ ಹೆಚ್ಚಿನದ್ದು ನಷ್ಟವಾಗಬಹುದು.
ಇನ್ನೊಂದು ಕಡೆಯಲ್ಲಿ, ಬಲವತ್ತಾದದ್ದೂ ನಿರರ್ಗಳವಾದದ್ದೂ ಆಗಿರಬೇಕಾದ ಭಾಷಣವು ಉದ್ಧಟತನದ್ದು, ಪ್ರಾಯಶಃ ಸಭಿಕರನ್ನು ಪೇಚಾಟಕ್ಕೊಳಪಡಿಸುವಂತಹದ್ದು ಆಗಿ ಪರಿಣಮಿಸದಂತೆ ಜಾಗ್ರತೆ ವಹಿಸತಕ್ಕದ್ದು. ಸಾಂಸ್ಕೃತಿಕ ಹಿನ್ನೆಲೆಯಲ್ಲಿರುವ ವ್ಯತ್ಯಾಸದ ಕಾರಣ ನಿಮ್ಮ ಭಾಷಣವನ್ನು ಜನರು ಅಧಿಕಪ್ರಸಂಗದಂತೆ ಅಥವಾ ಯಥಾರ್ಥತೆಯ ಕೊರತೆಯುಳ್ಳದ್ದಾಗಿರುವಂತೆ ಪರಿಗಣಿಸುವುದಾದರೆ, ನಿಮ್ಮ ಭಾಷಣದ ಉದ್ದೇಶದಲ್ಲಿ ನೀವು ಸೋತುಹೋದಂತಾಗುವುದು. ಅಪೊಸ್ತಲ ಪೌಲನು ಒಬ್ಬ ಅನುಭವಸ್ಥ ಭಾಷಣಕರ್ತನಾಗಿದ್ದರೂ, ಅನಾವಶ್ಯಕವಾದ ಗಮನವನ್ನು ತನ್ನ ಕಡೆಗೆ ಸೆಳೆದುಕೊಳ್ಳದಂತೆ ಅವನು ಕೊರಿಂಥದವರನ್ನು “ಬಲಹೀನನೂ ಭಯಪಡುವವನೂ ಬಹು ನಡುಗುವವನೂ” ಆಗಿ ಸಮೀಪಿಸಿದ ವಿಷಯವು ಗಮನಾರ್ಹವಾಗಿದೆ.—1 ಕೊರಿಂ. 2:3.
ತ್ಯಜಿಸಬೇಕಾದ ಅಭ್ಯಾಸಗಳು. ಅನೇಕರು ಮಾತನಾಡುವಾಗ “ಮತ್ತು-ಅ. . .ಅ” ಎಂಬಂಥ ಅಭಿವ್ಯಕ್ತಿಗಳನ್ನು ಅತಿಯಾಗಿ ಒಳಗೂಡಿಸುವ ರೂಢಿಯುಳ್ಳವರಾಗಿರುತ್ತಾರೆ. ಇತರರು ಪದೇ ಪದೇ “ಈಗ” ಎಂಬ ಪದದಿಂದ ಒಂದು ವಿಷಯವನ್ನು ಆರಂಭಿಸುತ್ತಾರೆ ಅಥವಾ ಅವರು ಹೇಳುತ್ತಿರುವ ಪ್ರತಿಯೊಂದು ವಿಷಯಕ್ಕೂ “ನಿಮಗೆ ತಿಳಿದೇ ಇದೆ” ಅಥವಾ “ಗೊತ್ತೇ ಇದೆ” ಎಂಬ ಪದಗುಚ್ಛವನ್ನು ಸೇರಿಸಿಬಿಡುತ್ತಾರೆ. ನೀವು ಇಂತಹ ಪದಗಳನ್ನು ಎಷ್ಟು ಬಾರಿ ಉಪಯೋಗಿಸುತ್ತೀರೆಂಬ ಪ್ರಜ್ಞೆ ನಿಮಗಿರಲಿಕ್ಕಿಲ್ಲ. ಆದಕಾರಣ, ನೀವು ಒಂದು ಪ್ರ್ಯಾಕ್ಟಿಸ್ ಸೆಷನ್ ಅನ್ನು ಮಾಡಲು ಪ್ರಯತ್ನಿಸಿ, ಆ ಸಮಯದಲ್ಲಿ ಇನ್ನೊಬ್ಬರು ನೀವು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದು, ನೀವು ಅಂತಹ ಪದಗಳನ್ನು ಉಪಯೋಗಿಸಿದಾಗೆಲ್ಲ ಅದನ್ನು ಅವರು ಪುನರುಚ್ಚರಿಸುವಂತೆ ಕೇಳಿಕೊಳ್ಳಬಹುದು. ಆಗ ಅದನ್ನು ಎಷ್ಟು ಬಾರಿ ಉಪಯೋಗಿಸುತ್ತೀರೆಂಬುದನ್ನು ತಿಳಿದು ನಿಮಗೇ ಆಶ್ಚರ್ಯವಾಗಬಹುದು.
ಕೆಲವರು ಓದುವಾಗ ಮತ್ತು ಮಾತನಾಡುವಾಗ ಅನೇಕಾವರ್ತಿ ಹಿಂದಕ್ಕೆ ಹೋಗಿ, ಓದಿದ್ದನ್ನೇ ಪುನಃ ಓದುತ್ತಾರೆ ಇಲ್ಲವೆ ಹೇಳಿದ್ದನ್ನೇ ಪುನಃ ಹೇಳುತ್ತಾರೆ. ಅಂದರೆ, ಅವರು ಒಂದು ವಾಕ್ಯವನ್ನು ಆರಂಭಿಸಿದ ಬಳಿಕ, ಮಧ್ಯದಲ್ಲಿ ನಿಲ್ಲಿಸುತ್ತಾರೆ ಮತ್ತು ತಾವು ಈಗಾಗಲೇ ಹೇಳಿರುವ ವಿಷಯದಲ್ಲಿ ಒಂದು ಭಾಗವನ್ನಾದರೂ ಪುನಃ ಹೇಳುತ್ತಾರೆ.
ಇನ್ನು ಕೆಲವರು ಸಾಕಷ್ಟು ವೇಗವಾಗಿ ಮಾತಾಡುತ್ತಾರೆ ನಿಜ, ಆದರೆ ಅವರು ಒಂದು ವಿಚಾರವನ್ನು ಹೇಳುತ್ತಾ ಹೋಗುವಾಗ ವಾಕ್ಯದ ಮಧ್ಯದಲ್ಲಿ ನಿಲ್ಲಿಸಿ ಇನ್ನೊಂದು ವಿಚಾರಕ್ಕೆ ಹೋಗಿಬಿಡುತ್ತಾರೆ. ಮಾತುಗಳು ಸರಾಗವಾಗಿ ಹೊರಬರುತ್ತವಾದರೂ, ವಿಚಾರಗಳಲ್ಲಿ ಥಟ್ಟನೆ ಆಗುವ ಬದಲಾವಣೆಗಳು ನಿರರ್ಗಳತೆಯನ್ನು ಕುಂದಿಸುತ್ತವೆ.
ಉತ್ತಮಗೊಳಿಸುವ ವಿಧ. ಸರಿಯಾದ ಪದಕ್ಕಾಗಿ ಹುಡುಕಾಡುವುದು ನಿಮ್ಮ ಸಮಸ್ಯೆಯಾಗಿರುವಲ್ಲಿ, ನಿಮ್ಮ ಶಬ್ದಭಂಡಾರವನ್ನು ಹೆಚ್ಚಿಸಲು ನೀವು ಬಹಳಷ್ಟು ಪ್ರಯತ್ನವನ್ನು ಮಾಡುವ ಅಗತ್ಯವಿದೆ. ನೀವು ಓದುತ್ತಿರುವ ಕಾವಲಿನಬುರುಜು, ಎಚ್ಚರ! ಪತ್ರಿಕೆಗಳಲ್ಲಿ ಮತ್ತು ಬೇರೆ ಸಾಹಿತ್ಯಗಳಲ್ಲಿ ನಿಮಗೆ ಅಪರಿಚಿತವಾಗಿರುವ ಪದಗಳನ್ನು ವಿಶೇಷವಾಗಿ ಗಮನಿಸಿರಿ. ಶಬ್ದಕೋಶವನ್ನು ತೆರೆದು ಇವುಗಳ ಉಚ್ಚಾರಣೆ ಮತ್ತು ಅರ್ಥವನ್ನು ನೋಡಿರಿ, ಮತ್ತು ಇವುಗಳಲ್ಲಿ ಕೆಲವು ಪದಗಳನ್ನು ನಿಮ್ಮ ಶಬ್ದಭಂಡಾರಕ್ಕೆ ಸೇರಿಸಿರಿ. ಒಂದು ಶಬ್ದಕೋಶವು ನಿಮಗೆ ಲಭ್ಯವಿಲ್ಲದಿರುವಲ್ಲಿ, ಭಾಷೆಯನ್ನು ಚೆನ್ನಾಗಿ ಬಲ್ಲವರಿಂದ ಸಹಾಯವನ್ನು ಕೇಳಿಕೊಳ್ಳಿ.
ಕ್ರಮವಾಗಿ ಗಟ್ಟಿಯಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಈ ಅಭಿವೃದ್ಧಿಗೆ ಸಹಾಯಮಾಡುವುದು. ಕಷ್ಟಕರವಾದ ಪದಗಳನ್ನು ಗಮನಿಸಿ, ಅವುಗಳನ್ನು ಅನೇಕಾವರ್ತಿ ಗಟ್ಟಿಯಾಗಿ ಉಚ್ಚರಿಸಿ.
ನಿರರ್ಗಳವಾಗಿ ಓದಬೇಕಾದರೆ, ಒಂದು ವಾಕ್ಯದಲ್ಲಿ ಪದಗಳು ಹೇಗೆ ಒಟ್ಟುಗೂಡಿ ಕೆಲಸಮಾಡುತ್ತವೆಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ. ಲೇಖಕನಿಂದ ವ್ಯಕ್ತಪಡಿಸಲ್ಪಟ್ಟ ವಿಚಾರವನ್ನು ತಿಳಿಯಪಡಿಸಲಿಕ್ಕಾಗಿ, ಸಾಮಾನ್ಯವಾಗಿ ಪದಗಳನ್ನು ಒಟ್ಟುಗೂಡಿಸಿ ಗುಂಪಾಗಿ ಓದುವ ಅಗತ್ಯವಿದೆ. ಇಂಥ ಪದಸಮೂಹಗಳಿಗೆ ವಿಶೇಷವಾಗಿ ಗಮನಕೊಡಿರಿ. ನಿಮಗೆ ಸಹಾಯಕರವಾಗಿರುವಲ್ಲಿ, ಅವುಗಳಿಗೆ ಗುರುತು ಹಾಕಿರಿ. ಕೇವಲ ಪದಗಳನ್ನು ಸರಿಯಾಗಿ ಓದುವುದು ನಿಮ್ಮ ಉದ್ದೇಶವಾಗಿರುವುದಿಲ್ಲ, ವಿಚಾರಗಳನ್ನು ಸ್ಪಷ್ಟವಾಗಿ ತಿಳಿಯಪಡಿಸುವುದೂ ನಿಮ್ಮ ಉದ್ದೇಶವಾಗಿದೆ. ನೀವು ಒಂದು ವಾಕ್ಯವನ್ನು ವಿಶ್ಲೇಷಿಸಿದ ಬಳಿಕ ಮುಂದಿನ ವಾಕ್ಯಕ್ಕೆ ಹೋಗಿ, ಹೀಗೆ ಇಡೀ ಪ್ಯಾರಗ್ರಾಫನ್ನು ಅಧ್ಯಯನ ಮಾಡಿರಿ. ಅದರಲ್ಲಿರುವ ವಿಚಾರಧಾರೆಯ ಪರಿಚಯ ಮಾಡಿಕೊಳ್ಳಿರಿ. ಬಳಿಕ ಅದನ್ನು ಗಟ್ಟಿಯಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀವು ತಡವರಿಸದೆ ಓದುವ ತನಕ ಮತ್ತು ತಪ್ಪಾದ ಸ್ಥಳಗಳಲ್ಲಿ ನಿಲ್ಲಿಸದೆ ಓದುವ ತನಕ, ಇಡೀ ಪ್ಯಾರಗ್ರಾಫನ್ನು ಪದೇ ಪದೇ ಓದಿರಿ. ಆ ಬಳಿಕ ಇತರ ಪ್ಯಾರಗ್ರಾಫ್‌ಗಳಿಗೆ ಹೋಗಿರಿ.
ತದನಂತರ, ನಿಮ್ಮ ವೇಗವನ್ನು ಹೆಚ್ಚಿಸಿರಿ. ಒಂದು ವಾಕ್ಯದಲ್ಲಿರುವ ಪದಗಳು ಹೇಗೆ ಒಟ್ಟುಗೂಡಿ ಕೆಲಸಮಾಡುತ್ತವೆಂಬುದನ್ನು ನೀವು ಗಣ್ಯಮಾಡಲು ಆರಂಭಿಸಿರುವಲ್ಲಿ, ನೀವು ಒಂದು ಸಲಕ್ಕೆ ಒಂದೇ ಪದವನ್ನಲ್ಲ, ಬದಲಾಗಿ ಅದಕ್ಕಿಂತ ಹೆಚ್ಚು ಪದಗಳನ್ನು ನೋಡಲು ಮತ್ತು ಮುಂದೆ ಏನು ಬರಬಹುದೆಂಬುದನ್ನು ನಿರೀಕ್ಷಿಸಲು ಶಕ್ತರಾಗುವಿರಿ. ಇದು ನಿಮ್ಮ ವಾಚನವು ಪರಿಣಾಮಕಾರಿಯಾಗಿರಲು ಹೆಚ್ಚು ಸಹಾಯಮಾಡುವುದು.
ಮುನ್‌ತಯಾರಿಯಿಲ್ಲದೆ ಓದುವುದನ್ನು ಕ್ರಮವಾಗಿ ಅಭ್ಯಾಸ ಮಾಡುವುದು, ಅಮೂಲ್ಯವಾದ ತರಬೇತಿಯಾಗಿರಬಲ್ಲದು. ಉದಾಹರಣೆಗೆ, ಮುಂಚಿತವಾಗಿ ತಯಾರಿಸದೇ, ದಿನದ ವಚನವನ್ನು ಮತ್ತು ಹೇಳಿಕೆಗಳನ್ನು ಗಟ್ಟಿಯಾಗಿ ಓದಿರಿ; ಇದನ್ನು ಕ್ರಮವಾಗಿ ಪ್ರತಿ ದಿನ ಮಾಡಿರಿ. ನಿಮ್ಮ ಕಣ್ಣು ಒಮ್ಮೆಗೆ ಒಂದು ಪದವನ್ನು ನೋಡುವ ಬದಲಿಗೆ, ಪೂರ್ಣ ವಿಚಾರಗಳನ್ನು ವ್ಯಕ್ತಪಡಿಸುವ ಪದಗಳನ್ನು ಗುಂಪಾಗಿ ನೋಡುವಂತೆ ಅನುಮತಿಸುವ ರೂಢಿಮಾಡಿಕೊಳ್ಳಿರಿ.
ಸಂಭಾಷಣೆಯಲ್ಲಿ ನಿರರ್ಗಳತೆಯು, ನೀವು ಮಾತಾಡುವ ಮೊದಲು ಯೋಚಿಸುವುದನ್ನು ಅಗತ್ಯಪಡಿಸುತ್ತದೆ. ಇದನ್ನು ನಿಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ರೂಢಿಮಾಡಿಕೊಳ್ಳಿರಿ. ನೀವು ಯಾವ ವಿಚಾರಗಳನ್ನು ಮಾತಾಡಬೇಕೆಂದಿದ್ದೀರಿ ಮತ್ತು ಯಾವ ಕ್ರಮದಲ್ಲಿ ಅವುಗಳನ್ನು ತಿಳಿಸಲಿದ್ದೀರಿ ಎಂಬುದನ್ನು ನಿರ್ಣಯಿಸಿ; ಬಳಿಕ ಮಾತಾಡಲು ಆರಂಭಿಸಿರಿ. ಅವಸರದಿಂದ ಮಾತಾಡಬೇಡಿ. ಮಧ್ಯದಲ್ಲಿ ನಿಲ್ಲಿಸದೆ ಅಥವಾ ಮಧ್ಯದಲ್ಲಿ ವಿಚಾರವನ್ನು ಬದಲಾಯಿಸದೆ ಪೂರ್ತಿ ಆಲೋಚನೆಯನ್ನು ತಿಳಿಯಪಡಿಸಲು ಪ್ರಯತ್ನಿಸಿ. ಚಿಕ್ಕದಾದ, ಸರಳ ವಾಕ್ಯಗಳನ್ನು ಬಳಸುವುದನ್ನು ನೀವು ಸಹಾಯಕರವಾಗಿ ಕಂಡುಕೊಳ್ಳಬಹುದು.
ನೀವು ಏನು ಹೇಳಬೇಕೆಂದಿದ್ದೀರೊ ಅದು ನಿಮಗೆ ಸರಿಯಾಗಿ ತಿಳಿದಿರುವುದಾದರೆ, ಪದಗಳು ಸಹಜವಾಗಿಯೇ ಹೊರಬರುವವು. ಸಾಮಾನ್ಯವಾಗಿ ಹೇಳುವುದಾದರೆ, ನೀವು ಉಪಯೋಗಿಸಲಿರುವ ಪದಗಳನ್ನು ನೀವು ಆರಿಸಿಕೊಳ್ಳುವ ಅಗತ್ಯವಿಲ್ಲ. ವಾಸ್ತವದಲ್ಲಿ, ಪ್ರ್ಯಾಕ್ಟಿಸ್ ಮಾಡುವಾಗ, ನಿಮ್ಮ ಮನಸ್ಸಿನಲ್ಲಿ ವಿಚಾರವು ಸ್ಪಷ್ಟವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ; ಆ ಬಳಿಕ ನೀವು ಮಾತಾಡುತ್ತಾ ಇರುವಾಗ ಪದಗಳ ಕುರಿತಾಗಿ ಯೋಚಿಸಬಹುದು. ನೀವು ಹೀಗೆ ಮಾಡುವಲ್ಲಿ ಮತ್ತು ನೀವು ಮಾತಾಡುವ ಪದಗಳಿಗೆ ಬದಲಾಗಿ ವಿಷಯದ ಮೇಲೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸುವಲ್ಲಿ, ಪದಗಳು ಹೆಚ್ಚುಕಡಿಮೆ ತಮ್ಮಷ್ಟಕ್ಕೆ ತಾವೇ ಹೊರಬರುವವು ಮತ್ತು ನೀವು ನಿಮ್ಮ ಹೃದಯದಿಂದ ಮಾತಾಡುವಿರಿ. ಆದರೆ ವಿಚಾರಗಳ ಬದಲು ನೀವು ಪದಗಳ ಕುರಿತು ಯೋಚಿಸಲು ಆರಂಭಿಸಿದ ಕೂಡಲೆ, ನೀವು ತಡೆದು ತಡೆದು ಮಾತಾಡುವಂತಾಗಬಹುದು. ಪ್ರ್ಯಾಕ್ಟಿಸ್‌ನ ಫಲಿತಾಂಶವಾಗಿ, ಪರಿಣಾಮಕಾರಿಯಾದ ಭಾಷಣ ಮತ್ತು ವಾಚನದಲ್ಲಿ ಪ್ರಾಮುಖ್ಯ ಗುಣವಾಗಿರುವ ನಿರರ್ಗಳತೆಯನ್ನು ಬೆಳೆಸಿಕೊಳ್ಳುವುದರಲ್ಲಿ ನೀವು ಸಫಲರಾಗಬಲ್ಲಿರಿ.
ಇಸ್ರಾಯೇಲ್ ಜನಾಂಗಕ್ಕೆ ಮತ್ತು ಐಗುಪ್ತದ ಫರೋಹನ ಮುಂದೆ ಯೆಹೋವನನ್ನು ಪ್ರತಿನಿಧಿಸಲು ಮೋಶೆಯು ನೇಮಿಸಲ್ಪಟ್ಟಾಗ, ತಾನು ಸಮರ್ಥನಲ್ಲ ಎಂದು ಅವನಿಗನಿಸಿತು. ಏಕೆ? ಏಕೆಂದರೆ ಅವನು ನಿರರ್ಗಳವಾದ ಮಾತುಗಾರನಾಗಿರಲಿಲ್ಲ; ಅವನಿಗೆ ಮಾತಿನ ಅಡಚಣೆ ಇದ್ದಿರಬಹುದು. (ವಿಮೋ. 4:10; 6:12) ಮೋಶೆ ಕೆಲವು ನೆಪಗಳನ್ನು ಕೊಟ್ಟರೂ, ದೇವರು ಅವುಗಳಲ್ಲಿ ಯಾವುದನ್ನೂ ಒಪ್ಪಲಿಲ್ಲ. ಯೆಹೋವನು ಆರೋನನನ್ನು ವದನಕನಾಗಿ ಕಳುಹಿಸಿದರೂ ಮೋಶೆ ತಾನೇ ಮಾತಾಡುವಂತೆಯೂ ಯೆಹೋವನು ಸಹಾಯಮಾಡಿದನು. ಮೋಶೆಯು ಪದೇ ಪದೇ ಮತ್ತು ಪರಿಣಾಮಕಾರಿಯಾದ ರೀತಿಯಲ್ಲಿ ಒಬ್ಬೊಬ್ಬರೊಂದಿಗೆ ಮತ್ತು ಚಿಕ್ಕ ಗುಂಪುಗಳೊಂದಿಗೆ ಮಾತ್ರವಲ್ಲ ಇಡೀ ಜನಾಂಗದೊಡನೆಯೂ ಮಾತನಾಡಿದನು. (ಧರ್ಮೋ. 1:1-4; 5:1; 29:2; 31:1, 2, 30; 33:1) ನೀವು ಯೆಹೋವನಲ್ಲಿ ಭರವಸೆಯನ್ನಿಟ್ಟು, ನಿಮ್ಮ ಮಾತಿನ ನಿರರ್ಗಳತೆಯನ್ನು ಉತ್ತಮಗೊಳಿಸಲಿಕ್ಕಾಗಿ ನಿಮ್ಮಿಂದಾದುದೆಲ್ಲವನ್ನೂ ಮಾಡುವಲ್ಲಿ, ದೇವರನ್ನು ಘನಪಡಿಸಲು ನೀವು ಸಹ ನಿಮ್ಮ ವಾಕ್ ಶಕ್ತಿಯನ್ನು ಉಪಯೋಗಿಸಬಲ್ಲಿರಿ.