ಅಧ್ಯಾಯ 5
ಸೂಕ್ತವಾದಲ್ಲಿ ನಿಲ್ಲಿಸಿ ಮಾತಾಡುವುದು
ಮಾತಾಡುವಾಗ, ತಕ್ಕ ಸ್ಥಳಗಳಲ್ಲಿ ಸ್ವಲ್ಪ ನಿಲ್ಲಿಸುವುದು ಪ್ರಾಮುಖ್ಯವಾಗಿದೆ. ನೀವು ಒಂದು ಭಾಷಣವನ್ನು ಕೊಡುತ್ತಿರಲಿ, ಅಥವಾ ಒಬ್ಬ ವ್ಯಕ್ತಿಯೊಂದಿಗೆ ಮಾತಾಡುತ್ತಿರಲಿ ಇದು ಪ್ರಾಮುಖ್ಯ. ಇಂತಹ ನಿಲ್ಲಿಸುವಿಕೆಗಳು ಇಲ್ಲದಿರುವಲ್ಲಿ, ನಿಮ್ಮ ಮಾತು ಸ್ಪಷ್ಟವಾದ ಯೋಚನೆಗಳನ್ನು ಹೊರತರುವ ಬದಲು, ಕೇವಲ ಗುಳುಗುಳು ಸದ್ದಾಗಿ ಕೇಳಿಬರಬಹುದು. ಸೂಕ್ತ ಸ್ಥಳದಲ್ಲಿ ನಿಲ್ಲಿಸುವುದು, ನಿಮ್ಮ ಭಾಷಣಕ್ಕೆ ಸ್ಪಷ್ಟತೆಯನ್ನು ನೀಡಲು ಸಹಾಯಮಾಡುತ್ತದೆ. ನಿಮ್ಮ ಮುಖ್ಯಾಂಶಗಳು ಮನಸ್ಸಿನ ಮೇಲೆ ಬಾಳುವ ಪರಿಣಾಮವನ್ನು ಉಂಟುಮಾಡುವ ರೀತಿಯಲ್ಲಿಯೂ ನೀವು ಇದನ್ನು ಉಪಯೋಗಿಸಸಾಧ್ಯವಿದೆ.
ಯಾವಾಗ ನಿಲ್ಲಿಸಬೇಕೆಂಬುದನ್ನು ನೀವು ಹೇಗೆ ನಿರ್ಣಯಿಸುವಿರಿ? ಈ ನಿಲ್ಲಿಸುವಿಕೆಗಳು ಎಷ್ಟು ದೀರ್ಘವಾಗಿರಬೇಕು?
ವಿರಾಮಚಿಹ್ನೆಗಳಿರುವಲ್ಲಿ ನಿಲ್ಲಿಸುವುದು. ವಿರಾಮಚಿಹ್ನೆಗಳು ಲಿಖಿತ ಭಾಷೆಯ ಒಂದು ಪ್ರಾಮುಖ್ಯ ಭಾಗವಾಗಿ ಪರಿಣಮಿಸಿವೆ. ಅವು ಒಂದು ಹೇಳಿಕೆಯ ಅಥವಾ ಒಂದು ಪ್ರಶ್ನೆಯ ಅಂತ್ಯವನ್ನು ಸೂಚಿಸಬಹುದು. ಕೆಲವು ಭಾಷೆಗಳಲ್ಲಿ, ಉದ್ಧರಣಗಳನ್ನು ಎದ್ದುಕಾಣುವಂತೆ ಮಾಡಲು ಅವನ್ನು ಉಪಯೋಗಿಸಲಾಗುತ್ತದೆ. ಕೆಲವು ವಿರಾಮಚಿಹ್ನೆಗಳು, ವಾಕ್ಯದ ಒಂದು ಭಾಗಕ್ಕೆ ಇತರ ಭಾಗಗಳೊಂದಿಗಿರುವ ಸಂಬಂಧವನ್ನು ಸೂಚಿಸುತ್ತವೆ. ತನ್ನಷ್ಟಕ್ಕೇ ಓದಿಕೊಳ್ಳುತ್ತಿರುವ ಒಬ್ಬ ವ್ಯಕ್ತಿಯು ವಿರಾಮಚಿಹ್ನೆಗಳನ್ನು ನೋಡಸಾಧ್ಯವಿದೆ. ಆದರೆ ಅವನು ಇತರರ ಪ್ರಯೋಜನಾರ್ಥವಾಗಿ ಓದುವಾಗ, ಆ ಲಿಖಿತ ಭಾಗದಲ್ಲಿ ಕಂಡುಬರುವ ಯಾವುದೇ ವಿರಾಮಚಿಹ್ನೆಯ ಅರ್ಥವನ್ನು ಅವನ ಸ್ವರವು ತಿಳಿಯಪಡಿಸಬೇಕಾಗಿದೆ. (ಹೆಚ್ಚಿನ ವಿವರಗಳಿಗಾಗಿ, “ನಿಷ್ಕೃಷ್ಟ ವಾಚನ” ಎಂಬ ಮುಖ್ಯ ವಿಷಯವಿರುವ 1ನೆಯ ಪಾಠವನ್ನು ನೋಡಿ.) ವಿರಾಮಚಿಹ್ನೆಗಳು ಅಗತ್ಯಪಡಿಸುವಂಥ ಸ್ಥಳಗಳಲ್ಲಿ ನಿಲ್ಲಿಸಲು ತಪ್ಪುವಾಗ, ಬೇರೆಯವರಿಗೆ ನೀವು ಓದುತ್ತಿರುವ ವಿಷಯದ ಅರ್ಥವನ್ನು ತಿಳಿಯಲು ಕಷ್ಟವಾದೀತು ಅಥವಾ ಇದು ವಿಷಯಕ್ಕೆ ಅಪಾರ್ಥವನ್ನೂ ಕೊಟ್ಟೀತು.
ವಿರಾಮಚಿಹ್ನೆಗಳಲ್ಲದೆ, ಒಂದು ವಾಕ್ಯದಲ್ಲಿ ವಿಚಾರಗಳು ವ್ಯಕ್ತಪಡಿಸಲ್ಪಟ್ಟಿರುವ ರೀತಿಯು, ನಿಲ್ಲಿಸುವಿಕೆಗಳು ಎಲ್ಲಿ ಸೂಕ್ತವಾಗಿವೆ ಎಂಬುದನ್ನು ನಿರ್ಧರಿಸುತ್ತದೆ. ಒಬ್ಬ ಪ್ರಸಿದ್ಧ ಸಂಗೀತಗಾರನು ಒಮ್ಮೆ ಹೇಳಿದ್ದು: “ಸ್ವರಚಿಹ್ನೆಗಳನ್ನು ನಾನು ಅನೇಕ ಪಿಯಾನೋ ವಾದಕರಿಗಿಂತ ಹೆಚ್ಚು ಉತ್ತಮವಾಗಿ ತಿಳಿದಿದ್ದೇನೆಂದು ಹೇಳೆನಾದರೂ, ಸ್ವರಚಿಹ್ನೆಗಳ ಮಧ್ಯೆ ಇರುವ ವಿರಾಮಚಿಹ್ನೆಗಳ ವಿಷಯದಲ್ಲಾದರೊ, ಆಹಾ! ಅಲ್ಲಿಯೇ ಇದೆ ಕಲೆಯ ಬೀಡು.” ಮಾತನಾಡುವ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಸೂಕ್ತವಾದ ಸ್ಥಳಗಳಲ್ಲಿ ನಿಲ್ಲಿಸುವುದು, ಚೆನ್ನಾಗಿ ತಯಾರಿಸಲ್ಪಟ್ಟಿರುವ ನಿಮ್ಮ ಭಾಷಣಕ್ಕೆ ಸೊಬಗನ್ನೂ ಅರ್ಥವನ್ನೂ ಕೂಡಿಸುವುದು.
ಸಾರ್ವಜನಿಕವಾಗಿ ಓದಲು ತಯಾರಿಸುವಾಗ, ನೀವು ಎಲ್ಲಿಂದ ಓದುತ್ತೀರೊ ಆ ಮುದ್ರಿತ ಭಾಗಕ್ಕೆ ಗುರುತು ಹಾಕುವುದು ನಿಮಗೆ ಸಹಾಯಕರವಾಗಿರಬಹುದು. ತುಸು ನಿಲ್ಲಿಸುವಿಕೆ, ಪ್ರಾಯಶಃ ಕೇವಲ ತುಸು ಹಿಂಜರಿಕೆಯ ಆವಶ್ಯಕತೆಯಿರುವಲ್ಲಿ, ಚಿಕ್ಕ ಲಂಬರೇಖೆಯನ್ನು ಎಳೆಯಿರಿ. ಇನ್ನೂ ದೀರ್ಘವಾಗಿ ನಿಲ್ಲಿಸಬೇಕಾಗುವಲ್ಲಿ, ಪರಸ್ಪರ ಹತ್ತಿರವಿರುವ ಎರಡು ಲಂಬರೇಖೆಗಳನ್ನು ಉಪಯೋಗಿಸಿರಿ. ಕೆಲವು ಪದಗಳು ನಿಮ್ಮನ್ನು ತೊಡಕಿನಲ್ಲಿ ಸಿಕ್ಕಿಸುತ್ತವೆಂದು ಕಂಡುಬರುವುದಾದರೆ, ಮತ್ತು ನೀವು ಪದೇ ಪದೇ ತಪ್ಪಾದ ಸ್ಥಳದಲ್ಲಿ ಓದನ್ನು ನಿಲ್ಲಿಸುವುದಾದರೆ, ಆ ಕಷ್ಟಕರವಾದ ಪದಗುಚ್ಛದಲ್ಲಿರುವ ಎಲ್ಲ ಪದಗಳನ್ನು ಒಂದಕ್ಕೊಂದು ಜೋಡಿಸಲಿಕ್ಕಾಗಿ ಅವುಗಳ ಮಧ್ಯದಲ್ಲಿ ಪೆನ್ಸಿಲ್ ಗುರುತುಗಳನ್ನು ಹಾಕಿರಿ. ಆ ಬಳಿಕ ಆ ಪದಗುಚ್ಛವನ್ನು ಆರಂಭದಿಂದ ಕೊನೆಯ ತನಕ ಓದಿರಿ. ಅನೇಕ ಅನುಭವಸ್ಥ ಭಾಷಣಕಾರರು ಹೀಗೆಯೇ ಮಾಡುತ್ತಾರೆ.
ದಿನನಿತ್ಯದ ಮಾತುಕತೆಯಲ್ಲಿ, ನಿಲ್ಲಿಸುವಿಕೆಯು ಸಾಮಾನ್ಯವಾಗಿ ಸಮಸ್ಯೆಯನ್ನು ಉಂಟುಮಾಡುವುದಿಲ್ಲ, ಏಕೆಂದರೆ ನೀವು ಹೇಳಲು ಬಯಸುವ ವಿಷಯಗಳು ಯಾವುವೆಂದು ನಿಮಗೆ ಗೊತ್ತಿರುತ್ತದೆ. ಆದರೂ, ವಿಚಾರವು ಅವಶ್ಯಪಡಿಸಲಿ ಇಲ್ಲವೇ ಅವಶ್ಯಪಡಿಸದಿರಲಿ, ಆಗಾಗ ನಿಲ್ಲಿಸುವ ರೂಢಿಯು ನಿಮಗಿರುವುದಾದರೆ, ನಿಮ್ಮ ಭಾಷಣದಲ್ಲಿ ಶಕ್ತಿ ಮತ್ತು ಸ್ಪಷ್ಟತೆಯ ಕೊರತೆಯಿರುವುದು. ಈ ವಿಷಯದಲ್ಲಿ ಪ್ರಗತಿಯನ್ನು ಮಾಡಲಿಕ್ಕಾಗಿರುವ ಸಲಹೆಗಳು, “ನಿರರ್ಗಳವಾಗಿ ಭಾಷಣ ನೀಡುವುದು” ಎಂಬ ಮುಖ್ಯ ವಿಷಯವಿರುವ 4ನೆಯ ಪಾಠದಲ್ಲಿವೆ.
ವಿಚಾರದಲ್ಲಿ ಬದಲಾವಣೆಗಾಗಿ ನಿಲ್ಲಿಸುವುದು. ನೀವು ಒಂದು ಮುಖ್ಯಾಂಶದಿಂದ ಇನ್ನೊಂದಕ್ಕೆ ಹೋಗುವಾಗ ಮಧ್ಯೆ ಸ್ವಲ್ಪ ನಿಲ್ಲಿಸುವುದು, ನಿಮ್ಮ ಸಭಿಕರಿಗೆ ಪರ್ಯಾಲೋಚಿಸುವ, ಹೊಂದಿಸಿಕೊಳ್ಳುವ, ವಿಷಯದ ದಿಕ್ಕು ಬದಲಾವಣೆಯನ್ನು ಗುರುತಿಸುವ ಮತ್ತು ಮುಂದೆ ಹೇಳಲ್ಪಡುವ ವಿಷಯವನ್ನು ಹೆಚ್ಚು ಸ್ಪಷ್ಟವಾಗಿ ಗ್ರಹಿಸುವ ಸಂದರ್ಭವನ್ನು ಕೊಡುವುದು. ನೀವು ಒಂದು ವಿಚಾರದಿಂದ ಇನ್ನೊಂದಕ್ಕೆ ಬದಲಾಯಿಸುವಾಗ ಮಧ್ಯೆ ಸ್ವಲ್ಪ ನಿಲ್ಲಿಸುವುದು, ಒಂದು ರಸ್ತೆಯಿಂದ ಇನ್ನೊಂದಕ್ಕೆ ಹೋಗಲಿಕ್ಕಾಗಿ ಆ ರಸ್ತೆಯ ತಿರುವಿನಲ್ಲಿ ನಿಧಾನಿಸುವಷ್ಟೇ ಪ್ರಾಮುಖ್ಯವಾದದ್ದಾಗಿದೆ.
ಕೆಲವು ಭಾಷಣಕಾರರು ಒಂದು ವಿಚಾರದಿಂದ ಇನ್ನೊಂದಕ್ಕೆ ಬದಲಾಯಿಸುವಾಗ ಮಧ್ಯೆ ನಿಲ್ಲಿಸದೆ ಧಾವಿಸಲು ಕಾರಣವೇನೆಂದರೆ, ಅವರು ತೀರ ಹೆಚ್ಚು ವಿಷಯಗಳನ್ನು ಆವರಿಸಲು ಪ್ರಯತ್ನಿಸುತ್ತಾರೆ. ಕೆಲವರಿಗಾದರೋ ಈ ಅಭ್ಯಾಸವು ಅವರ ದಿನನಿತ್ಯದ ಮಾತುಕತೆಯ ನಮೂನೆಯನ್ನು ಪ್ರತಿಬಿಂಬಿಸುತ್ತದೆ. ಪ್ರಾಯಶಃ ಅವರ ಸುತ್ತಲಿರುವವರೆಲ್ಲರೂ ಹಾಗೆಯೇ ಮಾತಾಡುತ್ತಿರಬಹುದು. ಆದರೆ ಇದು ಪರಿಣಾಮಕಾರಿಯಾದ ಬೋಧನೆಯನ್ನು ಫಲಿಸುವುದಿಲ್ಲ. ಆಲಿಸಲು ಮತ್ತು ಜ್ಞಾಪಕದಲ್ಲಿಟ್ಟುಕೊಳ್ಳಲು ಯೋಗ್ಯವಾಗಿರುವ ಯಾವುದೇ ವಿಷಯವನ್ನು ನೀವು ಹೇಳಲಿಕ್ಕಿರುವುದಾದರೆ, ಆ ವಿಷಯವು ಸ್ಪಷ್ಟವಾಗಿ ಎದ್ದುಕಾಣುವಂತೆ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿರಿ. ವಿಚಾರಗಳನ್ನು ಸ್ಪಷ್ಟವಾಗಿ ತಿಳಿಯಪಡಿಸುವ ಒಂದು ಭಾಷಣದಲ್ಲಿ, ಮಧ್ಯೆ ಮಧ್ಯೆ ನಿಲ್ಲಿಸಿ ಮಾತಾಡುವುದು ಅತ್ಯಗತ್ಯವಾಗಿದೆ ಎಂಬುದನ್ನು ಗ್ರಹಿಸಿರಿ.
ನೀವು ಒಂದು ಹೊರಮೇರೆಯಿಂದ ಭಾಷಣವನ್ನು ಕೊಡಲಿರುವುದಾದರೆ, ಮುಖ್ಯಾಂಶಗಳ ಮಧ್ಯೆ ಎಲ್ಲಿ ನಿಲ್ಲಿಸಬೇಕೆಂಬುದು ಸುವ್ಯಕ್ತವಾಗುವಂಥ ರೀತಿಯಲ್ಲಿ ಆ ಭಾಷಣವನ್ನು ಸಂಘಟಿಸಬೇಕು. ನೀವು ಒಂದು ಹಸ್ತಪ್ರತಿ ಭಾಷಣವನ್ನು ಓದಲಿರುವಲ್ಲಿ, ಒಂದು ಮುಖ್ಯಾಂಶದಿಂದ ಇನ್ನೊಂದಕ್ಕೆ ಬದಲಾವಣೆಯಾಗುವ ಸ್ಥಳಗಳಲ್ಲಿ ಗುರುತನ್ನು ಹಾಕಿರಿ.
ಸಾಮಾನ್ಯವಾಗಿ ವಿಚಾರ ಬದಲಾವಣೆಯ ಸಮಯದಲ್ಲಿನ ನಿಲ್ಲಿಸುವಿಕೆಗಳು, ವಿರಾಮಚಿಹ್ನೆಗಳಿಗಾಗಿರುವ ನಿಲ್ಲಿಸುವಿಕೆಗಳಿಗಿಂತ ತುಸು ಹೆಚ್ಚು ದೀರ್ಘವಾಗಿರುತ್ತವೆ. ಆದರೆ ಅವು ಭಾಷಣವನ್ನು ತುಂಬ ನಿಧಾನಗೊಳಿಸುವಷ್ಟು ದೀರ್ಘವಾದ ನಿಲ್ಲಿಸುವಿಕೆಗಳಾಗಿರಬಾರದು. ನಿಲ್ಲಿಸುವಿಕೆಗಳು ತೀರ ದೀರ್ಘವಾಗಿರುವಾಗ, ನೀವು ಭಾಷಣವನ್ನು ಚೆನ್ನಾಗಿ ತಯಾರಿಸಿಲ್ಲ ಮತ್ತು ಮುಂದೆ ಏನು ಹೇಳಬೇಕೆಂಬುದನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದೀರಿ ಎಂಬ ಅಭಿಪ್ರಾಯವನ್ನು ಅದು ಕೊಡುತ್ತದೆ.
ಒತ್ತಿ ಹೇಳಲಿಕ್ಕಾಗಿ ನಿಲ್ಲಿಸುವುದು. ಒತ್ತಿ ಹೇಳಲಿಕ್ಕಾಗಿ ನಿಲ್ಲಿಸುವುದು ಅನೇಕವೇಳೆ ಅತಿ ಸ್ಪಷ್ಟವಾಗಿ ಎದ್ದುಕಾಣುವಂಥದ್ದಾಗಿರುತ್ತದೆ. ಇದು, ಸ್ವಲ್ಪ ಮಟ್ಟಿಗಿನ ತೀವ್ರತೆಯಿಂದ ಹೇಳಲ್ಪಡುವ ಒಂದು ಹೇಳಿಕೆ ಅಥವಾ ಪ್ರಶ್ನೆಯ ಮೊದಲೊ ನಂತರವೋ ಸ್ವಲ್ಪ ಹೊತ್ತು ನಿಲ್ಲಿಸುವುದಾಗಿದೆ. ಇಂತಹ ನಿಲ್ಲಿಸುವಿಕೆಯು, ಸಭಿಕರು ಆಗ ತಾನೇ ಏನು ಹೇಳಲ್ಪಟ್ಟಿತೊ ಅದರ ಕುರಿತು ಚಿಂತಿಸುವಂತೆ ಸಂದರ್ಭವನ್ನು ಒದಗಿಸುತ್ತದೆ, ಅಥವಾ ಮುಂದೆ ಬರಲಿರುವ ವಿಷಯವನ್ನು ಅವರು ನಿರೀಕ್ಷಿಸುವಂತೆ ಮಾಡುತ್ತದೆ. ಇವೆರಡೂ ಒಂದೇ ಆಗಿರುವುದಿಲ್ಲ. ಇವುಗಳಲ್ಲಿ ಬಳಸಲು ಸೂಕ್ತವಾದ ವಿಧಾನವು ಯಾವುದೆಂಬುದನ್ನು ನಿರ್ಧರಿಸಿರಿ. ಆದರೆ ಒತ್ತಿ ಹೇಳಲಿಕ್ಕಾಗಿ ನಿಲ್ಲಿಸುವುದು, ನಿಜವಾಗಿಯೂ ವಿಶೇಷವಾದ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿರಬೇಕೆಂಬುದನ್ನು ಮನಸ್ಸಿನಲ್ಲಿಡಿರಿ. ಇಲ್ಲದಿದ್ದರೆ, ಈ ಹೇಳಿಕೆಗಳ ಮಹತ್ವವೇ ಕೈತಪ್ಪಿಹೋಗುವುದು.
ಯೇಸು ನಜರೇತಿನ ಸಭಾಮಂದಿರದಲ್ಲಿ ಶಾಸ್ತ್ರವಚನಗಳಿಂದ ಗಟ್ಟಿಯಾಗಿ ಓದಿದಾಗ, ಈ ನಿಲ್ಲಿಸುವಿಕೆಯನ್ನು ಅವನು ಪರಿಣಾಮಕಾರಿಯಾಗಿ ಉಪಯೋಗಿಸಿದನು. ಪ್ರಥಮವಾಗಿ, ಅವನು ಯೆಶಾಯನೆಂಬ ಪ್ರವಾದಿಯ ಗ್ರಂಥದ ಸುರುಳಿಯಿಂದ ತನ್ನ ನೇಮಕವನ್ನು ಓದಿಹೇಳಿದನು. ಆದರೆ ಅದನ್ನು ಅನ್ವಯಿಸುವುದಕ್ಕೆ ಮೊದಲು, ಅವನು ಸುರುಳಿಯನ್ನು ಸುತ್ತಿ, ಸಭಾಮಂದಿರದ ಆಳಿನ ಕೈಗೆ ಅದನ್ನು ಕೊಟ್ಟು ಕುಳಿತುಕೊಂಡನು. ಬಳಿಕ, ಸಭಾಮಂದಿರದಲ್ಲಿದ್ದ ಎಲ್ಲರ ದೃಷ್ಟಿ ತನ್ನ ಮೇಲೆ ಕೇಂದ್ರೀಕೃತವಾಗಿದ್ದಾಗ ಅವನು ಹೇಳಿದ್ದು: “ಈ ಹೊತ್ತು . . . ಈ ವೇದೋಕ್ತಿ ನೆರವೇರಿದೆ.”—ಲೂಕ 4:16-21.
ಸನ್ನಿವೇಶಗಳು ಅಗತ್ಯಪಡಿಸುವಾಗ ನಿಲ್ಲಿಸುವುದು. ಕೆಲವೊಂದು ಅಡ್ಡಿತಡೆಗಳು ಸಹ ಒಮ್ಮೊಮ್ಮೆ ನಾವು ಮಾತಾಡುತ್ತಿರುವಾಗ ಮಧ್ಯದಲ್ಲಿ ನಿಲ್ಲಿಸುವಂತೆ ಅಗತ್ಯಪಡಿಸಬಹುದು. ಹಾದುಹೋಗುತ್ತಿರುವ ವಾಹನಗಳ ಸದ್ದು ಅಥವಾ ಅಳುತ್ತಿರುವ ಮಗುವಿನ ಧ್ವನಿಯು, ಕ್ಷೇತ್ರ ಶುಶ್ರೂಷೆಯಲ್ಲಿ ನೀವು ಭೇಟಿಯಾಗಿರುವ ಮನೆಯವನೊಂದಿಗಿನ ನಿಮ್ಮ ಸಂಭಾಷಣೆಗೆ ತಡೆಯನ್ನೊಡ್ಡಬಹುದು. ಜನರು ಕೂಡಿಬಂದಿರುವ ಒಂದು ಸ್ಥಳದಲ್ಲಿ ನಡೆಯುವ ಒಂದು ಗದ್ದಲವು ವಿಪರೀತವಾಗಿರದಿದ್ದಲ್ಲಿ, ನೀವು ಸ್ವರವೆತ್ತಿ ಮಾತಾಡುತ್ತ ಮುಂದುವರಿಯಲು ಶಕ್ತರಾಗಿರಬಹುದು. ಆದರೆ ಗದ್ದಲವು ತುಂಬ ಜೋರಾಗಿಯೂ ದೀರ್ಘ ಸಮಯದ ತನಕವೂ ಇರುವಲ್ಲಿ, ನೀವು ಮಾತಾಡುವುದನ್ನು ನಿಲ್ಲಿಸಬೇಕು. ಏಕೆಂದರೆ ನಿಮ್ಮ ಸಭಿಕರಿಗೆ ಹೇಗೂ ಕಿವಿಗೊಡಲು ಸಾಧ್ಯವಿರುವುದಿಲ್ಲ. ಆದಕಾರಣ, ನಿಲ್ಲಿಸುವಿಕೆಯನ್ನು ಫಲಕಾರಿಯಾದ ರೀತಿಯಲ್ಲಿ, ಅಂದರೆ ನೀವು ಹೇಳಲಿರುವ ಒಳ್ಳೇ ವಿಷಯಗಳ ಪೂರ್ಣ ಪ್ರಯೋಜನವನ್ನು ನಿಮ್ಮ ಸಭಿಕರು ಪಡೆಯುವಂತೆ ಸಹಾಯಮಾಡುವ ಉದ್ದೇಶದಿಂದ ಉಪಯೋಗಿಸಿರಿ.
ಸಭಿಕರ ಪ್ರತಿಕ್ರಿಯೆಗಾಗಿ ನಿಲ್ಲಿಸುವುದು. ಸಭಿಕರು ಭಾಗವಹಿಸುವ ಯಾವ ಏರ್ಪಾಡೂ ಇಲ್ಲದಿರುವ ಒಂದು ಭಾಷಣವನ್ನು ನೀವು ಕೊಡುತ್ತಿರಬಹುದಾದರೂ, ಸಭಿಕರು ಎಲ್ಲರಿಗೆ ಕೇಳಿಸುವಷ್ಟು ಗಟ್ಟಿಯಾದ ಧ್ವನಿಯಲ್ಲಿ ಅಲ್ಲ, ಬದಲಾಗಿ ಮಾನಸಿಕವಾಗಿ ಪ್ರತಿಕ್ರಿಯೆ ತೋರಿಸುವಂತೆ ಅವಕಾಶ ಮಾಡಿಕೊಡುವುದು ಪ್ರಾಮುಖ್ಯವಾಗಿದೆ. ನಿಮ್ಮ ಸಭಿಕರು ಯೋಚಿಸುವಂತೆ ಮಾಡತಕ್ಕ ಪ್ರಶ್ನೆಗಳನ್ನು ನೀವು ಕೇಳುವುದಾದರೂ, ತದನಂತರ ಸಾಕಷ್ಟು ಸಮಯ ನಿಲ್ಲಿಸದಿರುವಲ್ಲಿ, ಆ ಪ್ರಶ್ನೆಗಳ ಹೆಚ್ಚಿನ ಮಹತ್ವವೇ ನಷ್ಟವಾದಂತಾಗುವುದು.
ನಾವು ವೇದಿಕೆಯಿಂದ ಮಾತಾಡುವಾಗ ಮಾತ್ರವಲ್ಲ, ಇತರರಿಗೆ ಸಾಕ್ಷಿ ನೀಡುತ್ತಿರುವಾಗಲೂ ಮಧ್ಯೆ ಮಧ್ಯೆ ನಿಲ್ಲಿಸಿ ಮಾತಾಡುವುದು ಪ್ರಾಮುಖ್ಯ ಎಂಬುದಂತೂ ನಿಶ್ಚಯ. ಕೆಲವರು ಎಂದೂ ನಿಲ್ಲಿಸಿ ಮಾತಾಡುವುದೇ ಇಲ್ಲ ಎಂಬಂತೆ ತೋರುತ್ತದೆ. ಇದು ನಿಮ್ಮ ಸಮಸ್ಯೆಯಾಗಿರುವಲ್ಲಿ, ಭಾಷಣದ ಈ ಗುಣವನ್ನು ಬೆಳೆಸಿಕೊಳ್ಳಲು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡಿರಿ. ಹಾಗೆ ಮಾಡುವಲ್ಲಿ, ನೀವು ಇತರರೊಂದಿಗೆ ನಡೆಸುವ ಸಂವಾದವನ್ನು ಉತ್ತಮಗೊಳಿಸುವಿರಿ ಮಾತ್ರವಲ್ಲ, ನಿಮ್ಮ ಕ್ಷೇತ್ರ ಶುಶ್ರೂಷೆಯಲ್ಲಿಯೂ ನೀವು ಪರಿಣಾಮಕಾರಿಯಾಗುವಿರಿ. ಮಾತು ನಿಲ್ಲಿಸುವಿಕೆಯು ಮೌನವಾಗಿರುವ ಒಂದು ಕ್ಷಣವಾಗಿದೆ. ಮತ್ತು ಮೌನವು ವಿರಾಮ ನೀಡುತ್ತದೆ, ಒತ್ತಿ ಹೇಳುತ್ತದೆ, ಗಮನ ಸೆಳೆಯುತ್ತದೆ ಮತ್ತು ಕಿವಿಯನ್ನು ಚೈತನ್ಯಗೊಳಿಸುತ್ತದೆ ಎಂಬ ಹೇಳಿಕೆಯು ಎಷ್ಟೋ ಸತ್ಯವಾಗಿದೆ.
ದಿನನಿತ್ಯದ ಸಂಭಾಷಣೆಯಲ್ಲಿ, ಇಬ್ಬರು ಅಥವಾ ಹೆಚ್ಚು ಜನರ ನಡುವಿನ ವಿಚಾರ ವಿನಿಮಯವು ಒಳಗೂಡಿರುತ್ತದೆ. ನೀವು ಇತರರಿಗೆ ಕಿವಿಗೊಡುವಲ್ಲಿ ಮತ್ತು ಅವರು ಏನು ಹೇಳುತ್ತಾರೋ ಅದರಲ್ಲಿ ಆಸಕ್ತಿಯನ್ನು ತೋರಿಸುವಲ್ಲಿ, ಅವರು ನಿಮಗೂ ಕಿವಿಗೊಡುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ನೀವು ಮಾತನಾಡುವಾಗ ಸಾಕಷ್ಟು ಸಮಯ ನಿಲ್ಲಿಸುವುದನ್ನು ಮತ್ತು ಹೀಗೆ ಅವರಿಗೆ ಮಾತನಾಡುವ ಅವಕಾಶವನ್ನು ಕೊಡುವುದನ್ನು ಇದು ಅಗತ್ಯಪಡಿಸುತ್ತದೆ.
ಕ್ಷೇತ್ರ ಶುಶ್ರೂಷೆಯಲ್ಲಿ, ಸಂಭಾಷಣಾ ರೂಪದಲ್ಲಿ ಮಾತಾಡುವಾಗ ನಮ್ಮ ಸಾಕ್ಷಿಕಾರ್ಯವು ಅನೇಕವೇಳೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ವಂದನೆಗಳ ವಿನಿಮಯವಾದ ಬಳಿಕ, ತಮ್ಮ ಸಂಭಾಷಣಾ ವಿಷಯವನ್ನು ಗುರುತಿಸಿ, ನಂತರ ಒಂದು ಪ್ರಶ್ನೆಯನ್ನು ಎಬ್ಬಿಸುವುದು ಪರಿಣಾಮಕಾರಿಯಾಗಿದೆ ಎಂದು ಅನೇಕ ಮಂದಿ ಸಾಕ್ಷಿಗಳು ಕಂಡುಕೊಂಡಿದ್ದಾರೆ. ಅವರು ಆ ವ್ಯಕ್ತಿಯು ಉತ್ತರ ಕೊಡುವಂತೆ ತಮ್ಮ ಮಾತನ್ನು ನಿಲ್ಲಿಸಿ, ಬಳಿಕ ಮನೆಯವನು ಕೊಟ್ಟ ಉತ್ತರಕ್ಕೆ ಪ್ರತಿಕ್ರಿಯಿಸುತ್ತಾರೆ. ಆ ಚರ್ಚೆಯ ಸಂದರ್ಭದಲ್ಲಿ, ಅವರು ಮನೆಯವನಿಗೆ ಉತ್ತರ ಕೊಡಲು ಅನೇಕ ಅವಕಾಶಗಳನ್ನು ಕೊಡಬಹುದು. ಚರ್ಚಿಸಲ್ಪಡುತ್ತಿರುವ ವಿಷಯದ ಕುರಿತು ಒಬ್ಬ ವ್ಯಕ್ತಿಯ ದೃಷ್ಟಿಕೋನವೇನೆಂದು ತಿಳಿದುಕೊಳ್ಳುವುದರಿಂದ, ಸಾಮಾನ್ಯವಾಗಿ ತಾವು ಆ ವ್ಯಕ್ತಿಗೆ ಹೆಚ್ಚು ಸಹಾಯ ನೀಡಬಲ್ಲೆವೆಂದು ಅವರಿಗೆ ತಿಳಿದಿದೆ.—ಜ್ಞಾನೋ. 20:5.
ಪ್ರಶ್ನೆಗಳಿಗೆ ಎಲ್ಲರೂ ಅನುಕೂಲಕರವಾಗಿ ಪ್ರತಿಕ್ರಿಯಿಸುವುದಿಲ್ಲವೆಂಬುದು ನಿಶ್ಚಯ. ಆದರೆ ಇದು ಯೇಸುವನ್ನು, ಅವನ ವಿರೋಧಿಗಳಿಗೂ ಮಾತಾಡಲು ಸಾಕಷ್ಟು ಸಮಯವನ್ನು ನೀಡಲಿಕ್ಕಾಗಿ ತನ್ನ ಮಾತನ್ನು ನಿಲ್ಲಿಸುವುದರಿಂದ ಅವನನ್ನು ತಡೆಯಲಿಲ್ಲ. (ಮಾರ್ಕ 3:1-5) ಇನ್ನೊಬ್ಬ ವ್ಯಕ್ತಿಯು ಮಾತಾಡುವಂತೆ ಅವಕಾಶವನ್ನು ಕೊಡುವುದು, ಅವನು ಆಲೋಚಿಸುವಂತೆ ಪ್ರೋತ್ಸಾಹಿಸುತ್ತದೆ ಮತ್ತು ಇದರ ಫಲವಾಗಿ ಅವನು ತನ್ನ ಹೃದಯದಲ್ಲಿ ಏನಿದೆಯೊ ಅದನ್ನು ತಿಳಿಯಪಡಿಸಬಹುದು. ನಮ್ಮ ಶುಶ್ರೂಷೆಯ ಉದ್ದೇಶಗಳಲ್ಲಿ ಒಂದು, ಯಾವುದರ ಆಧಾರದ ಮೇಲೆ ಜನರು ತೀರ್ಮಾನಗಳನ್ನು ಮಾಡಬೇಕೋ ಆ ದೇವರ ವಾಕ್ಯದ ಮಹತ್ವವುಳ್ಳ ವಿಷಯಗಳನ್ನು ಅವರಿಗೆ ನೀಡುವ ಮೂಲಕ, ಅವರ ಹೃತ್ಪೂರ್ವಕ ಪ್ರತಿಕ್ರಿಯೆಯನ್ನು ಉತ್ತೇಜಿಸುವುದೇ ಆಗಿದೆ.—ಇಬ್ರಿ. 4:12.
ನಮ್ಮ ಶುಶ್ರೂಷೆಯಲ್ಲಿ ಮಾತಾಡುತ್ತಿರುವಾಗ ಸೂಕ್ತವಾದ ನಿಲ್ಲಿಸುವಿಕೆಯನ್ನು ಉಪಯೋಗಿಸುವುದು ನಿಜವಾಗಿಯೂ ಒಂದು ಕಲೆಯಾಗಿದೆ. ಈ ನಿಲ್ಲಿಸುವಿಕೆಗಳನ್ನು ಫಲಕಾರಿಯಾಗಿ ಉಪಯೋಗಿಸುವಾಗ, ವಿಚಾರಗಳನ್ನು ಹೆಚ್ಚು ಸ್ಪಷ್ಟವಾಗಿ ವ್ಯಕ್ತಪಡಿಸುವಂತಾಗುತ್ತದೆ ಮತ್ತು ಅನೇಕವೇಳೆ ಇವು ಬಹು ಕಾಲ ಜ್ಞಾಪಕದಲ್ಲಿ ಉಳಿಯುತ್ತವೆ.