ಅಧ್ಯಾಯ 22
ಶಾಸ್ತ್ರವಚನಗಳನ್ನು ಸರಿಯಾಗಿ ಅನ್ವಯಿಸುವುದು
ಇತರರಿಗೆ ಕಲಿಸುವಾಗ, ಬೈಬಲಿನಿಂದ ವಚನಗಳನ್ನು ಕೇವಲ ಓದುವುದಕ್ಕಿಂತಲೂ ಹೆಚ್ಚಿನದ್ದರ ಅಗತ್ಯವಿದೆ. ಅಪೊಸ್ತಲ ಪೌಲನು ತನ್ನ ಜೊತೆಗಾರನಾದ ತಿಮೊಥೆಯನಿಗೆ ಬರೆದುದು: “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.” (ಓರೆ ಅಕ್ಷರಗಳು ನಮ್ಮವು.)—2 ತಿಮೊ. 2:15.
ಇದನ್ನು ಮಾಡುವುದೆಂದರೆ, ಶಾಸ್ತ್ರವಚನಗಳ ಕುರಿತಾದ ನಮ್ಮ ವಿವರಣೆಯು ಬೈಬಲು ತಾನೇ ಏನನ್ನು ಬೋಧಿಸುತ್ತದೊ ಅದಕ್ಕೆ ಹೊಂದಿಕೆಯಲ್ಲಿರಬೇಕು ಎಂದರ್ಥ. ಇದು, ನಮಗೆ ಹಿಡಿಸುವಂಥ ಅಭಿವ್ಯಕ್ತಿಗಳನ್ನು ಮಾತ್ರ ಆರಿಸುವ ಮತ್ತು ನಮ್ಮ ಸ್ವಂತ ವಿಚಾರಗಳನ್ನು ಕೂಡಿಸುವ ಬದಲಿಗೆ, ಆ ವಚನಗಳ ಪೂರ್ವಾಪರವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದನ್ನು ಅಗತ್ಯಪಡಿಸುತ್ತದೆ. ಯೆಹೋವನು ಪ್ರವಾದಿಯಾದ ಯೆರೆಮೀಯನ ಮುಖಾಂತರ, ತಾವು ಯೆಹೋವನ ಬಾಯಿಂದ ಹೊರಟದ್ದನ್ನು ನುಡಿಯುತ್ತೇವೆಂದು ಹೇಳಿದರೂ “ಸ್ವಂತ ಹೃದಯಕ್ಕೆ ಹೊಳೆದದ್ದನ್ನೇ” ಹೇಳುತ್ತಿದ್ದಂಥ ಪ್ರವಾದಿಗಳ ವಿಷಯದಲ್ಲಿ ಎಚ್ಚರಿಸಿದನು. (ಯೆರೆ. 23:16) ಕ್ರೈಸ್ತರು ದೇವರ ವಾಕ್ಯವನ್ನು ಮಾನವ ತತ್ತ್ವಜ್ಞಾನಗಳಿಂದ ಮಲಿನಗೊಳಿಸುವ ವಿಷಯದಲ್ಲಿ ಎಚ್ಚರಿಸುತ್ತಾ ಅಪೊಸ್ತಲ ಪೌಲನು ಬರೆದುದು: “ನಾಚಿಕೆಯನ್ನು ಹುಟ್ಟಿಸುವ ಗುಪ್ತಕಾರ್ಯಗಳನ್ನು ನಾವು ಬಿಟ್ಟುಬಿಟ್ಟು ತಂತ್ರದಲ್ಲಿ ನಡೆಯದೆ ದೇವರ ವಾಕ್ಯವನ್ನು ಕೆಡಿಸದೆ [“ಕಲಬೆರಕೆಮಾಡದೆ,” NW] . . . ನಡೆಯುತ್ತೇವೆ.” ಆ ದಿನಗಳಲ್ಲಿ ದ್ರಾಕ್ಷಾಮದ್ಯದ ಅಪ್ರಾಮಾಣಿಕ ವ್ಯಾಪಾರಿಗಳು, ಮದ್ಯದ ಪ್ರಮಾಣವು ಹೆಚ್ಚಾಗುವಂತೆ ಮಾಡಲಿಕ್ಕಾಗಿ ಮತ್ತು ಹೆಚ್ಚು ಹಣವನ್ನು ಗಳಿಸಲಿಕ್ಕಾಗಿ ದ್ರಾಕ್ಷಾಮದ್ಯಕ್ಕೆ ನೀರನ್ನು ಬೆರಸುತ್ತಿದ್ದರು. ತದ್ರೀತಿಯಲ್ಲಿ ನಾವು ಮಾನವ ತತ್ತ್ವಜ್ಞಾನಗಳಿಂದ ದೇವರ ವಾಕ್ಯವನ್ನು ಕಲಬೆರಕೆಮಾಡುವುದಿಲ್ಲ. ಪೌಲನು ಹೇಳಿದ್ದು: “ಆದರೆ ನಾವು ದೇವರ ವಾಕ್ಯವನ್ನು ಕಲಬೆರಕೆಮಾಡುವವರಾದ ಹೆಚ್ಚು ಪಾಲಿನ ಜನರ ಹಾಗಿರದೆ ನಿಷ್ಕಪಟಿಗಳಾಗಿ ದೇವರಿಂದ ಉಪದೇಶಹೊಂದಿದವರಿಗೆ ತಕ್ಕ ಹಾಗೆ ಕ್ರಿಸ್ತನ ಅನ್ಯೋನ್ಯತೆಯಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿಯೇ ಮಾತಾಡುತ್ತೇವೆ.”—2 ಕೊರಿಂ. 2:17; 4:2.
ಕೆಲವು ಸಲ ಒಂದು ಮೂಲತತ್ತ್ವವನ್ನು ಎತ್ತಿತೋರಿಸಲಿಕ್ಕಾಗಿ ನೀವು ಒಂದು ಶಾಸ್ತ್ರವಚನವನ್ನು ಉಲ್ಲೇಖಿಸಬಹುದು. ಬೈಬಲು ಮೂಲತತ್ತ್ವಗಳಿಂದ ತುಂಬಿದೆ. ವ್ಯಾಪಕವಾದ ವಿವಿಧ ರೀತಿಯ ಸನ್ನಿವೇಶಗಳನ್ನು ನಿಭಾಯಿಸಲು ಸ್ವಸ್ಥ ಮಾರ್ಗದರ್ಶನವನ್ನು ಅವು ಒದಗಿಸುತ್ತವೆ. (2 ತಿಮೊ. 3:16, 17) ಆದರೆ ನಿಮ್ಮ ಅನ್ವಯವು ನಿಷ್ಕೃಷ್ಟವಾಗಿದೆ ಮತ್ತು ಒಂದು ಶಾಸ್ತ್ರವಚನವನ್ನು ನೀವು ತಪ್ಪಾಗಿ ಬಳಸುತ್ತಿಲ್ಲ, ಅಂದರೆ ನೀವು ಏನು ಹೇಳಬಯಸುತ್ತೀರೊ ಅದನ್ನು ಆ ವಚನವು ಹೇಳುವಂತೆ ಮಾಡುತ್ತಿದ್ದೀರೆಂಬ ತೋರಿಕೆಯನ್ನು ಕೊಡುತ್ತಿಲ್ಲ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. (ಕೀರ್ತ. 91:11, 12; ಮತ್ತಾ. 4:5, 6) ಈ ಅನ್ವಯವು ಯೆಹೋವನ ಉದ್ದೇಶಕ್ಕೆ ಸಾಮರಸ್ಯದಿಂದಿರಬೇಕು, ಹೌದು, ದೇವರ ಇಡೀ ವಾಕ್ಯಕ್ಕೆ ಹೊಂದಿಕೆಯಲ್ಲಿರಬೇಕು.
“ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸು” ಎಂಬುದರಲ್ಲಿ, ಬೈಬಲ್ ಏನು ಹೇಳುತ್ತದೊ ಅದರ ಇಂಗಿತವನ್ನು ಗ್ರಹಿಸುವುದೂ ಸೇರಿದೆ. ಅದು ಇತರರನ್ನು ದಬಾಯಿಸಲಿಕ್ಕಾಗಿ ಒಂದು “ದೊಣ್ಣೆ” ಆಗಿರುವುದಿಲ್ಲ. ಯೇಸುವನ್ನು ವಿರೋಧಿಸಿದ ಧಾರ್ಮಿಕ ಬೋಧಕರು ಶಾಸ್ತ್ರವಚನಗಳಿಂದ ಉಲ್ಲೇಖಿಸಿದ್ದು ನಿಜವಾದರೂ, ದೇವರು ಅವರಿಂದ ಅಪೇಕ್ಷಿಸಿದ್ದ ಹೆಚ್ಚು ಮಹತ್ವಭರಿತ ಸಂಗತಿಗಳಿಗೆ ಅಂದರೆ ನ್ಯಾಯ, ಕರುಣೆ ಮತ್ತು ನಂಬಿಗಸ್ತಿಕೆಗೆ ಅವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದರು. (ಮತ್ತಾ. 22:23, 24; 23:23, 24) ದೇವರ ವಾಕ್ಯವನ್ನು ಕಲಿಸುವಾಗ ಯೇಸು ತನ್ನ ತಂದೆಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸಿದನು. ಸತ್ಯಕ್ಕಾಗಿ ಯೇಸುವಿಗಿದ್ದ ಅತ್ಯಭಿಮಾನವು, ಅವನು ಯಾರಿಗೆ ಬೋಧಿಸಿದನೊ ಅವರ ಕಡೆಗೆ ಅವನಿಗಿದ್ದ ಆಳವಾದ ಪ್ರೀತಿಯೊಂದಿಗೆ ಜೊತೆಗೂಡಿತ್ತು. ನಾವು ಅವನ ಮಾದರಿಯನ್ನು ಅನುಸರಿಸಲು ಪ್ರಯತ್ನಿಸಬೇಕು.—ಮತ್ತಾ. 11:28.
ನಾವು ಒಂದು ಶಾಸ್ತ್ರವಚನವನ್ನು ಸರಿಯಾಗಿ ಅನ್ವಯಿಸುತ್ತಿದ್ದೇವೆಂಬುದನ್ನು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು? ಕ್ರಮದ ಬೈಬಲ್ ವಾಚನವು ಇದಕ್ಕೆ ಸಹಾಯಕವಾಗಿರುವುದು. ಯೆಹೋವನು ನಮಗೆ ಒದಗಿಸಿರುವ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವನ್ನು, ಅಂದರೆ ಆತನು ತನ್ನ ಎಲ್ಲ ನಂಬಿಗಸ್ತ ಸೇವಕರಿಗೆ ಯಾರ ಮೂಲಕ ಆತ್ಮಿಕ ಆಹಾರವನ್ನು ಒದಗಿಸುತ್ತಾನೊ ಆ ಆತ್ಮಾಭಿಷಿಕ್ತ ಕ್ರೈಸ್ತರ ಮಂಡಲಿಯನ್ನೂ ನಾವು ಗಣ್ಯಮಾಡಬೇಕು. (ಮತ್ತಾ. 24:45) ವೈಯಕ್ತಿಕ ಅಧ್ಯಯನ ಹಾಗೂ ಸಭಾ ಕೂಟಗಳಲ್ಲಿ ಕ್ರಮವಾದ ಹಾಜರಿ ಮತ್ತು ಭಾಗವಹಿಸುವಿಕೆಯು, ಆ ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗದ ಮುಖೇನ ಒದಗಿಸಲ್ಪಡುವ ಶಿಕ್ಷಣದಿಂದ ನಾವು ಪ್ರಯೋಜನ ಪಡೆಯಲು ಸಹಾಯಮಾಡುವುದು.
ನಿಮಗೆ ತಿಳಿದಿರುವ ಭಾಷೆಯಲ್ಲಿ ಶಾಸ್ತ್ರವಚನಗಳಿಂದ ತರ್ಕಿಸುವುದು (ಇಂಗ್ಲಿಷ್) ಎಂಬ ಪುಸ್ತಕವು ಲಭ್ಯವಿರುವಲ್ಲಿ ಮತ್ತು ಅದನ್ನು ಉತ್ತಮವಾಗಿ ಉಪಯೋಗಿಸಲು ನೀವು ಕಲಿಯುವಲ್ಲಿ, ನಮ್ಮ ಶುಶ್ರೂಷೆಯಲ್ಲಿ ಪದೇ ಪದೇ ಉಪಯೋಗಿಸಲ್ಪಡುವ ನೂರಾರು ಶಾಸ್ತ್ರವಚನಗಳನ್ನು ಸರಿಯಾಗಿ ಅನ್ವಯಿಸಲು ನಿಮಗೆ ಬೇಕಾಗಿರುವ ಮಾರ್ಗದರ್ಶನವು ನಿಮ್ಮ ಬೆರಳತುದಿಯಲ್ಲಿರುವುದು. ನಿಮಗೆ ಪರಿಚಯವಿಲ್ಲದಂಥ ಒಂದು ಶಾಸ್ತ್ರವಚನವನ್ನು ನೀವು ಉಪಯೋಗಿಸಲು ಯೋಜಿಸುತ್ತಿರುವುದಾದರೆ, ನೀವು ಮಾತಾಡುವಾಗ ಸತ್ಯವಾಕ್ಯವನ್ನು ಸರಿಯಾಗಿ ಬಳಸಲು ಸಾಧ್ಯವಾಗುವಂತೆ, ದೀನತೆಯು ಅದಕ್ಕೆ ಬೇಕಾಗಿರುವ ಸಂಶೋಧನೆಯನ್ನು ಮಾಡುವಂತೆ ನಿಮ್ಮನ್ನು ಪ್ರಚೋದಿಸುವುದು.—ಜ್ಞಾನೋ. 11:2.
ಅನ್ವಯವನ್ನು ಸ್ಪಷ್ಟಪಡಿಸಿರಿ. ಇತರರಿಗೆ ಕಲಿಸುವಾಗ, ನೀವು ಚರ್ಚಿಸುತ್ತಿರುವ ವಿಷಯ ಮತ್ತು ನೀವು ಬಳಸುತ್ತಿರುವ ಶಾಸ್ತ್ರವಚನಗಳ ಮಧ್ಯೆ ಇರುವ ಸಂಬಂಧವನ್ನು ಅವರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಾರೆಂಬುದನ್ನು ಖಚಿತಪಡಿಸಿಕೊಳ್ಳಿರಿ. ನೀವು ಒಂದು ಪ್ರಶ್ನೆಯನ್ನು ಕೇಳುವ ಮೂಲಕ ಒಂದು ಶಾಸ್ತ್ರವಚನದ ಕಡೆಗೆ ಹೋಗುವಾಗ, ಆ ಶಾಸ್ತ್ರವಚನವು ಆ ಪ್ರಶ್ನೆಯನ್ನು ಹೇಗೆ ಉತ್ತರಿಸುತ್ತದೆಂಬುದನ್ನು ನಿಮ್ಮ ಕೇಳುಗರು ತಿಳಿಯಬೇಕು. ನೀವು ಯಾವುದಾದರೊಂದು ಹೇಳಿಕೆಯ ಬೆಂಬಲಾರ್ಥವಾಗಿ ಒಂದು ಶಾಸ್ತ್ರವಚನವನ್ನು ಉಪಯೋಗಿಸುತ್ತಿರುವಲ್ಲಿ, ಆ ವಚನವು ಆ ಹೇಳಿಕೆಯನ್ನು ಹೇಗೆ ರುಜುಪಡಿಸುತ್ತದೆಂಬುದನ್ನು ವಿದ್ಯಾರ್ಥಿಯು ಸ್ಪಷ್ಟವಾಗಿ ತಿಳಿಯುವುದನ್ನು ಖಚಿತಪಡಿಸಿಕೊಳ್ಳಿರಿ.
ಸಾಮಾನ್ಯವಾಗಿ, ಕೇವಲ ಶಾಸ್ತ್ರವಚನವನ್ನು ಓದುವುದು ಸಾಲದು; ಅದಕ್ಕೆ ಒತ್ತುನೀಡಿ ಓದುವುದೂ ಸಾಲದು. ಏಕೆಂದರೆ, ಒಬ್ಬ ಸಾಧಾರಣ ವ್ಯಕ್ತಿಗೆ ಬೈಬಲಿನ ಪರಿಚಯವಿರುವುದಿಲ್ಲ. ಆದಕಾರಣ ಒಂದೇ ಸಲ ಓದಿದಾಗ ಅವನು ನಿಮ್ಮ ಮುಖ್ಯಾಂಶವನ್ನು ಗ್ರಹಿಸಲಿಕ್ಕಿಲ್ಲ ಎಂಬುದು ನೆನಪಿರಲಿ. ಆದುದರಿಂದ, ನೀವು ಚರ್ಚಿಸುತ್ತಿರುವ ವಿಷಯಕ್ಕೆ ನೇರವಾಗಿ ಅನ್ವಯಿಸುವ ವಚನದ ಭಾಗಕ್ಕೆ ಗಮನ ಸೆಳೆಯಿರಿ.
ಇದಕ್ಕಾಗಿ ನೀವು ಸಾಮಾನ್ಯವಾಗಿ ಮುಖ್ಯ ಪದಗಳನ್ನು ಅಂದರೆ ಚರ್ಚಿಸಲ್ಪಡುತ್ತಿರುವ ವಿಷಯಕ್ಕೆ ನೇರವಾಗಿ ಸಂಬಂಧಿಸುವ ಪದಗಳನ್ನು ಪ್ರತ್ಯೇಕಿಸಿ ಹೇಳುವ ಅಗತ್ಯವಿರುತ್ತದೆ. ಇದನ್ನು ಮಾಡುವ ಅತಿ ಸರಳವಾದ ವಿಧಾನವು, ಆ ವಿಚಾರವಾಹಕ ಪದಗಳನ್ನು ಪುನಃ ಹೇಳುವುದೇ ಆಗಿದೆ. ನೀವು ಒಬ್ಬನೊಂದಿಗೆ ಮಾತಾಡುವಾಗ, ಅವನು ಮುಖ್ಯ ಪದಗಳನ್ನು ಗುರುತಿಸುವಂತೆ ಸಹಾಯಮಾಡುವಂಥ ಪ್ರಶ್ನೆಗಳನ್ನು ಕೇಳಬಹುದು. ಒಂದು ಗುಂಪಿನೊಂದಿಗೆ ಮಾತಾಡುವಾಗ, ಕೆಲವು ಭಾಷಣಕಾರರು ತಮ್ಮ ಉದ್ದೇಶವನ್ನು ಸಾಧಿಸಲು ಸಮಾನಾರ್ಥಕ ಪದಗಳನ್ನು ಉಪಯೋಗಿಸುವುದು ಇಲ್ಲವೆ ಆ ವಿಚಾರವನ್ನು ಬೇರೆ ರೀತಿಯಲ್ಲಿ ಹೇಳುವುದು ಉಪಯುಕ್ತವೆಂದು ಎಣಿಸುತ್ತಾರೆ. ನೀವು ಹಾಗೆ ಮಾಡುವ ಆಯ್ಕೆಯನ್ನು ಮಾಡುವುದಾದರೆ, ಚರ್ಚೆಯ ಅಂಶ ಮತ್ತು ಶಾಸ್ತ್ರವಚನದ ಪದಗಳ ಮಧ್ಯೆ ಇರುವ ಸಂಬಂಧವನ್ನು ಸಭಿಕರು ಕಳೆದುಕೊಳ್ಳದಂತೆ ಜಾಗ್ರತೆ ವಹಿಸಿರಿ.
ನೀವು ಮುಖ್ಯ ಪದಗಳನ್ನು ಪ್ರತ್ಯೇಕಿಸಿರುವ ಕಾರಣ, ಒಳ್ಳೆಯ ಅಸ್ತಿವಾರವನ್ನು ಹಾಕಿದ್ದೀರಿ. ಈಗ ಆ ಕೆಲಸವನ್ನು ಪೂರ್ಣಗೊಳಿಸಿರಿ. ಆ ವಚನವನ್ನು ಪರಿಚಯಿಸುತ್ತಿದ್ದಾಗ, ಅದನ್ನು ಉಪಯೋಗಿಸುತ್ತಿರುವ ಕಾರಣವನ್ನು ನೀವು ಸ್ಪಷ್ಟವಾಗಿ ಸೂಚಿಸಿದ್ದೀರೊ? ಹಾಗೆ ಮಾಡಿರುವಲ್ಲಿ, ನೀವು ವಚನವನ್ನು ಓದಿದಾಗ ಎತ್ತಿಹೇಳಿರುವ ಪದಗಳು, ಸಭಿಕರು ಏನನ್ನು ನಿರೀಕ್ಷಿಸುವಂತೆ ನೀವು ನಡಿಸಿದ್ದೀರೊ ಅದಕ್ಕೆ ಹೇಗೆ ಸಂಬಂಧಿಸುತ್ತವೆಂಬುದನ್ನು ಈಗ ತೋರಿಸಿರಿ. ಆ ಸಂಬಂಧವು ಏನೆಂಬುದನ್ನು ಸ್ಪಷ್ಟವಾಗಿ ತಿಳಿಸಿರಿ. ಆ ವಚನವನ್ನು ನೀವು ಅಷ್ಟು ಸ್ಪಷ್ಟವಾಗಿ ಪರಿಚಯಿಸಿದ್ದಿರದಿದ್ದರೂ, ಸ್ವಲ್ಪ ಮಟ್ಟಿಗಾದರೂ ಅದರ ಸಂಬಂಧವನ್ನು ಹೇಳುತ್ತ ಅದನ್ನು ಪೂರ್ಣಗೊಳಿಸಿರಿ.
ಫರಿಸಾಯರ ಎಣಿಕೆಗನುಸಾರ ತುಂಬ ಕಷ್ಟಕರವಾಗಿದ್ದ ಒಂದು ಪ್ರಶ್ನೆಯನ್ನು ಅವರು ಯೇಸುವಿಗೆ ಹಾಕಿದರು. ಅದೇನಂದರೆ: “ಒಬ್ಬನು ಯಾವದಾದರೂ ಒಂದು ಕಾರಣದಿಂದ ತನ್ನ ಹೆಂಡತಿಯನ್ನು ಬಿಟ್ಟುಬಿಡುವದು ಧರ್ಮವೋ ಹೇಗೆ”? ಆಗ ಯೇಸು ತನ್ನ ಉತ್ತರವನ್ನು ಆದಿಕಾಂಡ 2:24 ರ ಮೇಲೆ ಆಧಾರಿಸಿದನು. ಅದರ ಒಂದು ಭಾಗದ ಮೇಲೆ ಮಾತ್ರ ಅವನು ಗಮನವನ್ನು ಕೇಂದ್ರೀಕರಿಸಿದ್ದನ್ನು ಗಮನಿಸಿರಿ. ಆ ಬಳಿಕ ಅವನು ಅಗತ್ಯವಿದ್ದ ಅನ್ವಯವನ್ನು ಮಾಡಿದನು. ಪುರುಷನೂ ಅವನ ಹೆಂಡತಿಯೂ “ಒಂದೇ ಶರೀರವಾಗಿರುವರು” ಎಂದು ತೋರಿಸಿದ ಬಳಿಕ ಯೇಸು ಮುಕ್ತಾಯಗೊಳಿಸಿದ್ದು: “ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.”—ಮತ್ತಾ. 19:3-6.
ಒಂದು ಶಾಸ್ತ್ರವಚನದ ಅನ್ವಯವನ್ನು ಸ್ಪಷ್ಟಪಡಿಸಲಿಕ್ಕಾಗಿ ನೀವು ಎಷ್ಟು ವಿವರಣೆಯನ್ನು ಕೊಡಬೇಕು? ಇದನ್ನು ನಿಮ್ಮ ಸಭಿಕರಲ್ಲಿ ಯಾರಿದ್ದಾರೆ ಮತ್ತು ಚರ್ಚಿಸಲ್ಪಡುವ ವಿಷಯವು ಎಷ್ಟು ಪ್ರಾಮುಖ್ಯ ಎಂಬ ಅಂಶಗಳು ನಿರ್ಧರಿಸಬೇಕು. ನಿಮ್ಮ ಗುರಿಯು ಸರಳತೆ ಮತ್ತು ನೇರತ್ವವಾಗಿರಲಿ.
ಶಾಸ್ತ್ರವಚನಗಳಿಂದ ತರ್ಕಿಸಿರಿ. ಥೆಸಲೊನೀಕದಲ್ಲಿ ಅಪೊಸ್ತಲ ಪೌಲನು ನಡಿಸಿದ ಶುಶ್ರೂಷೆಯ ಸಂಬಂಧದಲ್ಲಿ, ಅಪೊಸ್ತಲರ ಕೃತ್ಯಗಳು 17:2, 3, ಅವನು ‘ಶಾಸ್ತ್ರಾಧಾರದಿಂದ ಅವರ ಸಂಗಡ ತರ್ಕಿಸಿದನು’ (NW) ಎಂದು ನಮಗೆ ಹೇಳುತ್ತದೆ. ಇದು ಯೆಹೋವನ ಪ್ರತಿಯೊಬ್ಬ ಸೇವಕನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕಾದ ಒಂದು ಸಾಮರ್ಥ್ಯವಾಗಿದೆ. ಉದಾಹರಣೆಗೆ, ಪೌಲನು ಯೇಸುವಿನ ಜೀವನ ಮತ್ತು ಶುಶ್ರೂಷೆಯ ಕುರಿತಾದ ನಿಜತ್ವಗಳನ್ನು ತಿಳಿಯಪಡಿಸಿದನು, ಇವು ಹೀಬ್ರು ಶಾಸ್ತ್ರದಲ್ಲಿ ಮುಂತಿಳಿಸಲ್ಪಟ್ಟಿವೆಯೆಂದು ತೋರಿಸಿದನು, ಮತ್ತು “ನಾನು ನಿಮಗೆ ಪ್ರಸಿದ್ಧಿಪಡಿಸುವ ಯೇಸುವೇ ಆ ಕ್ರಿಸ್ತನು” ಎಂದು ಬಲವತ್ತಾಗಿ ಹೇಳುತ್ತ ತನ್ನ ಮಾತುಗಳನ್ನು ಮುಗಿಸಿದನು.
ಪೌಲನು ಇಬ್ರಿಯರಿಗೆ ಪತ್ರವನ್ನು ಬರೆದಾಗ, ಅವನು ಹೀಬ್ರು ಶಾಸ್ತ್ರದಿಂದ ಪದೇ ಪದೇ ಉಲ್ಲೇಖಿಸಿದನು. ಒಂದು ವಿಷಯವನ್ನು ಒತ್ತಿಹೇಳಲು ಅಥವಾ ಸ್ಪಷ್ಟೀಕರಿಸಲು, ಅವನು ಅನೇಕವೇಳೆ ಒಂದು ಪದವನ್ನು ಅಥವಾ ಚಿಕ್ಕ ಪದಗುಚ್ಛವನ್ನು ಪ್ರತ್ಯೇಕಿಸಿ, ಬಳಿಕ ಅದರ ವಿಶೇಷತೆಯನ್ನು ತೋರಿಸಿದನು. (ಇಬ್ರಿ. 12:26, 27) ಇಬ್ರಿಯ 3ನೆಯ ಅಧ್ಯಾಯದಲ್ಲಿ ಕಂಡುಬರುವ ವೃತ್ತಾಂತದಲ್ಲಿ ಪೌಲನು ಕೀರ್ತನೆ 95:7-11 ನೆಯ ವಚನಗಳಿಂದ ಉಲ್ಲೇಖಿಸಿದನು. ಆ ಬಳಿಕ ಅವನು ಅದರ ಮೂರು ಭಾಗಗಳನ್ನು ಸವಿಸ್ತಾರವಾಗಿ ವಿವರಿಸಿದ್ದನ್ನು ಗಮನಿಸಿರಿ: (1) ಹೃದಯದ ಕುರಿತಾದ ಉಲ್ಲೇಖ (ಇಬ್ರಿ. 3:8-12), (2) “ಈಹೊತ್ತು” ಎಂಬ ಅಭಿವ್ಯಕ್ತಿಯ ವಿಶೇಷತೆ (ಇಬ್ರಿ. 3:7, 13-15; 4:6-11), ಮತ್ತು (3) “ಇವರು ನನ್ನ ವಿಶ್ರಾಂತಿಯಲ್ಲಿ ಸೇರುವದೇ ಇಲ್ಲ” ಎಂಬ ಹೇಳಿಕೆಯ ಅರ್ಥ (ಇಬ್ರಿ. 3:11, 18, 19; 4:1-11). ಪ್ರತಿಯೊಂದು ಶಾಸ್ತ್ರವಚನದ ಅನ್ವಯವನ್ನು ಮಾಡುವಾಗ, ಆ ಮಾದರಿಯನ್ನು ಅನುಕರಿಸಲು ಪ್ರಯತ್ನಿಸಿರಿ.
ಲೂಕ 10:25-37 ರಲ್ಲಿ ಕಂಡುಬರುವ ವೃತ್ತಾಂತದಲ್ಲಿ, ಯೇಸು ಶಾಸ್ತ್ರದಿಂದ ತರ್ಕಿಸಿದ ವಿಧದ ಪರಿಣಾಮಕಾರಿತ್ವವನ್ನು ಅವಲೋಕಿಸಿರಿ. “ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು”? ಎಂದು ಒಬ್ಬ ಧರ್ಮೋಪದೇಶಕನು ಕೇಳಿದನು. ಇದಕ್ಕೆ ಉತ್ತರವಾಗಿ, ಯೇಸು ಮೊದಲಾಗಿ ಆ ಮನುಷ್ಯನು ತನ್ನ ಸ್ವಂತ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ಕೇಳಿಕೊಂಡನು. ತದನಂತರ ದೇವರ ವಾಕ್ಯವು ಏನು ಹೇಳುತ್ತದೋ ಅದನ್ನು ಮಾಡುವುದರ ಪ್ರಾಮುಖ್ಯತೆಯನ್ನು ಯೇಸು ಒತ್ತಿಹೇಳಿದನು. ಆದರೆ ಆ ಮನುಷ್ಯನು ಅದರ ಮುಖ್ಯಾಂಶವನ್ನು ಗ್ರಹಿಸುವುದರಲ್ಲಿ ತಪ್ಪಿದ್ದಾನೆಂಬುದು ಸ್ಪಷ್ಟವಾದಾಗ, ಯೇಸು ಶಾಸ್ತ್ರವಚನದಿಂದ ಒಂದೇ ಒಂದು ಪದವನ್ನು, ಅಂದರೆ “ನೆರೆಯವನು” ಎಂಬ ಪದವನ್ನು ಸವಿವರವಾಗಿ ಚರ್ಚಿಸಿದನು. ಕೇವಲ ಅದರ ಅರ್ಥವನ್ನು ತಿಳಿಸುವ ಬದಲಾಗಿ, ಆ ಮನುಷ್ಯನು ತಾನೇ ಸರಿಯಾದ ತೀರ್ಮಾನಕ್ಕೆ ಬರುವಂತೆ ಸಹಾಯಮಾಡಲಿಕ್ಕಾಗಿ ಯೇಸು ಒಂದು ದೃಷ್ಟಾಂತವನ್ನು ಉಪಯೋಗಿಸಿದನು.
ಪ್ರಶ್ನೆಗಳನ್ನು ಉತ್ತರಿಸುವಾಗ ಯೇಸು ನೇರವಾದ, ಸುವ್ಯಕ್ತ ಉತ್ತರವನ್ನು ಕೊಡುವಂಥ ವಚನಗಳನ್ನು ಉಲ್ಲೇಖಿಸಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಈ ವಚನಗಳು ಏನು ಹೇಳುತ್ತವೆಂಬುದನ್ನು ಅವನು ವಿಶ್ಲೇಷಿಸಿ, ಬಳಿಕ ಕೇಳಲ್ಪಟ್ಟ ಪ್ರಶ್ನೆಗೆ ಅದನ್ನು ಅನ್ವಯಿಸಿದನು.
ಸದ್ದುಕಾಯರು ಪುನರುತ್ಥಾನದ ನಿರೀಕ್ಷೆಯ ವಿಷಯದಲ್ಲಿ ಸವಾಲೊಡ್ಡಿದಾಗ, ಯೇಸು ವಿಮೋಚನಕಾಂಡ 3:6 ರ ಒಂದು ನಿರ್ದಿಷ್ಟ ಭಾಗದ ಮೇಲೆ ಗಮನವನ್ನು ಕೇಂದ್ರೀಕರಿಸಿದನು. ಆದರೆ ಆ ವಚನವನ್ನು ಉಲ್ಲೇಖಿಸಿದ ಮೇಲೆ ಅವನು ಅಷ್ಟಕ್ಕೇ ನಿಲ್ಲಿಸಲಿಲ್ಲ. ಪುನರುತ್ಥಾನವು ದೇವರ ಉದ್ದೇಶದ ಭಾಗವಾಗಿದೆಯೆಂಬುದನ್ನು ಸ್ಪಷ್ಟವಾಗಿ ತೋರಿಸಲಿಕ್ಕಾಗಿ ಅವನು ಆ ಶಾಸ್ತ್ರವಚನದ ಕುರಿತು ತರ್ಕಬದ್ಧವಾಗಿ ಮಾತಾಡಿದನು.—ಮಾರ್ಕ 12:24-27.
ಶಾಸ್ತ್ರಾಧಾರದಿಂದ ಸರಿಯಾದ ರೀತಿಯಲ್ಲಿ ತರ್ಕಸಮ್ಮತವಾಗಿ ಮತ್ತು ಪರಿಣಾಮಕಾರಿಯಾಗಿ ಮಾತಾಡುವ ಸಾಮರ್ಥ್ಯದಲ್ಲಿ ನಿಸ್ಸೀಮರಾಗುವುದು, ನೀವು ಕುಶಲ ಬೋಧಕರಾಗುವುದರಲ್ಲಿ ಒಂದು ಗಮನಾರ್ಹ ಅಂಶವಾಗಿದೆ.