ಅಧ್ಯಾಯ ಹದಿನಾಲ್ಕು
ಯೆಹೋವನು ತನ್ನ ಸಂಸ್ಥೆಯನ್ನು ಹೇಗೆ ನಡೆಸುತ್ತಾನೆ?
1. ಯೆಹೋವನ ಸಂಸ್ಥೆಯ ಕುರಿತು ಯಾವ ಮಾಹಿತಿಯನ್ನು ಬೈಬಲು ತಿಳಿಯಪಡಿಸುತ್ತದೆ, ಮತ್ತು ಇದು ನಮಗೆ ಪ್ರಾಮುಖ್ಯವೇಕೆ?
ದೇವರಿಗೆ ಒಂದು ಸಂಸ್ಥೆ ಇದೆಯೆ? ಹೌದು ಎನ್ನುತ್ತದೆ ಪ್ರೇರಿತ ಶಾಸ್ತ್ರ. ಆತನು ತನ್ನ ವಾಕ್ಯದಲ್ಲಿ ಆ ಸಂಸ್ಥೆಯ ಭಯಾಶ್ಚರ್ಯಗೊಳಿಸುವ ಸ್ವರ್ಗೀಯ ಭಾಗದ ಕ್ಷಣದರ್ಶನಗಳನ್ನು ತೋರಿಸುತ್ತಾನೆ. (ಯೆಹೆಜ್ಕೇಲ 1:1, 4-14; ದಾನಿಯೇಲ 7:9, 10, 13, 14) ನಾವು ಈ ಅದೃಶ್ಯ ಭಾಗವನ್ನು ನೋಡಲಾರೆವಾದರೂ, ಇಂದು ಸತ್ಯಾರಾಧಕರನ್ನು ಇದು ಅತಿಯಾಗಿ ಪ್ರಭಾವಿಸುತ್ತದೆ. (2 ಅರಸುಗಳು 6:15-17) ಯೆಹೋವನ ಸಂಸ್ಥೆಗೆ ಭೂಮಿಯ ಮೇಲೆ ಒಂದು ದೃಶ್ಯ ಭಾಗವೂ ಇದೆ. ಅದೇನು ಮತ್ತು ಯೆಹೋವನು ಅದನ್ನು ಹೇಗೆ ನಡೆಸುತ್ತಾನೆ ಎಂಬುದನ್ನು ತಿಳಿಯಲು ಬೈಬಲು ನಮಗೆ ಸಹಾಯಮಾಡುತ್ತದೆ.
ದೃಶ್ಯ ಭಾಗವನ್ನು ಗುರುತಿಸುವುದು
2. ದೇವರು ಯಾವ ಹೊಸ ಸಭೆಯನ್ನು ಅಸ್ತಿತ್ವಕ್ಕೆ ತಂದನು?
2 ಇಸ್ರಾಯೇಲ್ ಜನಾಂಗವು 1,545 ವರುಷಕಾಲ ದೇವರ ಸಭೆಯಾಗಿತ್ತು. (ಅ. ಕೃತ್ಯಗಳು 7:38) ಆದರೆ ಇಸ್ರಾಯೇಲು ದೇವರ ನಿಯಮಗಳನ್ನು ಪಾಲಿಸದೆ, ಆತನ ಸ್ವಂತ ಮಗನನ್ನು ತಿರಸ್ಕರಿಸಿತು. ಇದರ ಪರಿಣಾಮವಾಗಿ, ಯೆಹೋವನು ಆ ಸಭೆಯನ್ನು ತಿರಸ್ಕರಿಸಿ ಅದನ್ನು ತಳ್ಳಿಹಾಕಿದನು. ಯೇಸು ಯೆಹೂದ್ಯರಿಗೆ ಹೇಳಿದ್ದು: “ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.” (ಮತ್ತಾಯ 23:38) ಬಳಿಕ ದೇವರು ಒಂದು ಹೊಸ ಸಭೆಯನ್ನು ಅಸ್ತಿತ್ವಕ್ಕೆ ತಂದು ಅದರೊಂದಿಗೆ ಒಂದು ಹೊಸ ಒಡಂಬಡಿಕೆಯನ್ನು ಮಾಡಿದನು. ಈ ಸಭೆಯು, ಸ್ವರ್ಗದಲ್ಲಿ ತನ್ನ ಮಗನೊಂದಿಗೆ ಐಕ್ಯವಾಗಿರಲಿಕ್ಕಾಗಿ ದೇವರಿಂದ ಆರಿಸಲ್ಪಟ್ಟಿದ್ದ 1,44,000 ಮಂದಿಯಿಂದ ರಚಿತವಾಗಲಿತ್ತು.—ಪ್ರಕಟನೆ 14:1-4.
3. ದೇವರು ಈಗ ಒಂದು ಹೊಸ ಸಭೆಯನ್ನು ಉಪಯೋಗಿಸುತ್ತಿದ್ದನೆಂಬುದರ ಸ್ಪಷ್ಟವಾದ ಪುರಾವೆಯಾಗಿ ಸಾ.ಶ. 33ರ ಪಂಚಾಶತ್ತಮದಲ್ಲಿ ಏನು ಸಂಭವಿಸಿತು?
3 ಆ ಹೊಸ ಸಭೆಯ ಪ್ರಥಮರು ಸಾ.ಶ. 33ರ ಪಂಚಾಶತ್ತಮದಲ್ಲಿ ಯೆಹೋವನ ಪವಿತ್ರಾತ್ಮದಿಂದ ಅಭಿಷಿಕ್ತರಾದರು. ಆ ಗಮನಾರ್ಹವಾದ ಸಂಭವದ ಬಗ್ಗೆ ನಾವು ಓದುವುದು: “ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರು ಏಕಮನಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿದ್ದರು. ಆಗ ಬಿರುಗಾಳಿ ಬೀಸುತ್ತದೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ ಒಂದು ಶಬ್ದವುಂಟಾಗಿ ಅವರು ಕೂತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು. ಅದಲ್ಲದೆ ಉರಿಯಂತಿದ್ದ ನಾಲಿಗೆಗಳು ವಿಂಗಡಿಸಿಕೊಳ್ಳುವ ಹಾಗೆ ಅವರಿಗೆ ಕಾಣಿಸಿ ಅವರಲ್ಲಿ ಒಬ್ಬೊಬ್ಬರ ಮೇಲೆ ಒಂದೊಂದಾಗಿ ಕೂತುಕೊಂಡವು. ಆಗ ಅವರೆಲ್ಲರು ಪವಿತ್ರಾತ್ಮಭರಿತ”ರಾದರು. (ಅ. ಕೃತ್ಯಗಳು 2:1-4) ಹೀಗೆ, ದೇವರು ತನ್ನ ಉದ್ದೇಶವನ್ನು ಸ್ವರ್ಗದಲ್ಲಿರುವ ಯೇಸು ಕ್ರಿಸ್ತನ ಮಾರ್ಗದರ್ಶನದ ಕೆಳಗೆ ನೆರವೇರಿಸಲು ಉಪಯೋಗಿಸುವ ಜನರ ಗುಂಪು ಇದೇ ಎಂಬುದಕ್ಕೆ ದೇವರಾತ್ಮವು ಸ್ಪಷ್ಟವಾದ ರುಜುವಾತನ್ನು ಕೊಟ್ಟಿತು.
4. ಇಂದು ಯೆಹೋವನ ದೃಶ್ಯ ಸಂಸ್ಥೆಯಲ್ಲಿ ಯಾರೆಲ್ಲ ಇದ್ದಾರೆ?
4 ಇಂದು ಈ 1,44,000 ಮಂದಿಯಲ್ಲಿ ಉಳಿದಿರುವವರು ಮಾತ್ರ ಈ ಭೂಮಿಯಲ್ಲಿದ್ದಾರೆ. ಆದರೆ ಬೈಬಲ್ ಪ್ರವಾದನೆಯ ನೆರವೇರಿಕೆಯಾಗಿ, “ಬೇರೆ ಕುರಿಗಳ” ಒಂದು “ಮಹಾ ಸಮೂಹ”ವಾದ ಲಕ್ಷಾಂತರ ಜನರನ್ನು ಅಭಿಷಿಕ್ತ ಉಳಿಕೆಯವರ ಜೊತೆಸೇರುವಂತೆ ಒಟ್ಟುಗೂಡಿಸಲಾಗಿದೆ. ಒಳ್ಳೆಯ ಕುರುಬನಾದ ಯೇಸು, ಒಬ್ಬನೇ ಕುರುಬನಾಗಿ, ತನ್ನ ಕೆಳಗೆ ಒಂದೇ ಹಿಂಡಾಗಿರುವಂತೆ ಈ ಬೇರೆ ಕುರಿಗಳನ್ನು ಉಳಿಕೆಯವರೊಂದಿಗೆ ಜೊತೆಗೂಡಿಸಿದ್ದಾನೆ. (ಪ್ರಕಟನೆ 7:9; ಯೋಹಾನ 10:11, 16) ಇವೆಲ್ಲವೂ ಒಂದು ಐಕ್ಯ ಸಭೆಯಾದ ದೇವರ ದೃಶ್ಯ ಸಂಸ್ಥೆಯನ್ನು ರಚಿಸುತ್ತದೆ.
ದೇವಪ್ರಭುತ್ವಾತ್ಮಕ ರಚನೆ
5. ದೇವರ ಸಂಸ್ಥೆಯನ್ನು ಯಾರು ಮಾರ್ಗದರ್ಶಿಸುತ್ತಾರೆ, ಮತ್ತು ಹೇಗೆ?
5 “ಜೀವಸ್ವರೂಪನಾದ ದೇವರ ಸಭೆ” ಎಂಬ ಪದಸರಣಿಯು ಅದನ್ನು ನಡೆಸುವಾತನು ಯಾರೆಂಬುದನ್ನು ಸ್ಪಷ್ಟಪಡಿಸುತ್ತದೆ. ಈ ಸಂಸ್ಥೆಯು ದೇವಪ್ರಭುತ್ವಾತ್ಮಕವಾಗಿದೆ ಅಥವಾ ದೇವರಿಂದ ಆಳಲ್ಪಡುತ್ತದೆ. ಯೆಹೋವನು ತನ್ನ ಜನರಿಗೆ ಯೇಸುವಿನ ಮೂಲಕ, ಅಂದರೆ ಸಭೆಯ ಅದೃಶ್ಯ ಶಿರಸ್ಸಾಗಿ ಯಾರನ್ನು ನೇಮಿಸಿದ್ದಾನೊ ಅವನ ಮೂಲಕ ಮತ್ತು ತನ್ನ ಸ್ವಂತ ಪ್ರೇರಿತ ವಾಕ್ಯವಾದ ಬೈಬಲಿನ ಮೂಲಕ ಮಾರ್ಗದರ್ಶನವನ್ನು ಒದಗಿಸುತ್ತಾನೆ.—1 ತಿಮೊಥೆಯ 3:14, 15; ಎಫೆಸ 1:22, 23; 2 ತಿಮೊಥೆಯ 3:16, 17.
6. (ಎ) ಒಂದನೆಯ ಶತಮಾನದಲ್ಲಿ ಸಭೆಯ ಸ್ವರ್ಗೀಯ ಮಾರ್ಗದರ್ಶನವು ಹೇಗೆ ತೋರಿಸಲ್ಪಟ್ಟಿತು? (ಬಿ) ಯೇಸು ಈಗಲೂ ಸಭೆಯ ಶಿರಸ್ಸು ಎಂಬುದನ್ನು ಯಾವುದು ತೋರಿಸುತ್ತದೆ?
6 ಇಂತಹ ಮಾರ್ಗದರ್ಶನವು ಪಂಚಾಶತ್ತಮದಲ್ಲಿ ಸ್ಪಷ್ಟವಾಗಿ ವ್ಯಕ್ತವಾಯಿತು. (ಅ. ಕೃತ್ಯಗಳು 2:14-18, 32, 33) ಯೆಹೋವನ ದೂತನು ಸುವಾರ್ತೆಯು ಆಫ್ರಿಕಕ್ಕೆ ಹರಡುವಂತೆ ನೋಡಿಕೊಂಡಾಗ, ತಾರ್ಸದ ಸೌಲನ ಪರಿವರ್ತನೆಯ ಸಮಯದಲ್ಲಿ ಯೇಸುವಿನ ಸ್ವರವು ಮಾರ್ಗದರ್ಶನವನ್ನು ನೀಡಿದಾಗ ಮತ್ತು ಪೇತ್ರನು ಅನ್ಯರ ಮಧ್ಯೆ ಸಾರಲಾರಂಭಿಸಿದಾಗ ಇದು ವ್ಯಕ್ತವಾಯಿತು. (ಅ. ಕೃತ್ಯಗಳು 8:26, 27; 9:3-7; 10:9-16, 19-22) ಆದರೆ, ಸಮಯಾನಂತರ ಸ್ವರ್ಗವಾಣಿಗಳು ಕೇಳದೆ ಹೋದವು, ದೇವದೂತರು ಕಾಣಿಸದೆ ಹೋದರು ಮತ್ತು ಆತ್ಮದ ಅದ್ಭುತಕರವಾದ ವರಗಳು ದೊರೆಯದೆ ಹೋದವು. ಆದರೂ, “ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ,” ಎಂದು ಯೇಸು ವಾಗ್ದಾನಿಸಿದ್ದನು. (ಮತ್ತಾಯ 28:20; 1 ಕೊರಿಂಥ 13:8) ಇಂದು ಯೆಹೋವನ ಸಾಕ್ಷಿಗಳು ಯೇಸುವಿನ ಮಾರ್ಗದರ್ಶನವನ್ನು ಒಪ್ಪಿಕೊಳ್ಳುತ್ತಾರೆ. ಅದಿಲ್ಲದಿದ್ದಲ್ಲಿ, ತೀಕ್ಷ್ಣ ವಿರೋಧದ ಎದುರಿನಲ್ಲಿ ರಾಜ್ಯ ಸಂದೇಶವನ್ನು ಸಾರುವುದು ಅಸಾಧ್ಯವಾಗುತ್ತಿತ್ತು.
7. (ಎ) “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಯಾರು, ಮತ್ತು ಏಕೆ? (ಬಿ)ಆ ‘ಆಳಿಗೆ’ ಯಾವ ನೇಮಕವು ಕೊಡಲ್ಪಟ್ಟಿತು?
7 ತನ್ನ ಮರಣಕ್ಕೆ ತುಸು ಮುಂಚಿತವಾಗಿ, ಯೇಸು ಯಜಮಾನನಾದ ತಾನು ವಿಶೇಷ ಜವಾಬ್ದಾರಿಯನ್ನು ಕೊಡಲಿರುವ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗದ ಕುರಿತು ತನ್ನ ಶಿಷ್ಯರಿಗೆ ತಿಳಿಸಿದನು. ಕರ್ತನು ಸ್ವರ್ಗಕ್ಕೆ ತೆರಳಿದಾಗ ಆ “ಆಳು” ಅಸ್ತಿತ್ವದಲ್ಲಿರುತ್ತದೆ ಮಾತ್ರವಲ್ಲ, ಕ್ರಿಸ್ತನು ಅದೃಶ್ಯವಾಗಿ ರಾಜ್ಯಾಧಿಕಾರದಲ್ಲಿ ಹಿಂದಿರುಗುವಾಗಲೂ ಅದು ಕಠಿನ ಕೆಲಸವನ್ನು ಮಾಡುತ್ತಿರುವುದು. ಇಂತಹ ವರ್ಣನೆಯು ಒಬ್ಬ ವ್ಯಕ್ತಿಯನ್ನು ಹೋಲುವುದು ಅಸಂಭವನೀಯವಾದರೂ ಅದು ಕ್ರಿಸ್ತನ ಸಭೆಗೆ ಅನ್ವಯಿಸುವುದು ನಿಶ್ಚಯ. ಯೇಸು ತನ್ನ ರಕ್ತದ ಮೂಲಕ ಅದನ್ನು ಖರೀದಿಸಿದ್ದರಿಂದ, ಅದನ್ನು ತನ್ನ “ಆಳು” ಎಂದು ಸೂಚಿಸಿ ಮಾತಾಡಿದನು. ಅದರ ಸದಸ್ಯರು ಜನರನ್ನು ಶಿಷ್ಯರನ್ನಾಗಿ ಮಾಡಬೇಕೆಂಬ ಮತ್ತು ಅವರನ್ನು ಪ್ರಗತಿಪರವಾಗಿ ಉಣಿಸಬೇಕೆಂಬ, ಅಂದರೆ “ಹೊತ್ತುಹೊತ್ತಿಗೆ [ಆತ್ಮಿಕ] ಆಹಾರ”ವನ್ನು ನೀಡಬೇಕೆಂಬ ಆಜ್ಞೆಯನ್ನು ಅವರಿಗೆ ಕೊಟ್ಟನು.—ಮತ್ತಾಯ 24:45-47; 28:19; ಯೆಶಾಯ 43:10; ಲೂಕ 12:42; 1 ಪೇತ್ರ 4:10.
8. (ಎ) ಈ ಆಳು ವರ್ಗಕ್ಕೆ ಈಗ ಯಾವ ಜವಾಬ್ದಾರಿಗಳಿವೆ? (ಬಿ) ದೇವರ ಮಾಧ್ಯಮದ ಮೂಲಕ ನಮಗೆ ದೊರೆಯುವ ಉಪದೇಶಕ್ಕೆ ನಮ್ಮ ಪ್ರತಿವರ್ತನೆ ಏಕೆ ಪ್ರಾಮುಖ್ಯ?
8 ಯಜಮಾನನು 1914ರಲ್ಲಿ ಅದೃಶ್ಯವಾಗಿ ಹಿಂದಿರುಗಿ ಬಂದಾಗ, ಈ ಆಳು ವರ್ಗವು ಅವನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದುದರಿಂದ, ಅದಕ್ಕೆ 1919ರಲ್ಲಿ ಹೆಚ್ಚು ಜವಾಬ್ದಾರಿಗಳನ್ನು ಕೊಡಲಾಯಿತು ಎಂಬುದನ್ನು ತೋರಿಸಲು ಪುರಾವೆಯಿದೆ. ಅಂದಿನಿಂದ ದಾಟಿರುವ ವರುಷಗಳು ಭೌಗೋಳಿಕ ರಾಜ್ಯಸಾಕ್ಷಿಯ ಸಮಯವಾಗಿದ್ದವು. ಮತ್ತು ಯೆಹೋವನ ಆರಾಧಕರ ಮಹಾ ಸಮೂಹವೊಂದನ್ನು ಮಹಾ ಸಂಕಟದಿಂದ ಪಾರಾಗಿ ಉಳಿಯುವ ದೃಷ್ಟಿಯಿಂದ ಈಗ ಒಟ್ಟುಗೂಡಿಸಲಾಗುತ್ತಿದೆ. (ಮತ್ತಾಯ 24:14, 21, 22; ಪ್ರಕಟನೆ 7:9, 10) ಇವರಿಗೂ ಆತ್ಮಿಕ ಆಹಾರವು ಅಗತ್ಯವಾಗಿದೆ, ಮತ್ತು ಇದನ್ನು ಈ ಆಳು ವರ್ಗವು ಅವರಿಗೆ ಬಡಿಸುತ್ತದೆ. ಆದಕಾರಣ ನಾವು ಯೆಹೋವನನ್ನು ಮೆಚ್ಚಿಸಬೇಕಾದರೆ, ಆತನು ಈ ಮಾಧ್ಯಮದ ಮೂಲಕ ಒದಗಿಸುವ ಉಪದೇಶವನ್ನು ನಾವು ಅಂಗೀಕರಿಸಿ ಅದಕ್ಕೆ ಹೊಂದಿಕೆಯಲ್ಲಿ ವರ್ತಿಸುವುದು ಅಗತ್ಯ.
9, 10. (ಎ) ಒಂದನೆಯ ಶತಮಾನದಲ್ಲಿ ಸಿದ್ಧಾಂತದ ವಿಷಯದಲ್ಲಿ ಏಳುವ ಪ್ರಶ್ನೆಗಳನ್ನು ಬಗೆಹರಿಸುವುದಕ್ಕೆ ಮತ್ತು ಸುವಾರ್ತೆಯನ್ನು ಸಾರುವ ವಿಷಯದಲ್ಲಿ ಮಾರ್ಗದರ್ಶನವನ್ನು ನೀಡುವುದಕ್ಕೆ ಯಾವ ಏರ್ಪಾಡಿತ್ತು? (ಬಿ) ಇಂದು ಯೆಹೋವನ ಸಾಕ್ಷಿಗಳ ಚಟುವಟಿಕೆಗಳನ್ನು ಸುಸಂಘಟಿಸಲು ಯಾವ ಏರ್ಪಾಡು ಅಸ್ತಿತ್ವದಲ್ಲಿದೆ?
9 ಕೆಲವೊಮ್ಮೆ, ಸಿದ್ಧಾಂತ ಮತ್ತು ಕ್ರಮವಿಧಾನಗಳ ಬಗ್ಗೆ ಪ್ರಶ್ನೆಗಳೇಳುತ್ತವೆ. ಆಗ ಏನು ಮಾಡಬೇಕು? ಯೆಹೂದ್ಯೇತರರು ಮತಾಂತರಗೊಂಡಾಗ ಎದ್ದ ವಿವಾದವು ಹೇಗೆ ಬಗೆಹರಿಸಲ್ಪಟ್ಟಿತೆಂಬುದನ್ನು ಅಪೊಸ್ತಲರ ಕೃತ್ಯಗಳು 15ನೆಯ ಅಧ್ಯಾಯವು ತಿಳಿಯಪಡಿಸುತ್ತದೆ. ಈ ಸಂಗತಿಯನ್ನು ಕೇಂದ್ರಾಡಳಿತ ಮಂಡಲಿಯಾಗಿ ಯೆರೂಸಲೇಮಿನಲ್ಲಿದ್ದ ಅಪೊಸ್ತಲರಿಗೂ ಹಿರೀ ಪುರುಷರಿಗೂ ತಿಳಿಸಲಾಯಿತು. ಈ ಪುರುಷರು ದೋಷಾತೀತರಾಗಿರದಿದ್ದರೂ ದೇವರು ಅವರನ್ನು ಉಪಯೋಗಿಸಿದನು. ಅವರು ಆ ವಿಷಯಕ್ಕೆ ಸಂಬಂಧಿಸಿದ ಶಾಸ್ತ್ರವಚನಗಳನ್ನು ಪರಿಗಣಿಸಿದರು, ಮತ್ತು ಯೆಹೂದ್ಯೇತರ ಕ್ಷೇತ್ರವನ್ನು ಸೇವೆಗಾಗಿ ತೆರೆದಿದ್ದ ಪವಿತ್ರಾತ್ಮದ ಕಾರ್ಯದ ರುಜುವಾತನ್ನೂ ಪರೀಕ್ಷಿಸಿದರು. ಆ ಬಳಿಕ ಅವರು ಒಂದು ತೀರ್ಪನ್ನು ಕೊಟ್ಟರು. ಮತ್ತು ದೇವರು ಆ ಏರ್ಪಾಡನ್ನು ಆಶೀರ್ವದಿಸಿದನು. (ಅ. ಕೃತ್ಯಗಳು 15:1-29; 16:4, 5) ಆ ಕೇಂದ್ರೀಯ ಮಂಡಲಿಯಿಂದ ನಿಯಮಿತ ವ್ಯಕ್ತಿಗಳನ್ನು ರಾಜ್ಯ ಸಾರುವಿಕೆಯನ್ನು ವಿಸ್ತರಿಸಲಿಕ್ಕಾಗಿ ಕಳುಹಿಸಲಾಯಿತು.
10 ನಮ್ಮ ದಿನಗಳಲ್ಲಿ ಯೆಹೋವನ ದೃಶ್ಯ ಸಂಸ್ಥೆಯ ಆಡಳಿತ ಮಂಡಲಿಯು ವಿವಿಧ ದೇಶಗಳ ಆತ್ಮಾಭಿಷಿಕ್ತ ಸಹೋದರರಿಂದ ರಚಿತವಾಗಿದ್ದು, ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ನೆಲೆಸಿರುತ್ತದೆ. ಯೇಸು ಕ್ರಿಸ್ತನ ತಲೆತನದ ಕೆಳಗೆ, ಈ ಆಡಳಿತ ಮಂಡಲಿಯು ಪ್ರತಿಯೊಂದು ದೇಶದಲ್ಲಿ ಶುದ್ಧಾರಾಧನೆಯನ್ನು ಪ್ರವರ್ಧಿಸಿ, ಯೆಹೋವನ ಸಾಕ್ಷಿಗಳ ಹತ್ತಾರು ಸಾವಿರ ಸಭೆಗಳ ಸಾರುವ ಕಾರ್ಯವನ್ನು ಸುಸಂಘಟಿಸುತ್ತದೆ. ಈ ಆಡಳಿತ ಮಂಡಲಿಯಲ್ಲಿರುವವರು ಅಪೊಸ್ತಲ ಪೌಲನ ದೃಷ್ಟಿಕೋನದಲ್ಲಿ ಪಾಲಿಗರಾಗುತ್ತಾರೆ. ಅವನು ಜೊತೆ ಕ್ರೈಸ್ತರಿಗೆ ಬರೆದದ್ದು: “ನಾವು ನಂಬಿಕೆಯ ವಿಷಯದಲ್ಲಿಯೂ ನಿಮ್ಮ ಮೇಲೆ ದೊರೆತನಮಾಡುವವರೆಂದು ನನ್ನ ತಾತ್ಪರ್ಯವಲ್ಲ; ನಿಮ್ಮ ಸಂತೋಷಕ್ಕೆ ನಾವು ಸಹಾಯಕರಾಗಿದ್ದೇವೆ; ನಂಬಿಕೆಯ ವಿಷಯದಲ್ಲಿ ದೃಢನಿಂತಿದ್ದೀರಿ.”—2 ಕೊರಿಂಥ 1:24.
11. (ಎ) ಹಿರಿಯರನ್ನು ಮತ್ತು ಶುಶ್ರೂಷಾ ಸೇವಕರನ್ನು ಹೇಗೆ ನೇಮಿಸಲಾಗುತ್ತದೆ? (ಬಿ) ಇಂತಹ ನೇಮಿತ ವ್ಯಕ್ತಿಗಳಿಗೆ ನಾವು ಏಕೆ ನಿಕಟವಾದ ಸಹಕಾರವನ್ನು ಕೊಡಬೇಕು?
11 ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳು, ಯೋಗ್ಯತೆಯುಳ್ಳ ಸಹೋದರರನ್ನು ಆರಿಸಲು ಆಡಳಿತ ಮಂಡಲಿಯ ಕಡೆಗೆ ನೋಡುತ್ತಾರೆ, ಮತ್ತು ಈ ಸಹೋದರರು ಸರದಿಯಾಗಿ, ಸಭೆಗಳ ಜಾಗ್ರತೆ ವಹಿಸಲಿಕ್ಕಾಗಿ ಹಿರಿಯರನ್ನೂ ಶುಶ್ರೂಷಾ ಸೇವಕರನ್ನೂ ನೇಮಿಸಲು ಅಧಿಕಾರವುಳ್ಳವರಾಗುತ್ತಾರೆ. ಹಾಗೆ ನೇಮಿಸಲ್ಪಡುವವರಿಗೆ ಬೇಕಾಗಿರುವ ಅರ್ಹತೆಗಳು ಬೈಬಲಿನಲ್ಲಿ ಕೊಡಲ್ಪಟ್ಟಿವೆ. ಮತ್ತು ಆ ಪುರುಷರು ಪರಿಪೂರ್ಣರಲ್ಲವೆಂಬುದನ್ನೂ ತಪ್ಪುಗಳನ್ನು ಮಾಡುತ್ತಾರೆಂಬುದನ್ನೂ ಗಣನೆಗೆ ತೆಗೆದುಕೊಳ್ಳಿರಿ. ಈ ವಿಷಯದಲ್ಲಿ ಶಿಫಾರಸ್ಸು ಮಾಡುವ ಹಿರಿಯರಿಗೆ ಮತ್ತು ನೇಮಕವನ್ನು ನೀಡುವ ಹಿರಿಯರಿಗೆ ದೇವರ ಮುಂದೆ ಗಂಭೀರವಾದ ಜವಾಬ್ದಾರಿಯಿರುತ್ತದೆ. (1 ತಿಮೊಥೆಯ 3:1-10, 12, 13; ತೀತ 1:5-9) ಆದಕಾರಣ ಅವರು ದೇವರಾತ್ಮದ ಸಹಾಯಕ್ಕಾಗಿ ಪ್ರಾರ್ಥಿಸಿ, ಆತನ ಪ್ರೇರಿತ ವಾಕ್ಯದ ಮಾರ್ಗದರ್ಶನವನ್ನು ಹುಡುಕುತ್ತಾರೆ. (ಅ. ಕೃತ್ಯಗಳು 6:2-4, 6; 14:23) ಆದುದರಿಂದ, ನಾವು “ನಂಬಿಕೆಯಿಂದ . . . ಐಕ್ಯವನ್ನು” ಹೊಂದುವಂತೆ ನಮಗೆ ಸಹಾಯಮಾಡುವ ಈ ‘ಮನುಷ್ಯರಲ್ಲಿನ ದಾನ’ಗಳಿಗೆ ಕೃತಜ್ಞತೆಯನ್ನು ತೋರಿಸೋಣ.—ಎಫೆಸ 4:8, 11-16.
12. ಯೆಹೋವನು ಸ್ತ್ರೀಯರನ್ನು ದೇವಪ್ರಭುತ್ವಾತ್ಮಕ ಏರ್ಪಾಡಿನಲ್ಲಿ ಹೇಗೆ ಉಪಯೋಗಿಸುತ್ತಾನೆ?
12 ಸಭಾ ಮೇಲ್ವಿಚಾರಣೆಯನ್ನು ಪುರುಷರು ನೋಡಿಕೊಳ್ಳಬೇಕೆಂದು ಶಾಸ್ತ್ರವು ನಿರ್ದೇಶಿಸುತ್ತದೆ. ಇದು ಸ್ತ್ರೀಯರನ್ನು ಕೆಳ ವರ್ಗಕ್ಕಿಳಿಸುವುದಿಲ್ಲ, ಏಕೆಂದರೆ ಇವರಲ್ಲಿ ಕೆಲವರು ಸ್ವರ್ಗೀಯ ರಾಜ್ಯ ಬಾಧ್ಯಸ್ಥರಾಗಿರುವುದು ಮಾತ್ರವಲ್ಲ, ಸ್ತ್ರೀಯರು ಸಾರುವ ಕೆಲಸದಲ್ಲಿ ಹೆಚ್ಚಿನ ಅಂಶವನ್ನೂ ಮಾಡುತ್ತಾರೆ. (ಕೀರ್ತನೆ 68:11) ಅಲ್ಲದೆ, ಕುಟುಂಬ ಜವಾಬ್ದಾರಿಗಳನ್ನು ನಂಬಿಗಸ್ತಿಕೆಯಿಂದ ನೋಡಿಕೊಳ್ಳುವ ಕಾರಣ ಈ ಸ್ತ್ರೀಯರು ಸಭೆಯ ಒಳ್ಳೆಯ ಹೆಸರನ್ನು ಬೆಂಬಲಿಸುತ್ತಾರೆ. (ತೀತ 2:3-5) ಆದರೆ ಸಭೆಗೆ ಬೋಧಿಸುವ ಕೆಲಸವನ್ನು ಮಾಡುವವರು ಅದಕ್ಕಾಗಿ ನೇಮಿತರಾದ ಪುರುಷರೇ.—1 ತಿಮೊಥೆಯ 2:12, 13.
13. (ಎ) ತಮ್ಮ ಸ್ಥಾನವನ್ನು ಹಿರಿಯರು ಹೇಗೆ ವೀಕ್ಷಿಸಬೇಕೆಂದು ಬೈಬಲು ಪ್ರೋತ್ಸಾಹಿಸುತ್ತದೆ? (ಬಿ) ನಾವೆಲ್ಲರೂ ಯಾವ ಸುಯೋಗದಲ್ಲಿ ಪಾಲಿಗರಾಗಬಹುದು?
13 ಈ ಲೋಕದಲ್ಲಿ ಪ್ರಧಾನ ಸ್ಥಾನದಲ್ಲಿರುವವನನ್ನು ಪ್ರಮುಖನೆಂದು ಎಣಿಸಲಾಗುತ್ತದಾದರೂ, ದೇವರ ಸಂಸ್ಥೆಯ ನಿಯಮವು, “ನಿಮ್ಮೆಲ್ಲರಲ್ಲಿ ಯಾವನು ಚಿಕ್ಕವನೋ ಅವನೇ ದೊಡ್ಡವನು” ಎಂದಾಗಿದೆ. (ಲೂಕ 9:46-48; 22:24-26) ದೇವರ ಸ್ವತ್ತಾಗಿರುವವರ ಮೇಲೆ ಹಿರಿಯರು ದೊರೆತನ ಮಾಡದೆ, ಮಂದೆಗೆ ಮಾದರಿಯಾಗಿರಬೇಕೆಂದು ಶಾಸ್ತ್ರವು ಅವರಿಗೆ ಬುದ್ಧಿಹೇಳುತ್ತದೆ. (1 ಪೇತ್ರ 5:2, 3) ಕೇವಲ ಕೆಲವರಿಗಲ್ಲ, ಸ್ತ್ರೀಪುರುಷರಾದ ಯೆಹೋವನ ಸಾಕ್ಷಿಗಳಿಗೆಲ್ಲರಿಗೂ ವಿಶ್ವ ಪರಮಾಧಿಕಾರಿಯನ್ನು ಪ್ರತಿನಿಧಿಸುವ, ಆತನ ನಾಮದ ಕುರಿತು ದೈನ್ಯದಿಂದ ಮಾತಾಡುವ ಮತ್ತು ಆತನ ರಾಜ್ಯದ ವಿಷಯದಲ್ಲಿ ಎಲ್ಲೆಲ್ಲಿಯೂ ಜನರಿಗೆ ತಿಳಿಯಪಡಿಸುವ ಸದವಕಾಶವಿದೆ.
14. ಉಲ್ಲೇಖಿತ ಶಾಸ್ತ್ರವಚನಗಳನ್ನು ಉಪಯೋಗಿಸಿ, ಪರಿಚ್ಛೇದದ ಕೆಳಗಿರುವ ಪ್ರಶ್ನೆಗಳನ್ನು ಚರ್ಚಿಸಿರಿ.
14 ನಾವು ಹೀಗೆ ಕೇಳಿಕೊಳ್ಳುವುದು ಉತ್ತಮ: ‘ಯೆಹೋವನು ತನ್ನ ದೃಶ್ಯ ಸಂಸ್ಥೆಯನ್ನು ನಡೆಸುವ ವಿಧವನ್ನು ನಾನು ನಿಜವಾಗಿಯೂ ತಿಳಿದು ಅದಕ್ಕೆ ಕೃತಜ್ಞನಾಗಿದ್ದೇನೊ? ನನ್ನ ಮನೋಭಾವ, ನಡೆ, ನುಡಿಗಳು ಇದನ್ನು ಪ್ರತಿಬಿಂಬಿಸುತ್ತವೆಯೊ?’ ಈ ಕೆಳಗಿನ ವಿಷಯಗಳನ್ನು ತರ್ಕಿಸುವುದು, ನಮ್ಮಲ್ಲಿ ಪ್ರತಿಯೊಬ್ಬನು ಇಂತಹ ವಿಶ್ಲೇಷಣೆಯನ್ನು ಮಾಡುವಂತೆ ಸಹಾಯಮಾಡಬಲ್ಲದು.
ಸಭೆಯ ಶಿರಸ್ಸಾಗಿರುವ ಕ್ರಿಸ್ತನಿಗೆ ನಾನು ನಿಜವಾಗಿಯೂ ಅಧೀನನಾಗಿರುವಲ್ಲಿ, ಈ ಕೆಳಗಿನ ವಚನಗಳು ತೋರಿಸುವಂತೆ, ನಾನೇನು ಮಾಡಬೇಕಾದೀತು? (ಮತ್ತಾಯ 24:14; 28:19, 20; ಯೋಹಾನ 13:34, 35)
ಆಳು ವರ್ಗ ಮತ್ತು ಅದರ ಆಡಳಿತ ಮಂಡಲಿಯಿಂದ ಬರುವ ಆತ್ಮಿಕ ಏರ್ಪಾಡುಗಳನ್ನು ನಾನು ಕೃತಜ್ಞತೆಯಿಂದ ಅಂಗೀಕರಿಸುವಲ್ಲಿ, ನಾನು ಯಾರಿಗೆ ಗೌರವವನ್ನು ತೋರಿಸುತ್ತಿದ್ದೇನೆ? (ಲೂಕ 10:16)
ಸಭೆಯಲ್ಲಿರುವ ಎಲ್ಲರೂ, ವಿಶೇಷವಾಗಿ ಹಿರಿಯರು ಪರಸ್ಪರ ಹೇಗೆ ವರ್ತಿಸಬೇಕು? (ರೋಮಾಪುರ 12:10)
15. (ಎ) ಯೆಹೋವನ ದೃಶ್ಯ ಸಂಸ್ಥೆಯ ಕಡೆಗೆ ನಮಗಿರುವ ಮನೋಭಾವದಿಂದ ನಾವು ಏನನ್ನು ವ್ಯಕ್ತಪಡಿಸುತ್ತೇವೆ? (ಬಿ) ಪಿಶಾಚನನ್ನು ಸುಳ್ಳನೆಂದು ರುಜುಪಡಿಸಲು ಮತ್ತು ಯೆಹೋವನ ಹೃದಯವನ್ನು ಸಂತೋಷಪಡಿಸಲು ಯಾವ ಸಂದರ್ಭಗಳು ನಮಗಿವೆ?
15 ಇಂದು ಯೆಹೋವನು ನಮ್ಮನ್ನು ಕ್ರಿಸ್ತನ ಕೆಳಗಿರುವ ದೃಶ್ಯ ಸಂಸ್ಥೆಯ ಮೂಲಕ ಮಾರ್ಗದರ್ಶಿಸುತ್ತಾನೆ. ಈ ಏರ್ಪಾಡಿನ ಕಡೆಗೆ ನಾವು ತೋರಿಸುವ ಮನೋಭಾವವು, ಪರಮಾಧಿಕಾರದ ವಿವಾದಾಂಶದ ವಿಷಯದಲ್ಲಿ ನಮ್ಮ ಅನಿಸಿಕೆಯೇನು ಎಂಬುದನ್ನು ವ್ಯಕ್ತಪಡಿಸುತ್ತದೆ. (ಇಬ್ರಿಯ 13:17) ಸ್ವಇಚ್ಛೆಯೇ ನಮ್ಮ ಮುಖ್ಯ ಚಿಂತೆಯಾಗಿದೆ ಎಂದು ಹೇಳುತ್ತಾ ಸೈತಾನನು ಸ್ಪರ್ಧಿಸುತ್ತಾನೆ. ಆದರೆ ನಾವು ಅಗತ್ಯವಿರುವ ಯಾವುದೇ ಸೇವೆಯನ್ನು ಮಾಡುವಲ್ಲಿ ಮತ್ತು ನಮ್ಮ ಮೇಲೆ ಅನಾವಶ್ಯಕವಾದ ಗಮನವನ್ನು ಸೆಳೆಯುವುದನ್ನು ಬಿಟ್ಟುಬಿಡುವಲ್ಲಿ, ನಾವು ಪಿಶಾಚನನ್ನು ಸುಳ್ಳುಗಾರನೆಂದು ರುಜುಪಡಿಸುತ್ತೇವೆ. ನಾವು ನಮ್ಮಲ್ಲಿ ನಾಯಕತ್ವ ವಹಿಸುವವರನ್ನು ಪ್ರೀತಿಸಿ, ಗೌರವಿಸುತ್ತಾ, “ಸ್ವಪ್ರಯೋಜನಕ್ಕಾಗಿ ಮುಖಸ್ತುತಿ” ಮಾಡಲು ನಿರಾಕರಿಸುವಲ್ಲಿ, ನಾವು ಯೆಹೋವನಿಗೆ ಸಂತೋಷವನ್ನು ತರುತ್ತೇವೆ. (ಯೂದ 16; ಇಬ್ರಿಯ 13:7) ಯೆಹೋವನ ಸಂಸ್ಥೆಗೆ ನಿಷ್ಠೆಯುಳ್ಳವರಾಗಿರುವಾಗ, ಯೆಹೋವನು ನಮ್ಮ ದೇವರೆಂದೂ ಆತನ ಆರಾಧನೆಯಲ್ಲಿ ನಾವು ಐಕ್ಯರೆಂದೂ ನಾವು ವ್ಯಕ್ತಪಡಿಸುತ್ತೇವೆ.—1 ಕೊರಿಂಥ 15:58.
ಪುನರ್ವಿಮರ್ಶೆಯ ಚರ್ಚೆ
• ಇಂದು ಯಾವುದು ಯೆಹೋವನ ದೃಶ್ಯ ಸಂಸ್ಥೆಯಾಗಿದೆ? ಅದರ ಉದ್ದೇಶವೇನು?
• ಸಭೆಯ ನೇಮಕ ಹೊಂದಿರುವ ಶಿರಸ್ಸು ಯಾರು, ಮತ್ತು ಯಾವ ದೃಶ್ಯ ಏರ್ಪಾಡುಗಳ ಮೂಲಕ ಅವನು ನಮಗೆ ಪ್ರೀತಿಯ ಮಾರ್ಗದರ್ಶನವನ್ನು ಒದಗಿಸುತ್ತಾನೆ?
• ಯೆಹೋವನ ಸಂಸ್ಥೆಯಲ್ಲಿರುವವರ ಕಡೆಗೆ ನಾವು ಯಾವ ಹಿತಕರವಾದ ಮನೋಭಾವಗಳನ್ನು ಬೆಳೆಸಿಕೊಳ್ಳಬೇಕು?
[ಪುಟ 133ರಲ್ಲಿರುವ ಚಿತ್ರಗಳು]
ಯೆಹೋವನು ಕ್ರಿಸ್ತನ ಅಧಿಕಾರದಲ್ಲಿರುವ ದೃಶ್ಯ ಸಂಸ್ಥೆಯ ಮೂಲಕ ನಮ್ಮನ್ನು ನಡೆಸುತ್ತಾನೆ