ಬೈಬಲ್ ಪುಸ್ತಕ ನಂಬರ್ 40 ಮತ್ತಾಯ
ಲೇಖಕ: ಮತ್ತಾಯ
ಬರೆಯಲ್ಪಟ್ಟ ಸ್ಥಳ: ಪಲೆಸ್ತೀನ
ಬರೆದು ಮುಗಿಸಿದ್ದು: ಸುಮಾರು ಸಾ.ಶ. 41
ಆವರಿಸಲ್ಪಟ್ಟ ಕಾಲ: ಸಾ.ಶ.ಪೂ. 2-ಸಾ.ಶ. 33
ಏದೆನಿನ ದಂಗೆಯ ಸಮಯದಿಂದ ಹಿಡಿದು, ಯೆಹೋವನು ಮನುಷ್ಯರ ಮುಂದೆ ಒಂದು ಸಾಂತ್ವನದ ವಾಗ್ದಾನವನ್ನು ಇಟ್ಟಿದ್ದಾನೆ. ‘ಸ್ತ್ರೀಯ’ ಸಂತಾನದ ಮೂಲಕ ನೀತಿಪ್ರಿಯರೆಲ್ಲರಿಗೂ ವಿಮೋಚನೆಯು ಒದಗಿಸಲ್ಪಡುವುದು ಎಂದೇ ಆ ವಾಗ್ದಾನ. ಈ ಸಂತಾನ, ಇಲ್ಲವೆ ಮೆಸ್ಸೀಯನನ್ನು ಆತನು ಇಸ್ರಾಯೇಲ್ ಜನಾಂಗದಿಂದ ಬರಮಾಡಲಿದ್ದನು. ಶತಕಗಳು ದಾಟಿದಂತೆ, ಆತನು ಪ್ರೇರಿತ ಹೀಬ್ರು ಲೇಖಕರ ಮೂಲಕ ಅನೇಕಾನೇಕ ಪ್ರವಾದನೆಗಳನ್ನು ಬರೆಯಿಸಿದನು. ಈ ಸಂತಾನವು ದೇವರ ರಾಜ್ಯದ ಪ್ರಭುವಾಗಿ, ಯೆಹೋವನ ನಾಮದ ಪವಿತ್ರೀಕರಣ ಮಾಡಿ ಅದರ ಮೇಲಿನ ಕಳಂಕವನ್ನು ಸದಾಕಾಲಕ್ಕೂ ತೆಗೆದುಹಾಕುವನೆಂದೂ ಆ ಪ್ರವಾದನೆಗಳು ತೋರಿಸಿದವು. ಯೆಹೋವನ ನಾಮದ ಕಳಂಕ-ನಿವಾರಕನೂ, ಭಯ, ಶೋಷಣೆ, ಪಾಪ ಮತ್ತು ಮರಣದಿಂದ ಬಿಡುಗಡೆ ತರುವವನೂ ಆದ ಈತನ ಬಗ್ಗೆ ಈ ಪ್ರವಾದಿಗಳು ಅನೇಕ ವಿವರಗಳನ್ನು ಒದಗಿಸಿದರು. ಹೀಬ್ರು ಶಾಸ್ತ್ರಗಳು ಬರೆದು ಮುಗಿಸಲ್ಪಟ್ಟಾಗ, ಮೆಸ್ಸೀಯನ ಕುರಿತ ಈ ನಿರೀಕ್ಷೆ ಯೆಹೂದ್ಯರ ಮಧ್ಯೆ ಸ್ಥಿರವಾಗಿ ನೆಲೆಗೊಂಡಿತು.
2 ಈ ಮಧ್ಯೆ, ಲೋಕದ ದೃಶ್ಯವು ಬದಲಾವಣೆ ಹೊಂದುತ್ತಲಿತ್ತು. ಮೆಸ್ಸೀಯನ ತೋರಿಬರುವಿಕೆಯ ಸಿದ್ಧತೆಯಲ್ಲಿ ದೇವರು ಜನಾಂಗಗಳನ್ನು ನಿಯೋಜಿಸಿದ್ದನು ಮತ್ತು ಆ ಘಟನೆಯ ವಾರ್ತೆಯನ್ನು ವಿಸ್ತಾರವಾಗಿ ಹಬ್ಬಿಸಲು ಪರಿಸ್ಥಿತಿಗಳು ಆದರ್ಶವಾಗಿದ್ದವು. ಜನಾಂಗಗಳ ಮಧ್ಯೆ ಸಂಪರ್ಕದ ಸಾರ್ವತ್ರಿಕ ಸಾಧನವಾದ ಒಂದು ಸಾಮಾನ್ಯ ಭಾಷೆಯನ್ನು ಐದನೆಯ ಲೋಕಶಕ್ತಿ ಗ್ರೀಸ್ ಒದಗಿಸಿತ್ತು. ಆರನೆಯ ಲೋಕಶಕ್ತಿ ರೋಮ್ ತನ್ನ ಅಧೀನದ ಜನಾಂಗಗಳನ್ನು ಒಂದು ಲೋಕಸಾಮ್ರಾಜ್ಯವಾಗಿ ಮಾಡಿ, ಆ ಸಾಮ್ರಾಜ್ಯದ ಎಲ್ಲ ಭಾಗಗಳನ್ನು ಸುಲಭವಾಗಿ ತಲಪಲು ಹೆದ್ದಾರಿಗಳನ್ನು ನಿರ್ಮಿಸಿತ್ತು. ಅನೇಕ ಯೆಹೂದ್ಯರು ಸಾಮ್ರಾಜ್ಯವಿಡೀ ಚದರಿದ್ದರಿಂದ, ಮೆಸ್ಸೀಯನ ಬರೋಣದ ಬಗ್ಗೆ ಯೆಹೂದ್ಯರಿಗಿದ್ದ ನಿರೀಕ್ಷೆಯನ್ನು ಇತರರೂ ತಿಳಿದುಕೊಳ್ಳುವಂತಾಗಿತ್ತು. ಆಗ, ಅಂದರೆ ಏದೆನಿನ ವಾಗ್ದಾನವಾಗಿ 4,000ಕ್ಕೂ ಹೆಚ್ಚು ವರುಷಗಳು ಕಳೆದ ಮೇಲೆ ಮೆಸ್ಸೀಯನು ತೋರಿಬಂದಿದ್ದನು! ದೀರ್ಘಕಾಲದಿಂದ ಎದುರುನೋಡಲಾಗಿದ್ದ ವಾಗ್ದತ್ತ ಸಂತಾನವಾದಾತನು ಬಂದಿದ್ದನು! ಈ ಮೆಸ್ಸೀಯನು ತನ್ನ ತಂದೆಯ ಚಿತ್ತವನ್ನು ಈ ಭೂಮಿಯಲ್ಲಿ ನಂಬಿಗಸ್ತಿಕೆಯಿಂದ ನೆರವೇರಿಸಿದಾಗ, ಮಾನವ ಇತಿಹಾಸದಲ್ಲಿ ಆ ತನಕ ನಡೆದಿರದ ಅತಿ ಪ್ರಾಮುಖ್ಯ ಘಟನೆಗಳು ಸಂಭವಿಸಿದವು.
3 ಈ ಮಹತ್ವಪೂರ್ಣ ಸಂಭವಗಳನ್ನು ದಾಖಲಿಸಲಿಕ್ಕಾಗಿ ಪ್ರೇರಿತ ಬರಹಗಳನ್ನು ಬರೆದಿಡಲು ಆಗ ಪುನಃ ಸಮಯವು ಬಂದಿತ್ತು. ನಾಲ್ಕು ಮಂದಿ ನಂಬಿಗಸ್ತ ಪುರುಷರು ತಮ್ಮ ಸ್ವತಂತ್ರ ವೃತ್ತಾಂತಗಳನ್ನು ಬರೆದಿಡುವಂತೆ ಯೆಹೋವನ ಆತ್ಮವು ಅವರನ್ನು ಪ್ರೇರಿಸಿತು. ಹೀಗೆ, ಯೇಸುವೇ ಮೆಸ್ಸೀಯನು, ವಾಗ್ದತ್ತ ಸಂತಾನ ಮತ್ತು ಅರಸನೆಂಬ ವಿಷಯದಲ್ಲಿ ನಾಲ್ಕು ಪಟ್ಟು ಸಾಕ್ಷಿಯನ್ನು ಒದಗಿಸಿ, ಅವನ ಜೀವನ, ಸುವಾರ್ತಾಸೇವೆ, ಮರಣ ಮತ್ತು ಪುನರುತ್ಥಾನದ ಬಗ್ಗೆ ವಿವರಣೆಯನ್ನು ನೀಡಲಾಯಿತು. ಈ ವೃತ್ತಾಂತಗಳನ್ನು ಸುವಾರ್ತೆಗಳು ಎಂದು ಕರೆಯಲಾಗುತ್ತದೆ. ಈ ನಾಲ್ಕು ವೃತ್ತಾಂತಗಳು ಸದೃಶವಾಗಿದ್ದು ಸಮಾನ ಘಟನಾವಳಿಗಳನ್ನು ಆವರಿಸುತ್ತವಾದರೂ, ಅವು ಖಂಡಿತವಾಗಿಯೂ ಒಂದು ಇನ್ನೊಂದರ ನಕಲುಪ್ರತಿಗಳಲ್ಲ. ಪ್ರಥಮದ ಮೂರು ಸುವಾರ್ತಾ ಪುಸ್ತಕಗಳನ್ನು “ಸಮಾನ ವೀಕ್ಷಣ” ಎಂಬ ಅರ್ಥ ಬರುವ ಸಿನಾಪ್ಟಿಕ್ ಎಂದು ಕರೆಯಲಾಗುತ್ತದೆ. ಯಾಕೆಂದರೆ ಅವು, ಯೇಸುವಿನ ಭೂ-ಜೀವನ ಚರಿತ್ರೆಯನ್ನು ಏಕರೀತಿಯಲ್ಲಿ ವಿವರಿಸುತ್ತವೆ. ಆದರೆ ಈ ನಾಲ್ಕು ಲೇಖಕರಲ್ಲಿ ಪ್ರತಿಯೊಬ್ಬನು—ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನ—ಕ್ರಿಸ್ತನ ಕುರಿತು ತನ್ನ ಸ್ವಂತ ಕಥನವನ್ನು ಬರೆಯುತ್ತಾನೆ. ಅವರಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ಮುಖ್ಯವಿಷಯ ಮತ್ತು ಗುರಿಯನ್ನು ಇಟ್ಟಿದ್ದು, ಅವನವನ ಸ್ವಂತ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತ, ತನ್ನ ನೇರ ಓದುಗರನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾನೆ. ಅವರ ಬರಹಗಳನ್ನು ನಾವೆಷ್ಟು ಹೆಚ್ಚು ಪರಿಶೀಲಿಸುತ್ತೇವೊ ಅಷ್ಟು ಹೆಚ್ಚು ಅವರ ವಿಶಿಷ್ಟ ಶೈಲಿಯನ್ನು ಗಣ್ಯಮಾಡುತ್ತೇವೆ. ಅಲ್ಲದೆ, ಬೈಬಲಿನ ಈ ನಾಲ್ಕು ಪ್ರೇರಿತ ಪುಸ್ತಕಗಳು ಯೇಸು ಕ್ರಿಸ್ತನ ಜೀವನ ವೃತ್ತಾಂತವನ್ನು ಸ್ವತಂತ್ರವಾದ, ಪೂರಕವಾದ ಹಾಗೂ ಹೊಂದಿಕೆಯಾದ ರೂಪದಲ್ಲಿ ತೋರಿಸುತ್ತವೆಂದು ತಿಳಿಯುತ್ತೇವೆ.
4 ಕ್ರಿಸ್ತನ ಸುವಾರ್ತೆಯನ್ನು ಪ್ರಥಮವಾಗಿ ಬರೆಯತೊಡಗಿದವನು ಮತ್ತಾಯನು. ಅವನ ಹೆಸರು ಪ್ರಾಯಶಃ “ಯೆಹೋವನ ಕೊಡುಗೆ” ಎಂಬರ್ಥದ “ಮತ್ತಿತ್ತಾಯ” ಎಂಬ ಹೀಬ್ರು ಹೆಸರಿನ ಸಂಕ್ಷಿಪ್ತರೂಪವಾಗಿದೆ. ಅವನು ಯೇಸು ಆರಿಸಿಕೊಂಡ ಹನ್ನೆರಡು ಮಂದಿ ಅಪೊಸ್ತಲರಲ್ಲಿ ಒಬ್ಬನಾಗಿದ್ದನು. ಬೋಧಕನಾದ ಯೇಸು ಪಲೆಸ್ತೀನ ದೇಶಾದ್ಯಂತ ದೇವರ ರಾಜ್ಯದ ಬಗ್ಗೆ ಸಾರುತ್ತಾ, ಬೋಧಿಸುತ್ತ ಪ್ರಯಾಣಮಾಡಿದಾಗ ಮತ್ತಾಯನಿಗೆ ಅವನೊಂದಿಗೆ ನಿಕಟವಾದ, ಆಪ್ತ ಸಂಬಂಧವಿತ್ತು. ಯೇಸುವಿನ ಶಿಷ್ಯನಾಗುವುದಕ್ಕೆ ಮೊದಲು ಮತ್ತಾಯನು ಸುಂಕದವನಾಗಿದ್ದನು. ಈ ವೃತ್ತಿಯನ್ನು ಯೆಹೂದ್ಯರು ಅತಿಯಾಗಿ ಹೇಸುತ್ತಿದ್ದರು ಏಕೆಂದರೆ ಅದು ಯೆಹೂದ್ಯರಿಗೆ ತಾವು ಸಾಮ್ರಾಜ್ಯಶಾಹಿಯಾದ ರೋಮ್ ಪ್ರಭುತ್ವದ ಅಡಿಯಲ್ಲಿದ್ದೇವೆ, ಸ್ವತಂತ್ರರಲ್ಲ ಎಂಬದನ್ನು ಸದಾ ನೆನಪಿಸುತ್ತಿತ್ತು. ಅಲ್ಫಾಯನ ಮಗನಾದ ಈ ಮತ್ತಾಯನಿಗೆ ಲೇವಿ ಎಂಬ ಇನ್ನೊಂದು ಹೆಸರೂ ಇತ್ತು. ತನ್ನನ್ನು ಹಿಂಬಾಲಿಸಲು ಯೇಸು ಕೊಟ್ಟ ಆಮಂತ್ರಣಕ್ಕೆ ಇವನು ಒಡನೆ ಪ್ರತಿವರ್ತನೆ ತೋರಿಸಿದನು.—ಮತ್ತಾ. 9:9; ಮಾರ್ಕ 2:14; ಲೂಕ 5:27-32.
5 ಮತ್ತಾಯನದ್ದೆಂದು ಹೇಳಲ್ಪಟ್ಟಿರುವ ಸುವಾರ್ತಾ ಪುಸ್ತಕವು ಅವನನ್ನು ಲೇಖಕನೆಂದು ಹೆಸರಿಸುವುದಿಲ್ಲ. ಆದರೂ, ಆದಿ ಸಭಾ ಇತಿಹಾಸಕಾರರ ಹೇರಳ ಸಾಕ್ಷಿ ಅವನನ್ನು ಲೇಖಕನೆಂದು ಹೇಳುತ್ತದೆ. ಪ್ರಾಯಶಃ, ಮತ್ತಾಯ ಪುಸ್ತಕದ ಲೇಖಕನು ಯಾರೆಂದು ತೋರಿಸಲಿಕ್ಕಾಗಿ ಇರುವಷ್ಟು ಸ್ಪಷ್ಟ ಹಾಗೂ ಒಮ್ಮತದ ಸಾಕ್ಷಿಯು ಬೇರಾವುದೇ ಪುರಾತನ ಪುಸ್ತಕದ ಲೇಖಕನಿಗಿಲ್ಲ. ಹೈಅರಾಪೊಲಿಸ್ನ ಪಾಪ್ಯಾಸ್ನ (ಸಾ.ಶ. ಎರಡನೆಯ ಶತಮಾನಾರಂಭ) ಕಾಲದಷ್ಟು ಹಿಂದಿನಿಂದ ಹಿಡಿದು, ಮತ್ತಾಯನೇ ಈ ಸುವಾರ್ತಾ ಪುಸ್ತಕವನ್ನು ಬರೆದನೆಂಬುದಕ್ಕೆ ಮತ್ತು ಇದು ದೇವರ ವಾಕ್ಯದ ವಿಶ್ವಾಸಾರ್ಹ ಭಾಗವೆಂಬುದಕ್ಕೆ ಆದಿ ಸಾಕ್ಷಿಗಳ ಉದ್ದ ಪಟ್ಟಿಯೇ ನಮಗಿದೆ. ಮೆಕ್ಲಿಂಟಕ್ ಆ್ಯಂಡ್ ಸ್ಟ್ರಾಂಗ್ಸ್ ಸೈಕ್ಲೊಪೀಡಿಯ ಹೇಳುವುದು: “ಮತ್ತಾಯನ ಸುವಾರ್ತೆಯ ಚಿಕ್ಕ ಭಾಗಗಳನ್ನು ಜಸ್ಟಿನ್ ಮಾರ್ಟರ್, ಡಯಗ್ನೀಟಸ್ಗೆ ಬರೆದ ಪತ್ರದ ಲೇಖಕನು (ಆಟ್ಟೊ ಎಂಬವನ ಜಸ್ಟಿನ್ ಮಾರ್ಟರ್, ಸಂ. IIರಲ್ಲಿ ನೋಡಿ), ಹೆಗಿಸಿಪಸ್, ಐರನೇಯಸ್, ಟೇಷನ್, ಅಥೆನಾಗೊರಸ್, ಥಿಯಾಫಿಲಸ್, ಕ್ಲೆಮೆಂಟ್, ಟೆರ್ಟಲಿಯನ್ ಮತ್ತು ಆರಜನ್—ಇವರು ಉಲ್ಲೇಖಿಸುತ್ತಾರೆ. ನಮ್ಮಲ್ಲಿರುವ ಪುಸ್ತಕವು ಯಾವುದೇ ಕ್ಷಿಪ್ರ ಬದಲಾವಣೆಗೊಳಗಾಗಿಲ್ಲ. ಅದು ಪ್ರಮಾಣೀಕರಿಸಲ್ಪಟ್ಟದ್ದೆಂದು ಅಭಿಪ್ರಯಿಸಲಾಗುವುದು, ಬರೇ ಅದರಲ್ಲಿ ಅಡಕವಾಗಿರುವ ವಿಷಯಗಳಿಂದ ಮಾತ್ರವಲ್ಲ ಬದಲಿಗೆ ಇಲ್ಲಿರುವ ಉಲ್ಲೇಖಗಳ ರೀತಿಯಿಂದ, ಅಧಿಕೃತ ಪ್ರಾಧಿಕಾರದಿಂದ ಮಾಡಲ್ಪಟ್ಟ ಶಾಂತ ಮನವಿಯಿಂದ ಮತ್ತು ಯಾವುದೇ ಸಂದೇಹದ ಸೂಚನೆಯೂ ಇಲ್ಲದಿರುವುದರಿಂದಲೇ.”a ಅಲ್ಲದೆ, ಮತ್ತಾಯನು ಅಪೊಸ್ತಲನಾಗಿದ್ದನು ಮತ್ತು ಅವನಲ್ಲಿ ದೇವರಾತ್ಮವಿತ್ತೆಂಬ ನಿಜತ್ವವು ಅವನು ಬರೆದಿರುವುದು ನಂಬಲರ್ಹ ದಾಖಲೆಯಾಗಿದೆ ಎಂಬ ಆಶ್ವಾಸನೆ ಕೊಡುತ್ತದೆ.
6 ಮತ್ತಾಯನು ತನ್ನ ವೃತ್ತಾಂತವನ್ನು ಪಲೆಸ್ತೀನದಲ್ಲಿ ಬರೆದನು. ಅದರ ನಿಷ್ಕೃಷ್ಟ ವರ್ಷ ತಿಳಿದಿರುವುದಿಲ್ಲವಾದರೂ, (ಸಾ.ಶ. ಹತ್ತನೆಯ ಶತಮಾನದ ನಂತರದ) ಕೆಲವು ಹಸ್ತಪ್ರತಿಗಳ ಅಂತ್ಯದಲ್ಲಿ ಕೊಡಲ್ಪಟ್ಟ ಬರವಣಿಗೆಗಳು ಸಾ.ಶ. 41ನ್ನು ಗುರುತಿಸುತ್ತವೆ. ಮತ್ತಾಯನು ತನ್ನ ಸುವಾರ್ತಾ ಪುಸ್ತಕವನ್ನು ಆದಿಯಲ್ಲಿ ಆ ಕಾಲದ ಜನಪ್ರಿಯ ಹೀಬ್ರು ಭಾಷೆಯಲ್ಲಿ ಬರೆದನು ಮತ್ತು ಆ ಬಳಿಕ ಅದನ್ನು ಗ್ರೀಕ್ ಭಾಷೆಗೆ ತರ್ಜುಮೆ ಮಾಡಿದನೆಂಬುದಕ್ಕೆ ಪುರಾವೆಯಿದೆ. ಡೆ ವಿರಿಸ್ ಇನ್ಲಸ್ಟ್ರಿಬಸ್ (ಸುಪ್ರಸಿದ್ಧ ಪುರುಷರ ವಿಷಯವಾಗಿ), ಅಧ್ಯಾಯ IIIರಲ್ಲಿ, ಜೆರೋಮ್ ಎಂಬವನು ಹೇಳುವುದು: “ಸುಂಕದವನಾಗಿದ್ದು ಬಳಿಕ ಅಪೊಸ್ತಲನಾದ, ಲೇವಿ ಎಂಬ ಹೆಸರೂ ಇದ್ದ ಮತ್ತಾಯನು ಪ್ರಥಮವಾಗಿ ಯೂದಾಯದಲ್ಲಿ ಕ್ರಿಸ್ತನ ಸುವಾರ್ತೆಯನ್ನು ಸುನ್ನತಿಯಾಗಿದ್ದ ವಿಶ್ವಾಸಿಗಳ ಪ್ರಯೋಜನಾರ್ಥವಾಗಿ ಹೀಬ್ರು ಭಾಷೆ ಮತ್ತು ಲಿಪಿಯಲ್ಲಿ ರಚಿಸಿದನು.” ಅವನು ಕೂಡಿಸಿ ಹೇಳಿದ್ದೇನೆಂದರೆ, ಈ ಸುವಾರ್ತಾ ಪುಸ್ತಕದ ಹೀಬ್ರು ಗ್ರಂಥಪಾಠವನ್ನು ತನ್ನ ಕಾಲದಲ್ಲಿ (ಸಾ.ಶ. ನಾಲ್ಕನೆಯ ಮತ್ತು ಐದನೆಯ ಶತಮಾನಗಳು) ಕೈಸರೈಯದಲ್ಲಿ ಪ್ಯಾಂಫಿಲಸ್ ಎಂಬವನ ಗ್ರಂಥಾಲಯದಲ್ಲಿ ಜೋಪಾನವಾಗಿ ಇಡಲಾಗಿತ್ತು.
7 ಮೂರನೆಯ ಶತಕದ ಆರಂಭದಲ್ಲಿ, ಆರಜನ್ ಎಂಬವನು ಸುವಾರ್ತಾ ಪುಸ್ತಕಗಳ ವಿಷಯ ಚರ್ಚಿಸುವಾಗ ಹೀಗೆ ಹೇಳಿದನೆಂದು ಯುಸೀಬಿಯಸ್ ತಿಳಿಸುತ್ತಾನೆ: “ಪ್ರಥಮವಾಗಿ ಮತ್ತಾಯನು ಬರೆದನು. . . . ಅವನು ಅದನ್ನು ಹೀಬ್ರು ಭಾಷೆಯಲ್ಲಿ ರಚಿಸಿ, ಯೆಹೂದಿ ಮತದಿಂದ ಬಂದ ವಿಶ್ವಾಸಿಗಳಿಗಾಗಿ ಪ್ರಕಟಿಸಿದನು.”b ಪ್ರಧಾನವಾಗಿ ಯೆಹೂದ್ಯರನ್ನು ಮನಸ್ಸಿನಲ್ಲಿಟ್ಟುಕೊಂಡು ಇದನ್ನು ಬರೆಯಲಾಯಿತೆಂದು ಅದರಲ್ಲಿ ಕೊಡಲಾದ ವಂಶಾವಳಿಯು ಸೂಚಿಸುತ್ತದೆ. ಈ ವಂಶಾವಳಿಯು ಅಬ್ರಹಾಮನಿಂದ ಹಿಡಿದು ಬಂದಿರುವ ಮೆಸ್ಸೀಯ ಯೇಸುವಿನ ಶಾಸನಬದ್ಧ ವಂಶಾನುಕ್ರಮವನ್ನು ತೋರಿಸುತ್ತದೆ. ಮತ್ತು ಈ ಪುಸ್ತಕದಲ್ಲಿ ಹೀಬ್ರು ಶಾಸ್ತ್ರದ ಅನೇಕ ಉಲ್ಲೇಖಗಳು ಅವು ಮೆಸ್ಸೀಯನ ಭಾವೀ ಬರೋಣವನ್ನು ಸೂಚಿಸಿದವೆಂದು ತೋರಿಸುತ್ತವೆ. ಮತ್ತಾಯನು ದೇವರ ಹೆಸರಿದ್ದ ಹೀಬ್ರು ಭಾಗದಿಂದ ಉಲ್ಲೇಖಿಸಿದಾಗ ದೇವರ ಹೆಸರನ್ನು ಚತುರಾಕ್ಷರಿಯ ರೂಪದಲ್ಲಿ ಉಪಯೋಗಿಸಿದನೆಂದು ನಂಬುವುದು ನ್ಯಾಯಸಮ್ಮತ. ಈ ಕಾರಣದಿಂದಲೇ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನ ಮತ್ತಾಯ ಪುಸ್ತಕದಲ್ಲಿ, 19ನೆಯ ಶತಮಾನದಲ್ಲಿ ಎಫ್. ಡಿಲಿಟ್ಸ್ಚ್ ಎಂಬವರು ಮೂಲದಲ್ಲಿ ತಯಾರಿಸಿದ ಮತ್ತಾಯನ ಹೀಬ್ರು ಭಾಷಾಂತರದಂತೆಯೇ, ಯೆಹೋವ ಎಂಬ ಹೆಸರು 18 ಬಾರಿ ಬರುತ್ತದೆ. ದೈವಿಕ ಹೆಸರಿನ ಬಗ್ಗೆ ಯೇಸುವಿಗಿದ್ದ ಮನೋಭಾವವೇ ಮತ್ತಾಯನಿಗಿತ್ತೆಂಬುದು ನಿಶ್ಚಯ. ಆದಕಾರಣವೇ, ದೇವರ ಹೆಸರನ್ನು ಉಪಯೋಗಿಸಬಾರದೆಂದು ಆಗ ಯೆಹೂದಿ ಮೂಢನಂಬಿಕೆಯಿದ್ದರೂ ಮತ್ತಾಯನು ಆ ಹೆಸರನ್ನು ಬಳಸದೇ ಇರಲಿಲ್ಲ.—ಮತ್ತಾ. 6:9; ಯೋಹಾ. 17:6, 26.
8 ಮತ್ತಾಯನು ತೆರಿಗೆ ವಸೂಲಿಗಾರನಾಗಿದ್ದುದರಿಂದ, ಹಣ, ಸಂಖ್ಯೆ ಮತ್ತು ಮೌಲ್ಯಗಳ ವಿಷಯದಲ್ಲಿ ಸ್ಪಷ್ಟ ನುಡಿಯವನಾಗಿದ್ದದ್ದು ಸ್ವಾಭಾವಿಕ. (ಮತ್ತಾ. 17:27; 26:15; 27:3) ಯೆಹೂದ್ಯರು ಉಪೇಕ್ಷಿಸುತ್ತಿದ್ದ ತೆರಿಗೆ ವಸೂಲಿಗಾರನಾದ ತನ್ನನ್ನು ಸುವಾರ್ತೆಯ ಶುಶ್ರೂಷಕನೂ ಯೇಸುವಿನ ನಿಕಟ ಒಡನಾಡಿಯೂ ಆಗಲು ಅನುಮತಿಸಿದ್ದ ದೇವರ ಕರುಣೆಯನ್ನು ಅವನು ಬಹಳಷ್ಟು ಗಣ್ಯಮಾಡಿದನು. ಆದಕಾರಣ, ಯಜ್ಞಕ್ಕೆ ಕೂಡಿಸಿ ಕರುಣೆಯೂ ಬೇಕೆಂದು ಯೇಸು ಪದೇಪದೇ ಹೇಳಿದ ಮಾತುಗಳನ್ನು ಸುವಾರ್ತಾ ಲೇಖಕರಲ್ಲಿ ಮತ್ತಾಯನು ಮಾತ್ರ ಏಕೆ ಹೇಳುತ್ತಾನೆಂದು ನಮಗೆ ತಿಳಿಯುತ್ತದೆ. (9:9-13; 12:7; 18:21-35) ಯೆಹೋವನ ಅಪಾರ ದಯೆಯಿಂದ ಮತ್ತಾಯನು ತುಂಬ ಪ್ರೋತ್ಸಾಹಿತನಾಗಿ ಸೂಕ್ತವಾಗಿಯೇ, ಯೇಸುವಿನ ಅತಿ ಸಾಂತ್ವನಕರವಾದ ಮಾತುಗಳಲ್ಲಿ ಕೆಲವನ್ನು ಬರೆದಿದ್ದಾನೆ: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.” (11:28-30) ಈ ಮಾಜಿ ತೆರಿಗೆ ವಸೂಲಿಗಾರನಿಗೆ ಈ ಮೃದು ಮಾತುಗಳು ಎಷ್ಟು ನವಚೈತನ್ಯವನ್ನು ಕೊಟ್ಟಿರಬೇಕು! ಏಕೆಂದರೆ ಅವನ ದೇಶವಾಸಿಗಳು ಅವನ ಬಗ್ಗೆ ಹೀನೈಸುವ ಮಾತುಗಳನ್ನು ಮಾತ್ರ ನುಡಿಯುತ್ತಿದ್ದರೆಂಬುದು ನಿಸ್ಸಂದೇಹ.
9 ಮತ್ತಾಯನು ವಿಶೇಷವಾಗಿ, ಯೇಸುವಿನ ಬೋಧನೆಯ ಮುಖ್ಯವಿಷಯವು “ಪರಲೋಕರಾಜ್ಯ” ಆಗಿತ್ತೆಂದು ಒತ್ತಿಹೇಳಿದನು. (4:17) ಅವನ ದೃಷ್ಟಿಯಲ್ಲಿ, ಯೇಸು ಸೌವಾರ್ತಿಕ-ರಾಜನಾಗಿದ್ದನು. ಅವನು “ರಾಜ್ಯ” ಎಂಬ ಪದವನ್ನು ಎಷ್ಟು ಬಾರಿ ಬಳಸಿದನೆಂದರೆ (50ಕ್ಕೂ ಹೆಚ್ಚು ಬಾರಿ) ಅವನ ಸುವಾರ್ತಾ ಪುಸ್ತಕವನ್ನು ರಾಜ್ಯ ಸುವಾರ್ತಾ ಪುಸ್ತಕ ಎಂದೇ ಕರೆಯಬಹುದು. ಯೇಸುವಿನ ಸಾರ್ವಜನಿಕ ಭಾಷಣಗಳನ್ನು ಮತ್ತು ಉಪದೇಶಗಳನ್ನು ಕಾಲಕ್ರಮಾನುಸಾರ ಕೊಡುವ ಬದಲಿಗೆ ಅದನ್ನು ತರ್ಕಬದ್ಧ ರೀತಿಯಲ್ಲಿ ಕೊಡುವುದರಲ್ಲಿ ಮತ್ತಾಯನು ಹೆಚ್ಚು ಆಸಕ್ತನಾಗಿದ್ದನು. ರಾಜ್ಯವೆಂಬ ಮುಖ್ಯ ವಿಷಯವನ್ನು ಎತ್ತಿಹೇಳುವುದರಲ್ಲಿ ಮತ್ತಾಯನಿಗಿದ್ದ ಆಸಕ್ತಿಯು, ಅವನು ಪ್ರಥಮದ 18 ಅಧ್ಯಾಯಗಳಲ್ಲಿ ಘಟನೆಗಳ ಕಾಲಾನುಕ್ರಮ ಜೋಡಣೆಯನ್ನು ಬಿಟ್ಟುಬಿಡುವಂತೆ ನಡೆಸಿತು. ಆದರೂ, ಕೊನೆಯ ಹತ್ತು ಅಧ್ಯಾಯಗಳಲ್ಲಿ (19ರಿಂದ 28) ಅವನು ಸಾಮಾನ್ಯವಾಗಿ ಕಾಲಾನುಕ್ರಮವಾಗಿ ನಡೆದ ಸಂಗತಿಗಳನ್ನು ಹಾಗೂ ರಾಜ್ಯವನ್ನು ಒತ್ತಿಹೇಳುತ್ತ ಹೋಗುತ್ತಾನೆ.
10 ಮತ್ತಾಯನ ಸುವಾರ್ತೆ ವೃತ್ತಾಂತದ ನಲ್ವತ್ತೆರಡು ಪ್ರತಿಶತ ಭಾಗವು ಉಳಿದ ಮೂರು ಸುವಾರ್ತಾ ಪುಸ್ತಕಗಳಲ್ಲಿ ಕಂಡುಬರುವುದಿಲ್ಲ.c ಇದರಲ್ಲಿ ಕಡಮೆಪಕ್ಷ ಹತ್ತು ನೀತಿಕಥೆಗಳು ಇಲ್ಲವೆ ದೃಷ್ಟಾಂತಗಳು ಸೇರಿವೆ: ಹೊಲದ ಹಣಜಿಗಳು (13:24-30), ಹೂಳಿಟ್ಟ ದ್ರವ್ಯ (13:44), ಬೆಲೆಬಾಳುವ ಮುತ್ತು (13:45, 46), ಸೆಳೆಬಲೆ (13:47-50), ನಿಷ್ಕರುಣಿ ಸೇವಕ (18:23-25), ಆಳುಗಳು ಮತ್ತು ಪಾವಲಿಗಳು (20:1-16), ತಂದೆ ಮತ್ತು ಇಬ್ಬರು ಪುತ್ರರು (21:28-32), ಅರಸನ ಪುತ್ರನ ಮದುವೆ (22:1-14), ಹತ್ತು ಮಂದಿ ಕನ್ಯೆಯರು (25:1-13), ಮತ್ತು ತಲಾಂತುಗಳು (25:14-30). ಒಟ್ಟಿನಲ್ಲಿ, ಈ ಪುಸ್ತಕವು ಸಾ.ಶ.ಪೂ. 2ರಲ್ಲಿ ಸಂಭವಿಸಿದ ಯೇಸುವಿನ ಜನನದಿಂದ ಹಿಡಿದು, ಸಾ.ಶ. 33ರಲ್ಲಿ ಅವನ ಆರೋಹಣಕ್ಕೆ ತುಸು ಮುಂಚೆ ಶಿಷ್ಯರೊಂದಿಗೆ ಅವನ ಸಮಾಗಮದ ತನಕದ ವೃತ್ತಾಂತವನ್ನು ತಿಳಿಸುತ್ತದೆ.
ಪ್ರಯೋಜನಕರವೇಕೆ?
29 ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿ ಮೊದಲನೆಯದ್ದಾದ ಮತ್ತಾಯನ ಪುಸ್ತಕವು, ನಿಜವಾಗಿ ನಮಗೆ ಹೀಬ್ರು ಶಾಸ್ತ್ರದಿಂದ ಕ್ರೈಸ್ತ ಗ್ರೀಕ್ ಶಾಸ್ತ್ರಕ್ಕೆ ಒಂದು ಅತ್ಯುತ್ಕೃಷ್ಟ ಸೇತುವೆಯನ್ನು ಒದಗಿಸುತ್ತದೆ. ಅದು ನಿಸ್ಸಂದೇಹವಾಗಿ ದೇವರ ವಾಗ್ದತ್ತ ರಾಜ್ಯದ ಮೆಸ್ಸೀಯ ಮತ್ತು ಅರಸನನ್ನು ಗುರುತಿಸುತ್ತದೆ. ಅವನ ಹಿಂಬಾಲಕರಾಗಲು ಬೇಕಾಗಿರುವ ಆವಶ್ಯಕತೆಗಳನ್ನು ತಿಳಿಸುತ್ತದೆ. ಅವರಿಗೆ ಭೂಮಿಯ ಮೇಲೆ ಮಾಡಲಿರುವ ಕೆಲಸವನ್ನು ವಿಶದಪಡಿಸುತ್ತದೆ. ಪ್ರಥಮವಾಗಿ ಸ್ನಾನಿಕ ಯೋಹಾನ, ಬಳಿಕ ಯೇಸು ಮತ್ತು ಕೊನೆಗೆ ಅವನ ಶಿಷ್ಯರು “ಪರಲೋಕರಾಜ್ಯವು ಸಮೀಪಿಸಿತು” ಎಂದು ಸಾರುತ್ತ ಹೋದರು. ಅಲ್ಲದೆ, ಯೇಸುವಿನ ಆಜ್ಞೆಯು ಈ ವಿಷಯವ್ಯವಸ್ಥೆಯ ಸಮಾಪ್ತಿಯ ವರೆಗೂ ಚಾಚುತ್ತದೆ: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” ನಮ್ಮ ಯಜಮಾನನ ಮಾದರಿಯನ್ನು ಅನುಸರಿಸುತ್ತಾ ‘ಎಲ್ಲ ದೇಶಗಳವರನ್ನು ಶಿಷ್ಯರನ್ನಾಗಿ ಮಾಡುವ’ ಈ ರಾಜ್ಯಕಾರ್ಯದಲ್ಲಿ ಭಾಗವಹಿಸುವುದು ನಿಜವಾಗಿ, ಅಂದಿನಂತೆ ಇಂದೂ ಇರುವ ಮಹಾ ಮತ್ತು ಅದ್ಭುತಕರ ಸುಯೋಗವಾಗಿದೆ.—3:2; 4:17; 10:7; 24:14; 28:19.
30 ಮತ್ತಾಯನ ಸುವಾರ್ತಾ ಪುಸ್ತಕವು ನಿಶ್ಚಯವಾಗಿಯೂ “ಸುವಾರ್ತೆ” ಆಗಿದೆ. ನಮ್ಮ ಸಾಮಾನ್ಯ ಶಕದ ಪ್ರಥಮ ಶತಮಾನದಲ್ಲಿ ಆ ಪ್ರೇರಿತ ಸಂದೇಶಕ್ಕೆ ಕಿವಿಗೊಟ್ಟವರಿಗೆ ಅದು “ಸುವಾರ್ತೆ” ಆಗಿತ್ತು ಮತ್ತು ಇಂದಿನ ತನಕವೂ “ಸುವಾರ್ತೆ” ಆಗಿ ಉಳಿಯುವಂತೆ ಯೆಹೋವನು ಏರ್ಪಡಿಸಿದ್ದಾನೆ. ಈ ಸುವಾರ್ತೆಯ ಶಕ್ತಿಯನ್ನು ಕ್ರೈಸ್ತೇತರರು ಸಹ ಒಪ್ಪಿಕೊಂಡಿದ್ದಾರೆ. ಉದಾಹರಣೆಗೆ, ಭಾರತದ ಹಿಂದೂ ನಾಯಕರಾದ ಮೋಹನ್ದಾಸ್ (ಮಹಾತ್ಮ) ಗಾಂಧಿಯವರು ಭಾರತದ ಮಾಜಿ ವೈಸರಾಯ್ ಲಾರ್ಡ್ ಇರ್ವಿನ್ರಿಗೆ ಹೀಗೆ ಹೇಳಿದರೆಂದು ವರದಿಯಾಗಿದೆ: “ಪರ್ವತ ಪ್ರಸಂಗದಲ್ಲಿ ಕ್ರಿಸ್ತನು ಕೊಟ್ಟ ಬೋಧನೆಗಳನ್ನು ನಿಮ್ಮ ಮತ್ತು ನನ್ನ ದೇಶವು ಪಾಲಿಸುವಲ್ಲಿ ನಮ್ಮ ದೇಶಗಳ ಸಮಸ್ಯೆಗಳನ್ನು ಮಾತ್ರವಲ್ಲ, ಇಡೀ ಜಗತ್ತಿನದ್ದನ್ನೇ ಪರಿಹರಿಸಿರುವೆವು.”d ಇನ್ನೊಂದು ಸಂದರ್ಭದಲ್ಲಿ ಗಾಂಧಿಯವರು ಹೇಳಿದ್ದು: “ಪರ್ವತ ಪ್ರಸಂಗದಲ್ಲಿ ನಿಮಗೆ ಕೊಡಲಾದ ಜ್ಞಾನದ ಬುಗ್ಗೆಯಿಂದ ಅವಶ್ಯವಾಗಿ ಕುಡಿಯಿರಿ . . . ಏಕೆಂದರೆ ಆ ಪ್ರಸಂಗದ ಬೋಧನೆಯು ನಮ್ಮಲ್ಲಿ ಪ್ರತಿಯೊಬ್ಬನಿಗೂ ಲಾಭದಾಯಕವಾಗಿದೆ.”e
31 ಆದರೂ, ಕ್ರೈಸ್ತರೆನಿಸಿಕೊಳ್ಳುವವರನ್ನು ಒಳಗೊಂಡಿರುವ ಇಡೀ ಜಗತ್ತಿನಲ್ಲಿ ಸಮಸ್ಯೆಗಳು ಮುಂದುವರಿಯುತ್ತಿವೆ. ಆದರೆ ಸತ್ಕ್ರೈಸ್ತರಾದ ಅಲ್ಪಸಂಖ್ಯಾತರು ಮಾತ್ರ ಪರ್ವತ ಪ್ರಸಂಗ ಮತ್ತು ಮತ್ತಾಯನ ಸುವಾರ್ತೆಯ ಇತರ ಸ್ವಸ್ಥ ಸಲಹೆಯನ್ನು ನಿಧಿಯಾಗಿ ಎಣಿಸಿ, ಅಧ್ಯಯನ ಮಾಡಿ, ಅನ್ವಯಿಸಿಕೊಂಡು, ಅಮೂಲ್ಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ನಿಜ ಸಂತೋಷವನ್ನು ಕಂಡುಕೊಳ್ಳುವ ವಿಷಯದಲ್ಲಿ ಯೇಸುವಿನ ಉತ್ತಮ ಬುದ್ಧಿವಾದಗಳನ್ನು ಹಾಗೂ ನೈತಿಕ ಬೋಧನೆಗಳು, ವಿವಾಹ, ಪ್ರೀತಿಗಿರುವ ಶಕ್ತಿ, ಅಂಗೀಕಾರಾರ್ಹ ಪ್ರಾರ್ಥನೆ, ಪ್ರಾಪಂಚಿಕ ಮೌಲ್ಯಗಳಿಗೆ ವಿರುದ್ಧವಾಗಿ ಆಧ್ಯಾತ್ಮಿಕ ಮೌಲ್ಯಗಳು, ರಾಜ್ಯವನ್ನು ಪ್ರಥಮವಾಗಿ ಹುಡುಕುವುದು, ಪವಿತ್ರ ವಿಷಯಗಳನ್ನು ಗೌರವಿಸುವುದು ಮತ್ತು ಎಚ್ಚರವಾಗಿದ್ದು ವಿಧೇಯರಾಗಿರುವುದು—ಈ ವಿಷಯಗಳನ್ನು ಪದೇ ಪದೇ ಅಧ್ಯಯನ ಮಾಡುವುದು ಪ್ರಯೋಜನಕರವಾಗಿದೆ. ಮತ್ತಾಯ 10ನೇ ಅಧ್ಯಾಯವು, “ಪರಲೋಕರಾಜ್ಯದ ಸುವಾರ್ತೆ”ಯನ್ನು ಸಾರುವ ಜವಾಬ್ದಾರಿಯನ್ನು ಹೊರುವವರಿಗೆ ಯೇಸು ಕೊಟ್ಟ ಸೇವಾ ಆದೇಶಗಳನ್ನು ಒದಗಿಸುತ್ತದೆ. ಯೇಸು ಕೊಟ್ಟ ಅನೇಕ ದೃಷ್ಟಾಂತಗಳಲ್ಲಿ, ‘ಕೇಳಲು ಕಿವಿಯುಳ್ಳ’ ಎಲ್ಲರಿಗೆ ಜೀವದಾಯಕ ಪಾಠಗಳಿವೆ. ಇದಲ್ಲದೆ, ಯೇಸು ‘ತನ್ನ ಸಾನ್ನಿಧ್ಯದ ಸೂಚನೆಯ’ ಬಗ್ಗೆ ಕೊಟ್ಟ ಸವಿವರವಾದ ಪ್ರವಾದನೆಯಲ್ಲದೆ ಬೇರೆ ಪ್ರವಾದನೆಗಳು ಸಹ ಭವಿಷ್ಯತ್ತಿಗೆ ಬಲವಾದ ನಿರೀಕ್ಷೆ ಮತ್ತು ಭರವಸೆಯನ್ನು ನಮಗೆ ಕೊಡುತ್ತವೆ.—5:1–7:29; 10:5-42; 13:1-58; 18:1–20:16; 21:28–22:40; 24:3–25:46.
32 ಮತ್ತಾಯನ ಸುವಾರ್ತಾ ಪುಸ್ತಕದಲ್ಲಿ ನೆರವೇರಿರುವ ಪ್ರವಾದನೆಗಳು ಸಮೃದ್ಧವಾಗಿವೆ. ಈ ನೆರವೇರಿಕೆಗಳನ್ನು ತೋರಿಸುವ ಉದ್ದೇಶದಿಂದಲೇ ಅವನು ಪ್ರೇರಿತ ಹೀಬ್ರು ಶಾಸ್ತ್ರಗಳಿಂದ ಅನೇಕ ವಚನಗಳನ್ನು ಉದ್ಧರಿಸಿದ್ದಾನೆ. ಯೇಸು ಮೆಸ್ಸೀಯನೆಂಬುದಕ್ಕೆ ಇವು ಅಲ್ಲಗಳೆಯಲಾಗದ ಪುರಾವೆಯನ್ನು ಒದಗಿಸುತ್ತವೆ, ಏಕೆಂದರೆ ಆ ಚಿಕ್ಕಪುಟ್ಟ ವಿವರಗಳನ್ನೆಲ್ಲ ಮುಂದಾಗಿ ಏರ್ಪಡಿಸಿ ಬರೆಯುವುದು ಅಸಾಧ್ಯ ಸಂಗತಿಯೇ ಸರಿ. ಉದಾಹರಣೆಗೆ, ಈ ವಚನಗಳನ್ನು ಹೋಲಿಸಿ ನೋಡಿ: ಮತ್ತಾಯ 13:14, 15 ಮತ್ತು ಯೆಶಾಯ 6:9, 10; ಮತ್ತಾಯ 21:42 ಮತ್ತು ಕೀರ್ತನೆ 118:22, 23; ಮತ್ತಾಯ 26:31, 56 ಮತ್ತು ಜೆಕರ್ಯ 13:7. ಇಂಥ ನೆರವೇರಿಕೆಗಳು ನಮಗೆ, ಮತ್ತಾಯನು ದಾಖಲೆ ಮಾಡಿರುವ ಮತ್ತು ಯೇಸು ತಾನೇ ಮುಂತಿಳಿಸಿದ ಇತರ ಎಲ್ಲ ಪ್ರವಾದನೆಗಳು, “ಪರಲೋಕರಾಜ್ಯದ” ಸಂಬಂಧದಲ್ಲಿ ಕೊಡಲಾಗಿರುವ ಯೆಹೋವನ ಮಹಿಮಾಭರಿತ ಉದ್ದೇಶಗಳು ಪೂರ್ಣಗೊಳ್ಳುವಾಗ ತಕ್ಕ ಸಮಯದಲ್ಲಿ ನಿಜವಾಗುವವು ಎಂಬುದಕ್ಕೆ ಬಲವಾದ ಆಶ್ವಾಸನೆ ಕೊಡುತ್ತವೆ.
33 ರಾಜ್ಯದ ಅರಸನ ಜೀವನವನ್ನು ಅತಿ ಕೂಲಂಕಷವಾಗಿ ಮುಂತಿಳಿಸುವುದರಲ್ಲಿ ದೇವರು ಎಷ್ಟು ನಿಷ್ಕೃಷ್ಟನಾಗಿದ್ದನು! ಪ್ರೇರಿತ ಮತ್ತಾಯನು ಈ ಪ್ರವಾದನೆಗಳ ನೆರವೇರಿಕೆಯನ್ನು ನಂಬಿಗಸ್ತಿಕೆಯಿಂದ ದಾಖಲೆ ಮಾಡುವುದರಲ್ಲಿ ಎಷ್ಟೊಂದು ನಿಖರವಾಗಿದ್ದನು! ನೀತಿಪ್ರಿಯರು ಮತ್ತಾಯನ ಪುಸ್ತಕದಲ್ಲಿ ದಾಖಲೆಯಾಗಿರುವ ಎಲ್ಲ ಪ್ರವಾದನೆಗಳ ನೆರವೇರಿಕೆಗಳನ್ನು ಮತ್ತು ವಾಗ್ದಾನಗಳನ್ನು ಯೋಚಿಸುವಾಗ, “ಪರಲೋಕರಾಜ್ಯವು” ಯೆಹೋವನು ತನ್ನ ನಾಮವನ್ನು ಪವಿತ್ರೀಕರಿಸುವ ಸಾಧನವಾಗಿದೆ ಎಂಬ ಜ್ಞಾನ ಮತ್ತು ನಿರೀಕ್ಷೆಯಲ್ಲಿ ನಿಶ್ಚಯವಾಗಿಯೂ ಅತ್ಯಾನಂದಪಡಬಲ್ಲರು. “ಹೊಸ ಸೃಷ್ಟಿ [“ಪುನರ್ಸೃಷ್ಟಿ,” NW]ಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವಾಗ,” ಯೇಸು ಕ್ರಿಸ್ತನ ಮೂಲಕ ಬರುವ ಈ ರಾಜ್ಯವೇ ಸೌಮ್ಯ ಜನರಿಗೂ ಆಧ್ಯಾತ್ಮಿಕ ಹಸಿವುಳ್ಳವರಿಗೂ ಜೀವ ಹಾಗೂ ಸಂತೋಷದ ಅಮಿತಾಶೀರ್ವಾದಗಳನ್ನು ತರುತ್ತದೆ. (ಮತ್ತಾ. 19:28) ಇವೆಲ್ಲವುಗಳು ಉತ್ತೇಜನದಾಯಕವಾದ, “ಮತ್ತಾಯನು ಬರೆದ ಸುವಾರ್ತೆ”ಯಲ್ಲಿ ಅಡಕವಾಗಿವೆ.
[ಪಾದಟಿಪ್ಪಣಿಗಳು]
a 1981ರ ಪುನರ್ಮುದ್ರಣ, ಸಂ. V, ಪುಟ 895.
b ದಿ ಇಕ್ಲೀಸಿಆ್ಯಸ್ಟಿಕಲ್ ಹಿಸ್ಟರಿ, VI, XXV, 3-6.
c ಸುವಾರ್ತಾ ಪುಸ್ತಕಗಳ ಅಧ್ಯಯನಕ್ಕೆ ಪೀಠಿಕೆ (ಇಂಗ್ಲಿಷ್), 1896, ಬಿ. ಎಫ್. ವೆಸ್ಟ್ಕಾಟ್, ಪುಟ 201.
d ಕ್ರೈಸ್ತ ನಂಬಿಕೆಯ ನಿಧಿ (ಇಂಗ್ಲಿಷ್), 1949, ಎಸ್. ಐ. ಸ್ಟೂಬರ್ ಮತ್ತು ಟಿ.ಸಿ. ಕ್ಲಾರ್ಕ್ ಇವರ ಸಂಪಾದಕತ್ವದಲ್ಲಿ, ಪುಟ 43.
e ಮಹಾತ್ಮ ಗಾಂಧಿಯವರ ವಿಚಾರಗಳು, (ಇಂಗ್ಲಿಷ್) 1930, ಸಿ. ಎಫ್. ಆ್ಯಂಡ್ರೂಸ್ ಅವರಿಂದ, ಪುಟ 96.