‘ನಂಬಿಗಸ್ತ ಆಳು’ ಮತ್ತು ಅದರ ಆಡಳಿತ ಮಂಡಲಿ
“ಯಜಮಾನನು ತನ್ನ ಮನೆಯವರಿಗೆ ಹೊತ್ತು ಹೊತ್ತಿಗೆ ಆಹಾರ ಕೊಡಲಿಕ್ಕೆ ಅವರ ಮೇಲಿಟ್ಟ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಯಾರು?”—ಮತ್ತಾಯ 24:45.
1. ಯೆಹೋವನು ಅಧಿಕಾರ ವಹಿಸಿಕೊಡಲು ಏಕೆ ಇಷ್ಟಪಡುತ್ತಾನೆ, ಮತ್ತು ಮುಖ್ಯವಾಗಿ ಅವನು ಇದನ್ನು ಯಾರಿಗೆ ವಹಿಸಿಕೊಟ್ಟಿದ್ದಾನೆ?
ಯೆಹೋವನು ವ್ಯವಸ್ಥೆಯ ದೇವರು. ಆತನು ನ್ಯಾಯ ಸಮ್ಮತ ಅಧಿಕಾರಕ್ಕೆ ಮೂಲನೂ ಆಗಿದ್ದಾನೆ. ತನ್ನ ನಂಬಿಗಸ್ತ ಜೀವಿಗಳ ಕರ್ತವ್ಯ ನಿಷ್ಟೆಯಲ್ಲಿ ಭರವಸೆಯುಳ್ಳವನಾಗಿ ಆತನು ಈ ಅಧಿಕಾರವನ್ನು ಅವರಿಗೆ ವಹಿಸಲು ಇಷ್ಟ ಪಡುತ್ತಾನೆ. ಆತನು ಅತ್ಯಂತ ಹೆಚ್ಚು ಅಧಿಕಾರವನ್ನು ಕೊಟ್ಟಿರುವುದು ತನ್ನ ಪುತ್ರನಾದ ಯೇಸು ಕ್ರಿಸ್ತನಿಗೆ. ಹೌದು, ದೇವರು “ಸಮಸ್ತವನ್ನೂ ಕ್ರಿಸ್ತನ ಪಾದಗಳ ಕೆಳಗೆ ಹಾಕಿದನು. ಅದಲ್ಲದೆ ಆತನನ್ನು ಎಲ್ಲಾದರ ಮೇಲೆ ಇರಿಸಿ ಸಭೆಗೆ ಶಿರಸ್ಸಾಗಿ ನೇಮಿಸಿದನು.”—ಎಫೆಸ 1:22.
2. ಕ್ರೈಸ್ತ ಸಭೆಯನ್ನು ಪೌಲನು ಏನೆಂದು ಕರೆದನು, ಮತ್ತು ಕ್ರಿಸ್ತನು ಯಾರಿಗೆ ಅಧಿಕಾರ ವಹಿಸಿಕೊಟ್ಟಿದ್ದಾನೆ?
2. ಅಪೊಸ್ತಲ ಪೌಲನು ಕ್ರೈಸ್ತ ಸಭೆಯನ್ನು “ದೇವರ ಮನೆ” ಎಂದು ಕರೆದು ಯೆಹೋವನ ನಂಬಿಗಸ್ತ ಕುಮಾರನಾದ ಯೇಸು ಕ್ರಿಸ್ತನು ಈ ಮನೆವಾರ್ತೆಯ ತಲೆ ಎಂದು ಹೇಳುತ್ತಾನೆ. (1 ತಿಮೊಥಿ 3:15; ಇಬ್ರಿಯ 3:6) ಸರದಿಯಾಗಿ, ಕ್ರಿಸ್ತ ಯೇಸು ದೇವರ ಕುಟುಂಬದ ಸದಸ್ಯರಿಗೆ ಅಧಿಕಾರ ವಹಿಸಿ ಕೊಡುತ್ತಾನೆ. ಇದನ್ನು ನಾವು ಮತ್ತಾಯ 24:45-47 ರಲ್ಲಿ ಯೇಸು ಹೇಳಿರುವ ಮಾತುಗಳಿಂದ ನೋಡುತ್ತೇವೆ. ಅವನಂದದ್ದು: “ಯಜಮಾನನು ತನ್ನ ಮನೆಯವರಿಗೆ ಹೊತ್ತು ಹೊತ್ತಿಗೆ ಆಹಾರ ಕೊಡಲಿಕ್ಕೆ ಅವರ ಮೇಲಿಟ್ಟ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಯಾರು? ಯಜಮಾನನು ಬಂದು ಯಾವ ಆಳು ಹೀಗೆ ಮಾಡುವದನ್ನು ಕಾಣುವನೋ ಆ ಅಳು ಧನ್ಯನು. ಅಂಥವನನ್ನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನು.”
ಒಂದನೆಯ ಶತಮಾನದ ಗೃಹವ್ಯವಸ್ಥಾಪಕ
3. “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ”ನಲ್ಲಿ ಯಾರಿದ್ದಾರೆ, ಮತ್ತು ವ್ಯಕ್ತಿಗತವಾಗಿ ಅವರಿಗೆ ಯಾವ ಪದಪ್ರಯೋಗ ಮಾಡಲ್ಪಟ್ಟಿದೆ?
3. ಶಾಸ್ತ್ರ ಗ್ರಂಥಗಳ ನಮ್ಮ ಜಾಗರೂಕತೆಯ ಅಭ್ಯಾಸದಿಂದ, ದೇವರ ಕುಟುಂಬದ ಆತ್ಮ ಅಭಿಷಿಕ್ತ ಸದಸ್ಯರು ಒಟ್ಟಾಗಿ ಯಾವುದಾದರೂ ಒಂದು ನಿರ್ದಿಷ್ಟ ಸಮಯದಲ್ಲಿ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಅಥವಾ “ಮನೆವಾರ್ತೆಯವನು” ಅಥವಾ “ಗೃಹ ವ್ಯವಸ್ಥಾಪಕನು” ಆಗುತ್ತಾರೆಂದು ನಮಗೆ ತಿಳಿದದೆ. ಯೆಹೋವನ ಕುಟುಂಬದ ಈ ಸದಸ್ಯರು, ವ್ಯಕ್ತಿಗತವಾಗಿ “ಮನೆಯವರು” ಅಥವಾ “ಸೇವಕ ಸಮುದಾಯ” (NW) ಎಂದು ಕರೆಯಲ್ಪಡುತ್ತಾರೆ.—ಮತ್ತಾಯ 24:45; ಲೂಕ 12:42; ರೆಫರೆನ್ಸ್ ಬೈಬಲ್ ಫುಟ್ನೋಟ್.
4. ಮರಣಕ್ಕೆ ತುಸು ಮೊದಲು ಯೇಸು ಯಾವ ಪ್ರಶ್ನೆಯನ್ನೆತ್ತಿದನು, ಮತ್ತು ತನ್ನನ್ನು ಯಾರಿಗೆ ಹೋಲಿಸಿದನು?
4. ತನ್ನ ಮರಣಕ್ಕೆ ಕೆಲವು ತಿಂಗಳು ಮೊದಲು ಯೇಸು, ಲೂಕ 12:42 ರಲ್ಲಿ ದಾಖಲೆಯಾಗಿರುವ ಈ ಪ್ರಶ್ನೆಯನ್ನೆಬ್ಬಿಸಿದನು: “ಹೊತ್ತುಹೊತ್ತಿಗೆ ಅಶನಕ್ಕೆ ಬೇಕಾದದ್ದನ್ನು ಆಳೆದುಕೊಡುವದಕ್ಕಾಗಿ ಯಜಮಾನನು ತನ್ನ ಮನೆಯವರ ಮೇಲೆ ನೇಮಿಸಿದ ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೆವಾರ್ತೆಯವನು ಯಾರು?” ಮತ್ತು ಸಾಯುವದಕ್ಕೆ ಕೆಲವೇ ದಿನ ಮುಂಚಿತವಾಗಿ ಯೇಸು ತನ್ನನ್ನು ದೇಶಾಂತರಕ್ಕೆ ಪಯಣ ಬೆಳೆಸಲಿಕ್ಕಿದ್ದ ಮತ್ತು ತನ್ನ ಆಳುಗಳನ್ನು ಕರೆದು ತನ್ನ ಆಸ್ತಿಯನ್ನು ಅವರಿಗೆ ವಹಿಸಿದ ಒಬ್ಬ ಮನುಷ್ಯನಿಗೆ ಹೋಲಿಸಿದನು.—ಮತ್ತಾಯ 25:14.
5. (ಎ)ತನ್ನ ಸೊತ್ತುಗಳನ್ನು ನೋಡಿಕೊಳ್ಳಲು ಯೇಸು ಇತರರನ್ನು ಯಾವಾಗ ನೇಮಿಸಿದನು? (ಬಿ) ಅವನ ಸಂಘಟಿತ ಗೃಹ ವ್ಯವಸ್ಥಾಪಕನ ಭಾಗವಾಗಲಿದ್ದವರಿಗೆ ಕ್ರಿಸ್ತನು ಯಾವ ವ್ಯಾಪಕವಾದ ನೇಮಕವನ್ನು ಕೊಟ್ಟನು?
5. ತನ್ನ ಆಸ್ತಿಯನ್ನು ನೋಡಿಕೊಳ್ಳಲು ಯೇಸು ಯಾವಾಗ ಇತರರನ್ನು ನೇಮಿಸಿದನು? ಅವನು ಪುನರುತ್ಥಾನವಾದ ಬಳಿಕ ಇದು ನಡೆಯಿತು. ಮತ್ತಾಯ 28:19, 20 ರ ಅವನ ಪರಿಚಿತ ಮಾತುಗಳಲ್ಲಿ ಕ್ರಿಸ್ತನು ತನ್ನ ಸಂಘಟಿತ ವ್ಯವಸ್ಥಾಪಕನ ಭಾಗವಾಗಲಿದ್ದವರಿಗೆ ಮೊದಲು ಕಲಿಸುವ ಮತ್ತು ಶಿಷ್ಯರಾಗಿ ಮಾಡುವ ವ್ಯಾಪಕವಾದ ನೇಮಕವನ್ನು ಮಾಡಿದನು. “ಭೂಲೋಕದ ಕಟ್ಟಕಡೆಯ ವರೆಗೂ” ವೈಯಕ್ತಿಕವಾಗಿ ಸಾಕ್ಷಿನೀಡುತ್ತಾ ಆ ಸೇವಕರು, ಯೇಸು ತನ್ನ ಭೂಶುಶ್ರೂಷೆಯ ಕಾಲದಲ್ಲಿ ಸಾಗುವಳಿ ಮಾಡಲಾರಂಭಿಸಿದ ಮಿಶನೆರಿ ಕ್ಷೇತ್ರವನ್ನು ವಿಸ್ತರಿಸಲಿದ್ದರು. (ಅಪೊಸ್ತಲರ ಕೃತ್ಯ 1:8) ಇದರಲ್ಲಿ, ಅವರು “ಕ್ರಿಸ್ತನ ರಾಯಭಾರಿ”ಗಳಾಗಿ ವರ್ತಿಸುವುದು ಸೇರಿತ್ತು. “ದೇವರು ತಿಳಿಸಿರುವ ಸತ್ಯಾರ್ಥಗಳ ವಿಷಯದಲ್ಲಿ ಮನೆವಾರ್ತೆಯವರಾದ” ಅವರು ಶಿಷ್ಯರನ್ನಾಗಿ ಮಾಡಿ ಅವರಿಗೆ ಆತ್ಮಿಕ ಆಹಾರವನ್ನು ಹಂಚುವರು.—2 ಕೊರಿಂಥ 5:20; 1 ಕೊರಿಂಥ 4:1, 2.
ಮನೆವಾರ್ತೆಯವರ ಆಡಳಿತ ಮಂಡಲಿ
6. ಪ್ರಥಮ ಶತಕದ ಮನೆವಾರ್ತೆಗಾರ ವರ್ಗವು ಯಾವುದನ್ನು ಒದಗಿಸುವಂತೆ ದೈವಿಕವಾಗಿ ಪ್ರೇರಿಸಲ್ಪಟ್ಟಿತು?
6. ಆತ್ಮಾಭಿಷಿಕ್ತ ಕ್ರೈಸ್ತರು ಸಾಮೂಹಿಕವಾಗಿ, ಸಮಯೋಚಿತವಾದ ಆತ್ಮಿಕ ಆಹಾರವನ್ನು ದೇವರ ಕುಟುಂಬದ ವೈಯಕ್ತಿಕ ಸದಸ್ಯರಿಗೆ ನೀಡಲು ನೇಮಿಸಲ್ಪಡುವ, ಯಜಮಾನನ ಮನೆವಾರ್ತೆಯವರಾಗ ಬೇಕಿತ್ತು. ಸಾ.ಶ. 41 ಮತ್ತು ಸಾ.ಶ. 98 ರ ವರ್ಷಗಳ ಮಧ್ಯೆ, ಒಂದನೆಯ ಶತಕದ ಮನೆವಾರ್ತೆಗಾರ ವರ್ಗದ ಸದಸ್ಯರು ತಮ್ಮ ಸದಸ್ಯರ ಪ್ರಯೋಜನಾರ್ಥವಾಗಿ 5 ಐತಿಹಾಸಿಕ ವೃತ್ತಾಂತಗಳು, 21 ಪತ್ರಗಳು ಮತ್ತು ಪ್ರಕಟನೆ ಪುಸ್ತಕವನ್ನು ಬರೆಯುವಂತೆ ಪ್ರೇರಿಸಲ್ಪಟ್ಟರು. ಈ ಪ್ರೇರಿತ ಬರಹಗಳಲ್ಲಿ ಮನೆಯಾಳುಗಳಿಗೆ ಅಂದರೆ ದೇವರ ಕುಟುಂಬದ ವೈಯಕ್ತಿಕ ಅಭಿಷಿಕ್ತರಿಗೆ ಅತ್ಯುತ್ತಮವಾದ ಆತ್ಮಿಕ ಆಹಾರವಿತ್ತು.
7.ಈ ಆಳುವರ್ಗದಿಂದ ಪುರುಷರ ಚಿಕ್ಕ ಸಂಖ್ಯೆಯನ್ನು ಕ್ರಿಸ್ತನು ಯಾವ ಉದ್ದೇಶಕ್ಕಾಗಿ ಆಯ್ದುಕೊಂಡನು?
7. ಎಲ್ಲಾ ಅಭಿಷೇಕಿತ ಕ್ರೈಸ್ತರು ಸಾಮೂಹಿಕವಾಗಿ ದೇವರ ಕುಟುಂಬವಾಗುತ್ತಾರೆ, ಆದರೂ ಕ್ರಿಸ್ತನು ಆ ಅಳು ವರ್ಗದಲ್ಲಿ ಪುರುಷರ ಚಿಕ್ಕ ಸಂಖ್ಯೆಯೊಂದನ್ನು ದೃಶ್ಯ ಆಡಳಿತ ಮಂಡಲಿಯು ಆಗುವಂತೆ ಆದುಕೊಂಡನು ಎಂಬದಕ್ಕೆ ಧಾರಾಳ ನಿದರ್ಶನವು ಇದೆ. ಸಭೆಯ ಆದಿ ಇತಿಹಾಸವು ಮತ್ತೀಯನನ್ನು ಒಳಗೊಂಡ ಒಂದನೆ ಶತಮಾನದ ಆಡಳಿತ ಮಂಡಲಿಯ ಅಸ್ತಿವಾರವಾಗಿದ್ದರೆಂದು ತೋರಿಸುತ್ತದೆ. ಅಪೊಸ್ತಲರ ಕೃತ್ಯ 1:20-26 ಈ ಸೂಚನೆಯನ್ನು ನಮಗೆ ಒದಗಿಸುತ್ತದೆ. ಇಸ್ಕಾರಿಯೋತ ಯೂದನ ಸ್ಥಾನ ಭರ್ತಿಯ ಸಂಬಂಧದಲ್ಲಿ “ಅವನ ಉದ್ಯೋಗ” ಮತ್ತು “ಅಪೊಸ್ತಲತನವೆಂಬ ಈ ಸೇವಾ ಸ್ಥಾನ” ದ ಕುರಿತಾಗಿ ಅಲ್ಲಿ ಹೇಳಲಾಗಿದೆ.
8. ಒಂದನೆಯ ಶತಮಾನದ ಆಡಳಿತ ಮಂಡಲಿಯ ಜವಾಬ್ದಾರಿಕೆಗಳಲ್ಲಿ ಯಾವುದು ಸೇರಿತ್ತು?
8. ಇಂಥ ಮೇಲ್ವಿಚಾರಣೆಯಲ್ಲಿ ಸೇವಾ ಸ್ಥಾನಕ್ಕೆ ಅರ್ಹರಾದ ಪುರುಷರನ್ನು ನೇಮಿಸಲು ಮತ್ತು ಸುವಾರ್ತಾ ಸೇವೆಯನ್ನು ವ್ಯವಸ್ಥಾಪಿಸಲು ಅಪೊಸ್ತಲರಿಗೆ ಇದ್ದ ಜವಾಬ್ದಾರಿಕೆ ಸೇರಿತ್ತು. ಆದರೆ ಇದಕ್ಕೂ ಹೆಚ್ಚಿನದು ಅದರಲ್ಲಿ ಸೇರಿತ್ತು. ಕಲಿಸುವಿಕೆ ಮತ್ತು ತತ್ವ ವಿಷಯಗಳ ಸ್ಪಷ್ಟೀಕರಣವೂ ಇದರಲ್ಲಿತ್ತು. ಯೋಹಾನ 16:13 ರ ಯೇಸುವಿನ ವಾಗ್ದಾನವನ್ನು ನೆರವೇರಿಸುತ್ತಾ “ಸತ್ಯದ ಆತ್ಮ” ಎಲ್ಲಾ ಸತ್ಯದೊಳಗೆ ಕ್ರೈಸ್ತ ಸಭೆಯನ್ನು ಪ್ರಗತಿಪರವಾಗಿ ನಡಿಸಬೇಕಿತ್ತು. ಆರಂಭದಿಂದಲೇ, ವಾಕ್ಯವನ್ನು ಅಂಗೀಕರಿಸಿ ದೀಕ್ಷಾಸ್ನಾನ ಹೊಂದಿದ ಅಭಿಷಿಕ್ತ ಕ್ರೈಸ್ತರು “ಅಪೊಸ್ತಲರ ಬೋಧನೆಯನ್ನು ಕೇಳುವುದರಲ್ಲಿ ನಿರತರಾಗಿದ್ದರು. ವಾಸ್ತವವೇನಂದರೆ, ಐಹಿಕ ಆಹಾರ ವಿತರಣೆಯ ಅವಶ್ಯ ಕೆಲಸಕ್ಕಾಗಿ ಏಳು ಮಂದಿ ಪುರುಷರನ್ನು ಶಿಫಾರಸು ಮಾಡಿದ ಕಾರಣವು ಈ “ಹನ್ನೆರಡು ಮಂದಿ” ‘ಪ್ರಾರ್ಥನೆ ಮತ್ತು ವಾಕ್ಯೋಪದೇಶದಲ್ಲಿ’ ನಿರತರಾಗುವುದಕ್ಕಾಗಿತ್ತು.—ಅಪೊಸ್ತಲರ ಕೃತ್ಯ 2:42; 6:1-6.
9. ಆದಿ ಆಡಳಿತ ಮಂಡಲಿ 11 ಸದಸ್ಯರಿಗೆ ಇಳಿದದ್ದು ಹೇಗೆ, ಆದರೆ ಒಡನೆ ಅದನ್ನು 12ಕ್ಕೆ ಏಕೆ ಏರಿಸಲಿಲ್ಲವೆಂದು ವ್ಯಕ್ತವಾಗುತ್ತದೆ?
9. ಆರಂಭದಲ್ಲಿ, ಈ ಮೇಲ್ವಿಚಾರಕರಲ್ಲಿ ಕೇವಲ ಯೇಸುವಿನ ಅಪೊಸ್ತಲರಿದ್ದರೆಂದು ಕಾಣುತ್ತದೆ. ಆದರೆ ಅದು ಯಾವಾಗಲೂ ಹಾಗೆಯೇ ಇರುವದೋ? ಸುಮಾರು ಸಾ.ಶ. 44 ರಲ್ಲಿ ಯೋಹಾನನ ಸಹೋದರ ಯಾಕೋಬನನ್ನು 1ನೇ ಹೆರೋದ ಅಗ್ರಿಪ್ಪನು ಮರಣ ದಂಡನೆಗೆ ಒಳಪಡಿಸಿದನು. (ಅಪೊಸ್ತಲರ ಕೃತ್ಯ 12:1, 2) ಆದರೆ ಆಗ, ಯೂದನ ವಿಷಯ ಮಾಡಿದಂತೆ, ಯಾಕೋಬನ ಸ್ಥಾನವನ್ನು ಭರ್ತಿಮಾಡುವ ಯಾವ ಪ್ರಯತ್ನವೂ ನಡಿಯಲಿಲ್ಲ. ಇದೇಕೆ? ಏಕೆಂದರೆ, 12 ಜನ ಅಪೊಸ್ತಲರಲ್ಲಿ ಮೊದಲನೆಯದಾಗಿ ಸತ್ತ ಯಾಕೋಬನು ನಂಬಿಗಸ್ತನಾಗಿ ಸತ್ತದರ್ದಿಂದಲೇ ಎಂಬದು ನಿಶ್ಚಯ. ಆದರೆ ಯೂದನು ದುಷ್ಟ ಪರಿತ್ಯಾಗಿಯಾಗಿದ್ದನು ಮತ್ತು ಆತ್ಮಿಕ ಇಸ್ರಾಯೇಲಿನ ಅಸ್ತಿವಾರದ ಕಲ್ಲುಗಳ ಸಂಖ್ಯೆಯನ್ನು 12ಕ್ಕೆ ಭರ್ತಿಮಾಡಲು ಇನ್ನೊಬ್ಬನ ಅಗತ್ಯವಿತ್ತು.—ಎಫೆಸ 2:20; ಪ್ರಕಟನೆ 21:14.
10. ಪ್ರಥಮ ಶತಮಾನದ ಆಡಳಿತ ಮಂಡಲಿಯನ್ನು ಯಾವಾಗ ಮತ್ತು ಹೇಗೆ ವಿಕಸಿಸಲಾಯಿತು, ಮತ್ತು ದೇವರ ಕುಟುಂಬವನ್ನು ನಡಿಸಲು ಕ್ರಿಸ್ತನು ಅದನ್ನು ಹೇಗೆ ಉಪಯೋಗಿಸಿದನು?
10. ಪ್ರಥಮ ಶತಮಾನದ ಆಡಳಿತ ಮಂಡಲಿಯ ಪ್ರಥಮ ಸದಸ್ಯರು ಅಪೊಸ್ತಲರಾಗಿದ್ದರು, ಯೇಸುವಿನೊಂದಿಗೆ ನಡೆದಾಡಿ, ಅವನ ಮರಣ, ಪುನರುತ್ಥಾನಗಳಿಗೆ ಸಾಕ್ಷಿಗಳಾಗಿದ್ದ ಪುರುಷರಾಗಿದ್ದರು. (ಅಪೊಸ್ತಲರ ಕೃತ್ಯ 1:21, 22) ಆದರೆ ಇದು ಬದಲಾವಣೆ ಹೊಂದಲಿಕ್ಕಿತ್ತು. ವರ್ಷಗಳು ಕಳೆದಂತೆ, ಇತರ ಕ್ರೈಸ್ತ ಪುರುಷರು ಆತ್ಮಿಕೋನ್ನತಿ ಹೊಂದಿ, ಯೆರೂಸಲೇಮ್ ಸಭೆಯಲ್ಲಿ ಹಿರಿಯರಾಗಿ ನೇಮಕ ಹೊಂದಿದರು. ಸುಮಾರು ಸಾ.ಶ. 49 ನೇ ವರ್ಷದೊಳಗಾದರೂ ಉಳಿದಿದ್ದ ಅಪೊಸ್ತಲರನ್ನು ಮಾತ್ರವಲ್ಲ ಯೆರೂಸಲೇಮಿನ ಅನೇಕ ಹಿರೀ ಪುರುಷರನ್ನು ಸೇರಿಸಿ ಈ ಆಡಳಿತ ಮಂಡಲಿಯನ್ನು ವಿಸ್ತರಿಸಲಾಗಿತ್ತು. (ಅಪೊಸ್ತಲರ ಕೃತ್ಯ 15:2) ಹೀಗೆ, ಆಡಳಿತ ಮಂಡಲಿಯ ಸಂಖ್ಯಾರಚನೆ ಕಟ್ಟುನಿಟ್ಟಿನದ್ದಾಗಿರಲಿಲ್ಲ. ಅದು ದೇವಜನರ ಪರಿಸ್ಥಿತಿಗಳಿಗೆ ಹೊಂದಿಕೊಂಡು ಮಾರ್ಪಡುವಂತೆ ದೇವರು ನಡಿಸಿದನೆಂದು ವ್ಯಕ್ತವಾಗುತ್ತದೆ. ಸಭೆಯ ಕ್ರಿಯಾಶೀಲ ಶಿರಸ್ಸಾದ ಕ್ರಿಸ್ತನು, ಈ ವಿಕಸಿತ ಆಡಳಿತ ಮಂಡಲಿಯನ್ನು ಅದು, ಯೆಹೂದ್ಯೇತರ ಕ್ರೈಸ್ತ ಸುನ್ನತಿ ಮತ್ತು ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನತೆ ಎಂಬ ಪ್ರಾಮುಖ್ಯ ಬೋಧನೆಯನ್ನು ತೀರ್ಮಾನಿಸುವಂತೆ ಉಪಯೋಗಿಸಿದನು. ಈ ಆಡಳಿತ ಮಂಡಲಿಯು ತನ್ನ ತೀರ್ಮಾನವನ್ನು ವಿವರಿಸುವ ಪತ್ರ ಬರೆದು ಹೇಗೆ ನಡೆದುಕೊಳ್ಳಬೇಕೆಂಬ ಅಪ್ಪಣೆಗಳನ್ನು ವಿಧಿಸಿತು.—ಅಪೊಸ್ತಲರ ಕೃತ್ಯ 15:23-29.
ಗೃಹ ವ್ಯವಸ್ಥಾಪಕನು ಲೆಕ್ಕವೊಪ್ಪಿಸಬೇಕಾದ ಸಮಯ
11. ಆಡಳಿತ ಮಂಡಲಿಯ ಸ್ಥಿರ ನಾಯಕತ್ವವನ್ನು ಸಹೋದರರು ಗಣ್ಯ ಮಾಡಿದರೋ, ಮತ್ತು ಯೆಹೋವನು ಈ ಏರ್ಪಾಡನ್ನು ಆಶೀರ್ವದಿಸಿದನು ಎಂದು ಯಾವುದು ತೋರಿಸುತ್ತದೆ?
11. ಆದಿ ಕ್ರೈಸ್ತರು, ವೈಯಕ್ತಿಕವಾಗಿ ಮತ್ತು ಸಭೆಯಾಗಿ, ಈ ಆಡಳಿತ ಮಂಡಲಿಯ ಶಕ್ತಿಯುತವಾದ ನಾಯಕತ್ವವನ್ನು ಗಣ್ಯ ಮಾಡಿದರು. ಸಿರಿಯನ್ ಅಂತಿಯೋಕ್ಯದ ಸಭೆ ಆಡಳಿತ ಮಂಡಲಿಯಿಂದ ಬಂದ ಪತ್ರವನ್ನು ಓದಿದಾಗ ಕೊಡಲ್ಪಟ್ಟ ಪ್ರೋತ್ಸಾಹದಲ್ಲಿ ಆನಂದಿಸಿದರು. ಇತರ ಸಭೆಗಳು ಈ ಸಮಾಚಾರವನ್ನು ಅಂಗೀಕರಿಸಿ ಅಪ್ಪಣೆಗಳನ್ನು ಆಚರಣೆಗೆ ತಂದಾಗ, “ಸಭೆಗಳು ಕ್ರಿಸ್ತ ನಂಬಿಕೆಯಲ್ಲಿ ದೃಢವಾಗುತ್ತಾ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ ಬಂದವು.” (ಅಪೊಸ್ತಲರ ಕೃತ್ಯ 16:5) ದೇವರು ಈ ಏರ್ಪಾಡನ್ನು ಆಶೀರ್ವದಿಸಿದನೆಂಬದು ಸುವ್ಯಕ್ತವಾಗುತ್ತದೆ.—ಅಪೊಸ್ತಲರ ಕೃತ್ಯ 15:30, 31.
12, 13. ಮೊಹರಿನ ಮತ್ತು ತಲಾಂತುಗಳ ಸಾಮ್ಯದಲ್ಲಿ ಯೇಸು ಯಾವ ಸಂಭವಗಳನ್ನು ಮುಂತಿಳಿಸಿದನು?
12. ಆದರೆ ಈ ಗಮನಾರ್ಹ ವಿಷಯದ ಇನ್ನೊಂದು ಮುಖವನ್ನು ನೋಡೋಣ. ಮೊಹರಿಗಳ ಸಾಮ್ಯದಲ್ಲಿ ಯೇಸು ತನ್ನನ್ನು ರಾಜ್ಯಾಧಿಕಾರ ಪಡೆಯಲು ದೂರದೇಶಕ್ಕೆ ಪ್ರಯಾಣ ಬೆಳೆಸಿ ಬಳಿಕ ಹಿಂದಿರುಗಿದ ಶ್ರೀಮಂತನಿಗೆ ಹೋಲಿಸಿದನು. (ಲೂಕ 19:11, 12) ಸಾ.ಶ. 33ರಲ್ಲಿ ಆದ ಪುನರುತ್ಥಾನದ ಪರಿಣಾಮವಾಗಿ ಯೇಸು, ದೇವರ ಬಲಗಡೆಗೆ ಏರಿಸಲ್ಪಟ್ಟನು. ಅವನ ಶತ್ರುಗಳು ಪಾದಪೀಠವಾಗುವ ತನಕ ಅವನು ಅಲ್ಲಿ ಕುಳಿತಿರಬೇಕಾಗಿತ್ತು.—ಅಪೊಸ್ತಲರ ಕೃತ್ಯ 2:33-35.
13. ಇದಕ್ಕೆ ಸಮಾನಾಂತರವಾದ ತಲಾಂತುಗಳ ಸಾಮ್ಯದಲ್ಲಿ, ದೀರ್ಘಕಾಲದ ನಂತರ ಯಜಮಾನನು ಆಳುಗಳ ಲೆಕ್ಕವನ್ನು ತೀರಿಸಲಿಕ್ಕಾಗಿ ಬಂದನು ಎಂದು ಯೇಸು ಹೇಳಿದನು. ನಂಬಿಗಸ್ತಿಕೆ ತೋರಿಸಿದ ಆಳುಗಳಿಗೆ ಯಜಮಾನನು, “ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ. ನಿನ್ನ ಧಣಿಯ ಸೌಭಾಗ್ಯದಲ್ಲಿ ಸೇರು” ಎಂದು ಹೇಳಿದನು. ಆದರೆ ಅಪನಂಬಿಗಸ್ತ ಆಳಿನ ಕುರಿತು, ಅವನಂದದ್ದು: “ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವುದು. ಮತ್ತು ಕೆಲಸಕ್ಕೆ ಬಾರದ ಈ ಆಳನ್ನು ಹೊರಗೆ ಕತ್ತಲಿಗೆ ಹಾಕಿಬಿಡಿರಿ.”—ಮತ್ತಾಯ 25:21-23, 29, 30.
14. ತನ್ನ ಆತ್ಮಾಭಿಷಿಕ್ತ ಆಳುಗಳಿಂದ ಯೇಸು ಏನನ್ನು ಅಪೇಕ್ಷಿಸಿದನು?
14. ದೀರ್ಘಕಾಲ—ಸುಮಾರು 19 ಶತಮಾನಗಳು—ಕಳೆದ ಬಳಿಕ ಕ್ರಿಸ್ತನಿಗೆ “ಅನ್ಯ ದೇಶದವರ ಸಮಯಗಳ” ಅಂತ್ಯದಲ್ಲಿ ರಾಜ್ಯಾಧಿಕಾರವು ಕೊಡಲ್ಪಟ್ಟಿತು. (ಲೂಕ 21:24) ಇದಾಗಿ ಸ್ವಲ್ಪದರಲ್ಲಿ ಅವನು ತನ್ನ ಆಳುಗಳಾದ ಆತ್ಮಾಭಿಷಿಕ್ತ ಕ್ರೈಸ್ತರಿಂದ “ಲೆಕ್ಕ ತೆಗೆದುಕೊಳ್ಳಲು” ಬಂದನು. (ಮತ್ತಾಯ 25:19) ಯೇಸು ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಅವರಿಂದ ಏನು ಅಪೇಕ್ಷಿಸಿದನು? ಮನೆವಾರ್ತೆಯವನ ಕೆಲಸವು ಒಂದನೆಯ ಶತಮಾನದಿಂದ ಎಂದಿನಂತೆ ಮುಂದುವರಿಯಿತು. ಕ್ರಿಸ್ತನು ತಲಾಂತುಗಳನ್ನು ಆಳುಗಳಿಗೆ ವೈಯಕ್ತಿಕವಾಗಿ, “ಅವನವನ ಸಾಮರ್ಥ್ಯದ ಪ್ರಕಾರ” ಕೊಟ್ಟಿದ್ದನು. ಈ ಕಾರಣದಿಂದ ಯೇಸು ಅವರಿಂದ ಪ್ರಮಾಣಾನುಸಾರವಾದ ಪ್ರತಿಫಲವನ್ನು ಅಪೇಕ್ಷಿಸಿದನು. (ಮತ್ತಾಯ 25:15) ಇಲ್ಲಿ, 1 ಕೊರಿಂಥ 4:2 ರ “ಮನೆಯವನು ನಂಬಿಗಸ್ತನಾಗಿ ಕಂಡುಬರುವುದು ಅವಶ್ಯವಲ್ಲವೇ” ಎಂಬ ಸೂತ್ರ ಅನ್ವಯಿಸುತ್ತದೆ. ತಲಾಂತುಗಳಲ್ಲಿ ವ್ಯವಹರಿಸುವುದೆಂದರೆ, ದೇವರ ನಂಬಿಗಸ್ತ ರಾಯಭಾರಿಗಳಾಗಿ ವರ್ತಿಸುತ್ತಾ ಶಿಷ್ಯರನ್ನಾಗಿ ಮಾಡುತ್ತಾ ಅವರಿಗೆ ಆತ್ಮಿಕ ಸತ್ಯತೆಗಳನ್ನು ಕೊಡುತ್ತಾ ಇರುವದೆಂದರ್ಥ.—2 ಕೊರಿಂಥ 5:20.
ಅಂತ್ಯಕಾಲ ಸಮೀಪಿಸುವಾಗ “ಆಳು” ಮತ್ತು ಅದರ ಆಡಳಿತ ಮಂಡಲಿ
15. (ಎ)ತನ್ನ ಸಾಮೂಹಿಕ ಗೃಹ ವ್ಯವಸ್ಥಾಪಕನಿಂದ ಯೇಸು ಏನು ನಿರೀಕ್ಷಿಸಿದ್ದನು? (ಬಿ) ಕುಟುಂಬವನ್ನು ಪರೀಕ್ಷಿಸಲು ಬರುವುದಕ್ಕೆ ಮುಂಚಿತವಾಗಿ ಆಳು ಇದನ್ನು ಮಾಡುವುದನ್ನು ಯೇಸು ನಿರೀಕ್ಷಿಸಿದ್ದನೆಂದು ಯಾವುದು ತೋರಿಸುತ್ತದೆ?
15. ಅಭಿಷಿಕ್ತ ಕ್ರೈಸ್ತರು ಸಾಮೂಹಿಕವಾಗಿ ನಂಬಿಗಸ್ತ ಮನೆವಾರ್ತೆಯವನಂತೆ ವರ್ತಿಸಿ, ಅವನ ಸೇವಕ ಸಮುದಾಯಕ್ಕೆ “ಹೊತ್ತು ಹೊತ್ತಿಗೆ ಅಶನಕ್ಕೆ ಬೇಕಾದದ್ದನ್ನು ಅಳೆದು” ಕೊಡುವುದನ್ನು ಯೇಸು ನಿರೀಕ್ಷಿಸಿದ್ದನು. (ಲೂಕ 12:42) ಲೂಕ 12:43 ಕ್ಕನುಸಾರ ಕ್ರಿಸ್ತನು “ಯಜಮಾನನು ಬಂದು ಯಾವ ಆಳು ಹೀಗೆ ಮಾಡುವುದನ್ನು ಕಾಣುವನೋ ಆ ಆಳು ಧನ್ಯನು” ಎಂದು ಹೇಳಿದನು. ಇದು, ಕ್ರಿಸ್ತನು ತನ್ನ ಆತ್ಮಾಭಿಷಿಕ್ತ ಆಳುಗಳ ಲೆಕ್ಕ ತೀರಿಸಲು ಬರುವುದಕ್ಕೆ ಸ್ವಲ್ಪ ಸಮಯ ಮುಂಚಿತವಾಗಿ ಇವರು ದೇವರ ಕುಟುಂಬವಾದ ಕೈಸ್ತ ಸಭೆಯ ಸದಸ್ಯರುಗಳಿಗೆ ಆತ್ಮಿಕ ಆಹಾರವನ್ನು ಹಂಚುತ್ತಿರುತ್ತಾರೆ ಎಂದು ಸೂಚಿಸುತ್ತದೆ. ಕ್ರಿಸ್ತನು 1914 ರಲ್ಲಿ ರಾಜ್ಯಾಧಿಕಾರದಲ್ಲಿ ಹಿಂದೆಬಂದು 1918 ರಲ್ಲಿ ದೇವರ ಮನೆಯನ್ನು ಪರೀಕ್ಷಿಸ ತೊಡಗಿದಾಗ ಯಾರು ಇದನ್ನು ಮಾಡುತ್ತಿದ್ದಾರೆಂದು ಕ್ರಿಸ್ತನು ಕಂಡುಹಿಡಿದನು?—ಮಲಾಕಿಯ 3:1-4; ಲೂಕ 19:12; 1 ಪೇತ್ರ 4:17.
16. 1918 ರಲ್ಲಿ ಕ್ರಿಸ್ತನು ದೇವರ ಮನೆಯನ್ನು ಪರೀಕ್ಷಿಸಲು ಬಂದಾಗ, ಕ್ರೈಸ್ತ ಪ್ರಪಂಚದ ಚರ್ಚುಗಳು ಸಕಾಲದಲ್ಲಿ ಆತ್ಮಿಕಾಹಾರವನ್ನು ಒದಗಿಸುತ್ತಿವೆಂದು ಏಕೆ ಕಾಣಲಿಲ್ಲ?
16. ಯೆಹೋವನ ಬಲಪಕ್ಕದಲ್ಲಿ ಯೇಸುವಿನ ದೀರ್ಘಕಾಲ ಕಾಯುವಿಕೆ ಅಂತ್ಯಗೊಂಡಾಗ, ಕ್ರಿಸ್ತನ ಮನೆಯವರಿಗೆ, 1914 ಕ್ಕೂ ಮುಂಚಿತವಾಗಿ ಆತ್ಮಿಕ ಆಹಾರವನ್ನು ಯಾರು ಒದಗಿಸುತ್ತಿದ್ದರೆಂಬದು ಕ್ರಮೇಣ ಸ್ಪಷ್ಟವಾಯಿತು. ಅದು ಕ್ರೈಸ್ತ ಪ್ರಪಂಚದ ಚರ್ಚುಗಳೆಂದು ನೀವು ಯೋಚಿಸುತ್ತೀರೋ? ನಿಶ್ಚಯವಾಗಿಯೂ ಅಲ್ಲ. ಏಕೆಂದರೆ ಅವರು ರಾಜಕೀಯದಲ್ಲಿ ಮುಳುಗಿ ಹೋಗಿದ್ದರು. ನೆಲಸುನಾಡಿನ ವಿಸ್ತಾರದಲ್ಲಿ ಅವರು ಸ್ವ-ಇಷ್ಟದ ಸಾಧನಗಳಾಗಿದ್ದು, ತಮ್ಮ ದೇಶಭಕ್ತಿಯನ್ನು ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಲು ಪ್ರಯತ್ನಿಸಿ, ಹೀಗೆ, ರಾಷ್ಟ್ರೀಯತೆಯನ್ನು ಪ್ರೋತ್ಸಾಹಿಸಿದರು. ಇದು ಶೀಘ್ರವೇ, ಅವರ ಮೇಲೆ ಮಹಾರಕ್ತಾಪರಾಧವನ್ನು ತಂದಿತು. ಒಂದನೆಯ ಲೋಕ ಯುದ್ಧದಲ್ಲಿ ಸಿಕ್ಕಿ ಕೊಂಡಿದ್ದ ರಾಜಕೀಯ ಸರಕಾರಗಳಿಗೆ ಅವರು ಕಾರ್ಯಶೀಲ ಬೆಂಬಲವನ್ನು ಕೊಟ್ಟಾಗ ಹೀಗಾಯಿತು. ಆತ್ಮಿಕವಾಗಿ, ಅವರ ನಂಬಿಕೆಯು ಆಧುನಿಕ ಅಭಿಪ್ರಾಯಗಳಿಂದಾಗಿ ದುರ್ಬಲಗೊಂಡಿತು. ಅವರ ಪಾದ್ರಿ ವರ್ಗದಲ್ಲಿ ಅನೇಕರು ಬೈಬಲಿನ ಟೀಕೆ ಮತ್ತು ವಿಕಾಸ ವಾದಕ್ಕೆ ಸುಲಭವಾಗಿ ಬಲಿ ಬಿದ್ದಾಗ ಆತ್ಮಿಕ ವಿಷಮ ಸ್ಥಿತಿ ಬಂದು ಒದಗಿತು. ಕ್ರೈಸ್ತ ಪ್ರಪಂಚದ ಪುರೋಹಿತರಿಂದ ಯಾವ ಆತ್ಮಿಕ ಪೋಷಣೆಯೂ ಸಿಕ್ಕುವ ಅವಕಾಶವಿರಲಿಲ್ಲ!
17. ಕೆಲವು ಆತ್ಮಿಕ ಕ್ರೈಸ್ತರನ್ನು ಯೇಸು ತಳ್ಳಿಹಾಕಿದ್ದೇಕೆ, ಮತ್ತು ಅವರಿಗಾದ ಪರಿಣಾಮವೇನು?
17. ಇದೇ ರೀತಿ, ಯಜಮಾನನ ತಲಾಂತುಗಳಲ್ಲಿ ವ್ಯವಹರಿಸುವ ಬದಲಿಗೆ ತಮ್ಮ ಸ್ವರಕ್ಷಣೆಯಲ್ಲಿ ಹೆಚ್ಚು ಚಿಂತಿತರಾದ ಅಭಿಷಿಕ್ತ ಕ್ರೈಸ್ತರಿಂದಲೂ ಪೌಷ್ಟಿಕ ಆಹಾರ ಬರುವಂತಿರಲಿಲ್ಲ. ಅವರು “ಮೈಗಳ್ಳ”ರಾಗಿ, ಯಜಮಾನನ ಸೊತ್ತನ್ನು ನೋಡಿಕೊಳ್ಳಲು ಅಯೋಗ್ಯರಾಗಿ ಪರಿಣಮಿಸಿದರು. ಆದುದರಿಂದ, ಅವರನ್ನು, ಕ್ರೈಸ್ತಪ್ರಪಂಚದ ಚರ್ಚುಗಳು ಈಗಲೂ ಎಲ್ಲಿ ಇವೆಯೋ ಆ “ಹೊರಗೆ ಕತ್ತಲೆಗೆ” ಎಸೆಯಲಾಯಿತು.—ಮತ್ತಾಯ 25:24-30.
18. ಸೇವಕ ಸಮುದಾಯಕ್ಕೆ ಆತ್ಮಿಕಾಹಾರವನ್ನು ಸಕಾಲದಲ್ಲಿ ಯಾರು ಒದಗಿಸುವುದನ್ನು ಯೇಸು ಕಂಡನು, ಮತ್ತು ಇದನ್ನು ಯಾವುದು ರುಜುಪಡಿಸುತ್ತದೆ?
18. 1918 ರಲ್ಲಿ ತನ್ನ ಆಳುಗಳ ಪರೀಕೆಗ್ಷೆ ಬಂದಾಗ, ತನ್ನ ಸೇವಕ ಸಮುದಾಯಕ್ಕೆ ಸಕಾಲದಲ್ಲಿ ಯಾರು ಆಹಾರವನ್ನು ಅಳೆದು ಕೊಡುವುದನ್ನು ಯಜಮಾನನಾದ ಯೇಸುಕ್ರಿಸ್ತನು ಕಂಡನು? ಒಳ್ಳೇದು, ಆ ಸಮಯದೊಳಗೆ, ಯಥಾರ್ಥ ಸತ್ಯಾನ್ವೇಷಕರಿಗೆ ಪ್ರಾಯಶ್ಚಿತ್ತ ಯಜ್ಞ, ದೈವಿಕ ನಾಮ, ಕ್ರಿಸ್ತನ ಸಾನಿಧ್ಯ ಅಗೋಚರತೆ ಮತ್ತು 1914ರ ವೈಶಿಷ್ಟ್ಯದ ಕುರಿತು ಸರಿಯಾದ ತಿಳುವಳಿಕೆಯನ್ನು ಯಾರು ಕೊಟ್ಟಿದ್ದರು? ತ್ರಯೈಕ್ಯದ, ಮಾನವಾತ್ಮದ ಅಮರತ್ವ ಮತ್ತು ನರಕಾಗ್ನಿಯ ಅಸತ್ಯಗಳನ್ನು ಯಾರು ಬಯಲು ಮಾಡಿದ್ದರು? ವಿಕಾಸವಾದ ಮತ್ತು ಪ್ರೇತವ್ಯವಹಾರದ ಅಪಾಯಗಳ ಕುರಿತು ಯಾರು ಎಚ್ಚರಿಸಿದ್ದರು? ಈಗ ಕಾವಲಿನಬುರುಜು, ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂದು ಕರೆಯಲ್ಪಡುವ, ಆದರೆ ಹಿಂದೆ ಜಯನ್ಸ್ ವಾಚ್ಟವರ್ ಎಂಡ್ ಹೆರಲ್ಡ್ ಆಫ್ ಕ್ರೈಸ್ಟ್ ಪ್ರೆಸೆನ್ಸ್ ಎಂಬ ಪತ್ರಿಕೆಯ ಪ್ರಕಾಶಕರೊಂದಿಗೆ ಜತೆಗೂಡಿದ್ದ ಅಭಿಷಿಕ್ತ ಕ್ರೈಸ್ತರ ಗುಂಪೇ ಎಂದು ನಿಜತ್ವಗಳು ತೋರಿಸುತ್ತವೆ.
19. 1918 ಕ್ಕೆ ಮೊದಲು ಒಂದು ನಂಬಿಗಸ್ತ ಆಳು ವರ್ಗ ಹೇಗೆ ತನ್ನನ್ನು ತೋರಿಸಿಕೊಂಡಿತ್ತು, ಆತ್ಮಿಕ ಆಹಾರವನ್ನು ಯಾವುದರ ಮೂಲಕ ಅದು ವಿತರಣೆ ಮಾಡಿತ್ತು, ಮತ್ತು ಎಂದಿನಿಂದ?
19. 1944 ರ ನವಂಬರ 1 ರ ಸಂಚಿಕೆಯಲ್ಲಿ, ದ ವಾಚ್ಟವರ್ ಪತ್ರಿಕೆ ಹೇಳಿದ್ದು: “1878 ರಲ್ಲಿ, ಅಂದರೆ 1918 ರಲ್ಲಿ ಕರ್ತನು ದೇವಾಲಯಕ್ಕೆ ಬರುವ ನಾಲ್ವತ್ತು ವರ್ಷ ಮೊದಲು, ಪುರೋಹಿತ ಪ್ರಭುತ್ವ ಮತ್ತು ಪುರೋಹಿತ ಸಂಸ್ಥೆಗಳಿಂದ ಹೊರಬಂದು ಕ್ರೈಸ್ತತ್ವವನ್ನು ಆಚರಿಸ ಬಯಸಿದ ಒಂದು ಯಥಾರ್ಥ ಸಮರ್ಪಿತ ಕ್ರೈಸ್ತ ವರ್ಗವೊಂದಿತ್ತು . . . ಮರು ವರ್ಷ, ಅಂದರೆ 1879 ರ ಜುಲೈಯಲ್ಲಿ, ದೇವರು ಯೇಸುವಿನ ಮೂಲಕ, ತನ್ನ ಸಮರ್ಪಿತ ಮಕ್ಕಳ ಸಕಲ ಕುಟುಂಬಕ್ಕೆ ‘ತಕ್ಕ ಸಮಯದ ಆಹಾರವಾದ’ ಸತ್ಯವನ್ನು ಒದಗಿಸಲಿಕ್ಕೆ, ಈ ಪತ್ರಿಕೆಯಾದ ದ ವಾಚ್ಟವರ್ ಪ್ರಕಟಿಸಲ್ಪಡ ತೊಡಗಿತು.”
20. (ಎ)ಆಧುನಿಕ ದಿನದ ಆಡಳಿತ ಮಂಡಲಿಯೊಂದು ಈ ಮಧ್ಯೆ ಹೇಗೆ ತೋರಿಬಂತು? (ಬಿ) ಆಡಳಿತ ಮಂಡಲಿಯ ಸದಸ್ಯರು ಏನು ಮಾಡುತ್ತಿದ್ದರು, ಮತ್ತು ಯಾರ ಮಾರ್ಗದರ್ಶನದಲ್ಲಿ?
20. ಆಧುನಿಕ ದಿನದ ಆಡಳಿತ ಮಂಡಲಿಯ ವಿಕಾಸದ ಕುರಿತು ಸಮಾಚಾರವನ್ನೊದಗಿಸುತ್ತಾ ಡಿಸೆಂಬರ್ 15, 1971 ರ ವಾಚ್ಟವರ್ ಪತ್ರಿಕೆ ಹೇಳಿದ್ದು: “ಐದು ವರ್ಷಗಳ ಬಳಿಕ [1884 ರಲ್ಲಿ] ಜಯನ್ಸ್ ವಾಚ್ಟವರ್ ಟ್ರೇಕ್ಟ್ ಸೊಸೈಟಿ ಸಂಘಟಿತವಾಗಿ, ದೇವರನ್ನು ಮತ್ತು ಆತನ ವಾಕ್ಯವನ್ನು ತಿಳಿಯ ಬಯಸಿದ ಸಾವಿರಾರು ಮಂದಿ ಯಥಾರ್ಥ ಜನರಿಗೆ ಆತ್ಮಿಕ ಆಹಾರ ಕೊಡುವ ‘ಏಜನ್ಸಿ’ಯಾಗಿ ಕೆಲಸ ನಡಿಸಿತು . . . ಸಮರ್ಪಿತ, ದೀಕ್ಷಾಸ್ನಾತ ಅಭಿಷಿಕ್ತ ಕ್ರೈಸ್ತರು ಪೆನ್ಸಿಲ್ವೇನಿಯಾದ ಸೊಸೈಟಿಯ ಮುಖ್ಯ ಕಚೇರಿಯಲ್ಲಿ ಅದರೊಂದಿಗೆ ಕೂಡಿ ಕೊಂಡರು. ಡೈರೆಕ್ಟರರಾಗಿರಲಿ, ಇಲ್ಲದಿರಲಿ ಅವರು ‘ನಂಬಿಗಸ್ತನೂ ವಿವೇಕಿಯೂ ಆದ ಆಳಿನ’ ವಿಶೇಷ ಕೆಲಸಕ್ಕೆ ತಮ್ಮನ್ನು ದೊರಕಿಸಿಕೊಂಡರು. ಅವರು ಆಳು ವರ್ಗಕ್ಕೆ ಉಣ್ಣಿಸಲು ಮತ್ತು ಅವರನ್ನು ನಡಿಸಲು ಸಹಾಯ ಮಾಡಲಾಗಿ, ಹೀಗೆ ಒಂದು ಆಡಳಿತ ಮಂಡಲಿ ತನ್ನನ್ನು ತೋರಿಸಿ ಕೊಂಡಿತು. ಇದು ಯೆಹೋವನ ಅದೃಶ್ಯ ಕ್ರಿಯಾಶೀಲ ಶಕ್ತಿ ಅಥವಾ ಪವಿತ್ರಾತ್ಮ ಮಾರ್ಗದರ್ಶನದಿಂದಲೇ ಆಯಿತೆಂಬದು ಸ್ಪಷ್ಟ. ಕ್ರೈಸ್ತ ಸಭೆಯ ಶಿರಸ್ಸಾದ ಯೇಸು ಕ್ರಿಸ್ತನ ಮೇಲ್ವಿಚಾರದಿಂದಲೂ ಇದು ನಡೆಯಿತು.
21. (ಎ)ಯಾರು ಆತ್ಮಿಕಾಹಾರವನ್ನು ಹಂಚುವದನ್ನು ಕ್ರಿಸ್ತನು ಕಂಡನು, ಮತ್ತು ಅವರಿಗೆ ಅವನು ಹೇಗೆ ಪ್ರತಿಫಲ ಕೊಟ್ಟನು? (ಬಿ) ನಂಬಿಗಸ್ತ ಆಳು ಮತ್ತು ಅದರ ಆಡಳಿತ ಮಂಡಲಿಗೆ ಯಾವುದು ಕಾದಿತ್ತು?
21. 1918ರಲ್ಲಿ, ಯೇಸು ಕ್ರಿಸ್ತನು ತನ್ನ ಆಳುಗಳೆಂದು ಹೇಳಿಕೊಂಡವರನ್ನು ಪರೀಕ್ಷಿಸಿದಾಗ, ಕ್ರೈಸ್ತರ ಒಂದು ಅಂತರಾಷ್ಟ್ರೀಯ ಗುಂಪು ಸಭೆಯ ಒಳಗಣ ಉಪಯೋಗಕ್ಕೂ ಹೊರಗೆ ಸಾರುವದಕ್ಕಾಗಿಯೂ ಬೈಬಲ್ ಸತ್ಯಗಳನ್ನು ಪ್ರಕಟಿಸುತ್ತಿರುವುದನ್ನು ಕಂಡನು. 1919 ರಲ್ಲಿ ಯೇಸು ಮುಂತಿಳಿಸಿದಂತೆ ನಿಜವಾಗಿ ನಡೆಯಿತು: “ಯಜಮಾನನು ಬಂದು ಯಾವ ಆಳು ಹೀಗೆ ಮಾಡುವದನ್ನು ಕಾಣುವನೋ ಆ ಆಳು ಧನ್ಯನು. ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನು.” (ಮತ್ತಾಯ 24:46, 47) ಈ ನಿಜ ಕ್ರೈಸ್ತರು ತಮ್ಮ ಯಜಮಾನನ ಆನಂದದಲ್ಲಿ ಪ್ರವೇಶಿಸಿದರು. “ಸ್ವಲ್ಪ ಕೆಲಸದಲ್ಲಿ ನಂಬಿಗಸ್ತ” ನಾಗಿ ಇದ್ದುದರಿಂದ ಅವರು ಯಜಮಾನನಿಂದ “ದೊಡ್ಡ ಕೆಲಸದಲ್ಲಿ” ಇಡಲ್ಪಟ್ಟರು. (ಮತ್ತಾಯ 25:21) ನಂಬಿಗಸ್ತನಾದ ಆಳು ಮತ್ತು ಅದರ ಆಡಳಿತ ಮಂಡಲಿಯು ತಮ್ಮ ಸ್ಥಾನದಲ್ಲಿದ್ದು ವಾಸ್ತವವಾದ ನೇಮಕಕ್ಕೆ ಸಿದ್ಧರಾದರು. ವಿಷಯವು ಹೀಗಾದುದ್ದಕ್ಕೆ ನಾವೆಷ್ಟು ಆನಂದಿತರಾಗಿರಬೇಕು. ಏಕೆಂದರೆ, ಈ ನಂಬಿಗಸ್ತ ಆಳು ಮತ್ತು ಅದರ ಆಡಳಿತ ಮಂಡಲಿಯ ಶ್ರದ್ಧಾಪೂರ್ವಕವಾದ ಕೆಲಸದಿಂದ ಕರ್ತವ್ಯನಿಷ್ಟರಾದ ಕ್ರೈಸ್ತರಿಗೆ ಹೇರಳವಾದ ಪ್ರಯೋಜನ ದೊರೆಯುತ್ತಿದೆ! (w90 3/15)
ಜ್ಞಾಪಿಸಿಕೊಳ್ಳಲು ಮುಖ್ಯ ವಿಷಯಗಳು
◻ ದೇವರ ಕುಟುಂಬದ ಶಿರಸ್ಸು ಯಾರು, ಮತ್ತು ಅವನು ಯಾರಿಗೆ ಅಧಿಕಾರ ವಹಿಸಿಕೊಟ್ಟಿದ್ದಾನೆ?
◻ ಕ್ರಿಸ್ತನು ಆಳುವರ್ಗಕ್ಕೆ ಯಾವ ಸಾಮೂಹಿಕ ನೇಮಕವನ್ನು ಕೊಟ್ಟಿದ್ದಾನೆ?
◻ ಆಳುವರ್ಗದೊಳಗೆ ಇನ್ನಾವ ಸಾಮೂಹಿಕ ಮಂಡಲಿ ಇದೆ, ಮತ್ತು ಅದರ ನಿರ್ದಿಷ್ಟ ಕರ್ತವ್ಯಗಳು ಏನಾಗಿದ್ದವು?
◻ ಕ್ರಿಸ್ತನು ದೇವರ ಕುಟುಂಬವನ್ನು ಪರೀಕ್ಷಿಸಲು ಬಂದಾಗ ಯಾರು ಅದರ ಸದಸ್ಯರಿಗೆ ಆತ್ಮಿಕಾಹಾರವನ್ನು ಒದಗಿಸುತ್ತಿದ್ದರು?
◻ ಆಧುನಿಕ ದಿನದ ಆಡಳಿತ ಮಂಡಲಿ ಹೇಗೆ ತೋರಿಬಂತು?
[ಪುಟ 10 ರಲ್ಲಿರುವ ಚಿತ್ರ]
ಒಂದನೆಯ ಶತಕದ “ಆಳಿ”ನಲ್ಲಿ ಅಪೊಸ್ತಲರು ಮತ್ತು ಯೆರೂಸಲೇಮ್ ಸಭೆಯ ಹಿರಿಯರನ್ನೊಳಗೊಂಡ ಆಡಳಿತ ಮಂಡಲಿಯಿತ್ತು