ನಂಬಿಕೆಯನ್ನು ಕಾಪಾಡಿರಿ ದೇವರಲ್ಲಿ ಮತ್ತು ಕ್ರಿಸ್ತನಲ್ಲಿ
ಕೊಲೊಸ್ಸೆಯವರಿಗೆ ಪತ್ರದಿಂದ ಅತ್ಯುಜ್ವಲ ಭಾಗಗಳು
ಯೆಹೋವ ದೇವರಲ್ಲಿ ಮತ್ತು ಯೇಸುಕ್ರಿಸ್ತನಲ್ಲಿ ರಕ್ಷಣೆಗಾಗಿ ನಂಬಿಕೆಯನ್ನಿಡುವುದು ಅತ್ಯಾವಶ್ಯಕ. ಆದರೆ ನಂಬಿಕೆಯನ್ನು ಕಾಪಾಡುವುದು ಒಂದು ಪಂಥಾಹ್ವಾನವಾಗಿದೆ. ಏಶ್ಯಾ ಮೈನರಿನ ಎಫೆಸದ ಪೂರ್ವದ ನಗರವಾದ ಕೊಲೊಸ್ಸೆಯಲ್ಲಿರುವ ಕ್ರೈಸ್ತರಿಗೆ ಅದು ಹಾಗೆ ಇತ್ತು. ಯಾಕೆ? ಯಾಕಂದರೆ ರಕ್ಷಣೆಯು ಸುನ್ನತಿಯ ಮೇಲೆ, ನಾವೇನು ತಿನ್ನುತ್ತೇವೆ ಅದರ ಮೇಲೆ ಮತ್ತು ಕೆಲವು ನಿರ್ದಿಷ್ಟ ಆಚರಣೆಗಳ ಮೇಲೆ ಆಧರಿತವಾಗಿದೆ ಎಂದು ಸುಳ್ಳು ಬೋಧಕರು ತಪ್ಪಾಗಿ ಹೇಳುತ್ತಿದ್ದರು.
ಹಾಗಿದ್ದುದರಿಂದ ಯುಕ್ತವಾಗಿಯೇ ಅಪೊಸ್ತಲ ಪೌಲನು ಕೊಲೊಸ್ಸೆಯ ಕ್ರೈಸ್ತರ ಆತ್ಮೀಕ ಒಳಿತಿನ ಕುರಿತು ಚಿಂತಿತನಾಗಿದ್ದದ್ದು ಮತ್ತು ದೇವರಲ್ಲಿ ಮತ್ತು ಕ್ರಿಸ್ತನಲ್ಲಿ ಅವರ ನಂಬಿಕೆಯನ್ನು ಅವರು ಕಾಪಾಡಿ ಕೊಳ್ಳಲು ಅವನು ಖಂಡಿತವಾಗಿಯೂ ಬಯಸಿದ್ದನು. ಆದುದರಿಂದ ರೋಮಿನಲ್ಲಿ ಅಪೊಸ್ತಲನ ಮೊದಲನೆಯ ಸೆರೆಮನೆವಾಸದ ಕೊನೆಯಲ್ಲಿ (ಸುಮಾರು ಸಾ.ಶ. 60-61) ತಪ್ಪು ನೋಟಗಳ ಪ್ರತಿವಿರುದ್ಧವಾಗಿ ಮತ್ತು ಅವರ ನಂಬಿಕೆಯನ್ನು ಕಟ್ಟಲು ಕೊಲೊಸ್ಸೆಯವರಿಗೆ ಅವನು ಪತ್ರವನ್ನು ಬರೆದನು. ಅವನ ಪ್ರೀತಿಯ ಮಾತುಗಳಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದೆಂದು ನಾವೀಗ ನೋಡೋಣ.
ಕ್ರಿಸ್ತನ ಸ್ಥಾನವನ್ನು ಗಣ್ಯಮಾಡುವುದು
ತನ್ನ ಪತ್ರದ ಆರಂಭದಲ್ಲಿ, ಪೌಲನು ಯೇಸುವಿನ ಸ್ಥಾನವನ್ನು ಅತ್ಯುಜ್ವಲವಾಗಿ ಎತ್ತಿ ತೋರಿಸಿದನು. (1:1–2:12) ಕ್ರಿಸ್ತನ ಮತ್ತು ಸಹ ವಿಶ್ವಾಸೀಗಳಿಗಾಗಿರುವ ಅವರ ಪ್ರೀತಿಯ ಸಂಬಂಧದಲ್ಲಿ ಅವನು ಕೊಲೊಸ್ಸೆಯವರನ್ನು ಪ್ರಶಂಸಿಸಿದನು. ಅವನ ಮೂಲಕ ಎಲ್ಲಾ ಸಂಗತಿಗಳು ಸೃಷ್ಟಿಸಲ್ಪಟ್ಟವು, ಅವನು ಸಭೆಯ ಶಿರಸ್ಸು ಆಗಿದ್ದಾನೆ ಮತ್ತು ಸತ್ತವರೊಳಗಿಂದ ಮೊದಲು ಎದ್ದು ಬಂದವನು ಎಂಬ ಇವೆಲ್ಲಾ ಕಾರಣಗಳಿಂದ ಕ್ರಿಸ್ತನ ಸರ್ವೋತ್ಕೃಷ್ಟತೆಯನ್ನು ಪೌಲನು ಉಲ್ಲೇಖಿಸುತ್ತಾನೆ. ಕ್ರಿಸ್ತನ ಮೂಲಕ ದೇವರೊಂದಿಗೆ ಸಂಧಾನವಾಗಲು ಸಾಧ್ಯತೆಯುಂಟಾಯಿತು ಮತ್ತು ಅವನಲ್ಲಿ ವಿವೇಕ ಮತ್ತು ಜ್ಞಾನವು ಅಡಕವಾಗಿರುತ್ತದೆ. ಇವೆಲ್ಲವುಗಳ ನೋಟದಲ್ಲಿ, ಕ್ರೈಸ್ತರು ಕ್ರಿಸ್ತನ ಅನ್ಯೋನ್ಯತೆಯಲ್ಲಿ ನಡೆಯಬೇಕು ಮತ್ತು ಮಾನವ ತತ್ವಜ್ಞಾನಗಳ ಮೂಲಕ ಅವರನ್ನು ಯಾರೂ ವಶಮಾಡಿ ಕೊಳ್ಳಲಾರರು.
ಕ್ರಿಸ್ತನ ಮೂಲಕ ದೇವರು ನಿಯಮ ಶಾಸ್ತ್ರ ವನ್ನು ದಾರಿಯಿಂದ ತೊಲಗಿಸಿದನು. (2:13-23) ಸಾಂಕೇತಿಕವಾಗಿ ಅದನ್ನು ಯೇಸುವು ಸತ್ತ ಹಿಂಸಾಕಂಭಕ್ಕೆ ಜಡಿಯಲಾಯಿತು. ನಿಯಮ ಶಾಸ್ತ್ರ ದ ಆವಶ್ಯಕತೆಗಳು ಕೇವಲ “ಮುಂದೆ ಬರಬೇಕಾಗಿದ್ದ ಕಾರ್ಯಗಳ ಛಾಯೆಯಾಗಿವೆ; ಇವುಗಳ ನಿಜಸ್ವರೂಪವು ಕ್ರಿಸ್ತನೇ.” ಕ್ರಿಸ್ತನಿಗೆ ದೃಢವಾಗಿ ಹೊಂದಿಕೊಂಡಿರುವುದರ ಮೂಲಕ ಪರಲೋಕದಲ್ಲಿ ಅಮರತ್ವದ ಜೀವದ ಅವರ ಬಹುಮಾನವನ್ನು ಯಾವನೇ ಮನುಷ್ಯನು ಅಪಹರಿಸದಂತೆ ಅವಕಾಶಕೊಡುವುದಿಲ್ಲ.
ದೇವರನ್ನೂ, ಕ್ರಿಸ್ತನನ್ನೂ ಗಣ್ಯತೆಮಾಡಿರಿ
ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳುವುದರ ಮತ್ತು ಯೇಸು ಕ್ರಿಸ್ತನ ಅಧಿಕಾರಕ್ಕೆ ಅಧೀನನಾಗುವುದರ ಕುರಿತು ಪೌಲನು ಅನಂತರ ಕೊಲೊಸ್ಸೆಯವರಿಗೆ ಒತ್ತಾಯಿಸುತ್ತಾನೆ. (3:1-17) ಮೇಲಿನವುಗಳ ಮೇಲೆ ಅವರ ಮನಸ್ಸನ್ನು ಇಡುವುದರಿಂದ, ಅವರು ತಮ್ಮ ಜೀವಿತದಲ್ಲಿ ಆತ್ಮೀಕ ಹಿತಾಸಕ್ತಿಗಳ ಕಡೆಗೆ ಪ್ರಥಮತೆಯನ್ನು ಕೊಡುವರು. ಇದು ಕೆಟ್ಟ ಮನೋಭಾವನೆಗಳನ್ನು ಮತ್ತು ಮಾತುಕತೆಗಳನ್ನು ವಿಸರ್ಜಿಸುವಂತೆ ಕೇಳಿಕೊಳ್ಳುತ್ತದೆ. ಕನಿಕರ, ಮನಸ್ಸಿನ ನಮ್ರತೆ ಮತ್ತು ಪ್ರೀತಿಯಂಥ ಗುಣಗಳನ್ನು ಅವರು ಸಥ್ವಃ ಧರಿಸಿಕೊಳ್ಳುವುದಾದರೆ, ಅವರೆಷ್ಟು ಧನ್ಯರು ! ಎಲ್ಲಾ ವಿಷಯಗಳನ್ನು ಯೇಸುವಿನ ಹೆಸರಿನಲ್ಲಿ ಮಾಡಿ, ಅವನ ಮೂಲಕ ತಂದೆಗೆ ಉಪಕಾರಸ್ತುತಿ ಹೇಳುವುದಾದರೆ, ಕ್ರಿಸ್ತನ ಸಮಾಧಾನವು ಅವರ ಯೋಚನೆಗಳನ್ನು ನಿಯಂತ್ರಿಸುವುದು.
ಯೆಹೋವ ದೇವರಿಗೆ ಮತ್ತು ಯೇಸುಕ್ರಿಸ್ತನಿಗಾಗಿರುವ ಗಣ್ಯತೆಯು ಇತರರೊಡಗಿನ ಕ್ರಿಸ್ತೀಯ ಸಂಬಂಧವನ್ನು ಪ್ರಭಾವಿಸತಕ್ಕದ್ದು. (3:18–4:18) ಹೆಂಡತಿಯರು, ಗಂಡಂದಿರು, ಮಕ್ಕಳು, ದಾಸರು ಮತ್ತು ಧನಿಗಳು ದೇವರ ಭಯದಲ್ಲಿ ಮತ್ತು ಕ್ರಿಸ್ತನನ್ನು ಅಂಗೀಕರಿಸಿ ತಮ್ಮ ತಮ್ಮ ಕರ್ತವ್ಯಗಳನ್ನು ಮಾಡುವವರಾಗಬೇಕು. ಮತ್ತು ಪ್ರಾರ್ಥನೆಯಲ್ಲಿ ನಿರತರಾಗಿರುವುದು ಮತ್ತು ವಿವೇಕದಲ್ಲಿ ನಡೆಯುವುದು ಎಷ್ಟೊಂದು ಜರೂರಿಯದ್ದು !
ಜೀವದ ಬಹುಮಾನವನ್ನು ಅಪಹರಿಸಬಹುದಾದ ಸುಳ್ಳು ಬೋಧನೆಗಳಿಂದ ನಮ್ಮನ್ನು ತಪ್ಪಿಸಿಕೊಳ್ಳಲು ಪೌಲನ ಕೊಲೊಸ್ಸೆಯವರ ಪತ್ರವು ನಮಗೆ ಸಹಾಯಮಾಡಬಲ್ಲದು. ಯೆಹೋವನ ಮತ್ತು ಅವನ ಮಗನ ಅಧಿಕಾರವನ್ನು ಅಂಗೀಕರಿಸುವುದರಲ್ಲಿ ಅಪೊಸ್ತಲನ ಒತ್ತರವು ಇತರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ಒಂದು ಉತ್ತಮ ಪ್ರಭಾವವಾಗಿರಬಲ್ಲದು. ದೇವರಲ್ಲಿ ಮತ್ತು ಕ್ರಿಸ್ತನಲ್ಲಿ ನಮ್ಮ ನಂಬಿಕೆಯನ್ನು ನಾವು ಕಾಪಾಡಿ ಕೊಳ್ಳುವುದಾದರೆ ವಿಫುಲವಾದ ಆಶೀರ್ವಾದಗಳು ನಮಗೆ ವಚನಿಸಲ್ಪಟ್ಟಿವೆ. (w90 11/15)
[ಪುಟ 32 ರಲ್ಲಿರುವ ಚೌಕ/ಚಿತ್ರಗಳು]
ಲವೊದಿಕೀಯದವರಿಗೆ ಪತ್ರ: “ನಿಮ್ಮಲ್ಲಿ ಈ ಪತ್ರವನ್ನು ಓದಿಸಿ ಕೊಂಡ ತರುವಾಯ,” ಪೌಲನು ಕೊಲೊಸ್ಸೆಯವರಿಗೆ ಬರೆದದ್ದು, “ಲವೊದಿಕೀಯದವರ ಸಭೆಯಲ್ಲಿಯೂ ಓದಿಸಿರಿ; ಮತ್ತು ಲವೊದಿಕೀಯದವರಿಂದ ನನ್ನ ಪತ್ರ ತರಿಸಿ ನೀವೂ ಓದಿಸಿ ಕೊಳ್ಳಿರಿ.” (ಕೊಲೊಸ್ಸೆಯವರಿಗೆ 4:16) ಪಶ್ಚಿಮ ಏಶ್ಯಾ ಮೈನರಿನಲ್ಲಿ ಲವೊದಿಕಿಯವು ಒಂದು ಸಮೃದ್ಧಿಯ ನಗರವಾಗಿತ್ತು, ಫಿಲಿಡೆಲ್ಪಿಯಾ ಮತ್ತು ಎಫೆಸ್ಯ ನಗರಗಳಿಗೂ ರಸ್ತೆಯ ಮೂಲಕ ಜೋಡಿಸಲ್ಪಟ್ಟಿತ್ತು. ಎಫೆಸ್ಯದಲ್ಲಿನ ಪೌಲನ ಕೆಲಸವು ಲವೊದಿಕೀಯದ ಪರ್ಯಂತ ಮುಟ್ಟಿದರ್ದೂ, ಅಲ್ಲಿ ಅವನು ಶುಶ್ರೂಷೆ ನಡಿಸಿರಲಿಲ್ಲ. ಅವನು ಲವೊದಿಕೀಯದ ಕ್ರೈಸ್ತರಿಗೆ ಪತ್ರವನ್ನು ಕಳುಹಿಸಿದನಾದರೂ, ಕೆಲವು ವಿದ್ವಾಂಸರು, ಅದು ಅವನು ಎಫೆಸದವರಿಗೆ ಬರೆದ ಪತ್ರದ ಮರುಪ್ರತಿ ಎಂದು ನಂಬುತ್ತಾರೆ. ಬೈಬಲಿನಲ್ಲಿ ಲವೊದಿಕೀಯದ ಪತ್ರವು ತೋರುವುದಿಲ್ಲ, ಪ್ರಾಯಶಃ ನಮಗೆ ಇಂದು ಬೇಕಾಗಿರುವ ಸಮಾಚಾರಗಳು ಅದರಲ್ಲಿ ಇರಲಿಲ್ಲ ಅಥವಾ ಬಹುಶಃ ಬೇರೆ ಅಧಿಕೃತ ಪತ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅದರ ಪುನರಾವರ್ತಿತ ವಿಷಯಗಳು ಆವರಿಸಲ್ಪಟ್ಟಿರಬಹುದು.
[ಚಿತ್ರ]
ಲವೊದಿಕೀಯದಲ್ಲಿ ಅವಶೇಷಗಳು