ಲೋಕದ ಐಹಿತ್ಯಗಳಲ್ಲಿ ಜಲಪ್ರಲಯವು
ನೋಹನ ದಿನದ ಜಲಪ್ರಲಯವು ಎಷ್ಟು ವಿಪತ್ಕಾರಕ ವಿನಾಶವಾಗಿತ್ತೆಂದರೆ ಮಾನವ ಕುಲವು ಅದನ್ನೆಂದೂ ಮರೆಯುವಂತಿರಲಿಲ್ಲ. ಸುಮಾರು 2,400 ವರ್ಷಗಳ ಅನಂತರ ಯೇಸು ಕ್ರಿಸ್ತನು ಅದನ್ನು ಇತಿಹಾಸದ ಒಂದು ನಿಜ ವಾಸ್ತವಾಂಶವಾಗಿ ಮಾತಾಡಿದ್ದನು. (ಮತ್ತಾಯ 24:37-39) ಆ ಭೀಕರ ಘಟನೆಯು ಮಾನವ ಜಾತಿಯ ಮೇಲೆ ಎಂಥ ಅಳಿಸಲಾರದ ಅಚ್ಚೊತ್ತನ್ನು ಮಾಡಿತ್ತೆಂದರೆ, ಭೂಲೋಕದಲ್ಲೆಲ್ಲೂ ಅದು ಪರಂಪರೆಯಾಗಿ ಬಂದ ಐಹಿತ್ಯವಾಗಿ ಪರಿಣಮಿಸಿತು.
ಸುಮಾರು 500ಕ್ಕಿಂತಲೂ ಹೆಚ್ಚು ಪ್ರಲಯದ ಕಥೆಗಳು 250ಕ್ಕಿಂತಲೂ ಹೆಚ್ಚು ಕುಲಗಳು ಮತ್ತು ಜನರಿಂದ ಹೇಳಲ್ಪಡುತ್ತಿವೆಯೆಂದು ಮಿಥ್ಸ್ ಆಫ್ ಕ್ರಿಯೇಶನ್ ಪುಸ್ತಕದಲ್ಲಿ ಫಿಲಿಫ್ ಫ್ರುಯೆಂಟ್ ಅಂದಾಜು ಮಾಡಿದ್ದಾನೆ. ಅಪೇಕ್ಷಿಸಲ್ಪಟ್ಟ ಪ್ರಕಾರವೇ, ಶತಮಾನಗಳು ದಾಟಿದಷ್ಟಕ್ಕೆ, ಈ ಐಹಿತ್ಯಗಳಿಗೆ ಕಾಲ್ಪನಿಕ ಘಟನೆಗಳನ್ನು ಮತ್ತು ಪಾತ್ರದಾರಿಗಳನ್ನು ಹೆಣೆದು ಸ್ವಾರಸ್ಯವನ್ನು ಹೆಚ್ಚಿಸಲಾಯಿತು. ಆದರೂ, ಅವೆಲ್ಲವುಗಳಲ್ಲಿ ಕೆಲವು ಮೂಲಭೂತ ಸಾಮ್ಯತೆಗಳನ್ನು ಕಾಣಸಾಧ್ಯವಿದೆ.
ಗಮನಾರ್ಹ ಸಾಮ್ಯತೆಗಳು
ಜಲಪ್ರಲಯದ ನಂತರ ಜನರು ಮೆಸಪೊಟೇಮಿಯದಿಂದ ವಲಸೆ ಹೋದಾಗ, ತಮ್ಮೊಡನೆ ನಾಶನದ ವೃತ್ತಾಂತವನ್ನು ಭೂಮಿಯ ಎಲ್ಲಾ ಭಾಗಗಳಿಗೆ ಒಯ್ದರು. ಹೀಗೆ, ಏಷ್ಯಾ, ದಕ್ಷಿಣ ಫೆಸಿಫಿಕ್ ದ್ವೀಪಗಳು, ಉತ್ತರ ಅಮೆರಿಕ, ಮಧ್ಯ ಅಮೆರಿಕ ಮತ್ತು ದಕ್ಷಿಣ ಅಮೆರಿಕಗಳ ನಿವಾಸಿಗಳಲ್ಲಿ ಈ ಪ್ರಭಾವಯುಕ್ತ ಘಟನೆಯ ಕಥೆಗಳು ವಾಡಿಕೆಯಲ್ಲಿವೆ. ಈ ಜನರಿಗೆ ಬೈಬಲ್ ಹೊರಗೆಡವಲ್ಪಡುವ ಬಹಳ ಮುಂಚೆಯೇ, ಜಲಪ್ರಲಯದ ಕುರಿತಾದ ಅನೇಕ ಐಹಿತ್ಯಗಳು ಅಸ್ತಿತ್ವದಲ್ಲಿದ್ದವು. ಆದರೂ, ಈ ಕಥೆಗಳಲ್ಲಿ ಜಲಪ್ರಲಯದ ಬೈಬಲ್ ವೃತ್ತಾಂತದೊಂದಿಗೆ ಹೋಲುವ ಕೆಲವು ಮೂಲಭೂತ ಸಾಮ್ಯತೆಗಳಿವೆ.
ಕೆಲವು ಕಥೆಗಳು ಜಲಪ್ರಲಯಕ್ಕೆ ಮುಂಚೆ ಭೂಮಿಯಲ್ಲಿದ್ದ ಹಿಂಸಾಚಾರಿಗಳಾದ ದೈತ್ಯರ ಕುರಿತಾಗಿ ತಿಳಿಸುತ್ತದೆ. ಇದಕ್ಕೆ ಹೋಲಿಕೆಯಲ್ಲಿ, ಅವಿಧೇಯ ದೇವದೂತರು ತಮ್ಮನ್ನು ಮಾಂಸಿಕ ದೇಹಕ್ಕೆ ರೂಪಾಂತರಿಸಿಕೊಂಡು, ಸ್ತ್ರೀಯರನ್ನು ತಮ್ಮ ಹೆಂಡತಿಯರಾಗಿ ತಕ್ಕೊಂಡರೆಂದು ಮತ್ತು ಅವರ ಮೂಲಕ ನೆಫಿಲಿಮ್ ಎಂಬ ರಾಕ್ಷಸ ಜಾತಿಯು ಉಂಟಾಯಿತೆಂದೂ ಬೈಬಲು ಸೂಚಿಸುತ್ತದೆ.—ಆದಿಕಾಂಡ 6:1-4; 2 ಪೇತ್ರ 2:4, 5.
ದೈವಿಕ ಮೂಲದಿಂದ ಬರಲಿದ್ದ ಒಂದು ಪ್ರಳಯದ ಕುರಿತು ಒಬ್ಬ ಮನುಷ್ಯನಿಗೆ ಎಚ್ಚರವನ್ನು ಕೊಡಲಾಯಿತೆಂದು ಪ್ರಳಯದ ಕಥೆಗಳು ಸಾಮಾನ್ಯವಾಗಿ ಸೂಚಿಸುತ್ತವೆ. ಬೈಬಲಿಗನುಸಾರವಾಗಿ, ತಾನು ದುಷ್ಟರನ್ನೂ ಹಿಂಸಾಚಾರಿಗಳನ್ನೂ ನಾಶಮಾಡಲಿದ್ದೇನೆಂದು ದೇವರು ನೋಹನನ್ನು ಎಚ್ಚರಿಸಿದನು. ದೇವರು ನೋಹನಿಗೆ ಹೇಳಿದ್ದು: “ಎಲ್ಲಾ ದೇಹಿಗಳಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ. ಭೂಲೋಕವು ಅವರ ಅನ್ಯಾಯದಿಂದ ತುಂಬಿ ಅದೆ. ನಾನು ಅವರನ್ನೂ ಭೂಮಿಯ ಮೇಲಿರುವದೆಲ್ಲವನ್ನೂ ಅಳಿಸಿಬಿಡುತ್ತೇನೆ.”—ಆದಿಕಾಂಡ 6:13.
ಪ್ರಲಯದ ಕುರಿತಾದ ಕಥೆಗಳು ಸಾಮಾನ್ಯವಾಗಿ ಅದು ಭೌಗೋಲಿಕ ನಾಶನವನ್ನು ಬರಮಾಡಿತ್ತು ಎಂಬದನ್ನು ಸೂಚಿಸುತ್ತವೆ. ಅದೇ ರೀತಿ ಬೈಬಲೂ ಅನ್ನುವದು: “ನೀರು ಭೂಮಿಯ ಮೇಲೆ ಅತ್ಯಧಿಕವಾಗಿ ಪ್ರಬಲವಾದ್ದರಿಂದ ಆಕಾಶಮಂಡಲದ ಕೆಳಗಿರುವ ಎಲ್ಲಾ ದೊಡ್ಡ ಬೆಟ್ಟಗಳು ಮುಚ್ಚಿಹೋದವು. ಮೂಗಿನಿಂದ ಶ್ವಾಸಬಿಡುವ ಭೂಜಂತುಗಳೆಲ್ಲಾ ಸತ್ತವು.”—ಆದಿಕಾಂಡ 7:19, 22.
ಹೆಚ್ಚಿನ ಪ್ರಲಯ ಐಹಿತ್ಯಗಳು ಒಬ್ಬ ಮನುಷ್ಯನು ಒಬ್ಬರು ಅಥವಾ ಹೆಚ್ಚು ಬೇರೆ ವ್ಯಕ್ತಿಗಳೊಂದಿಗೆ ಪ್ರಲಯವನ್ನು ಪಾರಾದರು ಎಂಬದಾಗಿ ತಿಳಿಸುತ್ತವೆ. ಅವನು ತಾನು ಕಟ್ಟಿದ ದೋಣಿಯಲ್ಲಿ ಆಶ್ರಯವನ್ನು ತಕ್ಕೊಂಡನೆಂದೂ ಮತ್ತು ಅದು ಒಂದು ಪರ್ವತದ ಮೇಲೆ ಬಂದಿಳಿಯಿತೆಂದೂ ಹೆಚ್ಚಿನ ಪುರಾಣ ಕಥೆಗಳು ತಿಳಿಸುತ್ತವೆ. ಇದಕ್ಕೆ ಹೋಲಿಕೆಯಲ್ಲಿ, ನೋಹನು ಒಂದು ನಾವೆಯನ್ನು ಕಟ್ಟಿದ್ದನೆಂದು ಶಾಸ್ತ್ರ ವಚನಗಳು ತಿಳಿಸುತ್ತವೆ. ಅವು ಇದನ್ನೂ ತಿಳಿಸುತ್ತವೆ: “ನೋಹನೂ ಅವನೊಂದಿಗೆ ನಾವೆಯಲ್ಲಿದ್ದ ಜೀವಿಗಳು ಮಾತ್ರವೇ ಉಳಿದರು.” (ಆದಿಕಾಂಡ 6:5-8; 7:23) ಬೈಬಲಿಗನುಸಾರ, ಜಲಪ್ರಲಯದ ಅನಂತರ, “ನಾವೆಯು ಅರಾರಾಟ್ ಸೀಮೆಯ ಬೆಟ್ಟಗಳ ಮೇಲೆ ನಿಂತಿತು,” ಮತ್ತು ಇಲ್ಲಿಯೇ ನೋಹ ಮತ್ತು ಅವನ ಕುಟುಂಬವು ನಾವೆಯಿಂದ ಇಳಿಯಿತು. (ಆದಿಕಾಂಡ 8:4, 15-18) ಪ್ರಲಯವನ್ನು ಪಾರಾದವರು ಅನಂತರ ಭೂಮಿಯನ್ನು ಜನರಿಂದ ತುಂಬಿಸ ತೊಡಗಿದರೆಂದು ಆ ಕಥೆಗಳು ತಿಳಿಸುವ ಪ್ರಕಾರ, ನೋಹನ ಕುಟುಂಬವು ಅದನ್ನು ಮಾಡಿತೆಂದು ಬೈಬಲು ತಿಳಿಸುತ್ತದೆ.—ಆದಿಕಾಂಡ 9:1; 10:1.
ಪುರಾತನ ಪ್ರಲಯ ಕಥೆಗಳು
ಮೇಲಿನ ವಿಷಯಗಳನ್ನು ಮನಸ್ಸಲ್ಲಿಟ್ಟವರಾಗಿ, ಕೆಲವು ಪ್ರಲಯ ಕಥೆಗಳನ್ನು ನಾವೀಗ ಗಮನಕ್ಕೆ ತರೋಣ. ಮೆಸಪೊಟೇಮಿಯದಲ್ಲಿ ನಿವಾಸಿಸಿದ್ದ ಪ್ರಾಚೀನ ಜನರಾದ ಸುಮೇರಿಯಾನರಿಂದ ನಾವದನ್ನು ಆರಂಭಿಸಬಹುದು. ಪ್ರಲಯದ ಕುರಿತಾದ ಅವರ ವಿವರಣೆಯು ನಿಪ್ಪರ್ನ ಅವಶೇಷಗಳಲ್ಲಿ ಅಗೆದು ತೆಗೆದ ಜೇಡಿಮಣ್ಣಿನ ಹಲಗೆಗಳಲ್ಲಿ ಕಂಡುಬರುತ್ತವೆ. ಸುಮೇರಿಯನ್ ದೇವರುಗಳಾದ ಅನು ಮತ್ತು ಇನ್ಲಿಲ್ ಒಂದು ದೊಡ್ಡ ಪ್ರಲಯದಿಂದ ಮಾನವಕುಲವನ್ನು ನಾಶಮಾಡಲು ಯೋಜಿಸಿದರು. ಎಂಕೆ ಎಂಬ ದೇವರಿಂದ ಎಚ್ಚರಿಸಲ್ಪಟ್ಟವನಾಗಿ ಝಿಯುಸುದ್ರ ಮತ್ತು ಅವನ ಕುಟುಂಬವು ಒಂದು ದೊಡ್ಡ ದೋಣಿಯಲ್ಲಿ ಪಾರಾಗಲು ಶಕ್ತರಾದರು.
ಬೆಬಿಲೋನ್ಯ ಮಹಾಕಾವ್ಯ ಗಿಲ್ಗಾಮೇಶ್ ಸವಿಸ್ತಾರ ವಿವರಣೆಗಳನ್ನು ಒಳಗೂಡಿದೆ. ಅದಕ್ಕನುಸಾರ, ಪ್ರಲಯವನ್ನು ಪಾರಾದ ಮೇಲೆ ನಿತ್ಯಜೀವವು ಕೊಡಲ್ಪಟ್ಟಿದ್ದ ತನ್ನ ಪೂರ್ವಜನಾದ ಯುಟ್ನಾಪಿಶ್ಟಿಮ್ನ್ನು ಗಿಲ್ಗಾಮೇಶನು ಸಂದರ್ಶಿಸಿದನು. ನಡೆದ ಸಂಭಾಷಣೆಯಲ್ಲಿ, ತನಗೆ ಒಂದು ಹಡಗನ್ನು ಕಟ್ಟುವಂತೆ ಮತ್ತು ಅದರೊಳಗೆ ದನಕರುಗಳನ್ನು, ವನ್ಯ ಮೃಗಗಳನ್ನು ಮತ್ತು ತನ್ನ ಕುಟುಂಬವನ್ನು ಒಯ್ಯುವಂತೆ ಹೇಳಲ್ಪಟ್ಟದ್ದನ್ನು ವಿವರಿಸುತ್ತಾನೆ. ಅವನು ಒಂದು ಹಡಗನ್ನು ಪ್ರತಿಪಕ್ಕದಲ್ಲಿ 60 ಮೀಟರ್ ಇದ್ದ ಘನಾಕೃತಿಯ ದಿಮ್ಮಿಯಂತೆ ಕಟ್ಟಿದನು ಮತ್ತು ಅದಕ್ಕೆ ಆರು ಮಾಳಿಗೆಗಳು ಇದ್ದವು. ಬಿರುಮಳೆಯು ಆರು ದಿನ ಮತ್ತು ಆರು ರಾತ್ರಿಗಳ ತನಕ ಇತ್ತೆಂದು ಅವನು ಗಿಲ್ಗಾಮೇಶನಿಗೆ ತಿಳಿಸುತ್ತಾನೆ ಮತ್ತು ಅವನಂದದ್ದು: “ಏಳನೆಯ ದಿನವು ಬಂದಾಗ, ಸೇನೆಯಂತೆ ಸದೆಬಡಿದ ಬಿರುಗಾಳಿ, ಪ್ರಲಯ ಮತ್ತು ಯುದ್ಧದ ಧಕ್ಕೆಯು ಹೋಗಿತ್ತು, ಸಮುದ್ರವು ಶಾಂತವಾಯಿತು, ಬಿರುಗಾಳಿ ನಿಂತಿತು ಮತ್ತು ನೆರೆಯು ಇಳಿದು ಹೋಯಿತು. ನಾನು ಸಮುದ್ರದೆಡೆಗೆ ನೋಡಿದಾಗ ಸರ್ವಗಳ ಸದ್ದು ಅಡಗಿದ್ದವು. ಮನುಷ್ಯ ಕುಲವೆಲ್ಲಾ ಜೇಡಿಮಣ್ಣಾಗಿ ಮಾರ್ಪಟ್ಟಿದ್ದರು.”
ಹಡಗವು ನಿಸಿರ್ ಬೆಟ್ಟದ ಮೇಲೆ ಬಂದು ನಿಂತಾಗ. ಯುಟ್ನಾಪಿಶ್ಟಿಮ್ ಒಂದು ಪಾರಿವಾಳವನ್ನು ಹೊರಗೆ ಬಿಟ್ಟನು. ಅದಕ್ಕೆ ವಿಶ್ರಮ-ಸ್ಥಾನವು ದೊರೆಯದ ಕಾರಣ ಅದು ದೋಣಿಗೆ ಹಿಂತಿರುಗಿ ಬಂತು. ಇದನ್ನು ಹಿಂಬಾಲಿಸಿ ಒಂದು ಸ್ವಾಲೋ ಹಕ್ಕಿಯನ್ನು ಕಳುಹಿಸಿದನು, ಅದು ಕೂಡಾ ಹಿಂದೆ ಬಂತು. ಅನಂತರ ಒಂದು ಡೊಂಬ ಕಾಗೆಯನ್ನು ಕಳುಹಿಸಿದನು ಮತ್ತು ಅದು ಹಿಂದೆ ಬಾರದೆ ಇದ್ದಾಗ, ನೀರು ಇಳಿಯಿತೆಂದು ಅವನಿಗೆ ತಿಳಿಯಿತು. ಯುಟ್ನಾಪಿಶ್ಟಿಮ್ ಅನಂತರ ಪಶುಗಳನ್ನು ಹೊರಗೆ ಬಿಟ್ಟನು ಮತ್ತು ಒಂದು ಯಜ್ಞವನ್ನು ಅರ್ಪಿಸಿದನು.
ಈ ಅತಿ ಪುರಾತನ ಕಥೆಯು ಬೈಬಲಿನ ಜಲಪ್ರಲಯದ ವೃತ್ತಾಂತಕ್ಕೆ ಕೊಂಚಮಟ್ಟಿಗೆ ಸಾಮ್ಯತೆಯಲ್ಲಿದೆ. ಆದರೂ ಅದರಲ್ಲಿ ಬೈಬಲ್ ದಾಖಲೆಯ ಸುಸ್ಪಷ್ಟ ವಿವರಗಳ ಮತ್ತು ಸರಳತೆಯ ಕೊರತೆ ಇದೆ. ಅಲ್ಲದೆ ಅದು ನಾವೆಯ ಗಾತ್ರದ ಪರಿಮಾಣಗಳನ್ನಾಗಲಿ ಶಾಸ್ತ್ರವಚನದಲ್ಲಿ ಸೂಚಿಸಲ್ಪಟ್ಟ ಕಾಲಾವಧಿಯನ್ನಾಗಲಿ ತಿಳಿಸುವುದಿಲ್ಲ. ಉದಾಹರಣೆಗೆ, ಬಿರುಮಳೆಯು ಆರು ದಿನಗಳು ಮತ್ತು ಆರು ರಾತ್ರಿಗಳ ತನಕ ಇತ್ತೆಂದು ಗಿಲ್ಗಾಮೇಶನ ಮಹಾ ಕಾವ್ಯವು ಹೇಳುವಾಗ, ಬೈಬಲಾದರೋ “ನಾಲ್ವತ್ತು ದಿನವೂ ಹಗಲಿರುಳು ಭೂಮಿಯ ಮೇಲೆ ದೊಡ್ಡ ಮಳೆ ಸುರಿಯಿತು,”—ಕಟ್ಟಕಡೆಗೆ ಇಡೀ ಭೂಗೋಲವನ್ನೇ ಆವರಿಸಿಬಿಟ್ಟ ಭಾರೀ ಮಳೆಯು ಸುರಿಯಿತು ಎಂದು ಹೇಳಿದೆ.—ಆದಿಕಾಂಡ 7:12.
ಜಲಪ್ರಲಯವನ್ನು ಪಾರಾದವರು ಎಂಟು ಮಂದಿಯೆಂದು ಬೈಬಲು ಹೇಳುತ್ತದಾದರೂ, ಗ್ರೀಕ್ ಐತಿಹ್ಯವು ಡ್ಯುಕಾಲ್ಯನ್ ಮತ್ತು ಅವನ ಪತ್ನಿ ಪೈರಾ ಇವರಿಬ್ಬರೇ ಪಾರಾದರೆಂದು ಹೇಳುತ್ತದೆ. (2 ಪೇತ್ರ 2:5) ಈ ಐಹಿತ್ಯಕ್ಕೆ ಅನುಸಾರವಾಗಿ, ಜಲಪ್ರಲಯಕ್ಕೆ ಮುಂಚೆ ಕಂಚಿನ ಪುರುಷರೆಂದು ಕರೆಯಲ್ಪಡುವ ಕ್ರೂರ ವ್ಯಕ್ತಿಗಳಿಂದ ಭೂಮಿಯು ನಿವಾಸಿಸಲ್ಪಟ್ಟಿತ್ತು. ಝೀಯಸ್ ದೇವರು ಒಂದು ಮಹಾ ಜಲಪ್ರಲಯದ ಮೂಲಕ ಅವರನ್ನು ನಾಶಮಾಡಲು ನಿರ್ಧರಿಸಿದನು ಮತ್ತು ಡ್ಯುಕಾಲ್ಯನ್ಗೆ ಒಂದು ದೊಡ್ಡ ಪೆಟ್ಟಿಗೆಯನ್ನು ಮಾಡಿ ಅದರೊಳಗೆ ಹೋಗುವಂತೆ ಹೇಳಿದನು. ಪ್ರಲಯವು ಇಳಿದಾಗ ಆ ಪೆಟ್ಟಿಗೆಯು ಪರ್ನಾಸಸ್ ಬೆಟ್ಟದ ಮೇಲೆ ಬಂದಿಳಿಯಿತು. ಡ್ಯುಕಾಲ್ಯನ್ ಮತ್ತು ಪೈರಾ ಬೆಟ್ಟದಿಂದ ಇಳಿದು ಬಂದು ಪುನಃ ಮಾನವ ಕುಲವನ್ನು ಪ್ರಾರಂಭಿಸಿದರು.
ತೀರಾ ಪೂರ್ವದ ಐಹಿತ್ಯಗಳು
ಭಾರತದಲ್ಲಿನ ಪ್ರಲಯ ಐಹಿತ್ಯದಲ್ಲಿ ಮನು ಎಂಬ ಮನುಷ್ಯನು ಪಾರಾಗಿ ಉಳಿದವನು. ಅವನು ಒಂದು ಚಿಕ್ಕ ಮೀನಿನ ಸ್ನೇಹವನ್ನು ಮಾಡುತ್ತಾನೆ, ಅದು ಗಾತ್ರದಲ್ಲಿ ದೊಡ್ಡದಾಗಿ ಬರಲಿರುವ ಒಂದು ವಿನಾಶಕರ ಪ್ರಲಯದ ಕುರಿತಾಗಿ ಅವನನ್ನು ಎಚ್ಚರಿಸುತ್ತದೆ. ಮನು ಒಂದು ದೋಣಿಯನ್ನು ಕಟ್ಟುತ್ತಾನೆ, ಆ ಮೀನು ಅದನ್ನು ಹಿಮಾಲಯದ ಒಂದು ಬೆಟ್ಟದ ಮೇಲೆ ಇಳಿಸುವ ತನಕ ಎಳೆದುಕೊಂಡು ಹೋಗುತ್ತದೆ. ಪ್ರಲಯವು ನಿಂತಾಗ, ಮನು ಅವನ ತ್ಯಾಗದ ವ್ಯಕ್ತೀಕರಣವಾದ ಐಡಳೊಂದಿಗೆ ಬೆಟ್ಟದಿಂದ ಇಳಿದು ಬಂದು, ಮಾನವ ಜಾತಿಯ ನವೀಕರಣವನ್ನು ಮಾಡುತ್ತಾನೆ.
ಚೀನಿಯರ ಪ್ರಳಯ ಐಹಿತ್ಯಕ್ಕೆ ಅನುಸಾರವಾಗಿ, ಗುಡುಗು ದೇವರು ನ್ಯುವ ಮತ್ತು ಫ್ಯೂಸೆ ಎಂಬ ಇಬ್ಬರು ಮಕ್ಕಳಿಗೆ ಒಂದು ಹಲ್ಲನ್ನು ಕೊಡುತ್ತಾನೆ. ಅದನ್ನು ನೆಡುವಂತೆ ಮತ್ತು ಅದರಿಂದ ಬೆಳೆಯುವ ಕುಂಬಳದಲ್ಲಿ ಆಶ್ರಯವನ್ನು ತಕ್ಕೊಳ್ಳುವಂತೆ ಸೂಚಿಸುತ್ತಾನೆ. ಹಲಿನ್ಲೊಳಗಿಂದ ಒಂದು ಮರವು ಥಟ್ಟನೆ ಬೆಳೆಯುತ್ತದೆ ಮತ್ತು ಒಂದು ದೊಡ್ಡ ಕುಂಬಳವನ್ನು ಉತ್ಪಾದಿಸುತ್ತದೆ. ಗುಡುಗು ದೇವರು ಧಾರಾಕಾರವಾದ ಮಳೆಯನ್ನು ಸುರಿಸಿದಾಗ, ಮಕ್ಕಳು ಆ ಕುಂಬಳಕಾಯಿಯ ಮೇಲೆ ಹತ್ತುತ್ತಾರೆ. ಬಂದ ನೆರೆಯಿಂದಾಗಿ ಭೂಮಿಯಲ್ಲಿದ್ದ ಬೇರೆಯವರೆಲ್ಲರು ಮುಳುಗಿ ಹೋದರೂ ನ್ಯುವ ಮತ್ತು ಫ್ಯೂಸಿ ಪಾರಾಗಿ ಉಳಿಯುತ್ತಾರೆ ಮತ್ತು ಭೂಗೋಲವನ್ನು ಜನರಿಂದ ಪುನಃತುಂಬಿಸುತ್ತಾರೆ.
ಅಮೆರಿಕ ಖಂಡದಲ್ಲಿ
ಉತ್ತರ ಅಮೆರಿಕದ ಇಂಡಿಯನರಲ್ಲಿ, ಕೆಲವೇ ಮಂದಿಯನ್ನು ಬಿಟ್ಟು ಬೇರೆಲ್ಲರನ್ನು ನಾಶಗೊಳಿಸುವ ಒಂದು ಜಲಪ್ರಲಯದ ಸಾಮಾನ್ಯ ಮುಖ್ಯ ವಿಷಯವನ್ನೊಳಗೊಂಡ ಹಲವಾರು ಪುರಾಣ ಕಥೆಗಳಿವೆ. ದೃಷ್ಟಾಂತಕ್ಕಾಗಿ, ಭೂಮಿಯಲ್ಲಿ ಒಮ್ಮೆ ಎಷ್ಟು ಬಲಾಢ್ಯ ಜನರು ಜೀವಿಸುತ್ತಿದ್ದರೆಂದರೆ ಅವರು ದೇವರುಗಳನ್ನೇ ನಿಂದಿಸ ತೊಡಗಿದರೆಂದು ಎರಿಕಾರ, ಕ್ಯಾಡೋ ಜನರು ಹೇಳುತ್ತಾರೆ. ನಿಸಾರು ಎಂಬ ದೇವರು ಒಂದು ಪ್ರಳಯದ ಮೂಲಕ ಈ ದೈತ್ಯರನ್ನು ನಾಶಗೊಳಿಸಿ ತನ್ನ ಜನರನ್ನು, ಪಶುಗಳನ್ನು ಮತ್ತು ಜೋಳವನ್ನು ಒಂದು ಗವಿಯಲ್ಲಿ ಕಾಪಾಡಿದನು. ಹವೆಸುಪಿ ಜನರು ಹೇಳುವುದೇನಂದರೆ ಹೊಕೊಮಾಟ ದೇವರು ಮಾನವ ಕುಲವನ್ನು ನಾಶಮಾಡಿದ ಒಂದು ಪ್ರಲಯವನ್ನು ಬರಮಾಡಿದನು. ಆದರೆ ಟೊಚೊಪ ಎಂಬ ಮನುಷ್ಯನು ತನ್ನ ಮಗಳಾದ ಪ್ಯೂಕೆಹೆಯನ್ನು ಒಂದು ಟೊಳ್ಳಾದ ಮರದ ದಿಮ್ಮಿಯಲ್ಲಿ ಭದ್ರವಾಗಿ ಮುಚ್ಚಿಟ್ಟ ಮೂಲಕ ಕಾಪಾಡಿ ಉಳಿಸಿದನು.
ದಕ್ಷಿಣ ಮತ್ತು ಮಧ್ಯ ಅಮೆರಿಕದ ಇಂಡಿಯನ್ರಲ್ಲೂ ತದ್ರೀತಿಯ ಮೂಲಭೂತ ಸಾಮ್ಯತೆಗಳುಳ್ಳ ಐಹಿತ್ಯಗಳಿವೆ. ಒಂದು ಮಹಾ ವೃಷ್ಠಿ ಸರ್ಪವು ಒಂದು ಬಿರುಮಳೆಯ ಮೂಲಕ ಲೋಕವನ್ನು ನಾಶಗೊಳಿಸಿತು ಎಂದು ಮಧ್ಯ ಅಮೆರಿಕದ ಮಾಯ ಜನರು ನಂಬುತ್ತಾರೆ. ಒಂದು ಜಲಪ್ರಲಯವು ಬೆಟ್ಟಗಳನ್ನೂ ಮುಳುಗಿಸಿಬಿಟ್ಟಿತು ಎಂಬದಾಗಿ ಮೆಕ್ಸಿಕೋದ ಚಿಮಲ್ಪಪಾಕ ಕಥೆಯು ಹೇಳುತ್ತದೆ. ಟೆಝ್ಕಾಟೆಪ್ಲಾಕ ದೇವರು ನೇಟ ಎಂಬ ಮನುಷ್ಯನಿಗೆ ಎಚ್ಚರಿಕೆ ಕೊಟ್ಟಾಗ ಅವನು ಒಂದು ಮರದ ದಿಮ್ಮಿಯನ್ನು ಕೊರೆದು ಪ್ರಲಯದ ನೀರು ಇಳಿಯುವ ತನಕ ತನಗೂ ತನ್ನ ಪತ್ನಿ ನೇನಳಿಗೂ ಆಶ್ರಯವನ್ನು ಕಂಡುಕೊಂಡನು.
ಪೆರುನಲ್ಲಿ ಚೆಂಚಾ ಜನರ ಪುರಾಣ ಕಥೆಯು ಐದು ದಿನಗಳ ಪ್ರಲಯವು ಒಬ್ಬನನ್ನು ಬಿಟ್ಟು ಬೇರೆಲ್ಲಾ ಮನುಷ್ಯರನ್ನು ನಾಶ ಮಾಡಿತೆಂದು ಹೇಳುತ್ತದೆ, ಅವನನ್ನು ಒಂದು ಮಾತಾಡುವ ಲಾಮಾ ಬೆಟ್ಟದ ಮೇಲೆ ಸುರಕ್ಷೆಗೆ ನಡಿಸಿತಂತೆ. ಪೆರು ಮತ್ತು ಬೊಲೀವಿಯದ ಐಮಾರ ಹೇಳುವುದೇನಂದರೆ ವೆರಾಹೋಚ ದೇವರು ಟಿಟೀಕಕ ಕೊಳದಿಂದ ಹೊರಬಂದು ಒಂದು ಲೋಕವನ್ನು ಮತ್ತು ಅಸಾಧಾರಣ ಗಾತ್ರದ ಬಲಾಢ್ಯ ಪುರುಷರನ್ನು ನಿರ್ಮಿಸಿದನು. ಈ ಮೊದಲ ಜಾತಿಯು ಆತನನ್ನು ಕೋಪಗೊಳಿಸಿದರ್ದಿಂದ, ವೆರಾಹೋಚನು ಅವರನ್ನು ಜಲಪ್ರಲಯದಿಂದ ನಾಶಗೊಳಿಸಿದನು.
ಚಿಕ್ಕ ನಾವೆಗಳಲ್ಲಿ ಮತ್ತು ಎತ್ತರವಾದ ಮರದ ತುದಿಯಲ್ಲಿ ಇದುದ್ದರಿಂದ ಪಾರಾದ ತಮ್ಮೆಲ್ಲಾ ಪೂರ್ವಜರನ್ನು ಬಿಟ್ಟು ಇತರರೆಲ್ಲರನ್ನೂ ಮುಳುಗಿಸಿಬಿಟ್ಟ ಒಂದು ಮಹಾ ಪ್ರಲಯದ ಕುರಿತು ಬ್ರಾಜಿಲ್ನ ಟ್ಯುಪೆನಂಬ ಇಂಡಿಯನರು ಮಾತಾಡುತ್ತಾರೆ. ಬ್ರಾಜಿಲ್ನ ಕಾಶೆನಾವ, ಗಯಾನದ ಮಕ್ಕೂಶಿ, ಮಧ್ಯ ಅಮೆರಿಕದ ಕ್ಯಾರಿಬ್ರು, ದಕ್ಷಿಣ ಅಮೆರಿಕದ ಟಯಾರಡೆಲ್ ಫ್ಯೂಗೊದ ಓನರು ಮತ್ತು ಯಾಗನರು ಪ್ರಲಯದ ಕಥೆಗಳಿಗರುವ ಅನೇಕ ಕುಲಗಳಲ್ಲಿ ಕೆಲವರು.
ದಕ್ಷಿಣ ಪ್ಯಾಸಿಫಿಕ್ ಮತ್ತು ಏಷ್ಯಾ
ದಕ್ಷಿಣ ಪೆಸಿಫಿಕ್ನಲ್ಲೆಲ್ಲೂ ಕೆಲವೇ ಮಂದಿ ಪಾರಾದವರಿರುವ ಪ್ರಲಯದ ಕಥೆಗಳು ಸರ್ವಸಾಮಾನ್ಯವಾಗಿವೆ. ದೃಷ್ಟಾಂತಕ್ಕೆ ಸಮೋವದಲ್ಲಿ, ಪೀಲೆ ಮತ್ತು ಅವನ ಪತ್ನಿಯನ್ನು ಬಿಟ್ಟು ಬೇರೆಲ್ಲರನ್ನು ನಾಶಗೊಳಿಸಿದ ಆದಿಕಾಲದ ಒಂದು ಪ್ರಳಯದ ಕುರಿತಾದ ಪುರಾತನ ಕಥೆಗಳಿವೆ. ಅವರು ಒಂದು ಬಂಡೆಯ ಮೇಲೆ ಸುರಕ್ಷೆಯನ್ನು ಪಡೆದರು ಮತ್ತು ಪ್ರಲಯದ ನಂತರ ಭೂಮಿಯಲ್ಲಿ ಪುನಃ ಜನನಿವಾಸಗೊಳಿಸಿದರು. ಹವಾಇಯನ್ ದ್ವೀಪಗಳಲ್ಲಿ ಕೇನ್ ದೇವರು ಮಾನವರೊಂದಿಗೆ ಕೋಪಗೊಂಡು ಅವರನ್ನು ನಾಶಗೊಳಿಸಲು ಒಂದು ಜಲಪ್ರಲಯವನ್ನು ಬರಮಾಡಿದನು. ನೂವು ಮಾತ್ರವೇ ಒಂದು ದೊಡ್ಡ ದೋಣಿಯಲ್ಲಿ ಪಾರಾದನು, ಅದು ಕೊನೆಗೆ ಒಂದು ಬೆಟ್ಟದ ಮೇಲೆ ಬಂದಿಳಿಯಿತು.
ಫಿಲಿಪ್ಪೀನ್ನ ಮಿಂಡಾನೊದಲ್ಲಿ ಅಟಾ ಹೇಳುವದೇನಂದರೆ ಇಬ್ಬರು ಪುರುಷರು ಮತ್ತು ಒಬ್ಬ ಸ್ತ್ರೀಯನ್ನು ಬಿಟ್ಟು ಪ್ರತಿಯೊಬ್ಬರೂ ಭೂಮಿಯನ್ನು ಒಮ್ಮೆ ಆವರಿಸಿದ್ದ ನೀರಿನಿಂದ ನಾಶವಾದರು ಎಂಬದಾಗಿ. ಎತ್ತರವಾದ ಬೆಟ್ಟಗಳಿಗೆ ಪಲಾಯನಗೈಯುವ ಮೂಲಕ ಕೇವಲ ಕೆಲವರು ಮಾತ್ರವೇ ಪಾರಾದರು ಎಂಬದಾಗಿ ಬೊರ್ನಿಯೋದ ಸರಾವಕ್ನ ಇಬಾನ್ರು ಹೇಳುತ್ತಾರೆ. ಫಿಲಿಪ್ಪೀನ್ಸ್ನ ಇಗಾರಟ್ ಪುರಾಣ ಕಥೆಯಲ್ಲಿ ಒಬ್ಬ ಸಹೋದರ ಮತ್ತು ಸಹೋದರಿ ಮಾತ್ರವೇ ಪೊಕೆಸ್ ಬೆಟ್ಟದ ಮೇಲೆ ಆಶ್ರಯ ತಕ್ಕೊಂಡ ಮೂಲಕ ಪಾರಾದರು ಎಂದು ಹೇಳಿಯದೆ.
ರಷ್ಯಾದ ಸೈಬೀರಿಯದಲ್ಲಿನ ಸೊಯೊಟ್ ಹೇಳುವುದೇನಂದರೆ ಭೂಮಿಯ ಆಧಾರವಾಗಿದ್ದ ಒಂದು ದೊಡ್ಡ ಕಪ್ಪೆಯು ತನ್ನ ಸ್ಥಾನದಿಂದ ಚಲಿಸಿದ ಕಾರಣ ಇಡೀ ಭೂಗೋಲವೇ ಪ್ರಲಯದಿಂದ ತುಂಬಿತು ಎಂಬದಾಗಿ. ಒಬ್ಬ ವೃದ್ಧ ಮನುಷ್ಯನು ಮತ್ತು ಅವನ ಕುಟುಂಬವು ಅವನು ಕಟ್ಟಿದ ಒಂದು ತೆಪ್ಪೆಯ ಮೇಲೆ ಕೂತು ಪಾರಾದರು. ನೀರು ಕೆಳಗಿಳಿದಾಗ, ತೆಪ್ಪೆಯು ಒಂದು ಎತ್ತರವಾದ ಬೆಟ್ಟದ ಮೇಲೆ ಬಂದಿಳಿಯಿತು. ಪ್ರಲಯವನ್ನು ಪಾರಾದವರು ತೆಪ್ಪೆಗಳನ್ನುಪಯೋಗಿಸಿದ್ದರೆಂದು, ಆದರೆ ಭೂಮಿಯ ಬೇರೆ ಬೇರೆ ಕಡೆ ಹೊಡಕೊಂಡು ಹೋದರು ಎಂದು ಪಶ್ಚಿಮ ಸೈಬೀರಿಯ ಮತ್ತು ಹಂಗೆರಿಯ ಉಗ್ರಿಯರು ಸಹಾ ಹೇಳುತ್ತಾರೆ.
ಸರ್ವಸಾಮಾನ್ಯ ಮೂಲ
ಈ ಅನೇಕಾನೇಕ ಪ್ರಲಯ ಐಹಿತ್ಯಗಳಿಂದ ನಾವು ಯಾವ ತೀರ್ಮಾನಕ್ಕೆ ಬರಬಹುದು? ಅವು ವಿವರಣೆಗಳಲ್ಲಿ ಬಹಳಷ್ಟು ವ್ಯತ್ಯಾಸವುಳ್ಳವುಗಳಾದಾಗ್ಯೂ, ಕೆಲವು ಸರ್ವ ಸಾಮಾನ್ಯ ವೈಶಿಷ್ಟ್ಯಗಳು ಅವುಗಳಲ್ಲಿವೆ. ಇವು ಒಂದು ಬ್ರಹದಾಕಾರದ ಮತ್ತು ಮರೆಯಲಾಗದ ಮೂಲವನ್ನು ಸೂಚಿಸುತ್ತದೆ. ಶತಮಾನಗಳಲ್ಲಿ ಕಥೆಯಲ್ಲಿ ತೀವ್ರ ವೈವಿಧ್ಯತೆಗಳು ಉಂಟಾದಾಗ್ಯೂ ಅವುಗಳ ಒಳಗಣ ಮುಖ್ಯ ವಿಷಯವು ಒಂದು ಮಹಾ ಘಟನೆಗೆ—ಸುಸರಳ ಬೈಬಲ್ ವೃತ್ತಾಂತಕ್ಕೆ ಸಂಬಂಧಿಸಿದ ಒಂದು ಭೌಗೋಲಿಕ ಜಲಪ್ರಲಯಕ್ಕೆ ಅವನ್ನು ಪೋಣಿಸುವ ಒಂದು ದಾರದಂತಿದೆ.
ಪ್ರಲಯ ಐಹಿತ್ಯಗಳು ಇತ್ತೀಚಿನ ಶತಮಾನಗಳ ತನಕ ಬೈಬಲಿನ ಸಂಪರ್ಕಕ್ಕೆ ಬಾರದಿರುವ ಜನರೊಂದಿಗೆ ಸಾಮಾನ್ಯವಾಗಿ ಕಂಡುಬರುವುದರಿಂದ, ಶಾಸ್ತ್ರೀಯ ದಾಖಲೆಯು ಅವರನ್ನು ಪ್ರಭಾವಿಸಿತು ಎಂದನ್ನುವುದು ತಪ್ಪಾಗಿರುವುದು. ಅದಲ್ಲದೆ, ದಿ ಇಂಟರ್ನೇಶನಲ್ ಸ್ಟಾಂಡರ್ಡ್ ಬೈಬಲ್ ಎನ್ಸೈಕ್ಲೊಪೀಡಿಯ ಹೇಳುವುದು: “ಪ್ರಲಯದ ದಾಖಲೆಗಳ ವಿಶ್ವವ್ಯಾಪಕತೆಯು ಪ್ರಲಯದ ಮೂಲಕ ಮಾನವಕುಲದ ಸಾರ್ವತ್ರಿಕ ನಾಶನಕ್ಕೆ ಒಂದು ರುಜುವಾತಾಗಿ ಸಾಮಾನ್ಯವಾಗಿ ತಕ್ಕೊಳ್ಳಲಾಗುತ್ತದೆ. . . . ಅದಲ್ಲದೆ, ಕೆಲವು ಪುರಾತನ ದಾಖಲೆಗಳು ಇಬ್ರಿಯ-ಕ್ರೈಸ್ತ ಸಂಪ್ರದಾಯಕ್ಕೆ ತೀರಾ ವಿರುದ್ಧವಾಗಿದ್ದ ಜನರಿಂದ ಬರೆಯಲ್ಪಟ್ಟವುಗಳು.” (ಸಂಚಿಕೆ 2, ಪುಟ 319) ಹೀಗೆ ನಾವು ಆತ್ಮವಿಶ್ವಾಸದಿಂದ ತೀರ್ಮಾನಿಸಬಹುದೇನಂದರೆ ಪ್ರಲಯ ಐಹಿತ್ಯಗಳು ಬೈಬಲ್ ದಾಖಲೆಯ ನಿಜತ್ವವನ್ನು ದೃಢೀಕರಿಸುತ್ತವೆ ಎಂಬದಾಗಿ.
ಹಿಂಸಾಚಾರ ಮತ್ತು ಅನೈತಿಕತೆಯಿಂದ ತುಂಬಿರುವ ಒಂದು ಲೋಕದಲ್ಲಿ ನಾವು ಜೀವಿಸುತ್ತಾ ಇರುವುದರಿಂದ, ಆದಿಕಾಂಡ ಅಧ್ಯಾಯ 6ರಿಂದ 8ರ ತನಕ ದಾಖಲೆಯಾದ ಜಲಪ್ರಲಯದ ಬೈಬಲ್ ವೃತ್ತಾಂತವನ್ನು ನಾವು ಓದುವುದು ನಮಗೆ ಒಳ್ಳೆಯದು. ಆ ವಿಶ್ವ-ವ್ಯಾಪಕ ಜಲಪ್ರಲಯಕ್ಕೆ ಕಾರಣವನ್ನು—ದೇವರ ದೃಷ್ಟಿಯಲ್ಲಿ ಯಾವುದು ದುಷ್ಟತೆಯೋ ಅದನ್ನು ನಡಿಸುವುದನ್ನು—ನಾವು ಅವಲೋಕಿಸುವಲ್ಲಿ, ಒಂದು ಮಹತ್ತಾದ ಎಚ್ಚರಿಕೆಯನ್ನು ನಾವದರಲ್ಲಿ ಕಾಣುವೆವು.
ಬೇಗನೇ ಸದ್ಯ ದುಷ್ಟ ವ್ಯವಸ್ಥೆಯ ದೇವರ ಪ್ರತಿಕೂಲ ತೀರ್ಪನ್ನು ಅನುಭವಿಸುವುದು. ಸಂತೋಷಕರವಾಗಿ, ಪಾರಾಗುವವರು ಅಲ್ಲಿರುವರು. ಅಪೊಸ್ತಲ ಪೇತ್ರನ ಮಾತುಗಳನ್ನು ನೀವು ಪಾಲಿಸುವುದಾದರೆ, ನೀವೂ ಅವರೊಂದಿಗಿರಬಹುದು: “ಆ ನೀರುಗಳಿಂದಲೇ ಆ ಕಾಲದಲ್ಲಿದ್ದ [ನೋಹನ] ಲೋಕವು ಜಲಪ್ರಲಯದಲ್ಲಿ ನಾಶವಾಯಿತು. ಆದರೆ ಈಗಿರುವ ಭೂಮ್ಯಾಕಾಶಗಳು ಅದೇ ವಾಕ್ಯದ ಬಲದಿಂದ ಬೆಂಕಿಯ ಮೂಲಕವಾಗಿ ನಾಶವಾಗುವದಕ್ಕಾಗಿ ಇಡಲ್ಪಟ್ಟಿದೆ ಮತ್ತು ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ಆ ದಿನಕ್ಕಾಗಿ ಆ ಬೆಂಕಿ ಸಿದ್ಧವಾಗಿದೆ. . . . ಇವುಗಳು ಹೀಗೆ ಲಯವಾಗಿ ಹೋಗುವುದರಿಂದ ನೀವು ಯೆಹೋವನ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಮನಸ್ಸಿನಲ್ಲಿ ನಿಕಟವಾಗಿಡುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ.”—2 ಪೇತ್ರ 3:6-12.
ಯೆಹೋವನ ದಿನದ ಪ್ರತ್ಯಕ್ಷತೆಯನ್ನು ನಿಮ್ಮ ಮನಸ್ಸಿನಲ್ಲಿ ನೀವು ನಿಕಟವಾಗಿ ಇಡುವಿರೋ? ಹಾಗೆ ಮಾಡುವುದಾದರೆ ಮತ್ತು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ನಡೆಯುವುದಾದರೆ, ಮಹಾ ಆಶೀರ್ವಾದಗಳನ್ನು ನೀವು ಆನಂದಿಸುವಿರಿ. ಯಾರು ಹೀಗೆ ಯೆಹೋವ ದೇವರನ್ನು ಮೆಚ್ಚಿಸುತ್ತಾರೋ ಅವರು ಪೇತ್ರನು ಸೂಚಿಸಿರುವ ಆ ನೂತನ ಲೋಕದಲ್ಲಿ ನಂಬಿಕೆಯನ್ನಿಡ ಸಾಧ್ಯವಿದೆ, ಅವನು ಕೂಡಿಸಿದ್ದು: “ನೂತನಾಕಾಶವನ್ನೂ ನೂತನ ಭೂಮಿಯನ್ನೂ [ದೇವರ] ವಾಗ್ದಾನಕ್ಕನುಸಾರ ನಾವು ಎದುರುನೋಡುತ್ತಾ ಇದ್ದೇವೆ; ಮತ್ತು ಅವುಗಳಲ್ಲಿ ನೀತಿಯು ವಾಸವಾಗಿರುವುದು.”—2 ಪೇತ್ರ 3:13. (w92 1/15)
[ಪುಟ 7 ರಲ್ಲಿರುವ ಚಿತ್ರ]
ಬೆಬಿಲೋನ್ಯ ಪ್ರಲಯ ಐತಿಹ್ಯಗಳು ಒಂದು ಸಂತತಿಯಿಂದ ಇನ್ನೊಂದು ಸಂತತಿಗೆ ದಾಟಿಸಲ್ಪಟ್ಟವು
[ಪುಟ 8 ರಲ್ಲಿರುವ ಚಿತ್ರ]
ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿಡುವ ಮೂಲಕ ಪೇತ್ರನ ಎಚ್ಚರಿಕೆಯನ್ನು ನೀವು ಪಾಲಿಸುತ್ತೀರೋ?