ಅವರು ಜೇನುನೊಣಗಳಿಂದ ಕಲಿಯಬಲ್ಲರು
“ಇತ್ತೀಚಿನ ವರ್ಷಗಳಲ್ಲಿ ಎಂಜಿನಿಯರರು ಮತ್ತು ಉತ್ಪಾದನೆ ನಕ್ಷೆಗಾರರು, ಜೇನುನೊಣಗಳಿಗೆ ಯಾವಾಗಲೂ ತಿಳಿದಿದ್ದಂತೆ ತೋರುವ ಒಂದು ವಿಷಯವನ್ನು ಅಧಿಕಾಧಿಕವಾಗಿ ಮನಗಂಡಿರುತ್ತಾರೆ. ಅತಿ ತೆಳ್ಳನೆಯ ವಸ್ತುವಿಗೆ ಸಹ ಆರು-ಪಕ್ಕವುಳ್ಳ ಜೇನುಗೂಡಿನ ನಮೂನೆಯ ಆಕೃತಿಯನ್ನು ಕೊಡುವುದರಿಂದ, ಅದು ಬೇರೆ ಕೆಲವು ಆಕೃತಿಗಿಂತ ಹೆಚ್ಚು ಗಡುಸನ್ನು ಪಡೆಯುತ್ತದೆ.”—ದ ನ್ಯೂ ಯಾರ್ಕ್ ಟೈಮ್ಸ್, ಅಕ್ಟೋಬರ್ 6, 1991.
ಕೀಟಗಳ ಜಾಗ್ರತೆಯುಕ್ತ ಅಧ್ಯಯನದಿಂದ ಮನುಷ್ಯರು ಲಾಭ ಪಡೆಯಬಲ್ಲರೆಂಬದೇನೂ ಆಶ್ಚರ್ಯವಲ್ಲ. ನಂಬಿಕೆಯ ಒಬ್ಬ ಪುರಾತನ ಮನುಷ್ಯ ಯೋಬನು ಒಮ್ಮೆ ಹೇಳಿದ್ದು: “ಮೃಗಗಳನ್ನು ವಿಚಾರಿಸು, ನಿನಗೆ ಉಪದೇಶ ಮಾಡುವವು; ಆಕಾಶದ ಪಕ್ಷಿಗಳನ್ನು ಕೇಳು, ನಿನಗೆ ತಿಳಿಸುವವು; . . . ಈ ಎಲ್ಲವುಗಳ ಸಾಕ್ಷಿಯಿಂದ ಕರ್ತನ [ಯೆಹೋವನ, NW] ಕೈಯೇ ಇದನ್ನು ಮಾಡುತ್ತದೆಂದು ಯಾರಿಗೆ ತಾನೇ ಗೊತ್ತಾಗುವದಿಲ್ಲ?” (ಯೋಬ 12:7-9) ಹೌದು, ಜೇನುಗೂಡಿನಲ್ಲಿ ನೀವು ಕಾಣಬಹುದಾದ ಕಣಗಳ ಷಡ್ಭುಜಾಕೃತಿಯಂಥ ಸಾಮಾನ್ಯ ವಿಷಯಗಳಲ್ಲಿ ನಿರ್ಮಾಣಿಕನ ವಿವೇಕವು ಪ್ರತ್ಯಕ್ಷವಾಗಿ ತೋರಿಬರುತ್ತದೆ.
ಈ ಕಣಗಳ ಮೇಣ ಗೋಡೆಗಳು ಕೇವಲ ಒಂದು ಮಿಲಿಮೀಟರಿನ ಮೂರನೆಯ ಒಂದಂಶ ದಪ್ಪವಿದ್ದರೂ, ಅವು ಅತ್ಯಂತ ಗಡುಸಾಗಿವೆ. ವಾಸ್ತವದಲ್ಲಿ ಅವು ತಮ್ಮ ಭಾರದ ಸುಮಾರು 30 ಪಾಲಷ್ಟು ಹೆಚ್ಚು ಭಾರವನ್ನು ಹೊರಬಲ್ಲವು.
ಉಪಕರಣಕ್ಕೆ ಧಕ್ಕೆ ತಾಗದಂತೆ ಮೆತ್ತೆಹಾಕುವಂತಹ ವ್ಯಾವಹಾರ್ಯ ಬಳಕೆಗಳಲ್ಲಿ ಈ ಗಡಸುತನವನ್ನು ಉಪಯೋಗಿಸ ಸಾಧ್ಯವಿದೆ. ಅದು ಮಿಲಿಟರಿ ಉಪಕರಣವನ್ನು ದುಮುಕುಕೊಡೆಯ ಮೂಲಕ ನೆಲಕ್ಕಿಳಿಸುವಾಗಲೂ ರಕ್ಷಣೆಯನ್ನು ಕೊಡುತ್ತದೆ. ದ ನ್ಯೂ ಯಾರ್ಕ್ ಟೈಮ್ಸ್ ಇದರ ಕುರಿತು ಗಮನಿಸಿದ್ದು: “ಜೀಪುಗಳಷ್ಟು ಭಾರವಾದ ವಸ್ತುಗಳನ್ನು ಕೆಳಗಿಳಿಸುವಾಗ ಇಳಿದಾಣದ ಧಕ್ಕೆಯನ್ನು ಹೀರಿಕೊಳ್ಳುವಂತೆ ಅಡಿಯಲ್ಲಿ ಜೇನುಗೂಡಿನ ದಿಮ್ಮಿಗಳಿರುವ ಜಗಲಿಗೆ ಅವುಗಳನ್ನು ಬಂಧಿಸಲಾಗುತ್ತದೆ.”
ಈ ನಮೂನೆಯ ಮಾನವ ನಿರ್ಮಿತ ಉತ್ಪಾದನೆಗಳನ್ನು ಅನೇಕ ವಸ್ತುಗಳಿಂದ ರೂಪಿಸ ಸಾಧ್ಯವಿದೆ. ಅತ್ಯಂತ ಸಾಮಾನ್ಯ ವಸ್ತುವು ಕಾಗದವೆಂದು ತೋರುತ್ತದೆ. ಕೆಲವು ದೊಡ್ಡ ವಿಮಾನಗಳ ಮೈಕಟ್ಟುಗಳಿಗೆ ಹೋಗುವ ಜೇನುಗೂಡನ್ನು ರಚಿಸಲು ನೈಲಾನ್-ನಾರಿನ ಕಾಗದ ಮತ್ತು ಕೃತಕ ರಾಳವನ್ನು ಉಪಯೋಗಿಸಲಾಗುತ್ತದೆ. ತುಲನಾತ್ಮಕವಾಗಿ ಕೊಂಚವೇ ಭಾರದಿಂದ ದೃಢತೆ ಬರುತ್ತದೆ. ಏಕೆ? ಅಂಕಣಗಳ ನಡುವಣ ಹೆಚ್ಚಿನ ತೆರಪು ಗಾಳಿಯದ್ದು, ಅದರ್ದಿಂದ ಭಾರ ಕಡಿಮೆ. ಗಾಳಿಗೆ ಒಳ್ಳೇ ನಿರೋಧಕ ಗುಣಗಳೂ ಇವೆ.
ಮುಗ್ದ ಜೇನುನೊಣಕ್ಕೆ ಇದೆಲ್ಲಾ ನಿಜವಾಗಿ “ಗೊತ್ತಿಲ್ಲ,” ಯಾಕೆಂದರೆ ಅದು ಎಂಜಿನಿಯರಿಂಗ್ನಲ್ಲಿ ಡಿಗ್ರಿಯನ್ನು ಪಡೆದಿಲ್ಲ. ಆದರೂ ನಿರ್ಮಾಣಿಕನಾದ ಯೆಹೋವನಿಂದ ಕೊಡಲ್ಪಟ್ಟ ಹುಟ್ಟರಿವಿನ ವಿವೇಕದಿಂದ ಅದು ಪ್ರತಿದಿನವೂ ತನ್ನ ಕೆಲಸವನ್ನು ಮಾಡುತ್ತಾ ಹೋಗುತ್ತದೆ. (w92 6/15)