ಸತ್ಯವು ಅನೇಕ ನೀರುಗಳ ಹಳ್ಳಿಯನ್ನು ಪೂರ್ತಿ ನೆನೆಸುತ್ತದೆ
ಎಂಥ ಸೋಜಿಗ! ಅದರ ಅನೇಕ ನೀರುಗಳಿಗಾಗಿ ಪ್ರಖ್ಯಾತವಾಗಿರುವ ದೇಶವೊಂದು ನೀರಡಿಕೆಯುಳ್ಳದ್ದಾಗಿದೆ! ಸಮೃದ್ಧ ಜಲಾಶಯದ ಪ್ರದೇಶವು ಒಣಗಿದ್ದೂ, ಬಸಿದುಹೋದದ್ದೂ ಆಗಿದ್ದಾಗಿ ಕಂಡುಬಂತು! ದೇವರ ವಾಕ್ಯವಾದ ಬೈಬಲಿನ ಸತ್ಯದ ಜಲದ ಮೂಲಕ ಮಾತ್ರವೇ ತಣಿಸಸಾಧ್ಯವಿರುವ ನೀರಡಿಕೆಯು ಅದಾಗಿದೆ. ಬೇರೂತ್ನಿಂದ ಸುಮಾರು 130 ಕಿಲೊಮೀಟರುಗಳಷ್ಟು ದೂರ, ಉತ್ತರ ಲೆಬನಾನಿನಲ್ಲಿರುವ ಪರ್ವತಗಳ ನಡುವೆ 2,200 ನಿವಾಸಿಗಳಿರುವ ಒಂದು ಚಿಕ್ಕ ಹಳ್ಳಿಯಾದ ರಬೆಯ ಕಥೆ ಇದಾಗಿದೆ.
ರಬೆ ಹೆಸರಿನ ಅರ್ಥ ಅರೆಬಿಕ್ನಲ್ಲಿ “ವಿಶಾಲವಾದ ಸ್ಥಳ” ಎಂದಾಗಿದೆ, ಮತ್ತು ಅದು “ವಿಸ್ತಾರವಾದ, ಹರಡಿರುವ” ಎಂದರ್ಥವಿರುವ ಸೆಮಿಟಿಕ್ ಮೂಲದಿಂದ ಬಂದಿರುತ್ತದೆ. ತಕ್ಕದ್ದಾಗಿಯೇ, ಸಮುದ್ರ ಮಟ್ಟದಿಂದ ಸುಮಾರು 600 ಮೀಟರುಗಳಷ್ಟು ಎತ್ತರದ ಎರಡು ದೊಡ್ಡ ಬೆಟ್ಟಗಳ ಮೇಲೆ ಈ ಹಳ್ಳಿಯು ಹರಡಿರುತ್ತದೆ. ಚಳಿಗಾಲದಲ್ಲಿ ಮತ್ತು ವಸಂತ ಋತುವಿನಲ್ಲಿ, ಪೂರ್ವದಲ್ಲಿ ಬೆಟ್ಟಗಳ ಮೇಲೆ, ಅದರ ಭವ್ಯತೆಗೆ ಕೂಡಿಸುವ ಹಿಮವನ್ನು ಕಾಣಸಾಧ್ಯವಿದೆ. ಆದರೆ, ಎಲ್ಲಕ್ಕಿಂತಲೂ ಹೆಚ್ಚಾಗಿ, ರಬೆ ಅನೇಕ ನೀರುಗಳ ಒಂದು ಹಳ್ಳಿಯಾಗಿರುತ್ತದೆ. ಆ ಪ್ರದೇಶದಲ್ಲಿ ಸಣ್ಣ, ದೊಡ್ಡ 360 ಒರತೆಗಳಿದ್ದು, ಆಸುಪಾಸಿನ ಕಣಿವೆಗಳಲ್ಲಿರುವ ಗೋದಿ, ಏಪ್ರಿಕಾಟ್, ಪೇರು, ಪೀಚ್, ಮತ್ತು ದ್ರಾಕ್ಷಿಗಳ ಫಲವತ್ತಾದ ಹೊಲಗಳಿಗೆ ಅಮೂಲ್ಯವಾದ ನೀರನ್ನು ಒದಗಿಸುತ್ತವೆ.
ರಬೆಯಲ್ಲಿ ಗತ ಮತ್ತು ಪ್ರಚಲಿತ ಸೇರುವಿಕೆ
ಬೈಬಲ್ ಸಮಯಗಳಿಂದ ರಬೆಯು ಹಲವಾರು ಸಂಗತಿಗಳಲ್ಲಿ ಅಂದಿನಂತೆಯೇ ಉಳಿದದೆ. ಹಳ್ಳಿಗಳಲ್ಲಿರುವ ಮನೆಗಳು ಒತ್ತೊತ್ತಾಗಿ ಒಟ್ಟಿಗೆ ಇವೆ. ರಸ್ತೆಗಳು ಇಕ್ಕಟ್ಟೂ, ಸುತ್ತುಸುತ್ತಾಗಿಯೂ ಇದ್ದು, ಮತ್ತು ಸಾಗಾಟ—ಕತ್ತೆಗಳು ಮತ್ತು ದನಗಳು—ದಿಂದ ತುಂಬಿರುತ್ತವೆ. ಕೆಲವು ಮೋಟರ್ ವಾಹನಗಳಿರುವುದಾದರೂ, ಪ್ರಾಣಿಗಳಿಗೆ ದಾರಿ-ಹಕ್ಕು ಇಲ್ಲಿ ಇದೆ. ಅವುಗಳ ಧಣಿಗಳು ಹೊಲದಲ್ಲಿ ತಮ್ಮ ಸರಕುಗಳೊಂದಿಗೆ ಹೆಚ್ಚಾಗಿ ಅವುಗಳನ್ನು ಹೇರುತ್ತಾರೆ, ಮತ್ತು ಅವುಗಳಾಗಿಯೇ ಮನೆಗೆ ಹೋಗುವಂತೆ ಕಳುಹಿಸುತ್ತಾರೆ. ಅವು ಇಕ್ಕಟ್ಟಾದ ರಸ್ತೆಗಳಲ್ಲಿ ನಡೆಯುತ್ತಾ, ಇಕ್ಕಟ್ಟಿರುವ ಸ್ಥಳಗಳಲ್ಲಿ ಹಿಂದೆ ಮುಂದೆ ಚಲಿಸುತ್ತಾ, ತಮ್ಮ ದಾರಿಯನ್ನು ಮಾಡಿಕೊಂಡು, ತಮ್ಮ ಮನೆಗಳಿಗೆ ಹಿಂತೆರಳುತ್ತವೆ. ಯೆಶಾಯನು “ಎತ್ತು ಯಜಮಾನನನ್ನು, ಕತ್ತೆ ಒಡೆಯನ [ಕೊಟ್ಟಿಗೆಯ] ಗೋದಲಿಯನ್ನು ತಿಳಿದಿರುವವು” ಎಂದು ಹೇಳಿದಾಗ, ಅವನ ಮನಸ್ಸಿನಲ್ಲಿ ಇದು ಇದ್ದಿರಬಹುದೇ?—ಯೆಶಾಯ 1:3.
ರಬೆಯು ವೈದೃಶ್ಯಗಳ ಒಂದು ನೆಲೆಯೂ ಕೂಡ ಆಗಿದೆ. ಇಲ್ಲಿ ನೀವು ವಿಶ್ವವಿದ್ಯಾಲಯದ ಪದವೀಧರರನ್ನು ಹಾಗೂ ನಗರವೊಂದಕ್ಕೆ ಎಂದೂ ಸಂದರ್ಶಿಸದಿರುವ ಸರಳತೆಯ ರೈತರನ್ನು ಕಂಡುಕೊಳ್ಳುವಿರಿ. ಉದ್ಯಾನಗಳಿಂದ ಆವೃತವಾಗಿರುವ ಆರಾಮಗೃಹಗಳು ಅಲ್ಲಿವೆ, ಮತ್ತು ಜಾನುವಾರುಗಳು ಅಡ್ಡಾಡುವ ಚಿಕ್ಕ ಗುಡಿಸಲುಗಳೂ ಅಲ್ಲಿವೆ. ಬಹುತೇಕ ಪ್ರತಿಯೊಂದು ಮನೆಯಲ್ಲಿ ವಿದ್ಯುತ್ ಗೃಹಸಲಕರಣೆಗಳನ್ನು ಕಂಡುಕೊಳ್ಳಬಹುದು, ಆದರೆ ವಿದ್ಯುತ್ ಯಾವಾಗಲೂ ದೊರಕುವುದಿಲ್ಲ. ಈ ಕಾರಣದಿಂದ, ಅನೇಕ ಮನೆಗಳಲ್ಲಿ ವಿದ್ಯುತ್ಜನಕಗಳಿವೆ. ಹಳ್ಳಿಯ ಪ್ರಧಾನ ರಸ್ತೆಗಳಿಗೆ ನೆಲಗಟ್ಟು ಮಾಡಲಾಗಿರುವುದಾದರೂ, ಹೊಲಗಳಿಗೆ ನಡಿಸಲ್ಪಡುವ ರಸ್ತೆಗಳು ನೆಲಗಟ್ಟು ಇಲ್ಲದವುಗಳೂ, ಏರುಪೇರುಗಳುಳ್ಳವುಗಳೂ ಆಗಿವೆ. ಆದಕಾರಣ, ಹೊಲಗಳಿಂದ ಉತ್ಪಾದನೆಗಳನ್ನು ಸಾಗಾಟಮಾಡುವ ಒಂದೇ ದಾರಿ ಸಾಕುಪ್ರಾಣಿಗಳು. ಹೊಲದಲ್ಲಿರುವ ಯಂತ್ರಗಳಿಗೆ ಶಕ್ತಿಯನ್ನು ಒದಗಿಸಲು ಕತ್ತೆಯೊಂದು ವಿದ್ಯುತ್ಜನಕವೊಂದನ್ನು ಹೊಲಕ್ಕೆ ಹೇರಿಕೊಂಡು ಹೋಗುವುದನ್ನು ನೀವು ಕಾಣಬಹುದು, ಈ ಯಂತ್ರಗಳನ್ನು ಗದ್ದೆಗಳಲ್ಲಿ ಪ್ರಾಣಿಗಳ ತಂಡದೊಂದಿಗೆ ಒಟ್ಟೊಟ್ಟಿಗೆ ಬಳಸಲ್ಪಡುತ್ತವೆ.
ತದ್ರೀತಿಯಲ್ಲಿ, ಹಳ್ಳಿಯ ಜೀವನದಲ್ಲಿ ಹೆಚ್ಚೇನೂ ಮಾರ್ಪಾಟವಾಗಿರುವುದಿಲ್ಲ. ಹಳ್ಳಿಯಲ್ಲಿ ಒಂದು ರಾತ್ರಿ ನೀವು ತಂಗುವಲ್ಲಿ, ಪ್ರಾತಃಕಾಲ ಎರಡು ಯಾ ಮೂರು ಘಂಟೆಗೆ ಹುಂಜಗಳು ಕೂಗುವುದರ ಮೂಲಕ ನೀವು ಎಚ್ಚರಿಸಲ್ಪಡಬಹುದು. ದಿನಚರಿಯು ಬಲುಬೇಗನೆ ಆರಂಭಗೊಳ್ಳುವುದರಿಂದ, ಪ್ರಾಣಿಗಳನ್ನು ಸಿದ್ಧಗೊಳಿಸುವಾಗ, ಕತ್ತಲೆಯಲ್ಲಿ ಒಬ್ಬರು ಇನ್ನೊಬ್ಬರೊಂದಿಗೆ ಗಟ್ಟಿಯಾಗಿ ಕೂಗುವ ಜನರ ಗದ್ದಲವನ್ನು ನೀವು ಕೇಳುವುದಾದರೆ, ಬೆರಗಾಗಬೇಡಿರಿ. ಹೊತ್ತು ಮೂಡುವುದರೊಳಗೆ, ಹೇರಿಕೊಂಡ ತಮ್ಮ ಪ್ರಾಣಿಗಳೊಂದಿಗೆ ಅನೇಕ ಗ್ರಾಮಸ್ಥರು ಹೊಲಗಳಿಗೋ, ಯಾ ತಮ್ಮ ಸರಕುಗಳನ್ನು ಮಾರಲು ಮಾರುಕಟ್ಟೆಗಳಿಗೋ ಹೋಗುವುದನ್ನು ನೀವು ಕಾಣಬಲ್ಲಿರಿ.
ದಿನವು ಮುಂದರಿದಂತೆ, ಸಣ್ಣ ಹುಡುಗ, ಹುಡುಗಿಯರು ರಸ್ತೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆಡಲು ಹೊರಬರುತ್ತಾರೆ. ಅವರ ಕಿರಿಚಾಟ ಮತ್ತು ನಗೆಯು ವಾತಾವರಣವನ್ನು ತುಂಬುತ್ತದೆ, ಇದು ಪುರಾತನ ಯೆರೂಸಲೇಮನಲ್ಲಿರುವುದನ್ನು ಪ್ರವಾದಿ ಜೆಕರ್ಯನು ವರ್ಣಿಸಿದಂತೆ ಇದೆ: “ಆ ಪಟ್ಟಣದ ಚೌಕಗಳಲ್ಲಿ ಆಟವಾಡುವ ಬಾಲಕ ಬಾಲಕಿಯರೂ ತುಂಬಿಕೊಂಡಿರುವರು.” (ಜೆಕರ್ಯ 8:5) ಗ್ರಾಮಸ್ಥರು ಸ್ನೇಹಭಾವದವರೂ, ಕುತೂಹಲಿಗಳೂ ಆಗಿರುವುದನ್ನು ನೀವು ಕಂಡುಕೊಳ್ಳುವಿರಿ. ನೀವು ಭೇಟಿಯಾಗುವ ಪ್ರತಿಯೊಬ್ಬ ಗ್ರಾಮಸ್ಥನನ್ನು ವಂದಿಸುವದನ್ನು ನಿಮ್ಮಿಂದ ನಿರೀಕ್ಷಿಸಲಾಗುತ್ತದೆ, ಯಾಕಂದರೆ ನೀವು ಯಾರು, ನೀವು ಎಲ್ಲಿಂದ ಬಂದವರು, ನೀವು ಅಲ್ಲಿ ಯಾಕೆ ಇರುವಿರಿ, ಮತ್ತು ನೀವು ಎಲ್ಲಿಗೆ ಹೋಗುವಿರಿ ಎಂದು ಅವರು ತಿಳಿಯಲು ಬಯಸುತ್ತಾರೆ. ಜನರು ಒಬ್ಬರನ್ನೊಬ್ಬರು ಬಲುಚೆನ್ನಾಗಿ ತಿಳಿದುಕೊಳ್ಳುವಂತಾಗುತ್ತದೆ.
ರಬೆಗೆ ಸತ್ಯದ ನೀರು ತಲುಪುತ್ತದೆ
ಅಂತಹ ಅನ್ಯೋನ್ಯವಾಗಿ ಒತ್ತಾಗಿರುವ ಸಮಾಜವೊಂದರಲ್ಲಿ, ಸುದ್ದಿಯು ಬಲುಬೇಗನೆ ಹರಡಲ್ಪಡುತ್ತದೆ. ಅಮೆರಿಕದಿಂದ 1923 ರಲ್ಲಿ ಆಸಡ್ ಯುನಿಸ್ ರಬೆಕ್ಕೆ ಹಿಂತೆರಳಿದಾಗ, ಅದು ತಾನೇ ಸಂಭವಿಸಿತು. ಅಮೆರಿಕದಲ್ಲಿ ಆಸಡ್ ಶ್ರೀಮಂತನಾದನೋ ಎಂದು ಆಶ್ಚರ್ಯಗೊಳ್ಳುತ್ತಾ, ಅವನ ಮಿತ್ರ ಅಬಲ್ದಾ ಬ್ಲೆಲ್ ಅವನನ್ನು ಭೇಟಿಯಾಗಲು ಹೋದನು. ಹಣದ ವಿಷಯದಲ್ಲಿ ಮಾತಾಡುವ ಬದಲು, ಆಸಡ್ ದ ಹಾರ್ಪ್ ಆಫ್ ಗಾಡ್ ಪುಸ್ತಕದ ಒಂದು ಪ್ರತಿಯನ್ನು ಅವನಿಗೆ ಕೊಟ್ಟನು ಮತ್ತು ಅವನಿಗಂದದ್ದು: “ಇಲ್ಲಿದೆ ನಿಜ ಐಶ್ವರ್ಯ.” ಹಿಂದೆ ಒಬ್ಬ ಪ್ರಾಟೆಸ್ಟಂಟ್ನಾಗಿದ್ದ ಅಬಲ್ದಾ ಈ ಬೈಬಲಾಧಾರಿತ ಪ್ರಕಾಶನವನ್ನು ಓದಿದನು ಮತ್ತು ಬಹಳ ಅಳವಾಗಿ ಪ್ರಭಾವಿತನಾದನು. ಆಸಡ್ನು ಈ ಸಮಾಚಾರದ ಕುರಿತು ಹೆಚ್ಚೇನೂ ಮಾಡದಿದ್ದರೂ, ತಾನೇನು ಕಲಿತನೋ ಅದರಿಂದ ಅಬಲ್ದಾನು ಉತ್ಸಾಹಭರಿತನಾದನು ಮತ್ತು ಸತ್ಯವನ್ನು ತಾನು ಕಂಡುಕೊಂಡೆನೆಂದು ಅವನು ಬಿಚ್ಚುಮನದಿಂದ ಅರಿಕೆಮಾಡಿದನು.
ಸ್ವಲ್ಪ ಸಮಯದ ನಂತರ, ಅಬಲ್ದಾ ಉತ್ತರ ಲೆಬನಾನಿನ ಪ್ರಮುಖ ಪಟ್ಟಣವಾದ ಟ್ರಿಪೊಲಿಗೆ ವಲಸೆಹೋದನು. ಅಲ್ಲಿ ಆ ಕಾಲದಲ್ಲಿ ಬೈಬಲ್ ವಿದ್ಯಾರ್ಥಿಗಳೆಂದು ಪರಿಚಿತವಾಗಿದ್ದ ಅನೇಕ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಲು ಅವನಿಗೆ ಸಾಧ್ಯವಾಯಿತು, ಮತ್ತು ತನ್ನ ಬೈಬಲ್ ಅಭ್ಯಾಸದಲ್ಲಿ ಅವನು ಇನ್ನಷ್ಟು ಅಧಿಕ ಪ್ರಗತಿಯನ್ನು ಮಾಡಿದನು. ತದನಂತರ ತಾನು ಕಲಿತಿರುವ ಸುವಾರ್ತೆಯನ್ನು ಹಬ್ಬಿಸಲು ಅವನು ಪುನಃ ರಬೆಗೆ ಹಿಂತೆರಳಿದನು. ತ್ರಯೈಕ್ಯ, ಮನುಷ್ಯನಿಗೊಂದು ಅಮರವಾದ ಆತ್ಮವಿದೆಯೇ, ನರಕಾಗ್ನಿ, ಪುರೋಹಿತತನ, ಬಲಿಪೂಜೆ, ಮತ್ತು ಮೂರ್ತಿಗಳ ಉಪಯೋಗ, ಇಂತಹ ವಿಷಯಗಳ ಮೇಲೆ ಜತೆ ಗ್ರಾಮಸ್ಥರೊಂದಿಗೆ ಅವನು ಸಂಭಾಷಣೆಯಲ್ಲಿ ತೊಡಗುತ್ತಾ, ಬೈಬಲ್ ನಿಜವಾಗಿಯೂ ಕಲಿಸುವುದನ್ನು ಅವರೊಂದಿಗೆ ಹಂಚಿಕೊಳ್ಳುತ್ತಿದ್ದನು.
ಗ್ರಾಮಸ್ಥರಲ್ಲಿ ಕೆಲವರು ಆಸಕ್ತಿ ತೋರಿಸಿದರು. ಅವರಲ್ಲಿ ಮೂವರು ಯಾ ನಾಲ್ವರು ಸಾರುವ ಕೆಲಸದಲ್ಲಿ ಅಬಲ್ದಾನೊಂದಿಗೆ ಸೇರಿಕೊಂಡರು. ಅನಂತರ ಅವರು ಆದಿತ್ಯವಾರ ಕೂಟಗಳನ್ನು ನಡಿಸಲು ಆರಂಭಿಸಿದರು. ಅದರಲ್ಲಿ ಒಂದು ಫೋನೊಗ್ರಾಫಿನಿಂದ ದಾಖಲಿಸಲ್ಪಟ್ಟ ಪ್ರವಚನವೊಂದನ್ನು ಆಲಿಸುವುದು, ಯಾ ಬೈಬಲಿನಿಂದ ಓದುವುದು, ಅದನ್ನು ಹಿಂಬಾಲಿಸಿ ಅವರೇನು ಕೇಳಿದರೋ ಅದರ ಮೇಲೆ ಒಂದು ಚರ್ಚೆ ಸೇರಿರುತ್ತಿತ್ತು. ತದನಂತರ, ಕೆಲವು ಬೈಬಲ್ ಅಧ್ಯಯನ ಸಹಾಯಕಗಳನ್ನು ಉಪಯೋಗಿಸಲಾಯಿತು, ಅದರಲ್ಲಿ ದ ಹಾರ್ಪ್ ಆಫ್ ಗಾಡ್, ರಿಚಸ್, ಮತ್ತು “ದೇವರು ಸತ್ಯವಂತನೇ ಸರಿ” ಎಂಬಂತಹ ಪುಸ್ತಕಗಳು ಸೇರಿದ್ದವು. ಹಾಜರಿಯು ಹತ್ತಕ್ಕೆ ಮೀರಿ ಹೋಗುತ್ತಿರಲಿಲ್ಲ, ಹೆಚ್ಚಿನವರು ಆಸಕ್ತಿಯುಳ್ಳವರಾಗಿರುವುದಕ್ಕಿಂತ ಕುತೂಹಲಿಗಳಾಗಿದ್ದರು. ಕೆಲವರಂತೂ ಮುಖ್ಯವಾಗಿ ಪ್ರತಿ ಕೂಟದಂತ್ಯದಲ್ಲಿ ನೀಡಲ್ಪಡುತ್ತಿದ್ದ ಊಟಕ್ಕಾಗಿ ಬರುತ್ತಿದ್ದರು ಎಂದು ತೋರುತ್ತಿತ್ತು.
ಅಬಲ್ದಾ ಬ್ಲೆಲ್ನಿಗೆ 1940 ರುಗಳಲ್ಲಿ ರಬೆಯಲ್ಲಿರುವ ಗುಂಪಿನ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಕೊಡಲಾಯಿತು. ಅವನು, ಇತರರಿಗೆ ಒಂದು ಉತ್ತಮ ಮಾದರಿಯನ್ನಿಡುತ್ತಾ, ಯೆಹೋವನ ಹುರುಪಿನ ಹಾಗೂ ನಿಷ್ಠೆಯ ಸೇವಕನಾಗಿ ಪರಿಣಮಿಸಿದನು. ಇವರಲ್ಲಿ ಒಬ್ಬನಾದ ಸಹೋದರ ಮಟರ್ಟ್, ಅವರು ಸಾರುವ ಕೆಲಸವನ್ನು ಹೇಗೆ ನಡಿಸಿದರು ಎಂಬುದನ್ನು ನೆನಪಿಸುವುದು: “ಆ ದಿನಗಳಲ್ಲಿ ಕಾರುಗಳು ಇಲ್ಲದಿದದ್ದರಿಂದ, ಸಹೋದರ ಬ್ಲೆಲ್ ಮತ್ತು ನಾನು ಹತ್ತಿರದ ಹಳ್ಳಿಗಳಿಗೆ ಸಾಕ್ಷಿ ನೀಡಲು ಕಾಲ್ನಡೆಯಲ್ಲಿ ಹೋದೆವು. ನಾನು ಫೋನೊಗ್ರಾಫನ್ನು ಹೊತ್ತುಕೊಂಡೆನು, ಸಹೋದರ ಬ್ಲೆಲ್ ಮಾತಾಡುವುದರಲ್ಲಿ ನಾಯಕತ್ವವನ್ನು ತಕ್ಕೊಂಡನು. ಮನೆಗೆ ಹಿಂತೆರಳುವ ಮೊದಲು ಸಾಮಾನ್ಯವಾಗಿ ಎರಡು ಯಾ ಮೂರು ದಿನಗಳಾಗುತ್ತಿದ್ದವು.” ಸಹೋದರ ಬ್ಲೆಲ್ 1979ರಲ್ಲಿ 98 ವರ್ಷ ವಯಸ್ಸಿನಲ್ಲಿ ಮರಣ ಹೊಂದುವ ತನಕ, ನಂಬಿಗಸ್ತನಾಗಿ ಯೆಹೋವನನ್ನು ಸೇವಿಸಿದನು.
ಪ್ರಗತಿಯು ವಿರೋಧವನ್ನು ತರುತ್ತದೆ
ಕೆಲಸವು ಪ್ರಗತಿಗೊಂಡಂತೆ, ಸಹೋದರರು ವಿರೋಧವನ್ನು ಅನುಭವಿಸಲಾರಂಭಿಸಿದರು. ಹಳ್ಳಿಯ ಪಾದ್ರಿಯ ಪ್ರಚೋದನೆಯಿಂದ 1950 ರಲ್ಲಿ ಹಿಂಸೆಯ ಚಳುವಳಿಯೊಂದು ರಬೆಯ ಸಹೋದರರ ವಿರುದ್ಧ ಆರಂಭಿಸಲ್ಪಟ್ಟಿತು. ಸಹೋದರರು ಚರ್ಚನ್ನು ಅಪವಿತ್ರಗೊಳಿಸಿದ ಮತ್ತು ದರೋಡೆ ಮಾಡಿದ ಆರೋಪವನ್ನು ಪಾದ್ರಿಯು ಮಾಡಿದನು. ಕೆಲವು ಗ್ರಾಮಸ್ಥರು ಎಷ್ಟು ಕೋಪೋದ್ರಿಕ್ತರಾದರೆಂದರೆ, ಅವರು ಸಹೋದರರಿಗೆ ಕಲ್ಲೆಸೆದರು, ಮತ್ತು ಕೆಲವು ಸಹೋದರರನ್ನು ದಸ್ತಗಿರಿಮಾಡಲಾಯಿತು ಮತ್ತು ಸೆರೆಮನೆಗೆ ದಬ್ಬಲಾಯಿತು. ಆದಾಗ್ಯೂ, ತದನಂತರದ ವಿಚಾರಣೆಯು, ಆರೋಪಗಳು ಸುಳ್ಳೆಂದು ರುಜುಮಾಡಿದವು. ಆದರೂ ಕೂಡ, ಹಲವಾರು ದಿನಗಳ ತನಕ ಸಹೋದರರನ್ನು ಸೆರೆಮನೆಯಲ್ಲಿಡಲಾಯಿತು.
ಇನ್ನೊಬ್ಬ ವಿರೋಧಿಯು, ಅವರು ಮನೆಗಳಿಗೆ ಅಡಿಗಡಿಗೆ ಬರುವುದರಿಂದ ಜನರಿಗೆ ತೊಂದರೆಗೆ ಕಾರಣವಾಗುತ್ತದೆ ಎಂಬಂತಹ ಅನೇಕ ವಿಷಯಗಳಿಂದ ಸಹೋದರರನ್ನು ಆಪಾದಿಸುವ ಕಾಗದವೊಂದಕ್ಕೆ, ಸರಿಯಾಗಿ ಓದಲು ಬಾರದ ಕೆಲವರ ಸಹಿತ ಎಲ್ಲಾ ಗ್ರಾಮಸ್ಥರು ಸಹಿಹಾಕುವಂತೆ ಪ್ರಯತ್ನಿಸಿದನು. ಹೆಚ್ಚಿನ ಜನರು ಈ ಕಾಗದಕ್ಕೆ ಸಹಿಹಾಕುವಂತೆ ಮಾಡಲು, ಈ ಹಳ್ಳಿಗೆ ಒಬ್ಬ ನಿರ್ದಿಷ್ಟ ಕಾರ್ಮಿಕನನ್ನು ಪುನಃ ಸ್ಥಳಾಂತರಿಸುವಂತೆ ಮಾಡುವ ಒಂದು ಅರ್ಜಿಯಾಗಿರುತ್ತದೆ ಎಂದು ಅವನು ಅವರಿಗೆ ಹೇಳಿದನು. ನೈಜತೆಯಲ್ಲಿ ಸಾಕ್ಷಿಗಳ ವಿರುದ್ಧ ಅದೊಂದು ಆರೋಪವಾಗಿದೆ ಎಂದು ಜನರು ಕಂಡುಕೊಂಡಾಗ, ಅವರು ತಮ್ಮ ಸಹಿಗಳನ್ನು ಅಳಿಸಿದರು. ಅಂಥ ಘಟನೆಗಳು ಆ ವಠಾರದಲ್ಲಿರುವ ಅನೇಕ ಅಧಿಕಾರಿಗಳಿಗೂ ಉತ್ತಮ ಸಾಕ್ಷಿಯನ್ನು ಕೊಡಲು ಸಹಾಯ ಮಾಡಿದವು.
ಅಂತಹ ನೇರ ವಿರೋಧದೊಂದಿಗೆ ವ್ಯವಹರಿಸುವುದರ ಹೊರತಾಗಿಯೂ, ಸಹೋದರು ಇನ್ನೊಂದು ಅಡಿಯ್ಡನ್ನು ಎದುರಿಸಿದರು. ಒಬ್ಬರು ಇನ್ನೊಬ್ಬರನ್ನು ಚೆನ್ನಾಗಿ ತಿಳಿದಿರುವ ಒಂದು ಸಣ್ಣ ಹಳ್ಳಿಯಲ್ಲಿ, ಜ್ಞಾನೋಕ್ತಿ 29:25 ರಲ್ಲಿ ಬೈಬಲ್ ಹೇಳಿರುವ ಪ್ರಕಾರ “ಮನುಷ್ಯನ ಭಯ ಉರುಲು” ಆಗುತ್ತದೆ. ಅವಿರತವಾಗಿ ಠೀಕಿಸುವ ಮತ್ತು ಅವರನ್ನು ಅಪಹಾಸ್ಯ ಮಾಡುವ ತಮ್ಮ ನೆರೆಯವರಿಗೆ, ಮಿತ್ರರಿಗೆ, ಮತ್ತು ಸಂಬಂಧಿಕರಿಗೆ ಸಾರಲು ಸಹೋದರರಿಗೆ ಧೈರ್ಯಬೇಕಾಗುತ್ತದೆ. ಹೀಗೆ ನಿಜವಾದ ಅರ್ಥವು ಮತ್ತಾಯ 10:36 ರಲ್ಲಿ ಯೇಸುವಿನ ಮಾತುಗಳಿಗೆ ಕೊಡಲ್ಪಟ್ಟಿದೆ: “ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.” ಆದರೂ, ಜ್ಞಾನೋಕ್ತಿಯು ಹೇಳುತ್ತಾ ಮುಂದುವರಿಯುವಂತೆ “ಯೆಹೋವನ ಭರವಸ ಉದ್ಧಾರ.” ಸಹೋದರರ ನಂಬಿಕೆ ಮತ್ತು ತಾಳ್ಮೆಯು ವಿಶೇಷವಾದ ಫಲಿತಾಂಶಗಳನ್ನು ಉತ್ಪಾದಿಸಿದೆ.
ಸತ್ಯವು ರಬೆಯನ್ನು ಪೂರ್ತಿ ನೆನೆಸುತ್ತದೆ
ವರ್ಷಗಳು ಸಂದಷ್ಟಕ್ಕೆ, ಗ್ರಾಮಸ್ಥರು ಯೆಹೋವನ ಸಾಕ್ಷಿಗಳ ನಡತೆಯನ್ನು ಮೆಚ್ಚುವ ಹಂತಕ್ಕೆ ಬಂದಿರುತ್ತಾರೆ, ಮತ್ತು ಅನೇಕರು ಸತ್ಯವನ್ನು ಸ್ವೀಕರಿಸಿದ್ದಾರೆ. ರಬೆಯಲ್ಲಿ ಎರಡನೆಯ ಸಭೆಯು 1969 ರಲ್ಲಿ ರಚಿಸಲ್ಪಟ್ಟಾಗ, ಸಹೋದರರು ಅತ್ಯಾನಂದಪಟ್ಟರು. ತಮ್ಮ ಕಾರ್ಯವನ್ನು ಶ್ರಮಪಟ್ಟು ಮಾಡುವದನ್ನು ಅವರು ಮುಂದರಿಸಿದರು. ಅನೇಕರು ಪೂರ್ಣ ಸಮಯದ ಶುಶ್ರೂಷೆಯನ್ನು ಕೈಗೆತ್ತಿಕೊಂಡರು, ಇತರರು ಬೇರೂತ್ ಸಹಿತ ಇತರ ಕಾರ್ಯಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಕೂಡ ವಲಸೆಹೋದರು. ಯೆಹೋವನು ಅವರ ದುಡಿಮೆಯನ್ನು ಆಶೀರ್ವದಿಸಿದನು, ಮತ್ತು 1983 ರಲ್ಲಿ ರಬೆಯಲ್ಲಿ ಮೂರನೆಯ ಸಭೆಯು ಸ್ಥಾಪನೆಗೊಂಡಿತು. ತನ್ಮಧ್ಯೆ, ಹೆಚ್ಚಿನ ಸಹೋದರರು ವಲಸೆಹೋದರು ಯಾ ನಗರಗಳಲ್ಲಿ ಜೀವಿಸಲು ಹೋದರು. ಆದರೂ, ಬೆಳವಣಿಗೆಯು ಮುಂದರಿಯಿತು, ಮತ್ತು 1989 ರಲ್ಲಿ ನಾಲ್ಕನೆಯ ಸಭೆಯು, ಇದನ್ನು ಹಿಂಬಾಲಿಸಿ 1990 ರಲ್ಲಿ ಐದನೆಯದು ರಚಿಸಲ್ಪಟ್ಟಿತು.
ಇಷ್ಟರೊಳಗೆ, ಅಧಿಕಾಂಶ ಹಳ್ಳಿಯಲ್ಲಿರುವ ಪ್ರತಿಯೊಂದು ಕುಟುಂಬದಲ್ಲಿ ಯೆಹೋವನ ಸಾಕ್ಷಿಯಾಗಿರುವ ಒಬ್ಬ ಸಂಬಂಧಿ ಯಾ ಮಿತ್ರನು ಇದ್ದನು. ಒಂದು ಸಮಯದಲ್ಲಿ ಇದ್ದಂಥ ವಿರೋಧವು ಮಾಯವಾಯಿತು. ಜನರು ಸಾಕ್ಷಿಗಳೊಂದಿಗೆ ಹೆಚ್ಚು ಪರಿಚಯವುಳ್ಳವರಾದರು. ವಾಸ್ತವದಲ್ಲಿ, “ಹಿರಿಯ” “ಪಯನೀಯರ್” “ಸರ್ಕಿಟ್ ಮೇಲ್ವಿಚಾರಕ” “ಸಮ್ಮೇಳನ,” ಮತ್ತು “ಅರ್ಮಗೆದೋನ್” ಎಂಬ ವಾಕ್ಸರಣಿಗಳು ಗ್ರಾಮಸ್ಥರ ಶಬ್ದಭಂಡಾರದ ಭಾಗವಾದವು. ಸರ್ಕಿಟ್ ಮೇಲ್ವಿಚಾರಕರ ಸಂದರ್ಶನ ಯಾ ಸ್ಮಾರಕಾಚರಣೆಯಂತಹ ವಿಶೇಷ ಸಂದರ್ಭಗಳಲ್ಲಿ ರಸ್ತೆಗಳು ಖಾಲಿಯಾಗಿರುತ್ತವೆ ಮತ್ತು ರಾಜ್ಯ ಸಭಾಗೃಹಗಳು ಜನಸಂದಣಿಯಿಂದ ತುಂಬಿರುತ್ತವೆ. ಕೆಲವು ಸಭೆಗಳು ನೆರೆಯವರ ಅನುಕೂಲತೆಗಾಗಿ ಬಾಲ್ಕನಿಯಲ್ಲಿ ಧ್ವನಿಪೆಟ್ಟಿಗೆಗಳನ್ನು ಕೂಡ ಇಡುತ್ತವೆ.
ರಬೆಯಲ್ಲಿ ಈಗ 250 ಕ್ಕಿಂತಲೂ ಹೆಚ್ಚು ರಾಜ್ಯ ಪ್ರಚಾರಕರು ಇದ್ದಾರೆ. ಅದರ ಅರ್ಥ ಹಳ್ಳಿಯಲ್ಲಿರುವ ಪ್ರತಿ 8 ಮಂದಿಗಳಿಗೆ ಒಬ್ಬ ಸಾಕ್ಷಿ ಅಲ್ಲಿದ್ದಾನೆ! ಐವತ್ತೊಂದು ಪ್ರಚಾರಕರಿರುವ ಒಂದು ಸಭೆಗೆ 76 ಮನೆಗಳ ಟೆರಿಟೊರಿ ಇದೆ, ಮತ್ತು ಅವರದನ್ನು ಪ್ರತಿವಾರ ಆವರಿಸುತ್ತಾರೆ. ಕಳೆದ ವರ್ಷದ ಮಾರ್ಚ್ ಮತ್ತು ಏಪ್ರಿಲ್ನಲ್ಲಿ 250 ಪ್ರಚಾರಕರಲ್ಲಿ 98 ಮಂದಿ ಸಹಾಯಕ ಪಯನೀಯರ್ ಆಗಿ, ರಬೆಯಲ್ಲಿರುವ 13 ಕ್ರಮದ ಪಯನೀಯರರೊಂದಿಗೆ ಸೇವೆ ಮಾಡಿದಾಗ ಏನು ಸಂಭವಿಸಿತು ಎಂದು ಊಹಿಸಿರಿ. ಪ್ರತಿವಾರ ಹಲವಾರು ಬಾರಿ ಟೆರಿಟೊರಿಯು ಆವರಿಸಲ್ಪಟ್ಟಿತು. ಅದೇ ದಿನ ಯಾ ಅದೇ ಸಮಯದಲ್ಲಿ ಕೂಡ ಪ್ರಚಾರಕರ ಎರಡು ಯಾ ಮೂರು ಜೋಡಿಗಳು ಒಂದು ಮನೆಗೆ ಭೇಟಿಯನ್ನೀಯುವುದು ಅಸಾಮಾನ್ಯವಾಗಿ ಇರಲಿಲ್ಲ. ಅಧಿಕಾಂಶ ಗ್ರಾಮಸ್ಥರಿಗೆ ಭೇಟಿಗಳು ರೂಢಿಯಾಗಿವೆ. ಆದರೆ ಒಬ್ಬ ಮನುಷ್ಯನು ದೂರಿದಾಗ, ಪ್ರಚಾರಕನೊಬ್ಬನು ಉತ್ತರಿಸಿದ್ದು: “ಬೈಬಲ್ ಅಭ್ಯಾಸದ ನಮ್ಮ ಕೊಡುಗೆಯನ್ನು ನೀವು ಸ್ವೀಕರಿಸಿದ್ದಲ್ಲಿ, ಆಗ ನಿಮ್ಮನ್ನು ವಾರಕ್ಕೆ ಒಮ್ಮೆ ಮಾತ್ರ ಭೇಟಿಮಾಡಲಾಗುತ್ತದೆ.” ಅವರು ಹೊಲಗಳಲ್ಲಿ ಕೂಡ ಭೇಟಿಯಾಗುವ ಪ್ರತಿಯೊಬ್ಬರೊಡನೆ—ಉಳುವ, ಬಿತ್ತುವ, ನೀರುಹಾಯಿಸುವ, ಯಾ ಕತ್ತೆಯ ಮೇಲೆ ಸವಾರಿಮಾಡುವ ಜನರೊಡನೆ,— ಮಾತಾಡುತ್ತಾರೆ.
ವಾಸ್ತವತೆಯೇನಂದರೆ, ಬೈಬಲ್ ಸತ್ಯವು ಅನೇಕ ನೀರುಗಳ ರಬೆಯನ್ನು ಪೂರ್ತಿಯಾಗಿ ನೆನೆಸಿರುತ್ತದೆ. ಇದು ಮಾತ್ರವೇ ಅಲ್ಲ. ಆಸುಪಾಸಿನ ಅನೇಕ ಹಳ್ಳಿಗಳಿಗೆ ರಬೆಯು ಸೀ ನೀರಿನ ಉಗಮವಾಗಿರುವಂತೆ, ಬೈಬಲ್ ಸತ್ಯದ ಜೀವದಾಯಕ ನೀರನ್ನು ಕೂಡ ಅದು ಅವರಿಗೆ ಒದಗಿಸಿದೆ. ರಬೆಯ ಪ್ರಚಾರಕರು ಹತ್ತಿರದ ಹಳ್ಳಿಗಳಿಗೆ ಕಾಲ್ನಡೆಯಲ್ಲಿ ಭೇಟಿನೀಡುತ್ತಾರೆ ಮತ್ತು ಇನ್ನೂ ದೂರದ ಹಳ್ಳಿಗಳಿಗೆ ಸಾರಲು ಕಾರು ತಂಡಗಳನ್ನು ಸಂಸ್ಥಾಪಿಸಿ, ದಿನವಿಡೀ ಸಂಚಾರ ಮಾಡುತ್ತಾರೆ. ಇತರ ನಗರಗಳಲ್ಲಿ ಸೇವೆ ಸಲ್ಲಿಸಲು ಕೆಲವು ಪ್ರಚಾರಕರು ವಲಸೆಹೋಗಿರುತ್ತಾರೆ. ಯೆಹೋವನ ಆಶೀರ್ವಾದದೊಂದಿಗೆ, ಅಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿದೆ, ಅದು ಸ್ವರ್ಗೀಯ ಪಿತನಾದ ಯೆಹೋವ ದೇವರಿಗೆ ಇನ್ನಷ್ಟು ಅಧಿಕ ಸ್ತುತಿಯನ್ನು ಸಲ್ಲಿಸುವುದು.
[ಪುಟ 26 ರಲ್ಲಿರುವ ಚಿತ್ರ]
ರಬೆಯ ಒಂದು ರಸ್ತೆಯ ದೃಶ್ಯ