ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 2/1 ಪು. 10-15
  • ಬೈಬಲ್‌ ಸಮಯಗಳಲ್ಲಿ ವಿದ್ಯೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌ ಸಮಯಗಳಲ್ಲಿ ವಿದ್ಯೆ
  • ಕಾವಲಿನಬುರುಜು—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪೂರ್ವಜರ ವಿದ್ಯೆ
  • ಇಸ್ರಾಯೇಲಿನಲ್ಲಿ ಶಿಕ್ಷಣಾ ವ್ಯವಸ್ಥೆ
  • ಕಲಿಸುವ ವಿಧಾನಗಳು
  • ವ್ಯಾಸಂಗ ಕ್ರಮ
  • ಯಾಜಕರು, ಲೇವಿಯರು, ಮತ್ತು ಪ್ರವಾದಿಗಳು
  • ಬಂದಿವಾಸ ಮತ್ತು ನಂತರದ ಸಮಯಗಳಲ್ಲಿ ಶಿಕ್ಷಣ
  • ರಬ್ಬೀಯ ಶಾಲೆಗಳು
  • ಶಿಕ್ಷಣ—ಯೆಹೋವನನ್ನು ಸ್ತುತಿಸಲು ಅದನ್ನು ಉಪಯೋಗಿಸಿರಿ
    ಕಾವಲಿನಬುರುಜು—1996
  • ಶಿಕ್ಷಣದ ಬಗ್ಗೆ ಯೆಹೋವನ ಸಾಕ್ಷಿಗಳಿಗಿರುವ ಅಭಿಪ್ರಾಯ
    ಯೆಹೋವನ ಸಾಕ್ಷಿಗಳು ಮತ್ತು ಶಿಕ್ಷಣ
  • ಶಿಕ್ಷಣದ ಬಗ್ಗೆ ಯೆಹೋವನ ಸಾಕ್ಷಿಗಳ ಅಭಿಪ್ರಾಯವೇನು?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ಒಂದು ಉದ್ದೇಶವಿರುವ ವಿದ್ಯೆ
    ಕಾವಲಿನಬುರುಜು—1993
ಇನ್ನಷ್ಟು
ಕಾವಲಿನಬುರುಜು—1993
w93 2/1 ಪು. 10-15

ಬೈಬಲ್‌ ಸಮಯಗಳಲ್ಲಿ ವಿದ್ಯೆ

“ನಿಮ್ಮ ಮಕ್ಕಳಿಗೆ ಇವುಗಳನ್ನು ಅಭ್ಯಾಸ ಮಾಡಿಸಬೇಕು.”—ಧರ್ಮೋಪದೇಶಕಾಂಡ 11:19.

1. ಯೆಹೋವನು ತನ್ನ ಸೇವಕರ ವಿದ್ಯೆಯಲ್ಲಿ ಅಭಿರುಚಿಯುಳ್ಳವನಾಗಿದ್ದಾನೆಂದು ಯಾವುದು ತೋರಿಸುತ್ತದೆ?

ಯೆಹೋವನು ಮಹಾ ಶಿಕ್ಷಕನು. ಆತನು ತನ್ನ ಸೇವಕರನ್ನು ಎಂದೂ ಅಜ್ಞಾನದ ಸ್ಥಿತಿಯಲ್ಲಿ ಬಿಡಲಿಲ್ಲ. ಆತನು ಯಾವಾಗಲೂ ಅವರೊಂದಿಗೆ ಜ್ಞಾನವನ್ನು ಹಂಚಿಕೊಳ್ಳಲು ಇಷ್ಟವುಳ್ಳವನಾಗಿದ್ದನು. ಅಗಣಿತ ಸಹಸ್ರಾರು ವರ್ಷಗಳಲ್ಲಿ ಆತನ ಏಕಜಾತ ಪುತ್ರನು ಆತನ ಬಳಿಯಲ್ಲಿ, ದೇವರ “ಶಿಲ್ಪಿಯಾಗಿದ್ದುಕೊಂಡು” ಸತತವಾಗಿ ಕಲಿಯುತ್ತಿದ್ದನು. (ಜ್ಞಾನೋಕ್ತಿ 8:30) ಭೂಮಿಯಲ್ಲಿದ್ದಾಗ ಯೇಸು ಹೇಳಿದ್ದು: “ತಂದೆಯು ತನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡಿ” ದೆನು. (ಯೋಹಾನ 8:28) ಅತುಲ್ಯ ಶಿಕ್ಷಕನೋಪಾದಿ ದೇವರನ್ನು ಸಂಬೋಧಿಸುತ್ತಾ ಎಲೀಹು ಕೇಳಿದ್ದು: “ಆತನಂಥ ಉಪದೇಶಕನು ಯಾರು?” (ಯೋಬ 36:22) ಪ್ರವಾದಿ ಯೆಶಾಯನು ಯೆಹೋವನನ್ನು ಕುರಿತು ಆತನ ಜನರ ಮಹಾ “ಬೋಧಕ”ನಾಗಿರುತ್ತಾನೆಂದು ಹೇಳಿ, ಪ್ರವಾದಿಸಿದ್ದು: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವದು.” (ಯೆಶಾಯ 30:20; 54:13) ನಿಸ್ಸಂದೇಹವಾಗಿ, ತನ್ನ ಬುದ್ಧಿವಂತ ಜೀವಿಗಳು ಜ್ಞಾನೋದಯ ಹೊಂದಬೇಕು ಮತ್ತು ಸುಶಿಕ್ಷಿತರಾಗಿರಬೇಕೆಂದು ಯೆಹೋವನು ಬಯಸುತ್ತಾನೆ.

ಪೂರ್ವಜರ ವಿದ್ಯೆ

2, 3. (ಎ) ನಂಬಿಗಸ್ತ ಪೂರ್ವಜರು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಹೇಗೆ ವೀಕ್ಷಿಸಿದರು, ಮತ್ತು ಯಾವ ಮಾರ್ಗದರ್ಶನವನ್ನು ಯೆಹೋವನು ಅಬ್ರಹಾಮನಿಗೆ ಕೊಟ್ಟನು? (ಬಿ) ಅಬ್ರಹಾಮನ ಸಂತತಿಗೆ ವಿದ್ಯಾಭ್ಯಾಸವನ್ನೀಯಲು ಮಾರ್ಗದರ್ಶಿಸಿದರ ಹಿನ್ನೆಲೆಯಲ್ಲಿ ಯಾವ ಮಹಾ ಉದ್ದೇಶವು ಇತ್ತು?

2 ಪೂರ್ವಜರ ಕಾಲದಲ್ಲಿ ತನ್ನ ಮಕ್ಕಳಿಗೆ ಮತ್ತು ತನ್ನ ಕುಟುಂಬದವರಿಗೆ ಕಲಿಸುವುದು ಕುಟುಂಬದ ಶಿರಸ್ಸಿನ ಬುನಾದಿ ಹಕ್ಕುಗಳಲ್ಲೊಂದಾಗಿತ್ತು. ದೇವರ ಸೇವಕರಿಗೆ ಅವರ ಮಕ್ಕಳ ವಿದ್ಯೆಯು ಒಂದು ಧಾರ್ಮಿಕ ಕರ್ತವ್ಯವಾಗಿ ಇತ್ತು. ತನ್ನ ಸೇವಕನಾದ ಅಬ್ರಹಾಮನ ಕುರಿತು ಯೆಹೋವನಂದದ್ದು: “ಅವನು ತನ್ನ ಪುತ್ರಪೌತ್ರರಿಗೆ—ನೀವು ನ್ಯಾಯ ನೀತಿಗಳನ್ನು ನಡಿಸಿ ಯೆಹೋವನ ಮಾರ್ಗವನ್ನು ಅನುಸರಿಸಬೇಕೆಂದು ಬೋಧಿಸುವಂತೆ ಅವನನ್ನು ನಾನು ಆದುಕೊಂಡೆನಲ್ಲಾ; ಅವನು ಹೀಗೆ ಮಾಡುವದರಿಂದ ಯೆಹೋವನಾದ ನನ್ನ ವಾಗ್ದಾನವು ನೆರವೇರುವದು.”—ಆದಿಕಾಂಡ 18:19.

3 ಯೆಹೋವನು ವಿದ್ಯೆಯನ್ನು ಮಹಾ ಪ್ರಾಮುಖ್ಯತೆಯದ್ದೆಂದು ಪರಿಗಣಿಸಿದ್ದನ್ನು ಈ ದೈವಿಕ ಹೇಳಿಕೆಯು ತೋರಿಸಿ ಕೊಡುತ್ತದೆ. ಅವರ ಮುಂದಿನ ಸಂತತಿಗಳು ಯೆಹೋವನ ಮಾರ್ಗವನ್ನು ಇಟ್ಟುಕೊಳ್ಳುವ ಸ್ಥಾನದಲ್ಲಿ ಉಳಿಯುವಂತೆ ತನ್ನ ನೀತಿಯ ಮತ್ತು ನ್ಯಾಯದ ಮಾರ್ಗಗಳಲ್ಲಿ ಅವರ ಕುಟುಂಬಗಳಿಗೆ ಶಿಕ್ಷಣವನ್ನೀಯಬೇಕೆಂಬದಾಗಿ ಅಬ್ರಹಾಮ, ಇಸಾಕ, ಮತ್ತು ಯಾಕೋಬರಿಂದ ದೇವರು ಬಯಸಿದನು. ಹೀಗೆ, ಯೆಹೋವನು ಅಬ್ರಹಾಮನ ಸಂತತಿಯ ಕುರಿತಾಗಿ ಆತನ ವಾಗ್ದಾನಗಳನ್ನು ಮತ್ತು “ಭೂಮಿಯ ಎಲ್ಲಾ ಜನಾಂಗಗಳಿಗೆ” ಆಶೀರ್ವಾದವನ್ನು ನೆರವೇರಿಸಲಿದ್ದನು.—ಆದಿಕಾಂಡ 18:18; 22:17, 18.

ಇಸ್ರಾಯೇಲಿನಲ್ಲಿ ಶಿಕ್ಷಣಾ ವ್ಯವಸ್ಥೆ

4, 5. (ಎ) ಇತರ ಜನಾಂಗಗಳಿಗಿಂತ ಇಸ್ರಾಯೇಲ್ಯರ ಶಿಕ್ಷಣಾ ವ್ಯವಸ್ಥೆಯನ್ನು ಯಾವುದು ಭಿನ್ನವಾಗಿಸಿತು? (ಬಿ) ಎನ್‌ಸೈಕ್ಲೊಪೀಡಿಯ ಜುಡೈಕಾದಲ್ಲಿ ಇತರ ಯಾವ ಪ್ರಮುಖ ವ್ಯತ್ಯಾಸವನ್ನು ಎತ್ತಿ ಹೇಳಲಾಗಿದೆ, ಮತ್ತು ಈ ವ್ಯತ್ಯಾಸಕ್ಕೆ ನಿಸ್ಸಂದೇಹವಾಗಿ ಯಾವುದು ಸಹಾಯಿಸಿತು?

4 ಎನ್‌ಸೈಕ್ಲೊಪೀಡಿಯ ಜುಡೈಕಾ ನಮೂದಿಸುವುದು: “ಪ್ರಾಚೀನ ಇಸ್ರಾಯೇಲಿನಲ್ಲಿ ವಿದ್ಯೆಯ ಕಾರ್ಯಗತಿಯ ತಿಳಿವಳಿಕೆಗಾಗಿ ಬೈಬಲು ಪ್ರಧಾನ ಮೂಲವಾಗಿರುತ್ತದೆ.” ಯೆಹೋವನು ಮೋಶೆಯನ್ನು ಇಸ್ರಾಯೇಲ್ಯರ ಪ್ರಥಮ ಬೋಧಕನಾಗಿ ಬಳಸಿದನು. (ಧರ್ಮೋಪದೇಶಕಾಂಡ 1:3, 5; 4:5) ಯೆಹೋವನ ಮೂಲಕ ಅವನಿಗೆ ಕೊಡಲ್ಪಟ್ಟ ಮಾತುಗಳನ್ನು ಮೋಶೆಯು ವಿವರಿಸಿದನು. (ವಿಮೋಚನಕಾಂಡ 24:3) ಆದುದರಿಂದ ವಾಸ್ತವಾಂಶದಲ್ಲಿ, ದೇವರು ಇಸ್ರಾಯೇಲಿನ ಮೊತ್ತಮೊದಲಿನ ಶಿಕ್ಷಕನಾಗಿದ್ದನು. ಇದು ತಾನೇ ಇಸ್ರಾಯೇಲ್ಯರ ಶಿಕ್ಷಣ ವ್ಯವಸ್ಥೆಯ ಇತರ ಜನಾಂಗಗಳಿಗಿಂತ ಭಿನ್ನವಾಗಿಸಿತು.

5 ಅದೇ ಪ್ರಮಾಣ ಗ್ರಂಥವು ಘೋಷಿಸುವುದು: “ಮೆಸೊಪೊಟೇಮಿಯ ಮತ್ತು ಐಗುಪ್ತದಲಿನ್ಲ ಉಚ್ಚ ಶಿಕ್ಷಣ ಯಾ ಪುಸ್ತಕದ ಕಲಿಯುವಿಕೆಯು ಶಾಸ್ತ್ರಿವರ್ಗಕ್ಕೆ ಮಿತಿಯುಳ್ಳದ್ದಾಗಿತ್ತು ಮತ್ತು ವಿಧಿ ವಿಹಿತವಾಗಿತ್ತು, ಇಸ್ರಾಯೇಲಿನಲ್ಲಿ ವಿಷಯವು ಹಾಗಿರಲಿಲ್ಲವೆಂದು ತೋರುತ್ತದೆ. ಈ ವ್ಯತ್ಯಾಸವು ಸಂಶಯವಿಲ್ಲದೇ ಇಬ್ರಿಯರಿಂದ ಬಳಸಲಾಗುತಿದ್ದ ಸರಳ ಅಕ್ಷರಮಾಲೆಯ ಪದ್ದತಿಯ ಕಾರಣದಿಂದ ಇತ್ತು. . . . ಶಿಕ್ಷಣದ ಇತಿಹಾಸಕ್ಕಾಗಿ ಅಕ್ಷರಮಾಲೆಯ ಬರವಣಿಗೆಯ ಪ್ರಾಮುಖ್ಯತೆಯನ್ನು ಅಲಕ್ಷಿಸಲೇಬಾರದು. ಅದು ಐಗುಪ್ತ, ಮೆಸೊಪೊಟೇಮಿಯ, ಮತ್ತು ಎರಡನೇ ಸಹಸ್ರ ವರ್ಷದ ಕಾನಾನಿನ ಸಾಂಪ್ರದಾಯಿಕ ಶಾಸ್ತ್ರೀಯ ಸಂಸ್ಕಾರಗಳಿಂದ ಪ್ರತ್ಯೇಕತೆಯನ್ನು ಬರಮಾಡಿತು. ಇನ್ನು ಮುಂದೆ ವಿದ್ಯಾವಂತನಾಗುವುದು, ಕ್ಲಿಷ್ಟ ಬೆಣೆಲಿಪಿ ಮತ್ತು ಚಿತ್ರಲಿಪಿ ಹಸ್ತಪ್ರತಿಗಳಲ್ಲಿ ನುರಿತ ವೃತ್ತಿಯ ಶಾಸ್ತ್ರಿಗಳ ಮತ್ತು ಯಾಜಕರ ಒಂದು ವರ್ಗವನ್ನು ಗುರುತಿಸುವಿಕೆಯೂ ಮತ್ತು ಪ್ರತ್ಯೇಕ ಲಕ್ಷಣವೂ ಆಗಿರಲಿಲ್ಲ.”

6. ಇತಿಹಾಸದ ಅತಿ ಆರಂಭದಿಂದಲೇ ಇಸ್ರಾಯೇಲ್ಯರು ವಿದ್ಯೆಯುಳ್ಳ ಜನರಾಗಿದ್ದರು ಎಂದು ಯಾವ ಬೈಬಲಿನ ಪುರಾವೆಯು ಇದೆ?

6 ಇಸ್ರಾಯೇಲ್ಯರು ವಿದ್ಯಾವಂತ ಜನರಾಗಿದ್ದರೆಂಬದಕ್ಕೆ ಬೈಬಲ್‌ ರುಜುವಾತನ್ನೀಯುತ್ತದೆ. ಅವರು ವಾಗ್ದಾನ ದೇಶವನ್ನು ಪ್ರವೇಶಿಸುವ ಮೊದಲೇ, ಯೆಹೋವನ ನಿಯಮಗಳನ್ನು ಅವರ ಬಾಗಲಿನ ನಿಲುವು ಪಟ್ಟಿಗಳ ಮೇಲೆಯೂ ಮತ್ತು ಹೆಬ್ಬಾಗಲುಗಳ ಮೇಲೆಯೂ ಬರೆಯಬೇಕೆಂದು ಅವರಿಗೆ ಹೇಳಲಾಗಿತ್ತು. (ಧರ್ಮೋಪದೇಶಕಾಂಡ 6:1, 9; 11:20; 27:1-3) ಈ ಆಜ್ಞೆಯು ನಿಸ್ಸಂದೇಹವಾಗಿ ಸಾಂಕೇತಿಕವಾಗಿದ್ದರೂ, ಸಾಮಾನ್ಯ ಇಸ್ರಾಯೇಲ್ಯನಿಗೆ ಓದಲು ಮತ್ತು ಬರೆಯಲು ತಿಳಿಯದಿರುವಲ್ಲಿ ಅದು ನಿಶ್ಚಯವಾಗಿಯೂ ಏನೂ ಅರ್ಥವಿಲ್ಲದ್ದಾಗಿರುವಂತಿತ್ತು. ಯೆಹೋಶುವ 18:9 ಮತ್ತು ನ್ಯಾಯಸ್ಥಾಪಕರು 8:14 ರಂಥ ಶಾಸ್ತ್ರವಚನಗಳು ಮೋಶೆ ಮತ್ತು ಯೆಹೋಶುವರಂಥ ನಾಯಕರಿಂದ ಹಿಡಿದು ಇತರರಿಗೆ ಕೂಡ ಇಸ್ರಾಯೇಲಿನಲ್ಲಿ ರಾಜ ಪ್ರಭುತ್ವವು ಸ್ಥಾಪನೆಯಾಗುವ ಬಹಳ ಮುಂಚಿನಿಂದಲೂ ಬರೆಯುವುದು ಹೇಗೆಂದು ಗೊತ್ತಿತ್ತು ಎಂದು ತೋರಿಸುತ್ತವೆ.—ವಿಮೋಚನಕಾಂಡ 34:27; ಯೆಹೋಶುವ 24:26.

ಕಲಿಸುವ ವಿಧಾನಗಳು

7. (ಎ) ಶಾಸ್ತ್ರವಚನಗಳಿಗನುಸಾರವಾಗಿ, ಇಸ್ರಾಯೇಲ್ಯರ ಮಕ್ಕಳಿಗೆ ಅವರ ಬುನಾದಿ ಶಿಕ್ಷಣವನ್ನು ಯಾರು ಕೊಟ್ಟರು? (ಬಿ) ಒಬ್ಬ ಫ್ರೆಂಚ್‌ ಬೈಬಲ್‌ ಪಂಡಿತರಿಂದ ಯಾವ ಮಾಹಿತಿಯು ಕೊಡಲ್ಪಟ್ಟಿದೆ?

7 ಇಸ್ರಾಯೇಲಿನಲ್ಲಿ, ಮಕ್ಕಳಿಗೆ ಶೈಶವದಿಂದ ತಂದೆಯೂ ತಾಯಿಯೂ ಕಲಿಸುತ್ತಿದ್ದರು. (ಧರ್ಮೋಪದೇಶಕಾಂಡ 11:18,19; ಜ್ಞಾನೋಕ್ತಿ 1:8; 31:26) ಫ್ರೆಂಚ್‌ ಡಿಕ್ಶೊನೇರ್‌ ಡ ಲ ಬೀಬ್ಲ್‌ನಲ್ಲಿ, ವಿದ್ವಾಂಸ ಇ. ಮಾಂಜೆನೊ ಬರೆದದ್ದು: “ಮಗುವು ಮಾತಾಡುವಂತಾಗುವಷ್ಟರಲ್ಲಿಯೆ, ನಿಯಮಶಾಸ್ತ್ರದಿಂದ ಕೆಲವು ಭಾಗಗಳನ್ನು ಕಲಿಯಿತು. ಅವನ ತಾಯಿಯು ಒಂದು ವಚನವನ್ನು ಪುನರುಚ್ಚರಿಸುವಳು; ಅದನ್ನಾತನು ತಿಳಿದಾದ ಮೇಲೆ, ಅವಳು ಇನ್ನೊಂದನ್ನು ಅವನಿಗೆ ಹೇಳಿ ಕೊಡುವಳು. ನಂತರ, ಅವರು ಜ್ಞಾಪಕದಿಂದ ಈಗಾಗಲೆ ಪಠಿಸುವ ವಚನಗಳ ಬರೆಯಲ್ಪಟ್ಟ ಮೂಲ ಪಾಠವನ್ನು ಮಕ್ಕಳ ಕೈಗಳಲ್ಲಿ ಹಾಕಲಾಗುವುದು. ಹೀಗೆ, ಅವರು ವಾಚನಕ್ಕೆ ಪರಿಚಯಿಸಲ್ಪಟ್ಟರು ಮತ್ತು ಅವರು ಬೆಳೆದು ದೊಡ್ಡವರಾಗುವಾಗ, ಕರ್ತನ ನಿಯಮವನ್ನು ಓದುವುದು ಮತ್ತು ಅದರ ಮೇಲೆ ಮನನ ಮಾಡುವುದರ ಮೂಲಕ ಅವರ ಧಾರ್ಮಿಕ ಬೋಧನೆಯನ್ನವರು ಮುಂದುವರಿಸಬಹುದಾಗಿತ್ತು.”

8. (ಎ) ಯಾವ ಬುನಾದಿಯ ಕಲಿಸುವ ವಿಧಾನವನ್ನು ಇಸ್ರಾಯೇಲಿನಲ್ಲಿ ಬಳಸಲಾಗಿತ್ತು, ಆದರೆ ಯಾವ ಪ್ರಾಮುಖ್ಯ ವೈಲಕ್ಷಣ್ಯದೊಂದಿಗೆ? (ಬಿ) ಯಾವ ಜ್ಞಾಪಕಶಕ್ತಿಯ ಸಹಾಯಕಗಳು ಬಳಸಲಾಗುತ್ತಿದ್ದವು?

8 ಉಪಯೋಗಿಸಲ್ಪಟ್ಟ ಬುನಾದಿ ಕಲಿಸುವಿಕೆಯ ವಿಧಾನವು ವಿಷಯಗಳನ್ನು ಬಾಯಿಪಾಠವಾಗಿ ಕಲಿಯುವಂಥಾದ್ದಾಗಿತ್ತೆಂದು ಇದು ಸೂಚಿಸುತ್ತದೆ. ಯೆಹೋವನ ನಿಯಮಗಳ ಮತ್ತು ಆತನ ಜನರೊಂದಿಗಿನ ಆತನ ವ್ಯವಹರಿಸುವಿಕೆಗಳ ಕುರಿತು ಕಲಿತಂಥ ವಿಷಯಗಳು ಹೃದಯದೊಳಕ್ಕೆ ತೂರಿಹೋಗಬೇಕಾಗಿತ್ತು. (ಧರ್ಮೋಪದೇಶಕಾಂಡ 6:6, 7) ಅವುಗಳನ್ನು ಮನನ ಮಾಡಬೇಕಾಗಿತ್ತು. (ಕೀರ್ತನೆ 77:11, 12) ಎಳೆಯರಿಗೆ ಮತ್ತು ವೃದ್ಧರಿಗೆ ಜ್ಞಾಪಿಸಿಕೊಳ್ಳಲನುಕೂಲವಾಗುವಂತೆ, ವಿವಿಧ ಜ್ಞಾಪಕ ಸಹಾಯಕಗಳನ್ನು ಬಳಸಲಾಗುತಿತ್ತು. ಇವುಗಳಲ್ಲಿ ಕೀರ್ತನೆಯಲ್ಲಿನ ಅನುಕ್ರಮದ ವಚನಗಳು ಅಕ್ಷರಮಾಲೆಯ ಕ್ರಮದಲ್ಲಿ ವಿಭಿನ್ನ ಅಕ್ಷರದೊಂದಿಗೆ ಆರಂಭವಾಗುವ, ಅಕ್ಷರ ಮಾಲೆಯ ಪದ ಬಂಧಗಳು (ಜ್ಞಾನೋಕ್ತಿ 31:10-31 ರಲ್ಲಿರುವಂತೆ); ಅನುಪ್ರಾಸ (ಒಂದೇ ಅಕ್ಷರ ಯಾ ಧ್ವನಿಯೊಂದಿಗೆ ಆರಂಭವಾಗುವ ವಾಕ್ಯಗಳು); ಮತ್ತು ಜ್ಞಾನೋಕ್ತಿಗಳು 30 ನೇ ಅಧ್ಯಾಯದ ಅರ್ಧದ ನಂತರ ಭಾಗದಲ್ಲಿ ಬಳಸಲಾಗಿರುವಂಥ, ಸಂಖ್ಯೆಗಳ ಉಪಯೋಗಗಳು ಸೇರಿದ್ದವು. ಅಭಿರುಚಿಕರವಾಗಿಯೆ, ಪ್ರಾಚೀನ ಹೀಬ್ರು ಬರವಣಿಗೆಯ ಅತಿ ಪುರಾತನ ಉದಾಹರಣೆಗಳಲ್ಲಿ ಒಂದಾದ ಗೆಸರ್‌ ಕ್ಯಾಲೆಂಡರ್‌, ಶಾಲಾ ಹುಡುಗನ ಜ್ಞಾಪಕ ಶಕಿಗ್ತಾಗಿರುವ ಅಭ್ಯಾಸವಾಗಿದೆಯೆಂದು ಕೆಲವು ವಿದ್ವಾಂಸರಿಂದ ಆಲೋಚಿಸಲಾಗಿದೆ.

ವ್ಯಾಸಂಗ ಕ್ರಮ

9. (ಎ) ಇಸ್ರಾಯೇಲ್‌ ಮಕ್ಕಳ ಅಧ್ಯಯನ ಕಾರ್ಯಕ್ರಮದ ಪ್ರಮುಖ ಭಾಗವು ಯಾವುದಾಗಿತ್ತು? (ಬಿ) ವಾರ್ಷಿಕ ಹಬ್ಬಗಳೊಂದಿಗಿನ ಸಂಬಂಧದಲ್ಲಿ ಮಾಡಲ್ಪಡುವ ಕಲಿಸುವಿಕೆಯ ವಿಷಯದಲ್ಲಿ ಒಂದು ಬೈಬಲ್‌ ಎನ್‌ಸೈಕ್ಲೊಪೀಡಿಯವು ಏನನ್ನು ನಮೂದಿಸುತ್ತದೆ?

9 ಇಸ್ರಾಯೇಲ್‌ನಲ್ಲಿನ ವಿದ್ಯೆಯು ಓದು ಮತ್ತು ಬರಹ ಕಲಿಯುವುದಕ್ಕೆ ಸೀಮಿತವಾಗಿರಲಿಲ್ಲ. ಕಲಿಸಲ್ಪಡಲಾಗುತ್ತಿದ್ದ ಒಂದು ಪ್ರಾಮುಖ್ಯ ವಿಷಯವು ಇತಿಹಾಸವಾಗಿತ್ತು. ತನ್ನ ಜನರ ಪರವಾಗಿ ಯೆಹೋವನ ಅದ್ಭುತ ಕೆಲಸಗಳನ್ನು ಕಲಿಯುವುದು ವ್ಯಾಸಂಗದ ಒಂದು ಪ್ರಧಾನ ಭಾಗವಾಗಿತ್ತು. ಈ ಐತಿಹಾಸಿಕ ನಿಜಾಂಶಗಳನ್ನು ಸಂತತಿಯಿಂದ ಸಂತತಿಗೆ ಕಲಿಸಲ್ಪಡಬೇಕಾಗಿತ್ತು. (ಧರ್ಮೋಪದೇಶಕಾಂಡ 4:9, 10; ಕೀರ್ತನೆ 78:1-7) ವಾರ್ಷಿಕ ಹಬ್ಬಗಳ ಆಚರಣೆಯು ತನ್ನ ಮಕ್ಕಳಿಗೆ ಕಲಿಸಲು ಕುಟುಂಬದ ಶಿರಸ್ಸಿಗೆ ಒಂದು ಒಳ್ಳೇ ಸಂದರ್ಭವನ್ನೊದಗಿಸಿತು. (ವಿಮೋಚನಕಾಂಡ 13:14; ಯಾಜಕಕಾಂಡ 23:37-43) ಇದರ ಸಂಬಂಧದಲ್ಲಿ ದಿ ಇಂಟರ್‌ನ್ಯಾಷನಲ್‌ ಸ್ಟ್ಯಾಂಡರ್ಡ್‌ ಬೈಬಲ್‌ ಎನ್‌ಸೈಕ್ಲೊಪೀಡಿಯ ನಮೂದಿಸುವುದು: “ಮನೆಯಲ್ಲಿ ತಂದೆಯ ಬೋಧನೆ ಮತ್ತು ಹಬ್ಬಗಳ ಪ್ರಾಮುಖ್ಯತೆಯ ಬಗ್ಗೆ ಆತನ ವಿವರಣೆಯ ಮೂಲಕ, ಗತಕಾಲದಲ್ಲಿ ದೇವರು ಹೇಗೆ ತನ್ನನ್ನು ತಾನೇ ಅವರಿಗೆ ವ್ಯಕ್ತಪಡಿಸಿಕೊಂಡಿದ್ದನು, ಸದ್ಯದಲ್ಲಿ ಅವರು ಹೇಗೆ ಜೀವಿಸುತ್ತಿರಬೇಕು, ಮತ್ತು ಆತನ ಜನರ ಭವಿಷ್ಯದ ವಿಷಯದಲ್ಲಿ ದೇವರ ವಾಗ್ದಾನಗಳು ಏನಾಗಿದ್ದವು ಎಂದು ಇಬ್ರಿಯ ಮಕ್ಕಳಿಗೆ ಕಲಿಸಲಾಗುತಿತ್ತು.”

10. ಯಾವ ವ್ಯಾವಹಾರಿಕ ತರಬೇತಿಯು ಕೊಡಲ್ಪಟ್ಟಿತ್ತು: ಹುಡುಗಿಯರಿಗೆ? ಹುಡುಗರಿಗೆ?

10 ಹೆತ್ತವರ ಶಿಕ್ಷಣದಲ್ಲಿ ವ್ಯಾವಹಾರಿಕ ತರಬೇತಿಯು ಸೇರಿತ್ತು. ಹುಡುಗಿಯರಿಗೆ ಮನೆಯ ಕೌಶಲ್ಯಗಳನ್ನು ಕಲಿಸಲಾಗುತ್ತಿತ್ತು. ಇವುಗಳು ಅನೇಕ ಮತ್ತು ವಿವಿಧವಾಗಿದುವ್ದೆಂದು ಜ್ಞಾನೋಕ್ತಿಗಳ ಮುಕ್ತಾಯದ ಅಧ್ಯಾಯವು ತೋರಿಸಿಕೊಡುತ್ತದೆ; ಅವುಗಳಲ್ಲಿ ನೂಲುವುದು, ನೇಯುವುದು, ಅಡಿಗೆ ಮಾಡುವುದು, ವ್ಯಾಪಾರ ಮಾಡುವುದು, ಮತ್ತು ಕುಟುಂಬದ ಸಾಮಾನ್ಯ ನಿರ್ವಹಣೆಯು ಸೇರಿದ್ದುವು. ಹುಡುಗರಿಗೆ ಸಾಧಾರಣವಾಗಿ, ವ್ಯವಸಾಯದಲ್ಲಾಗಲಿ ಯಾ ಯಾವುದೇ ವೃತ್ತಿ ಯಾ ಕೈಕಸಬಿನಲಿಯ್ಲಾಗಲಿ, ಅವರ ತಂದೆಗಳ ಐಹಿಕ ಉದ್ಯೋಗವನ್ನು ಕಲಿಸಲಾಗುತ್ತಿತ್ತು. ನಂತರದ ಸಮಯಗಳಲ್ಲಿ ಯೆಹೂದಿ ರಬ್ಬಿಗಳು ವಾಡಿಕೆಯಾಗಿ: “ತನ್ನ ಮಗನಿಗೆ ಉಪಯುಕಕ್ತರ ಉದ್ಯೋಗವನ್ನು ಕಲಿಸದೇ ಇರುವವನು, ಆತನ ಮಗನು ಕಳ್ಳನಾಗುವಂತೆ ಬೆಳೆಸುತ್ತಾನೆ” ಎಂದು ಹೇಳುತ್ತಿದ್ದರು.

11. ಇಸ್ರಾಯೇಲಿನಲ್ಲಿ ವಿದ್ಯೆಯ ಪ್ರಾಮುಖ್ಯ ಉದ್ದೇಶವನ್ನು ಯಾವುದು ತೋರಿಸುತ್ತದೆ, ಮತ್ತು ತರುಣರಿಗೆ ಇಂದು ಯಾವ ಪಾಠವು ಇದರಲ್ಲಿ ಸೇರಿದೆ?

11 ಇಸ್ರಾಯೇಲಿನಲ್ಲಿ ಬಳಸಲಾದಂಥ ಕಲಿಸುವಿಕೆಯ ವಿಧಾನಗಳ ಆತ್ಮಿಕ ಆಳವು ಜ್ಞಾನೋಕ್ತಿಗಳ ಇಡೀ ಪುಸ್ತಕದಲ್ಲಿ ವ್ಯಕ್ತವಾಗುತ್ತದೆ. ವಿವೇಕ, ಶಿಸ್ತು, ತಿಳುವಳಿಕೆ, ಒಳನೋಟ, ತೀರ್ಪು, ಸೂಕ್ಷ್ಮಬುದ್ಧಿ, ಜ್ಞಾನ, ಮತ್ತು ಆಲೋಚನಾ ಸಾಮರ್ಥ್ಯಗಳಂಥ ಉಚ್ಚ ವಿಷಯಗಳನ್ನು—ಇವೆಲ್ಲವೂ “ಯೆಹೋವನ ಭಯ”ದಲ್ಲಿ—“ಅನನುಭವಿಗಳಿಗೆ” ಕಲಿಸುವ ಉದ್ದೇಶವಾಗಿತ್ತೆಂದು ಅದು ತೋರಿಸುತ್ತದೆ. (ಜ್ಞಾನೋಕ್ತಿ 1:1-7; 2:1-14) ಅದು ಒಬ್ಬನ ಯಾ ಒಬ್ಬಳ ವಿದ್ಯೆಯನ್ನು ಪ್ರಗತಿಗೊಳಿಸಲು ದೇವರ ಸೇವಕರಲ್ಲೊಬ್ಬರನ್ನು ಇಂದು ಪ್ರೇರೇಪಿಸ ಬೇಕಾದಂಥ ಉದ್ದೇಶಗಳನ್ನು ಒತ್ತಿ ಹೇಳುತ್ತದೆ.

ಯಾಜಕರು, ಲೇವಿಯರು, ಮತ್ತು ಪ್ರವಾದಿಗಳು

12. ಇಸ್ರಾಯೇಲ್ಯ ಜನರ ಶಿಕ್ಷಣದಲ್ಲಿ ಹೆತ್ತವರನ್ನು ಬಿಟ್ಟು ಯಾರು ಕೂಡ ಪಾಲು ತಕ್ಕೊಂಡರು, ಮತ್ತು “ನಿಯಮಶಾಸ್ತ್ರ”ವೆಂದು ಭಾಷಾಂತರಿಸಿದ ಹೀಬ್ರು ಪದದ ಮೂಲ ಅರ್ಥವು ಏನಾಗಿದೆ?

12 ಬುನಾದಿ ಶಿಕ್ಷಣವು ಹೆತ್ತವರಿಂದ ಒದಗಿಸಲ್ಪಟ್ಟಿರುವಾಗ, ಯೆಹೋವನು ತನ್ನ ಜನರಿಗೆ ಯಾಜಕರಿಂದ, ಯಾಜಕರಲ್ಲದ ಲೇವಿಯರಿಂದ, ಮತ್ತು ಪ್ರವಾದಿಗಳ ಮೂಲಕ ಇನ್ನೂ ಹೆಚ್ಚಿನ ಶಿಕ್ಷಣವನ್ನು ನೀಡಿದನು. ಲೇವಿ ಕುಲಕ್ಕೆ ಕೊಟ್ಟ ತನ್ನ ಕೊನೆಯ ಆಶೀರ್ವಾದದಲ್ಲಿ, ಮೋಶೆಯು ಹೇಳಿದ್ದು: “ಅವರು ಯಾಕೋಬ್‌ ವಂಶದವರಿಗೆ ನಿನ್ನ ನಿರ್ಣಯಗಳನ್ನು ತಿಳಿಸುವರು; ಇಸ್ರಾಯೇಲ್ಯರಿಗೆ ನಿನ್ನ ಧರ್ಮಶಾಸ್ತ್ರವನ್ನು ಕಲಿಸುವರು.” (ಧರ್ಮೋಪದೇಶಕಾಂಡ 33:8, 10) ಗಮನಾರ್ಹವಾಗಿ, ಹೀಬ್ರುವಿನಲ್ಲಿ (ಟೋರಾ) “ನಿಯಮಶಾಸ್ತ್ರ” ಎಂಬ ಈ ಪದವು “ಪ್ರದರ್ಶಿಸಲು,” “ಕಲಿಸಲು,” “ಬೋಧಿಸಲು” ಎಂದರ್ಥ ಕೊಡುವ ಮೂಲದ ಕ್ರಿಯಾಪದದ ರೂಪದಿಂದ ಪಡೆದುಕೊಳ್ಳಲ್ಪಟ್ಟಿದೆ. ಎನ್‌ಸೈಕ್ಲೊಪೀಡಿಯ ಜುಡೈಕಾ ಹೇಳುವುದು. “ಆದದರಿಂದ [ಟೋರಾ] ಎಂಬ ಪದದ ಅರ್ಥವು ‘ಕಲಿಸುವಿಕೆ,’ ‘ತತ್ವ,’ ಯಾ ‘ಬೋಧನೆ,’ ಎಂದಾಗಿದೆ.”

13. ಇತರ ಜನಾಂಗಗಳ ಕಾನೂನು ವ್ಯವಸ್ಥೆಯಿಂದ ಇಸ್ರಾಯೇಲ್ಯರ ಕಾನೂನು ಭಿನ್ನವಾಗಿತ್ತು ಯಾಕೆ?

13 ಇದು ಕೂಡ ಇಸ್ರಾಯೇಲ್ಯರನ್ನು ಇತರ ಜನಾಂಗಗಳಿಂದ ಮತ್ತು ಆಧುನಿಕ ದಿನದ ರಾಷ್ಟ್ರಗಳಿಂದಲೂ ಪ್ರತ್ಯೇಕವಾಗಿಟ್ಟಿತು. ರಾಜಕೀಯ ರಾಷ್ಟ್ರಗಳಿಗೆ ಇಂದು ಕಾನೂನುಗಳ ರಚನೆಯಿದೆ, ಆದರೆ ಸಾಮಾನ್ಯ ಜನಸಂಖ್ಯೆಯಲ್ಲಿ ಕೇವಲ ಒಂದು ಅಂಶ ಮಾತ್ರ ಅದನ್ನು ತಿಳಿದಿರುತ್ತದೆ. ಜನರು ಕಾನೂನನ್ನು ಮೀರಿದಾಗ, ತಮ್ಮನ್ನು ಸಂರಕ್ಷಿಸಲು ವಕೀಲರಿಗೆ ಹೆಚ್ಚು ಸಂಭಾವನೆಯನ್ನು ಪಾವತಿ ಮಾಡಬೇಕು. ಕಾನೂನು ಶಾಲೆಗಳು ಪ್ರವೀಣರಿಗಾಗಿ ಇವೆ. ಆದರೂ, ಇಸ್ರಾಯೇಲಿನಲ್ಲಿ ನಿಯಮವು ಅವರು ದೇವರನ್ನು ಹೇಗೆ ಆರಾಧಿಸಬೇಕು ಮತ್ತು ಆತನ ಚಿತ್ತದೊಂದಿಗೆ ಹೊಂದಿಕೆಯಲ್ಲಿ ಹೇಗೆ ಜೀವಿಸಬೇಕೆಂದು ಆತನು ಬಯಸುತ್ತಾನೆಂದು ತಿಳಿಸುವ ದೇವರ ಸಾಧನವಾಗಿತ್ತು. ಇತರ ಕಾನೂನಿನ ಸಂಗ್ರಹಗಳಿಗೆ ಅಸದೃಶವಾಗಿ, ಅದರಲ್ಲಿ ದೇವರಿಗಾಗಿ ಮತ್ತು ನೆರೆಯವರಿಗಾಗಿ ಪ್ರೀತಿಯು ಒಳಗೂಡಿತ್ತು. (ಯಾಜಕಕಾಂಡ 19:18; ಧರ್ಮೋಪದೇಶಕಾಂಡ 6:5) ನಿಯಮಶಾಸ್ತ್ರವು ವ್ಯಕ್ತಿಸ್ವರೂಪವಿಲ್ಲದ ಕಾನೂನಿನ ಪುಸ್ತಕಕ್ಕಿಂತ ಬೇರೆಯೇ ಆಗಿತ್ತು. ಅದು ತತ್ವಗಳನ್ನು, ಕಲಿಸುವಿಕೆಗಳನ್ನು, ಮತ್ತು ಬೋಧನೆಗಳನ್ನು ಕಲಿಯಬೇಕಾಗಿರುವ ಜೀವಿತದ ಒಂದು ಮಾರ್ಗದಲ್ಲಿ ಒದಗಿಸಿತು.

14. ಲೇವಿಯ ಯಾಜಕತ್ವವನ್ನು ಯೆಹೋವನು ತ್ಯಜಿಸಿದ್ದರ ಒಂದು ಕಾರಣವು ಯಾವುದು? (ಮಲಾಕಿಯ 2:7, 8)

14 ನಂಬಿಗಸ್ತರಾಗಿದ್ದಾಗ, ಯಾಜಕರು ಮತ್ತು ಪ್ರವಾದಿಗಳು ಜನರಿಗೆ ಕಲಿಸುವ ತಮ್ಮ ಜವಾಬ್ದಾರಿಯನ್ನು ನೆರವೇರಿಸಿದರು. ಆದರೆ ಅನೇಕ ಬಾರಿ ಜನಾಂಗವನ್ನು ಶಿಕ್ಷಿತರನ್ನಾಗಿ ಮಾಡುವ ತಮ್ಮ ಕರ್ತವ್ಯವನ್ನು ಯಾಜಕರು ಅಲಕ್ಷ್ಯ ಮಾಡಿದರು. ದೇವರ ನಿಯಮಶಾಸ್ತ್ರದಲ್ಲಿನ ವಿದ್ಯಾಭ್ಯಾಸದ ಈ ಕೊರತೆಯು ಯಾಜಕರಿಗೂ ಜನರಿಗೂ ಭಯಂಕರ ಪರಿಣಾಮಗಳನ್ನು ತರಲಿಕ್ಕಿತ್ತು. ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ಯೆಹೋವನು ಪ್ರವಾದಿಸಿದ್ದು: “ನನ್ನ ಜನರು ಜ್ಞಾನಹೀನರಾಗಿ ಹಾಳಾಗಿದ್ದಾರೆ; ನೀವು ಜ್ಞಾನವನ್ನು ತಳ್ಳಿ ಬಿಟ್ಟದ್ದರಿಂದ ಇನ್ನು ನನ್ನ ಯಾಜಕ ಸೇವೆ ಮಾಡದಂತೆ ನಾನು ನಿಮ್ಮನ್ನು ತಳ್ಳಿಬಿಡುವೆನು; ನೀವು ನಿಮ್ಮ ಧರ್ಮೋಪದೇಶವನ್ನು ಮರೆತ ಕಾರಣ ನಾನು ನಿಮ್ಮ ಸಂತತಿಯವರನ್ನು ಮರೆಯುವೆನು.”—ಹೋಶೇಯ 4:6.

15. (ಎ) ಯಾಜಕರನ್ನು ಹಿಡಿದು ಬೇರೆ ಯಾರನ್ನು ಕೂಡ ಇಸ್ರಾಯೇಲ್ಯರ ಬೋಧಕರನ್ನಾಗಿ ಯೆಹೋವನು ಎಬ್ಬಿಸಿದನು, ಮತ್ತು ಶಿಕ್ಷಕರೋಪಾದಿ ಅವರ ಪಾತ್ರದ ಬಗ್ಗೆ ಒಬ್ಬ ಬೈಬಲ್‌ ಪಂಡಿತನು ಏನು ಬರೆದನು? (ಬಿ) ಯೆಹೋವನ ಜ್ಞಾನ ಮತ್ತು ಆತನ ಮಾರ್ಗಗಳನ್ನು ಅವರು ತ್ಯಜಿಸಿದ್ದರಿಂದ ಇಸ್ರಾಯೇಲ್‌ ಮತ್ತು ಯೆಹೂದಕ್ಕೆ ಕೊನೆಗೆ ಏನು ಸಂಭವಿಸಿತು?

15 ಯಾಜಕರಂತೆಯೇ, ಯೆಹೋವನು ಪ್ರವಾದಿಗಳನ್ನು ಬೋಧಕರನ್ನಾಗಿ ಎಬ್ಬಿಸಿದನು. ನಾವು ಓದುವುದು: “ಯೆಹೋವನು ದರ್ಶಿಗಳೆನಿಸಿಕೊಂಡ ತನ್ನ ಪ್ರವಾದಿಗಳ ಮುಖಾಂತರವಾಗಿ ಇಸ್ರಾಯೇಲ್ಯ ಯೆಹೂದ್ಯರಿಗೆ—ನೀವು ನಿಮ್ಮ ದುರಾಚಾರವನ್ನು ಬಿಟ್ಟು ನಾನು ನಿಮ್ಮ ಪಿತೃಗಳಿಗೂ ನನ್ನ ಸೇವಕರಾದ ಪ್ರವಾದಿಗಳ ಮುಖಾಂತರವಾಗಿ ನಿಮಗೂ ಕೊಟ್ಟಂಥ ನನ್ನ ಎಲ್ಲಾ ಆಜ್ಞಾನಿಯಮವಿಧಿಗಳನ್ನು ಕೈಕೊಂಡು ನಡೆಯಿರಿ ಎಂದು ಖಂಡಿತವಾಗಿ” ಹೇಳಿದೆನು. (2 ಅರಸು 17:13) ಶಿಕ್ಷಣವನ್ನು ನೀಡುವವರಾದ ಪ್ರವಾದಿಗಳ ಪಾತ್ರದ ವಿಷಯದಲ್ಲಿ, ಚ್‌ ಬೈಬಲ್‌ ಪಂಡಿತರಾದ ರೋಲನ್‌ ಡ ವ್ಹೊ ಬರೆದದ್ದು: “ಪ್ರವಾದಿಗಳಿಗೂ, ಜನರಿಗೆ ಬೋಧಿಸುವ ಒಂದು ನಿಯೋಗವಿತ್ತು; ಅದು ಕಡಿಮೆ ಪಕ್ಷ ಭವಿಷ್ಯತ್ತನ್ನು ಮುನ್ನುಡಿಯುವ ಅವರ ಕಾರ್ಯಭಾರದಷ್ಟೇ ಅದರ ಒಂದು ಭಾಗವಾಗಿತ್ತು. ಮತ್ತು ಪ್ರವಾದನಾ ಪ್ರೇರಣೆಗಳು ಅವರ ಸಾರುವಿಕೆಗೆ ದೇವರ ವಾಕ್ಯದ ಅಧಿಕಾರವನ್ನು ಕೊಟ್ಟಿತು. ರಾಜಪ್ರಭುತ್ವದ ಕೆಳಗೆ ಪ್ರವಾದಿಗಳು ಜನರ ಧಾರ್ಮಿಕ ಮತ್ತು ನೈತಿಕ ಬೋಧಕರಾಗಿದ್ದರೆಂಬುದು ನಿಶ್ಚಯ; ಮತ್ತು, ನಾವು ಕೂಡಿಸಬಹುದೇನಂದರೆ, ಅವರು ಅವರ ಬೋಧಕರುಗಳೆಲ್ಲರಲ್ಲಿ ಸದಾ ಆಲಿಸಲ್ಪಡದಿದ್ದರೂ, ಸರ್ವೋತ್ತಮರಾಗಿದ್ದರು.” ಯೆಹೋವನ ಪ್ರವಾದಿಗಳಿಗೆ ಗಮನ ಕೊಡಲು ತಪ್ಪುವುದರ ಜೊತೆಗೆ ಯಾಜಕರಿಂದ ಮತ್ತು ಲೇವಿಯರಿಂದ ಯೋಗ್ಯ ಶಿಕ್ಷಣದ ಕೊರತೆಯಿಂದಾಗಿ, ಇಸ್ರಾಯೇಲ್ಯರು ಯೆಹೋವನ ಮಾರ್ಗಗಳನ್ನು ತೊರೆದರು. ಸಮಾರ್ಯವು ಸಾ.ಶ.ಪೂ. 740ರಲ್ಲಿ ಅಶ್ಶೂರ್ಯರ ವಶವಾಯಿತ, ಮತ್ತು ಯೆರೂಸಲೇಮ್‌ ಮತ್ತದರ ದೇವಾಲಯವು ಸಾ.ಶ.ಪೂ. 607 ರಲ್ಲಿ ಬೆಬಿಲೋನ್ಯರ ಮೂಲಕ ನಾಶವಾಯಿತು.

ಬಂದಿವಾಸ ಮತ್ತು ನಂತರದ ಸಮಯಗಳಲ್ಲಿ ಶಿಕ್ಷಣ

16, 17. (ಎ) ಯಾವ ವ್ಯಾಸಂಗದ ಕಾರ್ಯಕ್ರಮವನ್ನು ದಾನಿಯೇಲ ಮತ್ತು ಆತನ ಸಹವಾಸಿಗಳ ಮೇಲೆ ಒತ್ತಾಯಿಸಲಾಗಿತ್ತು? (ಬಿ) ಈ ಬಾಬೆಲಿನ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುವಂತೆ ಮತ್ತು ಆದರೂ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವಂತೆ ಅವರನ್ನು ಯಾವುದು ಶಕ್ತರನ್ನಾಗಿ ಮಾಡಿತು?

16 ಯೆರೂಸಲೇಮಿನ ನಾಶನದ ಸುಮಾರು ಹತ್ತು ವರ್ಷಗಳ ಮುಂಚೆ, ರಾಜ ಯೆಹೋಯಾಖೀನ ಮತ್ತು ರಾಜಕುಮಾರರ ಮತ್ತು ಶ್ರೇಷ್ಠ ಪುರುಷರ ಒಂದು ಗುಂಪು ರಾಜ ನೆಬೂಕದ್ನೆಚ್ಚರನ ಮೂಲಕ ಬಾಬೆಲಿಗೆ ಒಯ್ಯಲ್ಪಟ್ಟಿತು. (2 ಅರಸು 24:15) ಅವರೊಳಗೆ ದಾನಿಯೇಲ ಮತ್ತು ಮೂರು ಯುವ ಕುಲೀನರಿದ್ದರು. (ದಾನಿಯೇಲ 1:3, 6) ಆ ನಾಲ್ಕು ಮಂದಿ “ಕಸೀಯ್ದ ಪಂಡಿತರ ಭಾಷೆಯನ್ನೂ ಶಾಸ್ತ್ರಗಳನ್ನೂ” ಕಲಿಯುವಲ್ಲಿ ಮೂರು ವರುಷದ ವಿಶೇಷ ತರಬೇತಿಯ ಪಾಠಕ್ರಮವನ್ನು ಹೊಂದಬೇಕೆಂದು ನೆಬೂಕದ್ನೆಚ್ಚರನು ಆಜ್ಞಾಪಿಸಿದನು. ಅದಲ್ಲದೆ, “ತನ್ನ ಭೋಜನಪದಾರ್ಥಗಳನ್ನೂ ತಾನು ಕುಡಿಯುವ ದ್ರಾಕ್ಷಾರಸವನ್ನೂ ಅವರಿಗೆ ದಿನವಹಿ ಬಡಿಸುವ ಏರ್ಪಾಡುಮಾಡಿ” ದನು. (ದಾನಿಯೇಲ 1:4, 5) ಇದು ಅನೇಕ ಕಾರಣಗಳಿಗಾಗಿ ಅಪಾಯಕಾರಕವಾಗಿರುವ ಸಾಧ್ಯತೆ ಇತ್ತು. ಶಿಕ್ಷಣದ ಕಾರ್ಯಕ್ರಮವು ಕೇವಲ ಮೂರು ವರ್ಷದ ಒಂದು ಭಾಷಾ ಪಾಠಕ್ರಮವಾಗಿ ಇಲ್ಲದೆ ಇರುವ ಸಂಭವವಿತ್ತು. ಈ ಭಾಗದಲ್ಲಿ “ಕಸೀಯ್ದರು” ಎಂಬ ಪದವು, “ಬಾಬೆಲಿನವರನ್ನು ಒಂದು ಜನವನ್ನಾಗಿ ಅಲ್ಲ, ಬದಲಾಗಿ ವಿದ್ಯಾವಂತ ವರ್ಗವನ್ನಾಗಿ” ಸೂಚಿಸುತ್ತದೆಂದು ಕೆಲವರ ಆಲೋಚನೆ. (ದ ಸನ್ಸೀನೊ ಬುಕ್ಸ್‌ ಆಫ್‌ ದ ಬೈಬಲ್‌) ದಾನಿಯೇಲನ ಮೇಲಿನ ಕಥನದಲ್ಲಿ, ಕೆ. ಎಫ್‌. ಕೈಲ್‌ ನಮೂದಿಸುವುದು: “ದಾನಿಯೇಲ ಮತ್ತು ಅವನ ಸಂಗಾತಿಗಳು, ಬಾಬೆಲಿನ ಶಾಲೆಗಳಲ್ಲಿ ಕಲಿಸಲ್ಪಡುತ್ತಿದ್ದ ಕಸೀಯ್ದ ಯಾಜಕರ ಮತ್ತು ವಿದ್ಯಾವಂತ ಪುರುಷರ ವಿವೇಕದಲ್ಲಿ ಬೋಧಿಸಲ್ಪಡಲಿದ್ದರು.” ರಾಜಮನೆತನದ ಭೋಜನಾ ಏರ್ಪಾಡು ಕೂಡ ಮೋಶೆಯ ನಿಯಮದ ಮೂಲಕ ಹಾಕಿದ ಪಥ್ಯದ ನಿರ್ಬಂಧಗಳನ್ನು ಉಲ್ಲಂಘಿಸುವಂತೆ ಅವರಿಗೆ ಆಸ್ಪದ ಕೊಟ್ಟಿತು. ಅವರು ಹೇಗೆ ವರ್ತಿಸಿದರು?

17 ನಾಲ್ವರು ಯೌವನಸ್ಥ ಯೆಹೂದಿ ಕುಲೀನರ ಪ್ರತಿನಿಧಿಯಾಗಿ, ದಾನಿಯೇಲನು ಅವರ ಮನಸ್ಸಾಕ್ಷಿಯನ್ನು ಉಲ್ಲಂಘಿಸಿ ಅವರು ತಿನ್ನುವುದಿಲ್ಲ ಮತ್ತು ಕುಡಿಯುವುದಿಲ್ಲವೆಂದು ಆರಂಭದಿಂದಲೇ ಸ್ಪಷ್ಟಪಡಿಸಿದ್ದನು. (ದಾನಿಯೇಲ 1:8, 11-13) ಈ ಸ್ಥಿರ ನಿಲುವನ್ನು ಯೆಹೋವನು ಆಶೀರ್ವದಿಸಿದನು ಮತ್ತು ಬಾಬೆಲಿನ ಕಂಚುಕಿಯರ ಅಧ್ಯಕ್ಷನ ಹೃದಯವನ್ನು ಮೃದುಗೊಳಿಸಿದನು. (ದಾನಿಯೇಲ 1:9, 14-16) ಅವರ ವ್ಯಾಸಂಗದ ವಿಷಯದಲ್ಲಿಯಾದರೋ, ಎಲ್ಲ ನಾಲ್ಕು ಇಬ್ರಿಯ ಯುವಕರ ಜೀವಿತದಲ್ಲಿನ ಅನಂತರದ ಘಟನೆಗಳು ಸಂಶಯಾತೀತವಾಗಿ ರುಜುಪಡಿಸುತ್ತವೇನಂದರೆ, ಬಾಬೆಲಿನ ಸಂಸ್ಕೃತಿಯಲ್ಲಿ ಅವರ ಕಡ್ಡಾಯ ಮೂರು ವರ್ಷದ ವ್ಯಾಸಂಗದ ಪಾಠಕ್ರಮವು ಯೆಹೋವನ ಕಡೆಗಿರುವ ಅವರ ಗಾಢವಾದ ಒಲವಿನಿಂದ ಮತ್ತು ಆತನ ಶುದ್ಧ ಆರಾಧನೆಯಿಂದ ಅವರನ್ನು ದಾರಿ ತಪ್ಪುವಂತೆ ಮಾಡಲಿಲ್ಲ. (ದಾನಿಯೇಲ 3 ಮತ್ತು 6 ನೇ ಅಧ್ಯಾಯಗಳು) ಬಾಬೆಲಿನ ಈ ಉಚ್ಚ ಶಿಕ್ಷಣದಲ್ಲಿ ಬಲವಂತದ ಮೂರು ವರ್ಷದ ಮುಳುಗಿಸುವಿಕೆಯಿಂದ ಪೆಟ್ಟಿಲ್ಲದೆ ತಪ್ಪಿಸಿಕೊಳ್ಳುವಂತೆ ಯೆಹೋವನು ಅವರನ್ನು ಸಾಧ್ಯಗೊಳಿಸಿದನು. “ಹೀಗಿರಲು ದೇವರು ಆ ನಾಲ್ಕು ಮಂದಿ ಯುವಕರಿಗೆ ಸಕಲಶಾಸ್ತ್ರಗಳಲ್ಲಿಯೂ ವಿದ್ಯೆಗಳಲ್ಲಿಯೂ ಜ್ಞಾನವಿವೇಕಗಳನ್ನು ದಯಪಾಲಿಸಿದನು; ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ ದಿವ್ಯದರ್ಶನಗಳನ್ನೂ ಗ್ರಹಿಸುವದರಲ್ಲಿ ಪ್ರವೀಣನಾದನು. ಬಳಿಕ ರಾಜನು ಶಾಸ್ತ್ರೀಯ ವಿದ್ಯೆಯ ಸರ್ವ ವಿಷಯಗಳಲ್ಲಿ ಅವರನ್ನು ವಿಚಾರಮಾಡಲು ಅವರು ಅವನ ಪೂರ್ಣ ರಾಜ್ಯದಲ್ಲಿನ ಎಲ್ಲಾ ಜೋಯಿಸರಿಗಿಂತಲೂ ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿ ಕಂಡುಬಂದರು.”—ದಾನಿಯೇಲ 1:17, 20.

18. ಬಾಬೆಲಿನ ಬಂದಿವಾಸದ ನಂತರ ಯೆಹೂದದಲ್ಲಿ ಯಾವ ವಿದ್ಯಾಭ್ಯಾಸದ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು?

18 ಬಾಬೆಲಿನ ಬಂದಿವಾಸದ ನಂತರ, ಒಂದು ಮಹಾ ಶಿಕ್ಷಣಾ ಕಾರ್ಯವು “ಯೆಹೋವನ ಧರ್ಮಶಾಸ್ತ್ರವನ್ನು ಅಭ್ಯಾಸಿಸಿ ಅನುಸರಿಸಲಿಕ್ಕೂ ಇಸ್ರಾಯೇಲ್ಯರಿಗೆ ಅದರ ವಿಧಿನ್ಯಾಯಗಳನ್ನು ಕಲಿಸಲಿಕ್ಕೂ ದೃಢಮಾಡಿಕೊಂಡಿದ್ದ” ಪ್ರವಾದಿಯಾದ ಎಜ್ರನ ಮೂಲಕ ನಿರ್ವಹಿಸಲ್ಪಟ್ಟಿತು. (ಎಜ್ರ 7:10) ಇದರಲ್ಲಿ ಅವನಿಗೆ “ಧರ್ಮಶಾಸ್ತ್ರವನ್ನು ಜನರು ಗ್ರಹಿಸುವಂತೆ” ಮಾಡುತ್ತಿದ್ದ ಲೇವಿಯರಿಂದ ಸಹಾಯ ದೊರಕಿತು. (ನೆಹೆಮೀಯ 8:7) ಎಜ್ರನು ಒಬ್ಬ ಬೈಬಲ್‌ ಪಂಡಿತನಾಗಿದ್ದನು ಮತ್ತು “ಪಾರಂಗತನಾದ ಶಾಸ್ತ್ರಿಯಾಗಿದ್ದನು,” ಯಾ ಲಿಪಿಕಾರನಾಗಿದ್ದನು. (ಎಜ್ರ 7:6) ಆತನ ದಿನಗಳಲ್ಲೇ ಶಾಸ್ತ್ರಿಗಳು ಒಂದು ವರ್ಗವಾಗಿ ಪ್ರಾಧಾನ್ಯಕ್ಕೆ ಬಂದಿದ್ದರು.

ರಬ್ಬೀಯ ಶಾಲೆಗಳು

19. ಯೇಸುವು ಭೂಮಿಗೆ ಬರುವಷ್ಟರಲ್ಲಿ ಯಾವ ವಿಧದ ಬೋಧಕರ ವರ್ಗವು ಇಸ್ರಾಯೇಲ್ಯರಲ್ಲಿ ಕಾಣಿಸಿಕೊಂಡಿತ್ತು, ಮತ್ತು ಯಾವ ಪ್ರಾಮುಖ್ಯ ಕಾರಣಗಳಿಗೋಸ್ಕರ ಆತನು ಮತ್ತು ಆತನ ಶಿಷ್ಯರು ಯೆಹೂದಿ ಉಚ್ಚ ಶಿಕ್ಷಣವನ್ನು ಪಡೆಯಲಿಲ್ಲ?

19 ಯೇಸುವು ಭೂಮಿಯ ಮೇಲೆ ಕಾಣಿಸಿಕೊಳ್ಳುವಷ್ಟರೊಳಗೆ, ಶಾಸ್ತ್ರಿಗಳು ದೇವರ ವಾಕ್ಯದ ಸತ್ಯ ಬೋಧನೆಗಳಿಗಿಂತ ಸಂಪ್ರದಾಯಗಳ ಒಲವುಳ್ಳ, ಬೋಧಕರ ಒಂದು ಗಣ್ಯ ವರ್ಗವಾಗಿ ಪರಿಣಮಿಸಿದ್ದರು. ಅವರು “ನನ್ನ ಘನತೆಯುಳ್ಳವರೇ (ಶ್ರೇಷ್ಠನೇ)” ಎಂಬರ್ಥದ ಒಂದು ಗೌರವ ಸೂಚಕ ಬಿರುದಾಗಿ ಬಂದಿದ್ದ “ರಬ್ಬಿ” ಎಂಬುದಾಗಿ ಕರೆಯಲ್ಪಡಲು ಇಷ್ಟಪಟ್ಟರು. (ಮತ್ತಾಯ 23:6, 7, NW ಪಾದಟಿಪ್ಪಣಿ) ಕ್ರೈಸ್ತ ಗ್ರೀಕ್‌ ಬರಹಗಳಲ್ಲಿ, ಅನೇಕಬಾರಿ ಶಾಸ್ತ್ರಿಗಳನ್ನು ಫರಿಸಾಯರೊಂದಿಗೆ ಜೋಡಿಸಲಾಗಿದೆ, ಅವರಲ್ಲಿ ಕೆಲವರು ತಾವೇ ಧಮಶಾಸ್ತ್ರದ ಬೋಧಕರಾಗಿದ್ದರು. (ಅ. ಕೃತ್ಯಗಳು 5:34) ಅವರ ಸಂಪ್ರದಾಯದಿಂದ ಮತ್ತು “ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ” ಬೋಧಿಸುವುದರಿಂದ ದೇವರ ವಾಕ್ಯವನ್ನು ನಿರರ್ಥಕ ಮಾಡಿದ ಕಾರಣದಿಂದಾಗಿ ಯೇಸುವು ಎರಡೂ ಗುಂಪುಗಳನ್ನು ಆಪಾದಿಸಿದನು. (ಮತ್ತಾಯ 15:1, 6, 9) ಯೇಸುವಾಗಲಿ ಆತನ ಶಿಷ್ಯರಾಗಲಿ ರಬ್ಬಿಗಳ ಶಾಲೆಗಳಲ್ಲಿ ಶಿಕ್ಷಣ ಪಡೆಯದಿದ್ದದ್ದು ಆಶ್ಚರ್ಯವಲ್ಲ.—ಯೋಹಾನ 7:14, 15; ಅ. ಕೃತ್ಯಗಳು 4:13; 22:3.

20. ಬೈಬಲಿನ ಸಮಯಗಳಲ್ಲಿನ ವಿದ್ಯೆಯ ಈ ಪುನರಾವರ್ತನೆಯು ನಮಗೆ ಏನನ್ನು ತೋರಿಸಿ ಕೊಟ್ಟಿರುತ್ತದೆ, ಮತ್ತು ಯೆಹೋವನ ಸೇವಕರಿಗೆ ವಿದ್ಯೆಯ ಜರೂರಿ ಇದೆ ಎಂದು ಯಾವುದು ತೋರಿಸುತ್ತದೆ?

20 ಬೈಬಲ್‌ ಸಮಯಗಳಲ್ಲಿನ ಶಿಕ್ಷಣದ ಈ ಮೇಲ್ನೋಟವು ಯೆಹೋವನು ತನ್ನ ಜನರ ಮಹಾ ಶಿಕ್ಷಕನು ಎಂದು ತೋರಿಸಿಕೊಡುತ್ತದೆ. ಮೋಶೆಯ ಮೂಲಕ, ದೇವರು ಇಸ್ರಾಯೇಲಿನಲ್ಲಿ ಒಂದು ದಕ್ಷ ಶಿಕ್ಷಣಾ ವ್ಯವಸ್ಥೆಯನ್ನು ಸಂಸ್ಥಾಪಿಸಿದನು. ಆದರೆ ಬಹಳ ಸಮಯದ ನಂತರ, ದೇವರ ವಾಕ್ಯಕ್ಕೆ ಪ್ರತಿಕೂಲ ವಿಷಯಗಳನ್ನು ಕಲಿಸಿದ ಯೆಹೂದಿ ಉಚ್ಚ ಶಿಕ್ಷಣದ ವ್ಯವಸ್ಥೆಯ ಬೆಳೆಯಿತು. ಅಂಥ ಯೆಹೂದಿ ಶಾಲೆಗಳಿಗೆ ಯೇಸು ಹಾಜರಾಗಿಲ್ಲವಾದರೂ, ಆತನು, ಒಬ್ಬ ಅತುಲ್ಯ ಬೋಧಕನಾಗಿದ್ದನು. (ಮತ್ತಾಯ 7:28, 29; 23:8; ಯೋಹಾನ 13:13) ಆತನು ತನ್ನ ಶಿಷ್ಯರಿಗೆ, ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ, ಕಲಿಸಲು ನಿಯೋಜಿಸಿದನು. (ಮತ್ತಾಯ 28:19, 20) ಇದನ್ನು ಮಾಡಲು, ಅವರು ಉತ್ತಮ ಬೋಧಕರಾಗಬೇಕು ಮತ್ತು ಆದಕಾರಣ ಅವರಿಗೆ ವಿದ್ಯಾಭ್ಯಾಸದ ಆವಶ್ಯಕತೆ ಇದೆ. ಹೀಗಿರುವಲ್ಲಿ ನಿಜ ಕ್ರೈಸ್ತರು ಇಂದು ವಿದ್ಯೆಯನ್ನು ಹೇಗೆ ವೀಕ್ಷಿಸಬೇಕು? ಈ ಪ್ರಶ್ನೆಯನ್ನು ಮುಂದಿನ ಲೇಖನದಲ್ಲಿ ಪರಿಶೀಲಿಸಲಾಗುವುದು.

ಸ್ಮರಣಶಕ್ತಿಯ ಪರೀಕ್ಷೆ

▫ ಯೆಹೋವನು ತನ್ನ ಸೇವಕರ ವಿದ್ಯೆಯಲ್ಲಿ ಅಭಿರುಚಿಯುಳ್ಳವನಾಗಿದ್ದಾನೆಂದು ನಾವು ಯಾಕೆ ಖಾತ್ರಿಯಿಂದಿರಬಹುದು?

▫ ಯಾವ ವಿಧಾನಗಳಲ್ಲಿ ಇಸ್ರಾಯೇಲ್ಯರ ಶಿಕ್ಷಣಾ ವ್ಯವಸ್ಥೆಯ ಇತರ ಜನಾಂಗಗಳಿಗಿಂತ ಭಿನ್ನವಾಗಿತ್ತು?

▫ ಇಸ್ರಾಯೇಲ್ಯ ಮಕ್ಕಳು ಯಾವ ಶಿಕ್ಷಣವನ್ನು ಪಡೆದಿದ್ದರು?

▫ ಇಸ್ರಾಯೇಲಿನಲ್ಲಿ ಯಾವ ಶಿಕ್ಷಣಾ ವಿಧಾನಗಳು ಬಳಸಲಾಗಿದ್ದವು?

▫ ಯೇಸು ಮತ್ತು ಆತನ ಶಿಷ್ಯರು ಯಾಕೆ ಉಚ್ಚ ಶಿಕ್ಷಣದ ಯೆಹೂದಿ ಶಾಲೆಗಳಿಗೆ ಹೋಗಲಿಲ್ಲ?

[ಪುಟ 14 ರಲ್ಲಿರುವ ಚಿತ್ರ]

ಬಾಬೆಲಿನಲ್ಲಿನ ಕಡ್ಡಾಯ ಶಿಕ್ಷಣವು ದಾನಿಯೇಲ ಮತ್ತು ಅವನ ಸಹವಾಸಿಗಳನ್ನು ಯೆಹೋವನಿಂದ ದೂರ ಸರಿಸಲಿಲ್ಲ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ