ವೈಯಕ್ತಿಕ ಅಭ್ಯಾಸದಲ್ಲಿ ನೀವು ಆನಂದಿಸುತ್ತೀರೊ?
ದೇವರ ಯಾವುದೇ ಯಥಾರ್ಥ ಸೇವಕನು ವೈಯಕ್ತಿಕ ಬೈಬಲ್ ಅಭ್ಯಾಸಕ್ಕೆ ಬಹಳಷ್ಟು ಸಮಯವನ್ನು ಸಮರ್ಪಿಸಲು ಹರ್ಷಿಸುವನು. (ಕೀರ್ತನೆ 1:1, 2) ಆದರೂ, ತಮ್ಮ ಸಮಯ ಹಾಗೂ ಬಲದ ಮೇಲೆ ಮಹಾ ಹಕ್ಕುಕೇಳಿಕೆಗಳುಳ್ಳವರಾಗಿ ಅನುಭವಿಸುತ್ತಾ, ಬೈಬಲ್ ಅಭ್ಯಾಸಕ್ಕೆ ಅವರು ವ್ಯಯಿಸಲು ಇಷ್ಟಪಡುವಷ್ಟು ಸಮಯ ಮತ್ತು ಶಕ್ತಿಯನ್ನು ವ್ಯಯಿಸುವುದು ಕಷ್ಟವೆಂದು ಅನೇಕರು ಕಂಡುಕೊಳ್ಳುತ್ತಾರೆ.
ಹಾಗಿದ್ದರೂ, ದೇವರ ಸಕ್ರಿಯ ಸೇವಕರೋಪಾದಿ ಮುಂದುವರಿಯಲು, ದೇವರ ವಾಕ್ಯದ ಸತ್ಯದ ನವೀನ ಹಾಗೂ ಆಳವಾದ ವಿಷಯಾಂಶಗಳನ್ನು ಕಂಡುಹಿಡಿಯುವ ಮೂಲಕ, ಎಲ್ಲರೂ ದಿನದಿಂದ ದಿನಕ್ಕೆ ತಮ್ಮ ಆನಂದ ಮತ್ತು ಬಲವನ್ನು ನವೀಕರಿಸಬೇಕು. ಅನೇಕ ವರ್ಷಗಳ ಹಿಂದೆ ನಿಮ್ಮನ್ನು ಆಳವಾಗಿ ಪ್ರಚೋದಿಸಿದ ಬೈಬಲ್ ಸತ್ಯಗಳು ಈಗ ಅಷ್ಟರಮಟ್ಟಿಗೆ ನಿಮ್ಮನ್ನು ಪ್ರಚೋದಿಸದೆ ಇರಬಹುದು. ಆದಕಾರಣ, ನಮ್ಮನ್ನು ಆತ್ಮಿಕವಾಗಿ ಪ್ರಚೋದಿಸಲ್ಪಟ್ಟವರೋಪಾದಿ ಇಟ್ಟುಕೊಳ್ಳಲು, ಸತ್ಯದ ನೂತನ ಒಳನೋಟವನ್ನು ಪಡೆಯಲಿಕ್ಕೆ ಪ್ರಜ್ಞಾಪೂರ್ವಕ ಹಾಗೂ ಸತತವಾದ ಪ್ರಯತ್ನವನ್ನು ನಾವು ಮಾಡುವುದು ಒಳ್ಳೆಯದೂ ಪ್ರಾಮುಖ್ಯವೂ ಆಗಿದೆ.
ನಂಬಿಕೆಯ ಪ್ರಾಚೀನ ಪುರುಷರು ದೇವರ ವಾಕ್ಯದ ವೈಯಕ್ತಿಕ ಅಭ್ಯಾಸದ ಮುಖಾಂತರ ತಮ್ಮನ್ನು ಆತ್ಮಿಕವಾಗಿ ಬಲಿಷ್ಠರನ್ನಾಗಿ ಮಾಡಿಕೊಂಡದ್ದು ಹೇಗೆ? ಯೆಹೋವನ ಆಧುನಿಕ ದಿನದ ಸೇವಕರಲ್ಲಿ ಕೆಲವರು ತಮ್ಮ ಅಭ್ಯಾಸವನ್ನು ಅಧಿಕ ಆನಂದದಾಯಕವಾಗಿ ಅಷ್ಟೇ ಅಲ್ಲದೆ ಪ್ರತಿಫಲದಾಯಕವಾಗಿ ಮಾಡುವುದು ಹೇಗೆ? ತಮ್ಮ ಪ್ರಯತ್ನಗಳಿಗೆ ಅವರು ಹೇಗೆ ಬಹುಮಾನಿಸಲ್ಪಟ್ಟಿದ್ದಾರೆ?
ವೈಯಕ್ತಿಕ ಅಭ್ಯಾಸದ ಮುಖಾಂತರ ಅವರು ತಮ್ಮ ಬಲವನ್ನು ನವೀಕರಿಸಿದರು
ಯೂದಾಯದ ರಾಜ ಯೋಷೀಯನು, ‘ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಯೆಹೋವನ ಧರ್ಮೋಪದೇಶದ ಗ್ರಂಥವನ್ನು’ ಅವನ ಮುಂದೆ ಓದಿಯಾದ ತರುವಾಯ, ಮೂರ್ತಿಪೂಜೆಯ ವಿರುದ್ಧ ತನ್ನ ಕಾರ್ಯಾಚರಣೆಯನ್ನು ಇನ್ನೂ ಅಧಿಕ ಹುರುಪಿನಿಂದ ನಡೆಸಿದನು. ದೇವರ ವಾಕ್ಯದ ಈ ಭಾಗವನ್ನು ಅವನು ಪ್ರಥಮ ಸಲ ಪರಿಗಣಿಸತ್ತಿರಲಿಲ್ಲ ಎಂಬ ವಿಷಯದಲ್ಲಿ ಸಂದೇಹವಿಲ್ಲ; ಆದರೂ ಮೂಲಭೂತ ಹಸ್ತಪ್ರತಿಯಿಂದ ಸಂದೇಶವನ್ನು ನೇರವಾಗಿ ಕೇಳುವುದು, ಶುದ್ಧಾರಾಧನೆಗಾಗಿದ್ದ ಯುದ್ಧದಲ್ಲಿ ಅವನನ್ನು ಪ್ರಚೋದಿಸಿತು.—2 ಪೂರ್ವಕಾಲವೃತ್ತಾಂತ 34:14-19.
‘ಯೆರೂಸಲೇಮು ಹಾಳುಬಿದ್ದಿರಬೇಕಾದ ಪೂರ್ಣಕಾಲದ ವರುಷಗಳ ಸಂಖ್ಯೆಯನ್ನು’ ಮತ್ತು ಅದರ ನಿಶ್ಚಿತತೆಯನ್ನು, ಪ್ರವಾದಿಯಾದ ದಾನಿಯೇಲನು ಕೇವಲ ಯೆರೆಮೀಯನ ಪುಸ್ತಕದಿಂದ ಮಾತ್ರವಲ್ಲ ಆದರೆ “ಶಾಸ್ತ್ರ” ಗಳಿಂದ ಅರಿತುಕೊಂಡನು. ಇವು ಬಹುಶಃ ಯಾಜಕಕಾಂಡ (26:34, 35), ಯೆಶಾಯ (44:26-28), ಹೋಶೇಯ (14:4-7), ಮತ್ತು ಆಮೋಸ (9:13-15) ದಂತಹ ಪುಸ್ತಕಗಳನ್ನು ಒಳಗೊಂಡವು. ಬೈಬಲ್ ಪುಸ್ತಕಗಳ ಅವನ ಶ್ರಮಶೀಲ ಅಭ್ಯಾಸದ ಮುಖಾಂತರ ಅವನು ಏನನ್ನು ದೃಢಪಡಿಸಿಕೊಂಡನೊ ಅದು ದೇವರನ್ನು ಉದ್ರಿಕ್ತ ಪ್ರಾರ್ಥನೆಯಲ್ಲಿ ಹುಡುಕುವಂತೆ ಈ ಧಾರ್ಮಿಕ ಮನುಷ್ಯನನ್ನು ನಡೆಸಿತು. ಅವನ ಶ್ರದ್ಧಾಪೂರ್ವಕ ಬಿನ್ನಹವು, ಯೆರೂಸಲೇಮ್ ಪಟ್ಟಣ ಅಷ್ಟೇ ಅಲ್ಲದೆ ಅವನ ಜನರ ಸಂಬಂಧದಲ್ಲಿ ಇನ್ನೂ ಹೆಚ್ಚಿನ ಪ್ರಕಟನೆ ಮತ್ತು ಪುನರಾಶ್ವಾಸನೆಯೊಂದಿಗೆ ಉತ್ತರಿಸಲ್ಪಟ್ಟಿತು.—ದಾನಿಯೇಲ, ಅಧ್ಯಾಯ 9.
“ಯೆಹೋವನ ದೃಷ್ಟಿಯಲ್ಲಿ ಒಳ್ಳೆಯದನ್ನು” ಮಾಡಿದ ಯೋಷೀಯನು, ಮತ್ತು ದೇವರ ದೃಷ್ಟಿಯಲ್ಲಿ “ಅತಿಪ್ರಿಯ” ನಾಗಿದ್ದ ದಾನಿಯೇಲನು—ಇಬ್ಬರೂ, ಇಂದು ನಮ್ಮಿಂದ ಮೂಲಭೂತವಾಗಿ ಭಿನ್ನರಾಗಿರಲಿಲ್ಲ. (2 ಅರಸು 22:2; ದಾನಿಯೇಲ 9:23) ಆ ಸಮಯದಲ್ಲಿ ಲಭ್ಯವಿದ್ದ ಗ್ರಂಥಗಳ ಅತಿ ಹೆಚ್ಚಾದ ಪ್ರೇರಕ ಅಭ್ಯಾಸಕ್ಕೆ ಸಮರ್ಪಿಸಲ್ಪಟ್ಟ ಅವರ ವೈಯಕ್ತಿಕ ಪ್ರಯತ್ನಗಳು, ಅವರನ್ನು ಹೆಚ್ಚಿನ ಆತ್ಮಿಕತೆಯ ಕಡೆಗೆ ನಡೆಸಿದವು ಮತ್ತು ದೇವರೊಂದಿಗೆ ಬಲವಾದ ಸಂಬಂಧಗಳನ್ನು ಅನುಭವಿಸುವಂತೆ ಅವರಿಗೆ ಸಹಾಯ ಮಾಡಿದವು. ಆಸಾಫನ ಮನೆಯ ಒಬ್ಬ ಕೀರ್ತನೆಗಾರನಾದ ಯೆಪ್ತಾಹನು, ನೆಹೆಮೀಯನು ಮತ್ತು ಸೆಫ್ತನನಂತಹ ಯೆಹೋವನ ಅನೇಕ ಇತರ ಪ್ರಾಚೀನ ಸೇವಕರ ಕುರಿತು ಸಮನಾದ ವಿಷಯಗಳನ್ನು ಹೇಳಸಾಧ್ಯವಿದೆ. ಅವರ ಕಾಲದಲ್ಲಿ ಲಭ್ಯವಿದ್ದ ಬೈಬಲಿನ ಭಾಗದ ಜಾಗರೂಕವಾದ ವೈಯಕ್ತಿಕ ಅಭ್ಯಾಸದ ರುಜುವಾತನ್ನು ಇವರೆಲ್ಲರು ಕೊಟ್ಟರು.—ನ್ಯಾಯಸ್ಥಾಪಕರು 11:14-27; ಕೀರ್ತನೆ 79, 80; ನೆಹೆಮೀಯ 1:8-10; 8:9-12; 13:29-31; ಅ. ಕೃತ್ಯಗಳು 6:15–7:53.
ಶುಶ್ರೂಷೆಯು ಒಂದು ಪ್ರೇರಕವಾಗಿರಲಿ
ಯೆಹೋವನನ್ನು ಅನೇಕ ವರ್ಷಗಳ ಕಾಲ ಸೇವಿಸಿರುವ ಹೆಚ್ಚಿನ ಸೇವಕರಿಗೆ ಇಂದು ವೈಯಕ್ತಿಕ ಬೈಬಲ್ ಅಭ್ಯಾಸಕ್ಕಾಗಿ ವೇಳಾಪಟ್ಟಿಯಿರುತ್ತದೆ. ಆತ್ಮಿಕ ರೀತಿಯಲ್ಲಿ ಎಚ್ಚರವಾಗಿರಲು ಮತ್ತು ತಮ್ಮ ಕ್ರಿಸ್ತೀಯ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ನೆರವೇರಿಸಲು, ಇದು ಅಗತ್ಯವೆಂದು ಅವರು ಕಂಡುಕೊಂಡಿದ್ದಾರೆ. ಹಾಗೆಯೇ, ಅಭ್ಯಾಸ ಹಾಗೂ ನಿರ್ಲಕ್ಷಿಸಬಾರದಂತಹ ಇತರ ವಿಷಯಗಳ ನಡುವೆ ತಮ್ಮ ಸಮಯ ಮತ್ತು ಶಕ್ತಿಯ ಉಪಯೋಗವನ್ನು ಸರಿದೂಗಿಸುವುದು ಯಾವಾಗಲೂ ಸರಳವಲ್ಲವೆಂದು ಅವರಲ್ಲಿ ಅನೇಕರು ಒಪ್ಪಿಕೊಳ್ಳುತ್ತಾರೆ.
ಆದರೂ, ಲೋಕವ್ಯಾಪಕ ರಾಜ್ಯ ಪ್ರಚಾರ ಕೆಲಸದ ಈ ಮುಂದುವರಿದ ಹಂತದ ಕ್ರೈಸ್ತ ಶುಶ್ರೂಷೆಯಲ್ಲಿರುವ ಅಗತ್ಯಗಳೊಂದಿಗೆ ನಿಭಾಯಿಸುವಲ್ಲಿ, ಶ್ರದ್ಧಾಪೂರ್ವಕವಾದ ವೈಯಕ್ತಿಕ ಅಭ್ಯಾಸದ ಮುಖಾಂತರ ಆತ್ಮಿಕವಾಗಿ ಎಚ್ಚರವಾಗಿ ಉಳಿಯುವುದು ಅವಶ್ಯವಾಗಿದೆ. ದೇವರ ವಾಕ್ಯದ ನವೀನ ಹಾಗೂ ಆಳವಾದ ಒಳನೋಟಗಳಿಂದ ರೋಮಾಂಚಗೊಳ್ಳುವವರು, ಹಂಬಲಿಸುವ ಹೃದಯಗಳನ್ನು ಸ್ಪರ್ಶಿಸುವ ಸವಾಲನ್ನು ಪೂರೈಸಬಲ್ಲರು. ಆತ್ಮಿಕ ಮೀನು ಹಿಡಿಯುವಿಕೆಯ ಮಾರ್ಗದಲ್ಲಿ ದೊಡ್ಡ ಪ್ರಾಪ್ತಿಗಳನ್ನು ನಿರೀಕ್ಷಿಸಸಾಧ್ಯವಿರುವ ಕಡೆಗಳಲ್ಲಿ ಒಬ್ಬನು ನೇಮಿಸಲ್ಪಟ್ಟಿರಲಿ ಅಥವಾ ಸಾಮಾನ್ಯವಾದ ಉಪೇಕ್ಷೆಯಿರುವ ಚೆನ್ನಾಗಿ ಕಾರ್ಯಮಾಡಿದ ಟೆರಿಟೊರಿಗಳಲ್ಲಿ ಒಬ್ಬನು ನಿತ್ಯ ವ್ಯವಸಾಯಿಯಾಗಿರಲಿ—ಇದು ಸತ್ಯವಾಗಿದೆ.
ದೇವರ ವಾಕ್ಯದಿಂದ ಕ್ರಮವಾಗಿ ಉಣ್ಣಿರಿ
ನಿಮ್ಮ ಅಭ್ಯಾಸದ ನಿಯತಕ್ರಮದಲ್ಲಿ ಹೆಚ್ಚಾಗಿ ಹೇಗೆ ಆನಂದಿಸಬಹುದು ಅಥವಾ ನೀವು ಮತ್ತು ನಿಮ್ಮ ಕುಟುಂಬದವರು ಅಭ್ಯಾಸ ಸಮಯದ ಅಧಿಕ ಫಲದಾಯಕ ಉಪಯೋಗವನ್ನು ಹೇಗೆ ಮಾಡಬಹುದು ಎಂಬುದರ ಕುರಿತು, ಇತರರು ಮಾಡುತ್ತಿರುವ ಸಂಗತಿಗಳು ನಿಮಗೆ ಉಪಾಯಗಳನ್ನು ನೀಡಬಹುದು. ದೇವರ ಸೇವಕನೊಬ್ಬನು ತಪ್ಪಿಸಿಕೊಳ್ಳಲು ಬಯಸದ ವಿಷಯಗಳಲ್ಲಿ ಒಂದು—ಕ್ರಮವಾಗಿ ದೇವರ ವಾಕ್ಯವನ್ನು ಓದುವುದೇ ಆಗಿದೆ. ಪ್ರತಿ ವಾರ ಬೈಬಲಿನ ಕನಿಷ್ಠ ಮೂರರಿಂದ ನಾಲ್ಕು ಅಧ್ಯಾಯಗಳ ಓದುವಿಕೆಯನ್ನು ಅನೇಕರು ಒಂದು ಗುರಿಯನ್ನಾಗಿ ಮಾಡಿದ್ದಾರೆ. ಒಂದು ವರ್ಷದಲ್ಲಿ ಸಂಪೂರ್ಣ ಬೈಬಲನ್ನು ಓದಲು ನೀವು ಬಯಸುತ್ತೀರೊ? ಹಾಗಾದರೆ, ಅದರ ಓದುವಿಕೆಗಾಗಿ ಹೆಚ್ಚು ಸಮಯವನ್ನು—ಬಹುಶಃ ಒಂದು ದಿನಕ್ಕೆ ಅರ್ಧ ಗಂಟೆ—ವ್ಯಯಿಸಲು ನೀವು ಸಂತೋಷಿಸುವಿರಿ.
ಸಂಪೂರ್ಣ ಬೈಬಲನ್ನು ನೀವು ಒಂದಕ್ಕಿಂತ ಹೆಚ್ಚು ಬಾರಿ ಓದಿದ್ದೀರೊ? ಮುಂದಿನ ಸಮಯ ಒಂದು ಹೊಸ ಗುರಿಯನ್ನು ಯಾಕೆ ಇಟ್ಟುಕೊಳ್ಳಬಾರದು? ಬದಲಾವಣೆಗಾಗಿ, ಒಬ್ಬಾಕೆ ಕ್ರೈಸ್ತ ಸ್ತ್ರೀಯು, ಬೈಬಲ್ ಪುಸ್ತಕಗಳನ್ನು ಅವುಗಳ ಬರವಣಿಗೆಯ ಕ್ರಮದಲ್ಲಿ ಓದಿದಳು. ಹಿಂದೆ ಅವಳು ಪಡೆಯದೆ ಇದ್ದ, ಕಾಲಾನುಕ್ರಮದ ಹಿನ್ನೆಲೆಯ ಮೇಲೆ ಆಧಾರಿತವಾದ ಅನೇಕ ವಿವರಗಳನ್ನು ಅವಳು ಸೆರೆಹಿಡಿದಳು. ಇನ್ನೊಬ್ಬಾಕೆ ಕ್ರೈಸ್ತ ಸ್ತ್ರೀಯು, ಸಂಪೂರ್ಣ ಬೈಬಲನ್ನು ಕಳೆದ ಐದು ವರ್ಷಗಳಲ್ಲಿ ಐದು ಬಾರಿ—ಪ್ರತಿ ಸಲ ಭಿನ್ನವಾದೊಂದು ನೋಟದಿಂದ—ಓದಿದ್ದಾಳೆ. ಪ್ರಥಮ ಸಲ, ಆಕೆ ಆದಿಕಾಂಡದಿಂದ ಪ್ರಕಟನೆಯ ವರೆಗೆ ಓದಿದಳು. ಎರಡನೆಯ ಓದುವಿಕೆಯ ಸಮಯದಲ್ಲಿ, ಪ್ರತಿ ಅಧ್ಯಾಯದ ಒಳವಿಷಯವನ್ನು ಒಂದೆರಡು ವಾಕ್ಯಗಳಲ್ಲಿ ಒಂದು ಟಿಪ್ಪಣಿ ಪುಸ್ತಕದಲ್ಲಿ ಆಕೆ ಸಾರಾಂಶಿಸಿದಳು. ಮೂರನೆಯ ವರ್ಷದಿಂದ, ಪ್ರಥಮವಾಗಿ ಅಂಚಿನಲ್ಲಿರುವ ಅಡ್ಡ ಉಲ್ಲೇಖಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಾ ಮತ್ತು ತದನಂತರ ಪಾದಟಿಪ್ಪಣಿಗಳಿಗೆ ಅಷ್ಟೇ ಅಲ್ಲದೆ ಪರಿಶಿಷ್ಟದಲ್ಲಿರುವ ಮಾಹಿತಿಯ ಕಡೆಗೆ ನಿಕಟವಾದ ಗಮನವನ್ನು ಸಲ್ಲಿಸುತ್ತಾ, ಆಕೆ ದೊಡ್ಡ ಸೈಜಿನ ರೆಫರೆನ್ಸ್ ಮುದ್ರಣಕ್ಕೆ ಬದಲಾಯಿಸಿದಳು. ಐದನೆಯ ಬಾರಿ, ಭೌಗೋಲಿಕ ದೃಷ್ಟಿಯಿಂದ ತಿಳಿವಳಿಕೆಯನ್ನು ಹೆಚ್ಚಿಸಲು ಆಕೆ ಬೈಬಲ್ ನಕ್ಷೆಗಳನ್ನು ಉಪಯೋಗಿಸಿದಳು. ಆಕೆ ಹೇಳುವುದು: “ನನಗೆ, ಬೈಬಲ್ ಓದುವಿಕೆಯು ಒಂದು ಊಟವನ್ನು ಮಾಡುವಷ್ಟು ಆನಂದದಾಯಕವಾಗಿ ಪರಿಣಮಿಸಿತು.”
ಅದರ ಅಂಚಿನಲ್ಲಿ ಆಸಕ್ತಿಕರ ಹೇಳಿಕೆಗಳನ್ನು, ವಿಚಾರ ಪ್ರೇರಕ ದೃಷ್ಟಾಂತಗಳನ್ನು, ಅಥವಾ ಅವರು ತದನಂತರ ಲಕ್ಷಿಸಸಾಧ್ಯವಿರುವ ಇತರ ಪ್ರಕಾಶನಗಳ ಪುಟ ನಂಬ್ರಗಳನ್ನು ಸಂಕ್ಷಿಪ್ತವಾಗಿ ಬರೆದುಕೊಳ್ಳುತ್ತಾ, ವೈಯಕ್ತಿಕ ಅಭ್ಯಾಸಕ್ಕಾಗಿ ಮಾತ್ರ ಉಪಯೋಗಿಸಲ್ಪಡುವ ಬೈಬಲಿನ ಒಂದು ಪ್ರತಿಯನ್ನು ಹೊಂದಿರುವುದು ಪ್ರಯೋಜನಕರವೆಂದು ಬೈಬಲಿನ ಕೆಲವು ಉತ್ಸುಕ ವಿದ್ಯಾರ್ಥಿಗಳು ಕಂಡುಕೊಂಡಿದ್ದಾರೆ. ತಿಂಗಳಿನ ಅವಧಿಯಲ್ಲಿ ತಾನು ಕಲಿತ ಹೊಸ ಅಂಶಗಳನ್ನು ಪ್ರತಿ ತಿಂಗಳಿನ ಕೊನೆಯಲ್ಲಿ, ತನ್ನ ಅಭ್ಯಾಸದ ಪ್ರತಿಯಲ್ಲಿ ಬರೆಯುವುದನ್ನು ಒಂದು ಸಂತೋಷವೆಂದು ಒಬ್ಬಾಕೆ ಪೂರ್ಣ ಸಮಯದ ಶುಶ್ರೂಷಕಳು ಪರಿಗಣಿಸುತ್ತಾಳೆ. “ನನ್ನ ಅಮೂಲ್ಯವಾದ ಈ ತಾಸುಗಳ ಕಡೆಗೆ ಎದುರುನೋಡುವುದು, ತಿಂಗಳಿಗಾಗಿರುವ ಇತರ ಗುರಿಗಳನ್ನು ಬೇಗನೆ ಸಾಧಿಸುವಂತೆ ನನಗೆ ಸಹಾಯ ಮಾಡುತ್ತವೆ,” ಎಂದು ಆಕೆ ಹೇಳುತ್ತಾಳೆ.
ಕೆಲವು ದಕ್ಷ ವಿಚಾರಗಳು
ನಿಮ್ಮ ವೇಳಾಪಟ್ಟಿಯು ದೈನಿಕ ಮತ್ತು ವಾರದ ಅಗತ್ಯಗಳಿಂದ ತುಂಬಿದೆಯೆಂದು ಮತ್ತು ನಿಮ್ಮ ಸೀಮಿತ ಸಮಯದ ಉತ್ತಮ ಉಪಯೋಗಕ್ಕಾಗಿ ನಿಮಗೆ ಕೆಲವು ಸೂಚನೆಗಳ ಅಗತ್ಯವಿದೆಯೆಂದು ನಿಮಗನಿಸುತ್ತದೊ? ಒಳ್ಳೆಯದು, ನೀವು ಓದಲು ಉದ್ದೇಶಿಸುವುದನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿರಿ, ಮತ್ತು ನಿಮ್ಮ ಬಿಡುವಿನ ಗಳಿಗೆಗಳನ್ನು ಉಪಯೋಗಿಸಿಕೊಳ್ಳಿರಿ. ಮನೆಯಲ್ಲಿ ಅಥವಾ ನೀವು ಸಾಧಾರಣವಾಗಿ ಅಭ್ಯಾಸಿಸುವ ಸ್ಥಳದಲ್ಲಿ, ನ್ಯಾಯವಾಗಿ ಸಾಧ್ಯವಿರುವ ಮಟ್ಟಿಗೆ ಪುಸ್ತಕಗಳನ್ನು ಮತ್ತು ಇತರ ಅಭ್ಯಾಸ ಸಲಕರಣೆಗಳನ್ನು ತಲಪಲು ಸುಲಭವಾಗಿರುವಂತೆ ಜೋಡಿಸಿರಿ. ನಿಮ್ಮ ಅಭ್ಯಾಸದ ಮೂಲೆಯನ್ನು ಹಿತಕರವಾಗಿ ಮಾಡಿರಿ, ಆದರೆ ನೀವು ತೂಕಡಿಸುವಷ್ಟು ಆರಾಮವಾಗಿ ಅಲ್ಲ. ನಿಮಗೊಂದು ಭಾಷಣದ ನೇಮಕವಿದೆಯೊ? ವಿಷಯವನ್ನು ಸಾಧ್ಯವಾದಷ್ಟು ಮುಂಚಿತವಾದ ಸಂದರ್ಭದಲ್ಲಿ ಓದಿರಿ, ಮತ್ತು ನೀವು ದಣಿವಾರಿಸಿಕೊಳ್ಳುತ್ತಿರುವಾಗ ಯಾ ಮನೆಗೆಲಸವನ್ನು ಮಾಡುವಾಗ ವಿಚಾರಗಳು ಬರುವಂತೆ ಬಿಡಿರಿ.
ಪರಸ್ಪರ ಪ್ರಯೋಜನಕ್ಕಾಗಿ ಸಮಯದ ಉತ್ತಮ ಉಪಯೋಗವನ್ನು ಮಾಡುವುದರಲ್ಲಿ ಇತರರು ನಿಮ್ಮೊಂದಿಗೆ ಸಹಕರಿಸಬಹುದು. ಉದಾಹರಣೆಗೆ, ನಿಯತಕ್ರಮದ ಕೆಲಸಗಳನ್ನು ನೀವು ಮಾಡುತ್ತಿರುವಾಗ ಯಾ ನಿಮ್ಮ ದಯಾಪರ ಓದುಗನಿಗೆ ಚಹವನ್ನು ಕೊಡುತ್ತಿರುವಾಗ, ಅರ್ಥಮಾಡಿಕೊಳ್ಳಲು ಸುಲಭವಾದ ವಿಷಯಗಳನ್ನು ಯಾರಾದರೂ ನಿಮಗಾಗಿ ಓದುವಂತೆ ನೀವು ಕೇಳಿಕೊಳ್ಳಬಹುದು. ವೈಯಕ್ತಿಕ ಅಭ್ಯಾಸಕ್ಕಾಗಿ ಶಾಂತವಾಗಿರುವ ಒಂದು ಅವಧಿಗೆ ಮನೆಯಲ್ಲಿರುವವರೆಲ್ಲರು ಒಪ್ಪಿಕೊಳ್ಳುವುದರ ಕುರಿತೇನು? “ಇತ್ತೀಚೆಗೆ ಯಾವ ವಿಷಯವನ್ನು ಓದುವುದರಲ್ಲಿ ನೀನು ಆನಂದಿಸಿರುವೆ?” ಕೆಲವೊಮ್ಮೆ, ಈ ರೀತಿಯಲ್ಲಿ ಒಂದು ಸಂಭಾಷಣೆಯನ್ನು ಆರಂಭಿಸುವ ಮೂಲಕ ನಿಮ್ಮ ಗೆಳೆಯರು ಏನನ್ನು ಕಲಿತಿದ್ದಾರೆ ಎಂಬುದನ್ನು ತಿಳಿಯಲು ನೀವು ಶಕ್ತರಾಗಬಹುದು.
ನಿಮ್ಮ ಅಭ್ಯಾಸದ ಕಾರ್ಯಕ್ರಮಕ್ಕೆ ಕೆಲವು ಹೊಸ ವಿಚಾರಗಳನ್ನು ಪರಿಚಯಿಸುವುದರಲ್ಲಿ ನೀವು ಆಸಕ್ತರಾಗಿದ್ದೀರೊ? ಇತರರಿಗೆ ಬೈಬಲಿನ ಕುರಿತು ಮಾತಾಡುವುದಕ್ಕಾಗಿ ಸಮಯದ ಗುರಿಯನ್ನು ಅನೇಕರು ಇಡುವ ರೀತಿಯಲ್ಲಿ ಅಭ್ಯಾಸಕ್ಕಾಗಿ ಸಮಯದ ಗುರಿಯನ್ನು ನೀವು ಇಡಬಲ್ಲಿರಿ. ಒಬ್ಬಾಕೆ ಪೂರ್ಣ ಸಮಯದ (ಪಯನೀಯರ್) ಪ್ರಚಾರಕಳು ಅಭ್ಯಾಸದ ತಾಸುಗಳಿಗಾಗಿ ಮಾಸಿಕ ಕನಿಷ್ಠ ಗುರಿಯನ್ನು ಇಡುತ್ತಾಳೆ ಮತ್ತು ಗುರಿಯನ್ನು ತಾನು ಸಮೀಪಿಸುತ್ತಿರುವುದನ್ನು ಕಾಣಲು ಅವಳು ಹರ್ಷಿಸುತ್ತಾಳೆ. ಇತರರು ಟೆಲಿವಿಷನ್ ವೀಕ್ಷಣೆಗಾಗಿ ಸಮಯವನ್ನು ಸೀಮಿತಗೊಳಿಸುತ್ತಾರೆ ಮತ್ತು ಆ ರೀತಿಯಲ್ಲಿ ಅಭ್ಯಾಸಕ್ಕಾಗಿ ಸಮಯವನ್ನು ಪಡೆದುಕೊಳ್ಳುತ್ತಾರೆ. ಕೆಲವು ಸಮಯಕ್ಕಾಗಿ ಅವರು ಬೆನ್ನಟ್ಟುವ ಅಭ್ಯಾಸದ ಮುಖ್ಯವಿಷಯವನ್ನು ಅನೇಕರು ಆರಿಸುತ್ತಾರೆ, ಉದಾಹರಣೆಗೆ ಆತ್ಮದ ಫಲಗಳು, ಬೈಬಲ್ ಪುಸ್ತಕಗಳ ಹಿನ್ನೆಲೆ, ಅಥವಾ ಬೋಧಿಸುವ ಕಲೆ. ಇಸ್ರಾಯೇಲ್ಯ ಅರಸರು ಮತ್ತು ಪ್ರವಾದಿಗಳು ಅಥವಾ ಅಪೊಸ್ತಲರ ಕೃತ್ಯಗಳು ಮತ್ತು ಪೌಲನ ಪತ್ರಗಳ ನಡುವೆ ಇರುವ ಸಂಬಂಧವನ್ನು ತೋರಿಸುವ ಕಾಲಾನುಕ್ರಮದ ನಕ್ಷೆಗಳನ್ನು ತಯಾರಿಸುವುದರಲ್ಲಿ ಕೆಲವರು ಆನಂದಿಸುತ್ತಾರೆ.
ಎಳೆಯರೇ, ನಿಮಗೆ ಬಲವಾದ ನಂಬಿಕೆ ಬೇಕೊ? ನಿಮ್ಮ ಮುಂದಿನ ಶಾಲಾ ರಜೆಯಲ್ಲಿ ಸಂಪೂರ್ಣವಾದ ಅಭ್ಯಾಸಕ್ಕಾಗಿ ಒಂದು ಪ್ರಕಾಶನವನ್ನು ಯಾಕೆ ಆರಿಸಬಾರದು? ದೀಕ್ಷಾಸ್ನಾನ ಪಡೆದ ಪ್ರೌಢ ಶಾಲೆಯ ಒಬ್ಬಳು ವಿದ್ಯಾರ್ಥಿನಿ, ವಾಚ್ ಟವರ್ ಸೊಸೈಟಿಯ ಮೂಲಕ ಪ್ರಕಾಶಿಸಲಾದ ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್ನಲ್ಲಿ) ಎಂಬ ಪುಸ್ತಕವನ್ನು ಆರಿಸಿದಳು. ಪ್ರತಿಯೊಂದು ಅಧ್ಯಾಯದಿಂದ ಕಲಿತ ವಿಷಯಗಳ ಸಂಕ್ಷಿಪ್ತ ಸಾರಾಂಶಗಳನ್ನು ಆಕೆ ಒಂದು ಟಿಪ್ಪಣಿ ಪುಸ್ತಕದಲ್ಲಿ ಮಾಡಿದಳು. ಅದೊಂದು ಪಂಥಾಹ್ವಾನವಾಗಿತ್ತು ಮತ್ತು ಅವಳು ಯೋಚಿಸಿದ್ದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಿತು. ಆದರೆ, ಇಡೀ ಪುಸ್ತಕವನ್ನು ಅವಳು ಮುಗಿಸಿದಾಗ, ಬೈಬಲಿನ ಸಂದೇಶದ ಸತ್ಯತೆಯಿಂದ ಅವಳು ಪರವಶಗೊಂಡಳು.
ಕಲಿಯಲು ಸದಾ ಉತ್ಸುಕರಾಗಿರಿ
ಯೆಹೋವನ ಆಧುನಿಕ ದಿನದ ನಂಬಿಗಸ್ತ ಸೇವಕರಲ್ಲಿ ಬಹಳಷ್ಟು ಜನರಿಗೆ ಈಗಾಗಲೇ “ಕರ್ತನ ಸೇವೆಯಲ್ಲಿ ಹೆಚ್ಚನ್ನು” ಮಾಡಲಿಕ್ಕಿದೆ. (1 ಕೊರಿಂಥ 15:58, NW) ಪುನರ್ವಿಮರ್ಶಿಸಲ್ಪಟ್ಟ ವೇಳಾಪಟ್ಟಿ ಮತ್ತು ಯಥಾರ್ಥವಾದ ಪ್ರಯತ್ನಗಳ ಹೊರತೂ, ಒಂದು ಸಾಂಕೇತಿಕ ವಾರದಲ್ಲಿ ನೀವು ಅನುಸರಿಸುವ ನಿಯತಕ್ರಮವು ಬಹಳವಾಗಿ ಬದಲಾಗದೆ ಇರಬಹುದು. ಆದರೂ, ಸತ್ಯದ ಆಳವಾದ ತಿಳಿವಳಿಕೆಯನ್ನು ಪಡೆಯಲು ಮತ್ತು ಯೆಹೋವನ ಉದ್ದೇಶಗಳ ವಿಕಸನದ ಕುರಿತು ನಿಮ್ಮನ್ನು ಪೂರ್ತಿಯಾಗಿ ಅನುಗೊಳಿಸಲು ಇರುವ ನಿಮ್ಮ ತಪ್ಪದ ಉತ್ಸುಕತೆಯು, ನಿಮ್ಮ ಅಭ್ಯಾಸ ರೂಢಿಗಳನ್ನು ಉತ್ತಮಗೊಳಿಸುವುದರಲ್ಲಿ ನಿಮಗೆ ಸಹಾಯ ಮಾಡುವುದು.
ತಮ್ಮ ಅಭ್ಯಾಸದ ನಮೂನೆಯನ್ನು ಉತ್ತಮಗೊಳಿಸಿದವರ ಪ್ರತಿಫಲಗಳ ಕುರಿತು ಕೇಳುವುದು ಉತ್ತೇಜನದಾಯಕವಾಗಿದೆ. ಒಬ್ಬ ಕ್ರೈಸ್ತ ಮನುಷ್ಯನು, ಸತ್ಯದ ಆಳವಾದ ತಿಳಿವಳಿಕೆಯನ್ನು ಹುಡುಕುವುದರ ಕಡೆಗೆ ಸಕಾರಾತ್ಮಕ ಮನೋಭಾವನೆಯನ್ನು ಕಳೆದುಕೊಳ್ಳುತ್ತಿರುವುದನ್ನು ಗ್ರಹಿಸಿ, ವೈಯಕ್ತಿಕ ಅಭ್ಯಾಸಕ್ಕೆ ತನ್ನ ಬಿಡುವಿನ ತಾಸುಗಳಲ್ಲಿ ಹೆಚ್ಚನ್ನು ಸಮರ್ಪಿಸಬಹುದಾದ ರೀತಿಯಲ್ಲಿ ತನ್ನ ಜೀವಿತವನ್ನು ವ್ಯವಸ್ಥಿತಗೊಳಿಸಿದನು. “ನನಗೆ ಮೊದಲು ಗೊತ್ತಿರದಂತಹ ಹರ್ಷವನ್ನು ಅದು ತಂದಿದೆ,” ಎಂದು ಅವನು ಹೇಳುತ್ತಾನೆ. “ಬೈಬಲಿನ ದೈವಿಕ ಕರ್ತೃತ್ವದಲ್ಲಿ ಹೆಚ್ಚಾಗುತ್ತಿರುವ ಭರವಸೆಯಿಂದ, ನನ್ನ ನಂಬಿಕೆಯ ಕುರಿತು ಇತರರೊಂದಿಗೆ ನಿಜವಾದ ಉತ್ಸಾಹದಿಂದ ನಾನು ಮಾತಾಡಬಲೆನ್ಲೆಂದು ನಾನು ಕಂಡುಕೊಂಡಿದ್ದೇನೆ. ಪ್ರತಿದಿನದ ಕೊನೆಯಲ್ಲಿ ನಾನು ಚೆನ್ನಾಗಿ ಪೋಷಿಸಲ್ಪಡುತ್ತೇನೆ, ಆತ್ಮಿಕವಾಗಿ ಸ್ವಸ್ಥನಾಗುತ್ತೇನೆ, ಮತ್ತು ತೃಪ್ತನಾಗುತ್ತೇನೆಂದು ನನಗನಿಸುತ್ತದೆ.”
ಅನೇಕ ಸಭೆಗಳನ್ನು ಸಂದರ್ಶಿಸುವ ಯೆಹೋವನ ಸಾಕ್ಷಿಗಳ ಒಬ್ಬ ಸಂಚರಣ ಮೇಲ್ವಿಚಾರಕನು, ಇತರ ಪ್ರಯೋಜನಗಳನ್ನು ಈ ರೀತಿಯಲ್ಲಿ ವರ್ಣಿಸಿದನು: “ವೈಯಕ್ತಿಕ ಅಭ್ಯಾಸದಲ್ಲಿ ಶ್ರಮಶೀಲರಾಗಿರುವವರು ಸಾಮಾನ್ಯವಾಗಿ ತಮ್ಮ ಅಭಿವ್ಯಕ್ತಿಗಳಲ್ಲಿ ಸ್ವಾರಸ್ಯವುಳ್ಳವರೂ ಸುವ್ಯಕ್ತರೂ ಆಗಿದ್ದಾರೆ. ಇತರರೊಂದಿಗೆ ಅವರು ಉತ್ತಮವಾಗಿ ಮುಂದುವರಿಯುತ್ತಾರೆ, ಮತ್ತು ಇತರರಿಂದ ಬರುವ ನಕಾರಾತ್ಮಕ ಹೇಳಿಕೆಗಳಿಂದ ಅವರು ಸುಲಭವಾಗಿ ಪ್ರಭಾವಿತರಾಗುವುದಿಲ್ಲ. ಕ್ಷೇತ್ರ ಶುಶ್ರೂಷೆಯಲ್ಲಿರುವಾಗ, ಅವರು ಬೇಕಾದಂತೆ ಪಳಗುತ್ತಾರೆ ಅಷ್ಟೇ ಅಲ್ಲದೆ ಅವರು ಭೇಟಿಯಾಗುವ ಜನರ ಅಗತ್ಯಗಳಿಗೆ ಜಾಗರೂಕರಾಗಿರುತ್ತಾರೆ.”
ತಮ್ಮ ಸ್ವಂತ ಅಭ್ಯಾಸದ ನಮೂನೆಯನ್ನು ಕೆಲವರು ವಿಶೇಷ್ಲಿಸುವಾಗ ಅವರು ಮನಸ್ಸಿನಲ್ಲಿಡಲು ಬಯಸಬಹುದಾದ ಅಂಶವನ್ನು ಅವನು ಕೂಡಿಸುತ್ತಾನೆ. “ಶಾಸ್ತ್ರೀಯ ಚರ್ಚೆಗಳಿಗಾಗಿರುವ ಕೂಟಗಳಲ್ಲಿ, ಅನೇಕರು ಮುದ್ರಿತ ಪುಟದಿಂದಲೇ ತಮ್ಮ ಹೇಳಿಕೆಗಳನ್ನು ಓದುವ ಪ್ರವೃತ್ತಯುಳ್ಳವರಾಗಿರುತ್ತಾರೆ. ಅವರು ಪೂರ್ವದಲ್ಲಿ ಕಲಿತಿರುವ ವಿಷಯಕ್ಕೆ ಅಥವಾ ತಮ್ಮ ಸ್ವಂತ ಜೀವಿತಗಳಿಗೆ ವಿಷಯವು ಹೇಗೆ ಸಂಬಂಧಿಸಿದೆ ಎಂಬುದರ ಕುರಿತು ಮನನ ಮಾಡುವುದಾದರೆ, ಅವರು ಪ್ರಯೋಜನ ಪಡೆಯಬಲ್ಲರು.” ಈ ವಿಷಯದಲ್ಲಿ ನೀವು ಅಭಿವೃದ್ಧಿ ಮಾಡಬಹುದೆಂದು ನಿಮಗನಿಸುತ್ತದೊ?
ಜೀವಿತದ 90 ಕ್ಕಿಂತಲೂ ಹೆಚ್ಚು ವರ್ಷಗಳ ತರುವಾಯ ಪ್ರವಾದಿಯಾದ ದಾನಿಯೇಲನಿಗೆ, ಯೆಹೋವನ ಮಾರ್ಗಗಳ ಕುರಿತು ತಾನು ಸಾಕಷ್ಟು ಅರಿತುಕೊಂಡಿದ್ದೇನೆಂದು ಅನಿಸಲಿಲ್ಲ. ತನ್ನ ಅಂತಿಮ ವರ್ಷಗಳಲ್ಲಿ, ಅವನು ಸಂಪೂರ್ಣವಾಗಿ ಗ್ರಹಿಸಸಾಧ್ಯವಿರದ ಒಂದು ವಿಷಯದ ಕುರಿತು ಅವನು ಕೇಳಿದನು: “ಎನ್ನೊಡೆಯನೇ, ಈ ಕಾರ್ಯಗಳ ಪರಿಣಾಮವೇನು?” (ದಾನಿಯೇಲ 12:8) ದೇವರ ಸತ್ಯದ ಕುರಿತು ಹೆಚ್ಚನ್ನು ಕಲಿಯಲಿಕ್ಕಿದ್ದ ಈ ಬದಲಾಗದ ಉತ್ಸುಕತೆಯು, ಅವನ ಜೀವಿತದ ವಿಖ್ಯಾತ ಕ್ರಮದ ಉದ್ದಕ್ಕೂ ಅವನ ಅತಿ ಶ್ರೇಷ್ಠ ಸಮಗ್ರತೆಗೆ ಕೀಲಿಕೈಯಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ.—ದಾನಿಯೇಲ 7:8, 16, 19, 20.
ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿ ದೃಢವಾಗಿ ನಿಲ್ಲಲು ಆತನ ಸೇವಕರಲ್ಲಿ ಪ್ರತಿಯೊಬ್ಬರಿಗೆ ದಾನಿಯೇಲನಂತೆಯೇ ಸರಿಸಮಾನವಾದ ಗಂಭೀರ ಜವಾಬ್ದಾರಿಯಿದೆ. ನಿಮ್ಮನ್ನು ಆತ್ಮಿಕವಾಗಿ ಬಲಿಷ್ಠರನ್ನಾಗಿ ಇಟ್ಟುಕೊಳ್ಳಲಿಕ್ಕಾಗಿ ಕಲಿಯಲು ಸದಾ ಉತ್ಸುಕರಾಗಿರಿ. ನಿಮ್ಮ ವಾರದ, ಮಾಸಿಕ, ಅಥವಾ ವಾರ್ಷಿಕ ವೈಯಕ್ತಿಕ ಅಭ್ಯಾಸದ ವೇಳಾಪಟ್ಟಿಗೆ ಒಂದು ಯಾ ಎರಡು ಹೊಸ ವೈಶಿಷ್ಟ್ಯಗಳನ್ನು ಸೇರಿಸಲು ಪ್ರಯತ್ನಿಸಿರಿ. ನೀವು ಮಾಡುವಂತಹ ಯಾವುದೇ ಸಣ್ಣ ಪ್ರಯತ್ನವನ್ನು ದೇವರು ಹೇಗೆ ಆಶೀರ್ವದಿಸುತ್ತಾನೆಂದು ನೋಡಿರಿ. ಹೌದು, ನಿಮ್ಮ ವೈಯಕ್ತಿಕ ಬೈಬಲ್ ಅಭ್ಯಾಸದಲ್ಲಿ ಮತ್ತು ಅದು ತರುವ ಫಲಿತಾಂಶಗಳಲ್ಲಿ ಆನಂದಿಸಿರಿ.—ಕೀರ್ತನೆ 107:43.