“ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ”
ಸಾಮುವೆಲ್ ಡಿ. ಲಡೆಸೂಯಿ ಹೇಳಿದಂತೆ
ವರ್ಷಗಳ ಕಡೆಗೆ ಮನಸ್ಸು ತಿರುಗಿಸುವಾಗ ಮತ್ತು ನೆರವೇರಿಸಲ್ಪಟ್ಟಿರುವ ಎಲ್ಲಾ ವಿಷಯಗಳನ್ನು ನೋಡುವಾಗ ನಾನು ಅಚ್ಚರಿಗೊಳ್ಳುತ್ತೇನೆ. ಯೆಹೋವನು ಭೂಮಿಯಾದ್ಯಂತವಾಗಿ ಆಶ್ಚರ್ಯಕರವಾದ ವಿಷಯಗಳನ್ನು ನಡಿಸುತ್ತಿದ್ದಾನೆ. ನೈಜಿರಿಯದ ಇಲೆಶದಲ್ಲಿ, 1931 ರಲ್ಲಿ ಸಾರುವುದನ್ನು ಆರಂಭಿಸಿದ ನಾವು ಕೆಲವರು 36 ಸಭೆಗಳಾಗಿ ಪರಿಣಮಿಸಿದ್ದೇವೆ. 1947 ರಲ್ಲಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ ಪದವೀಧರರ ಪ್ರಥಮ ಗುಂಪು ಆಗಮಿಸಿದಾಗ, ನೈಜಿರಿಯದಲ್ಲಿ ಸಾರುತ್ತಿದ್ದ ಸರಿಸುಮಾರು 4,000 ಮಂದಿ, ಈಗ 1,80,000 ಕ್ಕಿಂತಲೂ ಹೆಚ್ಚಿಗೆ ವೃದ್ಧಿಯಾಗಿದ್ದಾರೆ. ಆರಂಭದ ದಿನಗಳಲ್ಲಿ, ಸಂಭವಿಸಲಿಕ್ಕಿದ್ದ ವಿಸ್ತರಣೆಯ ಕುರಿತು ನಾವು ನಿರೀಕ್ಷಿಸಲಿಲ್ಲ, ಇಲ್ಲವೆ ಅದರ ಕುರಿತು ನಾವು ಕಲ್ಪನೆಯನ್ನೂ ಮಾಡಿಕೊಂಡಿರಲಿಲ್ಲ. ಆಶ್ಚರ್ಯಕರವಾದ ಈ ಕಾರ್ಯದಲ್ಲಿ ನಾನು ಒಂದು ಪಾಲನ್ನು ಹೊಂದಿದ್ದೆನಾದುದರಿಂದ ನಾನೆಷ್ಟು ಕೃತಜ್ಞನಾಗಿದ್ದೆ! ಅದರ ಕುರಿತಾಗಿ ನಾನು ನಿಮಗೆ ತಿಳಿಸುತ್ತೇನೆ.
ನನ್ನ ತಂದೆಯವರು ಪಟ್ಟಣದಿಂದ ಪಟ್ಟಣಕ್ಕೆ ಬಂದೂಕುಗಳನ್ನು ಹಾಗೂ ಹಾರು ಮದ್ದುಗಳನ್ನು ಕೊಂಡು ಮಾರುತ್ತಿದ್ದರು; ಅವರು ಮನೆಯಲ್ಲಿರುತ್ತಿದ್ದುದೇ ಅಪರೂಪ. ನನಗೆ ತಿಳಿದಿರುವಂತೆ ಅವರಿಗೆ ಏಳು ಮಂದಿ ಹೆಂಡತಿಯರಿದ್ದರು, ಆದರೆ ಎಲ್ಲರೂ ಅವರೊಂದಿಗೆ ಜೀವಿಸತ್ತಿರಲಿಲ್ಲ. ನನ್ನ ತಂದೆಯವರು, ಸತ್ತಿದ್ದ ತಮ್ಮ ಅಣನ್ಣಿಂದ ನನ್ನ ತಾಯಿಯನ್ನು ಉತ್ತರಾಧಿಕಾರದಿಂದ ಪಡೆದಿದ್ದರು. ಅವಳು ಅವರ ದ್ವಿತೀಯ ಪತ್ನಿಯಾದಳು, ಮತ್ತು ನಾನು ಅವಳೊಂದಿಗೆ ಜೀವಿಸುತ್ತಿದ್ದೆ.
ಒಂದು ದಿನ ನೆರೆಹೊರೆಯ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ ತಮ್ಮ ಮೊದಲ ಪತ್ನಿಯನ್ನು ಭೇಟಿಮಾಡಿ ತಂದೆಯವರು ಮನೆಗೆ ಬಂದರು. ಅವರು ಅಲ್ಲಿದ್ದಾಗ, ನನ್ನ ಮಲಸಹೋದರನು ಶಾಲೆಗೆ ಹೋಗುತ್ತಿದ್ದನೆಂದು ಅವರಿಗೆ ಗೊತ್ತಾಯಿತು. ನನ್ನ ಮಲಸಹೋದರನು ನನ್ನಷ್ಟೇ ಪ್ರಾಯದವನು, ಅಂದರೆ ಹತ್ತು ವರ್ಷ ಪ್ರಾಯದವನಾಗಿದ್ದನು. ಆದುದರಿಂದ ನಾನು ಸಹ ಶಾಲೆಗೆ ಹೋಗಬೇಕೆಂದು ತಂದೆಯವರು ನಿರ್ಧರಿಸಿದರು. ಅವರು ನನಗೆ ಒಂಬತ್ತು ಪೆನಿಗಳನ್ನು—ಒಂದು ಪಠ್ಯಪುಸ್ತಕಕ್ಕಾಗಿ ಮೂರು ಪೆನಿಗಳು ಮತ್ತು ಒಂದು ಸ್ಲೇಟಿಗಾಗಿ ಆರು ಪೆನಿಗಳು—ಕೊಟ್ಟರು. ಅದು 1924 ರಲ್ಲಾಗಿತ್ತು.
ಬೈಬಲ್ ಅಧ್ಯಯನದ ಒಂದು ಗುಂಪು ರಚಿಸಲ್ಪಟ್ಟದ್ದು
ನನ್ನ ಅತ್ಯಾರಂಭದ ವರ್ಷಗಳಿಂದಲೂ, ನನಗೆ ದೇವರ ವಾಕ್ಯವಾದ ಬೈಬಲಿಗಾಗಿ ಪ್ರೀತಿಯಿತ್ತು. ಶಾಲೆಯಲ್ಲಿ ಬೈಬಲ್ ತರಗತಿಗಳಲ್ಲಿ ನಾನು ಆನಂದಿಸಿದೆ ಮತ್ತು ನನ್ನ ಸಂಡೆ ಸ್ಕೂಲ್ನ ಶಿಕ್ಷಕರಿಂದ ನಾನು ಯಾವಾಗಲೂ ಪ್ರಸಂಶಿಸಲ್ಪಡುತ್ತಿದ್ದೆ. ಆದುದರಿಂದ 1930 ರಲ್ಲಿ, ಇಲೆಶದಲ್ಲಿ ಸಾರಲು ಮೊತ್ತಮೊದಲಾಗಿ ಬಂದ, ಸಂದರ್ಶಕ ಬೈಬಲ್ ವಿದ್ಯಾರ್ಥಿಯೊಬ್ಬನಿಂದ ಕೊಡಲ್ಪಟ್ಟ ಒಂದು ಭಾಷಣಕ್ಕೆ ಹಾಜರಾಗುವ ಅವಕಾಶವನ್ನು ನಾನು ಬಳಸಿಕೊಂಡೆ. ಭಾಷಣದ ಬಳಿಕ, ಅವನು ನನಗೆ ಯೊರಬ ಭಾಷೆಯಲ್ಲಿ ದ ಹಾರ್ಪ್ ಆಫ್ ಗಾಡ್ ಎಂಬ ಪುಸ್ತಕದ ಒಂದು ಪ್ರತಿಯನ್ನು ನೀಡಿದನು.
ನಾನು ಸಂಡೆ ಸ್ಕೂಲನ್ನು ಕ್ರಮವಾಗಿ ಹಾಜರಾಗಿದ್ದೆ. ಈಗ ನಾನು ನನ್ನೊಂದಿಗೆ ದ ಹಾರ್ಪ್ ಆಫ್ ಗಾಡ್ ಪುಸ್ತಕವನ್ನು ಕೊಂಡೊಯ್ಯಲಾರಂಭಿಸಿ, ಅಲ್ಲಿ ಕಲಿಸಲ್ಪಡುತ್ತಿದ್ದ ಕೆಲವು ಸಿದ್ಧಾಂತಗಳನ್ನು ಅಪ್ರಮಾಣ್ಯವೆಂದು ಸಿದ್ಧಮಾಡುವುದಕ್ಕಾಗಿ ಅದನ್ನು ಉಪಯೋಗಿಸುತ್ತಿದ್ದೆ. ತರ್ಕಗಳು ಫಲಿಸಿದವು, ಮತ್ತು ಈ ‘ಹೊಸ ಬೋಧನೆ’ ಯನ್ನು ಅನುಸರಿಸುವುದರ ವಿರುದ್ಧವಾಗಿ ನಾನು ಅನೇಕಾವರ್ತಿ ಚರ್ಚಿನ ಮುಖಂಡರಿಂದ ಎಚ್ಚರಿಸಲ್ಪಟ್ಟೆ.
ಮುಂದಿನ ವರ್ಷ, ಬೀದಿಯಲ್ಲಿ ತಿರುಗಾಡುತ್ತಿದ್ದಾಗ, ಭಾಷಣಕೊಡುತ್ತಿದ್ದ ಒಬ್ಬ ಮನುಷ್ಯನಿಗೆ ಜನರ ಗುಂಪೊಂದು ಕಿವಿಗೊಡುತ್ತಿರುವುದನ್ನು ಆಕಸ್ಮಿಕವಾಗಿ ನೋಡಿದೆ. ಒಬ್ಬ ಬೈಬಲ್ ವಿದ್ಯಾರ್ಥಿಯಾಗಿದ್ದ ಜೆ. ಐ. ಓವನ್ಪಾ ಭಾಷಣಕಾರರಾಗಿದ್ದರು. ರಾಜ್ಯ ಸಾರುವಿಕೆಯ ಕಾರ್ಯವನ್ನು ಲೇಗಾಸ್ನಿಂದ ಮೇಲ್ವಿಚಾರಣೆ ಮಾಡುತ್ತಿದ್ದ ವಿಲಿಯಂ ಆರ್. ಬ್ರೌನ್ (ಅನೇಕವೇಳೆ ಬೈಬಲ್ ಬ್ರೌನ್ ಎಂದು ಕರೆಯಲ್ಪಡುತ್ತಿದ್ದರು) ರಿಂದ ಅವರು ಅಲ್ಲಿಗೆ ಕಳುಹಿಸಲ್ಪಟ್ಟಿದ್ದರು.a ದ ಹಾರ್ಪ್ ಆಫ್ ಗಾಡ್ ಪುಸ್ತಕವನ್ನು ಅಭ್ಯಾಸಿಸಲಿಕ್ಕಾಗಿ ಇಲೆಶದಲ್ಲಿ ಒಂದು ಸಣ್ಣ ಬೈಬಲ್ ಅಭ್ಯಾಸದ ಗುಂಪು ರಚಿಸಲ್ಪಟ್ಟಿದೆ ಎಂದು ನನಗೆ ತಿಳಿಯಿತು, ಆದುದರಿಂದ ನಾನು ಅವರನ್ನು ಸೇರಿಕೊಂಡೆ.
ಸುಮಾರು 16 ವರ್ಷಪ್ರಾಯದವನಾಗಿದ್ದು, ಕೇವಲ ಒಬ್ಬ ಶಾಲಾ ಬಾಲಕನಾಗಿದ್ದ ನಾನು ಆ ಗುಂಪಿನಲ್ಲಿ ತೀರ ಎಳೆಯವನಾಗಿದ್ದೆ. ತಮ್ಮ 30ರ ಮತ್ತು ಅದಕ್ಕಿಂತಲೂ ಹಿರಿಯ ವಯಸ್ಸಿನ ಪುರುಷರೊಂದಿಗೆ ಅಷ್ಟು ಆಪ್ತವಾಗಿ ಸಹವಾಸಿಸಲು ನಾನು ಸಾಮಾನ್ಯವಾಗಿ ಕಂಗೆಡಬೇಕಿತ್ತು, ಭಯಗೊಳ್ಳಬೇಕಿತ್ತು ಸಹ. ಆದರೆ ತಮ್ಮ ನಡುವೆ ನನ್ನನ್ನು ಸೇರಿಸಿಕೊಳ್ಳಲು ಅವರು ಬಹಳ ಸಂತೋಷಗೊಂಡಿದ್ದರು, ಮತ್ತು ಅವರು ನನ್ನನ್ನು ಉತ್ತೇಜಿಸಿದರು. ಅವರು ನನಗೆ ತಂದೆಗಳಂತಿದ್ದರು.
ವೈದಿಕರ ವಿರೋಧ
ಅತಿ ಬೇಗನೆ ನಾವು ವೈದಿಕರಿಂದ ಗಂಭೀರವಾದ ವಿರೋಧವನ್ನು ಎದುರಿಸಲಾರಂಭಿಸಿದೆವು. ಕ್ಯಾತೊಲಿಕರು, ಆ್ಯಂಗ್ಲಿಕನರು, ಮತ್ತು ಈ ಹಿಂದೆ ಪರಸ್ಪರವಾಗಿ ಕಾದಾಡಿದ್ದ ಇತರರು, ನಮ್ಮ ವಿರುದ್ಧವಾಗಿ ಐಕ್ಯಗೊಂಡರು. ನಮ್ಮನ್ನು ನಿರುತ್ತೇಜಿಸಲಿಕ್ಕಾಗಿ ಕ್ರಮ ಕೈಕೊಳ್ಳುವಂತೆ ಸ್ಥಳೀಯ ಮುಖ್ಯಸ್ಥರೊಂದಿಗೆ ಅವರು ಒಳಸಂಚು ನಡೆಸಿದರು. ನಮ್ಮ ಪುಸ್ತಕಗಳು ಜನರಿಗೆ ಹಾನಿಕರವಾಗಿದ್ದವೆಂದು ಸಮರ್ಥಿಸುತ್ತಾ, ಅವುಗಳನ್ನು ವಶಪಡಿಸಿಕೊಳ್ಳಲಿಕ್ಕಾಗಿ ಅವರು ಪೊಲೀಸರನ್ನು ಕಳುಹಿಸಿದರು. ಹಾಗಿದ್ದರೂ, ಪುಸ್ತಕಗಳನ್ನು ತೆಗೆದುಕೊಳ್ಳಲು ಅವರಿಗೆ ಹಕ್ಕಿಲ್ಲವೆಂದು ಜಿಲ್ಲಾಧಿಕಾರಿಯು ಎಚ್ಚರಿಸಿದನು, ಮತ್ತು ಎರಡು ವಾರಗಳ ಬಳಿಕ ಪುಸ್ತಕಗಳು ಹಿಂದಿರುಗಿಸಲ್ಪಟ್ಟವು.
ತದನಂತರ ನಾವು ಎಲ್ಲಿ ಓಬಾ ನನ್ನು, ಅಥವಾ ಸರ್ವೋತ್ಕೃಷ್ಟ ಮುಖ್ಯಸ್ಥನನ್ನು ಸಂಧಿಸಿದೆವೊ ಅಲ್ಲಿ, ಒಂದು ಕೂಟಕ್ಕೆ ಪಟ್ಟಣದ ಇತರ ಪ್ರಮುಖರೊಂದಿಗೆ ನಾವು ಕರೆಯಲ್ಪಟ್ಟೆವು. ಆ ಸಮಯದಲ್ಲಿ ನಾವು ಸುಮಾರು 30 ಜನರಿದ್ದೆವು. “ಅಪಾಯಕರ” ಪುಸ್ತಕಗಳನ್ನು ಓದುವುದರಿಂದ ನಮ್ಮನ್ನು ತಡೆಯುವುದು ಅದರ ಉದ್ದೇಶವಾಗಿತ್ತು. ನಾವು ಅಪರಿಚಿತರಾಗಿದ್ದೆವೊ ಎಂದು ಅವರು ಕೇಳಿದರು, ಆದರೆ ಅವರು ನಮ್ಮ ಮುಖಗಳನ್ನು ಸೂಕ್ಷವಾಗಿ ಪರಿಶೀಲಿಸಿದಾಗ, ಅವರು ಹೇಳಿದ್ದು, “ಅವರ ನಡುವೆ ಕೆಲವು ಅಪರಿಚಿತರು ಇರುವಾಗ್ಯೂ, ಇವರು ನಮ್ಮ ಜನರಾಗಿದ್ದಾರೆ.” ನಮಗೆ ಹಾನಿಮಾಡಲಿದ್ದ ಒಂದು ಧರ್ಮದ ಪುಸ್ತಕಗಳನ್ನು ನಾವು ಅಭ್ಯಾಸಿಸುತ್ತಾ ಮುಂದುವರಿಯುವುದನ್ನು ತಾವು ಅಪೇಕ್ಷಿಸುವುದಿಲ್ಲವೆಂದು ಅವರು ನಮಗೆ ಹೇಳಿದರು.
ಏನನ್ನೂ ಹೇಳದೆ ನಾವು ಮನೆಗೆ ಹೋದೆವು, ಏಕೆಂದರೆ ಆ ಪ್ರಮುಖ ಜನರಿಗೆ ಯಾವುದೆ ಗಮನವನ್ನು ಕೊಡಬಾರದೆಂದು ನಾವು ನಿರ್ಧರಿಸಿದ್ದೆವು. ನಮ್ಮಲ್ಲಿ ಅಧಿಕಾಂಶ ಜನರು ತಾವು ಕಲಿಯುತ್ತಿದ್ದ ವಿಷಯದಿಂದ ಬಹಳ ಸಂತೋಷಗೊಂಡಿದ್ದರು ಮತ್ತು ಅಭ್ಯಾಸಿಸುವುದನ್ನು ಮುಂದುವರಿಸಲು ನಿರ್ಧರಿಸಿದ್ದರು. ಆದುದರಿಂದ, ಕೆಲವರು ಹೆದರಸಲ್ಪಟ್ಟವರಾಗಿ ಗುಂಪಿನಿಂದ ಹಿಂದೆಗೆದುಕೊಂಡರೂ, ನಮ್ಮಲ್ಲಿ ಅಧಿಕಾಂಶ ಮಂದಿ ನಮ್ಮ ಅಭ್ಯಾಸವನ್ನು ಒಬ್ಬ ಬಡಗಿಯ ವರ್ಕ್ಶಾಪ್ನಲ್ಲಿ ಮುಂದುವರಿಸಿದೆವು. ನಮ್ಮಲ್ಲಿ ಅಭ್ಯಾಸ ಚಾಲಕನಿರಲಿಲ್ಲ. ನಾವು ಪ್ರಾರ್ಥನೆಯೊಂದಿಗೆ ಆರಂಭಿಸಿ, ಬಳಿಕ ಕೇವಲ ಪುಸ್ತಕದ ಪ್ಯಾರಗ್ರಾಫ್ಗಳನ್ನು ಓದುವುದರಲ್ಲಿ ಸರದಿಗಳನ್ನು ತೆಗೆದುಕೊಂಡೆವು. ಸುಮಾರು ಒಂದು ತಾಸಿನ ಬಳಿಕ, ನಾವು ಪುನಃ ಪ್ರಾರ್ಥಿಸಿ, ತದನಂತರ ಮನೆಗೆ ಹೋದೆವು. ಆದರೆ ನಮ್ಮ ಚಲನವಲನಗಳನ್ನು ಹೊಂಚಿ ನೋಡಲಾಗುತ್ತಿತ್ತು, ಮತ್ತು ಮುಖ್ಯಸ್ಥರು ಹಾಗೂ ಧಾರ್ಮಿಕ ಮುಖಂಡರು ನಮ್ಮನ್ನು ಪ್ರತಿ ಎರಡು ವಾರಗಳಿಗೆ ಕರೆಯುವುದು ಮತ್ತು ಬೈಬಲ್ ವಿದ್ಯಾರ್ಥಿಗಳ ಸಾಹಿತ್ಯವನ್ನು ಅಭ್ಯಾಸಿಸುವುದರ ವಿರುದ್ಧವಾಗಿ ನಮ್ಮನ್ನು ಎಚ್ಚರಿಸುವುದನ್ನು ಮುಂದುವರಿಸಿದರು.
ಈ ಮಧ್ಯೆ, ಜನರಿಗೆ ಸಹಾಯ ಮಾಡಲಿಕ್ಕಾಗಿ ನಮಗಿದ್ದಂತಹ ಅಲ್ಪ ಜ್ಞಾನವನ್ನು ಉಪಯೋಗಿಸಲು ನಾವು ಪ್ರಯತ್ನಿಸುತ್ತಿದ್ದೆವು, ಮತ್ತು ಅನೇಕರು ನಮ್ಮೊಂದಿಗೆ ಸಮ್ಮತಿಸುತ್ತಿದ್ದರು. ಒಬ್ಬೊಬ್ಬರಾಗಿ ವ್ಯಕ್ತಿಗಳು ನಮ್ಮೊಂದಿಗೆ ಜೊತೆಗೂಡುತ್ತಿದ್ದರು. ನಾವು ಬಹಳ ಸಂತೋಷಗೊಂಡಿದ್ದೆವಾದರೂ, ನಾವು ಸಹವಾಸ ಮಾಡುತ್ತಿದ್ದ ಧರ್ಮದ ಕುರಿತಾಗಿ ನಮಗೆ ಇನ್ನೂ ಹೆಚ್ಚಿನ ವಿಷಯವು ತಿಳಿದಿರಲಿಲ್ಲ.
1932ರ ಆರಂಭದಲ್ಲಿ ನಾವು ವ್ಯವಸ್ಥಿತಗೊಳ್ಳುವಂತೆ ಸಹಾಯ ಮಾಡಲಿಕ್ಕಾಗಿ, ಲೇಗಾಸ್ನಿಂದ ಒಬ್ಬ ಸಹೋದರನು ಆಗಮಿಸಿದನು ಮತ್ತು ಎಪ್ರಿಲ್ನಲ್ಲಿ “ಬೈಬಲ್” ಬ್ರೌನ್ ಸಹ ಬಂದರು. 30ರ ಸಂಖ್ಯೆಗೇರುತ್ತಿದ್ದ ಒಂದು ಗುಂಪು ಇತ್ತೆಂಬುದನ್ನು ನೋಡಿ, ನಮ್ಮ ಓದುವಿಕೆಯಲ್ಲಿ ನಾವು ಮಾಡುತ್ತಿದ್ದ ಪ್ರಗತಿಯ ಕುರಿತಾಗಿ ಸಹೋದರ ಬ್ರೌನ್ ವಿಚಾರಿಸಿದರು. ನಮಗೆ ಗೊತ್ತಿದ್ದ ಎಲ್ಲ ವಿಷಯವನ್ನು ನಾವು ಅವರಿಗೆ ಹೇಳಿದೆವು. ನಾವು ದೀಕ್ಷಾಸ್ನಾನ ಪಡೆದುಕೊಳ್ಳಲು ಸಿದ್ಧರಾಗಿದ್ದೆವೆಂದು ಅವರು ಹೇಳಿದರು.
ಅದು ಮಳೆಗಾಲವಲ್ಲದರ್ದಿಂದ, ನಾವು ಇಲೆಶದಿಂದ 14 ಕಿಲೋಮೀಟರ್ಗಳಷ್ಟು ದೂರವಿದ್ದ ಒಂದು ನದಿಗೆ ಪ್ರಯಾಣಿಸಬೇಕಿತ್ತು ಮತ್ತು ನಮ್ಮಲ್ಲಿ ಸುಮಾರು 30 ಮಂದಿ ದೀಕ್ಷಾಸ್ನಾನ ಪಡೆದುಕೊಂಡೆವು. ಅಂದಿನಿಂದ ನಾವು ರಾಜ್ಯದ ಪ್ರಚಾರಕರೋಪಾದಿ ಅರ್ಹತೆಯುಳ್ಳವರಾಗಿದ್ದೇವೆಂದು ನಮಗನಿಸಿತು ಮತ್ತು ಮನೆಯಿಂದ ಮನೆಗೆ ಹೋಗಲಾರಂಭಿಸಿದೆವು. ಇದನ್ನು ಮಾಡುವುದನ್ನು ನಾವು ಮುಂಭಾವಿಸಿರಲಿಲ್ಲವಾದರೂ, ನಮಗೆ ತಿಳಿದಿದ್ದ ವಿಷಯವನ್ನು ಇತರರೊಂದಿಗೆ ಹಂಚಿಕೊಳ್ಳಲು ಈಗ ನಾವು ಆತುರರಾಗಿದ್ದೆವು. ನಾವು ಎದುರಿಸಿದಂತಹ ಸುಳ್ಳು ಸಿದ್ಧಾಂತಗಳನ್ನು ಅಪ್ರಮಾಣವೆಂದು ಸಿದ್ಧಮಾಡಲಿಕ್ಕಾಗಿ ಬೈಬಲ್ ಆಧಾರವನ್ನು ಹೊಂದಿರಲು ನಾವು ಚೆನ್ನಾಗಿ ತಯಾರಿ ಮಾಡಬೇಕಿತ್ತು. ಆದುದರಿಂದ, ನಮ್ಮ ಕೂಟಗಳಲ್ಲಿ, ನಾವು ಏನನ್ನು ತಿಳಿದಿದ್ದೆವೋ ಅದರಿಂದ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ನಾವು ಸಿದ್ಧಾಂತಗಳನ್ನು ಚರ್ಚಿಸುತ್ತಿದ್ದೆವು.
ನಮ್ಮ ಸಾರುವ ಚಟುವಟಿಕೆ
ಪಟ್ಟಣವನ್ನು ನಾವು ನಮ್ಮ ಸಾರುವಿಕೆಯಿಂದ ಆವರಿಸಿದೆವು. ಜನರು ನಮಗೆ ಅಪಹಾಸ್ಯ ಮಾಡಿದರು, ನಮಗೆ ಬೈದರು, ಆದರೆ ನಾವು ಅದನ್ನು ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ನಮ್ಮ ಹರ್ಷವು ಮಹತ್ತಾಗಿತ್ತು, ಏಕೆಂದರೆ ಇನ್ನೂ ಹೆಚ್ಚಿನದ್ದನ್ನು ನಮಗೆ ಕಲಿಯಲಿಕ್ಕಿತ್ತಾದರೂ ನಮ್ಮಲ್ಲಿ ಸತ್ಯವಿತ್ತು.
ಪ್ರತಿ ಆದಿತ್ಯವಾರ ನಾವು ಮನೆಯಿಂದ ಮನೆಗೆ ಹೋದೆವು. ಜನರು ಪ್ರಶ್ನೆಗಳನ್ನು ಕೇಳುತ್ತಿದ್ದರು, ಮತ್ತು ಅವುಗಳಿಗೆ ಉತ್ತರ ಕೊಡಲು ನಾವು ಪ್ರಯತ್ನಿಸುತ್ತಿದ್ದೆವು. ಆದಿತ್ಯವಾರ ಸಾಯಂಕಾಲಗಳಂದು ನಾವು ಒಂದು ಬಹಿರಂಗ ಭಾಷಣವನ್ನು ಕೊಟ್ಟೆವು. ನಮಗೆ ರಾಜ್ಯ ಸಭಾಗೃಹವಿರಲಿಲ್ಲ, ಆದುದರಿಂದ ನಾವು ಕೂಟಗಳನ್ನು ಮನೆಯ ಹೊರಗಡೆ ನಡಿಸಿದೆವು. ನಾವು ಜನರನ್ನು ಒಟ್ಟಾಗಿ ಜೊತೆಗೂಡಿಸಿ, ಒಂದು ಭಾಷಣವನ್ನು ಕೊಟ್ಟು, ಪ್ರಶ್ನೆಗಳನ್ನು ಕೇಳುವಂತೆ ಅವರನ್ನು ಆಮಂತ್ರಿಸಿದೆವು. ಕೆಲವೊಮ್ಮೆ ನಾವು ಚರ್ಚ್ಗಳಲ್ಲಿ ಸಾರಿದೆವು.
ಎಲ್ಲಿ ಜನರು ಯೆಹೋವನ ಸಾಕ್ಷಿಗಳ ಕುರಿತು ಎಂದೂ ಕೇಳಿರಲಿಲ್ಲವೋ ಅಂತಹ ಕ್ಷೇತ್ರಗಳಿಗೆ ಸಹ ನಾವು ಪ್ರಯಾಣಿಸಿದೆವು. ಅಧಿಕಾಂಶ ಸಮಯಗಳಲ್ಲಿ ನಾವು ಸೈಕಲ್ಗಳ ಮೇಲೆ ಹೋದೆವಾದರೂ, ಕೆಲವೊಮ್ಮೆ ಒಂದು ಬಸ್ಸನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳುತ್ತಿದ್ದೆವು. ನಾವು ಹಳ್ಳಿಯೊಂದನ್ನು ಸಮೀಪಿಸಿದಾಗ, ಹಾರ್ನನ್ನು ಜೋರಾಗಿ ಬಾರಿಸುತ್ತಿದ್ದೆವು. ಇಡೀ ಹಳ್ಳಿಯು ನಮ್ಮ ಶಬ್ದವನ್ನು ಕೇಳಸಾಧ್ಯವಿತ್ತು! ಏನು ಸಂಭವಿಸುತ್ತಿತ್ತೆಂಬುದನ್ನು ಕಂಡುಹಿಡಿಯಲಿಕ್ಕಾಗಿ ಜನರು ಆತುರದಿಂದ ಬಂದರು. ಆಗ ನಾವು ನಮ್ಮ ಸಂದೇಶವನ್ನು ಪ್ರಕಟಪಡಿಸಿದೆವು. ನಾವು ಮುಗಿಸಿದಾಗ, ನಮ್ಮ ಸಾಹಿತ್ಯದ ಪ್ರತಿಗಳನ್ನು ಪಡೆದುಕೊಳ್ಳಲು ಜನರು ಸೆಣಸಾಡಿದರು. ನಾವು ಬೃಹತ್ ಪ್ರಮಾಣಗಳಲ್ಲಿ ಸಾಹಿತ್ಯವನ್ನು ನೀಡಿದೆವು.
ದೇವರ ರಾಜ್ಯದ ಬರೋಣವನ್ನು ನಾವು ಆತುರದಿಂದ ಎದುರುನೋಡಿದೆವು. 1935 ವರ್ಷಪುಸ್ತಕ (ಇಂಗ್ಲಿಷ್) ವನ್ನು ನಾವು ಪಡೆದುಕೊಂಡಾಗ, ಸಹೋದರರಲ್ಲಿ ಒಬ್ಬನು, ಒಂದು ವರ್ಷಕ್ಕಾಗಿರುವ ವಚನದ ಚರ್ಚೆಗಳ ಸಂಪೂರ್ಣ ಕಾಲತಖ್ತೆಯನ್ನು ನೋಡಿ, “ಅರ್ಮಗೆದೋನ್ ಬರುವುದಕ್ಕೆ ಮೊದಲು ಇನ್ನೊಂದು ಇಡೀ ವರ್ಷವನ್ನು ನಾವು ಪೂರ್ಣಗೊಳಿಸಲಿದ್ದೇವೆ ಎಂದು ಇದರ ಅರ್ಥವೋ?” ಎಂದು ಕೇಳಿದ್ದನ್ನು ನಾನು ಜ್ಞಾಪಿಸಿಕೊಳ್ಳಬಲ್ಲೆ.
ಅದಕ್ಕೆ ಉತ್ತರವಾಗಿ ಚಾಲಕನು ಕೇಳಿದ್ದು: “ಸಹೋದರರೇ, ಅರ್ಮಗೆದೋನ್ ನಾಳೆಯೇ ಬರಬೇಕಾದಲ್ಲಿ ನಾವು ವರ್ಷಪುಸ್ತಕ ಓದುವುದನ್ನು ನಿಲ್ಲಿಸುವೆವೆಂದು ನೀವು ಅಭಿಪ್ರಯಿಸುತ್ತೀರೊ?” ಸಹೋದರನು ಇಲ್ಲ ಎಂದು ಹೇಳಿದಾಗ, ಚಾಲಕನು ಹೇಳಿದ್ದು: “ಹಾಗಾದರೆ ನೀವು ಏಕೆ ಚಿಂತಿಸುತ್ತಿದ್ದೀರಿ?” ಯೆಹೋವನ ದಿನಕ್ಕಾಗಿ ನಾವು ಆತುರರಾಗಿದ್ದೆವು, ಮತ್ತು ಇನ್ನೂ ಆತುರರಾಗಿದ್ದೇವೆ.
ಯುದ್ಧದ ವರ್ಷಗಳು
ಎರಡನೆಯ ಲೋಕ ಯುದ್ಧದ ಸಮಯದಲ್ಲಿ, ನಮ್ಮ ಪುಸ್ತಕಗಳ ಆಮದು ಮಾಡುವಿಕೆಯು ನಿಷೇಧಿಸಲ್ಪಟ್ಟಿತು. ಇಲೆಶದಲ್ಲಿನ ಒಬ್ಬ ಸಹೋದರನು ರಿಚಸ್ ಎಂಬ ಪುಸ್ತಕವನ್ನು ಒಬ್ಬ ಪೊಲೀಸನಿಗೆ ಅನುದ್ದೇಶಪೂರ್ವಕವಾಗಿ ನೀಡಿದನು. ಪೊಲೀಸನು ಕೇಳಿದ್ದು: “ಈ ಪುಸ್ತಕದ ಒಡೆಯನು ಯಾರು?” ಅದು ತನ್ನ ಸ್ವಂತದ್ದೆಂದು ಆ ಸಹೋದರನು ಹೇಳಿದನು. ಅದೊಂದು ನಿಷೇಧಿತ ಪುಸ್ತಕವಾಗಿತ್ತೆಂದು ಆ ಪೊಲೀಸನು ಹೇಳಿ, ಅವನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಬಂಧಿಸಿದನು.
ನಾನು ಪೊಲೀಸ್ ಠಾಣೆಗೆ ಹೋದೆ ಮತ್ತು ವಿಚಾರಣೆಗಳನ್ನು ಮಾಡಿದ ಬಳಿಕ, ಆ ಸಹೋದರನನ್ನು ಜಾಮೀನಿನ ಮೇಲೆ ಸೆರೆಯಿಂದ ಬಿಡಿಸಿದೆ. ತದನಂತರ ಏನು ಸಂಭವಿಸಿತೊ ಅದರ ಕುರಿತಾಗಿ ಲೇಗಾಸ್ನಲ್ಲಿದ್ದ ಸಹೋದರ ಬ್ರೌನರಿಗೆ ತಿಳಿಸಲಿಕ್ಕಾಗಿ ಟೆಲಿಫೋನ್ ಮಾಡಿದೆ. ನಮ್ಮ ಪುಸ್ತಕಗಳ ಹಂಚಿಕೆಯನ್ನು ನಿಷೇಧಿಸಿರುವಂತಹ ಯಾವುದೇ ನಿಯಮವು ಇತ್ತೋ ಎಂದೂ ನಾನು ಕೇಳಿದೆ. ನಮ್ಮ ಪುಸ್ತಕಗಳ ಹಂಚಿಕೆಯಲ್ಲ, ಬದಲಾಗಿ ಕೇವಲ ಆಮದು ಮಾಡುವಿಕೆಯು ನಿಷೇಧಿಸಲ್ಪಟ್ಟಿತ್ತು ಎಂದು ಸಹೋದರ ಬ್ರೌನ್ ನನಗೆ ಹೇಳಿದರು. ಮೂರು ದಿವಸಗಳ ತರುವಾಯ, ಸಂಭವಿಸುತ್ತಿರುವಂತಹ ವಿಷಯವನ್ನು ಅವಲೋಕಿಸಲಿಕ್ಕಾಗಿ, ಸಹೋದರ ಬ್ರೌನ್ ಲೇಗಾಸ್ನಿಂದ ಒಬ್ಬ ಸಹೋದರನನ್ನು ಕಳುಹಿಸಿದರು. ಮರುದಿನ ನಾವೆಲ್ಲರೂ ಪತ್ರಿಕೆಗಳು ಮತ್ತು ಪುಸ್ತಕಗಳೊಂದಿಗೆ ಸಾರುವ ಕಾರ್ಯದಲ್ಲಿ ತೊಡಗಬೇಕೆಂದು ಈ ಸಹೋದರನು ನಿರ್ಧರಿಸಿದನು.
ನಾವು ಬೇರೆ ಬೇರೆ ದಿಕ್ಕುಗಳಿಗೆ ಚದರಿದೆವು. ಸುಮಾರು ಒಂದು ತಾಸಿನ ಬಳಿಕ, ಸಹೋದರರಲ್ಲಿ ಹೆಚ್ಚಿನವರು ಬಂಧಿಸಲ್ಪಟ್ಟಿದ್ದಾರೆಂದು ನನಗೆ ಸುದ್ದಿ ಬಂತು. ಆದುದರಿಂದ ನಾನು ಮತ್ತು ಸಂದರ್ಶಕ ಸಹೋದರರು ಪೊಲೀಸ್ ಠಾಣೆಗೆ ಹೋದೆವು. ಪುಸ್ತಕಗಳು ನಿಷೇಧಿಸಲ್ಪಟ್ಟಿಲ್ಲವೆಂಬ ನಮ್ಮ ವಿವರಣೆಗೆ ಕಿವಿಗೊಡಲು ಪೊಲೀಸರು ನಿರಾಕರಿಸಿದರು.
ಬಂಧಿಸಲ್ಪಟ್ಟಿದ್ದ 33 ಸಹೋದರರು, ಈಫೆಯಲ್ಲಿದ್ದ ಮುಖ್ಯ ಮ್ಯಾಜಿಸ್ಟ್ರೆಟ್ನ ಕೋರ್ಟಿಗೆ ಕಳುಹಿಸಲ್ಪಟ್ಟರು, ಮತ್ತು ನಾನು ಅವರೊಂದಿಗೆ ಜೊತೆಗೂಡಿದೆ. ನಾವು ಕರೆದೊಯ್ಯಲ್ಪಡುತ್ತಿರುವುದನ್ನು ಕಂಡ ಪಟ್ಟಣದ ಜನರು, “ಈ ಜನರ ಕಾರ್ಯವು ಈಗ ಕೊನೆಗೊಳಿಸಲ್ಪಡುತ್ತದೆ. ಅವರು ಇನ್ನು ಪುನಃ ಇಲ್ಲಿಗೆ ಬರುವುದಿಲ್ಲ” ಎಂದು ಕೂಗಿದರು.
ನೈಜಿರಿಯದವನಾದ ಒಬ್ಬ ಮುಖ್ಯ ಮ್ಯಾಜಿಸ್ಟ್ರೆಟ್ನ ಮುಂದೆ ಆಪಾದನೆಯು ಸಾದರಪಡಿಸಲ್ಪಟ್ಟಿತು. ಎಲ್ಲಾ ಪುಸ್ತಕಗಳು ಮತ್ತು ಪತ್ರಿಕೆಗಳು ಪ್ರದರ್ಶಿಸಲ್ಪಟ್ಟವು. ಈ ಜನರನ್ನು ಬಂಧಿಸುವಂತೆ ಪೊಲೀಸ್ ಮುಖ್ಯಸ್ಥನಿಗೆ ಯಾರು ಅಧಿಕಾರಕೊಟ್ಟಿದ್ದರೆಂದು ಅವನು ಕೇಳಿದನು. ಜಿಲ್ಲಾಧಿಕಾರಿಯಿಂದ ಕೊಡಲ್ಪಟ್ಟ ಆಜೆಗ್ಞಳಿಗನುಸಾರ ತಾನು ಕಾರ್ಯನಡಿಸಿದೆನೆಂದು ಪೊಲೀಸ್ ಮುಖ್ಯಸ್ಥನು ಉತ್ತರಿಸಿದನು. ಮುಖ್ಯ ಮ್ಯಾಜಿಸ್ಟೆಟ್ರನು, ಪೊಲೀಸ್ ಮುಖ್ಯಸ್ಥನನ್ನು ಮತ್ತು ನನ್ನನ್ನೂ ಸೇರಿಸಿ ನಮ್ಮ ಪ್ರತಿನಿಧಿಗಳಲ್ಲಿ ನಾಲ್ಕು ಮಂದಿಯನ್ನು ತನ್ನ ಚೇಂಬರಿಗೆ ಕರೆಸಿದನು.
ಶ್ರೀ. ಬ್ರೌನ್ ಯಾರು ಎಂದು ಅವನು ಕೇಳಿದನು. ಅವರು ಲೇಗಾಸ್ನಲ್ಲಿರುವ ವಾಚ್ ಟವರ್ ಸೊಸೈಟಿಯ ಪ್ರತಿನಿಧಿಯಾಗಿದ್ದರೆಂದು ನಾವು ಅವನಿಗೆ ಹೇಳಿದೆವು. ನಮ್ಮ ಕುರಿತಾಗಿ ಶ್ರೀ. ಬ್ರೌನ್ರಿಂದ ತಾನು ಒಂದು ಟೆಲಿಗ್ರಾಮನ್ನು ಪಡೆದಿದ್ದೇನೆಂದು ಅವನು ನಮಗೆ ಹೇಳಿದನು. ಅವನು ಆ ದಿನ ಮೊಕದ್ದಮೆಯನ್ನು ಮುಂದಕ್ಕೆ ಹಾಕಿದನು ಮತ್ತು ಸಹೋದರರಿಗೆ ಜಾಮೀನಿನ ಮೇಲೆ ಸೆರೆಯಿಂದ ಬಿಡುಗಡೆ ಒದಗಿಸಿದನು. ಮರುದಿನ ಅವನು ಸಹೋದರರನ್ನು ನಿರಪರಾಧಿಗಳೆಂದು ಹೇಳಿ, ಅವರನ್ನು ಬಿಡುಗಡೆಗೊಳಿಸಿದನು, ಮತ್ತು ಅವನು ಪುಸ್ತಕಗಳನ್ನು ಹಿಂದಿರುಗಿಸುವಂತೆ ಪೊಲೀಸರಿಗೆ ಅಪ್ಪಣೆಕೊಟ್ಟನು.
ನಾವು ಹಾಡುತ್ತಾ ಇಲೆಶಕ್ಕೆ ಹಿಂದಿರುಗಿದೆವು. ಪುನಃ ಜನರು ಕೂಗಾಡಲು ಆರಂಭಿಸಿದರು, ಆದರೆ ಈ ಬಾರಿ ಅವರು, “ಅವರು ಪುನಃ ಬಂದಿದ್ದಾರೆ!” ಎಂದು ಹೇಳುತ್ತಿದ್ದರು.
ವಿವಾಹದ ಕುರಿತಾದ ಯೆಹೋವನ ಮಟ್ಟವು ಸ್ಪಷ್ಟೀಕರಿಸಲ್ಪಟ್ಟದ್ದು
ಮೊದಲ ಮೂವರು ಗಿಲ್ಯಡ್ ಪದವೀಧರರು ನೈಜಿರಿಯಕ್ಕೆ ಆಗಮಿಸಿದ್ದು 1947 ರಲ್ಲಿಯೇ. ಈ ಸಹೋದರರಲ್ಲಿ ಒಬ್ಬರಾದ ಟೋನಿ ಆ್ಯಟ್ವುಡ್, ಇನ್ನೂ ಇಲ್ಲಿ ನೈಜಿರಿಯದ ಬೆತೆಲ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆ ಸಮಯದಂದಿನಿಂದ, ನೈಜಿರಿಯದಲ್ಲಿನ ಯೆಹೋವನ ಸಂಸ್ಥೆಯಲ್ಲಿ ಮಹತ್ತರವಾದ ಬದಲಾವಣೆಗಳನ್ನು ನಾವು ನೋಡಿದೆವು. ಬಹು ಪತ್ನೀತ್ವದ ಕುರಿತಾದ ನಮ್ಮ ದೃಷ್ಟಿಕೋನವು, ದೊಡ್ಡ ಬದಲಾವಣೆಗಳಲ್ಲಿ ಒಂದಾಗಿತ್ತು.
1941ರ ಫೆಬ್ರವರಿಯಲ್ಲಿ ನಾನು ಓಲಾಬಿಸಿ ಫಾಸೂಬಾಳನ್ನು ವಿವಾಹವಾದೆ ಮತ್ತು ಇನ್ನು ಹೆಚ್ಚಿನ ಪತ್ನಿಯರನ್ನು ತೆಗೆದುಕೊಳ್ಳದಿರುವುದರ ಕುರಿತು ಸಾಕಷ್ಟು ವಿಷಯವನ್ನು ತಿಳಿದಿದ್ದೆ. ಆದರೆ 1947 ರಷ್ಟಕ್ಕೆ, ಮಿಷನೆರಿಗಳು ಬಂದಾಗ, ಸಭೆಗಳಲ್ಲಿ ಬಹು ಪತ್ನೀತ್ವವು ಸಾಮಾನ್ಯವಾಗಿತ್ತು. ಅದು ತಪ್ಪಾಗಿತ್ತೆಂಬ ತಿಳಿವಳಿಕೆಯಿಲ್ಲದೇ ಅವರು ಒಬ್ಬ ಪತ್ನಿಗಿಂತ ಹೆಚ್ಚು ಪತ್ನಿಯರನ್ನು ವಿವಾಹವಾಗಿದ್ದರೆಂದು ಬಹು ಪತ್ನೀಕ ಸಹೋದರರಿಗೆ ಹೇಳಲಾಯಿತು. ಆದುದರಿಂದ ಅವರಿಗೆ ಇಬ್ಬರು ಅಥವಾ ಮೂವರು ಅಥವಾ ನಾಲ್ವರು ಅಥವಾ ಐವರು ಪತ್ನಿಯರಿರುವಲ್ಲಿ, ಅವರು ಅವರನ್ನು ಇಟ್ಟುಕೊಳ್ಳಸಾಧ್ಯವಿದೆಯಾದರೂ, ಅವರು ಇನ್ನು ಹೆಚ್ಚು ಜನರನ್ನು ವಿವಾಹವಾಗಬಾರದು. ಆ ಕಾರ್ಯನೀತಿಯು ನಮಗಿತ್ತು.
ಅನೇಕ ಜನರು ನಮ್ಮೊಂದಿಗೆ ಜೊತೆಗೂಡಲು ಆತುರರಾಗಿದ್ದರು, ವಿಶೇಷವಾಗಿ ಇಲೆಶದಲ್ಲಿನ ಚೆರೂಬಿಮ್ ಮತ್ತು ಸೆರಾಫಿಮ್ ಸಮಾಜ. ಸತ್ಯವನ್ನು ಕಲಿಸಿದಂತಹ ಜನರು ಯೆಹೋವನ ಸಾಕ್ಷಿಗಳು ಮಾತ್ರವೇ ಆಗಿದ್ದರು ಎಂದು ಅವರು ಹೇಳಿದರು. ಅವರು ನಮ್ಮ ಬೋಧನೆಗಳನ್ನು ಒಪ್ಪಿಕೊಂಡರು ಮತ್ತು ತಮ್ಮ ಚರ್ಚ್ಗಳನ್ನು ರಾಜ್ಯ ಸಭಾಗೃಹಗಳನ್ನಾಗಿ ಮಾರ್ಪಡಿಸಲು ಅವರು ಬಯಸಿದರು. ಇದನ್ನು ನೆರವೇರಿಸಲು ನಾವು ಪ್ರಯಾಸಪೂರ್ವಕವಾಗಿ ಕೆಲಸ ಮಾಡುತ್ತಿದ್ದೆವು. ಅವರ ಹಿರಿಯರನ್ನು ತರಬೇತುಗೊಳಿಸಲಿಕ್ಕಾಗಿ ಕೇಂದ್ರಗಳನ್ನೂ ನಾವು ಹೊಂದಿದ್ದೆವು.
ಆಗ ಬಹು ಪತ್ನೀತ್ವದ ಕುರಿತಾದ ಹೊಸ ಮಾರ್ಗದರ್ಶನವು ಬಂತು. 1947 ರಲ್ಲಿನ ಸರ್ಕಿಟ್ ಸಮ್ಮೇಳನವೊಂದರಲ್ಲಿ ಮಿಷನೆರಿಗಳಲ್ಲಿ ಒಬ್ಬರು ಒಂದು ಭಾಷಣವನ್ನು ಕೊಟ್ಟರು. ಅವರು ಸುನಡತೆ ಮತ್ತು ಹವ್ಯಾಸಗಳ ಕುರಿತು ಮಾತಾಡಿದರು. ತದನಂತರ ಅವರು, ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ ಎಂದು ಹೇಳುವ, 1 ಕೊರಿಂಥ 6:9, 10ನ್ನು ಉದ್ಧರಿಸಿದರು. ಬಳಿಕ ಅವರು ಕೂಡಿಸಿದ್ದು: “ಮತ್ತು ಬಹು ಪತ್ನೀಕರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ!” ಸಭಿಕರಲ್ಲಿದ್ದ ಜನರು ಕೂಗಿದ್ದು: “ಓಹೋ, ಬಹು ಪತ್ನೀಕರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೊ!” ವೈಮನಸ್ಯ ಉಂಟಾಯಿತು. ಅದು ಒಂದು ಯುದ್ಧದಂತಿತ್ತು. ಹೊಸದಾಗಿ ಸಹವಾಸ ಮಾಡುತ್ತಿದ್ದವರಲ್ಲಿ ಅನೇಕರು, “ನಾವು ಈ ಸಂಸ್ಥೆಯೊಂದಿಗೆ ಗಾಢವಾಗಿ ಒಳಗೂಡದೆ ಇದುದ್ದರಿಂದ ಉಪಕಾರವಾಯಿತು” ಎಂದು ಹೇಳುತ್ತಾ, ಸಹವಾಸ ಮಾಡುವುದನ್ನು ನಿಲ್ಲಿಸಿದರು.
ಹಾಗಿದ್ದರೂ, ಅಧಿಕಾಂಶ ಸಹೋದರರು ತಮ್ಮ ಪತ್ನಿಯರನ್ನು ಸ್ವತಂತ್ರಗೊಳಿಸುವ ಮೂಲಕ ತಮ್ಮ ವಿವಾಹ ಸನ್ನಿವೇಶಗಳನ್ನು ಸರಿಪಡಿಸಿಕೊಳ್ಳಲಾರಂಭಿಸಿದರು. ಅವರು ಅವರಿಗೆ ಹಣವನ್ನು ಕೊಟ್ಟು ಹೇಳಿದ್ದು, ‘ನೀನು ಸಣ್ಣ ಪ್ರಾಯದವಳಾಗಿರುವಲ್ಲಿ, ಹೋಗಿ ಮತ್ತೊಬ್ಬ ಗಂಡನಿಗಾಗಿ ಹುಡುಕು. ನಿನ್ನನ್ನು ವಿವಾಹವಾಗಿ ನಾನು ತಪ್ಪುಮಾಡಿದೆ. ಈಗ ನಾನು ಒಬ್ಬ ಪತ್ನಿಯ ಗಂಡನಾಗಿರಬೇಕು.’
ಕೂಡಲೆ ಇನ್ನೊಂದು ಸಮಸ್ಯೆಯು ತಲೆದೋರಿತು. ಒಬ್ಬ ಪತ್ನಿಯನ್ನು ಇಟ್ಟುಕೊಂಡು, ಇತರರನ್ನು ಬಿಟ್ಟುಬಿಡಲು ನಿರ್ಧರಿಸಿದ ಬಳಿಕ, ಕೆಲವರು ತಮ್ಮ ಮನಸ್ಸುಗಳನ್ನು ಬದಲಾಯಿಸಿದರು ಮತ್ತು ತಮ್ಮ ಇತರ ಪತ್ನಿಯರಲ್ಲಿ ಒಬ್ಬರನ್ನು ಹಿಂದೆ ಪಡೆದುಕೊಳ್ಳಲು ಬಯಸಿದರು ಹಾಗೂ ತಾವು ಈ ಹಿಂದೆ ಇಟ್ಟುಕೊಂಡಿದ್ದ ಒಬ್ಬ ಪತ್ನಿಯನ್ನು ಬಿಟ್ಟುಬಿಡಲು ನಿರ್ಧರಿಸಿದರು! ಆದುದರಿಂದ ಪುನಃ ತೊಂದರೆಯು ಆರಂಭವಾಯಿತು.
“ನಿನ್ನ ಯೌವನದ ಹೆಂಡತಿ” ಎಂಬ ವಿಷಯಕ್ಕೆ ನಿರ್ದೇಶಿಸುವ, ಮಲಾಕಿಯ 2:14ರ ಮೇಲಾಧಾರಿತವಾದ ಇನ್ನೂ ಹೆಚ್ಚಿನ ಮಾರ್ಗದರ್ಶನವು ಬ್ರೂಕ್ಲಿನ್ನ ಮುಖ್ಯಕಾರ್ಯಾಲಯದಿಂದ ಬಂತು. ಗಂಡಂದಿರು ತಾವು ವಿವಾಹವಾಗಿದ್ದ ಮೊದಲ ಹೆಂಡತಿಯನ್ನು ಇಟ್ಟುಕೊಳ್ಳಬೇಕೆಂಬುದು ಕೊಡಲ್ಪಟ್ಟ ಮಾರ್ಗದರ್ಶನವಾಗಿತ್ತು. ಹೀಗೆ ತಾನೆ ಆ ಪ್ರಶ್ನೆಯು ಕೊನೆಯದಾಗಿ ಬಗೆಹರಿಸಲ್ಪಟ್ಟಿತು.
ಸೇವೆಯ ಸುಯೋಗಗಳು
1947 ರಲ್ಲಿ ಸೊಸೈಟಿಯು, ಸಭೆಗಳನ್ನು ಬಲಪಡಿಸಲು ಹಾಗೂ ಅವುಗಳನ್ನು ಸರ್ಕಿಟ್ಗಳನ್ನಾಗಿ ವ್ಯವಸ್ಥಾಪಿಸಲು ಆರಂಭಿಸಿತು. ಈಗ ಸರ್ಕಿಟ್ ಮೇಲ್ವಿಚಾರಕರು ಎಂದು ಕರೆಯಲ್ಪಡುವ, ‘ಸಹೋದರರಿಗೆ ಸೇವಕ’ ರೋಪಾದಿ ಜ್ಞಾನದಲ್ಲಿ ಅಭಿವೃದ್ಧಿ ಹೊಂದಿದ್ದ ಪ್ರೌಢ ಸಹೋದರರನ್ನು ನೇಮಿಸಲು ಅವರು ಬಯಸಿದರು. ಅಂತಹ ಒಂದು ನೇಮಕವನ್ನು ನಾನು ಅಂಗೀಕರಿಸುವೆನೊ ಎಂದು ಸಹೋದರ ಬ್ರೌನ್ ನನ್ನನ್ನು ಕೇಳಿದರು. ನಾನು ದೀಕ್ಷಾಸ್ನಾನ ಪಡೆದುಕೊಂಡಿದ್ದ ಕಾರಣವು ಯೆಹೋವನ ಚಿತ್ತವನ್ನು ಮಾಡುವುದಾಗಿತ್ತೆಂದು ನಾನು ಹೇಳಿದೆ; ನಾನು ಕೂಡಿಸಿದ್ದು: “ನೀವೇ ನನಗೆ ದೀಕ್ಷಾಸ್ನಾನ ಮಾಡಿಸಿದಿರಿ. ಯೆಹೋವನನ್ನು ಹೆಚ್ಚು ಸಮಗ್ರವಾಗಿ ಸೇವಿಸಲು ಒಂದು ಅವಕಾಶವಿರುವಾಗ, ನಾನು ನಿರಾಕರಿಸುವೆನೆಂದು ನೀವು ನೆನಸುತ್ತೀರೊ?”
ಆ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ, ನಮ್ಮಲ್ಲಿ ಏಳು ಮಂದಿ ಲೇಗಾಸ್ಗೆ ಕರೆಸಲ್ಪಟ್ಟೆವು ಮತ್ತು ನಾವು ಸರ್ಕಿಟ್ ಕೆಲಸಕ್ಕೆ ಕಳುಹಿಸಲ್ಪಡುವ ಮೊದಲು ನಮಗೆ ತರಬೇತಿಯನ್ನು ಕೊಡಲಾಯಿತು. ಆ ದಿನಗಳಲ್ಲಿ ಸರ್ಕಿಟ್ಗಳು ಬಹಳ ದೊಡ್ಡದಾಗಿದ್ದವು. ಇಡೀ ದೇಶವು ಕೇವಲ ಏಳು ಸರ್ಕಿಟ್ಗಳಾಗಿ ವಿಭಾಗಿಸಲ್ಪಟ್ಟಿತ್ತು. ಕೆಲವೇ ಸಭೆಗಳು ಇದ್ದವು.
ಸಹೋದರರಿಗೆ ಸೇವಕರೋಪಾದಿ ನಮ್ಮ ಕೆಲಸವು ಬಹಳ ಕಷ್ಟಕರವಾಗಿತ್ತು. ಪ್ರತಿ ದಿನ ನಾವು ಅನೇಕ ಕಿಲೋಮೀಟರ್ಗಳಷ್ಟು ನಡೆದೆವು, ಅನೇಕವೇಳೆ ತೀಕ್ಷ್ಣ ಶಾಖವೂ ತೇವವೂ ಇದ್ದಂತಹ ಉಷ್ಣವಲಯದ ಕಾಡುಗಳ ಮೂಲಕ. ಪ್ರತಿ ವಾರ ನಾವು ಹಳ್ಳಿಯಿಂದ ಹಳ್ಳಿಗೆ ಪ್ರಯಾಣಿಸಬೇಕಿತ್ತು. ಆಗಾಗ ನನ್ನ ಕಾಲುಗಳು ಕುಸಿಯುತ್ತವೆ ಎಂದು ನನಗನಿಸಿತು. ಕೆಲವೊಮ್ಮೆ ನಾನು ಸಾಯುತ್ತಿದ್ದೆನೋ ಎಂಬ ಅನಿಸಿಕೆ ನನಗಾಯಿತು! ಆದರೆ, ವಿಶೇಷವಾಗಿ ಸತ್ಯವನ್ನು ಸ್ವೀಕರಿಸಿದ ಜನರ ಸಂಖ್ಯೆಯು ಅಧಿಕವಾಗುತ್ತಿರುವುದನ್ನು ನೋಡುವುದರಲ್ಲಿ ಬಹಳ ಹೆಚ್ಚು ಆನಂದವು ಸಹ ಇತ್ತು. ಅಷ್ಟೇಕೆ, ಕೇವಲ ಏಳು ವರ್ಷಗಳಲ್ಲಿ, ದೇಶದಲ್ಲಿನ ಪ್ರಚಾರಕರ ಸಂಖ್ಯೆಯು ನಾಲ್ಕರಷಾಯ್ಟಿತು!
ಎಲ್ಲಿ ನನ್ನನ್ನು ಸಿಟಿ ಮೇಲ್ವಿಚಾರಕನನ್ನಾಗಿ ನೇಮಿಸಲಾಯಿತೊ, ಆ ಇಲೆಶಕ್ಕೆ ಹಿಂದಿರುಗುವಂತೆ ಅನಾರೋಗ್ಯವು ನನ್ನನ್ನು ಒತ್ತಾಯಿಸಿದಾಗ, 1955ರ ವರೆಗೆ ನಾನು ಸರ್ಕಿಟ್ ಕೆಲಸದಲ್ಲಿ ಭಾಗವಹಿಸಿದೆ. ಮನೆಯಲ್ಲಿದ್ದದ್ದು, ನನ್ನ ಕುಟುಂಬಕ್ಕೆ ಆತ್ಮಿಕವಾಗಿ ಸಹಾಯ ಮಾಡಲಿಕ್ಕಾಗಿ ಹೆಚ್ಚು ಗಮನವನ್ನು ಮೀಸಲಾಗಿಡುವಂತೆ ನನಗೆ ಅವಕಾಶ ಕಲ್ಪಿಸಿತು. ಇಂದು ನನ್ನ ಮಕ್ಕಳಲ್ಲಿ ಆರು ಮಂದಿಯೂ ನಂಬಿಗಸ್ತಿಕೆಯಿಂದ ಯೆಹೋವನನ್ನು ಸೇವಿಸುತ್ತಿದ್ದಾರೆ.
ನಿಜ ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ
ಗತ ವರ್ಷಗಳ ಕಡೆಗೆ ನಾನು ಮನಸ್ಸು ತಿರುಗಿಸುವಾಗ, ನಾನು ಕೃತಜ್ಞನಾಗಿರಬೇಕಾದ ಎಷ್ಟೋ ವಿಷಯಗಳಿವೆ. ಆಶಾಭಂಗಗಳು, ಚಿಂತೆಗಳು, ಮತ್ತು ಅನಾರೋಗ್ಯವು ಇತ್ತಾದರೂ, ಅನೇಕ ಸಂತೋಷಗಳೂ ಅಲ್ಲಿದ್ದವು. ಗತ ವರ್ಷಗಳಲ್ಲಿ ನಮ್ಮ ಜ್ಞಾನ ಮತ್ತು ತಿಳಿವಳಿಕೆಯು ವಿಕಸಿಸಿದೆಯಾದರೂ, “ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ” ಎಂದು ಹೇಳುವ 1 ಕೊರಿಂಥ 13:8ರ ಅರ್ಥವನ್ನು ನಾನು ಅನುಭವದ ಮೂಲಕ ಕಲಿತಿದ್ದೇನೆ. ನೀವು ಯೆಹೋವನನ್ನು ಪ್ರೀತಿಸಿ, ಆತನ ಸೇವೆಯಲ್ಲಿ ದೃಢನಿಷ್ಠೆಯಿಂದ ಉಳಿಯುವುದಾದರೆ, ನಿಮ್ಮ ಕಷ್ಟಗಳಿಂದ ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮನ್ನು ಹೇರಳವಾಗಿ ಆಶೀರ್ವದಿಸುವನು.
ಸತ್ಯದ ಬೆಳಕು ಹೆಚ್ಚೆಚ್ಚು ಪ್ರಕಾಶಮಾನವಾಗುತ್ತಾ ಇದೆ. ನಾವು ಮೊದಲಾಗಿ ಆರಂಭಿಸಿದ ದಿನಗಳಲ್ಲಿ ಅರ್ಮಗೆದೋನ್ ಬೇಗನೆ ಬರುತ್ತದೆಂದು ನಾವು ಭಾವಿಸಿದ್ದೆವು; ಆದುದರಿಂದಲೇ ನಮ್ಮಿಂದ ಸಾಧ್ಯವಾದುದನ್ನೆಲ್ಲಾ ಮಾಡಲು ನಾವು ಅವಸರಪಡುತ್ತಿದ್ದೆವು. ಆದರೆ ಅದೆಲ್ಲವೂ ನಮ್ಮ ಪ್ರಯೋಜನಕ್ಕಾಗಿತ್ತು. ಆದುದರಿಂದಲೇ ಕೀರ್ತನೆಗಾರನ ಮಾತುಗಳೊಂದಿಗೆ ನಾನು ಸಮ್ಮತಿಸುತ್ತೇನೆ: “ಪ್ರಾಣವಿರುವ ವರೆಗೂ ಯೆಹೋವನನ್ನು ಸುತ್ತಿಸುವೆನು; ಜೀವಮಾನವೆಲ್ಲಾ ನನ್ನ ದೇವರನ್ನು ಕೊಂಡಾಡುವೆನು.”—ಕೀರ್ತನೆ 146:2.
[ಅಧ್ಯಯನ ಪ್ರಶ್ನೆಗಳು]
a ಬೈಬಲನ್ನು ಅಂತಿಮ ಅಧಿಕಾರದೋಪಾದಿ ನಿರ್ದೇಶಿಸುತ್ತಿದ್ದ ಅವರ ಪರಿಪಾಠದ ಕಾರಣದಿಂದ ಸಹೋದರ ಬ್ರೌನ್, ಬೈಬಲ್ ಬ್ರೌನ್ ಎಂದು ಕರೆಯಲ್ಪಟ್ಟಿದ್ದರು.—1992, ಸೆಪ್ಟೆಂಬರ್ 1ರ ದ ವಾಚ್ಟವರ್ನ ಪುಟ 32 ರಲ್ಲಿ “ನಿಜ ಸೌವಾರ್ತಿಕನೊಬ್ಬನ ಕೊಯ್ಲು” (ಇಂಗ್ಲಿಷ್) ನೋಡಿರಿ.
[ಪುಟ 23 ರಲ್ಲಿರುವ ಚಿತ್ರ]
1955 ರಲ್ಲಿ ಮಿಲ್ಟನ್ ಹೆನ್ಶೆಲ್ರೊಂದಿಗೆ ಸಾಮುವೆಲ್
[ಪುಟ 24 ರಲ್ಲಿರುವ ಚಿತ್ರ]
ತಮ್ಮ ಪತ್ನಿ ಓಲಾಬಿಸಿಯೊಂದಿಗೆ ಸಾಮುವೆಲ್