ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 11/1 ಪು. 4-8
  • ದೇವದೂತರ ಕುರಿತ ಸತ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವದೂತರ ಕುರಿತ ಸತ್ಯ
  • ಕಾವಲಿನಬುರುಜು—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸೈತಾನನ ಪಾತ್ರವನ್ನು ದನಿಗುಂದಿಸುವುದು
  • ಪ್ರಾರ್ಥನೆಗಳು ಯಾರಿಗೆ?
  • ಧರ್ಮಪಂಗಡಗಳಿಲ್ಲದ ದೇವದೂತರೋ?
  • “ಸುಳ್ಳಿಗೆ ಮೂಲಪುರುಷನು”
  • ಸಮೀಪಿಸುವಿಕೆ ದೇವದೂತರಿಗೋ ದೆವ್ವಗಳಿಗೋ?
  • “ಪ್ರಕಾಶರೂಪವುಳ್ಳ ದೇವದೂತ”
  • ‘ಆಕಾಶಮಧ್ಯದಲ್ಲಿ ಹಾರಿಹೋಗುವ ದೇವದೂತ’
  • ದೇವದೂತರು ನಮ್ಮ ಮೇಲೆ ಪರಿಣಾಮಬೀರುವ ವಿಧ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ದೇವದೂತರು—‘ಸಾರ್ವಜನಿಕ ಸೇವೆಗಾಗಿರುವ ಆತ್ಮಜೀವಿಗಳು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ದೇವದೂತರು ನಿಮಗೆ ಹೇಗೆ ಸಹಾಯಮಾಡಬಲ್ಲರು?
    ಕಾವಲಿನಬುರುಜು—1998
  • ದೇವದೂತರು ಮಾನವರಿಗಾಗಿ ಏನೆಲ್ಲ ಮಾಡುತ್ತಾರೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
ಕಾವಲಿನಬುರುಜು—1995
w95 11/1 ಪು. 4-8

ದೇವದೂತರ ಕುರಿತ ಸತ್ಯ

ಯಾರಾದರೊಬ್ಬರ ಪರಿಚಯ ಮಾಡಿಕೊಳ್ಳುವುದರಲ್ಲಿ, ಸಾಮಾನ್ಯವಾಗಿ ಆ ವ್ಯಕ್ತಿಯ ಕುಟುಂಬದ ಕುರಿತು ಸ್ವಲ್ಪ ವಿಷಯವನ್ನು ತಿಳಿಯುವುದು ಸೇರಿರುತ್ತದೆ. ಯೆಹೋವ ದೇವರನ್ನು ತಿಳಿದುಕೊಳ್ಳುವುದರಲ್ಲಿಯೂ ಅಂತೆಯೇ ಇದೆ. ಕೇವಲ ಆತನ ಹೆಸರನ್ನು ಕಲಿಯುವುದಕ್ಕಿಂತ ಹೆಚ್ಚು ಒಳಗೂಡಿದೆ. ಸ್ವರ್ಗದಲ್ಲಿರುವ ಆತನ ‘ಕುಟುಂಬ’ದ ಕುರಿತೂ ನಾವು ಸ್ವಲ್ಪ ವಿಷಯವನ್ನು ತಿಳಿಯಬೇಕು. (ಎಫೆಸ 3:14, 15ನ್ನು ಹೋಲಿಸಿ.) ಬೈಬಲು ದೇವದೂತರನ್ನು ದೇವರ “ಪುತ್ರರು” ಎಂದು ಕರೆಯುತ್ತದೆ. (ಯೋಬ 1:6, NW) ಬೈಬಲಿನಲ್ಲಿ ಅವರ ಗಮನಾರ್ಹ ಪಾತ್ರಗಳನ್ನು ಗಮನಿಸುವಲ್ಲಿ, ದೇವರ ಉದ್ದೇಶದಲ್ಲಿ ಅವರಿಗಿರುವ ಸ್ಥಾನವನ್ನು ತಿಳಿದುಕೊಳ್ಳಲಿಕ್ಕಾಗಿ ಅವರ ಕುರಿತು ಹೆಚ್ಚನ್ನು ತಿಳಿಯಲು ನಾವು ಬಯಸಬೇಕು.

ಒಂದು ಹೊಸ ಉಪಸಂಸ್ಕೃತಿಯು ವಿಕಸಿಸುತ್ತಿದೆ. ತಾವು ದೇವದೂತರಲ್ಲಿ ನಂಬಿಕೆ ಇಡುತ್ತೇವೆ ಎಂದು ಹೆಚ್ಚು ಜನರು ಹೇಳುತ್ತಿದ್ದಾರೆ ಮಾತ್ರವಲ್ಲ, ಅವರಿಂದ ನಿರ್ದಿಷ್ಟ ಮಟ್ಟಿಗೆ ಪ್ರಭಾವಿತರೂ ಆಗಿದ್ದೇವೆಂದು ಅಧಿಕಾಧಿಕ ಜನರು ವಾದಿಸುತ್ತಿದ್ದಾರೆ. “ನಿಮ್ಮ ಜೀವಿತದಲ್ಲಿ ನೀವೆಂದಾದರೂ ವೈಯಕ್ತಿಕವಾಗಿ ದೇವದೂತ ಸಮಾಗಮವನ್ನು ಅನುಭವಿಸಿದ್ದುಂಟೋ?” ಎಂದು 500 ಮಂದಿ ಅಮೆರಿಕನರನ್ನು ಕೇಳಿದಾಗ, ಬಹುಮಟ್ಟಿಗೆ ತೃತೀಯಾಂಶ ಜನರು ಹೌದೆಂದು ಉತ್ತರಿಸಿದರು. ದೇವದೂತರಲ್ಲಿ ನಂಬಿಕೆಯನ್ನು ಹೇಳಿಕೊಳ್ಳುವ ಯುವ ಜನರ ಸಂಖ್ಯೆಯು ಸಹ ಅಚ್ಚರಿ ಹುಟ್ಟಿಸುತ್ತದೆ—ಅಮೆರಿಕದಲ್ಲಿ ನಡೆದ ಒಂದು ಮತಗಣನೆಗನುಸಾರ, ಪೂರ್ಣ 76 ಪ್ರತಿಶತ! ಜನರು ದೇವದೂತರಲ್ಲಿ ಅಸಕ್ತರಾಗಿದ್ದಾರೆಂಬುದು ಸ್ಫುಟ. ಆದರೆ ದೇವದೂತರ ಕುರಿತ ಸದ್ಯದ ಯೋಚನೆಯು ಬೈಬಲ್‌ ಸತ್ಯದೊಂದಿಗೆ ಹೇಗೆ ಹೊಂದಿಕೆಯಾಗುತ್ತದೆ?

ಸೈತಾನನ ಪಾತ್ರವನ್ನು ದನಿಗುಂದಿಸುವುದು

ದೇವದೂತರ ಕುರಿತು ಮಾತಾಡುವಾಗ, ನಾವು ದುಷ್ಟದೂತರನ್ನು, ಅಂದರೆ ದೇವರ ವಿರುದ್ಧ ದಂಗೆಯೆದವ್ದರೆಂದು ಬೈಬಲು ಹೇಳುವ ಸ್ವರ್ಗೀಯ ಜೀವಿಗಳನ್ನು ದುರ್ಲಕ್ಷಿಸದಿರಬೇಕು. ಇವರಲ್ಲಿ ಅಗ್ರಗಣ್ಯನು ಸೈತಾನನು. ನಿಮ್ಮ ದೇವದೂತರನ್ನು ಕೇಳಿರಿ (ಇಂಗ್ಲಿಷ್‌) ಎಂಬ ಜನಪ್ರಿಯ ಪುಸ್ತಕವು, ಸೈತಾನನನ್ನು, ಸದಾ ಶೋಧನೆಯ ಮೂಲಕ ಮಾನವರಿಗೆ ತಮ್ಮ “ಆತ್ಮಿಕ ಸ್ನಾಯುಗಳನ್ನು” ಬಲಪಡಿಸಲು ನೆರವಾಗುವ ಕೇವಲ “ದೇವರ ಒಂದು ವಿಷಯಾಂಶ”ವಾಗಿ ಸೂಚಿಸುತ್ತದೆ. ಸೈತಾನನಲ್ಲಿ “ಪ್ರೀತಿಯ ಹೇತುಗಳು” ಇದ್ದರೂ, ಶತಮಾನಗಳಿಂದ ಅವನು ಕೆಡುಕಿನೊಂದಿಗೆ ತಪ್ಪಾಗಿ ಗುರುತಿಸಲ್ಪಟ್ಟಿದ್ದಾನೆಂದು ಆ ಕರ್ತೃಗಳು ಹೇಳುತ್ತಾರೆ. ಸೈತಾನನು ಮತ್ತು ಯೇಸುವು, “ಒಬ್ಬರಿಗೊಬ್ಬರು ನಿಷ್ಕೃಷ್ಟ ರೀತಿಯಲ್ಲಿ ಪೂರಕವಾಗಿ ಇರದಿದ್ದರೂ, ಕಡಿಮೆಪಕ್ಷ ಒಂದೇ ಹೇತುಗಳುಳ್ಳ, ಒಂದೇ ವ್ಯಕ್ತಿಯ ಅಖಂಡ ಭಾಗಗಳಾಗಿರುತ್ತಾರೆ.” ಇವು ಅಚ್ಚರಿಗೊಳಿಸುವ ಕಂಠೋಕ್ತಿಗಳು, ಆದರೆ ಬೈಬಲು ಏನನ್ನುತ್ತದೆ?

ಸೈತಾನನು “ದೇವರ ಒಂದು ವಿಷಯಾಂಶವಲ್ಲ,” ಬದಲಾಗಿ ದೇವರ ವೈರಿ ಎಂಬುದನ್ನು ಬೈಬಲು ಸ್ಪಷ್ಟಪಡಿಸುತ್ತದೆ. (ಲೂಕ 10:18, 19; ರೋಮಾಪುರ 16:20) ಅವನು ಯೆಹೋವನ ಪರಮಾಧಿಕಾರವನ್ನು ಎದುರಿಸುತ್ತಾನೆ, ಮತ್ತು ಮಾನವರ ಕಡೆಗಿನ ಅವನ ಹೇತುಗಳು ನಿಶ್ಚಯವಾಗಿಯೂ “ಪ್ರೀತಿಯ”ದ್ದಾಗಿರುವುದಿಲ್ಲ. ದೇವರ ಐಹಿಕ ಸೇವಕರ ಮೇಲೆ ಅವನು ನಿಷ್ಕರುಣೆಯಿಂದ ತನ್ನ ಕ್ರೋಧವನ್ನು ಕಾರುತ್ತಾನೆ. ಅವರನ್ನು ದೇವರ ಮುಂದೆ ಹಗಲಿರುಳು ದೂರುತ್ತಾನೆ!a (ಪ್ರಕಟನೆ 12:10, 12, 15-17) ಪರಿಣಾಮಗಳು ಏನೇ ಆಗಲಿ, ಅವರನ್ನು ಭ್ರಷ್ಟಗೊಳಿಸುವುದರಲ್ಲಿ ಸೈತಾನನು ತತ್ಪರನಾಗಿದ್ದಾನೆ. ನೀತಿವಂತನಾದ ಯೋಬನಿಗೆ ಅವನು ಮಾಡಿದ ನಿರ್ದಯೆಯ ಹಿಂಸೆಯು, ಮಾನವ ನರಳಾಟದ ಕಡೆಗೆ ಅವನಿಗಿರುವ ಕಲ್ಲೆದೆಯ ಮನೋಭಾವವನ್ನು ಹೊರಗೆಡಹುತ್ತದೆ.—ಯೋಬ 1:13-19; 2:7, 8.

ಸೈತಾನ ಮತ್ತು ಯೇಸುವು “ಒಂದೇ ಹೇತುಗಳು” ಉಳ್ಳವರಾಗಿರುವ ಬದಲಿಗೆ ಅವರು ಒಬ್ಬರಿಗೊಬ್ಬರು ನೇರಿದಿರಾದ ವಿರೋಧಿಗಳು. ಅಷ್ಟೇಕೆ, ಎಳೆಯ ಕೂಸಾದ ಯೇಸುವನ್ನು ಕೊಂದುಹಾಕುವ ಪೂರ ಪ್ರಯತ್ನದಲ್ಲಿ, ಶಿಶುಗಳ ಕಗ್ಗೊಲೆಯನ್ನು ಆಜ್ಞಾಪಿಸುವಂತೆ ಹೆರೋದನನ್ನು ಪ್ರಚೋದಿಸಿದವನು ಸೈತಾನನೇ ಎಂಬುದು ನಿಸ್ಸಂಶಯ! (ಮತ್ತಾಯ 2:16-18) ಮತ್ತು ಸೈತಾನನ ಕ್ರೂರ ಆಕ್ರಮಣಗಳು ಯೇಸುವಿನ ಮರಣದ ತನಕವೂ ಮುಂದುವರಿದವು. (ಲೂಕ 4:1-13; ಯೋಹಾನ 13:27) ಹೀಗೆ, ಯೇಸು ಮತ್ತು ಸೈತಾನನು “ಒಂದೇ ವ್ಯಕ್ತಿಯ ಅಖಂಡ ಭಾಗಗಳಾಗಿರುವ” ಬದಲಿಗೆ ಅವರು ಒಬ್ಬರಿಗೊಬ್ಬರು ಪೂರ್ಣ ವಿರೋಧಿಗಳು. ಅವರ ಹಗೆತನವು ಅನಿವಾರ್ಯವೆಂದು ಬೈಬಲ್‌ ಭವಿಷ್ಯವಾಣಿಯು ತೋರಿಸುತ್ತದೆ. (ಆದಿಕಾಂಡ 3:15) ಯುಕ್ತವಾಗಿಯೇ, ದೇವರ ಕ್ಲುಪ್ತಕಾಲದಲ್ಲಿ ಸೈತಾನನನ್ನು ನಾಶಮಾಡುವವನು ಪುನರುತಿತ್ಥ ಯೇಸುವೇ.—ಪ್ರಕಟನೆ 1:18; 20:1, 10.

ಪ್ರಾರ್ಥನೆಗಳು ಯಾರಿಗೆ?

ದೇವದೂತರೊಂದಿಗೆ ಸಂಪರ್ಕವನ್ನು ಮಾಡುವುದಕ್ಕಾಗಿ ದೇವದೂತ ಚಟುವಟಿಕೆಯ ಕೆಲವು ಪ್ರತಿಪಾದಕರು ಮನನ ಮತ್ತು ಇತರ ಕೆಲವು ತಂತ್ರಗಳನ್ನು ಶಿಫಾರಸ್ಸು ಮಾಡುತ್ತಾರೆ. “ದಿವ್ಯ ಪರಿವಾರದ ಯಾವುದೇ ಸದಸ್ಯನೊಂದಿಗೆ ಸಂಪರ್ಕಕ್ಕಾಗಿ ಒಂದು ಪ್ರಾಮಾಣಿಕ ವಿನಂತಿಯು ಆಲಿಸಲ್ಪಡದೆ ಇರಲಾರದು,” ಎಂದನ್ನುತ್ತದೆ ಒಂದು ಪುಸ್ತಕ. “ಬೇಡಿಕೊಳ್ಳಿರಿ, ನಿಮಗೆ ಉತ್ತರ ದೊರೆಯುವುದು.” ಸಂಪರ್ಕಕ್ಕಾಗಿ ಆ ಪುಸ್ತಕವು ಶಿಫಾರಸ್ಸು ಮಾಡುವ ದೇವದೂತರಲ್ಲಿ ಮೀಕಾಯೇಲ, ಗಬ್ರಿಯೇಲ, ಯುರೀಯೇಲ ಮತ್ತು ರಫಾಯೇಲರು ಸೇರಿದ್ದಾರೆ.b

ಆದರೂ, ದೇವರಿಗೆ ಪ್ರಾರ್ಥನೆ ಮಾಡುವಂತೆ ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನೇ ಹೊರತು ದೇವದೂತರಿಗಲ್ಲ. (ಮತ್ತಾಯ 6:9, 10) ತದ್ರೀತಿ, ಪೌಲನು ಬರೆದದ್ದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸುತ್ತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ.” (ಓರೆಅಕ್ಷರಗಳು ನಮ್ಮವು.) (ಫಿಲಿಪ್ಪಿ 4:6) ಆದುದರಿಂದ ಕ್ರೈಸ್ತರು ತಮ್ಮ ಪ್ರಾರ್ಥನೆಗಳಲ್ಲಿ ಯೆಹೋವನ ಹೊರತು ಬೇರೆ ಯಾರನ್ನೂ ಸಮೀಪಿಸುವುದಿಲ್ಲ, ಮತ್ತು ಅವರು ಹಾಗೆ ಮಾಡುವುದು ಯೇಸು ಕ್ರಿಸ್ತನ ಹೆಸರಿನಲ್ಲಿ.c—ಯೋಹಾನ 14:6, 13, 14.

ಧರ್ಮಪಂಗಡಗಳಿಲ್ಲದ ದೇವದೂತರೋ?

ಏಂಜಲ್‌ವಾಚ್‌ ನೆಟ್‌ವರ್ಕ್‌ (ದೂತಕಾವಲು ಜಾಲಬಂಧ)ನ ಅಧ್ಯಕ್ಷತೆ ವಹಿಸುವ ಐಲೀನ್‌ ಇಲ್ಯಸ್‌ ಫ್ರೀಮ್ಯಾನ್‌ಗೆ ಅನುಸಾರವಾಗಿ, “ದೇವದೂತರು ಪ್ರತಿಯೊಂದು ಧರ್ಮ, ಪ್ರತಿಯೊಂದು ತತ್ವಜ್ಞಾನ, ಪ್ರತಿಯೊಂದು ಮತಸೂತ್ರಕ್ಕೆ ಅತಿಶಯಿಸಿ ಇದ್ದಾರೆ. ವಾಸ್ತವಿಕವಾಗಿ, ನಮಗೆ ತಿಳಿದಿರುವಂತೆ, ದೇವದೂತರಿಗೆ ಧರ್ಮವೇ ಇಲ್ಲ.”

ಬೈಬಲಾದರೋ ನಂಬಿಗಸ್ತ ದೇವದೂತರಿಗೆ ಒಂದು ಧರ್ಮವು ಇದ್ದೇ ಇದೆಯೆಂದು ಸ್ಪಷ್ಟವಾಗಿಗಿ ತಿಳಿಸುತ್ತದೆ; ಅವರು, ಬೇರೆ ದೇವರಿಂದ ಯಾವ ಪ್ರತಿಸ್ಪರ್ಧೆಯನ್ನೂ ಸಹಿಸಿಕೊಳ್ಳದ, ಸತ್ಯ ದೇವರಾದ ಯೆಹೋವನನ್ನು ಆರಾಧಿಸುತ್ತಾರೆ. (ಧರ್ಮೋಪದೇಶಕಾಂಡ 5:6, 7; ಪ್ರಕಟನೆ 7:11) ಹೀಗೆ, ಅಂತಹ ದೇವದೂತನೊಬ್ಬನು, ಅಪೊಸ್ತಲ ಯೋಹಾನನಿಗೆ ತನ್ನನ್ನು ದೇವರ ಆಜ್ಞೆಗಳನ್ನು ಪಾಲಿಸುವವರಿಗೆ “ಜೊತೆಯ ದಾಸನಾಗಿ” ವರ್ಣಿಸಿದನು. (ಪ್ರಕಟನೆ 19:10) ನಂಬಿಗಸ್ತ ದೇವದೂತರು ಬೇರೆ ಯಾವುದೇ ಆರಾಧನಾ ಕ್ರಮವನ್ನು ಸಮರ್ಥಿಸುವುದಾಗಿ ಬೈಬಲಿನಲ್ಲಿ ನಾವು ಎಲ್ಲಿಯೂ ಓದುವುದಿಲ್ಲ. ಅವರು ಯೆಹೋವನಿಗೆ ಅನನ್ಯ ಭಕ್ತಿಯನ್ನು ಕೊಡುತ್ತಾರೆ.—ವಿಮೋಚನಕಾಂಡ 20:4, 5.

“ಸುಳ್ಳಿಗೆ ಮೂಲಪುರುಷನು”

ದೇವದೂತ ಸಂಬಂಧವಾದುದೆಂದು ಕರೆಯಲ್ಪಡುವ ಅನೇಕ ಸಮಾಗಮಗಳಲ್ಲಿ ಸತ್ತವರೊಂದಿಗೆ ಸಂಪರ್ಕವು ಸೇರಿರುತ್ತದೆ. “ನನ್ನ ಸೋದರಮಾವನು ನನ್ನನ್ನು ತಲಪುವ ಮತ್ತು ತಾನು ಕಟ್ಟಕಡೆಗೆ ಸಂತೋಷದಲ್ಲಿದ್ದೇನೆಂದು ನನಗೆ ತಿಳಿಸುವ ಒಂದು ದಾರಿಯನ್ನು ಕಂಡುಕೊಂಡನೆಂದು ನನಗೆ ಅನಿಸಿಕೆಯಾಗಿತ್ತು,” ಎನ್ನುತ್ತಾಳೆ ಅಲೀಸ್‌ ಎಂಬ ಮಹಿಳೆ, ಅವಳು ಶಕುನವೆಂದು ಪರಿಗಣಿಸಿದ ಒಂದು ಸೂಚಕವನ್ನು ಪಡೆದಾದ ಮೇಲೆ. ತೀರಿಕೊಂಡ ಒಬ್ಬ ಆಪ್ತ ಮಿತ್ರನನ್ನು ತದ್ರೀತಿಯಲ್ಲಿ ಟೆರಿ ಸ್ಮರಿಸುತ್ತಾಳೆ. “ಶವಸಂಸ್ಕಾರವಾದ ಒಂದು ವಾರದ ಬಳಿಕ,” ಅವಳು ಹೇಳುವುದು, “ನಾನು ಏನನ್ನು ಒಂದು ಸ್ವಪ್ನವೆಂದೆಣಿಸಿದೆನೋ ಅದರಲ್ಲಿ ಅವನು ನನ್ನ ಬಳಿಗೆ ಬಂದನು. ಅವನ ಮೃತ್ಯುವಿಗಾಗಿ ನಾನು ಶೋಕಿಸಬಾರದೆಂದು ಅವನಂದನು ಯಾಕೆಂದರೆ ಅವನು ಸಂತೋಷ ಮತ್ತು ಶಾಂತಿಯಲಿದ್ಲನ್ದು.”

ಆದರೆ “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂದು ಹೇಳುತ್ತದೆ ಬೈಬಲು. (ಪ್ರಸಂಗಿ 9:5) ಒಬ್ಬ ವ್ಯಕ್ತಿಯು ಸಾಯುವಾಗ, “ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು” ಎಂದೂ ಅದು ಹೇಳುತ್ತದೆ. (ಓರೆಅಕ್ಷರಗಳು ನಮ್ಮವು.) (ಕೀರ್ತನೆ 146:4) ಸೈತಾನನಾದರೋ “ಸುಳ್ಳಿಗೆ ಮೂಲಪುರುಷ”ನು. (ಯೋಹಾನ 8:44) ಮನುಷ್ಯನ ಪ್ರಾಣವು ಅವನ ಮರಣಾನಂತರ ಪಾರಾಗುತ್ತದೆ ಎಂಬ ಸುಳ್ಳನ್ನು ಆರಂಭಿಸಿದವನು ಅವನೇ. (ಹೋಲಿಸಿ ಯೆಹೆಜ್ಕೇಲ 18:4.) ಇಂದು ಅನೇಕ ಜನರು ಇದನ್ನು, ಸೈತಾನನ ಉದ್ದೇಶಕ್ಕೆ ಹೊಂದಿಕೆಯಾಗಿ ನಂಬುತ್ತಾರೆ, ಏಕೆಂದರೆ ಇದು ಕ್ರೈಸ್ತತ್ವದ ಒಂದು ಮೂಲ ಬೋಧನೆಯಾದ ಪುನರುತ್ಥಾನದಲ್ಲಿ ನಂಬಿಕೆಯ ಆವಶ್ಯಕತೆಯನ್ನು ನಿರಾಕರಿಸುತ್ತದೆ. (ಯೋಹಾನ 5:28, 29) ಹೀಗೆ, ಮೃತರನ್ನು ವಿಚಾರಿಸುವುದು ಅಥವಾ ಅವರಿಂದ ಸಂದೇಶಗಳನ್ನು ಪಡೆದುಕೊಳ್ಳುವಂತೆ ತೋರುವುದು, ದೇವರಿಂದ ಮೆಚ್ಚಲ್ಪಡದೆ ಇರುವ ದೇವದೂತ ಚಟುವಟಿಕೆಯ ಮತ್ತೊಂದು ಭಾಗ.

ಸಮೀಪಿಸುವಿಕೆ ದೇವದೂತರಿಗೋ ದೆವ್ವಗಳಿಗೋ?

ಸದ್ಯದ ದೇವದೂತ ಚಟುವಟಿಕೆಯಲ್ಲಿ ಹೆಚ್ಚಿನವು ಪ್ರೇತ ವಿದ್ಯೆಯಲ್ಲಿ ಕೈಹಾಕುತ್ತವೆ. ಮಾರ್ಸ್ಯಳ ಅನುಭವವನ್ನು ಗಮನಿಸಿರಿ: “ಸೆಪ್ಟೆಂಬರದಿಂದ ಡಿಸೆಂಬರ್‌ 1986ರ ತನಕ ‘ಅಲೌಕಿಕ ಕ್ಷೇತ್ರದಿಂದ’ ನನಗೆ ಸಂದೇಶಗಳು ಬರತೊಡಗಿದವು,” ಎನ್ನುತ್ತಾಳೆ ಅವಳು. “ನನಗೆ ಪ್ರೇತಗಳು ತೋರಿಬರುತ್ತಿದ್ದವು ಮತ್ತು ‘ಗತ ಜೀವನ’ದ ಅಚ್ಚರಿಯ ಸ್ವಪ್ನಗಳು ಬೀಳುತ್ತಿದ್ದವು. ಮೃತರಾಗಿದ್ದ ಮಿತ್ರರ ಸಂಪರ್ಕವನ್ನು ನಾನು ಮಾಡಿದೆ ಮತ್ತು ಇತರ ಅನೇಕ ಭೌತಾತೀತ ಅನುಭವಗಳಲ್ಲಿ ನಾನು ಆವಾಗಲೇ ಸಂಧಿಸಿದ್ದ ಜನರ ಕುರಿತ ವಿಷಯಗಳು ನನಗೆ ತಿಳಿದುಬಂದವು. ಅರಿವಿಲ್ಲದೆ ಬರೆಯುವ ವರವೂ ನನಗೆ ಅನುಗ್ರಹಿಸಲ್ಪಟ್ಟಿತು ಮತ್ತು ನಾನು ಅಶರೀರಿಗಳಿಂದ ಬಂದ ಸಂದೇಶಗಳನ್ನು ರವಾನಿಸಿದೆ. ಅವರ ಭೂಜೀವಿತದಲ್ಲಿ ನಾನೆಂದೂ ಸಂಧಿಸದೆ ಇದ್ದ ಕೆಲವರು ನನ್ನ ಮುಖಾಂತರ ಬೇರೆಯವರಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದರು.”

ದೇವದೂತರೊಂದಿಗೆ “ಸಂಪರ್ಕ” ಮಾಡಲು ಕಣಿಹೇಳುವಿಕೆಯನ್ನು ಸಾಧನವಾಗಿ ಬಳಸುವುದೇನೂ ಅಸಾಮಾನ್ಯವಲ್ಲ. ಒಂದು ಮೂಲವು ಅದರ ವಾಚಕರನ್ನು, ಮಾಂತ್ರಿಕ ಕಲ್ಲುಗಳು, ಇಸ್ಪೀಟ್‌ ಎಲೆಗಳು, ಈ ಜಿಂಗ್‌ ನಾಣ್ಯಗಳು, ಹಸ್ತಸಾಮುದ್ರಿಕ, ಜ್ಯೋತಿಶ್ಶಾಸ್ತ್ರವನ್ನು ಪ್ರಯೋಗಿಸುವಂತೆ ನೇರವಾಗಿ ಪ್ರೋತ್ಸಾಹಿಸುತ್ತದೆ. ಅದರ ಕರ್ತೃಗಳು ಬರೆಯುವುದು: “ನಿಮ್ಮ ಆಂತರ್ಯದಾಳವು ನಿಮ್ಮನ್ನು ಯೋಗ್ಯ ದಿವ್ಯೂಕ್ತಿಗೆ ನಡಿಸುವಂತೆ ಬಿಡಿರಿ, ಮತ್ತು ದೇವದೂತನೊಬ್ಬನು ಅಲ್ಲಿ ನಿಮ್ಮನ್ನು ಸಂಧಿಸುವನೆಂಬ ಭರವಸೆಯಿರಲಿ.”

ಆದರೆ ಬೈಬಲಿಗನುಸಾರ, ‘ಅಲ್ಲಿ ನಿಮ್ಮನ್ನು ಸಂಧಿಸುವ’ ಯಾವನಾದರೂ, ಖಂಡಿತವಾಗಿಯೂ ದೇವರ ದೂತರಲ್ಲಿ ಒಬ್ಬನು ಅಲ್ಲ. ಯಾಕೆ? ಯಾಕೆಂದರೆ ಕಣಿಹೇಳುವಿಕೆಯು ದೇವರಿಗೆ ತೀರ ವಿರೋಧವಾಗಿದೆ, ಮತ್ತು ಸತ್ಯಾರಾಧಕರಿಗೆ—ಭೂಪರಲೋಕಗಳಲ್ಲಿ—ಅದರೊಂದಿಗೆ ಯಾವ ಸಂಬಂಧವೂ ಇಲ್ಲ. ಅಷ್ಟೇಕೆ, ಇಸ್ರಾಯೇಲಿನಲ್ಲಿ ಕಣಿಹೇಳುವಿಕೆಯು ವಧಾರ್ಹವಾದ ಅಪರಾಧವಾಗಿತ್ತು! “ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ,” ಎಂದು ಧರ್ಮಶಾಸ್ತ್ರವು ಹೇಳುತ್ತದೆ.—ಧರ್ಮೋಪದೇಶಕಾಂಡ 13:1-5; 18:10-12.

“ಪ್ರಕಾಶರೂಪವುಳ್ಳ ದೇವದೂತ”

ಕಣಿಹೇಳುವಿಕೆಯನ್ನು ಉಪಯುಕ್ತವಾಗಿ ಕಾಣುವಂತೆ, ದೇವದೂತರಿಗೆ ಅದು ಸಂಬಂಧಿಸಿದುದಾಗಿಯೂ ಕಾಣುವಂತೆ ಪಿಶಾಚನು ಮಾಡಬಲ್ಲನೆಂಬುದು ನಮ್ಮನ್ನು ಆಶ್ಚರ್ಯಪಡಿಸಬಾರದು. ಸೈತಾನನು “ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳು”ತ್ತಾನೆಂದು ಬೈಬಲು ಹೇಳುತ್ತದೆ. (2 ಕೊರಿಂಥ 11:14) ಅವನು ಖೋಟಾ ಕಣಿಗಳನ್ನು ತಯಾರಿಸಿ ಅನಂತರ, ಅವು ಸತ್ಯವಾಗುವಂತೆಯೂ ಮಾಡಿ, ಹೀಗೆ ಆ ಸೂಚಕಕಾರ್ಯವು ದೇವರಿಂದ ಬಂದದ್ದೆಂದು ನೆನಸುವಂತೆ ಪ್ರೇಕ್ಷಕರನ್ನು ಮೋಸಗೊಳಿಸಬಲ್ಲನು. (ಹೋಲಿಸಿ ಮತ್ತಾಯ 7:21-23; 2 ಥೆಸಲೊನೀಕ 2:9-12.) ಆದರೆ ಸೈತಾನನ ಸಕಲ ಕಾರ್ಯಗಳು—ಅವೆಷ್ಟು ಸುಶೀಲವಾಗಿ ಇಲ್ಲವೇ ಕುಟಿಲವಾಗಿ ತೋರಿಬರಲಿ—ಎರಡು ಹೇತುಗಳಲ್ಲಿ ಒಂದನ್ನು ಪೂರೈಸುತ್ತವೆ: ಜನರನ್ನು ಯೆಹೋವನ ವಿರುದ್ಧವಾಗಿ ತಿರುಗಿಸುವುದು ಅಥವಾ ಜನರ ಮನಸ್ಸುಗಳನ್ನು ‘ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶಕ್ಕೆ’ ಬರೇ ಕುರುಡುಗೊಳಿಸುವುದು. (2 ಕೊರಿಂಥ 4:3, 4) ಈ ಎರಡನೆಯ ಮೋಸಗಾರಿಕೆಯ ವಿಧಾನವು ಅನೇಕ ಸಾರಿ ಅತ್ಯಂತ ಪರಿಣಾಮಕಾರಿಯಾಗಿದೆ.

ಒಂದನೆಯ ಶತಮಾನದಲ್ಲಿ ಒಬ್ಬ ದಾಸಿಯ ಕುರಿತ ಬೈಬಲ್‌ ವೃತ್ತಾಂತವನ್ನು ಗಮನಿಸಿರಿ. ಅವಳ ಕಾಲಜ್ಞಾನಗಳು ಅವಳ ಯಜಮಾನರಿಗೆ ಬಹು ಆದಾಯವನ್ನು ತಂದವು. ಅನೇಕ ದಿನಗಳ ವರೆಗೆ ಅವಳು ಶಿಷ್ಯರನ್ನು ಹಿಂಬಾಲಿಸುತ್ತಾ, “ಈ ಮನುಷ್ಯರು ಪರಾತ್ಪರನಾದ ದೇವರ ದಾಸರು; ನಿಮಗೆ ರಕ್ಷಣೆಯ ಮಾರ್ಗವನ್ನು ಸಾರುತ್ತಾರೆ,” ಎಂದು ಹೇಳಿದಳು. ಅವಳ ಮಾತುಗಳು ಸತ್ಯವಾಗಿದ್ದವು. ಆದರೂ, ಅವಳನ್ನು ದೇವದೂತನಲ್ಲ, ‘ಕಣಿಹೇಳುವ ದೆವ್ವವು’ ಹಿಡಿದಿತ್ತೆಂದು ವೃತ್ತಾಂತವು ನಮಗೆ ತಿಳಿಸುತ್ತದೆ. ಕೊನೆಗೆ ಪೌಲನು, “ಹಿಂತಿರುಗಿ ಆ ದೆವ್ವಕ್ಕೆ—ಅವಳನ್ನು ಬಿಟ್ಟುಹೋಗು ಎಂದು ಯೇಸು ಕ್ರಿಸ್ತನ ಹೆಸರಿನಲ್ಲಿ ನಿನಗೆ ಅಪ್ಪಣೆಕೊಡುತ್ತೇನೆ ಎಂದು ಹೇಳಿದನು. ಅದೇ ಗಳಿಗೆಯಲ್ಲಿಯೇ ಅದು ಬಿಟ್ಟುಹೋಯಿತು.”—ಅ. ಕೃತ್ಯಗಳು 16:16-18.

ಪೌಲನು ಈ ಆತ್ಮವನ್ನು ಹೊರಗಟ್ಟಿದ್ದೇಕೆ? ಎಷ್ಟೆಂದರೂ, ಆ ದೆವ್ವ ಹಿಡಿದಿದ್ದ ಹುಡುಗಿಯ ಯಜಮಾನರಿಗೆ ಅದು ಬಹು ಆದಾಯವನ್ನು ಒದಗಿಸುತ್ತಿತ್ತಲ್ಲಾ. ಅಲೌಕಿಕ ಶಕಿಯ್ತಿಂದ ಕೂಡಿದ ಆ ದಾಸಿಯು ರೈತರಿಗೆ—ಯಾವಾಗ ಬಿತ್ತಬೇಕೆಂದೂ, ಕನ್ಯೆಯರಿಗೆ—ಯಾವಾಗ ಮದುವೆಯಾಗಬೇಕೆಂದೂ, ಮತ್ತು ಗಣಿಗಾರರಿಗೆ—ಚಿನ್ನಕ್ಕಾಗಿ ಎಲ್ಲಿ ಅಗೆಯಬೇಕೆಂದೂ ಹೇಳಿರಬಹುದು. ಅಷ್ಟೇಕೆ, ಶಿಷ್ಯರನ್ನು ಬಹಿರಂಗವಾಗಿ ಹೊಗಳುತ್ತಾ, ಕೆಲವು ಸತ್ಯ ಮಾತುಗಳನ್ನು ಹೇಳುವಂತೆಯೂ ಈ ಆತ್ಮವು ಆ ಹುಡುಗಿಯನ್ನು ಪ್ರೇರೇಪಿಸಿತು!

ಆದರೂ, ಅದು ‘ಕಣಿಹೇಳುವ ದೆವ್ವ’ವಾಗಿತ್ತು. ದೆವ್ವವಾಗಿದುದ್ದರಿಂದ, ಯೆಹೋವನ ಕುರಿತು ಮತ್ತು ರಕ್ಷಣೆಗಾಗಿ ಆತನ ಒದಗಿಸುವಿಕೆಯ ಕುರಿತು ಅಂತಹ ಘೋಷಣೆಗಳನ್ನು ಮಾಡುವ ಯಾವ ಹಕ್ಕೂ ಅದಕ್ಕಿರಲಿಲ್ಲ. ದಾಸಿಯ ಕಾಲಜ್ಞಾನಗಳಿಗೆ ಪ್ರಾಯಶಃ ವಿಶ್ವಾಸಯೋಗ್ಯತೆಯನ್ನು ಕೊಡಲು ನುಡಿಯಲ್ಪಟ್ಟ ಆ ಹೊಗಳಿಕೆಯ ಮಾತುಗಳು, ಕ್ರಿಸ್ತನ ನಿಜ ಹಿಂಬಾಲಕರಿಂದ ಪ್ರೇಕ್ಷಕರನ್ನು ಅಪಕರ್ಷಿಸಿದವು. ಸಕಾರಣದಿಂದಲೇ ಪೌಲನು ಕೊರಿಂಥದವರನ್ನು ಎಚ್ಚರಿಸಿದ್ದು: “ನೀವು ಕರ್ತನ [“ಯೆಹೋವನ,” NW] ಪಂಕ್ತಿ ಮತ್ತು ದೆವ್ವಗಳ ಪಂಕ್ತಿ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಊಟಮಾಡಲಾರಿರಿ.” (1 ಕೊರಿಂಥ 10:21) ಕಣಿಹೇಳುವುದರಲ್ಲಿ ಒಳಗೂಡಿದ್ದ ಪುಸ್ತಕಗಳೆಲವ್ಲನ್ನು ಒಂದನೆಯ ಶತಕದ ಕ್ರೈಸ್ತರು ನಾಶಮಾಡಿಬಿಟ್ಟದ್ದರಲ್ಲಿ ಆಶ್ಚರ್ಯವೇನಿಲ್ಲ.—ಅ. ಕೃತ್ಯಗಳು 19:19.

‘ಆಕಾಶಮಧ್ಯದಲ್ಲಿ ಹಾರಿಹೋಗುವ ದೇವದೂತ’

ನಾವು ನೋಡಿದಂತೆ, ಬೈಬಲು, ಸದ್ಯದ ದೇವದೂತ ಚಟುವಟಿಕೆಯಲ್ಲಿ ಹೆಚ್ಚನ್ನು ದೇವರ ವಿರೋಧಿ ಪಿಶಾಚ ಸೈತಾನನೊಂದಿಗೆ ಒತ್ತಾಗಿ ಜತೆಗೂಡಿದುದಾಗಿ ಬಯಲುಪಡಿಸುತ್ತದೆ. ಪರಿಶುದ್ಧ ದೂತರು ಮಾನವರ ಕಾರ್ಯಾದಿಗಳಲ್ಲಿ ಒಳಗೂಡಿರುವುದಿಲ್ಲವೆಂದು ಇದರ ಅರ್ಥವೋ? ಅದಕ್ಕೆ ಪ್ರತಿಯಾಗಿ, ಅವರು ಈಗ ಭೂಮಿಯಲ್ಲಿ ಒಂದು ಪ್ರಬಲವಾದ ಕಾರ್ಯವನ್ನು ನಡಸುತ್ತಿದ್ದಾರೆ. ಅದು ಯಾವುದು? ಉತ್ತರಕ್ಕಾಗಿ ನಾವು ಬೈಬಲಿನ ಪ್ರಕಟನೆ ಪುಸ್ತಕಕ್ಕೆ ತೆರಳಬೇಕಾಗಿದೆ. ಬೈಬಲಿನ ಬೇರೆ ಯಾವುದೇ ಪುಸ್ತಕಗಳಿಗಿಂತ ಈ ಪುಸ್ತಕದಲ್ಲಿ ದೇವದೂತರು ಹೆಚ್ಚು ಸಲ ತಿಳಿಸಲ್ಪಟ್ಟಿದ್ದಾರೆ.

ಪ್ರಕಟನೆ 14:6, 7ರಲ್ಲಿ, ಅಪೊಸ್ತಲ ಯೋಹಾನನು ಪಡೆದ ಒಂದು ಪ್ರವಾದನಾ ದರ್ಶನದ ದಾಖಲೆಯನ್ನು ನಾವು ಓದುತ್ತೇವೆ: “ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಿಹೋಗುವದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು. ಅವನು—ನೀವೆಲ್ಲರು ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ. ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನಿಗೆ ನಮಸ್ಕಾರಮಾಡಿರಿ ಎಂದು ಮಹಾ ಶಬ್ದದಿಂದ ಹೇಳಿದನು.”

ಈ ವಚನವು ಇಂದು ದೇವದೂತರು ಮಾಡುವ ಪ್ರಧಾನ ಕಾರ್ಯವನ್ನು ಎತ್ತಿಹೇಳುತ್ತದೆ. ಅವರು ಒಂದು ಮಹಾ ಆದ್ಯತೆಯ ನೇಮಕದಲ್ಲಿ—ದೇವರ ರಾಜ್ಯದ ಸುವಾರ್ತೆಯನ್ನು ಘೋಷಿಸುವ ಕೆಲಸದಲ್ಲಿ ಒಳಗೂಡಿರುತ್ತಾರೆ. ಯೇಸು ತನ್ನ ಹಿಂಬಾಲಕರಿಗೆ, “ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ,” ಎಂದು ವಾಗ್ದಾನಿಸಿದ್ದು ಈ ಕಾರ್ಯದ ಸಂಬಂಧದಲ್ಲಿಯೇ. (ಮತ್ತಾಯ 28:18-20) ಯೇಸು ತನ್ನ ಹಿಂಬಾಲಕರ ಸಂಗಡ ಇರುವುದು ಹೇಗೆ? ಒಂದು ವಿಧಾನವು, ಈ ಗುರುತರವಾದ ಕಾರ್ಯವನ್ನು ಪೂರೈಸಲಾಗುವಂತೆ ದೇವದೂತರ ಸಹಾಯವನ್ನು ಅವರಿಗೆ ಒದಗಿಸುವ ಮೂಲಕವೇ.

ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಯೆಹೋವನ ಸಾಕ್ಷಿಗಳು ವಾರ್ಷಿಕವಾಗಿ 100 ಕೋಟಿ ತಾಸುಗಳಿಗಿಂತಲೂ ಹೆಚ್ಚನ್ನು ವ್ಯಯಿಸುತ್ತಾರೆ. ಈ ಕಾರ್ಯವನ್ನು ನಡಿಸುವಾಗ, ದೇವದೂತರ ಮಾರ್ಗದರ್ಶನದ ಪುರಾವೆಯನ್ನು ಅವರು ಕಾಣುತ್ತಾರೆ. ದೇವರ ಉದ್ದೇಶಗಳನ್ನು ತಿಳಿದುಕೊಳ್ಳುವಂತೆ ನೆರವಾಗಲು ಆವಾಗಲೇ ಪ್ರಾರ್ಥಿಸಿದ್ದ ಜನರನ್ನು ಅನೇಕ ಸಾರಿ ಅವರು ತಮ್ಮ ಮನೆಮನೆಯ ಶುಶ್ರೂಷೆಯಲ್ಲಿ ಸಂಪರ್ಕಿಸಿರುವುದು ಸಂಭವಿಸಿದೆ. ದೇವದೂತರ ಮಾರ್ಗದರ್ಶನದ ಜೊತೆಯಲ್ಲಿ, ಸಾಕ್ಷಿಗಳ ಸ್ವಂತ ಆರಂಭದ ಹೆಜ್ಜೆಯು, ಪ್ರತಿ ವರ್ಷ ಸಾವಿರಾರು ಜನರು ಯೆಹೋವನ ಜ್ಞಾನಕ್ಕೆ ಬರುವುದರಲ್ಲಿ ಪರಿಣಮಿಸಿದೆ!

ಆಕಾಶಮಧ್ಯದಲ್ಲಿ ಹಾರಿಹೋಗುತ್ತಿರುವ ದೇವದೂತನಿಗೆ ನೀವು ಕಿವಿಗೊಡುತ್ತಿದ್ದೀರೋ? ಯೆಹೋವನ ಸಾಕ್ಷಿಗಳು ಭೇಟಿಯಾಗುವಾಗ, ಈ ದೇವದೂತ ಸಂಬಂಧಿತ ಸಂದೇಶವನ್ನು ಅವರೊಂದಿಗೆ ಇನ್ನೂ ಹೆಚ್ಚು ಪೂರ್ಣವಾಗಿ ಏಕೆ ಚರ್ಚಿಸಬಾರದು?

[ಅಧ್ಯಯನ ಪ್ರಶ್ನೆಗಳು]

a  “ಸೈತಾನ” ಮತ್ತು “ಪಿಶಾಚ” ಎಂಬ ಪದಗಳ ಅರ್ಥ “ಪ್ರತಿಭಟಕ” ಮತ್ತು “ಮಿಥ್ಯಾಪವಾದಿ.”

b  ಮೀಕಾಯೇಲ ಮತ್ತು ಗಬ್ರಿಯೇಲರು ಬೈಬಲಿನಲ್ಲಿ ತಿಳಿಸಲ್ಪಟ್ಟಿದ್ದಾರಾದರೂ, ರಫಾಯೇಲ ಮತ್ತು ಯುರೀಯೇಲ ಎಂಬ ಹೆಸರುಗಳು ಬೈಬಲ್‌ ಕ್ಯಾನನ್‌ನ ಭಾಗವಾಗಿರದ ಸಂಶಯ ಪ್ರಮಾಣ ಗ್ರಂಥಗಳಲ್ಲಿ ತೋರಿಬರುತ್ತವೆ.

c  ಪ್ರಾರ್ಥನೆಯು ಯೇಸುವಿಗೆ ಅಲ್ಲ, ಆತನ ಮೂಲಕವಾಗಿ ಮಾಡಲ್ಪಡುತ್ತದೆ ಎಂಬುದನ್ನು ಗಮನಿಸಿರಿ. ಯೇಸುವಿನ ಹೆಸರಿನಲ್ಲಿ ಪ್ರಾರ್ಥನೆ ಮಾಡಲ್ಪಡುತ್ತದೆ ಯಾಕಂದರೆ ಆತನ ಸುರಿಸಲ್ಪಟ್ಟ ರಕ್ತವು ದೇವರನ್ನು ಸಮೀಪಿಸುವ ದಾರಿಯನ್ನು ತೆರೆಯಿತು.—ಎಫೆಸ 2:13-19; 3:12.

[ಪುಟ 8 ರಲ್ಲಿರುವ ಚೌಕ]

ದೇವದೂತರು ಯಾರು?

ಅನೇಕರು ಏನು ನಂಬುತ್ತಾರೋ ಅದಕ್ಕೆ ಪ್ರತಿಕೂಲವಾಗಿ, ದೇವದೂತರು, ಮೃತರಾಗಿರುವ ಮನುಷ್ಯರ ಅಗಲಿಹೋದ ಪ್ರಾಣಗಳಲ್ಲ. “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂದು ಬೈಬಲು ಸ್ಪಷ್ಟವಾಗಿಗಿ ತಿಳಿಸುತ್ತದೆ. (ಪ್ರಸಂಗಿ 9:5) ಹಾಗಾದರೆ ದೇವದೂತರು ಬಂದದ್ದು ಎಲ್ಲಿಂದ? ಭೂಮಿಯ ಉತ್ಪತ್ತಿಗೆ ಮುಂಚಿತವಾಗಿ ಅವರು ವೈಯಕ್ತಿಕವಾಗಿ ದೇವರಿಂದ ನಿರ್ಮಿಸಲ್ಪಟ್ಟರೆಂಬುದಾಗಿ ಬೈಬಲು ಹೇಳುತ್ತದೆ. (ಯೋಬ 38:4-7) ದೇವರ ಸ್ವರ್ಗೀಯ ಕುಟುಂಬದ ಗಾತ್ರವು ನೂರಾರು ಲಕ್ಷ, ಪ್ರಾಯಶಃ ಕೋಟ್ಯಂತರ ಅಥವಾ ಅದಕ್ಕಿಂತ ಹೆಚ್ಚು ದೇವದೂತರನ್ನು ಒಳಗೊಂಡಿದ್ದೀತು! ಕೆಲವು ದೇವದೂತರು ಸೈತಾನನೊಂದಿಗೆ ಅವನ ದಂಗೆಯಲ್ಲಿ ಜೊತೆಸೇರಿದರು.—ದಾನಿಯೇಲ 7:10; ಪ್ರಕಟನೆ 5:11; 12:7-9.

ಯೆಹೋವನು ಸುವ್ಯವಸ್ಥೆಯ ದೇವರಾಗಿರುವುದರಿಂದ, ಆತನ ಮಹಾ ದೇವದೂತ ಕುಟುಂಬವು ಸಹ ಸುಸಂಘಟಿತವಾಗಿರುವುದರಲ್ಲಿ ಆಶ್ಚರ್ಯವಿಲ್ಲ.—1 ಕೊರಿಂಥ 14:33.

• ಶಕ್ತಿ ಮತ್ತು ಅಧಿಕಾರ ಇವೆರಡರಲ್ಲಿಯೂ ಅಗ್ರಗಣ್ಯನಾದ ದೇವದೂತನು ಪ್ರಧಾನದೂತನಾದ ಯೇಸು ಕ್ರಿಸ್ತನು, ಇವನು ಮೀಕಾಯೇಲನೆಂದೂ ಕರೆಯಲ್ಪಡುತ್ತಾನೆ. (1 ಥೆಸಲೊನೀಕ 4:16; ಯೂದ 9) ಆತನ ಅಧಿಕಾರದ ಕೆಳಗೆ ಸೆರಾಫಿಯರು, ಕೆರೂಬಿಯರು, ಮತ್ತು ದೇವದೂತರು ಇದ್ದಾರೆ.

• ಸೆರಾಫಿಯರು ದೇವರ ಸಿಂಹಾಸನದ ಮುಂದೆ ಸೇವೆ ನಡಿಸುತ್ತಾರೆ. ದೇವರ ಪರಿಶುದ್ಧತೆಯನ್ನು ಪ್ರಸಿದ್ಧಪಡಿಸುವುದು ಮತ್ತು ಆತನ ಜನರನ್ನು ಶುದ್ಧವಾಗಿಡುವುದು ಅವರ ನೇಮಕದಲ್ಲಿ ಒಡಗೂಡಿದೆಯೆಂಬುದು ವ್ಯಕ್ತ.—ಯೆಶಾಯ 6:1-3, 6, 7.

• ಕೆರೂಬಿಯರು ಸಹ ಯೆಹೋವನ ಸನ್ನಿಧಿಯಲ್ಲಿ ಕಂಡುಬರುತ್ತಾರೆ. ದೇವರ ಸಿಂಹಾಸನದ ವಾಹಕರು ಅಥವಾ ಬೆಂಗಾವಲಿಗರೋಪಾದಿ ಅವರು ಯೆಹೋವನ ಘನತೆಯನ್ನು ಎತ್ತಿಹಿಡಿಯುತ್ತಾರೆ.—ಕೀರ್ತನೆ 80:1; 99:1; ಯೆಹೆಜ್ಕೇಲ 10:1, 2.

• ದೇವದೂತರು (“ಸಂದೇಶವಾಹಕರು,” ಎಂದರ್ಥ) ಯೆಹೋವನ ಕಾರ್ಯಭಾರಿಗಳು ಅಥವಾ ನಿಯೋಗಿಗಳಾಗಿದ್ದಾರೆ. ಅವರು ದೈವಿಕ ಚಿತ್ತವನ್ನು, ಅದು ದೇವಜನರ ಬಿಡುಗಡೆಯನ್ನು ಇಲ್ಲವೇ ದುಷ್ಟರ ನಾಶನವನ್ನು ಒಳಗೂಡಲಿ, ಅದನ್ನು ನಿರ್ವಹಿಸುತ್ತಾರೆ.—ಆದಿಕಾಂಡ 19:1-26.

[ಪುಟ 7 ರಲ್ಲಿರುವ ಚಿತ್ರಗಳು]

ಆಕಾಶಮಧ್ಯದಲ್ಲಿ ಹಾರಿಹೋಗುತ್ತಿರುವ ದೇವದೂತನಿಗೆ ನೀವು ಕಿವಿಗೊಡುತ್ತಿದ್ದೀರೋ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ