ರಾಜ್ಯ ಘೋಷಕರು ವರದಿ ಮಾಡುತ್ತಾರೆ
“ಸೌವಾರ್ತಿಕನ ಕೆಲಸವನ್ನು ಮಾಡು”
ಸೌವಾರ್ತಿಕನಾಗಿರುವುದು ಎಂಬುದರ ಅರ್ಥವೇನು? ಈ ಪದವು, ಗ್ರೀಕ್ ಶಬ್ದವಾದ ಯುಆಗಿಲಿಸ್ಟಿಸ್ನ ಭಾಷಾಂತರವಾಗಿರುತ್ತದೆ, ಇದು “ಸುವಾರ್ತೆ” ಎಂಬ ಅರ್ಥವಿರುವ ಯುಆಗೇಲಿಯನ್ ಪದಕ್ಕೆ ಒತ್ತಾಗಿ ಸಂಬಂಧಿಸಿದೆ. ಆದುದರಿಂದ, ಒಬ್ಬ ಸೌವಾರ್ತಿಕನು ಸುವಾರ್ತೆ ಸಾರುವವನು ಅಥವಾ ಸಂದೇಶವಾಹಕನಾಗಿದ್ದಾನೆ.
ಸತ್ಕ್ರೈಸ್ತರೆಲ್ಲರು ಸೌವಾರ್ತಿಕರು, ಯಾಕೆಂದರೆ ಅವರು ದೇವರ ರಾಜ್ಯದ ಕುರಿತಾದ ಸುವಾರ್ತೆಯನ್ನು ಸಾರುತ್ತಾರೆ. ಸೂಕ್ತವಾಗಿಯೇ, ಅಪೊಸ್ತಲ ಪೌಲನು ತಿಮೊಥೆಯನಿಗೆ “ಸೌವಾರ್ತಿಕನ ಕೆಲಸವನ್ನು ಮಾಡು,” ಎಂದು ಪ್ರಬೋಧಿಸಿದನು. ಈ ಕೆಲಸವನ್ನು ತಿಮೊಥೆಯನು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ‘ಎಲ್ಲಾ ವಿಷಯಗಳಲ್ಲಿ ಸ್ವಸ್ಥಚಿತ್ತನಾಗಿರು’ವಂತೆ ಮತ್ತು ‘ತನ್ನ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸು’ವಂತೆ ಪೌಲನು ಅವನನ್ನು ಪ್ರೋತ್ಸಾಹಿಸಿದನು.—2 ತಿಮೊಥೆಯ 4:5.
ಸೌವಾರ್ತಿಕರೋಪಾದಿ ನಾವು ಸಹ ನಮ್ಮ ಶುಶ್ರೂಷೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಮತ್ತು ‘ಸ್ವಸ್ಥಚಿತ್ತರಾಗಿ’ ಇರುತ್ತೇವೆ, ಅಥವಾ ಪ್ರತಿಯೊಂದು ಸಂದರ್ಭದಲ್ಲಿ ಸುವಾರ್ತೆಯನ್ನು ಹಂಚಲು ಎಚ್ಚರದಿಂದಿರುತ್ತೇವೆ. ಹೀಗೆ ಅನೇಕರು ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಯೆಹೋವನ ಸಾಕ್ಷಿಗಳಿಂದ ಸಂಪರ್ಕಿಸಲ್ಪಟ್ಟ ಬಳಿಕ, ಯೆಹೋವನನ್ನೂ ಆತನ ವಾಗ್ದಾನಗಳನ್ನೂ ತಿಳಿದವರಾಗಿದ್ದಾರೆ. ಬಾರ್ಬೇಡಸ್ನ ಒಬ್ಬ ಮನುಷ್ಯನಾದ ಸೀಮೋರ್ಗೆ ಸಂಭವಿಸಿದ್ದು ಇದೇ ಆಗಿತ್ತು.
ಸೀಮೋರ್ ಒಂದು ಸಾರ್ವಜನಿಕ ಶಾಲೆಯ ಉಪಾಧ್ಯಾಯನಾಗಿದ್ದನು. ಅದೇ ಶಾಲೆಯಲ್ಲಿನ ಒಬ್ಬ ಅಂಶಕಾಲಿಕ ಅಧ್ಯಾಪಕನೂ ಯೆಹೋವನ ಸಾಕ್ಷಿಯೂ ಆದ ಚಾರ್ಲ್ಸ್, ಒಬ್ಬ ಎಚ್ಚರವುಳ್ಳ ಸೌವಾರ್ತಿಕನಾಗಿದ್ದನು. ಅವನೊಬ್ಬ ಪೂರ್ಣ ಸಮಯದ ಶುಶ್ರೂಷಕ, ಅಥವಾ ಪಯನೀಯರನಾಗಿದ್ದನು, ಮತ್ತು ಸುವಾರ್ತೆಯನ್ನು ಇತರರಿಗೆ ಹಂಚುವುದಕ್ಕಾಗಿ ಪ್ರತಿಯೊಂದು ಅವಕಾಶವನ್ನು ಬಳಸಿದನು. ಸೀಮೋರ್ ರಾಜ್ಯ ಸಂದೇಶವನ್ನು ಪ್ರಪ್ರಥಮವಾಗಿ ಕೇಳಿದ್ದು ಚಾರ್ಲ್ಸ್ನ ಅನೌಪಚಾರಿಕ ಸಾಕ್ಷಿಕಾರ್ಯದ ಮೂಲಕವೇ.
ಬೇಗನೆ ಸೀಮೋರ್ ಕೂಡ ಬೈಬಲ್ ಸತ್ಯಗಳನ್ನು ಸಾಧ್ಯವಾದಷ್ಟು ಹೆಚ್ಚು ಜನರಿಗೆ ಹಂಚಲು ನಿಶ್ಚಯಿಸಿದನು. ಆದುದರಿಂದ ತನ್ನ ಕೆಲಸದ ಸ್ಥಳದಲ್ಲಿ, ವಿಶೇಷವಾಗಿ ತನ್ನ ವಿದ್ಯಾರ್ಥಿಗಳೊಂದಿಗೆ, ಅನೌಪಚಾರಿಕ ಸಂಭಾಷಣೆಗಳನ್ನು ಅವನು ಪ್ರಾರಂಭಿಸಿದನು. ಸಾರ್ವಜನಿಕ ಶಾಲೆಗಳಲ್ಲಿ ಧರ್ಮವನ್ನು ಕಲಿಸಬಾರದೆಂಬುದು ಕೆಲವು ದೇಶಗಳಲಿದ್ಲರ್ದೂ, ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಕಲಿಸಲು ಈ ಮನುಷ್ಯನು ನೇಮಿಸಲ್ಪಟ್ಟಿದ್ದನು. ಆದರೆ ಈಗ ಈ ವಿಷಯಗಳ ಮೇಲಿನ ಸೀಮೋರನ ವೀಕ್ಷಣಗಳು, ತನ್ನ ಹೊಸತಾಗಿ ಪಡೆದ ಬೈಬಲ್ ಜ್ಞಾನದಿಂದ ಭರ್ತಿಮಾಡಲ್ಪಟ್ಟಿದ್ದವು. ವಿರಾಮದ ಅವಧಿಗಳಲ್ಲಿ, ದೇವರ ನೂತನ ಲೋಕವೊಂದರ ವಾಗ್ದಾನ ಮತ್ತು ನಿತ್ಯ ಜೀವದ ಪ್ರತೀಕ್ಷೆಯ ಕುರಿತು ಅವನು ತನ್ನ ವಿದ್ಯಾರ್ಥಿಗಳೊಂದಿಗೆ ಮಾತನಾಡಿದನು.
ಮಕ್ಕಳು ಹೇಗೆ ಪ್ರತಿಕ್ರಿಯಿಸಿದರು? ಅನೇಕರು ಯೆಹೋವನ ರಾಜ್ಯದ ಸುವಾರ್ತೆಯಲ್ಲಿ ನಿಜಾಸಕ್ತಿಯನ್ನು ಪ್ರದರ್ಶಿಸಿದರು. ಸಕಾಲದಲ್ಲಿ, ಸೀಮೋರ್ ತನ್ನ ವಿದ್ಯಾರ್ಥಿಗಳಲ್ಲಿ 13 ಮಂದಿಯೊಂದಿಗೆ ಬೈಬಲ್ ಅಭ್ಯಾಸವನ್ನು ನಡಿಸಲಾರಂಭಿಸಿದನು. ಅವರ ಆಸಕ್ತಿಯು ಎಷ್ಟು ಹೆಚ್ಚಾಗಿತ್ತೆಂದರೆ, ಬೈಬಲನ್ನು ವಾರಕ್ಕೆರಡಾವರ್ತಿ ಅಭ್ಯಾಸ ಮಾಡುವಂತೆ ಅವರು ಏರ್ಪಡಿಸಿಕೊಂಡರು. ಕೊನೆಗೆ ಅವರಲ್ಲಿ ಹೆಚ್ಚಿನವರು ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ಕ್ರೈಸ್ತ ಕೂಟಗಳಿಗೆ ಉಪಸ್ಥಿತರಾಗತೊಡಗಿದರು. ಇಷ್ಟರ ವರೆಗೆ ಅವರಲ್ಲಿ ಒಂಬತ್ತು ಮಂದಿ ಯೆಹೋವನ ಸಮರ್ಪಿತ ಮತ್ತು ಸ್ನಾತ ಸಾಕ್ಷಿಗಳಾಗಿದ್ದಾರೆ. ಸೀಮೋರನಾದರೋ ಈಗ ಒಬ್ಬ ಕ್ರಮದ ಪಯನೀಯರನೋಪಾದಿ ಮತ್ತು ಬಾರ್ಬೇಡಸ್ನ ಯೆಹೋವನ ಸಾಕ್ಷಿಗಳ ಸಭೆಗಳಲ್ಲೊಂದರಲ್ಲಿ ಒಬ್ಬ ಹಿರಿಯನಾಗಿ ಸೇವೆ ಮಾಡುತ್ತಾ, ತನ್ನ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸುತ್ತಾನೆ.
ಯೆಹೋವನ ಸಾಕ್ಷಿಗಳು ಹೇಗೆ ಲೋಕಾದ್ಯಂತ ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಭಾಗವಹಿಸುವ ಮೂಲಕ, ಆಂಶಿಕವಾಗಿ ‘ಸೌವಾರ್ತಿಕರ ಕೆಲಸವನ್ನು ಮಾಡುತ್ತಾರೆ’ ಎಂಬುದರ ಕೇವಲ ಒಂದು ಉದಾಹರಣೆಯು ಇದಾಗಿದೆ. ಕೊಲೊಸ್ಸೆ 4:5, 6ರಲ್ಲಿ ಕಂಡುಬರುವ ಬೈಬಲಿನ ಬುದ್ಧಿವಾದವನ್ನು ಅವರು ಪಾಲಿಸುತ್ತಾರೆ, ಅದು ಅನ್ನುವುದು: “ಸಮಯವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿ ಹೊರಗಿನವರ ಮುಂದೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ. ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.”