ಬಿಟ್ಟುಕೊಡಬೇಡಿರಿ!
“ಉತ್ತಮವಾದುದನ್ನು ಮಾಡುವುದರಲ್ಲಿ ನಾವು ಬಿಟ್ಟುಕೊಡದೆ ಇರೋಣ, ಯಾಕೆಂದರೆ ನಾವು ದಣಿದು ಹೋಗದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.”—ಗಲಾತ್ಯ 6:9, NW.
1, 2. (ಎ) ಒಂದು ಸಿಂಹವು ಯಾವ ವಿಧಗಳಲ್ಲಿ ಬೇಟೆಯಾಡುತ್ತದೆ? (ಬಿ) ಯಾರನ್ನು ಬೇಟೆಯಾಗಿ ಹಿಡಿಯುವುದರಲ್ಲಿ ಪಿಶಾಚನು ವಿಶೇಷವಾಗಿ ಆಸಕ್ತನಾಗಿದ್ದಾನೆ?
ಒಂದು ಸಿಂಹವು ವಿವಿಧ ರೀತಿಗಳಲ್ಲಿ ಬೇಟೆಯಾಡುತ್ತದೆ. ಕೆಲವು ಸಾರಿ ಅದು ತನ್ನ ಆಹಾರ ಪ್ರಾಣಿಯ ಮೇಲೆ ನೀರುಗಂಡಿಗಳಲ್ಲಿ ಅಥವಾ ಬಳಸಿ ಹಳತಾದ ಹಾದಿಗಳಲ್ಲಿ ಹೊಂಚುಹಾಕಿಕೊಂಡಿರುತ್ತದೆ. ಆದರೆ ಕೆಲವೊಮ್ಮೆ, ಸಿಂಹವೊಂದು “ಕೇವಲ ಒಂದು ಸನ್ನಿವೇಶದ ಸದುಪಯೋಗವನ್ನು ಮಾಡುತ್ತದೆ—ದೃಷ್ಟಾಂತಕ್ಕೆ, ಮಲಗಿರುವ ಒಂದು ಪಟ್ಟೆಕುದುರೆಯ ಮರಿಯ ಮೇಲೆ ಎರಗುತ್ತದೆ,” ಎಂದು ಅರಣ್ಯದಲ್ಲಿ ಭಾವಚಿತ್ರಗಳು (ಇಂಗ್ಲಿಷ್) ಎಂಬ ಪುಸ್ತಕವು ಹೇಳುತ್ತದೆ.
2 ನಮ್ಮ “ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ,” ಎಂದು ಅಪೊಸ್ತಲ ಪೇತ್ರನು ವಿವರಿಸುತ್ತಾನೆ. (1 ಪೇತ್ರ 5:8) ತನಗೆ ಉಳಿದಿರುವ ಸಮಯವು ಕೊಂಚವೆಂದು ತಿಳಿದವನಾಗಿ ಸೈತಾನನು, ಮಾನವರನ್ನು ಯೆಹೋವನನ್ನು ಸೇವಿಸುವುದರಿಂದ ತಡೆಯಲು ಎಂದಿಗಿಂತಲೂ ಅಧಿಕ ಒತ್ತಡವನ್ನು ಅವರ ಮೇಲೆ ಹಾಕುತ್ತಿದ್ದಾನೆ. ಆದರೂ, ಈ “ಗರ್ಜಿಸುವ ಸಿಂಹ”ವಾದಾತನು ಯೆಹೋವನ ಸೇವಕರನ್ನು ಬೇಟೆಯಾಗಿ ಹಿಡಿಯುವುದರಲ್ಲಿ ವಿಶೇಷವಾಗಿ ಆಸಕ್ತನಾಗಿದ್ದಾನೆ. (ಪ್ರಕಟನೆ 12:12, 17) ಅವನ ಬೇಟೆಯಾಡುವ ವಿಧಾನಗಳು, ಪ್ರಾಣಿ ಪ್ರಪಂಚದಲ್ಲಿ ಅವನಿಗೆ ಅನುರೂಪವಾಗಿರುವ ಸಿಂಹಕ್ಕೆ ಸಮಾನವಾಗಿವೆ. ಅದು ಹೇಗೆ?
3, 4. (ಎ) ಯೆಹೋವನ ಸೇವಕರನ್ನು ಬೇಟೆಯಾಗಿ ಹಿಡಿಯಲು ಸೈತಾನನು ಯಾವ ವಿಧಾನಗಳನ್ನು ಬಳಸುತ್ತಾನೆ? (ಬಿ) ಇವು “ವ್ಯವಹರಿಸಲು ಕಠಿನವಾದ ಕಾಲಗ”ಳಾಗಿರುವುದರಿಂದ, ಯಾವ ಪ್ರಶ್ನೆಗಳು ಎಬ್ಬಿಸಲ್ಪಟ್ಟಿವೆ?
3 ಯೆಹೋವನ ಸೇವೆಯನ್ನು ನಾವು ನಿಲ್ಲಿಸುವಂತೆ ನಮ್ಮ ಸಮಗ್ರತೆಯನ್ನು ಮುರಿಯುವ ಹೇತುವಿನಿಂದ ಕೆಲವೊಮ್ಮೆ ಸೈತಾನನು ಒಂದು ಹೊಂಚನ್ನು—ಹಿಂಸೆ ಅಥವಾ ವಿರೋಧವನ್ನು—ಪ್ರಯತ್ನಿಸುತ್ತಾನೆ. (2 ತಿಮೊಥೆಯ 3:12) ಆದರೆ ಬೇರೆ ಸಮಯಗಳಲ್ಲಿ, ಸಿಂಹದಂತೆ, ಸೈತಾನನು ಕೇವಲ ಸನ್ನಿವೇಶವೊಂದರ ಸದುಪಯೋಗವನ್ನು ಮಾಡುತ್ತಾನೆ. ನಾವು ನಿರುತ್ಸಾಹಗೊಳ್ಳುವ ತನಕ ಅಥವಾ ಬಳಲಿಹೋಗುವ ತನಕ ಅವನು ಕಾಯುತ್ತಾನೆ, ಮತ್ತು ಬಳಿಕ ನಾವು ಬಿಟ್ಟುಕೊಡುವಂತೆ ಮಾಡಲು ನಮ್ಮ ಕುಗ್ಗಿದ ಭಾವಾತ್ಮಕ ಸ್ಥಿತಿಯನ್ನು ಸಾನ್ವುಕೂಲಕ್ಕಾಗಿ ತಿರುಗಿಸಲು ಪ್ರಯತ್ನಿಸುತ್ತಾನೆ. ನಾವು ಅವನಿಗೆ ಸುಲಭವಾಗಿ ತುತ್ತಾಗಬಾರದು!
4 ಆದರೂ, ಇಡೀ ಮಾನವ ಇತಿಹಾಸದಲ್ಲೇ ಅತ್ಯಂತ ಸಂಕಷ್ಟದ ಅವಧಿಯಲ್ಲಿ ನಾವು ಜೀವಿಸುತ್ತಿದ್ದೇವೆ. ಈ “ವ್ಯವಹರಿಸಲು ಕಠಿನವಾದ ಕಾಲಗಳಲ್ಲಿ” ನಮ್ಮಲ್ಲನೇಕರು ಕೆಲವು ಸಂದರ್ಭಗಳಲ್ಲಿ ನಿರುತ್ಸಾಹವನ್ನು ಮತ್ತು ಕುಗ್ಗಿದ ಭಾವನೆಯನ್ನು ಅನುಭವಿಸಬಹುದು. (2 ತಿಮೊಥೆಯ 3:1, NW) ಹೀಗಿರಲಾಗಿ, ಪಿಶಾಚನಿಗೆ ಸುಲಭವಾಗಿ ತುತ್ತಾಗುವಷ್ಟರ ಮಟ್ಟಿಗೆ ಬಳಲಿಹೋಗದಂತೆ ನಾವು ಹೇಗೆ ತಡೆಯಬಲ್ಲೆವು? ಹೌದು, “ಉತ್ತಮವಾದುದನ್ನು ಮಾಡುವುದರಲ್ಲಿ ನಾವು ಬಿಟ್ಟುಕೊಡದೆ ಇರೋಣ, ಯಾಕೆಂದರೆ ನಾವು ದಣಿದು ಹೋಗದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು,” ಎಂಬ ಅಪೊಸ್ತಲ ಪೌಲನ ಪ್ರೇರಿತ ಬುದ್ಧಿವಾದವನ್ನು ನಾವು ಹೇಗೆ ಪಾಲಿಸಬಲ್ಲೆವು?—ಗಲಾತ್ಯ 6:9, NW.
ಇತರರು ನಮ್ಮನ್ನು ನಿರಾಶೆಗೊಳಿಸುವಾಗ
5. ದಾವೀದನನ್ನು ಬಳಲಿಹೋಗುವಂತೆ ಮಾಡಿದ್ದು ಯಾವುದು, ಆದರೆ ಅವನು ಏನು ಮಾಡಲಿಲ್ಲ?
5 ಬೈಬಲಿನ ಕಾಲಗಳಲ್ಲಿ, ಯೆಹೋವನ ಅತ್ಯಂತ ನಂಬಿಗಸ್ತ ಸೇವಕರು ಸಹ ಕುಗ್ಗಿದ ಭಾವನೆಯನ್ನು ಅನುಭವಿಸಿರಬಹುದು. “ನಾನು ನರನರಳಿ ದಣಿದಿದ್ದೇನೆ,” ಎಂದು ಕೀರ್ತನೆಗಾರ ದಾವೀದನು ಬರೆದನು. “ಪ್ರತಿರಾತ್ರಿಯೂ ನನ್ನ ಕಣ್ಣೀರಿನಿಂದ ಮಂಚವು ತೇಲಾಡುತ್ತದೆ. ಹಾಸಿಗೆಯು ಕಣ್ಣೀರಿನಿಂದ ನೆನದುಹೋಗುತ್ತದೆ. ದುಃಖದಿಂದ ನನ್ನ ಕಣ್ಣು ಡೊಗರಾಯಿತು.” ದಾವೀದನಿಗೆ ಆ ರೀತಿ ಅನಿಸಿದ್ದೇಕೆ? “ವಿರೋಧಿಗಳ ಬಾಧೆಯ ದೆಸೆಯಿಂದಲೇ,” ಎಂದು ಉತ್ತರಿಸಿದನಾತ. ಇತರರ ಘಾಸಿಗೊಳಿಸುವ ಕೃತ್ಯಗಳು ದಾವೀದನ ಹೃದಯಕ್ಕೆ ಅಷ್ಟೊಂದು ನೋವನ್ನು ಉಂಟುಮಾಡಿದ್ದರಿಂದ, ಅವನ ಕಣ್ಣೀರು ಧಾರೆಯಾಗಿ ಸುರಿಯಿತು. ಆದರೂ ದಾವೀದನು, ಜೊತೆ ಮಾನವರು ತನಗೆ ಮಾಡಿದ್ದ ವಿಷಯಗಳಿಂದಾಗಿ ಯೆಹೋವನಿಂದ ದೂರಸರಿಯಲಿಲ್ಲ.—ಕೀರ್ತನೆ 6:6-9.
6. (ಎ) ಬೇರೆಯವರ ನುಡಿಗಳು ಮತ್ತು ಕ್ರಿಯೆಗಳಿಂದ ನಾವು ಹೇಗೆ ಬಾಧಿಸಲ್ಪಡಬಹುದು? (ಬಿ) ಕೆಲವರು ತಮ್ಮನ್ನು ಪಿಶಾಚನಿಗೆ ಸುಲಭವಾದ ಕೊಳ್ಳೆಯಾಗಿ ಮಾಡಿಕೊಳ್ಳುವುದು ಹೇಗೆ?
6 ತದ್ರೀತಿಯಲ್ಲಿ, ಇತರರ ನುಡಿಗಳು ಅಥವಾ ಕ್ರಿಯೆಗಳು ನಮ್ಮನ್ನು ಹೃದಯ ವೇದನೆಯಿಂದ ಬಳಲಿಹೋಗುವಂತೆ ಮಾಡಬಹುದು. “ಕತಿತ್ತಿವಿದ ಹಾಗೆ ದುಡುಕಿ ಮಾತಾಡುವವರುಂಟು,” ಎಂದು ಹೇಳುತ್ತದೆ ಜ್ಞಾನೋಕ್ತಿ 12:18. ಆ ದುಡುಕಿ ಮಾತಾಡುವ ವ್ಯಕ್ತಿಯು ಒಬ್ಬ ಕ್ರೈಸ್ತ ಸಹೋದರ ಅಥವಾ ಸಹೋದರಿಯಾಗಿದ್ದಲ್ಲಿ, ಆ ‘ತಿವಿದ ಗಾಯವು’ ಆಳವಾಗಿ ತೂರಿಹೋಗಬಲ್ಲದು. ತೀವ್ರ ಅಸಮಾಧಾನಗೊಂಡು, ಪ್ರಾಯಶಃ ಕೋಪಕ್ಕೆ ಇಂಬುಕೊಡುವುದೂ ಮಾನವ ಪ್ರವೃತ್ತಿಯಾಗಿರಬಹುದು. ನಿರ್ದಯೆ ಅಥವಾ ಅನ್ಯಾಯದಿಂದ ನಮ್ಮನ್ನು ಉಪಚರಿಸಲಾಗಿದೆ ಎಂಬ ಅನಿಸಿಕೆ ನಮಗಾದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ. ತಪ್ಪಿತಸ್ಥನೊಂದಿಗೆ ಮಾತನಾಡುವುದು ನಮಗೆ ಕಷ್ಟಕರವಾಗಿ ಕಾಣಬಹುದು; ನಾವು ಅವನಿಂದ ಅಥವಾ ಅವಳಿಂದ ಬುದ್ಧಿಪೂರ್ವಕವಾಗಿ ತಪ್ಪಿಸಿಕೊಳ್ಳಲೂಬಹುದು. ತೀವ್ರ ಅಸಮಾಧಾನದಿಂದ ಕುಗ್ಗಿದವರಾಗಿ, ಕೆಲವರು ಬಿಟ್ಟುಕೊಟ್ಟಿದ್ದಾರೆ ಮತ್ತು ಕ್ರೈಸ್ತ ಕೂಟಗಳಿಗೆ ಬರುವುದನ್ನು ನಿಲ್ಲಿಸಿದ್ದಾರೆ. ಆ ಮೂಲಕ ಅವರು “ಸೈತಾನನಿಗೆ ಅವಕಾಶ”ಕೊಟ್ಟು, ಅವನು ತಮ್ಮನ್ನು ಸುಲಭ ಕೊಳ್ಳೆಯಾಗಿ ಸಾನ್ವುಕೂಲಕ್ಕೆ ಬಳಸಿಕೊಳ್ಳುವಂತೆ ಬಿಟ್ಟಿರುವುದು ವಿಷಾದಕರ.—ಎಫೆಸ 4:27.
7. (ಎ) ಇತರರು ನಮ್ಮನ್ನು ನಿರಾಶೆಗೊಳಿಸುವಾಗ ಅಥವಾ ನೋಯಿಸುವಾಗ, ಸೈತಾನನ ಕೈಯೊಳಗೆ ಸಿಕ್ಕಿಬೀಳುವುದನ್ನು ನಾವು ಹೇಗೆ ತಪ್ಪಿಸಬಲ್ಲೆವು? (ಬಿ) ತೀವ್ರ ಅಸಮಾಧಾನವನ್ನು ನಾವು ಬಿಟ್ಟುಬಿಡಬೇಕು ಏಕೆ?
7 ಇತರರು ನಮ್ಮನ್ನು ನಿರಾಶೆಗೊಳಿಸುವಾಗ ಅಥವಾ ನೋಯಿಸುವಾಗ, ಪಿಶಾಚನ ಕೈಯೊಳಗೆ ಸಿಕ್ಕಿಬೀಳದಂತೆ ನಾವು ಹೇಗೆ ದೂರವಿರಬಲ್ಲೆವು? ತೀವ್ರ ಅಸಮಾಧಾನಕ್ಕೆ ಇಂಬುಕೊಡದಿರಲು ನಾವು ಪ್ರಯತ್ನಿಸತಕ್ಕದ್ದು. ಬದಲಾಗಿ, ಸಾಧ್ಯವಾದಷ್ಟು ಬೇಗ ಸಮಾಧಾನವಾಗುವ ಅಥವಾ ವಿಷಯಗಳನ್ನು ಬಗೆಹರಿಸುವ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಿರಿ. (ಎಫೆಸ 4:26) “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ,” ಎಂದು ಪ್ರೋತ್ಸಾಹಿಸುತ್ತದೆ ಕೊಲೊಸ್ಸೆ 3:13. ತಪ್ಪುಮಾಡಿದವನು ತಪ್ಪನ್ನು ಒಪ್ಪಿಕೊಂಡು ನಿಜವಾಗಿಯೂ ದುಃಖಿತನಾಗುವಾಗ, ಕ್ಷಮೆಯು ವಿಶೇಷವಾಗಿ ಸೂಕ್ತವಾಗಿದೆ. (ಹೋಲಿಸಿ ಕೀರ್ತನೆ 32:3-5 ಮತ್ತು ಜ್ಞಾನೋಕ್ತಿ 28:13.) ಆದರೂ, ಕ್ಷಮಿಸುವುದೆಂದರೆ ಬೇರೆಯವರು ಮಾಡಿದ ತಪ್ಪುಗಳನ್ನು ನಾವು ಗಮನಕ್ಕೆ ತಾರದೇ ಇರುವುದು, ಇಲ್ಲವೇ ನಿಕೃಷ್ಟವೆಂದೆಣಿಸುವುದು ಎಂದರ್ಥವಲ್ಲವೆಂದು ಮನಸ್ಸಿನಲ್ಲಿಡುವುದು ನಮಗೆ ಸಹಾಯಕರ. ಕ್ಷಮಿಸುವುದರಲ್ಲಿ ತೀವ್ರ ಅಸಮಾಧಾನವನ್ನು ಬಿಟ್ಟುಬಿಡುವುದು ಸೇರಿರುತ್ತದೆ. ಅಸಮಾಧಾನವು ಹೊರಲು ಒಂದು ಭಾರವಾದ ಹೊರೆಯಾಗಿದೆ. ಅದು ನಮ್ಮ ಸಂತೋಷವನ್ನು ಅಪಹರಿಸಿ, ನಮ್ಮ ಆಲೋಚನೆಗಳನ್ನು ದಹಿಸಬಲ್ಲದು. ಅದು ನಮ್ಮ ಆರೋಗ್ಯವನ್ನೂ ಬಾಧಿಸಬಲ್ಲದು. ಇದಕ್ಕೆ ವ್ಯತಿರಿಕ್ತವಾಗಿ, ಎಲ್ಲಿ ಸೂಕ್ತವೋ ಅಲ್ಲಿ ಕ್ಷಮಿಸುವಿಕೆಯು, ನಮ್ಮ ಸ್ವಂತ ಪ್ರಯೋಜನಕ್ಕಾಗಿ ಕಾರ್ಯನಡಿಸುತ್ತದೆ. ದಾವೀದನಂತೆ, ಇತರ ಮಾನವರು ನಮಗೆ ಹೇಳಿರುವ ಅಥವಾ ಮಾಡಿರುವ ವಿಷಯದಿಂದಾಗಿ ನಾವೆಂದೂ ಬಿಟ್ಟುಕೊಡದವರೂ ಯೆಹೋವನಿಂದ ದೂರ ಸರಿಯದವರೂ ಆಗಿರುವಂತಾಗಲಿ!
ನಾವು ತಪ್ಪಿಬೀಳುವಾಗ
8. (ಎ) ಕೆಲವರು ಆಗಾಗ ವಿಶೇಷವಾಗಿ ದೋಷಿ ಭಾವವನ್ನು ತಾಳುವುದೇಕೆ? (ಬಿ) ನಾವು ನಮ್ಮನ್ನು ಬಿಟ್ಟುಕೊಡುವಷ್ಟರ ಮಟ್ಟಿಗಿನ ದೋಷಿ ಭಾವದಿಂದ ಕಬಳಿಸಲ್ಪಡುವುದಲ್ಲಿರುವ ಅಪಾಯವೇನು?
8 “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು,” ಎನ್ನುತ್ತದೆ ಯಾಕೋಬ 3:2. ನಾವು ತಪ್ಪುಮಾಡುವಾಗ ಅಪರಾಧದ ಅನಿಸಿಕೆಯಾಗುವುದು ತೀರ ಸ್ವಾಭಾವಿಕ. (ಕೀರ್ತನೆ 38:3-8) ಶರೀರಭಾವದ ಒಂದು ಬಲಹೀನತೆಯೊಂದಿಗೆ ನಾವು ಹೋರಾಡುತ್ತಿರುವಲ್ಲಿ ಮತ್ತು ನಿಯತಕಾಲಿಕ ತಡೆಗಟ್ಟುಗಳನ್ನು ಅನುಭವಿಸುವಲ್ಲಿ, ಈ ಅಪರಾಧದ ಅನಿಸಿಕೆಗಳು ವಿಶೇಷವಾಗಿ ಬಲವಾಗಿರುತ್ತವೆ.a ಅಂತಹ ಒದ್ದಾಟವನ್ನು ಎದುರಿಸಿದ್ದ ಒಬ್ಬ ಕ್ರೈಸ್ತಳು ವಿವರಿಸಿದ್ದು: “ನಾನೊಂದು ಅಕ್ಷಮ್ಯ ಪಾಪವನ್ನು ಮಾಡಿದ್ದೇನೋ ಇಲ್ಲವೋ ಎಂದು ತಿಳಿಯದಿದುದ್ದರಿಂದ ನನಗೆ ಜೀವಿಸುವುದೇ ಬೇಡವಾಗಿತ್ತು. ಹೇಗಿದ್ದರೂ ನನಗೆ ನಿರೀಕ್ಷೆಯಿಲ್ಲದಿರಬಹುದಾದ ಕಾರಣದಿಂದ, ನಾನು ಸ್ವತಃ ಯೆಹೋವನ ಸೇವೆಯಲ್ಲಿ ಪ್ರಯಾಸಪಡುವುದನ್ನು ಸಹ ಬಿಟ್ಟುಬಿಡಬಹುದೆಂದು ನನಗೆ ಅನಿಸಿತು.” ದೋಷಿ ಭಾವದಿಂದ ನಾವು ಬಿಟ್ಟುಕೊಡುವಷ್ಟು ಹೆಚ್ಚಾಗಿ ಕಬಳಿಸಲ್ಪಡುವಾಗ ನಾವು ಪಿಶಾಚನಿಗೆ ಒಂದು ಅವಕಾಶವನ್ನು ಕೊಡುತ್ತೇವೆ—ಮತ್ತು ಅವನು ಥಟ್ಟನೆ ಅದರ ಪ್ರಯೋಜನವನ್ನು ತೆಗೆದುಕೊಳ್ಳಬಹುದು! (2 ಕೊರಿಂಥ 2:5-7, 11) ಇಲ್ಲಿ ಅಗತ್ಯವಿರುವುದು ದೋಷಯುಕ್ತ ಭಾವನೆಯ ಒಂದು ಹೆಚ್ಚು ಸಮತೂಕದ ನೋಟವೇ ಆಗಿರಬಹುದು.
9. ದೇವರ ಕರುಣೆಯಲ್ಲಿ ನಮಗೆ ಭರವಸೆ ಇರಬೇಕು ಏಕೆ?
9 ನಾವು ಪಾಪ ಮಾಡುವಾಗ ಸ್ವಲ್ಪ ಮಟ್ಟಿಗಿನ ದೋಷಯುಕ್ತ ಅನಿಸಿಕೆಯು ತಕ್ಕದ್ದಾಗಿರುತ್ತದೆ. ಕೆಲವೊಮ್ಮೆಯಾದರೋ ದೋಷಿ ಭಾವಗಳು ಪಟ್ಟುಹಿಡಿಯುತ್ತವೆ, ಯಾಕೆಂದರೆ ದೇವರ ಕರುಣೆಗೆ ತಾನೆಂದೂ ಪಾತ್ರನಾಗಲಾರೆನೆಂದು ಕ್ರೈಸ್ತನೊಬ್ಬನು ಭಾವಿಸುತ್ತಾನೆ. ಆದರೂ, ಬೈಬಲು ಹೃತ್‌ಪೂರ್ವಕವಾಗಿ ನಮಗೆ ಆಶ್ವಾಸನೆಯನ್ನೀಯುವುದು: “ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು.” (1 ಯೋಹಾನ 1:9) ನಮ್ಮ ಸನ್ನಿವೇಶದಲ್ಲಿ ಇದನ್ನು ದೇವರು ಮಾಡುವುದಿಲ್ಲವೆಂದು ನಂಬುವುದಕ್ಕೆ ಯಾವ ಸ್ವಸ್ಥ ಕಾರಣವಾದರೂ ಇದೆಯೇ? ತಾನು ‘ಕ್ಷಮಿಸಲು ಸಿದ್ಧನು’ ಎಂದು ಯೆಹೋವನು ತನ್ನ ವಾಕ್ಯದಲ್ಲಿ ಹೇಳುತ್ತಾನೆಂಬುದನ್ನು ನೆನಪಿಸಿಕೊಳ್ಳಿರಿ. (ಕೀರ್ತನೆ 86:5; 130:3, 4) ಆತನು ಸುಳ್ಳು ಹೇಳಶಕ್ತನಲ್ಲವಾದುದರಿಂದ, ನಾವು ಪಶ್ಚಾತ್ತಾಪದ ಹೃದಯದಿಂದ ಆತನ ಬಳಿಗೆ ಬರುವಲ್ಲಿ, ಆತನ ವಾಕ್ಯವು ವಾಗ್ದಾನಿಸುವಂತೆಯೇ ಅವನು ಮಾಡುವನು.—ತೀತ 1:2.
10. ಶರೀರಭಾವದ ಒಂದು ಬಲಹೀನತೆಯನ್ನು ಹೋರಾಡುವ ಕುರಿತು ಯಾವ ಹೃದಯೋಲ್ಲಾಸದ ಪುನರ್‌ಆಶ್ವಾಸನೆಯನ್ನು ಒಂದು ಹಿಂದಿನ ಕಾವಲಿನಬುರುಜು ಪ್ರಕಟಿಸಿತ್ತು?
10 ಒಂದು ಬಲಹೀನತೆಯನ್ನು ನೀವು ಹೋರಾಡುತ್ತಿರುವಲ್ಲಿ ಮತ್ತು ಅದು ಮರುಕೊಳಿಸುವಲ್ಲಿ ನೀವೇನು ಮಾಡಬೇಕು? ಬಿಟ್ಟುಕೊಡಬೇಡಿರಿ! ಒಂದು ಮರುಕೊಳಿಸುವಿಕೆಯು ನೀವು ಈಗಾಗಲೇ ಮಾಡಿರುವ ಪ್ರಗತಿಯನ್ನು ಅನಿವಾರ್ಯವಾಗಿ ತೊಡೆದುಹಾಕುವುದಿಲ್ಲ. ಈ ಪತ್ರಿಕೆಯ ಫೆಬ್ರವರಿ 15, 1954ರ ಸಂಚಿಕೆಯು, ಹೃದಯೋಲ್ಲಾಸಗೊಳಿಸುವ ಈ ಪುನರ್‌ಆಶ್ವಾಸನೆಯನ್ನು ನೀಡಿತು: “ನಾವು ನೆನಸಿದುದಕ್ಕಿಂತಲೂ ಹೆಚ್ಚಾಗಿ ನಮ್ಮ ಹಿಂದಣ ಜೀವನ ರೀತಿಯೊಳಗೆ ಆಳವಾಗಿ ಬೇರೂರಿದ್ದ ಕೆಲವು ಕೆಟ್ಟ ಹವ್ಯಾಸಗಳಿಂದಾಗಿ, ಅನೇಕಾನೇಕ ಬಾರಿ ನಾವು ಮುಗ್ಗರಿಸುವವರಾಗಿ ಮತ್ತು ಬೀಳುವವರಾಗಿ ಕಂಡುಬರಬಹುದು. . . . ಧೈರ್ಯಗೆಡಬೇಡಿ. ಅಕ್ಷಮ್ಯ ಪಾಪವನ್ನು ನೀವು ಮಾಡಿದ್ದೀರೆಂದು ತೀರ್ಮಾನಿಸಬೇಡಿ. ನೀವು ಹಾಗೆಯೇ ತರ್ಕಿಸುವಂತೆ ಸೈತಾನನು ಬಯಸುತ್ತಾನೆ. ನಿಮ್ಮ ವಿಷಯದಲ್ಲಿ ನಿಮಗೆ ವ್ಯಥೆ ಮತ್ತು ಸಂತಾಪವಾಗುವ ನಿಜತ್ವವು ತಾನೇ ನೀವು ತೀರ ದೂರ ಹೋಗಿಲ್ಲವೆಂಬುದಕ್ಕೆ ಪುರಾವೆಯಾಗಿದೆ. ಆತನ ಕ್ಷಮೆಯನ್ನೂ, ಶುದ್ಧಿಯನ್ನೂ ಮತ್ತು ಸಹಾಯವನ್ನು ಕೋರುತ್ತಾ, ದೀನತೆಯಿಂದಲೂ ಯಥಾರ್ಥತೆಯಿಂದಲೂ ದೇವರ ಬಳಿಗೆ ತಿರುಗುವುದಕ್ಕೆ ಎಂದೂ ಬಳಲಿಹೋಗಬೇಡಿ. ಒಂದೇ ಬಲಹೀನತೆಯ ಬಗ್ಗೆ ಎಷ್ಟು ಸಲವಾದರೂ ಚಿಂತಿಲ್ಲ, ತೊಂದರೆಯಲ್ಲಿರುವಾಗ ಮಗುವು ತನ್ನ ತಂದೆಯ ಬಳಿಗೆ ಹೋಗುವಂತೆ, ಆತನ ಬಳಿಗೆ ಹೋಗಿರಿ, ಮತ್ತು ಯೆಹೋವನು ತನ್ನ ಅಪಾತ್ರ ಕೃಪೆಯಿಂದ ಕರುಣಾಪೂರ್ಣನಾಗಿ ನಿಮಗೆ ಸಹಾಯ ಕೊಡುವನು, ಮತ್ತು ನೀವು ಯಥಾರ್ಥರಾಗಿದ್ದರೆ, ಒಂದು ಶುದ್ಧ ಮನಸ್ಸಾಕ್ಷಿಯ ಮನವರಿಕೆಯನ್ನು ನಿಮಗೆ ಆತನು ದಯಪಾಲಿಸುವನು.”
ನಾವು ಸಾಕಷ್ಟನ್ನು ಮಾಡುತ್ತಿಲ್ಲವೆಂದು ನಮಗೆ ಅನಿಸುವಾಗ
11. (ಎ) ರಾಜ್ಯ ಸಾರುವಿಕೆಯ ಕಾರ್ಯದ ಕುರಿತು ನಮ್ಮ ಭಾವನೆ ಹೇಗಿರಬೇಕು? (ಬಿ) ಶುಶ್ರೂಷೆಯಲ್ಲಿ ಪಾಲಿಗರಾಗುವ ಕುರಿತಾದ ಯಾವ ಭಾವನೆಗಳೊಂದಿಗೆ ಕೆಲವು ಕ್ರೈಸ್ತರು ಹೋರಾಡುತ್ತಾರೆ?
11 ಒಬ್ಬ ಕ್ರೈಸ್ತನ ಜೀವನದಲ್ಲಿ ರಾಜ್ಯ ಸಾರುವಿಕೆಯ ಕಾರ್ಯವು ಒಂದು ಪ್ರಾಮುಖ್ಯ ಪಾತ್ರವನ್ನು ವಹಿಸುತ್ತದೆ, ಮತ್ತು ಅದರಲ್ಲಿ ಪಾಲಿಗರಾಗುವುದು ಸಂತೋಷವನ್ನು ತರುತ್ತದೆ. (ಕೀರ್ತನೆ 40:8) ಕೆಲವು ಕ್ರೈಸ್ತರಾದರೋ, ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡಲು ಶಕ್ತರಾಗದಿರುವುದರ ಕುರಿತು ಅತಿ ದೋಷಿ ಭಾವವನ್ನು ತಾಳುತ್ತಾರೆ. ಅಂತಹ ದೋಷಿ ಭಾವವು ನಮ್ಮ ಸಂತೋಷವನ್ನು ಸಹ ಸವೆಸಬಲ್ಲದು ಮತ್ತು ನಾವೆಂದೂ ಸಾಕಷ್ಟನ್ನು ಮಾಡುವುದಿಲ್ಲವೆಂದು ಯೆಹೋವನು ಭಾವಿಸುತ್ತಾನೆಂದು ಊಹಿಸುತ್ತಾ, ನಾವು ಬಿಟ್ಟುಕೊಡುವಂತೆಯೂ ಮಾಡಬಲ್ಲದು. ಕೆಲವರು ಹೋರಾಡುತ್ತಿರುವ ಭಾವನೆಗಳನ್ನು ಪರಿಗಣಿಸಿರಿ.
“ಬಡತನವು ಎಷ್ಟು ಕಾಲವನ್ನು ಹಾಳುಮಾಡುತ್ತದೆಂದು ನಿಮಗೆ ಗೊತ್ತೋ?” ಎಂದು ತನ್ನ ಗಂಡನೊಂದಿಗೆ ಮೂರು ಮಕ್ಕಳನ್ನು ಬೆಳೆಸುತ್ತಿರುವ ಒಬ್ಬ ಕ್ರೈಸ್ತ ಸಹೋದರಿ ಬರೆದಳು. “ಎಲ್ಲಿ ಶಕ್ಯವೋ ಅಲ್ಲಿ ನಾನು ಉಳಿತಾಯ ಮಾಡಬೇಕು. ಮಿತಬೆಲೆಯ ಅಂಗಡಿಗಳಲ್ಲಿ, ಸರಕು ತೀರಿಕೆಯ ಮಾರಾಟದ ಸ್ಥಳಗಳಲ್ಲಿ, ಅಥವಾ ಬಟ್ಟೆಗೆಳನ್ನು ಹೊಲಿಯಲಿಕ್ಕಾಗಿ ಸಹ ಸಮಯವನ್ನು ವ್ಯಯಿಸುವುದು ಇದರ ಅರ್ಥವಾಗಿದೆ. ಪ್ರತಿ ವಾರ ಒಂದೆರಡು ತಾಸುಗಳನ್ನು, [ನ್ಯೂನ ಬೆಲೆಯ ಆಹಾರದ] ಕೂಪನ್‌ಗಳನ್ನು ಕತ್ತರಿಸಿ, ತುಂಬಿಸಿ, ವಿನಿಮಯ ಮಾರಾಟದಲ್ಲಿ ವ್ಯಯಿಸುತ್ತೇನೆ. ಆ ಸಮಯವನ್ನು ನಾನು ಕ್ಷೇತ್ರ ಸೇವೆಯಲ್ಲಿ ವ್ಯಯಿಸಬೇಕಿತ್ತೆಂದು ನೆನಸುತ್ತಾ, ಈ ಕೆಲಸಗಳನ್ನು ಮಾಡುವುದಕ್ಕಾಗಿ ಕೆಲವೊಮ್ಮೆ ನಾನು ಅತಿಯಾದ ದೋಷಿ ಭಾವವನ್ನು ತಾಳುತ್ತೇನೆ.”
“ನಾನು ಯೆಹೋವನನ್ನು ನಿಜವಾಗಿ ಸಾಕಷ್ಟು ಪ್ರೀತಿಸುವುದಿಲ್ಲ ಎಂದು ನೆನಸಿದೆ,” ಎಂದು ನಾಲ್ಕು ಮಕ್ಕಳೂ ಅವಿಶ್ವಾಸಿ ಗಂಡನೂ ಇರುವ ಒಬ್ಬ ಸಹೋದರಿ ವಿವರಿಸಿದಳು. “ಆದುದರಿಂದ, ನಾನು ಯೆಹೋವನ ಸೇವೆ ಮಾಡುವುದಕ್ಕಾಗಿ ಹೋರಾಟ ನಡೆಸಿದೆ. ನಿಜವಾಗಿ ಕಠಿನ ಪ್ರಯತ್ನಮಾಡಿದೆ, ಆದರೆ ಅದು ಸಾಕಷ್ಟಾಗಿತ್ತೆಂದು ನನಗೆಂದೂ ಅನಿಸಲಿಲ್ಲ. ನೋಡಿ, ಸ್ವಅರ್ಹತೆಯ ಯಾವುದೇ ಅನಿಸಿಕೆ ನನಗಿರಲಿಲ್ಲ, ಆದುದರಿಂದ ಆತನಿಗೆ ನನ್ನ ಸೇವೆಯನ್ನು ಯೆಹೋವನೆಂದಾದರೂ ಹೇಗೆ ಸ್ವೀಕರಿಸಾನೆಂದು ನಾನು ಊಹಿಸಲಾರದವಳಾಗಿದ್ದೆ.”
ಪೂರ್ಣ ಸಮಯದ ಸೇವೆಯನ್ನು ಬಿಟ್ಟುಬಿಡುವುದು ಆವಶ್ಯಕವೆಂದು ಕಂಡುಕೊಂಡ ಒಬ್ಬ ಕ್ರೈಸ್ತಳು ಅಂದದ್ದು: “ಯೆಹೋವನನ್ನು ಪೂರ್ಣ ಸಮಯ ಸೇವಿಸುವ ನನ್ನ ಕಟ್ಟುಪಾಡಿನಲ್ಲಿ ನಾನು ಬಿದ್ದುಹೋದೆನೆಂಬ ವಿಚಾರವನ್ನು ನಾನು ಸಹಿಸಲಾರದೆ ಹೋದೆ. ನಾನೆಷ್ಟು ನಿರಾಶೆಗೊಂಡಿದ್ದೆನೆಂಬುದನ್ನು ನೀವು ಊಹಿಸಲಾರಿರಿ! ಅದನ್ನು ನೆನಪಿಸಿಕೊಳ್ಳುತ್ತಾ ಈಗಲೂ ನಾನು ಅಳುತ್ತೇನೆ.”
12. ಕೆಲವು ಕ್ರೈಸ್ತರು ಶುಶ್ರೂಷೆಯಲ್ಲಿ ತಾವು ಹೆಚ್ಚನ್ನು ಮಾಡಲು ಅಶಕ್ತರಾಗಿರುವ ಕುರಿತು ಅತಿಯಾದ ದೋಷಿ ಭಾವವನ್ನು ತಾಳುವುದೇಕೆ?
12 ಸಾಧ್ಯವಾದಷ್ಟು ಪೂರ್ಣವಾಗಿ ಯೆಹೋವನನ್ನು ಸೇವಿಸಲು ಬಯಸುವುದು ತೀರ ಸ್ವಾಭಾವಿಕವಾಗಿದೆ. (ಕೀರ್ತನೆ 86:12) ಹೀಗಿರಲಾಗಿ, ಹೆಚ್ಚನ್ನು ಮಾಡಲು ಶಕ್ತರಾಗದೆ ಇರುವುದಕ್ಕಾಗಿ ಕೆಲವರು ಅತಿಯಾದ ದೋಷಿ ಭಾವವನ್ನು ತಾಳುವುದೇಕೆ? ಕೆಲವರಿಗೆ, ಅದು ಪ್ರಾಯಶಃ ಜೀವನದಲ್ಲಿ ಅಹಿತಕರ ಅನುಭವಗಳಿಂದ ಉಂಟಾದ, ಅಯೋಗ್ಯತೆಯ ಒಂದು ಸಾಮಾನ್ಯ ಭಾವನೆಗೆ ಸಂಬಂಧಿಸಿದೆಯೆಂದು ತೋರುತ್ತದೆ. ಬೇರೆ ಸನ್ನಿವೇಶಗಳಲ್ಲಿ, ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆಂಬುದರ ಅವಾಸ್ತವಿಕ ನೋಟದಿಂದ ಅಯುಕ್ತವಾದ ದೋಷಭಾವನೆ ಉಂಟಾಗಬಹುದು. “ಪೂರಾ ದಣಿದುಹೋಗುವ ತನಕ ಕೆಲಸ ಮಾಡದಿದ್ದಲ್ಲಿ, ನಾನು ಸಾಕಷ್ಟನ್ನು ಮಾಡುತ್ತಿಲ್ಲವೆಂಬ ಭಾವನೆ ನನಗಿತ್ತು,” ಎಂದು ಒಬ್ಬಾಕೆ ಕ್ರೈಸ್ತಳು ಒಪ್ಪಿದಳು. ಪರಿಣಾಮವಾಗಿ, ಅವಳು ಅತಿರೇಕವಾದ ಉನ್ನತ ಮಟ್ಟಗಳನ್ನು ತನಗಾಗಿ ಇಟ್ಟುಕೊಂಡಳು—ಮತ್ತು ಅವುಗಳನ್ನು ಮುಟ್ಟಲು ಅಶಕ್ತಳಾದಾಗ ಇನ್ನಷ್ಟು ದೋಷಿ ಭಾವವನ್ನು ಪಡೆದಳು.
13. ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?
13 ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಸರಳವಾಗಿ ಹೇಳುವುದಾದರೆ, ನಮ್ಮ ಪರಿಸ್ಥಿತಿಗಳು ಅನುಮತಿಸುವುದನ್ನು ಮಾಡುತ್ತಾ, ಆತನಿಗೆ ಪೂರ್ಣಪ್ರಾಣದಿಂದ ಸೇವೆ ಸಲ್ಲಿಸುವುದನ್ನು ಯೆಹೋವನು ನಮ್ಮಿಂದ ಅಪೇಕ್ಷಿಸುತ್ತಾನೆ. (ಕೊಲೊಸ್ಸೆ 3:23) ಆದರೂ, ನಾವೇನು ಮಾಡಲು ಬಯಸುತ್ತೇವೋ ಮತ್ತು ವಾಸ್ತವಿಕವಾಗಿ ನಾವೇನು ಮಾಡಬಲ್ಲೆವೋ, ಇವುಗಳ ನಡುವೆ ದೊಡ್ಡ ವ್ಯತ್ಯಾಸವು ಇದ್ದೀತು. ವಯಸ್ಸು, ಆರೋಗ್ಯ, ದೈಹಿಕ ತ್ರಾಣ ಅಥವಾ ಕುಟುಂಬ ಜವಾಬ್ದಾರಿಗಳಂತಹ ವಿಷಯಗಳಿಂದ ನಾವು ಸೀಮಿತರಾಗಿರಬಹುದು. ಆದಾಗ್ಯೂ, ನಮ್ಮಿಂದ ಸಾಧ್ಯವಾದುದೆಲ್ಲವನ್ನು ನಾವು ಮಾಡುವಾಗ, ಯೆಹೋವನಿಗೆ ನಮ್ಮ ಸೇವೆಯು ಪೂರ್ಣಪ್ರಾಣದ್ದು ಎಂಬ—ಯಾರ ಆರೋಗ್ಯ ಮತ್ತು ಪರಿಸ್ಥಿತಿಯು ಅವನನ್ನು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಇರುವಂತೆ ಅನುಮತಿಸುತ್ತದೋ ಅವನ ಪೂರ್ಣಪ್ರಾಣದ ಸೇವೆಗಿಂತ ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ—ಆಶ್ವಾಸನೆಯನ್ನು ನಾವು ಪಡೆಯಬಲ್ಲೆವು.—ಮತ್ತಾಯ 13:18-23.
14. ನೀವು ನಿಮ್ಮಿಂದ ವಾಸ್ತವಿಕವಾಗಿ ಏನನ್ನು ಅಪೇಕ್ಷಿಸಸಾಧ್ಯವಿದೆ ಎಂದು ನಿರ್ಧರಿಸುವುದರಲ್ಲಿ ನಿಮಗೆ ಸಹಾಯ ಬೇಕಿದ್ದರೆ ನೀವೇನು ಮಾಡಬಲ್ಲಿರಿ?
14 ಹಾಗಾದರೆ, ವಾಸ್ತವಿಕವಾಗಿ ನೀವು ನಿಮ್ಮಿಂದ ಏನನ್ನು ಅಪೇಕ್ಷಿಸಬಲ್ಲಿರೆಂದು ನೀವು ಹೇಗೆ ನಿರ್ಧರಿಸಸಾಧ್ಯವಿದೆ? ಭರವಸಯೋಗ್ಯನೂ ಪ್ರೌಢನೂ ಆಗಿರುವ ಒಬ್ಬ ಕ್ರೈಸ್ತ ಸ್ನೇಹಿತನೊಂದಿಗೆ, ಪ್ರಾಯಶಃ ನಿಮ್ಮ ಸಾಮರ್ಥ್ಯಗಳನ್ನೂ ಸೀಮಿತಗಳನ್ನೂ ನಿಮ್ಮ ಕುಟುಂಬ ಜವಾಬ್ದಾರಿಗಳನ್ನೂ ಅರಿತಿರುವ ಒಬ್ಬ ಹಿರಿಯನೊಂದಿಗೆ ಅಥವಾ ಅನುಭವಸ್ಥಳಾದ ಒಬ್ಬ ಸಹೋದರಿಯೊಂದಿಗೆ, ಮಾತನಾಡಲು ನೀವು ಬಯಸಬಹುದು. (ಜ್ಞಾನೋಕ್ತಿ 15:22) ದೇವರ ದೃಷ್ಟಿಯಲ್ಲಿ ವ್ಯಕ್ತಿಯೋಪಾದಿ ನಿಮ್ಮ ಯೋಗ್ಯತೆಯು, ಕ್ಷೇತ್ರ ಶುಶ್ರೂಷೆಯಲ್ಲಿ ನೀವೆಷ್ಟನ್ನು ಮಾಡುತ್ತೀರಿ ಎಂಬುದರಿಂದ ಅಳೆಯಲ್ಪಡುವುದಿಲ್ಲವೆಂಬುದನ್ನು ನೆನಪಿನಲ್ಲಿಡಿರಿ. ಯೆಹೋವನ ಸೇವಕರಲ್ಲಿ ಎಲ್ಲರೂ ಆತನಿಗೆ ಅಮೂಲ್ಯರು. (ಹಗ್ಗಾಯ 2:7; ಮಲಾಕಿಯ 3:16, 17) ಸಾರುವ ಕಾರ್ಯದಲ್ಲಿ ನೀವೇನು ಮಾಡುತ್ತೀರೋ ಅದು, ಬೇರೆಯವರು ಮಾಡುವುದಕ್ಕಿಂತ ಹೆಚ್ಚು ಅಥವಾ ಕಡಿಮೆಯಾಗಿದ್ದೀತು, ಆದರೆ ಎಷ್ಟರ ತನಕ ಅದು ನಿಮ್ಮ ಅತ್ಯುತ್ತಮತೆಯನ್ನು ಪ್ರತಿನಿಧಿಸುತ್ತದೋ, ಅಷ್ಟರ ತನಕ ಯೆಹೋವನು ಮೆಚ್ಚುತ್ತಾನೆ, ಮತ್ತು ನೀವು ದೋಷಿ ಭಾವವನ್ನು ತಾಳುವ ಅಗತ್ಯವಿಲ್ಲ.—ಗಲಾತ್ಯ 6:4.
ನಮ್ಮಿಂದ ಬಹಳವಾಗಿ ನಿರೀಕ್ಷಿಸಲ್ಪಡುವಾಗ
15. ಯಾವ ರೀತಿಯಲ್ಲಿ ಸಭಾ ಹಿರಿಯರಿಂದ ಬಹಳವಾಗಿ ನಿರೀಕ್ಷಿಸಲ್ಪಡುತ್ತದೆ?
15 “ಯಾವನಿಗೆ ಬಹಳವಾಗಿ ಕೊಟ್ಟದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವದು,” ಎಂದನು ಯೇಸು. (ಲೂಕ 12:48) ಸಭಾ ಹಿರಿಯರಾಗಿ ಸೇವೆ ಮಾಡುವವರಿಂದ ‘ಬಹಳವಾಗಿ ನಿರೀಕ್ಷಿಸಲ್ಪಡುತ್ತದೆ’ ಎಂಬುದು ನಿಶ್ಚಯ. ಪೌಲನಂತೆ ಅವರು ಸಭೆಯ ಸಲುವಾಗಿ ತಮ್ಮನ್ನು ದುಡಿಸಿಕೊಳ್ಳುತ್ತಾರೆ. (2 ಕೊರಿಂಥ 12:15) ಅವರಿಗೆ ಭಾಷಣಗಳನ್ನು ತಯಾರಿಸಲಿಕ್ಕಿದೆ, ಕುರಿಪಾಲನೆಯ ಭೇಟಿಗಳನ್ನು ಮಾಡಲಿಕ್ಕಿದೆ. ನ್ಯಾಯ ನಿರ್ಣಾಯಕ ವಿಷಯಗಳನ್ನು ನಿರ್ವಹಿಸಲಿಕ್ಕಿದೆ—ತಮ್ಮ ಸ್ವಂತ ಕುಟುಂಬಗಳನ್ನು ಅಲಕ್ಷಿಸದೇ ಇದೆಲ್ಲವನ್ನು ಮಾಡಲಿಕ್ಕಿದೆ. (1 ತಿಮೊಥೆಯ 3:4, 5) ಕೆಲವು ಹಿರಿಯರು ರಾಜ್ಯ ಸಭಾಗೃಹಗಳನ್ನು ಕಟ್ಟಲು ನೆರವಾಗುವುದರಲ್ಲಿ, ಹಾಸ್ಪಿಟಲ್ ಲಿಏಸಾನ್ ಕಮಿಟಿಗಳಲ್ಲಿ ಸೇವೆಮಾಡುವುದರಲ್ಲಿ, ಸಮ್ಮೇಳನ ಮತ್ತು ಅಧಿವೇಶನಗಳಲ್ಲಿ ಸ್ವಯಂಸೇವೆ ಮಾಡುವುದರಲ್ಲಿ ಸಹ ಬಿಡುವಿಲ್ಲದೆ ಇದ್ದಾರೆ. ಕಷ್ಟಪಟ್ಟು ದುಡಿಯುವ ಈ ದೈವಭಕ್ತ ಪುರುಷರು ಅಂತಹ ಜವಾಬ್ದಾರಿಯ ಭಾರದ ಕೆಳಗೆ ಬಳಲಿಹೋಗುವುದನ್ನು ಹೇಗೆ ವರ್ಜಿಸಬಲ್ಲರು?
16. (ಎ) ಯಾವ ಪ್ರಾಯೋಗಿಕ ಪರಿಹಾರವನ್ನು ಇತ್ರೋ ಮೋಶೆಗೆ ನೀಡಿದನು? (ಬಿ) ತಕ್ಕದಾದ್ದ ಜವಾಬ್ದಾರಿಗಳನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಯಾವ ಗುಣವು ಹಿರಿಯನನ್ನು ಶಕ್ತನನ್ನಾಗಿ ಮಾಡುವುದು?
16 ವಿನಯಶೀಲನೂ ನಮ್ರನೂ ಆದ ಮೋಶೆಯು ಬೇರೆಯವರ ಸಮಸ್ಯೆಗಳನ್ನು ನಿರ್ವಹಿಸುವುದರಲ್ಲಿ ತನ್ನನ್ನು ಬಳಲಿಸಿಕೊಂಡಾಗ, ಅವನ ಮಾವನಾದ ಇತ್ರೋ ಅವನಿಗೆ ಒಂದು ಪ್ರಾಯೋಗಿಕ ಪರಿಹಾರವನ್ನು ನೀಡಿದನು: ಕೆಲವು ಜವಾಬ್ದಾರಿಗಳನ್ನು ಯೋಗ್ಯತೆಯುಳ್ಳ ಇತರ ಪುರುಷರೊಂದಿಗೆ ಹಂಚಿಕೋ. (ವಿಮೋಚನಕಾಂಡ 18:17-26; ಅರಣ್ಯಕಾಂಡ 12:3) “ವಿವೇಕವು ವಿನಯಶೀಲರಲ್ಲಿದೆ” ಎನ್ನುತ್ತದೆ ಜ್ಞಾನೋಕ್ತಿ 11:2 (NW). ವಿನಯಶೀಲರಾಗಿರುವುದೆಂದರೆ ನಿಮ್ಮ ಸೀಮಿತಗಳನ್ನು ಅರಿತುಕೊಂಡು ಒಪ್ಪಿಕೊಳ್ಳುವುದೇ. ವಿನಯಶೀಲ ವ್ಯಕ್ತಿಯೊಬ್ಬನು ಇತರರಿಗೆ ವಹಿಸಿಕೊಡಲು ಇಷ್ಟವಿಲ್ಲದವನಾಗಿರುವುದಿಲ್ಲ, ತಕ್ಕದಾದ್ದ ಜವಾಬ್ದಾರಿಗಳನ್ನು ಯೋಗ್ಯತೆಯುಳ್ಳ ಇತರ ಪುರುಷರೊಂದಿಗೆ ಹಂಚಿಕೊಳ್ಳುವುದರಿಂದ ಯಾವುದೋ ರೀತಿಯಲ್ಲಿ ತನ್ನ ನಿಯಂತ್ರಣವನ್ನು ಕಳೆದುಕೊಳ್ಳುತ್ತೇನೆಂದು ಅವನು ಭಯಪಡುವುದೂ ಇಲ್ಲ.b (ಅರಣ್ಯಕಾಂಡ 11:16, 17, 26-29) ಬದಲಿಗೆ ಅವರು ಪ್ರಗತಿಮಾಡುವಂತೆ ನೆರವಾಗಲು ಅವನು ಆತುರನಾಗಿದ್ದಾನೆ.—1 ತಿಮೊಥೆಯ 4:15.
17. (ಎ) ಹಿರಿಯರ ಹೊರೆಯನ್ನು ಸಭಾ ಸದಸ್ಯರು ಹೇಗೆ ಹಗುರಗೊಳಿಸಬಹುದು? (ಬಿ) ಹಿರಿಯರ ಪತ್ನಿಯರು ಯಾವ ತ್ಯಾಗಗಳನ್ನು ಮಾಡುತ್ತಾರೆ, ಮತ್ತು ನಾವು ಅವನ್ನು ಮಾಮೂಲಾಗಿ ತೆಗೆದುಕೊಳ್ಳುವುದಿಲ್ಲವೆಂದು ನಾವು ಅವರಿಗೆ ಹೇಗೆ ತೋರಿಸಬಲ್ಲೆವು?
17 ಹಿರಿಯರ ಹೊರೆಯನ್ನು ಹಗುರಗೊಳಿಸಲು ಸಭಾ ಸದಸ್ಯರು ಹೆಚ್ಚನ್ನು ಮಾಡಬಲ್ಲರು. ಆರೈಕೆಮಾಡಲು ಹಿರಿಯರಿಗೆ ತಮ್ಮ ಸ್ವಂತ ಕುಟುಂಬಗಳಿವೆಯೆಂದು ತಿಳಿದವರಾಗಿ, ಇತರರು ಹಿರಿಯರ ಸಮಯ ಮತ್ತು ಗಮನಕ್ಕಾಗಿ ಅಯುಕ್ತವಾದ ಹಕ್ಕೊತ್ತಾಯಗಳನ್ನು ಮಾಡಲಾರರು. ಇಲ್ಲವೇ ಹಿರಿಯರ ಪತ್ನಿಯರು, ತಮ್ಮ ಗಂಡಂದಿರು ಸಭೆಯೊಂದಿಗೆ ನಿಸ್ವಾರ್ಥದಿಂದ ಪಾಲಿಗರಾಗುವಾಗ, ಅವರು ಮಾಡುವ ಇಷ್ಟಪೂರ್ವಕ ತ್ಯಾಗಗಳನ್ನು ಮಾಮೂಲಾಗಿ ತೆಗೆದುಕೊಳ್ಳುವುದೂ ಇಲ್ಲ. ಯಾರ ಗಂಡನು ಒಬ್ಬ ಹಿರಿಯನೋ, ಆ ಮೂವರು ಮಕ್ಕಳ ತಾಯಿಯೊಬ್ಬಳು ವಿವರಿಸಿದ್ದು: “ನನ್ನ ಪತಿಯು ಒಬ್ಬ ಹಿರಿಯನಾಗಿ ಸೇವೆಮಾಡಲಾಗುವಂತೆ ಗೃಹಕೃತ್ಯದಲ್ಲಿ ನಾನು ಮನಸಾರೆ ಹೊರುವ ಆ ಅಧಿಕ ಹೊರೆಯನ್ನು ನಾನೆಂದೂ ದೂರುವುದಿಲ್ಲ. ಅವರ ಸೇವೆಯಿಂದಾಗಿ ನಮ್ಮ ಕುಟುಂಬದ ಮೇಲೆ ಯೆಹೋವನಾಶೀರ್ವಾದವು ಹೇರಳವಾಗಿದೆ ಎಂದು ನನಗೆ ಗೊತ್ತಿದೆ, ಮತ್ತು ಅವರು ಕೊಡುವ ಸಮಯ ಮತ್ತು ಶಕಿಗ್ತಾಗಿ ನನಗೆ ಅಸಮಾಧಾನವಿಲ್ಲ. ಆದರೂ, ವಾಸ್ತವಿಕವಾಗಿ, ನನ್ನ ಗಂಡನು ಕಾರ್ಯಮಗ್ನನಾಗಿರುವುದರಿಂದ ನನಗೆ ಹಿತ್ತಲಲ್ಲಿ ಹೆಚ್ಚು ಕೆಲಸ ಮಾಡಲಿಕ್ಕಿರುತ್ತದೆ ಮತ್ತು ಮಕ್ಕಳನ್ನು ಶಿಸ್ತುಗೊಳಿಸುವುದರಲ್ಲಿ ಅನ್ಯಥಾ ಮಾಡುವುದಕ್ಕಿಂತ ಹೆಚ್ಚನ್ನು ನಿರ್ವಹಿಸಲಿಕ್ಕಿದೆ.” ಶೋಚನೀಯವಾಗಿ, ಅವಳ ಈ ಅಧಿಕ ಹೊರೆಯನ್ನು ಗಣ್ಯಮಾಡುವುದರ ಬದಲಿಗೆ, ಕೆಲವರು, “ನೀನು ಪಯನೀಯರ್ ಸೇವೆಯನ್ನು ಏಕೆ ಮಾಡುವುದಿಲ್ಲ?” ಎಂದು ಸಂವೇದನೆರಹಿತವಾಗಿ ನುಡಿಯುವುದನ್ನು ಈ ಸಹೋದರಿ ಕಂಡುಕೊಂಡಳು. (ಜ್ಞಾನೋಕ್ತಿ 12:18) ಅವರು ಏನು ಮಾಡಶಕ್ತರಲ್ಲವೋ ಅದಕ್ಕಾಗಿ ಅವರನ್ನು ಟೀಕಿಸುವ ಬದಲಿಗೆ, ಅವರು ಮಾಡುತ್ತಿರುವ ವಿಷಯಗಳಿಗಾಗಿ ಅವರನ್ನು ಪ್ರಶಂಸಿಸುವುದು ಅದೆಷ್ಟು ಹಿತಕರವಾಗಿರುವುದು!—ಜ್ಞಾನೋಕ್ತಿ 16:24; 25:11.
ಅಂತ್ಯವು ಇನ್ನೂ ಬರದಿರುವ ಕಾರಣ
18, 19. (ಎ) ನಿತ್ಯ ಜೀವದ ಓಟದಲ್ಲಿ ಓಡುವುದನ್ನು ನಿಲ್ಲಿಸುವ ಸಮಯವು ಇದಾಗಿರುವುದಿಲ್ಲವೇಕೆ? (ಬಿ) ಯೆರೂಸಲೇಮಿನಲ್ಲಿನ ಕ್ರೈಸ್ತರಿಗೆ ಅಪೊಸ್ತಲ ಪೌಲನು ಯಾವ ಸಮಯೋಚಿತ ಬುದ್ಧಿವಾದವನ್ನಿತನ್ತು?
18 ಒಬ್ಬ ಓಟಗಾರನು ಒಂದು ದೂರದೋಟದ ಕೊನೆಯನ್ನು ತಾನು ಹತ್ತರಿಸುತ್ತಿದ್ದೇನೆಂದು ತಿಳಿಯುವಾಗ, ಅವನು ಬಿಟ್ಟುಕೊಡುವುದಿಲ್ಲ. ಅವನ ದೇಹವು—ಬಳಲಿಹೋಗಿ, ಶಾಖವೇರಿ, ನಿರ್ಜಲವಾಗಿ—ಅದರ ಸಹನೆಯ ಎಲೆಯ್ಲಲ್ಲಿರಬಹುದು, ಆದರೆ ಕೊನೆಮುಟ್ಟಲು ಅಷ್ಟು ಹತ್ತಿರವಾಗುವಾಗ ಅದು ಓಟವನ್ನು ನಿಲ್ಲಿಸುವ ಸಮಯವಾಗಿರುವುದಿಲ್ಲ. ತದ್ರೀತಿಯಲ್ಲಿ, ಕ್ರೈಸ್ತರಾದ ನಾವು ಜೀವದ ಬಹುಮಾನಕ್ಕಾಗಿ ಓಟದಲ್ಲಿದ್ದೇವೆ, ಮತ್ತು ಗೆಲ್ಲುಗೆರೆಗೆ ಅತಿ ಹತ್ತಿರವಾಗಿದ್ದೇವೆ. ನಾವು ಓಡುವುದನ್ನು ನಿಲ್ಲಿಸುವ ಸಮಯವು ಇದಾಗಿರುವುದಿಲ್ಲ!—ಹೋಲಿಸಿ 1 ಕೊರಿಂಥ 9:24; ಫಿಲಿಪ್ಪಿ 2:16; 3:13, 14.
19 ಒಂದನೆಯ ಶತಮಾನದಲ್ಲಿ ಕ್ರೈಸ್ತರು ಒಂದು ತತ್ಸಮಾನವಾದ ಸನ್ನಿವೇಶವನ್ನು ಎದುರಿಸಿದರು. ಸಾ.ಶ. 61ರ ಸುಮಾರಿಗೆ ಅಪೊಸ್ತಲ ಪೌಲನು ಯೆರೂಸಲೇಮಿನಲ್ಲಿದ್ದ ಕ್ರೈಸ್ತರಿಗೆ ಬರೆದನು. ವೇಳೆ ಮೀರಿಹೋಗುತ್ತಿತ್ತು—ದುಷ್ಟ “ಸಂತತಿ”ಯಾದ ಧರ್ಮಭ್ರಷ್ಟ ಯೆಹೂದಿ ವಿಷಯಗಳ ವ್ಯವಸ್ಥೆಯ “ಗತಿಸಿಹೋಗು”ವುದರಲ್ಲಿತ್ತು. ವಿಶೇಷವಾಗಿ ಯೆರೂಸಲೇಮಿನಲ್ಲಿದ್ದ ಕ್ರೈಸ್ತರು ಎಚ್ಚರವುಳ್ಳವರೂ ನಂಬಿಗಸ್ತರೂ ಆಗಿರಬೇಕಿತ್ತು; ನಗರವು ಪಾಳೆಯ ಬಿಟ್ಟ ಸೇನೆಯಿಂದ ಸುತ್ತುವರಿಯಲ್ಪಡುವುದನ್ನು ಕಾಣುವಾಗ, ಅವರು ಅದನ್ನು ಬಿಟ್ಟು ಓಡಿಹೋಗುವ ಅಗತ್ಯವಿತ್ತು. (ಲೂಕ 21:20-24, 32) ಹೀಗಿರಲಾಗಿ, ಪೌಲನ ಪ್ರೇರಿತ ಸಲಹೆಯು ಸಮಯೋಚಿತವಾಗಿತ್ತು: “ನೀವು ಬಳಲಿಹೋಗಿ ನಿಮ್ಮ ಪ್ರಾಣವನ್ನು ಬಿಟ್ಟುಕೊಡಬೇಡಿರಿ.” (ಇಬ್ರಿಯ 12:3, NW) ಇಲ್ಲಿ ಅಪೊಸ್ತಲ ಪೌಲನು ಎರಡು ಸ್ಪಷ್ಟವಾಗಿದ ಕ್ರಿಯಾಪದಗಳನ್ನು ಉಪಯೋಗಿಸಿದನು: “ಬಳಲಿಹೋಗು” (ಕ್ಯಾಮ್‌ನೊ) ಮತ್ತು “ಬಿಟ್ಟುಕೊಡು” (ಎಕ್ಲಿಯೊಮಾಯ್). ಒಬ್ಬ ಬೈಬಲ್ ವಿದ್ವಾಂಸನಿಗನುಸಾರ, ಈ ಗ್ರೀಕ್ ಶಬ್ದಗಳು “ಅರಿಸಾಟ್ಟಲ್‌ನಿಂದ, ಗೆಲ್ಲುಕಂಬವನ್ನು ದಾಟಿದ ಬಳಿಕ ಸಡಿಲಗೊಂಡು ದೊಪ್ಪನೆ ಮುಗ್ಗರಿಸುವ ಓಟಗಾರರಿಗೆ ಬಳಸಲ್ಪಟ್ಟಿವೆ. [ಪೌಲನ ಪತ್ರದ] ವಾಚಕರು ಇನ್ನೂ ಓಟದಲಿದ್ದರು. ಅವರು ತಕ್ಕ ಕಾಲಕ್ಕೆ ಮೊದಲೇ ಬಿಟ್ಟುಕೊಡಬಾರದು. ಬಳಲಿಕೆಯ ಮೂಲಕ ಮೈಮರೆತು ಮುಗ್ಗರಿಸುವಂತೆ ತಮ್ಮನ್ನು ಬಿಡಬಾರದು. ಸಂಕಷ್ಟದ ಎದುರಿನಲ್ಲಿ ಬಿಡದೆ ಮುಂದುವರಿಯುವಂತೆ ಪುನಃ ಒಮ್ಮೆ ಅಲ್ಲಿ ಕರೆಕೊಡಲಾಗಿದೆ.”
20. ಇಂದು ನಮಗೆ ಪೌಲನ ಬುದ್ಧಿವಾದವು ಏಕೆ ಸಮಯೋಚಿತವಾಗಿದೆ?
20 ಪೌಲನ ಬುದ್ಧಿವಾದವು ಇಂದು ನಮಗೆ ಎಷ್ಟು ಸಮಯೋಚಿತ! ಒತ್ತಡಗಳ ವೃದ್ಧಿಯ ಎದುರಿನಲ್ಲಿ ನಮಗೆ, ಯಾರ ಕಾಲುಗಳು ಮುಗ್ಗರಿಸಿ ಬೀಳುವುದರಲ್ಲಿವೆಯೋ ಆ ಬಳಲಿಹೋದ ಓಟಗಾರನಂತಹ ಅನಿಸಿಕೆಯಾಗುವ ಸಮಯಗಳಿದ್ದಾವು. ಆದರೆ ಗೆಲ್ಲುಗೆರೆಗೆ ಅಷ್ಟು ಹತ್ತಿರವಿರುವಾಗ, ನಾವು ಬಿಟ್ಟುಕೊಡಲೇಬಾರದು! (2 ಪೂರ್ವಕಾಲವೃತ್ತಾಂತ 29:11) ನಮ್ಮ ವಿರೋಧಿ, “ಗರ್ಜಿಸುವ ಸಿಂಹ”ವಾದಾತನು ನಾವು ಅದನ್ನೇ ಮಾಡುವಂತೆ ಬಯಸುವನು. “ಬಳಲಿದವರಿಗೆ ಬಲವನ್ನು” ಕೊಡುವ ಒದಗಿಸುವಿಕೆಗಳನ್ನು ಮಾಡಿರುವುದು ಯೆಹೋವನ ಉಪಕಾರವೇ ಸರಿ. (ಯೆಶಾಯ 40:29, NW) ಈ ಒದಗಿಸುವಿಕೆಗಳಾವುವು ಮತ್ತು ಅವುಗಳ ಸದುಪಯೋಗವನ್ನು ನಾವು ಹೇಗೆ ಮಾಡಿಕೊಳ್ಳಬಲ್ಲೆವೆಂಬುದು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವುದು.
[ಅಧ್ಯಯನ ಪ್ರಶ್ನೆಗಳು]
a ದೃಷ್ಟಾಂತಕ್ಕಾಗಿ, ಕೆಟ್ಟ ಕೋಪದಂತಹ ಆಳವಾಗಿ ಬೇರೂರಿರುವ ವೈಯಕ್ತಿಕ ಪ್ರವೃತ್ತಿಯನ್ನು ಅಂಕೆಯಲ್ಲಿಡಲು ಅಥವಾ ಮುಷ್ಟಿ ಮೈಥುನದ ಒಂದು ಸಮಸ್ಯೆಯನ್ನು ನೀಗಿಸಲು ಕೆಲವರು ಹೋರಾಡುತ್ತಿರಬಹುದು.—ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಇವರಿಂದ ಪ್ರಕಾಶಿಸಲ್ಪಟ್ಟ ಅವೇಕ್!, ಮೇ 22, 1988, ಪುಟಗಳು 19-21; ನವೆಂಬರ್ 8, 1981, ಪುಟಗಳು 16-20; ಮತ್ತು ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್) ಪುಟಗಳು 198-211ನ್ನು ನೋಡಿ.
b ಜನವರಿ 15, 1993ರ ಕಾವಲಿನಬುರುಜು ಸಂಚಿಕೆಯ ಪುಟ 20-3ರಲ್ಲಿರುವ “ಹಿರಿಯರೇ—ವಹಿಸಿಕೊಡಿರಿ!” ಲೇಖನವನ್ನು ನೋಡಿರಿ.
ನಿಮ್ಮ ಉತ್ತರವೇನು?
◻ ಇತರರು ನಮ್ಮನ್ನು ನಿರಾಶೆಗೊಳಿಸುವಾಗ ಅಥವಾ ನೋಯಿಸುವಾಗ, ಬಿಟ್ಟುಕೊಡುವುದನ್ನು ನಾವು ಹೇಗೆ ವರ್ಜಿಸಬಲ್ಲೆವು?
◻ ದೋಷದ ಕುರಿತ ಯಾವ ಸಮತೂಕದ ನೋಟವು ನಮ್ಮನ್ನು ಬಿಟ್ಟುಕೊಡುವುದರಿಂದ ಉಳಿಸುತ್ತದೆ?
◻ ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?
◻ ಬಳಲಿಹೋಗುವುದನ್ನು ತಪ್ಪಿಸಲು ವಿನಯಶೀಲತೆಯು ಸಭಾ ಹಿರಿಯರಿಗೆ ಹೇಗೆ ಸಹಾಯ ಮಾಡಬಲ್ಲದು?
◻ ಇಬ್ರಿಯ 12:3ರ ಪೌಲನ ಬುದ್ಧಿವಾದವು ಇಂದು ನಮಗೆ ಸಮಯೋಚಿತವಾಗಿದೆ ಏಕೆ?