ಯೆಹೋವನ ಕುರಿಗಳಿಗೆ ಕೋಮಲ ಪರಾಮರಿಕೆಯ ಅಗತ್ಯವಿದೆ
“ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ. ನಾವು . . .ಆತನ ಪ್ರಜೆಯೂ ಆತನು ಪಾಲಿಸುವ ಹಿಂಡೂ [“ಕುರಿಗಳೂ,” NW] ಆಗಿದ್ದೇವೆ.”—ಕೀರ್ತನೆ 100:3.
1. ಯೆಹೋವನು ತನ್ನ ಸೇವಕರನ್ನು ಹೇಗೆ ಉಪಚರಿಸುತ್ತಾನೆ?
ಯೆಹೋವನು ಮಹಾ ಕುರುಬನು. ನಾವು ಆತನ ಸೇವಕರಾಗಿರುವುದಾದರೆ, ಆತನು ನಮ್ಮನ್ನು ತನ್ನ ಕುರಿಗಳಾಗಿ ವೀಕ್ಷಿಸಿ ನಮಗೆ ಕೋಮಲವಾದ ಪರಾಮರಿಕೆಯನ್ನು ನೀಡುತ್ತಾನೆ. ನಮ್ಮ ಸ್ವರ್ಗೀಯ ತಂದೆಯು ನಮಗೆ ಸಾಂತ್ವನವನ್ನೂ ಚೈತನ್ಯವನ್ನೂ ಕೊಟ್ಟು “ತನ್ನ ಹೆಸರಿಗೆ ತಕ್ಕಂತೆ ನೀತಿಮಾರ್ಗದಲ್ಲಿ” ನಮ್ಮನ್ನು ನಡಿಸುತ್ತಾನೆ. (ಕೀರ್ತನೆ 23:1-4) ಒಳ್ಳೇ ಕುರುಬನಾದ ಯೇಸು ಕ್ರಿಸ್ತನು ನಮ್ಮನ್ನು ಎಷ್ಟು ಪ್ರೀತಿಸುತ್ತಾನಂದರೆ ಆತನು ತನ್ನ ಪ್ರಾಣವನ್ನೇ ನಮಗಾಗಿ ಒಪ್ಪಿಸಿಕೊಟ್ಟನು.—ಯೋಹಾನ 10:7-15.
2. ದೇವಜನರು ತಮ್ಮನ್ನು ಯಾವ ಪರಿಸ್ಥಿತಿಯಲ್ಲಿ ಕಂಡುಕೊಳ್ಳುತ್ತಾರೆ?
2 ಕೋಮಲ ಪರಾಮರಿಕೆಯ ಗ್ರಾಹಕರೋಪಾದಿ, ಕೀರ್ತನೆಗಾರನೊಂದಿಗೆ ನಾವು ಹೀಗೆ ಹೇಳಬಲ್ಲೆವು: “ಯೆಹೋವನನ್ನು ಸಂತೋಷದಿಂದ ಸೇವಿಸಿರಿ; ಉತ್ಸಾಹಧ್ವನಿಮಾಡುತ್ತಾ ಆತನ ಸನ್ನಿಧಿಗೆ ಬನ್ನಿರಿ. ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ. ನಮ್ಮನ್ನು ಉಂಟುಮಾಡಿದವನು ಆತನೇ; ನಾವು ಆತನವರು. ಆತನ ಪ್ರಜೆಯೂ ಆತನು ಪಾಲಿಸುವ ಹಿಂಡೂ ಆಗಿದ್ದೇವೆ.” (ಕೀರ್ತನೆ 100:2, 3) ಹೌದು, ನಾವು ಹರ್ಷಭರಿತರೂ ಸುರಕ್ಷಿತರೂ ಆಗಿದ್ದೇವೆ. ಬಲವಾದ ಕಲ್ಲುಗೋಡೆಗಳಿರುವ ಒಂದು ಕುರಿಹಟ್ಟಿಯಲ್ಲಿ ಕೆಡುಕ ಕೊಳ್ಳೆಗಾರರಿಂದ ನಾವು ಸುರಕ್ಷಿತರೋ ಎಂಬಂತಿದೆ.—ಅರಣ್ಯಕಾಂಡ 32:16; 1 ಸಮುವೇಲ 24:3; ಚೆಫನ್ಯ 2:6.
ಹಿಂಡಿನ ಸಿದ್ಧಮನಸ್ಸಿನ ಕುರುಬರು
3. ನೇಮಿಸಲ್ಪಟ್ಟ ಕ್ರೈಸ್ತ ಹಿರಿಯರು ದೇವರ ಮಂದೆಯನ್ನು ಹೇಗೆ ಉಪಚರಿಸುತ್ತಾರೆ?
3 ದೇವರ ಕುರಿಗಳೋಪಾದಿ ನಾವು ಹರ್ಷಭರಿತರಾಗಿರುವುದು ಆಶ್ಚರ್ಯವಲ್ಲ! ನೇಮಿತ ಹಿರಿಯರು ನಮ್ಮಲ್ಲಿ ನಾಯಕತ್ವ ವಹಿಸುತ್ತಾರೆ. ಅವರು “ಜನಗಳನ್ನಾಳುವವ”ರಂತೆ ನಮ್ಮ ಮೇಲೆ ದೊರೆತನ ಮಾಡುವುದಿಲ್ಲ, ಅಥವಾ ನಮ್ಮ ನಂಬಿಕೆಯ ಮೇಲೆ ಯಜಮಾನರಾಗಿರಲು ಪ್ರಯತ್ನಿಸುವುದಿಲ್ಲ. (ಅರಣ್ಯಕಾಂಡ 16:13; ಮತ್ತಾಯ 20:25-28; 2 ಕೊರಿಂಥ 1:24; ಇಬ್ರಿಯ 13:7) ಬದಲಿಗೆ, ಅವರು ಅಪೊಸ್ತಲ ಪೇತ್ರನ ಬುದ್ಧಿವಾದವನ್ನು ಅನ್ವಯಿಸುವ ಪ್ರೀತಿಯುಳ್ಳ ಕುರುಬರಾಗಿದ್ದಾರೆ: “ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ ದೇವರ ಚಿತ್ತದ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚವಾದ ದ್ರವ್ಯಾಶೆಯಿಂದಲ್ಲ ಸಿದ್ಧಮನಸ್ಸಿನಿಂದಲೂ, ಮೇಲ್ವಿಚಾರಣೆಮಾಡಿರಿ. ದೇವರು ನಿಮ್ಮ ವಶದಲ್ಲಿಟ್ಟಿರುವ ಸಭೆಗಳ ಮೇಲೆ ದೊರೆತನಮಾಡುವವರಂತೆ ನಡೆಯದೆ ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ.” (1 ಪೇತ್ರ 5:2, 3) ಅಪೊಸ್ತಲ ಪೌಲನು ಜೊತೆ ಹಿರಿಯರಿಗೆ ಹೇಳಿದ್ದು: “ದೇವರು ಸ್ವರಕ್ತ [“ತನ್ನ ಸ್ವಂತ ಮಗನ ರಕ್ತ,” NW]ದಿಂದ ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.” ಮತ್ತು ಪವಿತ್ರಾತ್ಮದಿಂದ ನೇಮಿತರಾದ ಈ ಪುರುಷರು “ಹಿಂಡನ್ನು ಕೋಮಲವಾಗಿ ಉಪಚರಿಸು”ತ್ತಿರುವುದಕ್ಕಾಗಿ ಕುರಿಗಳೆಷ್ಟು ಆಭಾರಿಗಳಾಗಿವೆ!—ಅ. ಕೃತ್ಯಗಳು 20:28-30, NW.
4. ಮಂದೆಯೊಂದಿಗೆ ಯಾವ ರೀತಿಯ ಸಂಬಂಧಕ್ಕಾಗಿ ಚಾರ್ಲ್ಸ್ ಟಿ. ರಸಲ್ ಇವರು ಪ್ರಖ್ಯಾತರಾಗಿದ್ದರು?
4 ಯೆಹೋವನ ಮಂದೆಯನ್ನು ಕೋಮಲವಾದ ವಿಧದಲ್ಲಿ ಉಪಚರಿಸುವ “ಸಭಾಪಾಲಕರು” ಅಥವಾ “ಕುರುಬರು” ಆಗಿರುವಂತೆ ಯೇಸು ಸಭೆಗೆ ‘ಪುರುಷರಲ್ಲಿ ಕೊಡುಗೆಗಳನ್ನು’ ಕೊಟ್ಟನು. (ಎಫೆಸ 4:8, 11; ಕಿಂಗ್ ಜೇಮ್ಸ್ ವರ್ಷನ್) ವಾಚ್ ಟವರ್ ಸೊಸೈಟಿಯ ಮೊದಲನೆಯ ಅಧ್ಯಕ್ಷರಾದ ಚಾರ್ಲ್ಸ್ ಟಿ. ರಸಲ್ ಈ ಪುರುಷರಲ್ಲಿ ಒಬ್ಬರಾಗಿದ್ದರು. ಮುಖ್ಯ ಕುರುಬನಾದ ಯೇಸು ಕ್ರಿಸ್ತನ ಕೈಕೆಳಗೆ ಮಂದೆಯನ್ನು ಪರಿಪಾಲಿಸುವುದರಲ್ಲಿ ಅವರ ಪ್ರೀತಿಯ ಮತ್ತು ಕನಿಕರದ ಚಟುವಟಿಕೆಗಳಿಗಾಗಿ ಅವರನ್ನು ಪಾಸ್ಟರ್ ರಸಲ್ ಎಂದು ಕರೆಯಲಾಗಿತ್ತು. ಇಂದು, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯಿಂದ ಕ್ರೈಸ್ತ ಹಿರಿಯರು ನೇಮಿಸಲ್ಪಡುತ್ತಾರೆ, ಮತ್ತು “ಸಭಾಪಾಲಕ,” “ಹಿರಿಯ,” ಅಥವಾ “ಬೋಧಕ” ಎಂಬ ಪದಗಳನ್ನು ಬಿರುದುಗಳಾಗಿ ಬಳಸದಂತೆ ಜಾಗ್ರತೆ ವಹಿಸಲಾಗುತ್ತದೆ. (ಮತ್ತಾಯ 23:8-12) ಆದರೂ, ಪ್ರಚಲಿತ ಹಿರಿಯರು ಯೆಹೋವನ ಹುಲ್ಲುಗಾವಲಿನ ಕುರಿಗಳ ಪ್ರಯೋಜನಕ್ಕಾಗಿ ಸಭಾಪಾಲಕನ ಅಥವಾ ಕುರುಬನ ಒಂದು ಕೆಲಸವನ್ನು ಮಾಡುತ್ತಾರೆ.
5. ಹೊಸಬರು ಕ್ರೈಸ್ತ ಸಭೆಯಲ್ಲಿ ನೇಮಿಸಲ್ಪಟ್ಟ ಹಿರಿಯರ ಪರಿಚಯವನ್ನು ಮಾಡಿಕೊಳ್ಳಬೇಕು ಏಕೆ?
5 ಕುರುಬರೋಪಾದಿ ಹಿರಿಯರು ಹೊಸಬರ ಆತ್ಮಿಕ ಪ್ರಗತಿಯಲ್ಲಿಂದು ಗಣನೀಯ ಪಾತ್ರವನ್ನು ವಹಿಸುತ್ತಾರೆ. ಆದುದರಿಂದ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಹೊಸ ಪುಸ್ತಕವು 168ನೆಯ ಪುಟದಲ್ಲಿ ಹೇಳುವುದು: “ಸಭೆಯ ನೇಮಿತ ಹಿರಿಯರ ಪರಿಚಯ ಮಾಡಿಕೊಳ್ಳಿರಿ. ಅವರಿಗೆ ದೇವರ ಜ್ಞಾನವನ್ನು ಅನ್ವಯಿಸುವುದರಲ್ಲಿ ಹೆಚ್ಚು ಅನುಭವವಿದೆ, ಏಕೆಂದರೆ ಬೈಬಲಿನಲ್ಲಿ ಕೊಡಲ್ಪಟ್ಟಿರುವ ಮೇಲ್ವಿಚಾರಕರ ಅರ್ಹತೆಗಳನ್ನು ಅವರು ತಲಪಿದ್ದಾರೆ. (1 ತಿಮೊಥೆಯ 3:1-7; ತೀತ 1:5-9) ದೇವರ ಆವಶ್ಯಕತೆಗಳೊಂದಿಗೆ ಘರ್ಷಿಸುವ ಒಂದು ಚಟವನ್ನು ಅಥವಾ ಒಂದು ಗುಣವನ್ನು ಜಯಿಸಲು ನಿಮಗೆ ಆತ್ಮಿಕ ಸಹಾಯವು ಅವಶ್ಯವಿರುವಲ್ಲಿ, ಅವರಲ್ಲಿ ಒಬ್ಬನನ್ನು ಸಮೀಪಿಸಲು ಹಿಂಜರಿಯಬೇಡಿರಿ. ಹಿರಿಯರು ಪೌಲನ ಈ ಸಲಹೆಯನ್ನು ಅನುಸರಿಸುತ್ತಾರೆಂದು ನೀವು ಕಂಡುಕೊಳ್ಳುವಿರಿ: ‘ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರಲ್ಲಿಯೂ ದೀರ್ಘಶಾಂತರಾಗಿರಿ.’—1 ಥೆಸಲೊನೀಕ 2:7, 8; 5:14.”
ಹೊಸಬರು ಸಾರಲು ಬಯಸುವಾಗ
6. ಒಬ್ಬ ಬೈಬಲ್ ವಿದ್ಯಾರ್ಥಿಯು ರಾಜ್ಯ ಪ್ರಚಾರಕನಾಗಲು ಬಯಸಿದರೆ ಯಾವ ಕಾರ್ಯವಿಧಾನವನ್ನು ಅನುಸರಿಸಲಾಗುತ್ತದೆ?
6 ಒಬ್ಬ ಬೈಬಲ್ ವಿದ್ಯಾರ್ಥಿಯು ಜ್ಞಾನವನ್ನು ಪಡೆದುಕೊಂಡು ಸ್ವಲ್ಪ ಸಮಯ ಕೂಟಗಳಿಗೆ ಹಾಜರಾದಾಗ, ಒಬ್ಬ ರಾಜ್ಯದ ಪ್ರಚಾರಕನಾಗಲು, ಸುವಾರ್ತೆಯನ್ನು ಸಾರುವವನಾಗಲು ಅವನು ಬಯಸಬಹುದು. (ಮಾರ್ಕ 13:10) ಹಾಗಿರುವಲ್ಲಿ, ಅವನೊಂದಿಗೆ ಬೈಬಲ್ ಅಧ್ಯಯನ ನಡಸುವ ಸಾಕ್ಷಿಯು ಅಧ್ಯಕ್ಷ ಮೇಲ್ವಿಚಾರಕನನ್ನು ಸಂಪರ್ಕಿಸಬೇಕು. ಅವನು ಸಭಾ ಸೇವಾ ಕಮಿಟಿಯ ಹಿರಿಯರಲ್ಲಿ ಒಬ್ಬ ಹಿರಿಯ ಮತ್ತು ಇನ್ನೊಬ್ಬ ಹಿರಿಯನು ಬೈಬಲ್ ವಿದ್ಯಾರ್ಥಿ ಮತ್ತು ಅವನ ಶಿಕ್ಷಕನೊಂದಿಗೆ ಭೇಟಿಮಾಡುವಂತೆ ಏರ್ಪಡಿಸುವನು. ಚರ್ಚೆಯು ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕದ ಪುಟ 98 ಮತ್ತು 99ರಲ್ಲಿ ಆಧಾರಿತವಾಗಿರುವುದು. ಈ ಹೊಸಬನು ಬೈಬಲಿನ ಮೂಲ ಬೋಧನೆಗಳನ್ನು ನಂಬುತ್ತಾನೆಂದೂ ಮತ್ತು ದೇವರ ಮೂಲತತ್ವಗಳಿಗೆ ಹೊಂದಿಕೆಯಾಗಿದ್ದಾನೆಂದೂ ಈ ಇಬ್ಬರು ಹಿರಿಯರು ಕಂಡುಕೊಂಡಲ್ಲಿ, ಅವನು ಸಾರ್ವಜನಿಕ ಶುಶ್ರೂಷೆಯಲ್ಲಿ ಪಾಲಿಗನಾಗಲು ಯೋಗ್ಯನೆಂದು ಅವನಿಗೆ ತಿಳಿಸಲಾಗುವುದು.a ಕ್ಷೇತ್ರ ಸೇವೆಯ ವರದಿಯನ್ನು ಹಾಕುವ ಮೂಲಕ ಅವನು ತನ್ನ ಶುಶ್ರೂಷೆಯನ್ನು ವರದಿಸುವಾಗ, ಅದು ಅವನ ಹೆಸರಿನಲ್ಲಿ ಮಾಡಲ್ಪಡುವ ಸಭಾ ಪ್ರಚಾರಕ ರೆಕಾರ್ಡಿನಲ್ಲಿ ನಮೂದಿಸಲ್ಪಡುವುದು. ಈ ಹೊಸಬನು ಈಗ ತನ್ನ ಸಾಕ್ಷಿಕಾರ್ಯವನ್ನು ಹರ್ಷದಿಂದ ‘ದೇವರ ವಾಕ್ಯವನ್ನು ಪ್ರಚಾರಮಾಡುವ’ ಇತರ ಲಕ್ಷಾಂತರ ಮಂದಿಯೊಂದಿಗೆ ವರದಿಸಬಲ್ಲನು. (ಅ. ಕೃತ್ಯಗಳು 13:5) ಅವನು ಅಸ್ನಾತ ಪ್ರಚಾರಕನೆಂಬ ಒಂದು ಪ್ರಕಟನೆಯನ್ನು ಸಭೆಗೆ ಮಾಡಲಾಗುವುದು.
7, 8. ಒಬ್ಬ ಅಸ್ನಾತ ಪ್ರಚಾರಕನಿಗೆ ಶುಶ್ರೂಷೆಯಲ್ಲಿ ಯಾವ ವಿಧಗಳಲ್ಲಿ ಸಹಾಯವನ್ನು ಕೊಡಬಹುದು?
7 ಒಬ್ಬ ಅಸ್ನಾತ ಪ್ರಚಾರಕನಿಗೆ ಹಿರಿಯರ ಮತ್ತು ಇತರ ಪಕ್ವತೆಯುಳ್ಳ ಕ್ರೈಸ್ತರ ಸಹಾಯದ ಅಗತ್ಯವಿದೆ. ಉದಾಹರಣೆಗೆ, ಅವನ ಆತ್ಮಿಕ ಪ್ರಗತಿಯು ಅವನು ಹಾಜರಾಗುವ ಸಭಾ ಪುಸ್ತಕ ಅಭ್ಯಾಸದ ನಿರ್ವಾಹಕನಿಗೆ ಒಂದು ಅಭಿರುಚಿಯ ವಿಷಯವಾಗಿದೆ. ಮನೆಮನೆಯ ಸೇವೆಯಲ್ಲಿ ಪರಿಣಾಮಕಾರಿಯಾಗಿ ಮಾತನಾಡುವುದು ಹೊಸ ಪ್ರಚಾರಕನಿಗೆ ಕಷ್ಟಕರವಾಗಿ ಕಾಣಬಹುದು. (ಅ. ಕೃತ್ಯಗಳು 20:20) ಹೀಗೆ ಅವನು ಸಹಾಯವನ್ನು ಸ್ವಾಗತಿಸುವ ಸಂಭಾವ್ಯತೆ ಇದೆ, ವಿಶೇಷವಾಗಿ ತನ್ನೊಡನೆ ಜ್ಞಾನ ಪುಸ್ತಕದಲ್ಲಿ ಬೈಬಲ್ ಅಧ್ಯಯನಗಳನ್ನು ನಡಸುತ್ತಿರುವ ವ್ಯಕ್ತಿಯಿಂದ. ಅಂತಹ ಪ್ರಾಯೋಗಿಕ ಸಹಾಯವು ಸೂಕ್ತವಾಗಿದೆ ಯಾಕೆಂದರೆ ಯೇಸು ಕ್ರಿಸ್ತನೂ ತನ್ನ ಶಿಷ್ಯರನ್ನು ಶುಶ್ರೂಷೆಗಾಗಿ ತಯಾರು ಮಾಡಿದ್ದನು.—ಮಾರ್ಕ 6:7-13; ಲೂಕ 10:1-22.
8 ನಮ್ಮ ಶುಶ್ರೂಷೆಯು ಪರಿಣಾಮಕಾರಿಯಾಗಬೇಕಾದರೆ, ಒಳ್ಳೆಯ ಪೂರ್ವ ತಯಾರಿಯು ಅತ್ಯಾವಶ್ಯಕ. ಆದುದರಿಂದ, ನಮ್ಮ ರಾಜ್ಯದ ಸೇವೆಯ ತಿಂಗಳ ಸಂಚಿಕೆಯಲ್ಲಿ ಸೂಚಿಸಲಾದ ಪ್ರಸಂಗಗಳನ್ನು ಮೊದಲು ಇಬ್ಬರೂ ಪ್ರಚಾರಕರು ಕೂಡಿ ಅಭ್ಯಾಸಿಸಬಹುದು. ಅವರು ತಮ್ಮ ಕ್ಷೇತ್ರ ಸೇವೆಯನ್ನು ಆರಂಭಿಸುವಾಗ, ಅನುಭವಿಯು ಮೊದಲಿನ ಒಂದೆರಡು ಮನೆಗಳಲ್ಲಿ ಮಾತಾಡಬಹುದು. ಒಂದು ಸ್ನೇಹಪೂರ್ವಕ ಪೀಠಿಕೆಯ ಅನಂತರ, ಇಬ್ಬರೂ ಪ್ರಚಾರಕರು ಸಾಕ್ಷಿಕೊಡುವುದರಲ್ಲಿ ಪಾಲಿಗರಾಗಬಹುದು. ಕೆಲವು ವಾರಗಳ ತನಕ ಶುಶ್ರೂಷೆಯಲ್ಲಿ ಒಟ್ಟಾಗಿ ಸೇವೆ ಮಾಡುವಿಕೆಯು ಒಳ್ಳೆಯ ಪುನರ್ಭೇಟಿಗಳಿಗೆ ಮತ್ತು ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದಲ್ಲಿ ಒಂದು ಗೃಹ ಬೈಬಲ್ ಅಧ್ಯಯನಕ್ಕೂ ನಡಿಸಬಹುದು. ಅಧಿಕ ಅನುಭವಿಯಾದ ಪ್ರಚಾರಕನು ಸ್ವಲ್ಪ ಸಮಯದ ತನಕ ಆ ಅಭ್ಯಾಸವನ್ನು ನಿರ್ವಹಿಸಬಹುದು ಮತ್ತು ಅನಂತರ ಹೊಸ ರಾಜ್ಯ ಪ್ರಚಾರಕನಿಗೆ ಅದನ್ನು ವಹಿಸಿಕೊಡಬಹುದು. ದೇವರ ಜ್ಞಾನಕ್ಕಾಗಿ ಆ ಬೈಬಲ್ ವಿದ್ಯಾರ್ಥಿಯು ಗಣ್ಯತೆಯನ್ನು ಪ್ರದರ್ಶಿಸಿದಲ್ಲಿ, ಇಬ್ಬರೂ ಪ್ರಚಾರಕರು ಎಷ್ಟು ಸಂತೋಷಪಡುವರು!
9. ಪ್ರಚಾರಕನು ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಅಪೇಕ್ಷಿಸುವಾಗ ಯಾವ ಏರ್ಪಾಡುಗಳು ಮಾಡಲ್ಪಡುತ್ತವೆ?
9 ಅಸ್ನಾತ ಪ್ರಚಾರಕನು ಆತ್ಮಿಕವಾಗಿ ಪ್ರಗತಿಯನ್ನು ಮಾಡಿದ ಹಾಗೆ, ಅವನು ಪ್ರಾರ್ಥನೆಯಲ್ಲಿ ದೇವರಿಗೆ ಒಂದು ಸಮರ್ಪಣೆಯನ್ನು ಮಾಡಬಹುದು ಮತ್ತು ದೀಕ್ಷಾಸ್ನಾನ ಪಡೆಯಲು ಇಚ್ಛಿಸಬಹುದು. (ಹೋಲಿಸಿ ಮಾರ್ಕ 1:9-11.) ದೀಕ್ಷಾಸ್ನಾನ ಪಡೆದುಕೊಳ್ಳುವ ತನ್ನ ಅಪೇಕ್ಷೆಯನ್ನು ಅವನು ಸಭೆಯ ಅಧ್ಯಕ್ಷ ಮೇಲ್ವಿಚಾರಕನಿಗೆ ತಿಳಿಸಬೇಕು, ಮತ್ತು ಅವನು ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕದ ಪುಟ 175-218ರಲ್ಲಿರುವ ಪ್ರಶ್ನೆಗಳನ್ನು ಪ್ರಚಾರಕನೊಂದಿಗೆ ಪುನರ್ವಿಮರ್ಶಿಸಲು ಹಿರಿಯರನ್ನು ಏರ್ಪಡಿಸುವನು. ನಾಲ್ಕು ಭಾಗಗಳಾಗಿ ವಿಭಾಗಿಸಲ್ಪಟ್ಟ ಪ್ರಶ್ನೆಗಳನ್ನು ಸಾಧ್ಯವಿದ್ದರೆ ಮೂವರು ಬೇರೆ ಬೇರೆ ಹಿರಿಯರು ಮೂರು ಅವಧಿಗಳಲ್ಲಿ ಆವರಿಸಬಹುದಾಗಿದೆ. ಅಸ್ನಾತ ಪ್ರಚಾರಕನಿಗೆ ಬೈಬಲ್ ಬೋಧನೆಗಳ ಸಮಂಜಸ ತಿಳಿವಳಿಕೆ ಇದೆ ಮತ್ತು ಬೇರೆ ವಿಷಯಗಳಲ್ಲಿ ಅವನಿಗೆ ಯೋಗ್ಯತೆ ಇದೆಯೆಂದು ಅವರು ಸಮ್ಮತಿಸಿದರೆ, ಅವನು ದೀಕ್ಷಾಸ್ನಾನ ಮಾಡಿಸಿಕೊಳ್ಳಬಹುದೆಂದು ಅವನಿಗೆ ಅವರು ಹೇಳುವರು. ಸಮರ್ಪಣೆ ಮತ್ತು ದೀಕ್ಷಾಸ್ನಾನದ ಪರಿಣಾಮವಾಗಿ ಅವನು, ರಕ್ಷಣೆಗೆ “ಗುರುತು” ಮಾಡಲ್ಪಟ್ಟವನಾಗುವನು.—ಯೆಹೆಜ್ಕೇಲ 9:4-6.
ವಿಶೇಷ ಅಗತ್ಯಗಳನ್ನು ಸಂಧಿಸುವುದು
10. ಜ್ಞಾನ ಪುಸ್ತಕದಲ್ಲಿ ತನ್ನ ಅಭ್ಯಾಸವನ್ನು ಮುಗಿಸಿ ದೀಕ್ಷಾಸ್ನಾನ ಮಾಡಿಸಿಕೊಂಡ ಬಳಿಕ, ಒಬ್ಬ ವ್ಯಕ್ತಿಯು ತನ್ನ ಆತ್ಮಿಕ ಜ್ಞಾನವನ್ನು ಹೇಗೆ ಅಧಿಕಗೊಳಿಸುವನು?
10 ಜ್ಞಾನ ಪುಸ್ತಕದಲ್ಲಿ ಒಬ್ಬ ವ್ಯಕ್ತಿಯು ತನ್ನ ಬೈಬಲ್ ಅಧ್ಯಯನವನ್ನು ಮುಗಿಸಿ ದೀಕ್ಷಾಸ್ನಾನ ಮಾಡಿಸಿಕೊಂಡ ಮೇಲೆ, ಒಬ್ಬನೇ ಸತ್ಯ ದೇವರ ಆರಾಧನೆಯಲ್ಲಿ ಐಕ್ಯರು ಇಂತಹ ಎರಡನೆಯ ಪುಸ್ತಕವನ್ನು ಅವನೊಂದಿಗೆ ವಿಧಿರೂಪವಾಗಿ ಅಧ್ಯಯನಿಸುವ ಅಗತ್ಯವಿಲ್ಲದಿರಬಹುದು.b ಇತ್ತೀಚೆಗೆ ದೀಕ್ಷಾಸ್ನಾನ ಮಾಡಿಸಿಕೊಂಡ ಆ ವ್ಯಕ್ತಿಯು ಕ್ರೈಸ್ತ ಕೂಟಗಳಿಗಾಗಿ ತಯಾರುಮಾಡುವಾಗ ಮತ್ತು ಅವನ್ನು ಕ್ರಮವಾಗಿ ಹಾಜರಾಗುವಾಗ ಹೆಚ್ಚನ್ನು ಕಲಿತುಕೊಳ್ಳುವನು ನಿಶ್ಚಯ. ಸತ್ಯಕ್ಕಾಗಿರುವ ಅವನ ದಾಹವು, ಕ್ರೈಸ್ತ ಪ್ರಕಾಶನಗಳನ್ನು ಖಾಸಗಿಯಾಗಿ ಓದಿ ಅಭ್ಯಾಸ ಮಾಡುವಂತೆ ಮತ್ತು ಶಾಸ್ತ್ರೀಯ ವಿಷಯಗಳನ್ನು ಜೊತೆ ವಿಶ್ವಾಸಿಗಳೊಂದಿಗೆ ಚರ್ಚಿಸುವಂತೆ ಪ್ರೇರಿಸುವಾಗಲೂ ಅವನು ಅಧಿಕ ಜ್ಞಾನವನ್ನು ಪಡೆದುಕೊಳ್ಳುವನು. ಆದರೆ ವಿಶೇಷ ಅಗತ್ಯಗಳು ತಲೆದೋರಿದಾಗ ಏನು?
11. (ಎ) ಅಪೊಲ್ಲೋಸನು ಪ್ರಿಸ್ಕಿಲ್ಲ ಮತ್ತು ಅಕ್ವಿಲರಿಂದ ಹೇಗೆ ಸಹಾಯ ಮಾಡಲ್ಪಟ್ಟನು? (ಬಿ) ವಿವಾಹವಾಗಲು ಯೋಚಿಸುವ ಇತ್ತೀಚೆಗೆ ಸ್ನಾತನಾದ ಒಬ್ಬ ಯುವ ಪ್ರೌಢನಿಗೆ ಯಾವ ಸಹಾಯವನ್ನು ಕೊಡಬಹುದಾಗಿದೆ?
11 “ಶಾಸ್ತ್ರಗಳಲ್ಲಿ ಪ್ರವೀಣ”ನಾಗಿದ್ದ ಮತ್ತು ಯೇಸುವಿನ ಕುರಿತು ಸೂಕ್ಷ್ಮವಾಗಿ ಉಪದೇಶಿಸಿದ ಅಪೊಲ್ಲೋಸನು ಸಹ, ಅನುಭವಸ್ಥ ಕ್ರೈಸ್ತರಾದ ಪ್ರಿಸ್ಕಿಲ್ಲ ಮತ್ತು ಅಕ್ವಿಲರು “ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸೂಕ್ಷ್ಮವಾಗಿ ವಿವರಿಸಿದಾಗ” ಪ್ರಯೋಜನವನ್ನು ಪಡೆದನು. (ಅ. ಕೃತ್ಯಗಳು 18:24-26; ಹೋಲಿಸಿ ಅ. ಕೃತ್ಯಗಳು 19:1-7.) ಆದುದರಿಂದ, ಇತ್ತೀಚೆಗೆ ಸ್ನಾತನಾದ ಒಬ್ಬ ಯುವ ಪ್ರೌಢನು ಪ್ರಣಯಯಾಚನೆ ಮತ್ತು ವಿವಾಹವನ್ನು ಮಾಡಿಕೊಳ್ಳಲು ಯೋಚಿಸುತ್ತಾನೆಂದು ಭಾವಿಸೋಣ. ವಾಚ್ ಟವರ್ ಪ್ರಕಾಶನಗಳಲ್ಲಿ ಈ ವಿಷಯಗಳ ಮಾಹಿತಿಯನ್ನು ಕಂಡುಕೊಳ್ಳಲು ಒಬ್ಬ ಹೆಚ್ಚು ಅನುಭವಿಯಾದ ಕ್ರೈಸ್ತನು ಅವನಿಗೆ ಸಹಾಯ ಮಾಡಬಹುದು. ದೃಷ್ಟಾಂತಕ್ಕಾಗಿ, ಈ ವಿಷಯದ ಕುರಿತ ಸಹಾಯಕರ ಮಾಹಿತಿಯು ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧ್ಯ ಉತ್ತರಗಳು (ಇಂಗ್ಲಿಷ್) ಎಂಬ ಪುಸ್ತಕದ ಭಾಗ 7ರಲ್ಲಿ ಕಂಡುಬರುತ್ತದೆ.c ಇದರಲ್ಲಿ ಒಂದು ಕ್ರಮದ ಅಧ್ಯಯನವು ಒಳಗೂಡದಿದ್ದರೂ, ಅವನೊಂದಿಗೆ ಬೈಬಲ್ ಅಧ್ಯಯನ ನಡಸಿದ ಪ್ರಚಾರಕನು ಈ ಸಮಾಚಾರವನ್ನು ಹೊಸಬನೊಂದಿಗೆ ಚರ್ಚಿಸಬಹುದು.
12. ಸಮಸ್ಯೆಗಳಿರುವ ಹೊಸತಾಗಿ ಸ್ನಾತರಾದ ವಿವಾಹದ ಜೊತೆಗಳಿಗೆ ಯಾವ ಸಹಾಯವನ್ನು ಒದಗಿಸಬಹುದು?
12 ಇನ್ನೊಂದು ಉದಾಹರಣೆಯನ್ನು ಗಮನಿಸಿರಿ. ಪ್ರಾಯಶಃ ಹೊಸತಾಗಿ ಸ್ನಾತರಾದ ವಿವಾಹದ ಜೊತೆಗಳಿಗೆ ದೈವಿಕ ಮೂಲತತ್ವಗಳನ್ನು ಅನ್ವಯಿಸಲಿಕ್ಕೆ ಸಮಸ್ಯೆಗಳಿವೆ. ಅವರು ಒಬ್ಬ ಹಿರಿಯನನ್ನು ಸಂಪರ್ಕಿಸಬಹುದು, ಅವನು ಅವರೊಂದಿಗೆ ಶಾಸ್ತ್ರವನ್ನು ಚರ್ಚಿಸಲು ಹಲವು ಸಂಜೆಗಳನ್ನು ಕಳೆದು ಅವರ ಗಮನವನ್ನು ವಾಚ್ ಟವರ್ ಪ್ರಕಾಶನಗಳಲ್ಲಿ ಕಂಡುಬರುವ ಮಾಹಿತಿಗೆ ನಡಸಬಲ್ಲನು. ಆದರೂ, ಹಿರಿಯನು ದಂಪತಿಗಳೊಂದಿಗೆ ಒಂದು ಕ್ರಮದ ಬೈಬಲ್ ಅಧ್ಯಯನವನ್ನು ಮರುಸ್ಥಾಪಿಸನು.
ಒಬ್ಬ ಹೊಸಬನು ತಪ್ಪುಮಾಡುವಲ್ಲಿ
13. ತಪ್ಪು ಮಾಡಿದರೂ ಪಶ್ಚಾತ್ತಾಪ ತೋರಿಸುವ ಹೊಸತಾಗಿ ಸ್ನಾತ ವ್ಯಕ್ತಿಗೆ ಸಭಾ ಹಿರಿಯರು ಏಕೆ ಕರುಣೆ ತೋರಿಸಬೇಕು?
13 ಹಿರಿಯರು ಮಹಾ ಕುರುಬನಾದ ಯೆಹೋವನನ್ನು ಅನುಕರಿಸುತ್ತಾರೆ, ಆತನನ್ನುವುದು: ‘ನಾನೇ ನನ್ನ ಕುರಿಗಳನ್ನು ಮೇಯಿಸುವೆನು. . . . ಮುರಿದ ಅಂಗವನ್ನು ಕಟ್ಟುವೆನು; ದುರ್ಬಲವಾದದ್ದನ್ನು ಬಲಗೊಳಿಸುವೆನು.’ (ಯೆಹೆಜ್ಕೇಲ 34:15, 16; ಎಫೆಸ 5:1) ಆ ಭಾವನೆಗೆ ಹೊಂದಿಕೆಯಲ್ಲಿ, ಸಂದೇಹಗಳಿದ್ದ ಅಥವಾ ಪಾಪಕ್ಕೆ ಬಿದ್ದವರಾದ ಅಭಿಷಿಕ್ತ ಕ್ರೈಸ್ತರಿಗೆ ಕರುಣೆಯು ತೋರಿಸಲ್ಪಡಬೇಕೆಂದು ಶಿಷ್ಯ ಯೂದನು ಪ್ರಚೋದಿಸಿದನು. (ಯೂದ 22, 23) ಅನುಭವಸ್ಥ ಕ್ರೈಸ್ತರಿಂದ ನ್ಯಾಯಸಮ್ಮತವಾಗಿಯೇ ಬಹಳ ಹೆಚ್ಚನ್ನು ನಾವು ಅಪೇಕ್ಷಿಸುತ್ತೇವಾದರೂ—ಪಾಪ ಮಾಡಿದರೂ ಪಶ್ಚಾತ್ತಾಪಪಡುವ—ಹೊಸತಾಗಿ ಸ್ನಾತ ವ್ಯಕ್ತಿಯಾದ ಬರಿಯ ಕುರಿಮರಿಗೆ ಅವಶ್ಯವಾಗಿ ಕರುಣೆಯು ತೋರಿಸಲ್ಪಡಬೇಕು. (ಲೂಕ 12:48; 15:1-7) ಆದುದರಿಂದ ‘ಯೆಹೋವನಿಗೋಸ್ಕರ ನ್ಯಾಯತೀರಿಸುವ’ ಹಿರಿಯರು, ಅಂಥ ಕುರಿಗಳಿಗೆ ಕೋಮಲ ಗಮನವನ್ನು ಕೊಟ್ಟು ಶಾಂತಭಾವದಿಂದ ತಿದ್ದಿ ಅವರನ್ನು ಸರಿಮಾಡಬೇಕು.—2 ಪೂರ್ವಕಾಲವೃತ್ತಾಂತ 19:6; ಅ. ಕೃತ್ಯಗಳು 20:28, 29; ಗಲಾತ್ಯ 6:1.d
14. ಇತ್ತೀಚೆಗೆ ದೀಕ್ಷಾಸ್ನಾನ ಮಾಡಿಸಿಕೊಂಡ ವ್ಯಕ್ತಿಯು ಒಂದು ಗಂಭೀರವಾದ ಪಾಪವನ್ನು ಮಾಡುವಾಗ ಏನು ಮಾಡಬೇಕು, ಮತ್ತು ಅವನಿಗೆ ಹೇಗೆ ಸಹಾಯ ಕೊಡಸಾಧ್ಯವಿದೆ?
14 ಹಾಗಾದರೆ, ಇತ್ತೀಚೆಗೆ ದೀಕ್ಷಾಸ್ನಾನಮಾಡಿಸಿಕೊಂಡ ಒಬ್ಬ ಪ್ರಚಾರಕನಿಗೆ ಹಿಂದೆ ಒಂದು ಕುಡಿಯುವ ಸಮಸ್ಯೆಯಿತ್ತೆಂದೂ ಮತ್ತು ಅದು ಹಿಮ್ಮರಳಿ ಒಂದೆರಡು ಸಂದರ್ಭಗಳಲ್ಲಿ ಅದರಲ್ಲಿ ಅವನು ಮಿತಿಮೀರಿ ಲೋಲುಪನಾದನೆಂದೂ ಭಾವಿಸೋಣ. ಅಥವಾ, ಪ್ರಾಯಶಃ ಒಂದು ದೀರ್ಘಾವಧಿಯ ತಂಬಾಕು ಚಟವನ್ನು ಅವನು ನೀಗಿಸಿಕೊಂಡನಾದರೂ ಒಂದೆರಡು ಸಾರಿ ಖಾಸಗಿಯಾಗಿ ಧೂಮಪಾನ ಮಾಡುವ ಶೋಧನೆಗೆ ಬಲಿಬಿದ್ದನು ಎಂದೆಣಿಸೋಣ. ನಮ್ಮ ಹೊಸ ಸಹೋದರನು ದೇವರ ಕ್ಷಮೆಗಾಗಿ ಬೇಡಿಕೊಂಡರೂ, ಆ ಪಾಪವು ವಾಡಿಕೆಯಾಗದಂತೆ ಒಬ್ಬ ಹಿರಿಯನ ಸಹಾಯವನ್ನು ಅವನು ಕೋರಬೇಕು. (ಕೀರ್ತನೆ 32:1-5; ಯಾಕೋಬ 5:14, 15) ಹಿರಿಯರಲ್ಲಿ ಒಬ್ಬನಿಗೆ ಅವನು ತನ್ನ ತಪ್ಪನ್ನು ತಿಳಿಸುವಾಗ, ಆ ಹಿರಿಯನು ಆ ಹೊಸಬನನ್ನು ಕರುಣೆಯಿಂದ ತಿದ್ದಿ ಸರಿಪಡಿಸಲು ಪ್ರಯತ್ನಿಸಬೇಕು. (ಕೀರ್ತನೆ 130:3) ಅನಂತರ ಅವನು ನೆಟ್ಟಗೆ ಮುಂದೆ ನಡೆಯುವಂತೆ ನೆರವಾಗಲು ಶಾಸ್ತ್ರೀಯ ಬುದ್ಧಿವಾದವು ಸಾಕಾಗಬಹುದು. (ಇಬ್ರಿಯ 12:12, 13) ಯಾವ ಹೆಚ್ಚಿನ ನೆರವು ಕೊಡಲ್ಪಡಬೇಕೆಂಬುದನ್ನು ನಿರ್ಧರಿಸಲು, ಈ ಹಿರಿಯನು ಪರಿಸ್ಥಿತಿಗಳನ್ನು ಸಭೆಯ ಅಧ್ಯಕ್ಷ ಮೇಲ್ವಿಚಾರಕನೊಂದಿಗೆ ಚರ್ಚಿಸುವನು.
15. ಕೆಲವು ವಿದ್ಯಮಾನಗಳಲ್ಲಿ, ಇತ್ತೀಚೆಗೆ ದೀಕ್ಷಾಸ್ನಾನ ಪಡೆದುಕೊಂಡ ಒಬ್ಬ ವ್ಯಕ್ತಿಯು ಪಾಪ ಮಾಡುವಾಗ ಯಾವುದು ಅವಶ್ಯವಾಗಿರಬಹುದು?
15 ಆದರೂ, ಕೆಲವು ವಿದ್ಯಮಾನಗಳಲ್ಲಿ ಹೆಚ್ಚು ವಿಷಯವು ಬೇಕಾದೀತು. ಅಲ್ಲಿ ಕುಖ್ಯಾತಿ, ಮಂದೆಗೆ ಅಪಾಯ ಅಥವಾ ಇತರ ಗಂಭೀರ ಸಮಸ್ಯೆಗಳು ಇದ್ದರೆ, ವಿಷಯದ ತನಿಖೆ ನಡೆಸಲು ಹಿರಿಯರ ಮಂಡಲಿಯು ಇಬ್ಬರು ಹಿರಿಯರನ್ನು ನೇಮಿಸುವುದು. ವಿಷಯವು, ಒಂದು ನ್ಯಾಯ ನಿರ್ಣಾಯಕ ಕಮಿಟಿಯ ಅಗತ್ಯವಿರುವಷ್ಟು ಗಂಭೀರವಾಗಿದೆ ಎಂದು ಈ ಹಿರಿಯರು ಕಂಡುಕೊಳ್ಳುವುದಾದರೆ, ಇದನ್ನು ಅವರು ಹಿರಿಯರ ಮಂಡಲಿಗೆ ವರದಿಸಬೇಕು. ಹಿರಿಯರ ಮಂಡಲಿಯು ಆಗ, ತಪ್ಪಿತಸ್ಥನಿಗೆ ನೆರವು ನೀಡಲು ಒಂದು ನ್ಯಾಯ ನಿರ್ಣಾಯಕ ಕಮಿಟಿಯನ್ನು ನೇಮಿಸುವುದು. ನ್ಯಾಯ ನಿರ್ಣಾಯಕ ಕಮಿಟಿಯು ಅವನೊಂದಿಗೆ ಕೋಮಲವಾದೊಂದು ವಿಧದಲ್ಲಿ ವರ್ತಿಸಬೇಕು. ಶಾಸ್ತ್ರಗಳಿಂದ ಅವನನ್ನು ಸರಿಪಡಿಸಲು ಅವರು ಶ್ರಮಿಸಬೇಕು. ನ್ಯಾಯ ನಿರ್ಣಾಯಕ ಕಮಿಟಿಯ ದಯಾಪರ ಪ್ರಯತ್ನಗಳಿಗೆ ಅವನು ಪ್ರತಿಕ್ರಿಯಿಸಿದರೆ, ರಾಜ್ಯ ಸಭಾಗೃಹದಲ್ಲಿ ನಡೆಯುವ ಕೂಟಗಳಲ್ಲಿ ವೇದಿಕೆಯಿಂದ ಭಾಗಗಳನ್ನು ನಿರ್ವಹಿಸಲು ಅವನನ್ನು ಉಪಯೋಗಿಸದೆ ಇರುವುದರಲ್ಲಿ ಯಾವ ಲಾಭವಾದರೂ ಇದೆಯೊ ಎಂಬುದನ್ನು ಅಥವಾ ಕೂಟಗಳಲ್ಲಿ ಹೇಳಿಕೆಯನ್ನು ನೀಡಲು ಅವನು ಅನುಮತಿಸಲ್ಪಡಬೇಕೊ ಎಂಬುದನ್ನು ಆಗ ಅವರು ನಿರ್ಧರಿಸಸಾಧ್ಯವಿದೆ.
16. ಒಬ್ಬ ತಪ್ಪಿತಸ್ಥನಿಗೆ ಸಹಾಯ ಮಾಡಲು ಹಿರಿಯರು ಏನು ಮಾಡಬಲ್ಲರು?
16 ತಪ್ಪಿತಸ್ಥನು ಪ್ರತಿಕ್ರಿಯಿಸುವುದಾದರೆ, ನ್ಯಾಯ ನಿರ್ಣಾಯಕ ಕಮಿಟಿಯಲ್ಲಿರುವ ಒಬ್ಬ ಅಥವಾ ಇಬ್ಬರು ಹಿರಿಯರು ಅವನ ನಂಬಿಕೆಯನ್ನು ಭರ್ತಿಮಾಡಲು ಮತ್ತು ದೇವರ ನೀತಿಯುಳ್ಳ ಮಟ್ಟಗಳಿಗಾಗಿ ಅವನ ಗಣ್ಯತೆಯನ್ನು ಕಟ್ಟಲಿಕ್ಕಾಗಿ ಕುರಿಪಾಲನೆಯ ಭೇಟಿಗಳನ್ನು ಮಾಡಲು ಅವರು ಏರ್ಪಡಿಸಸಾಧ್ಯವಿದೆ. ಅವರಲ್ಲಿ ಪ್ರತಿಯೊಬ್ಬನು ಆಗಿಂದಾಗ್ಗೆ ಕ್ಷೇತ್ರ ಶುಶ್ರೂಷೆಯಲ್ಲಿ ಅವನೊಂದಿಗೆ ಸೇವೆಮಾಡಬಹುದು. ಒಂದು ವೇಳೆ ಸೂಕ್ತವಾದ ಕಾವಲಿನಬುರುಜು ಮತ್ತು ಎಚ್ಚರ! ಲೇಖನಗಳನ್ನುಪಯೋಗಿಸಿ ಕೆಲವು ಶಾಸ್ತ್ರೀಯ ಚರ್ಚೆಗಳನ್ನು ಅವರು ಅವನೊಂದಿಗೆ ನಡಿಸಬಲ್ಲರು, ಆದರೆ ಕ್ರಮದ ಬೈಬಲ್ ಅಧ್ಯಯನವನ್ನು ಸ್ಥಾಪಿಸುವುದಿಲ್ಲ. ಇಂತಹ ಕೋಮಲ ಆರೈಕೆಯಿಂದಾಗಿ, ತಪ್ಪಿತಸ್ಥನು ಮುಂದಿನ ದಿನಗಳಲ್ಲಿ ಶರೀರದ ಬಲಹೀನತೆಗಳನ್ನು ಪ್ರತಿರೋಧಿಸಲು ಬಲಗೊಳಿಸಲ್ಪಡಬಹುದು.
17. ಸ್ನಾತನಾದ ತಪ್ಪಿತಸ್ಥನು ಪಶ್ಚಾತ್ತಾಪಪಟ್ಟು ತನ್ನ ಪಾಪಮಯ ಮಾರ್ಗವನ್ನು ತ್ಯಜಿಸದಿದ್ದಲ್ಲಿ ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಲಾಗುತ್ತದೆ?
17 ನಿಶ್ಚಯವಾಗಿ, ಇತ್ತೀಚೆಗೆ ಸ್ನಾತನೆಂಬ ಸಂಗತಿಯು ಪಶ್ಚಾತ್ತಾಪರಹಿತವಾಗಿ ಪಾಪವನ್ನು ನಡಸುವುದಕ್ಕೆ ವಿನಾಯಿತಿ ಕೊಡುವುದಿಲ್ಲ. (ಇಬ್ರಿಯ 10:26, 27; ಯೂದ 4) ಸ್ನಾತನಾದ ಯಾವನೇ ತಪ್ಪಿತಸ್ಥನು ಪಶ್ಚಾತ್ತಾಪಪಟ್ಟು ತನ್ನ ಪಾಪಮಯ ಮಾರ್ಗವನ್ನು ತ್ಯಜಿಸದೆ ಇದ್ದರೆ, ಅವನು ಸಭೆಯಿಂದ ಬಹಿಷ್ಕರಿಸಲ್ಪಡುವನು. (1 ಕೊರಿಂಥ 5:6, 11-13; 2 ಥೆಸಲೊನೀಕ 2:11, 12; 2 ಯೋಹಾನ 9-11) ಈ ಕ್ರಮವು ಅವಶ್ಯವೆಂದು ಕಂಡಾಗ, ಹಿರಿಯ ಮಂಡಲಿಯು ಒಂದು ನ್ಯಾಯ ನಿರ್ಣಾಯಕ ಕಮಿಟಿಯನ್ನು ಆರಿಸಿಕೊಳ್ಳುವುದು. ಬಹಿಷ್ಕಾರವು ಸಂಭವಿಸಿದಲ್ಲಿ, ಒಂದು ಸಂಕ್ಷಿಪ್ತ ಪ್ರಕಟನೆಯನ್ನು ಮಾಡಲಾಗುವುದು: “ . . . ಎಂಬವನು ಬಹಿಷ್ಕರಿಸಲ್ಪಟ್ಟಿದ್ದಾನೆ.”e
‘ಪಕ್ವತೆಗೆ ಸಾಗುತ್ತಾ ಹೋಗಲು’ ಅವರಿಗೆ ನೆರವಾಗಿರಿ
18. ಹೊಸತಾಗಿ ದೀಕ್ಷಾಸ್ನಾನ ಮಾಡಿಸಿಕೊಂಡ ಕ್ರೈಸ್ತರಿಗೆ ಮತ್ತು ಇತರರಿಗೆ ಯೆಹೋವನ ಮತ್ತು ಆತನ ಚಿತ್ತದ ಕುರಿತು ಯಾವಾಗಲೂ ಹೆಚ್ಚನ್ನು ಕಲಿಯಲಿರುವುದೆಂಬ ವಿಷಯದಲ್ಲಿ ನಾವೇಕೆ ನಿಶ್ಚಿತರಾಗಿರಬಲ್ಲೆವು?
18 ದೇವರ ಸೇವಕರಲ್ಲಿ ಅಧಿಕತಮ ಜನರು ಮಂದೆಯಲ್ಲಿ ಉಳಿಯುವರು. ಸಂತೋಷಕರವಾಗಿ, ನಮ್ಮಲ್ಲಿ ಪ್ರತಿಯೊಬ್ಬನೂ ನಮ್ಮ ಸ್ವರ್ಗೀಯ ತಂದೆಗೆ ಸದಾ ಸಮೀಪಕ್ಕೆ ಬರುವಂತೆ ಶಕ್ತನಾಗುವನು ಯಾಕೆಂದರೆ ನಾವು ಯಾವಾಗಲೂ ಆತನ ಕುರಿತು ಮತ್ತು ಆತನ ಚಿತ್ತದ ಕುರಿತು ಹೆಚ್ಚನ್ನು ಕಲಿಯಲು ಶಕ್ತರಾಗಿರುವೆವು. (ಪ್ರಸಂಗಿ 3:11; ಯಾಕೋಬ 4:8) ಸಾ.ಶ. 33ರ ಪಂಚಾಶತ್ತಮದಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡ ಸಾವಿರಾರು ಜನರಿಗೆ ನಿಶ್ಚಯವಾಗಿಯೂ ಹೆಚ್ಚನ್ನು ಕಲಿಯಲಿತ್ತು. (ಅ. ಕೃತ್ಯಗಳು 2:5, 37-41; 4:4) ಶಾಸ್ತ್ರೀಯ ಹಿನ್ನೆಲೆಯಲ್ಲಿ ಕೊರತೆಯಿದ್ದ ಅನ್ಯರಿಗೆ ಸಹ. ಉದಾಹರಣೆಗೆ, ಅಥೇನೆಯ ಶ್ರೇಷ್ಠ ನ್ಯಾಯಸ್ಥಾನದಲ್ಲಿ ಪೌಲನು ಭಾಷಣ ಕೊಟ್ಟಾದ ಮೇಲೆ ದೀಕ್ಷಾಸ್ನಾನ ಮಾಡಿಸಿಕೊಂಡವರ ವಿಷಯದಲ್ಲಿ ಇದು ಸತ್ಯವಾಗಿತ್ತು. (ಅ. ಕೃತ್ಯಗಳು 17:33, 34) ಇಂದು ಸಹ, ಹೊಸತಾಗಿ ದೀಕ್ಷಾಸ್ನಾನ ಮಾಡಿಸಿಕೊಂಡವರಿಗೆ ಹೆಚ್ಚನ್ನು ಕಲಿಯಲಿದೆ ಮತ್ತು ದೇವರ ದೃಷ್ಟಿಯಲ್ಲಿ ಯೋಗ್ಯವಾದುದನ್ನು ಮಾಡುತ್ತಾ ಇರುವ ತಮ್ಮ ನಿರ್ಧಾರವನ್ನು ಬಲಗೊಳಿಸಲು ಸಮಯ ಮತ್ತು ಸಹಾಯದ ಅಗತ್ಯವಿದೆ.—ಗಲಾತ್ಯ 6:9; 2 ಥೆಸಲೊನೀಕ 3:13.
19. ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ‘ಪಕ್ವತೆಗೆ ಸಾಗುತ್ತಾ ಹೋಗಲು’ ಹೇಗೆ ಸಹಾಯ ಕೊಡಸಾಧ್ಯವಿದೆ?
19 ಪ್ರತಿ ವರ್ಷ ಸಾವಿರಾರು ಮಂದಿ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೆ ಮತ್ತು ಅವರು ‘ಪಕ್ವತೆಗೆ ಸಾಗುತ್ತಾ ಹೋಗಲು’ ಶಕ್ತರಾಗುವಂತೆ ಸಹಾಯದ ಅಗತ್ಯವಿದೆ. (ಇಬ್ರಿಯ 6:1-3) ನುಡಿ, ಮಾದರಿ, ಮತ್ತು ಶುಶ್ರೂಷೆಯಲ್ಲಿನ ಪ್ರಾಯೋಗಿಕ ಸಹಾಯದ ಮೂಲಕ, ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ಮತ್ತು “ಸತ್ಯವನ್ನನುಸರಿಸಿ ನಡೆಯಲು” ಕೆಲವರಿಗಾದರೂ ಸಹಾಯ ಕೊಡಲು ನೀವು ಶಕ್ತರಾದೀರಿ. (3 ಯೋಹಾನ 4; ಕೊಲೊಸ್ಸೆ 3:9, 10) ನೀವೊಬ್ಬ ಅನುಭವಿ ಪ್ರಚಾರಕರಾಗಿದ್ದರೆ, ಒಬ್ಬ ಹೊಸ ಜೊತೆ ವಿಶ್ವಾಸಿಗೆ ಕ್ಷೇತ್ರ ಸೇವೆಯಲ್ಲಿ ಸಹಾಯ ಮಾಡಲು ಅಥವಾ ದೇವರಲ್ಲಿ ಅವನ ನಂಬಿಕೆಯನ್ನು, ಕ್ರೈಸ್ತ ಕೂಟಗಳಿಗೆ ಅವನ ಗಣ್ಯತೆಯೇ ಮುಂತಾದವುಗಳನ್ನು ಬಲಪಡಿಸಲಿಕ್ಕಾಗಿ ಕೆಲವು ವಾರಗಳ ತನಕ ನಿರ್ದಿಷ್ಟ ಶಾಸ್ತ್ರೀಯ ವಿಷಯಗಳನ್ನು ಅವನೊಂದಿಗೆ ಚರ್ಚಿಸಲು ಹಿರಿಯರು ನಿಮ್ಮನ್ನು ಆಮಂತ್ರಿಸಬಹುದು. ಮಂದೆಗೆ ಕುರುಬರ ಸಂಬಂಧವು ಬುದ್ಧಿಹೇಳುವ ತಂದೆಯಂತೆಯೂ ಕೋಮಲ ವಾತ್ಸಲ್ಯ ತೋರಿಸುವ ತಾಯಿಯಂತೆಯೂ ಇದೆ. (1 ಥೆಸಲೊನೀಕ 2:7, 8, 11) ಆದರೂ, ಕೆಲವೇ ಹಿರಿಯರು ಮತ್ತು ಶುಶ್ರೂಷಾ ಸೇವಕರು ಸಭೆಯಲ್ಲಿ ಅಗತ್ಯವಾದ ಎಲ್ಲವನ್ನು ನೋಡಿಕೊಳ್ಳಲು ಶಕ್ತರಾಗಿರಲಿಕ್ಕಿಲ್ಲ. ನಾವೆಲ್ಲರೂ ಒಬ್ಬರಿಗೊಬ್ಬರು ಸಹಾಯ ಮಾಡುವ ಸದಸ್ಯರುಳ್ಳ ಒಂದು ಕುಟುಂಬದಂತಿದ್ದೇವೆ. ನಮ್ಮ ಜೊತೆ ಆರಾಧಕರಿಗೆ ನೆರವಾಗಲು ನಾವು ಪ್ರತಿಯೊಬ್ಬರು ಏನನ್ನಾದರೂ ಮಾಡಬಲ್ಲೆವು. ನೀವು ಸ್ವತಃ ಪ್ರೋತ್ಸಾಹನೆಯನ್ನು, ಮನಗುಂದಿದವರಿಗೆ ಸಾಂತ್ವನವನ್ನು, ಬಲಹೀನರಿಗೆ ಆಧಾರವನ್ನು ಕೊಡಶಕ್ತರಾಗಬಹುದು.—1 ಥೆಸಲೊನೀಕ 5:14, 15.
20. ದೇವರ ಜ್ಞಾನವನ್ನು ಹಬ್ಬಿಸಲು ಮತ್ತು ಯೆಹೋವನ ಹುಲ್ಲುಗಾವಲಿನ ಕುರಿಗಳಿಗೆ ಕೋಮಲ ಪರಾಮರಿಕೆ ನೀಡಲು ನೀವೇನು ಮಾಡಬಲ್ಲಿರಿ?
20 ಮಾನವಕುಲಕ್ಕೆ ದೇವರ ಜ್ಞಾನದ ಅಗತ್ಯವಿದೆ, ಮತ್ತು ಯೆಹೋವನ ಒಬ್ಬ ಸಾಕ್ಷಿಯೋಪಾದಿ, ಅದನ್ನು ಹಬ್ಬಿಸುವುದರಲ್ಲಿ ಒಂದು ಹರ್ಷಭರಿತ ಪಾಲು ನಿಮಗಿರಬಲ್ಲದು. ಯೆಹೋವನ ಕುರಿಗಳಿಗೆ ಕೋಮಲ ಪರಿಪಾಲನೆಯ ಅಗತ್ಯವಿದೆ, ಮತ್ತು ಇದನ್ನು ಒದಗಿಸಲು ನೆರವಾಗುವುದರಲ್ಲಿ ಒಂದು ಪ್ರೀತಿಯ ಪಾತ್ರವನ್ನು ನೀವು ವಹಿಸಬಲ್ಲಿರಿ. ನಿಮ್ಮ ಶುಶ್ರೂಷೆಯನ್ನು ಯೆಹೋವನು ಆಶೀರ್ವದಿಸಲಿ ಮತ್ತು ಆತನ ಹುಲ್ಲುಗಾವಲಿನ ಕುರಿಗಳಿಗೆ ಸಹಾಯ ಮಾಡಲು ನಿಮ್ಮ ಹೃದಯಪೂರ್ವಕ ಪ್ರಯತ್ನಗಳಿಗಾಗಿ ಆತನು ನಿಮಗೆ ಪ್ರತಿಫಲವನ್ನು ನೀಡಲಿ.
[ಅಧ್ಯಯನ ಪ್ರಶ್ನೆಗಳು]
a ಈ ಹಂತದಲ್ಲಿ, ಹೊಸಬನು ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕದ ಒಂದು ಪ್ರತಿಯನ್ನು ಪಡೆದುಕೊಳ್ಳಬಹುದು.
b ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
c ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
d ಅಸ್ನಾನಿತ ಪ್ರಚಾರಕರಿಗಾಗಿ ಅಂತಹ ಒಂದು ಏರ್ಪಾಡನ್ನು, ನವೆಂಬರ್ 15, 1988ರ ವಾಚ್ಟವರ್, ಪುಟ 15-20ರಲ್ಲಿ ಕಂಡುಬರುವ “ದೇವರನ್ನು ಆರಾಧಿಸಲು ಇತರರಿಗೆ ಸಹಾಯ ಮಾಡುವುದು,” ಎಂಬ ಲೇಖನದಲ್ಲಿ ಕೊಡಲಾಗಿದೆ.
e ಬಹಿಷ್ಕಾರ ಮಾಡಲು ತೀರ್ಮಾನವಾದರೆ ಮತ್ತು ಅಪೀಲು ಮಾಡಲ್ಪಟ್ಟಲ್ಲಿ, ಪ್ರಕಟನೆಯನ್ನು ತಡೆದುಹಿಡಿಯಬೇಕು. ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕದ 147-8ನೆಯ ಪುಟಗಳನ್ನು ನೋಡಿ.
ನೀವು ಹೇಗೆ ಉತ್ತರಿಸುವಿರಿ?
◻ ಯೆಹೋವನು ತನ್ನ ಕುರಿಗಳನ್ನು ಹೇಗೆ ಉಪಚರಿಸುತ್ತಾನೆ?
◻ ಹೊಸಬರು ಸಾರಲು ಬಯಸುವಾಗ ಏನು ಮಾಡಲಾಗುತ್ತದೆ?
◻ ವಿಶೇಷ ಅಗತ್ಯಗಳಿರುವ ಹೊಸಬರಿಗೆ ಜೊತೆ ವಿಶ್ವಾಸಿಗಳು ಹೇಗೆ ಸಹಾಯ ಮಾಡಬಲ್ಲರು?
◻ ತಪ್ಪು ಮಾಡಿದರೂ ಪಶ್ಚಾತ್ತಾಪ ಪಡುವವರಿಗೆ ಹಿರಿಯರು ಯಾವ ಸಹಾಯ ನೀಡಬಲ್ಲರು?
◻ ‘ಪಕ್ವತೆಗೆ ಸಾಗುತ್ತಾ ಹೋಗಲು’ ಒಬ್ಬ ಹೊಸ ಸ್ನಾತನಿಗೆ ನೀವು ಹೇಗೆ ಸಹಾಯ ನೀಡಬಹುದು?
[ಪುಟ 16 ರಲ್ಲಿರುವ ಚಿತ್ರ]
ಚಾರ್ಲ್ಸ್ ಟಿ. ರಸಲ್, ಮಂದೆಯ ಪ್ರೀತಿಯ ಕುರುಬರಾಗಿ ಪ್ರಖ್ಯಾತರಾಗಿದ್ದರು
[ಪುಟ 18 ರಲ್ಲಿರುವ ಚಿತ್ರ]
ಕನಿಕರವುಳ್ಳ ಕುರುಬರು ದೇವರ ಮಂದೆಯನ್ನು ಕೋಮಲವಾಗಿ ಉಪಚರಿಸುತ್ತಾರೆ