ನಿಮ್ಮ ಬೆಳಕು ಪ್ರಕಾಶಿಸಲಿ!
ಕಟ್ಟಕಡೆಗೆ ಆ ವೃದ್ಧ ಮನುಷ್ಯನಿಗೆ ವಾಗ್ದಾನಿತ ಮೆಸ್ಸೀಯನನ್ನು ನೋಡಲು ಅವಕಾಶವು ಒದಗಿಬಂದಿತ್ತು! “ಯೆಹೋವನ ಕ್ರಿಸ್ತನನ್ನು ಕಾಣುವದಕ್ಕಿಂತ ಮುಂಚೆ ತಾನು ಸಾಯುವುದಿಲ್ಲ”ವೆಂಬುದನ್ನು ದೈವಿಕ ಪ್ರಕಟನೆಯಿಂದ ಸಿಮೆಯೋನನು ತಿಳಿದಿದ್ದನು. (ಲೂಕ 2:26, NW) ಆದರೆ ಸಿಮೆಯೋನನು ದೇವಾಲಯವನ್ನು ಪ್ರವೇಶಿಸಿದಾಗ ಮತ್ತು ಮರಿಯಳು ಹಾಗೂ ಯೋಸೇಫನು ಶಿಶುವಾಗಿದ್ದ ಯೇಸುವನ್ನು ಅವನ ಕೈಗಳಲ್ಲಿ ಕೊಟ್ಟಾಗ ಎಂಥ ಒಂದು ರೋಮಾಂಚಕರವಾದ ವಿಷಯವು ಅದಾಗಿತ್ತು! ಅವನು ದೇವರನ್ನು ಹೀಗೆ ಹೇಳುತ್ತಾ ಸ್ತುತಿಸಿದನು: “ಒಡೆಯನೇ, . . . ಈಗ ಸಮಾಧಾನದಿಂದ ಹೋಗುವದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಯಿತು. ನೀನು ನೇಮಿಸಿರುವ ರಕ್ಷಕನನ್ನು ನಾನು ಕಣ್ಣಾರೆ ಕಂಡೆನು. . . . ಅನ್ಯದೇಶದವರಿಗೆ ಜ್ಞಾನೋದಯದ ಬೆಳಕು, ನಿನ್ನ ಪ್ರಜೆಯಾದ ಇಸ್ರಾಯೇಲ್ಯರಿಗೆ ಕೀರ್ತಿ.”—ಲೂಕ 2:27-32; ಹೋಲಿಸಿ ಯೆಶಾಯ 42:1-6.
ಯೇಸು, 30 ವರ್ಷ ಪ್ರಾಯದಲ್ಲಿನ ತನ್ನ ದೀಕ್ಷಾಸ್ನಾನದಿಂದ, ತಾನು ಸಾಯುವ ತನಕ, ಲೋಕಕ್ಕೆ ಒಂದು “ಬೆಳಕು” ಆಗಿ ಪರಿಣಮಿಸಿದನು. ಯಾವ ವಿಧಗಳಲ್ಲಿ? ಆತನು ದೇವರ ರಾಜ್ಯದ ಮತ್ತು ಆತನ ಉದ್ದೇಶಗಳ ಕುರಿತು ಸಾರುವುದರ ಮೂಲಕ ಆತ್ಮಿಕ ಬೆಳಕನ್ನು ಪ್ರಸರಿಸಿದನು. ಆತನು ಸುಳ್ಳು ಧಾರ್ಮಿಕ ಬೋಧನೆಗಳನ್ನು ಸಹ ಬಯಲುಪಡಿಸಿದನು ಮತ್ತು ಅಂಧಕಾರಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಸ್ಪಷ್ಟವಾಗಿ ಗುರುತಿಸಿದನು. (ಮತ್ತಾಯ 15:3-9; ಗಲಾತ್ಯ 5:19-21) ಆದುದರಿಂದ, ಯೇಸು ತಕ್ಕದ್ದಾಗಿ ಹೀಗೆ ಹೇಳಶಕ್ತನಾದನು: “ನಾನೇ ಲೋಕಕ್ಕೆ ಬೆಳಕು.”—ಯೋಹಾನ 8:12.
ಯೇಸು ಸಾ.ಶ. 33ನೆಯ ವರ್ಷದಲ್ಲಿ ಮೃತನಾದನು. ಆಗ ಬೆಳಕು ನಂದಿಹೋಯಿತೋ? ನಿಶ್ಚಯವಾಗಿಯೂ ಇಲ್ಲ! ಇನ್ನೂ ಭೂಮಿಯಲ್ಲಿರುವಾಗಲೇ ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ.” (ಮತ್ತಾಯ 5:16) ಅದೇ ಪ್ರಕಾರ, ಯೇಸುವಿನ ಮರಣದ ನಂತರ ಆತನ ಹಿಂಬಾಲಕರು ಬೆಳಕು ಪ್ರಕಾಶಿಸುತ್ತಾ ಇರುವಂತೆ ಮಾಡಿದರು.
ಯೇಸುವಿನ ಅನುಕರಣೆಯಲ್ಲಿ, ಇಂದು ಕ್ರೈಸ್ತರು ಸಾರುವ ಕಾರ್ಯದಲ್ಲಿ ಒಳಗೂಡುತ್ತಿರುವ ಮೂಲಕ ಯೆಹೋವನ ಬೆಳಕನ್ನು ಪ್ರತಿಬಿಂಬಿಸುತ್ತಾರೆ. ತಮ್ಮನ್ನು ಕ್ರೈಸ್ತ ಜೀವಿತದಲ್ಲಿ ಪ್ರಜ್ವಲಿಸುತ್ತಿರುವ ಮಾದರಿಗಳಾಗಿ ರುಜುಪಡಿಸಿಕೊಳ್ಳುತ್ತಾ, ಅವರು “ಬೆಳಕಿನವರಂತೆ ನಡೆದು”ಕೊಳ್ಳುತ್ತಾ ಇದ್ದಾರೆ.—ಎಫೆಸ 5:8.