ರಾಜ್ಯ ವಾರ್ತೆಯೊಂದಿಗೆ—ಒಂದು ಯಶಸ್ವೀ ಕಾರ್ಯಾಚರಣೆ
“ಜೀವನವು ಇಷ್ಟೊಂದು ಸಮಸ್ಯೆಗಳಿಂದ ತುಂಬಿರುವುದೇಕೆ?—ಒಂದು ಸಮಸ್ಯೆಮುಕ್ತ ಪ್ರಮೋದವನವು ಸಾಧ್ಯವೋ?” ಇದು ಕಳೆದ ವರ್ಷ ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ 139 ಭಾಷೆಗಳಲ್ಲಿ ಲೋಕದಾದ್ಯಂತ ವಿತರಿಸಲ್ಪಟ್ಟಿದ್ದ, ನಾಲ್ಕು ಪುಟದ ಕಿರುಹೊತ್ತಗೆಯಾದ ರಾಜ್ಯ ವಾರ್ತೆ ನಂಬ್ರ 34ರ ಶೀರ್ಷಿಕೆಯಾಗಿತ್ತು. ಈ ಸೇವಾ ಕಾರ್ಯಾಚರಣೆಯನ್ನು ಜಮೇಕಾದಲ್ಲಿನ ಸಾಕ್ಷಿಗಳು “ವರ್ಷದ ಮುಖ್ಯಾಂಶಗಳಲ್ಲಿ ಒಂದು ಮುಖ್ಯಾಂಶ”ವಾಗಿದೆ ಎಂದು ಬಣ್ಣಿಸಿದರು. ಬೆಲ್ಜಿಯಮ್ನಲ್ಲಿನ ಸಾಕ್ಷಿಗಳು ಅದನ್ನು “ಸಹೋದರರಿಗಾಗಿ ಹರ್ಷದ ಒಂದು ಮಹತ್ತಮವಾದ ಮೂಲ” ಎಂದು ಕರೆದರು. ಚೆಕ್ ರಿಪಬ್ಲಿಕ್ನಲ್ಲಿನ ಯೆಹೋವನ ಸಾಕ್ಷಿಗಳು ರಾಜ್ಯ ವಾರ್ತೆಯ ವಿತರಣೆಯಲ್ಲಿ ಪಾಲುತೆಗೆದುಕೊಳ್ಳುವುದಕ್ಕೆ ಅವಕಾಶವನ್ನು ಪಡೆದುದು ಇದೇ ಪ್ರಥಮ ಬಾರಿಯಾಗಿತ್ತು. ಶಾಖೆಯು ವರದಿಸುವುದು: “ಕಾರ್ಯಾಚರಣೆಯು ಹುರುಪಿನ ಮತ್ತು ಉತ್ಸಾಹದ ಒಂದು ಆತ್ಮವನ್ನು ತಂದಿತು.” ತದ್ರೀತಿಯ ಅಭಿಪ್ರಾಯಗಳು ಇತರ ಅನೇಕ ದೇಶಗಳಿಂದ ಕೇಳಿಬಂದವು.
ರಾಜ್ಯ ವಾರ್ತೆ ನಂಬ್ರ 34, ಧರ್ಮದ ಹೆಸರಿನಲ್ಲಿ ನಡೆಸಲ್ಪಡುವ ಅಸಹ್ಯಕರವಾದ ಕೆಲಸಗಳ ಕಾರಣ, ನರಳಿ ಗೋಳಾಡುವವರಿಗೆ ಒಂದು ವಿಶೇಷ ಸಂದೇಶವನ್ನು ಹೊಂದಿತ್ತು. (ಯೆಹೆಜ್ಕೇಲ 9:4) ಅವರಿಗೆ “ನಿಭಾಯಿಸಲು ಕಷ್ಟಕರವಾದ ಕಡೇ ದಿವಸಗಳ” ಮೇಲೆ ನಿಯಂತ್ರಣವಿಲ್ಲದ ಕಾರಣ, ಯಾತನೆಗೆ ಈಡಾಗಿರುವವರ ಜೀವಿತಗಳಿಗಾಗಿ ಅದು ಸಾಂತ್ವನವನ್ನು ಹೊಂದಿತ್ತು. (2 ತಿಮೊಥೆಯ 3:1, NW) ಬೈಬಲಿಗೆ ನಿರ್ದೇಶಿಸುತ್ತಾ, ಜೀವನದ ಸಮಸ್ಯೆಗಳು ಅತಿ ಬೇಗನೆ ಪರಿಹರಿಸಲ್ಪಡುವವು ಎಂದು ಕಿರುಹೊತ್ತಗೆಯು ತೋರಿಸಿತು. ಒಂದು ಸಮಸ್ಯೆಮುಕ್ತ ಪ್ರಮೋದವನವು ಒಂದು ನಿಜತ್ವವಾಗಿದೆ. (ಲೂಕ 23:43) ರಾಜ್ಯ ವಾರ್ತೆಯನ್ನು ಓದಿದ ಅನೇಕ ಜನರು ಅದರ ಸಂದೇಶದಿಂದ ಮನವೊಪ್ಪಿಸಲ್ಪಟ್ಟರು. ಟೋಗೋದ ವ್ಯಕ್ತಿಯೊಬ್ಬನು ಒಬ್ಬ ಸಾಕ್ಷಿಗೆ ಹೇಳಿದ್ದು: “ನೀವು ಏನನ್ನು ತಿಳಿಸಿದ್ದೀರೋ ಅದು ನಿರ್ವಿವಾದವಾದದ್ದಾಗಿದೆ.”
ಸ್ಪಷ್ಟವಾಗಿ, ಈ ರಾಜ್ಯ ವಾರ್ತೆಯ ವಿತರಣೆಯು ಅಸಾಧಾರಣವಾದ ಗಮನವನ್ನು ಸೆಳೆಯಿತು. ಡೆನ್ಮಾರ್ಕಿನಲ್ಲಿರುವ ಒಬ್ಬ ಮನೆಯವನು, ಕಿರುಹೊತ್ತಗೆಯನ್ನು ನೀಡುತ್ತಿದ್ದ ಒಬ್ಬ ಸಾಕ್ಷಿಗೆ ಪ್ರತಿಕ್ರಿಯಿಸಿದ್ದು: “ನಾನು ಈಗತಾನೇ ಅಮೆರಿಕದಿಂದ ಹಿಂದಿರುಗಿ ಬಂದಿದ್ದೇನೆ. ನಾನು ಬಿಟ್ಟುಬರುವ ಸ್ವಲ್ಪ ಮುಂಚೆ, ಯಾರೋ ಒಬ್ಬರು ನನಗೆ ನಿಮ್ಮ ಕಿರುಹೊತ್ತಗೆಯನ್ನು ಕೊಟ್ಟರು. ನಾನು ಈಗತಾನೇ ಇಲ್ಲಿಗೆ ಆಗಮಿಸಿದ್ದೇನೆ, ಮತ್ತು ತತ್ಕ್ಷಣವೇ ಅದೇ ಕಿರುಹೊತ್ತಗೆ ಡೇನಿಷ್ನಲ್ಲಿ ಕೊಡಲ್ಪಡುತ್ತಿದೆ!”
ಕಾರ್ಯಾಚರಣೆಗಾಗಿ ಉತ್ಸಾಹಭರಿತವಾದ ಬೆಂಬಲ
ಲೋಕದ ಸುತ್ತಲೂ ಇರುವ ಯೆಹೋವನ ಸಾಕ್ಷಿಗಳು ಕಿರುಹೊತ್ತಗೆಯನ್ನು ವಿತರಿಸುವ ಕಾರ್ಯದಲ್ಲಿ ಉತ್ಸಾಹದಿಂದ ಜತೆಗೂಡಿದರು. ರಾಜ್ಯ ವಾರ್ತೆಯು ವಿತರಿಸಲ್ಪಡುತ್ತಿದ್ದ ತಿಂಗಳುಗಳ ಅವಧಿಯಲ್ಲಿ ಪ್ರಚಾರಕರ ಸರ್ವಕಾಲಿಕ ಉಚ್ಚಾಂಕವನ್ನು ವರದಿಸುತ್ತಿದ್ದ ಅನೇಕ ದೇಶಗಳಲ್ಲಿ, ಆಸ್ಟ್ರಿಯ, ಎಲ್ ಸಾಲ್ವಡೋರ್, ಹೇಟೀ, ಹಂಗೆರಿ, ಇಟಲಿ, ನ್ಯೂ ಕ್ಯಾಲೆಡೋನಿಯ ಕೇವಲ ಕೆಲವಾಗಿವೆ.
ಸಾಂಬಿಯದಲ್ಲಿನ ಒಬ್ಬ ಸರ್ಕಿಟ್ ಮೇಲ್ವಿಚಾರಕನು ತನ್ನ ಮೂರು ವರ್ಷ ಪ್ರಾಯದ ಮಗಳಾದ ಡೆಬ್ರಳಿಗೆ ಮನೆಯಿಂದ ಮನೆಗೆ ಸಾಹಿತ್ಯವನ್ನು ನೀಡಲಿಕ್ಕೆ ತರಬೇತಿಯನ್ನು ನೀಡಿದ್ದಾನೆ. ರಾಜ್ಯ ವಾರ್ತೆ ನಂಬ್ರ 34ರೊಂದಿಗೆ ಕಾರ್ಯಾಚರಣೆ ಮಾಡುತ್ತಿದ್ದ ಸಮಯದಲ್ಲಿ, ಡೆಬ್ರಳು ಕಿರುಹೊತ್ತಗೆಯ 45ಕ್ಕಿಂತಲೂ ಹೆಚ್ಚು ಪ್ರತಿಗಳನ್ನು ನೀಡಿದಳು. ಡೆಬ್ರಳಿಂದ ರಾಜ್ಯ ವಾರ್ತೆಯನ್ನು ಸ್ವೀಕರಿಸಿದ್ದ ಕೆಲವರೊಂದಿಗೆ ಆಕೆಯ ತಾಯಿ ಬೈಬಲ್ ಅಭ್ಯಾಸಗಳನ್ನು ಪ್ರಾರಂಭಿಸಿದಳು.
ದಕ್ಷಿಣ ಆಫ್ರಿಕದಲ್ಲಿನ ಒಬ್ಬ ಹದಿವಯಸ್ಕಳು, ಕ್ಯಾಷ್ಯಾ ಎಂಬ ಹೆಸರಿನ ಒಬ್ಬ ಶಾಲಾಸಂಗಾತಿಗೆ ಕಿರುಹೊತ್ತಗೆಯನ್ನು ನೀಡಿದಳು. ಕ್ಯಾಷ್ಯಾ ಟ್ರ್ಯಾಕ್ಟನ್ನು ಓದಿ ಹೇಳಿದ್ದು: “ಇದು ತುಂಬಾ ಅದ್ಭುತವಾಗಿದೆ—ಒಂದು ಪ್ರಮೋದವನ ಭೂಮಿಯಲ್ಲಿ ಸದಾಕಾಲ ಜೀವಿಸುವುದು! ಇದರ ಕುರಿತಾಗಿ ನನಗೆ ಈ ಮುಂಚೆ ಏಕೆ ಹೇಳಲ್ಪಟ್ಟಿರಲಿಲ್ಲ?” ಬೈಬಲ್ ಅಭ್ಯಾಸವೊಂದು ಆರಂಭಿಸಲ್ಪಟ್ಟಿತು. ಒಂದು ವಾರದೊಳಗೆ ಕ್ಯಾಷ್ಯಾ ಮತ್ತೊಂದು ಟ್ರ್ಯಾಕ್ಟನ್ನು ಪಡೆದಳು. ಎರಡನೆಯ ಕಿರುಹೊತ್ತಗೆ ಸೈಪ್ರಸ್ನಲ್ಲಿ ಜೀವಿಸುವ ತನ್ನ ರೋಮನ್ ಕ್ಯಾಥೊಲಿಕ್ ಪತ್ರ ಗೆಳತಿಯಿಂದ ಬಂತು. ಆ ಪತ್ರ ಗೆಳತಿಯು ಕ್ಯಾಷ್ಯಾಗೆ ರೋಮನ್ ಕ್ಯಾಥೊಲಿಕ್ ಚರ್ಚಿನ ಬೋಧನೆಗಳು ಏಕೆ ತಪ್ಪಾಗಿವೆ ಎಂಬುದನ್ನು ವಿವರಿಸಿದಳು ಮತ್ತು ತಾನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಯೋಚಿಸಿದ್ದೇನೆ ಎಂದು ಅವಳಿಗೆ ಹೇಳಿದಳು. ತನ್ನ ಅಭ್ಯಾಸವನ್ನು ಮುಂದುವರಿಸುವ ಕ್ಯಾಷ್ಯಾಳ ದೃಢನಿರ್ಧಾರವನ್ನು ಅದು ಖಂಡಿತವಾಗಿಯೂ ಮಹತ್ತರವಾಗಿ ಬಲಪಡಿಸಿತು.
ಸ್ವಿಟ್ಸರ್ಲೆಂಡ್ನಲ್ಲಿರುವ ಹತ್ತು ವರ್ಷ ಪ್ರಾಯದ ಒಬ್ಬ ಹುಡುಗನು ಕಿರುಹೊತ್ತಗೆಯ ವಿತರಣೆಯಲ್ಲಿ ತನ್ನ ತಾಯಿಯೊಂದಿಗೆ ಪಾಲುತೆಗೆದುಕೊಂಡನು. ಅವನು ಒಂದು ಪ್ರತಿಯನ್ನು ಒಬ್ಬ ಯುವ ಸ್ತ್ರೀಗೆ ನೀಡಿದನು ಮತ್ತು ಅದನ್ನು ಜಾಗರೂಕವಾಗಿ ಓದುವಂತೆ ಆಕೆಯನ್ನು ಉತ್ತೇಜಿಸಿದನು. ಅದರ ಹೊದಿಕೆಯ ಮೇಲೆ ಚಿತ್ರಿಸಲ್ಪಟ್ಟ—ಭೂಮಿಯ ಮೇಲಿನ ಅಂತ್ಯವಿಲ್ಲದ ಜೀವನ—ಚಿತ್ರವನ್ನು ಅವನು ನಿಜವಾಗಿಯೂ ನಂಬಿದನೋ ಎಂಬುದಾಗಿ ಆ ಯುವ ಸ್ತ್ರೀಯು ಹುಡುಗನಿಗೆ ಕೇಳಿದಳು. ಹುಡುಗನ ಉತ್ತರವೇನು? “ಓಹ್, ಹೌದು, ನನಗೆ ಬಹಳ ಖಾತ್ರಿಯಿದೆ.” ತನ್ನ ಸ್ವಂತ ಧರ್ಮದಲ್ಲಿ ತೀರ ಅನೇಕ ವಿರೋಧಾಭಾಸಗಳಿದ್ದ ಕಾರಣ ತಾನು ಸತ್ಯ ನಂಬಿಕೆಗಾಗಿ ಅನ್ವೇಷಿಸುತ್ತಿದ್ದೆನೆಂದು ಆಗ ಆ ಸ್ತ್ರೀಯು ತಿಳಿಯಪಡಿಸಿದಳು. ಪುನರ್ಭೇಟಿಯೊಂದರಲ್ಲಿ, ಒಂದು ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಿತು.
ತತ್ಕ್ಷಣದ ಪ್ರತಿಕ್ರಿಯೆಗಳು
ಕೆಲವೊಮ್ಮೆ ರಾಜ್ಯ ವಾರ್ತೆ, ಅದನ್ನು ಓದಿದವರಲ್ಲಿ ತತ್ಕ್ಷಣದ ಪ್ರತಿಕ್ರಿಯೆಯನ್ನು ಉಂಟುಮಾಡಿತು. ಬೆಲ್ಜಿಯಮ್ನಲ್ಲಿರುವ 11 ವರ್ಷ ಪ್ರಾಯದ ಒಬ್ಬ ಹುಡುಗಿಯು ಕಿರುಹೊತ್ತಗೆಯನ್ನು ಓದಿದ ಅನಂತರ, ತಾನು ಅಂಗಡಿ ಕಳ್ಳತನ ಮಾಡುತ್ತಿದ್ದೆನೆಂದು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಿಗೆ ನಿವೇದಿಸಿದಳು. ಆ ಹುಡುಗಿಯ ತಾಯಿ ಆ ವಿಷಯವನ್ನು ಹೊರಪಡಿಸಬಾರದೆಂದು ಬಯಸಿದಳು, ಆದರೆ ಆ ಯುವ ಹುಡುಗಿಯು ಏನನ್ನು ಓದಿದ್ದಳೋ ಅದರಿಂದ ಅವಳ ಮನಸ್ಸಾಕ್ಷಿಯು ಕಲಕಿಸಲ್ಪಟ್ಟಿತು ಮತ್ತು ಶಾಪಿಂಗ್ ಸೆಂಟರಿನ ವ್ಯವಸ್ಥಾಪಕರನ್ನು ನೋಡಲು ಹೋಗುತ್ತೇನೆಂದು ಅವಳು ಹಠಹಿಡಿದಳು. ಕೊನೆಗೆ ತಾಯಿ ತನ್ನ ಮಗಳನ್ನು ಸಾಕ್ಷಿಯೊಂದಿಗೆ ಶಾಪಿಂಗ್ ಸೆಂಟರಿಗೆ ಮತ್ತೆ ಹೋಗಲು ಅನುಮತಿಸಿದಳು. ಆಕೆಯ ನಿವೇದನೆಯಿಂದ ವ್ಯವಸ್ಥಾಪಕನು ಆಶ್ಚರ್ಯಗೊಂಡನು. ಈ ವಿಧದಲ್ಲಿ ಕ್ರಿಯೆಗೈಯುವಂತೆ ಅವಳನ್ನು ಪ್ರಚೋದಿಸಿದ್ದು ರಾಜ್ಯ ವಾರ್ತೆ ಎಂಬುದನ್ನು ಅವನು ಅರಿತಾಗ, ಅದು ಅಷ್ಟೊಂದು ಶಕ್ತಿಯುತವಾದ ಯಾವ ವಿಷಯವನ್ನು ಒಳಗೊಂಡಿದೆ ಎಂಬುದನ್ನು ನೋಡಲು ತನಗಾಗಿ ಒಂದು ಪ್ರತಿಯನ್ನು ಅವನು ತೆಗೆದುಕೊಂಡನು. ಆ ಹುಡುಗಿ ಈಗ ಒಂದು ಪ್ರಗತಿಪರ ಬೈಬಲ್ ಅಭ್ಯಾಸವನ್ನು ಪಡೆದುಕೊಳ್ಳುತ್ತಿದ್ದಾಳೆ.
ಕ್ಯಾಮರೂನ್ನಲ್ಲಿನ ಸಾಕ್ಷಿಯೊಬ್ಬಳು ರಾಜ್ಯ ವಾರ್ತೆಯ ಒಂದು ಪ್ರತಿಯನ್ನು ಒಬ್ಬ ವ್ಯಕ್ತಿಯೊಂದಿಗೆ ಬಿಟ್ಟುಹೋದಳು ಮತ್ತು ಹೇಳುವುದು: “ನಾವು ಹಿಂದಿರುಗಿದಾಗ, ಅವನು ಈಗಾಗಲೇ ಅದಕ್ಕೆ ಅಡಿಗೆರೆ ಹಾಕಿದ್ದನೆಂಬುದನ್ನು ಮತ್ತು ಅವನಿಗೆ ಅನೇಕ ಪ್ರಶ್ನೆಗಳಿದ್ದವೆಂಬುದನ್ನು ನಾವು ಕಂಡುಕೊಂಡೆವು. ತೃಪ್ತಿದಾಯಕ ಉತ್ತರಗಳನ್ನು ಕಂಡುಕೊಂಡ ಬಳಿಕ, ಅವನು ಘೋಷಿಸಿದ್ದು: ‘ಧರ್ಮವು ಮಾನವಕುಲದ ಅಸಂತೋಷಕ್ಕೆ ಹೆಚ್ಚನ್ನು ಕೂಡಿಸಿದೆ ಎಂಬುದು ಖಂಡಿತವಾಗಿಯೂ ಸತ್ಯವಾಗಿದೆ. ನಿಮ್ಮ ಕಿರುಹೊತ್ತಗೆ ಹೆಚ್ಚಿನ ವಿಷಯವನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡಿದೆ, ಆದರೆ ಇನ್ನೂ ಹೆಚ್ಚನ್ನು ತಿಳಿದುಕೊಳ್ಳಲು ನಾನು ಬಯಸುತ್ತೇನೆ.’” ಈಗ ಅವನಿಗೆ ಒಂದು ಕ್ರಮವಾದ ಬೈಬಲ್ ಅಭ್ಯಾಸವಿದೆ.
ಯುರಗ್ವೈಲ್ಲಿ ಮನೆಯಿಂದ ಮನೆಗೆ ಭೇಟಿ ನೀಡುತ್ತಿದ್ದ ಒಬ್ಬ ಸಾಕ್ಷಿಯು ವ್ಯಕ್ತಿಯೊಬ್ಬನಿಗೆ ಕಿರುಹೊತ್ತಗೆಯನ್ನು ನೀಡಿದನು. ಆ ಸಾಕ್ಷಿಯು ತನ್ನ ಮನೆಯಿಂದ ಮನೆಗೆ ಸಾರುವ ಕೆಲಸವನ್ನು ಮುಂದುವರಿಸುತ್ತಾ, ಆ ವ್ಯಕ್ತಿಯ ಮನೆಯ ಹಿಂಬದಿಯ ಬಾಗಿಲನ್ನು ತಾನು ಕಂಡುಕೊಳ್ಳುವ ತನಕ ವಠಾರದ ಸುತ್ತಲೂ ಸಾರಿದನು. ಆ ವ್ಯಕ್ತಿಯು, ಕೈಯಲ್ಲಿ ಕಿರುಹೊತ್ತಗೆಯನ್ನು ಹಿಡಿದುಕೊಂಡು ತನಗಾಗಿ ಕಾಯುತ್ತಿರುವುದನ್ನು ಕಂಡುಕೊಳ್ಳಲು ಅವನು ಆಶ್ಚರ್ಯಗೊಂಡನು. ಅವನು ಅದನ್ನು ಈಗಾಗಲೇ ಓದಿದ್ದನು ಮತ್ತು ಅಧಿಕ ಮಾಹಿತಿಯನ್ನು ಬಯಸಿದ್ದನು. ಆ ಸ್ಥಳದಲ್ಲೇ ಒಂದು ಅಭ್ಯಾಸವು ಪ್ರಾರಂಭಿಸಲ್ಪಟ್ಟಿತು.
ವಿತರಣೆಯಲ್ಲಿ ಜನತೆಯು ಸಹಾಯಮಾಡುತ್ತದೆ
ಜಪಾನಿನಲ್ಲಿ ಒಬ್ಬ ಯುವ ಸಾಕ್ಷಿಯು, 50ರ ಪ್ರಾಯದಲ್ಲಿರುವ ಒಬ್ಬ ವ್ಯಕ್ತಿಯನ್ನು ಸಮೀಪಿಸಿದನು ಮತ್ತು ಅವನಿಗೆ ಟ್ರ್ಯಾಕ್ಟನ್ನು ನೀಡಿದನು. ಆ ಮನುಷ್ಯನು ಕೇಳಿದ್ದು: “ನೋಡಲು ಶಕ್ತರಾಗಿರದ ಜನರನ್ನು ನೀವು ಭೇಟಿಯಾಗುವಾಗ ಆ ಕರಪತ್ರದೊಂದಿಗೆ ನೀವೇನು ಮಾಡುತ್ತೀರಿ?” ತನಗೆ ಗೊತ್ತಿರಲಿಲ್ಲವೆಂದು ಆ ಸಾಕ್ಷಿಯು ಒಪ್ಪಿಕೊಂಡನು. ಆ ವ್ಯಕ್ತಿ ಅವನಿಗೆ ಒಂದು ಕ್ಷಣ ಕಾಯುವಂತೆ ಹೇಳಿ, ತನ್ನ ಮನೆಯೊಳಗೆ ಹಿಂದಿರುಗಿಹೋದನು. ಅವನು ರಾಜ್ಯ ವಾರ್ತೆಯ ಪ್ರತಿಯೊಂದಿಗೆ ಹಿಂದಿರುಗಿಬಂದು ಹೇಳಿದ್ದು: “ಆ ಕರಪತ್ರವನ್ನು ನಾನು ಈಗಾಗಲೇ ಪಡೆದಿದ್ದೇನೆ. ಅದು ತುಂಬ ಆಸಕ್ತಿಕರವಾದ ಮತ್ತು ಅತಿ ಪ್ರಾಮುಖ್ಯವಾದ ಮಾಹಿತಿಯನ್ನು ಒಳಗೊಂಡಿದೆ ಎಂದು ನಾನು ನೆನಸಿದೆ, ಆದುದರಿಂದ ನಾನು ಅದನ್ನು ಬ್ರೇಲ್ ಲಿಪಿಯಲ್ಲಿ ನಕಲು ಮಾಡಿದೆ. ಅಂಧರಾಗಿರುವ ವ್ಯಕ್ತಿಗಳಿಗಾಗಿ ಇದನ್ನು ದಯವಿಟ್ಟು ಉಪಯೋಗಿಸಿರಿ.” ರಾಜ್ಯ ವಾರ್ತೆಯು ಏನನ್ನು ಒಳಗೊಂಡಿತ್ತೋ ಅದರ ಪ್ರಯೋಜನವನ್ನು ಪಡೆದುಕೊಳ್ಳಲು ಅಂಧರು ತಪ್ಪಿಹೋಗದಂತೆ, ಆ ವ್ಯಕ್ತಿಯು ಅದನ್ನು ಬ್ರೇಲ್ ಲಿಪಿಯಲ್ಲಿ ನಕಲು ಮಾಡಲು ಅನೇಕ ತಾಸುಗಳನ್ನು ವ್ಯಯಿಸಿದ್ದನು.
ಸ್ಲೊವಾಕಿಯದಲ್ಲಿನ ಒಬ್ಬ ವ್ಯಕ್ತಿಯು ಕಿರುಹೊತ್ತಗೆಯನ್ನು ಎಷ್ಟು ಇಷ್ಟಪಟ್ಟನೆಂದರೆ, ಅವನು 20 ಪ್ರತಿಗಳನ್ನು ಮಾಡಿದ್ದನು, ಮತ್ತು ಈ ನಕಲು ಪ್ರತಿಗಳನ್ನು ಅವನೇ ಸ್ವತಃ ಹಂಚಿದನು. ಸ್ವಿಟ್ಸರ್ಲೆಂಡ್ನಲ್ಲಿನ ಒಬ್ಬ ಪ್ರಚಾರಕನು ಒಂದು ಕುಟುಂಬದೊಂದಿಗೆ ರಾಜ್ಯ ವಾರ್ತೆಯನ್ನು ಬಿಟ್ಟುಬಂದನು ಮತ್ತು ಕುಟುಂಬವು ಜೀವಿಸುತ್ತಿದ್ದ ಆ ಕಟ್ಟಡದ ಮೇಲಿನ ಮಹಡಿಗಳಲ್ಲಿ ಕೆಲಸವನ್ನು ಮುಂದುವರಿಸಿದನು. ಪುನಃ ಕೆಳಗೆ ಇಳಿದುಬರುತ್ತಿದ್ದಾಗ, ಕಿರುಹೊತ್ತಗೆಯ ಇನ್ನು ಹೆಚ್ಚು 19 ಪ್ರತಿಗಳಿಗಾಗಿ ಕೇಳಿಕೊಂಡ, ಆ ಕುಟುಂಬದ ಒಬ್ಬ ಎಳೆಯ ಹುಡುಗನನ್ನು ಅವನು ಸಂಧಿಸಿದನು. ಆ ಹುಡುಗನ ಶಾಲೆಯಲ್ಲಿ, ವಿದ್ಯಾರ್ಥಿಗಳು ಸಮಸ್ಯೆಗಳ ಕುರಿತು ಬರೆಯಲು ಮತ್ತು ಪರಿಹಾರಗಳಿಗಾಗಿ ಅನ್ವೇಷಿಸಲು ನೇಮಿಸಲ್ಪಟ್ಟಿದ್ದರು. ತನ್ನ ಸಹಪಾಠಿಗಳಲ್ಲಿ ಪ್ರತಿಯೊಬ್ಬರಿಗಾಗಿ ರಾಜ್ಯ ವಾರ್ತೆಯ ಒಂದು ಪ್ರತಿಯನ್ನು ಅವನು ಬಯಸಿದನು.
ಯಾರೊಬ್ಬರೂ ತಪ್ಪಿಹೋಗಲಿಲ್ಲ
ಆ ಕಾರ್ಯಾಚರಣೆಯಲ್ಲಿ ಪಾಲುತೆಗೆದುಕೊಂಡವರು ಯಾರೊಬ್ಬರೂ ತಪ್ಪಿಹೋಗಲಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲು ಪರಿಶ್ರಮಪಟ್ಟರು. ನ್ಯೂ ಕ್ಯಾಲೆಡೋನಿಯದಲ್ಲಿ ಇಬ್ಬರು ಸಾಕ್ಷಿಗಳು ರಾಜ್ಯ ವಾರ್ತೆಯನ್ನು ವಿತರಿಸುವ ಸಲುವಾಗಿ ಒಂದು ದೂರದ ಬುಡಕಟ್ಟಿನ ಕ್ಷೇತ್ರಕ್ಕೆ ಪಯಣಿಸುತ್ತಿದ್ದರು. ಹೋಗುವ ಮಾರ್ಗದಲ್ಲಿ, ಉಪಯೋಗಿಸಲ್ಪಡದ ಹಾಗೆ ತೋರುವ ಒಂದು ಹಾದಿಯನ್ನು ಅವರು ಗಮನಿಸಿದರು, ಆದರೂ ಅದರ ಕೊನೆಯಲ್ಲಿ ಯಾರಾದರೂ ಜೀವಿಸುತ್ತಾರೋ ಎಂಬುದನ್ನು ಅವರು ನೋಡಲು ನಿರ್ಧರಿಸಿದರು. ಕಾರನ್ನು ಬಿಟ್ಟು, ಹರಿಯುತ್ತಿರುವ ತೊರೆಯನ್ನು ಹಾದುಹೋಗುತ್ತಾ ಕೊನೆಗೆ ಅವರು ಮನೆಯೊಂದನ್ನು ಕಂಡುಕೊಳ್ಳುವ ತನಕ, ದಾರಿಯುದ್ದಕ್ಕೂ ನಡೆದು ಪಯಣಿಸಿದರು. ಯೆಹೋವನ ಸಾಕ್ಷಿಗಳ ಕುರಿತಾಗಿ ಎಂದೂ ಕೇಳದಿದ್ದ ಒಬ್ಬ ದಂಪತಿಗಳು ಅಲ್ಲಿ ಜೀವಿಸಿದ್ದರು ಮತ್ತು ಅವರು ರಾಜ್ಯ ವಾರ್ತೆಯ ಒಂದು ಪ್ರತಿಯನ್ನು ಸ್ವೀಕರಿಸಿದರು. ಅನಂತರ ಪ್ರಚಾರಕರು ಪುನರ್ಭೇಟಿಯೊಂದನ್ನು ಮಾಡಿದರು ಮತ್ತು ಅವರ ಆಶ್ಚರ್ಯಕ್ಕೆ, ಸಾಕ್ಷಿಗಳು ತಮ್ಮ ಕಾರನ್ನು ಮನೆಯ ಹತ್ತಿರ ಚಲಾಯಿಸಿಕೊಂಡು ಬರಸಾಧ್ಯವಾಗುವಂತೆ ಆ ದಂಪತಿಗಳು ರಸ್ತೆಯನ್ನು ಮತ್ತು ಹಲವಾರು ಸಣ್ಣ ಸೇತುವೆಗಳನ್ನು ದುರಸ್ತು ಮಾಡಿರುವುದನ್ನು ಕಂಡುಕೊಂಡರು. ಒಂದು ಕ್ರಮವಾದ ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಿತು.
ಪೋಲೆಂಡ್ನಲ್ಲಿ ಒಬ್ಬ ಸಾಕ್ಷಿಯು ಮನೆಯವನೊಬ್ಬನಿಗೆ ರಾಜ್ಯ ವಾರ್ತೆಯ ಒಂದು ಪ್ರತಿಯನ್ನು ನೀಡುವ ಸಲುವಾಗಿ ಕಟ್ಟಡ ಕಟ್ಟುವ ನಿವೇಶನವೊಂದನ್ನು ಹಾದುಹೋಗಬೇಕಾಗಿತ್ತು. ಆ ಕಟ್ಟಡ ಕಟ್ಟುವ ನಿವೇಶನದ ಹಿಂಬದಿಯಿಂದ ಅವನು ಹಾದುಹೋದಂತೆ ಕೆಲಸಗಾರರು ಗಮನಿಸಿದರು. ಕೊನೆಗೆ, ಕೆಲಸಗಾರರಲ್ಲಿ ಒಬ್ಬನು ತಮ್ಮನ್ನು ಮರೆತುಬಿಡಬಾರದೆಂದು ಅವನನ್ನು ಕೇಳಿಕೊಳ್ಳುತ್ತಾ, ಅವನನ್ನು ಕರೆದನು. ಅವನು ಅವರನ್ನು ಸಮೀಪಿಸಿದಾಗ, ಅವರು ಕೆಲಸ ಮಾಡುವುದನ್ನು ನಿಲ್ಲಿಸಿ, ಕಿರುಹೊತ್ತಗೆಯ ನೀಡುವಿಕೆಯ ಕುರಿತಾಗಿ ಜಾಗರೂಕವಾಗಿ ಆಲಿಸಿದರು. ಅವರು ರಾಜ್ಯ ವಾರ್ತೆಯ ಪ್ರತಿಗಳನ್ನು ಹಾಗೂ ಪತ್ರಿಕೆಗಳನ್ನು ಮತ್ತು ಅನಂತರ, ಪುನರ್ಭೇಟಿಯೊಂದರಲ್ಲಿ ಪುಸ್ತಕಗಳನ್ನು ಸ್ವೀಕರಿಸಿದರು.
ಕೋಟಿಗಟ್ಟಲೆ ರಾಜ್ಯ ವಾರ್ತೆ ನಂಬ್ರ 34, ಅನೇಕ ಭಾಷೆಗಳಲ್ಲಿ ವಿತರಿಸಲ್ಪಟ್ಟಿತು. ಅದರ ಸಂದೇಶವು ಈಗಾಗಲೇ ಒಂದು ಶಕ್ತಿಯುತವಾದ ಪರಿಣಾಮವನ್ನು ಹೊಂದಿತ್ತು. ಸಮಸ್ಯೆಮುಕ್ತ ಪ್ರಮೋದವನವೊಂದು ಶಕ್ಯವಿದೆ ಎಂಬುದನ್ನು ಅನೇಕರು ಅರಿತಿದ್ದಾರೆ. ಸಹೃದಯಿಗಳು ಪ್ರತಿಕ್ರಿಯೆ ತೋರಿಸುವುದನ್ನು ಮುಂದುವರಿಸುವಂತೆ ಮತ್ತು ಅಂತಿಮವಾಗಿ ಯಾರು “ದೇಶವನ್ನು ಅನುಭವಿಸಿ ಶಾಂತಿಯ ಪುಷ್ಕಳತೆಯಲ್ಲಿ ತಮ್ಮ ಅತ್ಯಾನಂದವನ್ನು ಕಂಡುಕೊಳ್ಳುವ”ರೋ “ಆ ದೀನರ” ನಡುವೆ ಇರುವಂತೆ ನಾವು ಪ್ರಾರ್ಥಿಸುತ್ತೇವೆ.—ಕೀರ್ತನೆ 37:11, NW.
[ಪುಟ 31 ರಲ್ಲಿರುವ ಚೌಕ]
ಪತ್ರಿಕೆಗಳನ್ನು ಹಂಚುತ್ತಾ ಇರಿ!
1995ರ ಎಪ್ರಿಲ್ ಮತ್ತು ಮೇ ತಿಂಗಳುಗಳು, ರಾಜ್ಯ ವಾರ್ತೆ ನಂಬ್ರ 34ರ ವಿತರಿಸುವಿಕೆಯ ಅತ್ಯಂತ ಯಶಸ್ವೀ ಕಾರ್ಯಾಚರಣೆಯನ್ನು ಕಂಡವು. ಆ ಎರಡು ತಿಂಗಳುಗಳ ಅವಧಿಯಲ್ಲಿ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಒಂದು ಎದ್ದುಕಾಣುವ ವಿತರಿಸುವಿಕೆಯೂ ಇತ್ತು. ಉದಾಹರಣೆಗಾಗಿ, ಚೆಕ್ ರಿಪಬ್ಲಿಕ್ನಲ್ಲಿನ ಒಬ್ಬ ಸಹೋದರನು ಎಪ್ರಿಲ್ ತಿಂಗಳಲ್ಲಿ ರಾಜ್ಯ ವಾರ್ತೆಯ 250 ಪ್ರತಿಗಳನ್ನು ಮತ್ತು 750 ಪತ್ರಿಕೆಗಳನ್ನು ತಾನು ನೀಡಿದೆನೆಂದು ವರದಿಸಿದನು. ಗ್ವಾಡೆಲೂಪ್ನಲ್ಲಿ, ಎಪ್ರಿಲ್ 15ರ ಶನಿವಾರವನ್ನು, ಒಂದು ವಿಶೇಷ ಪತ್ರಿಕಾ ದಿನವನ್ನಾಗಿ ಆರಿಸಿಕೊಳ್ಳಲಾಯಿತು. ಬಹುಮಟ್ಟಿಗೆ ದೇಶದಲ್ಲಿನ ಪ್ರತಿಯೊಬ್ಬ ಪ್ರಚಾರಕನು ಆ ದಿನದ ಶುಶ್ರೂಷೆಯಲ್ಲಿ ಪಾಲನ್ನು ತೆಗೆದುಕೊಂಡನು! ಸ್ಲೊವಾಕಿಯ ಎಪ್ರಿಲ್ ತಿಂಗಳಲ್ಲಿ ಪತ್ರಿಕಾ ವಿತರಣೆಯಲ್ಲಿ ಒಂದು ಹೊಸ ಉಚ್ಚಾಂಕವನ್ನು ಪಡೆದಿತ್ತು. ತದ್ರೀತಿಯ ವರದಿಗಳು ಇತರ ಅನೇಕ ದೇಶಗಳಿಂದ ಬಂದವು.
ಆದುದರಿಂದ 1996ರ ಎಪ್ರಿಲ್ ಮತ್ತು ಮೇ ತಿಂಗಳುಗಳನ್ನು ಪತ್ರಿಕಾ ವಿತರಣೆಗಾಗಿ ಎದ್ದುಕಾಣುವ ತಿಂಗಳುಗಳನ್ನಾಗಿ ಏಕೆ ಮಾಡಬಾರದು? ಸಭೆಗಳು ವಿಶೇಷ ಪತ್ರಿಕಾ ದಿನಗಳನ್ನು ಸಂಘಟಿಸಬಲ್ಲವು. ವ್ಯಕ್ತಿಗಳು ಆಕ್ಸಿಲಿಯರಿ ಪಯನೀಯರ್ ಸೇವೆಯಲ್ಲಿ ಪಾಲನ್ನು ತೆಗೆದುಕೊಳ್ಳಸಾಧ್ಯವಿದೆ. ಈ ವಿಧಗಳಲ್ಲಿ ಮತ್ತು ಇತರ ವಿಧಗಳಲ್ಲಿ, ಪತ್ರಿಕಾ ವಿತರಣೆಯು ಪ್ರೋತ್ಸಾಹಿಸಲ್ಪಡಸಾಧ್ಯವಿದೆ ಮತ್ತು ರಾಜ್ಯ ವಾರ್ತೆ ನಂಬ್ರ 34ರಲ್ಲಿ ಘೋಷಿಸಲ್ಪಟ್ಟಿರುವ ಪ್ರಮುಖ ಸಂದೇಶವು ಹಬ್ಬುತ್ತಾ ಹೋಗುವುದು. ಆಗ, ಕಳೆದ ವರ್ಷದಲ್ಲಿ ಸಂಭವಿಸಿದಂತೆಯೇ, ನಾವು ತೋರಿಸುವ ಹುರುಪಿನ ಆತ್ಮವನ್ನು ನಿಶ್ಚಯವಾಗಿಯೂ ಯೆಹೋವನು ಆಶೀರ್ವದಿಸುವನು.—2 ತಿಮೊಥೆಯ 4:22.