ನೀವು ನಿಜವಾಗಿಯೂ ದೇವರನ್ನು ಪ್ರೀತಿಸಸಾಧ್ಯವೊ?
“ಮನುಷ್ಯರಲ್ಲಿ ಯಾವನೂ ನನ್ನನ್ನು ನೋಡಿ ಜೀವಿಸಲಾರನು,” ಎಂದು ದೇವರು ಹೇಳುತ್ತಾನೆ. (ವಿಮೋಚನಕಾಂಡ 33:20) ಇನ್ನೂ ಹೆಚ್ಚಾಗಿ, ಬೈಬಲ್ ಸಮಯಗಳಂದಿನಿಂದ, ಆತನೊಂದಿಗೆ ನೇರವಾದ ಸಂವಾದವನ್ನು ಯಾವುದೇ ಮಾನವನು ಮಾಡಿದುದರ ಕುರಿತು ಯಾವ ಪ್ರಮಾಣವು ಇರುವುದಿಲ್ಲ. ನೀವು ಎಂದೂ ನೇರವಾಗಿ ನೋಡಿರದ ಅಥವಾ ಕೇಳಿರದ ಯಾರೊ ಒಬ್ಬರಿಗಾಗಿ ಆಳವಾದ ಮಮತೆಯನ್ನು ವಿಕಸಿಸಿಕೊಳ್ಳುವುದು, ಕಷ್ಟಕರವಾಗಿ—ಅಸಾಧ್ಯವಾಗಿಯೂ—ತೋರುವುದಿಲ್ಲವೊ? ವಿಶ್ವದ ಸೃಷ್ಟಿಕರ್ತನೊಂದಿಗೆ ಒಂದು ಪ್ರೀತಿಯ ಸಂಬಂಧವನ್ನು ಪಡೆದಿರುವುದು ನಿಜವಾಗಿಯೂ ಸಾಧ್ಯವೊ?
ದೇವರೊಂದಿಗೆ ಒಂದು ಆದರಣೀಯ ವೈಯಕ್ತಿಕ ಅಂಟಿಕೆಯನ್ನು ವಿಕಸಿಸಿಕೊಳ್ಳುವುದು ಸಂಭವನೀಯ ಎಂಬುದರಲ್ಲಿ ಯಾವ ಸಂದೇಹವೂ ಇರಬಾರದು. ಧರ್ಮೋಪದೇಶಕಾಂಡ 6:5ರಲ್ಲಿ, ಇಸ್ರಾಯೇಲ್ ರಾಷ್ಟ್ರವು ಹೀಗೆ ಆಜ್ಞಾಪಿಸಲ್ಪಟ್ಟಿತ್ತೆಂದು ನಾವು ಓದುತ್ತೇವೆ: “ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣ ಹೃದಯದಿಂದಲೂ ಪೂರ್ಣ ಪ್ರಾಣದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸಬೇಕು.” ಯೇಸು ಕ್ರಿಸ್ತನು ತದನಂತರ ಈ ನಿಯಮವನ್ನು ತನ್ನ ಹಿಂಬಾಲಕರಿಗೆ ಪುನಃ ದೃಢೀಕರಿಸಿ, ಕೂಡಿಸಿದ್ದು: ‘ಈ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು.’ (ಮತ್ತಾಯ 22:37, 38) ಇಂತಹ ಒಂದು ಸಂಬಂಧವು ಅಪ್ರಾಪ್ಯವಾಗಿರುತ್ತಿದ್ದಲ್ಲಿ, ದೇವರನ್ನು ಪ್ರೀತಿಸುವಂತೆ ಬೈಬಲು ನಮ್ಮನ್ನು ಪ್ರೇರೇಪಿಸುತ್ತಿತ್ತೊ?
ಆದರೆ, ಯೆಹೋವನು ಅದನ್ನು ಆಜ್ಞಾಪಿಸುತ್ತಾನೆಂಬ ಕಾರಣದಿಂದ ಮಾತ್ರ ನಾವು ಆತನನ್ನು ಪ್ರೀತಿಸಬೇಕೆಂದು ಆತನು ಅಪೇಕ್ಷಿಸುತ್ತಾನೊ? ಇಲ್ಲ. ಆತನನ್ನು ಪ್ರೀತಿಸುವ ಸಾಮರ್ಥ್ಯದೊಂದಿಗೆ ದೇವರು ಪ್ರಥಮ ಮಾನವ ದಂಪತಿಗಳನ್ನು ಸೃಷ್ಟಿಸಿದನು. ಆದಾಮ ಹವ್ವರು ತಮ್ಮ ಸೃಷ್ಟಿಕರ್ತನೊಂದಿಗೆ ಒಂದು ಪ್ರೀತಿಯ ಸಂಬಂಧದೊಳಗೆ ಒತ್ತಾಯಿಸಲ್ಪಡಲಿಲ್ಲ. ಬದಲಿಗೆ, ಆತನಿಗಾಗಿ ಆಳವಾದ ಪ್ರೇಮವನ್ನು ವಿಕಸಿಸುವ ಆದರ್ಶ ಪರಿಸ್ಥಿತಿಗಳಲ್ಲಿ ದೇವರು ಅವರನ್ನು ಇರಿಸಿದನು. ಆಯ್ಕೆಯು ಅವರದ್ದಾಗಿತ್ತು—ದೇವರ ಕಡೆಗೆ ಸಮೀಪಿಸುವುದು ಅಥವಾ ಆತನಿಂದ ದೂರ ಸರಿಯುವುದು.
ಆದಾಮ ಹವ್ವರು ದಂಗೆಯೇಳಲು ಆರಿಸಿಕೊಂಡರು. (ಆದಿಕಾಂಡ 2:16, 17; 3:6, 7) ಅವರ ಸಂತತಿಯವರಿಗಾದರೊ, ಸೃಷ್ಟಿಕರ್ತನೊಂದಿಗೆ ಒಂದು ಪ್ರೀತಿಯ ಸಂಬಂಧವನ್ನು ವಿಕಸಿಸಿಕೊಳ್ಳಲಿಕ್ಕಾಗಿ ಸಾಧ್ಯತೆಯು ಇರುತ್ತಿತ್ತು.
ಸತ್ಯ ದೇವರೊಂದಿಗೆ ನಡೆಯುವುದು
ಉದಾಹರಣೆಗೆ, ಬೈಬಲಿನಲ್ಲಿ, ಅಬ್ರಹಾಮನು ದೇವರ “ಸ್ನೇಹಿತ”ನಾಗಿರುವಂತೆ ಹೇಳಲಾಗಿದೆ. (ಯಾಕೋಬ 2:23) ಆದರೂ ದೇವರೊಂದಿಗೆ ಒಂದು ಅನ್ಯೋನ್ಯವಾದ ಸಂಬಂಧವನ್ನು ಅನುಭವಿಸಿದವರಲ್ಲಿ ಅಬ್ರಹಾಮನು ಖಂಡಿತವಾಗಿಯೂ ಏಕೈಕನಾಗಿರಲಿಲ್ಲ. ಯೆಹೋವನಿಗೆ ಯಥಾರ್ಥವಾದ ಮಮತೆಯನ್ನು ಪ್ರದರ್ಶಿಸಿದ ಹಾಗೂ ‘ಸತ್ಯ ದೇವರೊಂದಿಗೆ ನಡೆದ’ ಇತರ ಅನೇಕ ಅಪರಿಪೂರ್ಣ ಮಾನವರ ಕುರಿತು ಬೈಬಲು ಮಾತಾಡುತ್ತದೆ.—ಆದಿಕಾಂಡ 5:24; 6:9; ಯೋಬ 29:4; ಕೀರ್ತನೆ 25:14; ಜ್ಞಾನೋಕ್ತಿ 3:32.
ಬೈಬಲ್ ಸಮಯಗಳಲ್ಲಿನ ದೇವರ ಸೇವಕರು, ದೇವರಿಗಾಗಿ ಪ್ರೀತಿ ಮತ್ತು ಮಮತೆಯೊಂದಿಗೆ ಜನಿಸಿರಲಿಲ್ಲ. ಅವರು ಅದನ್ನು ವಿಕಸಿಸಿಕೊಳ್ಳಬೇಕಿತ್ತು. ಹೇಗೆ? ಯೆಹೋವ ಎಂಬ ಆತನ ವೈಯಕ್ತಿಕವಾದ ಹೆಸರಿನಿಂದ ಆತನ ಪರಿಚಯವನ್ನು ಮಾಡಿಕೊಳ್ಳುವ ಮೂಲಕ. (ವಿಮೋಚನಕಾಂಡ 3:13-15; 6:2, 3) ಆತನ ಅಸ್ತಿತ್ವ ಹಾಗೂ ದೇವತ್ವದ ಕುರಿತು ಅರಿವುಳ್ಳವರಾಗಿರುವ ಮೂಲಕ. (ಇಬ್ರಿಯ 11:6) ಆತನ ಪ್ರೀತಿಯ ಕ್ರಿಯೆಗಳ ಕುರಿತು ಪದೇ ಪದೇ ಮನನಮಾಡುವ ಮೂಲಕ. (ಕೀರ್ತನೆ 63:6) ದೇವರಿಗೆ ಪ್ರಾರ್ಥನೆಯಲ್ಲಿ ತಮ್ಮ ಆಂತರ್ಯದಾಳದ ಆಲೋಚನೆಗಳನ್ನು ವ್ಯಕ್ತಪಡಿಸುವ ಮೂಲಕ. (ಕೀರ್ತನೆ 39:12) ಆತನ ಒಳ್ಳೆಯತನದ ಕುರಿತು ಕಲಿಯುವ ಮೂಲಕ. (ಜೆಕರ್ಯ 9:17) ಆತನ ಮನನೋಯಿಸುವುದರ ಕುರಿತು ಹಿತಕರವಾದ ಭಯವನ್ನು ವಿಕಸಿಸಿಕೊಳ್ಳುವ ಮೂಲಕ.—ಜ್ಞಾನೋಕ್ತಿ 16:6.
ನೀವು ದೇವರ ಸ್ನೇಹಿತರಾಗಿ ಆತನೊಂದಿಗೆ ನಡೆಯಸಾಧ್ಯವೊ? ನೀವು ದೇವರನ್ನು ನೋಡಲು ಅಥವಾ ಆತನ ಧ್ವನಿಯನ್ನು ಕೇಳಲು ಸಾಧ್ಯವಿಲ್ಲ, ನಿಜ. ಆದರೂ, ‘ತನ್ನ ಗುಡಾರದಲ್ಲಿ ಅತಿಥಿ’ಯಾಗಲು, ತನ್ನ ಸ್ನೇಹಿತನಾಗಲು ಯೆಹೋವನು ನಿಮ್ಮನ್ನು ಆಮಂತ್ರಿಸುತ್ತಾನೆ. (ಕೀರ್ತನೆ 15:1-5) ಹೀಗೆ, ನೀವು ದೇವರನ್ನು ಪ್ರೀತಿಸಲು ಸಾಧ್ಯವಿದೆ. ಆದರೆ ಆತನೊಂದಿಗೆ ಒಂದು ಆಪ್ತವಾದ ಹಾಗೂ ಮಮತೆಯ ಸಂಬಂಧವನ್ನು ನೀವು ಹೇಗೆ ವಿಕಸಿಸಿಕೊಳ್ಳಬಲ್ಲಿರಿ?