ವಾಚಕರಿಂದ ಪ್ರಶ್ನೆಗಳು
ಯೇಸುವಿಗೆ ಈಗ ಅರ್ಮಗೆದೋನಿನ ತಾರೀಖು ತಿಳಿದಿದೆಯೊ?
ಅವನಿಗೆ ತಿಳಿದಿದೆಯೆಂದು ನಂಬುವುದು ಬಹಳ ಸಮಂಜಸವೆಂದು ತೋರುತ್ತದೆ.
ಈ ಪ್ರಶ್ನೆಯಾದರೂ ಏಕೆ ಏಳುತ್ತದೆಂದು ಕೆಲವರು ಕುತೂಹಲಪಡಸಾಧ್ಯವಿದೆ. ಬಹುಶಃ ಅದು ಮತ್ತಾಯ 24:36ರಲ್ಲಿ ಕಂಡುಕೊಳ್ಳಲ್ಪಡುವ ಯೇಸುವಿನ ಹೇಳಿಕೆಯ ಕಾರಣದಿಂದಾಗಿದೆ: “ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.” “ಮಗನಿಗೂ ತಿಳಿಯದು” ಎಂಬ ವಾಕ್ಸರಣಿಯನ್ನು ಗಮನಿಸಿರಿ.
ಈ ವಚನವು, “ಅದು ಯಾವಾಗ ಆಗುವದು? ನೀನು ಪ್ರತ್ಯಕ್ಷನಾಗುವದಕ್ಕೂ [“ಸಾನ್ನಿಧ್ಯ,” NW] ಯುಗದ ಸಮಾಪ್ತಿಗೂ ಸೂಚನೆಯೇನು?” ಎಂಬ ಅಪೊಸ್ತಲರ ಪ್ರಶ್ನೆಗೆ, ಯೇಸು ಕೊಟ್ಟ ಉತ್ತರದ ಭಾಗವಾಗಿದೆ. (ಮತ್ತಾಯ 24:3) “ಸೂಚನೆ”ಯನ್ನು ರಚಿಸುವ ಸಾಕ್ಷ್ಯಗಳ ಕುರಿತಾದ ಅವನ ಈಗಿನ ಪ್ರಖ್ಯಾತ ಪ್ರವಾದನೆಯಲ್ಲಿ, ತನ್ನ ಸಾನ್ನಿಧ್ಯವನ್ನು ಸೂಚಿಸಲಿದ್ದ ಯುದ್ಧಗಳನ್ನು, ಆಹಾರದ ಅಭಾವಗಳನ್ನು, ಭೂಕಂಪಗಳನ್ನು, ಸತ್ಯ ಕ್ರೈಸ್ತರ ಹಿಂಸೆಯನ್ನು ಮತ್ತು ಭೂಮಿಯ ಮೇಲೆ ಸಂಭವಿಸಲಿರುವ ಇತರ ವಿಷಯಗಳನ್ನು ಅವನು ಮುಂತಿಳಿಸಿದನು. ಈ ಸೂಚನೆಯ ಮೂಲಕ, ಅಂತ್ಯವು ಸಮೀಪವಾಗಿತ್ತೆಂಬುದನ್ನು ಅವನ ಹಿಂಬಾಲಕರು ಗುರುತಿಸಸಾಧ್ಯವಿತ್ತು. ಅವನು ಈ ಸಾಮೀಪ್ಯವನ್ನು, ಬೇಸಗೆಯು ಹತ್ತಿರವಾಗಿತ್ತೆಂಬುದನ್ನು ಸೂಚಿಸುತ್ತಾ, ಅಂಜೂರದ ಮರವೊಂದು ಎಲೆ ಬಿಡಲಾರಂಭಿಸುವ ಸಮಯದೊಂದಿಗೆ ದೃಷ್ಟಾಂತಿಸಿದನು. ಅವನು ಕೂಡಿಸಿದ್ದು: “ಹಾಗೆಯೇ ನೀವು ಸಹ ಇದನ್ನೆಲ್ಲಾ ನೋಡುವಾಗ ಆ ದಿನವು ಹತ್ತರವದೆ, ಬಾಗಲಲ್ಲೇ ಅದೆ ಎಂದು ತಿಳುಕೊಳ್ಳಿರಿ.”—ಮತ್ತಾಯ 24:33.
ಆದರೆ ಅಂತ್ಯವು ಯಾವಾಗ ಬರುವುದೆಂಬುದನ್ನು ಯೇಸು ಖಂಡಿತವಾಗಿ ಹೇಳಲಿಲ್ಲ. ಬದಲಿಗೆ, ನಾವು ಮತ್ತಾಯ 24:36ರಲ್ಲಿ ಓದುವ ವಿಷಯವನ್ನು ಅವನು ತಿಳಿಸಿದನು. ಅದು ಬೈಬಲ್ ಸೊಸೈಟಿ ಆಫ್ ಇಂಡಿಯದ ಕನ್ನಡ ಬೈಬಲ್‌ನಲ್ಲಿ ಹಾಗೆ ಓದಲ್ಪಡುತ್ತದೆ, ಮತ್ತು ಅನೇಕ ಆಧುನಿಕ ಬೈಬಲುಗಳು ತದ್ರೀತಿಯಲ್ಲಿ ಓದಿ ಹೇಳುತ್ತವೆ. ಆದರೂ ಕೆಲವು ಹಳೆಯ ತರ್ಜುಮೆಗಳು “ಮಗನಿಗೂ ತಿಳಿಯದು” ಎಂಬ ವಾಕ್ಸರಣಿಯನ್ನು ಒಳಗೊಂಡಿರುವುದಿಲ್ಲ.
ಉದಾಹರಣೆಗೆ, ಕ್ಯಾತೊಲಿಕ್ ಡೂಯೇ ವರ್ಷನ್ ಓದುವುದು: “ಆದರೆ ಆ ದಿನ ಮತ್ತು ಗಳಿಗೆಯ ಕುರಿತು ಯಾರಿಗೂ ತಿಳಿಯದು, ಸ್ವರ್ಗದ ದೂತರಿಗೂ ತಿಳಿಯದು, ಬದಲಿಗೆ ತಂದೆಗೆ ಮಾತ್ರ.” ಕಿಂಗ್ ಜೇಮ್ಸ್ ವರ್ಷನ್ ತದ್ರೀತಿಯಲ್ಲಿ ಓದುತ್ತದೆ. “ಮಗನಿಗೂ [ಅಥವಾ, ಮಗನಿಗಾಗಲಿ] ತಿಳಿಯದು” ಎಂಬ ವಾಕ್ಸರಣಿಯು, ಮಾರ್ಕ 13:32ರಲ್ಲಿ ಕಂಡುಕೊಳ್ಳಲ್ಪಡುವುದಾದರೂ, ಇಲ್ಲಿ ಬಿಟ್ಟುಬಿಡಲಾಗಿದೆ ಏಕೆ? ಏಕೆಂದರೆ ಹಿಂದೆ 17ನೆಯ ಶತಮಾನದ ಆರಂಭದಲ್ಲಿ, ಆ ಎರಡು ತರ್ಜುಮೆಗಳು ತಯಾರಿಸಲ್ಪಟ್ಟಾಗ, ಭಾಷಾಂತರಕಾರರು ಯಾವ ಹಸ್ತ ಪ್ರತಿಗಳಿಂದ ಕೆಲಸಮಾಡಿದರೊ, ಆ ಹಸ್ತ ಪ್ರತಿಗಳಲ್ಲಿ ಈ ಅಭಿವ್ಯಕ್ತಿಯು ಇರಲಿಲ್ಲ. ಆದರೆ ಈ ನಡುವೆ ಅನೇಕ ಹಳೆಯ ಗ್ರೀಕ್ ಹಸ್ತ ಪ್ರತಿಗಳು ಬೆಳಕಿಗೆ ಬಂದಿವೆ. ಮತ್ತಾಯನ ಮೂಲ ಗ್ರಂಥದ ಸಮಯಕ್ಕೆ ಬಹಳಷ್ಟು ಹತ್ತಿರವಿರುವ ಈ ಹಸ್ತ ಪ್ರತಿಗಳು, ಮತ್ತಾಯ 24:36ರಲ್ಲಿ “ಮಗನಿಗೂ ತಿಳಿಯದು” ಎಂಬ ವಾಕ್ಸರಣಿಯನ್ನು ಒಳಗೊಂಡಿದೆ.
ಸ್ವಾರಸ್ಯಕರವಾಗಿ, ಕ್ಯಾತೊಲಿಕ್ ಜೆರೂಸಲೇಮ್ ಬೈಬಲ್ ಆ ವಾಕ್ಸರಣಿಯನ್ನು—ಲ್ಯಾಟಿನ್ ವಲ್ಗೆಟ್ ಆ ಅಭಿವ್ಯಕ್ತಿಯನ್ನು “ಬಹುಶಃ ದೇವತಾಶಾಸ್ತ್ರದ ಕಾರಣಗಳಿಗಾಗಿ” ಬಿಟ್ಟುಬಿಟ್ಟಿತೆಂದು ಹೇಳುವ ಒಂದು ಪಾದಟಿಪ್ಪಣಿಯೊಂದಿಗೆ—ಸೇರಿಸಿಕೊಳ್ಳುತ್ತದೆ. ನಿಶ್ಚಯವಾಗಿಯೂ ಹೌದು! ತ್ರಯೈಕ್ಯದಲ್ಲಿ ನಂಬಿಕೆಯನ್ನಿಟ್ಟ ಭಾಷಾಂತರಕಾರರು ಅಥವಾ ನಕಲು ಬರೆಯುವವರು, ಯೇಸುವಿನ ತಂದೆಗಿದ್ದ ಜ್ಞಾನವು ಯೇಸುವಿಗೆ ಇರಲಿಲ್ಲವೆಂದು ಸೂಚಿಸಿದ ಒಂದು ವಾಕ್ಸರಣಿಯನ್ನು ಬಿಟ್ಟುಬಿಡಲು ಪ್ರಲೋಭಿಸಲ್ಪಟ್ಟಿರಬಹುದಿತ್ತು. ಯೇಸು ಮತ್ತು ಅವನ ತಂದೆಯು ಒಂದು ತ್ರಯೈಕ್ಯ ದೇವರ ಭಾಗಗಳಾಗಿದ್ದಲ್ಲಿ, ನಿರ್ದಿಷ್ಟವಾದೊಂದು ನಿಜತ್ವವು ಅವನಿಗೆ ಹೇಗೆ ತಿಳಿಯದೆ ಇರಸಾಧ್ಯವಿತ್ತು?
ತದ್ರೀತಿಯಲ್ಲಿ, ಬಿ. ಎಮ್. ಮೆಟ್ಸ್‌ಗರ್ ಅವರಿಂದ ಬರೆಯಲ್ಪಟ್ಟ, ಎ ಟೆಕ್ಸ್‌ಚುವಲ್ ಕಾಮೆಂಟರಿ ಆನ್ ದ ಗ್ರೀಕ್ ನ್ಯೂ ಟೆಸ್ಟಮೆಂಟ್, ಹೇಳುವುದು: “‘ಮಗನಿಗಾಗಲಿ ತಿಳಿಯದು’ ಎಂಬ ಶಬ್ದಗಳು, ತದನಂತರದ ಬೈಸಂಟೈನ್ ಗ್ರಂಥವನ್ನು ಸೇರಿಸಿ, ಮತ್ತಾಯನ [ಹಸ್ತ ಪ್ರತಿ] ಹೆಚ್ಚಿನ ಸಾಕ್ಷ್ಯಗಳಲ್ಲಿ ಇಲ್ಲದೆ ಹೋಗಿವೆ. ಇನ್ನೊಂದು ಕಡೆಯಲ್ಲಿ, ಅಲೆಗ್ಸಾಂಡ್ರಿಯನ್, ವೆಸ್ಟರ್ನ್, ಮತ್ತು ಸೀಸೇರಿಯನ್ ರೀತಿಯ ಗ್ರಂಥಗಳ ಅತ್ಯುತ್ತಮ ಮಾದರಿಗಳಲ್ಲಿ ಆ ವಾಕ್ಸರಣಿಯಿದೆ. ಈ ಶಬ್ದಗಳು ಮಾರ್ಕ 13:32ಕ್ಕೆ ಕೂಡಿಸಲ್ಪಟ್ಟಿವೆ ಎಂದು ಭಾವಿಸುವುದಕ್ಕಿಂತ, ಆ ಶಬ್ದಗಳು ಪ್ರಸ್ತುತಪಡಿಸುವ ತಾತ್ವಿಕ ತೊಂದರೆಯ ಕಾರಣ ಅವುಗಳನ್ನು ಬಿಟ್ಟುಬಿಡಲಾಗಿದೆ ಎಂಬುದು ಹೆಚ್ಚು ಸಂಭವನೀಯವಾಗಿದೆ.—ಓರೆಅಕ್ಷರಗಳು ನಮ್ಮವು.
ಆರಂಭದ ಹಸ್ತ ಪ್ರತಿಗಳ ಆ “ಅತ್ಯುತ್ತಮ ಮಾದರಿಗಳು,” ಅಂತ್ಯದ ಗಳಿಗೆಯ ಜ್ಞಾನದ ವಿಷಯವಾಗಿರುವ ಸಮಂಜಸವಾದ ಪರೋಗಮನವನ್ನು ಪ್ರಸ್ತುತಪಡಿಸುವ ಓದುವಿಕೆಯನ್ನು ಬೆಂಬಲಿಸುತ್ತವೆ. ಅಂತ್ಯದ ಗಳಿಗೆಯು ದೇವದೂತರಿಗೆ ತಿಳಿದಿರಲಿಲ್ಲ; ಮಗನಿಗೂ ತಿಳಿದಿರಲಿಲ್ಲ; ತಂದೆಗೆ ಮಾತ್ರ ತಿಳಿದಿತ್ತು. ಮತ್ತು ಇದು ಮತ್ತಾಯ 20:23ರಲ್ಲಿ ಕಂಡುಕೊಳ್ಳಲ್ಪಡುವ ಯೇಸುವಿನ ಮಾತುಗಳೊಂದಿಗೆ ಸುಸಂಗತವಾಗಿದೆ. ರಾಜ್ಯದಲ್ಲಿ ಪ್ರಧಾನ ಸ್ಥಳಗಳನ್ನು ದಯಪಾಲಿಸುವ ಅಧಿಕಾರ ತನಗಿರಲಿಲ್ಲ ಬದಲಿಗೆ ತಂದೆಗೆ ಇತ್ತೆಂಬುದನ್ನು ಅವನು ಅಲ್ಲಿ ಒಪ್ಪಿಕೊಂಡನು.
ಆದಕಾರಣ, ಯೇಸುವಿನ ಸ್ವಂತ ಮಾತುಗಳು ತೋರಿಸುವುದೇನೆಂದರೆ, ಭೂಮಿಯ ಮೇಲಿದ್ದಾಗ ಅವನಿಗೆ ‘ಲೋಕದ ಅಂತ್ಯದ’ ತಾರೀಖು ತಿಳಿದಿರಲಿಲ್ಲ. ತರುವಾಯ ಅದನ್ನು ಅವನು ಕಲಿತಿರುವನೊ?
ಪ್ರಕಟನೆ 6:2 (NW) ಯೇಸುವನ್ನು, ಬಿಳಿ ಕುದುರೆಯ ಮೇಲೆ ಕುಳಿತುಕೊಂಡಿರುವುದಾಗಿ ಮತ್ತು “ಜಯಿಸಲು ಮತ್ತು ತನ್ನ ವಿಜಯವನ್ನು ಪೂರ್ಣಗೊಳಿಸಲು” ಹೋಗುತ್ತಿರುವುದಾಗಿ ವರ್ಣಿಸುತ್ತದೆ. ಮುಂದೆ, 1914ರಲ್ಲಿ ಪ್ರಾರಂಭವಾದ Iನೆಯ ಜಾಗತಿಕ ಯುದ್ಧದ ಸಮಯದಂದಿನಿಂದ ನಾವು ಅನುಭವಿಸಿರುವಂತಹ ಯುದ್ಧಗಳು, ಕ್ಷಾಮಗಳು, ಮತ್ತು ವ್ಯಾಧಿಗಳನ್ನು ಪ್ರತಿನಿಧಿಸುವ ಕುದುರೆಸವಾರರು ಬರುತ್ತಾರೆ. 1914ರಲ್ಲಿ ಯೇಸು ದೇವರ ಸ್ವರ್ಗೀಯ ರಾಜ್ಯದ ರಾಜನಾಗಿ—ಭೂಮಿಯ ಮೇಲೆ ದುಷ್ಟತನದ ವಿರುದ್ಧ ಬರಲಿರುವ ಹೋರಾಟದಲ್ಲಿ ಮುಂದಾಳುತ್ವ ವಹಿಸುವವನಾಗಿ—ಸಿಂಹಾಸನಕ್ಕೇರಿಸಲ್ಪಟ್ಟನೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. (ಪ್ರಕಟನೆ 6:3-8; 19:11-16) ಯೇಸು ಈಗ ದೇವರ ಹೆಸರಿನಲ್ಲಿ ಜಯಿಸುವವನೋಪಾದಿ ಶಕ್ತಗೊಳಿಸಲ್ಪಟ್ಟಿರುವ ಕಾರಣ, ಅಂತ್ಯವು ಯಾವಾಗ ಬರುವುದು, ಯಾವಾಗ ಅವನು “ತನ್ನ ವಿಜಯವನ್ನು ಪೂರ್ಣ”ಗೊಳಿಸುವನೆಂದು ಅವನ ತಂದೆಯು ಅವನಿಗೆ ತಿಳಿಸಿರುವುದು ಸಮಂಜಸವೆಂದು ತೋರುತ್ತದೆ.
ಭೂಮಿಯ ಮೇಲಿರುವ ನಮಗೆ ಈ ತಾರೀಖು ತಿಳಿಸಲ್ಪಟ್ಟಿರುವುದಿಲ್ಲ, ಆದುದರಿಂದ ಯೇಸುವಿನ ಮಾತುಗಳು ನಮಗೆ ಇನ್ನೂ ಅನ್ವಯಿಸುತ್ತವೆ: “ಆ ಕಾಲವು ಯಾವಾಗ ಬರುವದೋ ನಿಮಗೆ ಗೊತ್ತಿಲ್ಲವಾದ್ದರಿಂದ ನೋಡಿಕೊಳ್ಳಿರಿ, ಜಾಗರೂಕರಾಗಿರಿ. . . . ನಾನು ನಿಮಗೆ ಹೇಳಿದ್ದನ್ನು ಎಲ್ಲರಿಗೂ ಹೇಳುತ್ತೇನೆ, ಎಚ್ಚರವಾಗಿರಿ.”—ಮಾರ್ಕ 13:33-37.