ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಕ್ಯೂಬದಲ್ಲಿ ‘ಚಟುವಟಿಕೆಗೆ ನಡೆಸುವ ಒಂದು ದೊಡ್ಡ ಬಾಗಿಲು ತೆರೆಯಲ್ಪಟ್ಟಿದೆ’
ಅಪೊಸ್ತಲ ಪೌಲನು ದೇವರ ರಾಜ್ಯದ ಸುವಾರ್ತೆಯ ಒಬ್ಬ ಗಮನಾರ್ಹ ಪ್ರಚಾರಕನಾಗಿದ್ದನು. ವಿಧೇಯ ಮಾನವಕುಲಕ್ಕಾಗಿ ನಿತ್ಯ ಜೀವದ ಕುರಿತಾದ ಸೃಷ್ಟಿಕರ್ತನ ವಾಗ್ದಾನಗಳನ್ನು ಇತರರೊಂದಿಗೆ ಹಂಚಿಕೊಳ್ಳಲು, ಅವನು ಪ್ರತಿಯೊಂದು ಸಂದರ್ಭವನ್ನು ಬಳಸಿಕೊಂಡನು. ಪ್ರಾಚೀನ ಎಫೆಸವನ್ನು ಸಂದರ್ಶಿಸುತ್ತಿದ್ದಾಗ, ಇನ್ನೂ ಹೆಚ್ಚಿನ ಜನರಿಗೆ ನೆರವನ್ನೀಡುವಂತೆ ತನ್ನನ್ನು ಅನುಮತಿಸಲಿದ್ದ ಒಂದು ಹೊಸ ಸನ್ನಿವೇಶವನ್ನು ಪೌಲನು ಗ್ರಹಿಸಿದನು. ಅವನು ಅಂದದ್ದು: “ನಾನು ಎಫೆಸದಲ್ಲಿ ತಂಗುತ್ತಿದ್ದೇನೆ . . . , ಏಕೆಂದರೆ ಚಟುವಟಿಕೆಗೆ ನಡೆಸುವ ಒಂದು ದೊಡ್ಡ ಬಾಗಿಲು ನನಗೆ ತೆರೆಯಲ್ಪಟ್ಟಿದೆ.”—1 ಕೊರಿಂಥ 16:8, 9, NW.
ಕ್ಯೂಬದಲ್ಲಿರುವ ಯೆಹೋವನ ಸಾಕ್ಷಿಗಳು ಸಹ ತಮ್ಮನ್ನು ಒಂದು ಹೊಸ ಸನ್ನಿವೇಶದಲ್ಲಿ ಕಂಡುಕೊಳ್ಳುತ್ತಾರೆ. ಇಷ್ಟರ ವರೆಗೆ ಅಧಿಕೃತವಾಗಿ ದಾಖಲು ಮಾಡಲ್ಪಡದಿದ್ದರೂ, ಸಾಕ್ಷಿಗಳು ತಮ್ಮ ಬೈಬಲ್ ನಿರೀಕ್ಷೆಯನ್ನು ಸಹದೇಶೀಯರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಈಗ ಶಕ್ತರಾಗಿದ್ದಾರೆ. ಇತ್ತೀಚೆಗೆ ಕ್ಯೂಬದ ಸರಕಾರವು, ವಿಭಿನ್ನ ಧಾರ್ಮಿಕ ಗುಂಪುಗಳಿಗೆ ಮುಕ್ತವಾಗಿ ಕಾರ್ಯನಡಿಸುವಂತೆ ಅನುಮತಿ ನೀಡುವುದರಲ್ಲಿ ಮನಃಪೂರ್ವಕವಾದ ಆಸಕ್ತಿಯನ್ನು ವ್ಯಕ್ತಪಡಿಸಿತು. ಕ್ಯೂಬದ ಸರಕಾರವು ಈಗ ಒಂದು ಸುಧಾರಿತ ಸಂಬಂಧವನ್ನು ಅನುಭವಿಸುವ ಧಾರ್ಮಿಕ ಗುಂಪಾಗಿ, ಯೆಹೋವನ ಸಾಕ್ಷಿಗಳನ್ನು ರಾಷ್ಟ್ರಪತಿಗಳಾದ ಕಾಸ್ಟ್ರೋ ಬಹಿರಂಗವಾಗಿ ಉಲ್ಲೇಖಿಸಿದರು.
ಈ ಹೊಸ ಸನ್ನಿವೇಶವು, ಸಾಕ್ಷಿಗಳಿಗೆ ‘ಚಟುವಟಿಕೆಗೆ ನಡೆಸುವ ಒಂದು ದೊಡ್ಡ ಬಾಗಿಲನ್ನು’ ತೆರೆದಿದೆ. ಉದಾಹರಣೆಗಾಗಿ, ಇತ್ತೀಚೆಗೆ ಕ್ಯೂಬದಲ್ಲಿ ಯೆಹೋವನ ಸಾಕ್ಷಿಗಳು, ಆ ದೇಶದಲ್ಲಿನ ತಮ್ಮ ಸಾರುವ ಕೆಲಸವನ್ನು ಸುಸಂಘಟಿತವಾಗಿಸುವಂತೆ ಅವರಿಗೆ ಸಹಾಯ ಮಾಡುವ ಒಂದು ಆಫೀಸನ್ನು ತೆರೆದರು. 65,000ಕ್ಕಿಂತಲೂ ಹೆಚ್ಚಿನ ಸಾಕ್ಷಿಗಳು, ಬೈಬಲನ್ನು ಅಭ್ಯಸಿಸಿ, ಅರ್ಥಮಾಡಿಕೊಳ್ಳುವಂತೆ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಅವರು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಂತಹ ಬೈಬಲ್ ಸಾಹಿತ್ಯವನ್ನು ಉಪಯೋಗಿಸುತ್ತಾರೆ. ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಸಿಸುವುದರಿಂದ, ಕ್ಯೂಬದ ಅನೇಕ ನೀತಿ ಪ್ರವೃತ್ತಿಯುಳ್ಳವರು ಪ್ರಯೋಜನಪಡೆಯುತ್ತಿದ್ದಾರೆ.
ಸಾಕ್ಷಿಗಳು, ದ್ವೀಪದಾದ್ಯಂತ ಚಿಕ್ಕ ಗುಂಪುಗಳಲ್ಲಿ ಕ್ರಮವಾಗಿ ಕೂಟಗಳನ್ನು ಸಹ ನಡೆಸುತ್ತಿದ್ದಾರೆ. ಕೆಲವೊಮ್ಮೆ ಸುಮಾರು 150 ಜನರಿರುವ ಗುಂಪುಗಳಲ್ಲಿ, ಹೆಚ್ಚು ದೊಡ್ಡದಾದ ಸಮ್ಮೇಳನಗಳನ್ನು ನಡೆಸುವ ಸುಯೋಗವನ್ನೂ ಅವರು ಅನುಭವಿಸುತ್ತಾರೆ. ಕ್ಯೂಬದ ಅಧಿಕಾರಿಗಳಿಂದ ತಾವು ಪಡೆದಿರುವ ಅನುಮತಿಯನ್ನು ಅವರು ನಿಜವಾಗಿಯೂ ಗಣ್ಯಮಾಡುತ್ತಾರೆ. ಇದು ದೇವರಿಗೆ ಸ್ತೋತ್ರಗೀತೆಗಳನ್ನು ಹಾಡುತ್ತಾ, ಮತ್ತು ಒಟ್ಟಿಗೆ ಪ್ರಾರ್ಥಿಸುತ್ತಾ, ತಮ್ಮ ಆತ್ಮಿಕ ಸಹೋದರ ಸಹೋದರಿಯರೊಂದಿಗೆ ಜೊತೆಸೇರುವ ಅವಕಾಶವನ್ನು ಅವರಿಗೆ ನೀಡುತ್ತದೆ.
ಇತ್ತೀಚೆಗೆ, “ದಿವ್ಯ ಭಯ” ಎಂಬ ಜಿಲ್ಲಾ ಅಧಿವೇಶನವು, ಕೇವಲ ಮೂರು ವಾರಾಂತ್ಯಗಳಲ್ಲಿ 1,000ಕ್ಕಿಂತಲೂ ಹೆಚ್ಚು ಬಾರಿ ನಡೆಸಲ್ಪಟ್ಟಿತು. ಒಂದು ವರದಿಯು ಹೇಳುವುದೇನೆಂದರೆ, ಪ್ರತಿಯೊಂದು ಅಧಿವೇಶನದಲ್ಲಿ “ವ್ಯವಸ್ಥೆ, ಶಿಸ್ತು, ಮತ್ತು ಶಾಂತಿ” ವ್ಯಕ್ತವಾಗಿದ್ದವು. ಈ ವಿಷಯವಾಗಿ ಅಧಿಕಾರಿಗಳು ಸಾಕ್ಷಿಗಳನ್ನು ಅಭಿನಂದಿಸಿದರು.
ಲೋಕವ್ಯಾಪಕವಾಗಿ, ಯಥಾರ್ಥ ಕ್ರೈಸ್ತರು, ದೇವರ ರಾಜ್ಯದ ಸುವಾರ್ತೆಯನ್ನು ಸಾರಲಿಕ್ಕಾಗಿರುವ ತಮ್ಮ ದೇವದತ್ತ ಆಜ್ಞೆಯನ್ನು ಪೂರೈಸಲು ಪ್ರಯಾಸಪಡುತ್ತಾರೆ. ಅದೇ ಸಮಯದಲ್ಲಿ, ಅವರು ಸರಕಾರಿ ಅಧಿಕಾರಿಗಳೊಂದಿಗೆ ಒಂದು ಶಾಂತಿಪೂರ್ಣ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯಾಸಪಡುತ್ತಾರೆ. (ತೀತ 3:1) ಹೀಗೆ ಬರೆದ ಅಪೊಸ್ತಲ ಪೌಲನ ಸಲಹೆಯನ್ನು ಯೆಹೋವನ ಸಾಕ್ಷಿಗಳು ಅನುಸರಿಸುತ್ತಾರೆ: “ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವೆಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಬೋಧಿಸುತ್ತೇನೆ. ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪಮಾಡುವಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು.”—1 ತಿಮೊಥೆಯ 2:1, 2.