ಪ್ರಾಣಕ್ಕಾಗಿ ಒಂದು ಉತ್ತಮ ನಿರೀಕ್ಷೆ
ರೋಮನ್ ಸೈನಿಕರು ಇದನ್ನು ನಿರೀಕ್ಷಿಸಿದ್ದಿರಲಿಲ್ಲ. ಯೆಹೂದಿ ಪ್ರತಿಯೋಧಿ ಸೇನೆಗಳ ಕೊನೆಯ ಪ್ರಬಲಸ್ಥಾನವಾದ ಮಸಾಡದ ಪರ್ವತ ಕೋಟೆಯೊಳಗೆ ಅವರು ಲಗ್ಗೆಹಾಕಿದಂತೆ, ತಮ್ಮ ವೈರಿಗಳ ಆಕ್ರಮಣಕ್ಕಾಗಿ, ಯುದ್ಧಯೋಧರ ಆರ್ಭಟಗಳಿಗಾಗಿ, ಸ್ತ್ರೀಯರು ಹಾಗೂ ಮಕ್ಕಳ ಚೀತ್ಕಾರಗಳಿಗಾಗಿ, ಅವರು ತಮ್ಮನ್ನು ಸಿದ್ಧಪಡಿಸಿಕೊಂಡರು. ಅದಕ್ಕೆ ಬದಲಾಗಿ ಅವರು ಚಟಚಟಿಸುವ ಜ್ವಾಲೆಗಳ ಶಬ್ದವನ್ನು ಮಾತ್ರವೇ ಕೇಳಿಸಿಕೊಂಡರು. ಸುಡುತ್ತಿರುವ ಕೋಟೆಯನ್ನು ಅವರು ಪರಿಶೋಧಿಸಿದಂತೆ, ರೋಮನರು ಘೋರ ಸತ್ಯವನ್ನು ತಿಳಿದುಕೊಂಡರು: ಅವರ ವೈರಿಗಳು—ಸುಮಾರು 960 ಜನರು—ಈಗಾಗಲೇ ಮೃತಪಟ್ಟಿದ್ದರು! ಯೋಜನೆಗನುಸಾರವಾಗಿ, ಯೆಹೂದಿ ಯೋಧರು ತಮ್ಮ ಸ್ವಂತ ಕುಟುಂಬಗಳನ್ನು, ತದನಂತರ ಒಬ್ಬರನ್ನೊಬ್ಬರು ಸಂಹರಿಸಿಕೊಂಡಿದ್ದರು. ಕೊನೆಯ ಮನುಷ್ಯನು ತನ್ನನ್ನೇ ಕೊಂದುಕೊಂಡಿದ್ದನು.a ಈ ಕರಾಳವಾದ ಸಾಮೂಹಿಕ ಕೊಲೆ ಮತ್ತು ಆತ್ಮಹತ್ಯೆಗೆ ಅವರನ್ನು ಯಾವುದು ಮುನ್ನಡೆಸಿತ್ತು?
ಸಮಕಾಲೀನ ಇತಿಹಾಸಕಾರನಾದ ಜೋಸೀಫಸನಿಗನುಸಾರ, ಅಮರ ಪ್ರಾಣದಲ್ಲಿನ ನಂಬಿಕೆಯು ಪ್ರಾಮುಖ್ಯವಾದ ಒಂದು ಸಂಗತಿಯಾಗಿತ್ತು. ಮಸಾಡದಲ್ಲಿನ ಸೆಲಟರ ನಾಯಕನಾಗಿದ್ದ ಎಲಿಯೇಸರ್ ಬೆನ್ ಜಾಯೀರನು, ರೋಮನರ ವಶದಲ್ಲಿನ ಮರಣ ಅಥವಾ ಗುಲಾಮತನಕ್ಕಿಂತಲೂ ಆತ್ಮಹತ್ಯೆಯು ಹೆಚ್ಚು ಗೌರವಾರ್ಹವಾದದ್ದಾಗಿರುವುದೆಂದು, ಮೊದಲಾಗಿ ತನ್ನ ಜನರನ್ನು ಒತ್ತಾಯಿಸಲು ಪ್ರಯತ್ನಿಸಿದ್ದನು. ಅವರು ಹಿಂಜರಿಯುವುದನ್ನು ಕಂಡು, ಅವನು ಪ್ರಾಣದ ಕುರಿತಾಗಿ ಉದ್ರೇಕಗೊಳಿಸುವಂತಹ ಒಂದು ಭಾಷಣವನ್ನು ನೀಡಿದನು. ದೇಹವು ಕೇವಲ ಒಂದು ಪ್ರತಿಬಂಧಕ, ಪ್ರಾಣಕ್ಕಾಗಿರುವ ಒಂದು ಬಂಧನವಾಗಿತ್ತೆಂದು ಅವನು ಅವರಿಗೆ ಹೇಳಿದನು. “ಆದರೆ ಪ್ರಾಣವು, ಅದನ್ನು ಭೂಮಿಗೆ ಬಿಗಿದಿಡುವ ಮತ್ತು ಅದನ್ನು ಆವರಿಸುವ ತೂಕದಿಂದ ಬಿಡುಗಡೆಗೊಳಿಸಲ್ಪಟ್ಟಾಗ,” ಎಂದು ಹೇಳುತ್ತಾ ಅವನು ಮುಂದುವರಿಸಿದ್ದು, “ಪ್ರಾಣವು ತನ್ನ ಸ್ವಸ್ಥಳಕ್ಕೆ ಹಿಂದಿರುಗಿ, ಆಗ ವಾಸ್ತವವಾಗಿ, ಒಂದು ದಿವ್ಯ ಶಕ್ತಿಯನ್ನು ಮತ್ತು ತೀರ ಅಮಿತವಾದ ಬಲದಲ್ಲಿ ಪಾಲುತೆಗೆದುಕೊಂಡು, ಮಾನವ ಕಣ್ಣುಗಳಿಗೆ ದೇವರು ತಾನೇ ಹೇಗೆ ಅದೃಶ್ಯನೋ ಹಾಗೆಯೇ ಅದೃಶ್ಯವಾಗಿ ಉಳಿಯುತ್ತದೆ.”
ಈ ಭಾಷಣಕ್ಕೆ ಪ್ರತಿಕ್ರಿಯೆಯೇನಾಗಿತ್ತು? ಎಲಿಯೇಸರನು ಈ ಧಾಟಿಯಲ್ಲಿ ಸವಿಸ್ತಾರವಾಗಿ ಮಾತಾಡಿಯಾದ ಬಳಿಕ, “ಅವನ ಕೇಳುಗರೆಲ್ಲರೂ ಅವನ ಭಾಷಣವನ್ನು ಅಡ್ಡಯಿಸಿ, ಅನಿಯಂತ್ರಿತ ಹುರುಪಿನಿಂದ ತುಂಬಿದವರಾಗಿದ್ದು, ತಮ್ಮ ಕೃತ್ಯವನ್ನು ಮಾಡಲು ತ್ವರೆಪಟ್ಟರು” ಎಂದು ಜೋಸೀಫಸನು ವರದಿಮಾಡುತ್ತಾನೆ. ಜೋಸೀಫಸನು ಕೂಡಿಸುವುದು: “ವಶೀಕರಿಸಲ್ಪಟ್ಟವರೋ ಎಂಬಂತೆ, ಪ್ರತಿಯೊಬ್ಬರೂ ಮತ್ತೊಬ್ಬ ಮನುಷ್ಯನಿಗಿಂತಲೂ ಹೆಚ್ಚು ಬೇಗನೆ ಕ್ರಿಯೆಗೈಯಲಿಕ್ಕಾಗಿ ಆತುರಗೊಂಡು, ಅವಸರವಸರವಾಗಿ ಮುನ್ನುಗ್ಗಿದರು, . . . ತಮ್ಮ ಹೆಂಡತಿಯರನ್ನು, ತಮ್ಮ ಮಕ್ಕಳನ್ನು, ಹಾಗೂ ಸ್ವತಃ ತಮ್ಮನ್ನು ಹತಿಸಿಕೊಳ್ಳುವಷ್ಟರ ಮಟ್ಟಿಗೆ, ಆ ಪ್ರತಿಭಟಿಸಲಸಾಧ್ಯವಾದ ಅಪೇಕ್ಷೆಯು ಅವರನ್ನು ಸೆರೆಹಿಡಿದಿತ್ತು.”
ಅಮರ ಪ್ರಾಣದ ಸಿದ್ಧಾಂತವು, ಮರಣದ ಕುರಿತಾದ ಸಾಮಾನ್ಯ ಮಾನವ ನೋಟವನ್ನು ಎಷ್ಟು ಗಾಢವಾಗಿ ಬದಲಾಯಿಸಬಲ್ಲದೆಂಬುದನ್ನು ದೃಷ್ಟಾಂತಿಸಲು ಈ ವಿಕೃತ ಉದಾಹರಣೆಯು ಸಹಾಯ ಮಾಡುತ್ತದೆ. ಅಮರ ಪ್ರಾಣದಲ್ಲಿ ನಂಬಿಕೆಯಿಡುವವರು, ಮರಣವನ್ನು ಮನುಷ್ಯನ ಅತ್ಯಂತ ಹೀನ ವೈರಿಯೋಪಾದಿ ಅಲ್ಲ, ಬದಲಾಗಿ ಹೆಚ್ಚು ಉತ್ಕೃಷ್ಟವಾದ ಒಂದು ಅಸ್ತಿತ್ವವನ್ನು ಅನುಭವಿಸಲಿಕ್ಕಾಗಿ ಪ್ರಾಣವನ್ನು ಸ್ವತಂತ್ರಗೊಳಿಸುವ ಬರಿಯ ಒಂದು ಹೆಬ್ಬಾಗಿಲಿನೋಪಾದಿ ವೀಕ್ಷಿಸುವಂತೆ ಕಲಿಸಲ್ಪಟ್ಟಿದ್ದಾರೆ. ಆದರೆ ಆ ಯೆಹೂದಿ ಸೆಲಟರು ಈ ರೀತಿ ಏಕೆ ನಂಬಿದರು? ಅವರ ಪವಿತ್ರ ಬರಹಗಳು, ಹೀಬ್ರು ಶಾಸ್ತ್ರಗಳು, ಮನುಷ್ಯನೊಳಗೆ ಒಂದು ಪ್ರಜ್ಞೆಯುಳ್ಳ ಆತ್ಮವಿದೆ, ಮರಣಾನಂತರ ಜೀವಿಸಲಿಕ್ಕಾಗಿ ಪಲಾಯನ ಮಾಡುವ ಒಂದು ಪ್ರಾಣವಿದೆ ಎಂಬುದನ್ನು ಕಲಿಸುತ್ತವೆಂದು ಅನೇಕರು ಊಹಿಸಿಯಾರು. ಅದು ನಿಜವಾಗಿಯೂ ಹಾಗಿದೆಯೊ?
ಹೀಬ್ರು ಶಾಸ್ತ್ರಗಳಲ್ಲಿ ಪ್ರಾಣ
ಒಂದು ಮಾತಿನಲ್ಲಿ ಹೇಳುವುದಾದರೆ, ಉತ್ತರವು ಇಲ್ಲ ಎಂದಾಗಿದೆ. ಬೈಬಲಿನ ಪ್ರಪ್ರಥಮ ಪುಸ್ತಕವಾದ ಆದಿಕಾಂಡದಲ್ಲಿಯೇ, ಪ್ರಾಣವು ನಿಮ್ಮಲ್ಲಿ ಇರುವ ಒಂದು ವಿಷಯವಾಗಿಲ್ಲ, ಅದು ನೀವೇ ಆಗಿದ್ದೀರಿ ಎಂದು ನಮಗೆ ಹೇಳಲ್ಪಟ್ಟಿದೆ. ಪ್ರಥಮ ಮಾನವಜೀವಿಯಾದ ಆದಾಮನ ಸೃಷ್ಟಿಯ ಕುರಿತಾಗಿ ನಾವು ಓದುವುದು: “ಮನುಷ್ಯನು ಬದುಕುವ ಪ್ರಾಣ ಆದನು.” (ಆದಿಕಾಂಡ 2:7, NW) ಪ್ರಾಣಕ್ಕಾಗಿ ಇಲ್ಲಿ ಉಪಯೋಗಿಸಲ್ಪಟ್ಟಿರುವ ನೆಫೆಶ್ ಎಂಬ ಹೀಬ್ರು ಶಬ್ದವು, ಹೀಬ್ರು ಶಾಸ್ತ್ರಗಳಲ್ಲಿ 700ಕ್ಕೂ ಹೆಚ್ಚು ಬಾರಿ ಕಂಡುಬರುತ್ತದಾದರೂ, ಅದು ಒಮ್ಮೆಯಾದರೂ ಮನುಷ್ಯನ ಪ್ರತ್ಯೇಕ, ಅಪಾರ್ಥಿವ, ಅಮೂರ್ತ ಭಾಗದ ಕಲ್ಪನೆಯನ್ನು ಅರ್ಥೈಸುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಪ್ರಾಣವು ಸ್ಪರ್ಶ್ಯವೂ, ಮೂರ್ತವೂ, ಶಾರೀರಿಕವೂ ಆಗಿದೆ.
ಬೈಬಲಿನ ನಿಮ್ಮ ಸ್ವಂತ (ಇಂಗ್ಲಿಷ್) ಪ್ರತಿಯಲ್ಲಿ, ಈ ಕೆಳಗಿನ ಉದ್ಧೃತ ವಚನಗಳನ್ನು ತೆರೆದುನೋಡಿರಿ, ಏಕೆಂದರೆ ಹೀಬ್ರು ಶಬ್ದವಾದ ನೆಫೆಶ್ ಅವುಗಳಲ್ಲಿ ಪ್ರತಿಯೊಂದರಲ್ಲಿ ಕಂಡುಬರುತ್ತದೆ. ಪ್ರಾಣವು ಗಂಡಾಂತರವನ್ನು, ಅಪಾಯವನ್ನು ಎದುರಿಸಬಲ್ಲದು, ಮತ್ತು ಅದನ್ನು ಬಲಾತ್ಕಾರಹರಣ ಮಾಡಸಾಧ್ಯವಿದೆ ಸಹ (ಧರ್ಮೋಪದೇಶಕಾಂಡ 24:7; ನ್ಯಾಯಸ್ಥಾಪಕರು 9:17; 1 ಸಮುವೇಲ 19:11); ಅದು ವಸ್ತುಗಳನ್ನು ಸ್ಪರ್ಶಿಸಬಲ್ಲದು (ಯೋಬ 6:7); ಅದನ್ನು ಕಬ್ಬಿಣದ ಬೇಡಿಗಳಲ್ಲಿ ಬಂಧಿಸಸಾಧ್ಯವಿದೆ (ಕೀರ್ತನೆ 105:18); ಅದು ತಿನ್ನಲಿಕ್ಕಾಗಿ ಹಂಬಲಿಸುತ್ತದೆ, ಉಪವಾಸವಿರುವುದರ ಮೂಲಕ ಅದನ್ನು ಬಾಧಿಸಸಾಧ್ಯವಿದೆ, ಮತ್ತು ಹಸಿವುಬಾಯಾರಿಕೆಗಳಿಂದ ಮೂರ್ಛೆಹೋಗಸಾಧ್ಯವಿದೆ; ಮತ್ತು ಕ್ಷಯಿಸುವ ರೋಗದಿಂದ ಕಷ್ಟಾನುಭವಿಸಬಲ್ಲದು ಅಥವಾ ದುಃಖದ ಫಲಿತಾಂಶವಾಗಿ ನಿದ್ರೆಬಾರದ ಸ್ಥಿತಿಯನ್ನೂ ಅನುಭವಿಸಬಲ್ಲದು ಎಂಬುದನ್ನು ಅವು ಸ್ಪಷ್ಟವಾಗಿ ತೋರಿಸುತ್ತವೆ. (ಧರ್ಮೋಪದೇಶಕಾಂಡ 12:20; ಕೀರ್ತನೆ 35:13; 69:10; 106:15; 107:9; 119:28) ಬೇರೆ ಮಾತುಗಳಲ್ಲಿ, ನಿಮ್ಮ ಪ್ರಾಣವು ನೀವು, ಸ್ವತಃ ನೀವು ಆಗಿರುವುದರಿಂದ, ನಿಮ್ಮ ಪ್ರಾಣವು ನೀವು ಅನುಭವಿಸುವ ಯಾವುದೇ ವಿಷಯವನ್ನು ಅನುಭವಿಸಸಾಧ್ಯವಿದೆ.b
ಆದುದರಿಂದ, ಪ್ರಾಣವು ವಾಸ್ತವವಾಗಿ ಸಾಯಬಲ್ಲದೆಂಬುದನ್ನು ಅದು ಅರ್ಥೈಸುತ್ತದೊ? ಹೌದು. ಅಮರವಾಗಿರುವುದಕ್ಕೆ ವ್ಯತಿರಿಕ್ತವಾಗಿ, ಹೀಬ್ರು ಶಾಸ್ತ್ರಗಳಲ್ಲಿ ಮಾನವ ಪ್ರಾಣಗಳು, ತಪ್ಪು ಕ್ರಿಯೆಗೈದುದಕ್ಕಾಗಿ “ಮರಣ ಶಿಕ್ಷೆ” ವಿಧಿಸಲ್ಪಟ್ಟಿರುವಂತೆ, ಅಥವಾ ವಧಿಸಲ್ಪಟ್ಟಿರುವಂತೆ, ಮಾರಕವಾಗಿ ಹೊಡೆಯಲ್ಪಟ್ಟಿರುವಂತೆ, ಕೊಲೆಮಾಡಲ್ಪಟ್ಟಿರುವಂತೆ, ನಾಶಮಾಡಲ್ಪಟ್ಟಿರುವಂತೆ, ಹಾಗೂ ತುಂಡುತುಂಡುಗಳಾಗಿ ಛಿದ್ರಮಾಡಿರುವಂತೆ ಪ್ರಸ್ತಾಪಿಸಲ್ಪಟ್ಟಿವೆ. (ವಿಮೋಚನಕಾಂಡ 31:14; ಧರ್ಮೋಪದೇಶಕಾಂಡ 19:6; 22:26; ಕೀರ್ತನೆ 7:2) “ಪಾಪಮಾಡುತ್ತಿರುವ ಪ್ರಾಣವು—ಅದು ತಾನೇ ಸಾಯುವುದು” ಎಂದು ಯೆಹೆಜ್ಕೇಲ 18:4 (NW) ಹೇಳುತ್ತದೆ. ನಾವೆಲ್ಲರೂ ಪಾಪಮಾಡುವುದರಿಂದ, ಮರಣವು ಮಾನವ ಪ್ರಾಣಗಳ ಸಾಮಾನ್ಯ ಅಂತ್ಯವಾಗಿದೆಯೆಂಬುದು ಸ್ಪಷ್ಟ. (ಕೀರ್ತನೆ 51:5) ಪಾಪಕ್ಕಾಗಿರುವ ದಂಡನೆಯು ಮರಣ—ಆತ್ಮ ಕ್ಷೇತ್ರ ಅಥವಾ ಅಮರತ್ವಕ್ಕೆ ವರ್ಗಾವಣೆಯಲ್ಲ—ಎಂದು ಪ್ರಥಮ ಮನುಷ್ಯನಾದ ಆದಾಮನಿಗೆ ಹೇಳಲಾಗಿತ್ತು. (ಆದಿಕಾಂಡ 2:17) ಮತ್ತು ಅವನು ಪಾಪಮಾಡಿದಾಗ, “ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ” ಎಂಬ ವಾಕ್ಯವು ಉಚ್ಚರಿಸಲ್ಪಟ್ಟಿತು. (ಆದಿಕಾಂಡ 3:19) ಆದಾಮಹವ್ವರು ಮೃತಪಟ್ಟಾಗ, ಅವರು ಬೈಬಲು ಅನೇಕವೇಳೆ ಯಾವುದಕ್ಕೆ ಸೂಚಿಸುತ್ತದೋ, ಆ ‘ಸತ್ತ ಪ್ರಾಣಗಳು’ ಅಥವಾ ‘ಮೃತರಾದ ಪ್ರಾಣಗಳು’ ಮಾತ್ರವೇ ಆಗಿ ಪರಿಣಮಿಸಿದರು.—ಅರಣ್ಯಕಾಂಡ 5:2; 6:6, NW.
ಹೀಬ್ರು ಶಾಸ್ತ್ರಗಳಲ್ಲಿನ ಪ್ರಾಣದ ಕುರಿತಾಗಿ ಎನ್ಸೈಕ್ಲೊಪೀಡಿಯ ಅಮೆರಿಕಾನ ಹೇಳುವ ವಿಷಯದಲ್ಲಿ ಯಾವುದೇ ಆಶ್ಚರ್ಯವಿಲ್ಲ: “ಮನುಷ್ಯನ ವಿಷಯವಾದ ಹಳೆಯ ಒಡಂಬಡಿಕೆ ಕಲ್ಪನಾಭಿಪ್ರಾಯವು ಐಕ್ಯದ ಕುರಿತಾಗಿದೆ, ಅದು ಪ್ರಾಣ ಮತ್ತು ದೇಹದ ಸಂಯೋಜನೆಯ ಕುರಿತಾಗಿ ಅಲ್ಲ.” ಅದು ಕೂಡಿಸುವುದು: “ನೆಫೆಶ್ . . . ದೇಹದಿಂದ ಪ್ರತ್ಯೇಕವಾಗಿ ಕಾರ್ಯನಡಿಸುತ್ತಿರುವಂತೆ ಎಂದೂ ನಿರೂಪಿಸಲ್ಪಡುವುದಿಲ್ಲ.”
ಆದುದರಿಂದ, ಮರಣವು ಏನಾಗಿದೆಯೆಂದು ನಂಬಿಗಸ್ತ ಯೆಹೂದ್ಯರು ನಂಬಿದರು? ಸರಳವಾಗಿ ಹೇಳುವುದಾದರೆ, ಮರಣವು ಜೀವಿತಕ್ಕೆ ವಿರುದ್ಧವಾದ ವಿಷಯವಾಗಿದೆಯೆಂದು ಅವರು ನಂಬಿದರು. ಆತ್ಮ, ಅಥವಾ ಜೀವಶಕ್ತಿಯು ಮಾನವಜೀವಿಯನ್ನು ಬಿಟ್ಟುಹೋದಾಗ ಏನು ಸಂಭವಿಸುತ್ತದೆ ಎಂಬುದನ್ನು ಕೀರ್ತನೆ 146:4 ತಿಳಿಸುತ್ತದೆ: “ಅವನ ಉಸಿರು [“ಆತ್ಮ,” NW] ಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.”c ತದ್ರೀತಿಯಲ್ಲಿ, ಮೃತರಿಗೆ “ಯಾವ ತಿಳುವಳಿಕೆಯೂ ಇಲ್ಲ” ಎಂದು ರಾಜ ಸೊಲೊಮೋನನು ಬರೆದನು.—ಪ್ರಸಂಗಿ 9:5.
ಹಾಗಾದರೆ, ಮಸಾಡದ ಸೆಲಟರಂತಹ ಪ್ರಥಮ ಶತಮಾನದ ಯೆಹೂದ್ಯರು, ಪ್ರಾಣದ ಅಮರತ್ವದ ಕುರಿತಾಗಿ ಏಕೆ ಅಷ್ಟೊಂದು ಮಂದಟ್ಟಾದವರಾಗಿದ್ದರು?
ಗ್ರೀಕ್ ಪ್ರಭಾವ
ಯೆಹೂದ್ಯರು ಈ ಕಲ್ಪನೆಯನ್ನು ಬೈಬಲಿನಿಂದಲ್ಲ, ಬದಲಾಗಿ ಗ್ರೀಕರಿಂದ ಪಡೆದುಕೊಂಡರು. ಸಾ.ಶ.ಪೂ. ಏಳನೆಯ ಹಾಗೂ ಐದನೆಯ ಶತಮಾನಗಳ ನಡುವೆ, ಈ ಕಲ್ಪನಾಭಿಪ್ರಾಯವು, ರಹಸ್ಯಗರ್ಭಿತವಾದ ಗ್ರೀಕ್ ಧಾರ್ಮಿಕ ಪಂಥಗಳಿಂದ ಗ್ರೀಕ್ ತತ್ವಜ್ಞಾನಗಳ ವರೆಗೆ ದಾರಿಮಾಡಿಕೊಂಡುಹೋಯಿತೆಂದು ತೋರುತ್ತದೆ. ಎಲ್ಲಿ ದುಷ್ಟ ಪ್ರಾಣಗಳು ವೇದನಾಭರಿತ ಪ್ರತೀಕಾರವನ್ನು ಪಡೆಯುವವೊ ಆ ಮರಣೋತ್ತರ ಜೀವನದ ಕಲ್ಪನೆಯು, ಬಹಳ ದೀರ್ಘ ಸಮಯದ ವರೆಗೆ ಬಹಳ ಪ್ರಚಲಿತವಾಗಿತ್ತು, ಮತ್ತು ಆ ಕಲ್ಪನೆಯು ಸ್ಥಾಪಿತವಾಗಿ ಹರಡಿಸಲ್ಪಟ್ಟಿತು. ಪ್ರಾಣದ ನಿಖರ ಸ್ವರೂಪ ಲಕ್ಷಣದ ಕುರಿತಾಗಿ ತತ್ವಜ್ಞಾನಿಗಳು ನಿರಂತರವಾಗಿ ವಾಗ್ವಾದಮಾಡಿದರು. ಮರಣದ ಸಮಯದಲ್ಲಿ ಪ್ರಾಣವು, ಕೇಳಿಸುವಂತೆ ಝೇಂಕರಿಸುತ್ತಾ, ಚಿಲಿಪಿಲಿಗುಟ್ಟುತ್ತಾ, ಮರ್ಮರಶಬ್ದಮಾಡುತ್ತಾ ಹೊರಟುಹೋಗುತ್ತದೆ ಎಂದು ಹೋಮರ್ ಪ್ರತಿಪಾದಿಸಿದನು. ವಾಸ್ತವವಾಗಿ ಪ್ರಾಣಕ್ಕೆ ತೂಕವಿದೆ, ಆದುದರಿಂದಲೇ ಸೂಕ್ಷ್ಮಾತಿಸೂಕ್ಷ್ಮ ದೇಹವಾಗಿದೆ ಎಂದು ಇಪಿಕ್ಯೂರಸ್ ಹೇಳಿದನು.d
ಆದರೆ ಅಮರ ಪ್ರಾಣದ ಅತ್ಯಂತ ಮಹಾನ್ ಪ್ರತಿಪಾದಕನು, ಸಾ.ಶ.ಪೂ. ನಾಲ್ಕನೆಯ ಶತಮಾನದ ಗ್ರೀಕ್ ತತ್ವಜ್ಞಾನಿಯಾದ ಪ್ಲೇಟೊ ಆಗಿದ್ದಿರಬಹುದು. ಅವನ ಗುರುವಾದ ಸಾಕ್ರಟೀಸನ ಮರಣದ ಕುರಿತಾದ ವರ್ಣನೆಯು, ಹೆಚ್ಚಾಗಿ ಶತಮಾನಗಳ ಬಳಿಕ ಮಸಾಡದ ಸೆಲಟರದ್ದಕ್ಕೆ ಹೋಲುವ ನಿಶ್ಚಿತಾಭಿಪ್ರಾಯಗಳನ್ನು ಪ್ರಕಟಪಡಿಸಿತು. ವಿದ್ವಾಂಸರಾದ ಆಸ್ಕರ್ ಕೂಲ್ಮಾನ್ ಇದನ್ನು ಹೀಗೆ ಹೇಳುತ್ತಾರೆ, “ಸಾಕ್ರಟೀಸನು ಹೇಗೆ ಸಂಪೂರ್ಣ ಶಾಂತಿ ಹಾಗೂ ಚಿತ್ತಸ್ವಾಸ್ಥ್ಯದಿಂದ ಸಾಯುತ್ತಾನೆಂಬುದನ್ನು ಪ್ಲೇಟೊ ನಮಗೆ ತೋರಿಸುತ್ತಾನೆ. ಸಾಕ್ರಟೀಸನ ಮರಣವು ಒಂದು ಸುಂದರವಾದ ಮರಣವಾಗಿದೆ. ಮರಣದ ಭೀಕರತೆಯ ಕುರಿತಾಗಿ ಇಲ್ಲಿ ಏನೂ ಕಂಡುಬರುವುದಿಲ್ಲ. ಸಾಕ್ರಟೀಸನು ಮರಣಕ್ಕೆ ಭಯಪಡಸಾಧ್ಯವಿಲ್ಲ, ಏಕೆಂದರೆ ಕಾರ್ಯತಃ ಅದು ನಮ್ಮನ್ನು ದೇಹದಿಂದ ಸ್ವತಂತ್ರಗೊಳಿಸುತ್ತದೆ. . . . ಮರಣವು ಪ್ರಾಣದ ಮಹಾ ಸ್ನೇಹಿತ. ಹೀಗೆ ಸಾಕ್ರಟೀಸನು ಬೋಧಿಸುತ್ತಾನೆ; ಮತ್ತು ಹೀಗೆ, ತನ್ನ ಬೋಧನೆಯೊಂದಿಗಿನ ಅದ್ಭುತಕರವಾದ ಹೊಂದಿಕೆಯಲ್ಲಿ ಅವನು ಸಾಯುತ್ತಾನೆ.”
ಯೆಹೂದ್ಯರು ಗ್ರೀಕರಿಂದ ಈ ಬೋಧನೆಯನ್ನು ಮೈಗೂಡಿಸಿಕೊಳ್ಳಲಾರಂಭಿಸಿದ್ದು, ಕ್ರಿಸ್ತ ಪೂರ್ವ ಎರಡನೆಯ ಶತಮಾನದಲ್ಲಿ, ಮ್ಯಾಕಬೀಯನ್ ಕಾಲಾವಧಿಯಲ್ಲಿ ಎಂಬುದು ಸುವ್ಯಕ್ತ. ಸಾ.ಶ. ಮೊದಲನೆಯ ಶತಮಾನದಲ್ಲಿ, ಫರಿಸಾಯರೂ ಎಸ್ಸೀನರೂ—ಪ್ರಬಲ ಯೆಹೂದಿ ಧಾರ್ಮಿಕ ಗುಂಪುಗಳು—ಈ ಸಿದ್ಧಾಂತವನ್ನು ಅನುಮೋದಿಸಿದರು ಎಂದು ಜೋಸೀಫಸನು ನಮಗೆ ಹೇಳುತ್ತಾನೆ. ಆ ಶಕದಲ್ಲಿ ರಚಿಸಲ್ಪಟ್ಟಿರಬಹುದಾಗಿದ್ದ ಯಾವುದೋ ಒಂದು ಕವಿತೆಯು, ಅದೇ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.
ಆದರೂ, ಯೇಸು ಕ್ರಿಸ್ತನ ಕುರಿತಾಗಿ ಏನು? ಅವನೂ ಅವನ ಹಿಂಬಾಲಕರೂ ತದ್ರೀತಿಯಲ್ಲಿ ಗ್ರೀಕ್ ಧರ್ಮದಿಂದ ಬಂದ ಈ ಕಲ್ಪನೆಯನ್ನು ಬೋಧಿಸಿದರೊ?
ಪ್ರಾಣದ ಕುರಿತಾಗಿ ಆದಿ ಕ್ರೈಸ್ತರ ನೋಟ
ಪ್ರಥಮ ಶತಮಾನದ ಕ್ರೈಸ್ತರು, ಗ್ರೀಕರು ಪ್ರಾಣವನ್ನು ವೀಕ್ಷಿಸಿದಂತೆ ವೀಕ್ಷಿಸಲಿಲ್ಲ. ಉದಾಹರಣೆಗಾಗಿ, ಯೇಸುವಿನ ಸ್ನೇಹಿತನಾಗಿದ್ದ ಲಾಜರನ ಮರಣವನ್ನು ಪರಿಗಣಿಸಿರಿ. ಲಾಜರನಿಗೆ ಮರಣದ ಸಮಯದಲ್ಲಿ ಸ್ವತಂತ್ರವಾಗಿ, ಸಂತೋಷವಾಗಿ ಹೊರಗೆ ಹೊರಟುಹೋದಂತಹ ಒಂದು ಅಮರ ಪ್ರಾಣವು ಇರುತ್ತಿದ್ದಲ್ಲಿ, ಯೋಹಾನ 11ನೆಯ ಅಧ್ಯಾಯದಲ್ಲಿರುವ ವೃತ್ತಾಂತವು ತೀರ ವಿಭಿನ್ನವಾಗಿ ಓದಲ್ಪಡುತ್ತಿದ್ದಿಲ್ಲವೊ? ಲಾಜರನು ಸ್ವರ್ಗದಲ್ಲಿ ಜೀವಂತನಾಗಿದ್ದು, ಕ್ಷೇಮವಾಗಿದ್ದು, ಪ್ರಜ್ಞೆಯುಳ್ಳವನಾಗಿದ್ದಲ್ಲಿ, ಖಂಡಿತವಾಗಿಯೂ ಯೇಸು ತನ್ನ ಹಿಂಬಾಲಕರಿಗೆ ಅದನ್ನು ಹೇಳಿರುತ್ತಿದ್ದನು; ಅದಕ್ಕೆ ಬದಲಾಗಿ, ಅವನು ಹೀಬ್ರು ಶಾಸ್ತ್ರಗಳೊಂದಿಗೆ ಸಹಮತವನ್ನು ವ್ಯಕ್ತಪಡಿಸಿ, ಲಾಜರನು ನಿದ್ರೆಮಾಡುತ್ತಿದ್ದನು, ಪ್ರಜ್ಞಾಹೀನನಾಗಿದ್ದನು ಎಂದು ಅವರಿಗೆ ಹೇಳಿದನು. (11ನೆಯ ವಚನ) ತನ್ನ ಸ್ನೇಹಿತನು ಒಂದು ಅದ್ಭುತಕರವಾದ ಹೊಸ ಅಸ್ತಿತ್ವವನ್ನು ಅನುಭವಿಸುತ್ತಿದ್ದದ್ದಾದರೆ, ಖಂಡಿತವಾಗಿಯೂ ಯೇಸು ಹರ್ಷಿಸಿರುತ್ತಿದ್ದನು; ಅದಕ್ಕೆ ಬದಲಾಗಿ, ಈ ಮರಣಕ್ಕಾಗಿ ಅವನು ಬಹಿರಂಗವಾಗಿ ಅಳುತ್ತಿದ್ದುದ್ದನ್ನು ನಾವು ಕಂಡುಕೊಳ್ಳುತ್ತೇವೆ (35ನೆಯ ವಚನ) ನಿಶ್ಚಯವಾಗಿಯೂ, ಪರಮಸುಖದ ಅಮರತ್ವದಲ್ಲಿ ಸುಖವಿಲಾಸಪಡುತ್ತಾ, ಲಾಜರನ ಪ್ರಾಣವು ಸ್ವರ್ಗದಲ್ಲಿರುತ್ತಿದ್ದಲ್ಲಿ, ಅಸ್ವಸ್ಥ ಹಾಗೂ ಸಾಯುತ್ತಿರುವ ಮಾನವಕುಲದ ಮಧ್ಯೆ ಅಪರಿಪೂರ್ಣ ಶಾರೀರಿಕ ದೇಹವೊಂದರ “ಬಂಧನ”ದಲ್ಲಿ, ಇನ್ನೂ ಕೆಲವೊಂದು ವರ್ಷಕಾಲ ಜೀವಿಸುವಂತೆ ಯೇಸು ಅವನಿಗೆ ಪುನಃ ಅಪ್ಪಣೆಮಾಡುವಷ್ಟು ಕ್ರೂರನಾಗುತ್ತಿದ್ದಿರಲಿಲ್ಲ.
ಬಿಡುಗಡೆಗೊಳಿಸಲ್ಪಟ್ಟ, ಅಶರೀರ ಆತ್ಮಜೀವಿಯೋಪಾದಿ ಕಳೆದಂತಹ ತನ್ನ ಅದ್ಭುತಕರವಾದ ನಾಲ್ಕು ದಿನಗಳ ಕುರಿತಾಗಿ ಲಾಜರನು ಕನಲಿಕೆಯ ಕಥೆಗಳೊಂದಿಗೆ ಮರಣದಿಂದ ಹಿಂದಿರುಗಿದನೊ? ಇಲ್ಲ, ಅವನು ಹಾಗೆ ಹಿಂದಿರುಗಲಿಲ್ಲ. ಏಕೆಂದರೆ ಆ ಮನುಷ್ಯನ ಅನುಭವವು ವರ್ಣಿಸಲು ತೀರ ಅಸಾಮಾನ್ಯವಾದದ್ದಾಗಿತ್ತು ಎಂದು ಅಮರ ಪ್ರಾಣದಲ್ಲಿ ನಂಬಿಕೆಯಿಡುವವರು ಪ್ರತ್ಯುತ್ತರಿಸುವರು. ಆದರೆ ಆ ವಾಗ್ವಾದವು ಮನಗಾಣಿಸಲು ವಿಫಲಗೊಳ್ಳುತ್ತದೆ; ಎಷ್ಟೆಂದರೂ, ವರ್ಣಿಸಲು ತೀರ ಅದ್ಭುತಕರವಾದ ಒಂದು ಅನುಭವವು ತನಗಾಯಿತೆಂದಾದರೂ—ಕಡಿಮೆಪಕ್ಷ ಅಷ್ಟನ್ನಾದರೂ—ಲಾಜರನು ತನ್ನ ಪ್ರಿಯ ಜನರಿಗೆ ಹೇಳಿದ್ದಿರಸಾಧ್ಯವಿತ್ತಲ್ಲವೆ? ಅದಕ್ಕೆ ಬದಲಾಗಿ, ಮೃತನಾಗಿದ್ದ ಸಮಯದಲ್ಲಿ ತನಗಾದ ಯಾವುದೇ ಅನುಭವಗಳ ಕುರಿತಾಗಿ ಲಾಜರನು ಏನನ್ನೂ ಹೇಳಲಿಲ್ಲ. ಈ ವಿಷಯದ ಕುರಿತಾಗಿ ಆಲೋಚಿಸಿರಿ—ಇತರ ಯಾವುದೇ ವಿಷಯಕ್ಕಿಂತಲೂ ಹೆಚ್ಚಾಗಿ ಮಾನವ ಕುತೂಹಲದ ಕೇಂದ್ರವಾಗಿರುವ ಒಂದು ವಿಷಯದಲ್ಲಿ, ಮರಣವು ಯಾವುದರಂತಿದೆ ಎಂಬ ವಿಷಯದಲ್ಲಿ ಅವನು ಮೌನವಾಗಿರುವುದು! ಆ ಮೌನವನ್ನು ಒಂದೇ ಒಂದು ವಿಧದಲ್ಲಿ ವಿವರಿಸಸಾಧ್ಯವಿದೆ. ಹೇಳಲಿಕ್ಕೆ ಯಾವ ವಿಷಯವೂ ಇರಲಿಲ್ಲ. ಮೃತರು ನಿದ್ರೆಹೋಗಿದ್ದಾರೆ, ಪ್ರಜ್ಞಾಹೀನರಾಗಿದ್ದಾರೆ.
ಹಾಗಾದರೆ, ಬೈಬಲು ಮರಣವನ್ನು ಪ್ರಾಣದ ಸ್ನೇಹಿತನೋಪಾದಿ—ಅಸ್ತಿತ್ವದ ಹಂತಗಳ ನಡುವಿನ ಸ್ಥಿತ್ಯಂತರಹೊಂದುವ ಕೇವಲ ಪ್ರಕ್ರಿಯೆಯಾಗಿ—ಪ್ರಸ್ತುತಪಡಿಸುತ್ತದೊ? ಇಲ್ಲ! ಅಪೊಸ್ತಲ ಪೌಲನಂತಹ ಸತ್ಕ್ರೈಸ್ತರಿಗೆ, ಮರಣವು ಸ್ನೇಹಿತನಾಗಿರಲಿಲ್ಲ; ಅದು “ಕಡೇ ಶತ್ರು”ವಾಗಿತ್ತು. (1 ಕೊರಿಂಥ 15:26) ಕ್ರೈಸ್ತರು ಮರಣವನ್ನು ಸ್ವಾಭಾವಿಕವಾದದ್ದಾಗಿ ಅಲ್ಲ, ಬದಲಿಗೆ ಭೀಕರವಾದದ್ದಾಗಿ, ಅಸ್ವಾಭಾವಿಕವಾದದ್ದಾಗಿ ಅವಲೋಕಿಸುತ್ತಾರೆ, ಏಕೆಂದರೆ ಅದು ದೇವರ ವಿರುದ್ಧವಾದ ಪಾಪ ಹಾಗೂ ದಂಗೆಕೋರತನದ ನೇರವಾದ ಫಲಿತಾಂಶವಾಗಿದೆ. (ರೋಮಾಪುರ 5:12; 6:23) ಅದೆಂದೂ ಮಾನವಕುಲಕ್ಕಾಗಿರುವ ದೇವರ ಮೂಲ ಉದ್ದೇಶದ ಒಂದು ಭಾಗವಾಗಿರಲಿಲ್ಲ.
ಹಾಗಿದ್ದರೂ, ಪ್ರಾಣದ ಮರಣದ ವಿಷಯದಲ್ಲಿ ಸತ್ಯ ಕ್ರೈಸ್ತರು ನಿರೀಕ್ಷಾಹೀನರಾಗಿಲ್ಲ. ಮೃತ ಪ್ರಾಣಗಳಿಗಾಗಿರುವ ನಿಜವಾದ, ಶಾಸ್ತ್ರೀಯ ನಿರೀಕ್ಷೆ—ಪುನರುತ್ಥಾನ—ಯನ್ನು ನಮಗೆ ಸುಸ್ಪಷ್ಟವಾಗಿ ತೋರಿಸುವ ಅನೇಕ ಬೈಬಲ್ ವೃತ್ತಾಂತಗಳಲ್ಲಿ, ಲಾಜರನ ಪುನರುತ್ಥಾನವು ಒಂದಾಗಿದೆ. ಬೈಬಲು ಪುನರುತ್ಥಾನದ ಎರಡು ವಿಭಿನ್ನ ವಿಧಗಳ ಕುರಿತಾಗಿ ಕಲಿಸುತ್ತದೆ. ಅವರು ನೀತಿವಂತರಾಗಿರಲಿ ಅನೀತಿವಂತರಾಗಿರಲಿ, ಸಮಾಧಿಯಲ್ಲಿ ನಿದ್ರಿಸಿರುವ ಮಾನವಕುಲದ ಅಧಿಕಾಂಶ ಜನರಿಗೆ, ಇದೇ ಭೂಮಿಯ ಮೇಲೆ ಪ್ರಮೋದವನದಲ್ಲಿ ನಿತ್ಯಜೀವಕ್ಕಾಗಿ ಪುನರುತ್ಥಾನಹೊಂದುವ ನಿರೀಕ್ಷೆಯಿದೆ. (ಲೂಕ 23:43; ಯೋಹಾನ 5:28, 29; ಅ. ಕೃತ್ಯಗಳು 24:15) ತನ್ನ ‘ಚಿಕ್ಕ ಹಿಂಡು’ ಎಂದು ಯೇಸು ಯಾರನ್ನು ಸೂಚಿಸಿದನೋ, ಆ ಸಣ್ಣ ಗುಂಪಿಗಾಗಿ, ಸ್ವರ್ಗದಲ್ಲಿ ಆತ್ಮಜೀವಿಗಳಾಗಿ ಅಮರ ಜೀವವನ್ನು ಪಡೆಯುವ ಪುನರುತ್ಥಾನವಿದೆ. ಕ್ರಿಸ್ತನ ಅಪೊಸ್ತಲರನ್ನು ಒಳಗೊಂಡಿರುವ ಇವರು, ಕ್ರಿಸ್ತ ಯೇಸುವಿನೊಂದಿಗೆ ಮಾನವಕುಲದ ಮೇಲೆ ಆಳ್ವಿಕೆ ನಡೆಸಿ, ಅವರನ್ನು ಪರಿಪೂರ್ಣತೆಗೆ ಪುನಸ್ಸ್ಥಾಪಿಸುತ್ತಾರೆ.—ಲೂಕ 12:32; 1 ಕೊರಿಂಥ 15:53, 54; ಪ್ರಕಟನೆ 20:6.
ಹಾಗಾದರೆ, ಕ್ರೈಸ್ತಪ್ರಪಂಚದ ಚರ್ಚುಗಳು, ಪುನರುತ್ಥಾನಕ್ಕೆ ಬದಲಾಗಿ ಮಾನವ ಪ್ರಾಣದ ಅಮರತ್ವವನ್ನು ಏಕೆ ಬೋಧಿಸುತ್ತಿವೆ? 1959ರಷ್ಟು ಹಿಂದೆ, ದ ಹಾರ್ವರ್ಡ್ ಥಿಯೊಲಾಜಿಕಲ್ ರಿವ್ಯೂನಲ್ಲಿ ದೇವತಾಶಾಸ್ತ್ರಜ್ಞನಾದ ವರ್ನರ್ ಯೆಗರ್ನಿಂದ ಒದಗಿಸಲ್ಪಟ್ಟ ಉತ್ತರವನ್ನು ಪರಿಗಣಿಸಿರಿ: “ಕ್ರೈಸ್ತ ಸಿದ್ಧಾಂತದ ಇತಿಹಾಸದಲ್ಲಿನ ಅತ್ಯಂತ ಪ್ರಮುಖ ಸಂಗತಿಯು ಯಾವುದಾಗಿತ್ತೆಂದರೆ, ಕ್ರೈಸ್ತ ದೇವತಾಶಾಸ್ತ್ರದ ಮೂಲಪಿತನಾದ ಆರಿಜನ್, ಅಲೆಕ್ಸಾಂಡ್ರಿಯದ ಶಾಲೆಯಲ್ಲಿ ಪ್ಲೇಟೊಸಂಬಂಧಿತ ತತ್ವಜ್ಞಾನಿಯಾಗಿದ್ದನು. ಅವನು ಪ್ಲೇಟೊವಿನಿಂದ ತೆಗೆದುಕೊಂಡಿದ್ದಂತಹ, ಅಮರ ಪ್ರಾಣಕ್ಕೆ ಸಂಬಂಧಿಸಿದ ಅನೇಕ ವ್ಯಾಪಕ ಬೋಧನೆಗಳನ್ನು ಕ್ರೈಸ್ತ ಸಿದ್ಧಾಂತದೊಳಗೆ ಸೇರಿಸಿದನು.” ಹೀಗೆ ಶತಮಾನಗಳಿಗೆ ಮುಂಚೆ ಯೆಹೂದ್ಯರು ಮಾಡಿದ್ದನ್ನೇ ಚರ್ಚು ಕೂಡ ಮಾಡಿತು! ಅವರು ಗ್ರೀಕ್ ತತ್ವಜ್ಞಾನದ ಪರವಾಗಿ, ಬೈಬಲ್ಸಂಬಂಧಿತ ಬೋಧನೆಗಳನ್ನು ಪರಿತ್ಯಜಿಸಿದರು.
ಆ ಸಿದ್ಧಾಂತದ ನಿಜ ಮೂಲಾರಂಭಗಳು
ಪ್ರಾಣದ ಅಮರತ್ವದ ಕುರಿತಾದ ಸಿದ್ಧಾಂತಕ್ಕೆ ಸಮರ್ಥನೆಯಾಗಿ, ಲೋಕದ ಅನೇಕ ಧರ್ಮಗಳಲ್ಲಿ, ಒಂದಲ್ಲ ಒಂದು ರೂಪದಲ್ಲಿ ಅದೇ ಸಿದ್ಧಾಂತವು ಏಕೆ ಕಲಿಸಲ್ಪಡುತ್ತದೆ? ಎಂದು ಈಗ ಕೆಲವರು ಕೇಳಬಹುದು. ಈ ಲೋಕದ ಧಾರ್ಮಿಕ ಪಂಗಡಗಳಲ್ಲಿ ಈ ಬೋಧನೆಯು ಏಕೆ ಇಷ್ಟೊಂದು ಪ್ರಾಧಾನ್ಯವುಳ್ಳದ್ದಾಗಿದೆ ಎಂಬುದರ ಕುರಿತಾಗಿ, ಶಾಸ್ತ್ರಗಳು ಒಂದು ದೃಢವಾದ ಕಾರಣವನ್ನು ಕೊಡುತ್ತವೆ.
“ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಬೈಬಲು ನಮಗೆ ಹೇಳುತ್ತದೆ ಮತ್ತು ನಿರ್ದಿಷ್ಟವಾಗಿ ಸೈತಾನನನ್ನು “ಇಹಲೋಕಾಧಿಪತಿ”ಯೋಪಾದಿ ಗುರುತಿಸುತ್ತದೆ. (1 ಯೋಹಾನ 5:19; ಯೋಹಾನ 12:31) ಲೋಕದ ಧರ್ಮಗಳು ಸೈತಾನನ ಪ್ರಭಾವದಿಂದ ರಕ್ಷಣೆಯನ್ನು ಪಡೆದಿರುವುದಿಲ್ಲವೆಂಬುದು ಸ್ಪಷ್ಟ. ಇದಕ್ಕೆ ವ್ಯತಿರಿಕ್ತವಾಗಿ, ಅವು ಇಂದಿನ ಲೋಕದಲ್ಲಿನ ಕ್ಷೋಭೆ ಹಾಗೂ ಕಲಹಗಳಿಗೆ ಮಹತ್ತರವಾಗಿ ನೆರವನ್ನು ನೀಡಿವೆ. ಹಾಗೂ ಪ್ರಾಣದ ವಿಷಯದಲ್ಲಿ, ತೀರ ಸ್ಫುಟವಾಗಿ ಅವು ಸೈತಾನನ ಮನಸ್ಸನ್ನು ಪ್ರತಿಬಿಂಬಿಸುವಂತೆ ತೋರುತ್ತವೆ. ಅದು ಹೇಗೆ?
ನುಡಿಯಲ್ಪಟ್ಟಿರುವುದರಲ್ಲಿ ಮೊದಲ ಸುಳ್ಳನ್ನು ಜ್ಞಾಪಿಸಿಕೊಳ್ಳಿರಿ. ಆದಾಮಹವ್ವರು ತನ್ನ ವಿರುದ್ಧವಾಗಿ ಪಾಪಮಾಡಿದ್ದಾದರೆ, ಮರಣವು ಫಲಿಸುವುದೆಂದು ದೇವರು ಅವರಿಗೆ ಹೇಳಿದ್ದನು. ಆದರೆ ಸೈತಾನನು ಹವ್ವಳಿಗೆ ಆಶ್ವಾಸನೆಯನ್ನಿತ್ತದ್ದು: “ನೀವು ಹೇಗೂ ಸಾಯುವದಿಲ್ಲ.” (ಆದಿಕಾಂಡ 3:4) ನಿಶ್ಚಯವಾಗಿ, ಆದಾಮಹವ್ವರು ಸತ್ತರು; ದೇವರು ಹೇಳಿದ್ದಂತೆ ಅವರು ಮಣ್ಣಿಗೆ ಹಿಂದಿರುಗಿದರು. “ಸುಳ್ಳಿಗೆ ಮೂಲಪುರುಷ”ನಾಗಿರುವ ಸೈತಾನನು, ತನ್ನ ಪ್ರಥಮ ಸುಳ್ಳನ್ನು ಎಂದಿಗೂ ಬಿಟ್ಟುಬಿಡಲಿಲ್ಲ. (ಯೋಹಾನ 8:44) ಬೈಬಲ್ ಸಿದ್ಧಾಂತದಿಂದ ವಿಮುಖವಾಗುವ ಅಥವಾ ಅದನ್ನು ಸಂಪೂರ್ಣವಾಗಿ ಅಲಕ್ಷಿಸುವ ಅಸಂಖ್ಯಾತ ಧರ್ಮಗಳಲ್ಲಿ, ಅದೇ ಕಲ್ಪನೆಯು ಇನ್ನೂ ಒದಗಿಸಲ್ಪಡುತ್ತದೆ: ‘ನೀವು ಹೇಗೂ ಸಾಯುವುದಿಲ್ಲ. ನಿಮ್ಮ ದೇಹವು ಕ್ಷಯಿಸಿಹೋಗಬಹುದು, ಆದರೆ ನಿಮ್ಮ ಪ್ರಾಣವು ಸದಾಕಾಲಕ್ಕೂ—ದೇವರಂತೆ—ಜೀವಿಸುವುದನ್ನು ಮುಂದುವರಿಸುತ್ತದೆ!’ ಆಸಕ್ತಿಭರಿತವಾಗಿ, ಸೈತಾನನು ಹವ್ವಳಿಗೆ, ಅವಳು “ದೇವರಂತೆ” ಆಗಸಾಧ್ಯವಿದೆ ಎಂದೂ ಹೇಳಿದ್ದನು!—ಆದಿಕಾಂಡ 3:5.
ಸುಳ್ಳುಗಳು ಅಥವಾ ಮಾನವ ತತ್ವಜ್ಞಾನಗಳ ಮೇಲಲ್ಲ, ಬದಲಾಗಿ ಸತ್ಯದ ಮೇಲೆ ಆಧಾರಿತವಾದ ಒಂದು ನಿರೀಕ್ಷೆಯನ್ನು ಪಡೆದಿರುವುದು ಎಷ್ಟು ಉತ್ತಮವಾದದ್ದಾಗಿದೆ. ಯಾವುದೋ ಅಮರ ಪ್ರಾಣವು ಇರುವ ಸ್ಥಳದ ಕುರಿತಾಗಿ ಚಿಂತೆಪಡುವುದಕ್ಕೆ ಬದಲಾಗಿ, ಮೃತಪಟ್ಟಿರುವ ನಮ್ಮ ಪ್ರಿಯ ಜನರು ಸಮಾಧಿಯಲ್ಲಿ ಪ್ರಜ್ಞಾಹೀನರಾಗಿದ್ದಾರೆಂದು ಭರವಸೆಯಿಂದಿರುವುದು ಎಷ್ಟು ಉತ್ತಮವಾದದ್ದಾಗಿದೆ! ಮೃತರ ಈ ನಿದ್ರೆಯು ನಮ್ಮನ್ನು ಹೆದರಿಸುವ ಅಥವಾ ನಮಗೆ ಖಿನ್ನತೆಯನ್ನುಂಟುಮಾಡುವ ಅಗತ್ಯವಿಲ್ಲ. ಒಂದು ರೀತಿಯಲ್ಲಿ, ನಾವು ಮೃತರನ್ನು ಅವರು ಸುರಕ್ಷಿತವಾದ ವಿಶ್ರಾಂತಿಕರ ಸ್ಥಳದಲ್ಲಿರುವವರೋಪಾದಿ ವೀಕ್ಷಿಸಬಹುದಾಗಿದೆ. ಸುರಕ್ಷಿತವಾಗಿ ಏಕೆ? ಏಕೆಂದರೆ ಯಾರನ್ನು ಯೆಹೋವನು ಪ್ರೀತಿಸುತ್ತಾನೋ ಆ ಮೃತರು, ಒಂದು ವಿಶೇಷವಾದ ಅರ್ಥದಲ್ಲಿ ಜೀವಿಸುತ್ತಿದ್ದಾರೆ ಎಂದು ಬೈಬಲು ನಮಗೆ ಆಶ್ವಾಸನೆಯನ್ನೀಯುತ್ತದೆ. (ಲೂಕ 20:38) ಅವರು ಆತನ ಸ್ಮರಣೆಯಲ್ಲಿ ಜೀವಿಸುತ್ತಿದ್ದಾರೆ. ಆತನ ಸ್ಮರಣೆಗೆ ಪರಿಮಿತಿಗಳಿಲ್ಲದ ಕಾರಣದಿಂದ ಅದು ಅಗಾಧವಾಗಿ ಸಾಂತ್ವನಪಡಿಸುವ ಅಭಿಪ್ರಾಯವಾಗಿದೆ. ಅಸಂಖ್ಯಾತ ಕೋಟಿಗಟ್ಟಲೆ ಪ್ರಿಯ ಮಾನವರನ್ನು ಪುನಃ ಉಜ್ಜೀವಿಸಲು ಮತ್ತು ಪ್ರಮೋದವನ ಭೂಮಿಯೊಂದರಲ್ಲಿ ಸದಾಕಾಲ ಜೀವಿಸುವ ಅವಕಾಶವನ್ನು ಅವರಿಗೆ ಕೊಡಲು ಆತನು ಆತುರನಾಗಿದ್ದಾನೆ.—ಹೋಲಿಸಿರಿ ಯೋಬ 14:14, 15.
ಯೆಹೋವನ ವಾಗ್ದಾನಗಳೆಲ್ಲವೂ ನೆರವೇರಿಸಲ್ಪಡಲೇಬೇಕಾಗಿರುವುದರಿಂದ, ಪುನರುತ್ಥಾನದ ಮಹಾ ವೈಭವಯುತವಾದ ದಿನವು ಬರುವುದು. (ಯೆಶಾಯ 55:10, 11) ಈ ಪ್ರವಾದನೆಯು ನೆರವೇರುವುದರ ಕುರಿತಾಗಿ ಸ್ವಲ್ಪ ಯೋಚಿಸಿ: “ಆದರೆ ಮೃತರಾದ ನಿನ್ನವರು ಉಜ್ಜೀವಿಸುವರು, ಅವರ ದೇಹಗಳು ಪುನಃ ಜೀವದಿಂದೇಳುವವು. ಭೂಮಿಯಲ್ಲಿ ಮಲಗಿರುವವರು ಎಚ್ಚರಗೊಂಡು, ಹರ್ಷಧ್ವನಿಗೈಯುವರು; ಏಕೆಂದರೆ ನಿನ್ನ ಇಬ್ಬನಿಯು, ಜ್ಯೋತಿರ್ಮಯ ಬೆಳಕಿನ ಇಬ್ಬನಿಯಾಗಿದೆ, ಮತ್ತು ಭೂಮಿಯು ದೀರ್ಘಕಾಲದಿಂದಲೂ ಮೃತರಾಗಿರುವವರನ್ನು ಪುನಃ ಹೊರಪಡಿಸುವುದು.” (ಯೆಶಾಯ 26:19, ದ ನ್ಯೂ ಇಂಗ್ಲಿಷ್ ಬೈಬಲ್) ಆದುದರಿಂದ ಸಮಾಧಿಯಲ್ಲಿ ನಿದ್ರಿಸುತ್ತಿರುವವರು, ತನ್ನ ತಾಯಿಯ ಗರ್ಭಾಶಯದಲ್ಲಿ ಸುರಕ್ಷಿತವಾಗಿರುವ ಒಂದು ಮಗುವಿನಷ್ಟೇ ಸುರಕ್ಷಿತರಾಗಿದ್ದಾರೆ. ಅವರು ಅತಿ ಬೇಗನೆ “ಜನಿಸ”ಲಿದ್ದು, ಪ್ರಮೋದವನ ಭೂಮಿಯೊಂದರಲ್ಲಿ ಪುನಃ ಉಜ್ಜೀವಿಸಲ್ಪಡಲಿದ್ದಾರೆ!
ಯಾವ ನಿರೀಕ್ಷೆಯು ಅದಕ್ಕಿಂತಲೂ ಉತ್ತಮವಾಗಿರಸಾಧ್ಯವಿದೆ?
[ಅಧ್ಯಯನ ಪ್ರಶ್ನೆಗಳು]
a ಇಬ್ಬರು ಸ್ತ್ರೀಯರು ಹಾಗೂ ಐವರು ಮಕ್ಕಳು ಅಡಗಿಕೊಳ್ಳುವ ಮೂಲಕ ಪಾರಾದ ವದಂತಿಯಿದೆ. ತದನಂತರ ಈ ಇಬ್ಬರು ಸ್ತ್ರೀಯರು ತಮ್ಮನ್ನು ಸೆರೆಹಿಡಿದ ರೋಮನ್ ವ್ಯಕ್ತಿಗಳಿಗೆ ವಿವರಗಳನ್ನು ತಿಳಿಸಿದರು.
b ನಿಶ್ಚಯವಾಗಿಯೂ, ಬಹಳ ವಿಸ್ತಾರವಾದ ಉಪಯೋಗವನ್ನು ಪಡೆದಿರುವ ಅನೇಕ ಶಬ್ದಗಳಂತೆಯೇ, ನೆಫೆಶ್ ಎಂಬ ಶಬ್ದವು ಸಹ ಅರ್ಥದ ಇತರ ಸಣ್ಣ ವಿಭಿನ್ನತೆಗಳನ್ನು ಪಡೆದಿದೆ. ದೃಷ್ಟಾಂತಕ್ಕಾಗಿ, ವಿಶೇಷವಾಗಿ ತೀವ್ರವಾದ ಭಾವನೆಗಳ ಸಂಬಂಧದಲ್ಲಿ, ಅದು ಆಂತರಿಕ ವ್ಯಕ್ತಿಗೆ ಸೂಚಿಸಬಲ್ಲದು. (1 ಸಮುವೇಲ 18:1) ಒಬ್ಬ ಪ್ರಾಣದೋಪಾದಿ ಒಬ್ಬನು ಅನುಭವಿಸುವ ಜೀವಿತಕ್ಕೆ ಸಹ ಇದು ಸೂಚಿಸಬಲ್ಲದು.—1 ಅರಸುಗಳು 17:21-23.
c “ಆತ್ಮ”ಕ್ಕಾಗಿರುವ ಹೀಬ್ರು ಶಬ್ದವಾದ ರೂಆದ ಅರ್ಥ, “ಉಸಿರು” ಅಥವಾ “ಗಾಳಿ”ಯಾಗಿದೆ. ಮಾನವಜೀವಿಗಳಿಗೆ ಸಂಬಂಧಿಸಿ, ಇದು ಒಂದು ಪ್ರಜ್ಞೆಯುಳ್ಳ ಆತ್ಮ ಅಸ್ತಿತ್ವಕ್ಕೆ ಸೂಚಿಸುವುದಿಲ್ಲ, ಬದಲಾಗಿ ದ ನ್ಯೂ ಇಂಟರ್ನ್ಯಾಷನಲ್ ಡಿಕ್ಷನರಿ ಆಫ್ ನ್ಯೂ ಟೆಸ್ಟಮೆಂಟ್ ಥಿಯಾಲಜಿ ಇದನ್ನು “ವ್ಯಕ್ತಿಯ ಜೀವಶಕ್ತಿ”ಗೆ ಸೂಚಿಸುತ್ತದೆ.
d ತಕ್ಕಮಟ್ಟಿಗೆ ಈ ವಿಲಕ್ಷಣ ಅಭಿಪ್ರಾಯಗಳಿಗನುಸಾರ ಆಲೋಚಿಸಿದವರಲ್ಲಿ ಇವನು ಕೊನೆಯವನಾಗಿರಲಿಲ್ಲ. ಈ ಶತಮಾನದ ಆದಿ ಭಾಗದಲ್ಲಿ, ಮರಣಕ್ಕೆ ನೇರ ಮುಂಚೆ ತೆಗೆದ ಅವರ ತೂಕದಿಂದ, ಮರಣದ ನಂತರ ನೇರ ತೆಗೆದ ತೂಕವನ್ನು ಕಳೆಯುವ ಮೂಲಕ, ತಾನು ಅನೇಕ ಜನರ ಪ್ರಾಣಗಳನ್ನು ತೂಕಮಾಡಿದೆನೆಂದು ಒಬ್ಬ ವಿಜ್ಞಾನಿಯು ವಾಸ್ತವವಾಗಿ ಪ್ರತಿಪಾದಿಸಿದನು.
[ಪುಟ 7 ರಲ್ಲಿರುವ ಚಿತ್ರ]
ಮರಣವು ತಮ್ಮ ಪ್ರಾಣಗಳನ್ನು ಸ್ವತಂತ್ರಗೊಳಿಸುತ್ತದೆಂದು, ಮಸಾಡದ ಯೆಹೂದಿ ಸೆಲಟರು ನಂಬಿದರು