ವಾಗ್ದತ್ತ ದೇಶಕ್ಕೆ ಒಂದು ಭೇಟಿ
ಸ್ನೇಹಿತನೊಬ್ಬನು ನಿಮಗಾಗಿ—ಒಂದು ಕೊಡುಗೆಯೋಪಾದಿ—ಸುಂದರ, ಶಾಂತ ಪರಿಸರಗಳ ಮಧ್ಯೆ ಒಂದು ಹೊಚ್ಚ ಹೊಸ ಮನೆಯನ್ನು ಖರೀದಿಸಿದ್ದನೆಂಬುದನ್ನು ನಿಮಗೆ ಹೇಳಿದನೆಂದಿಟ್ಟುಕೊಳ್ಳಿರಿ. ‘ಅದು ಹೇಗೆ ತೋರುತ್ತದೆ?’ ಎಂದು ನೀವು ಕುತೂಹಲಪಡುವಿರಿ. ಈ ಮನೆಯನ್ನು ಸ್ವತಃ ನೋಡಲು, ಅದರೊಳಗೆ ನಡೆದಾಡಿ, ಪ್ರತಿಯೊಂದು ಕೋಣೆಯನ್ನು ಪರಿಶೀಲಿಸಲು ನೀವು ಉತ್ಸುಕರಾಗಿರುವಿರೆಂಬುದು ನಿಸ್ಸಂಶಯ. ಎಷ್ಟೆಂದರೂ, ಇದು ನಿಮ್ಮ ಹೊಸ ಮನೆಯಾಗಿದೆ!
ಸಾ.ಶ.ಪೂ. 1473ರಲ್ಲಿ, ಯೆಹೋವನು ಪ್ರಾಚೀನ ಇಸ್ರಾಯೇಲಿನ ರಾಷ್ಟ್ರಕ್ಕೆ ಒಂದು ಹೊಸ ಮನೆ—ವಾಗ್ದತ್ತ ದೇಶವನ್ನು—ಸ್ವಾರ್ಜಿತ ಆಸ್ತಿಯಾಗಿ ನೀಡಿದನು. ಇದು ಸರಾಸರಿಯಾಗಿ, ಉತ್ತರದಿಂದ ದಕ್ಷಿಣಕ್ಕೆ ಸುಮಾರು 500 ಕಿಲೊಮೀಟರುಗಳಷ್ಟು ಉದ್ದ ಮತ್ತು 55 ಕಿಲೊಮೀಟರುಗಳಷ್ಟು ಅಗಲವಾಗಿ ಅಳೆಯುವ ಒಂದು ಕ್ಷೇತ್ರದ ತುಂಡಾಗಿತ್ತು.a ಫರ್ಟೈಲ್ ಕ್ರೆಸೆಂಟ್ ಎಂಬುದಾಗಿ ಕರೆಯಲ್ಪಟ್ಟಿರುವ ಸ್ಥಳದಲ್ಲಿ ನೆಲೆಸಿದ್ದ ವಾಗ್ದತ್ತ ದೇಶವು, ತನ್ನ ಸ್ವಂತ ಅಪೂರ್ವವಾದ ವೈಶಿಷ್ಟ್ಯಗಳಿಂದ ಸಮೃದ್ಧಗೊಂಡಿದ್ದು, ಜೀವಿಸಲು ಒಂದು ಆನಂದಕರವಾದ ಸ್ಥಳವಾಗಿತ್ತು.
ಆದರೆ, ಬೇರೆ ಯಾರಿಗೊ, ವಿಶೇಷವಾಗಿ ಬಹಳ ಸಮಯದ ಹಿಂದೆ ಜೀವಿಸುತ್ತಿದ್ದ ಯಾರೊ ಒಬ್ಬರಿಗೆ ಕೊಡಲ್ಪಟ್ಟಿದ್ದ ಒಂದು “ಮನೆ”ಯಲ್ಲಿ, ನೀವು ಇಂದು ಏಕೆ ಆಸಕ್ತರಾಗಿರಬೇಕು? ಏಕೆಂದರೆ ಈ ಐತಿಹಾಸಿಕ ದೇಶದ ಜ್ಞಾನವು, ಬೈಬಲ್ ವೃತ್ತಾಂತಗಳ ಕುರಿತಾದ ನಿಮ್ಮ ಗಣ್ಯತೆಯನ್ನು ಹೆಚ್ಚಿಸಬಲ್ಲದು. “ಬೈಬಲಿನ ದೇಶದಲ್ಲಿ, ಭೂಗೋಳ ಶಾಸ್ತ್ರ ಮತ್ತು ಇತಿಹಾಸ ಎಷ್ಟು ಆಳವಾಗಿ ಬೆರೆತುಕೊಂಡಿವೆ ಎಂದರೆ, ಇವುಗಳಲ್ಲಿ ಒಂದನ್ನೂ ಮತ್ತೊಂದರ ಸಹಾಯವಿಲ್ಲದೆ ನಿಜವಾಗಿಯೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ,” ಎಂಬುದಾಗಿ ಮಾಜಿ ಪ್ರೊಫೆಸರ್ ಯೋಹಾನಾನ್ ಆಹಾರೊನೀ ಬರೆದರು. ಇನ್ನೂ ಹೆಚ್ಚಾಗಿ, ವಾಗ್ದತ್ತ ದೇಶವು ತನ್ನ ಉಚ್ಚ ಬಿಂದುವಿನಲ್ಲಿ, ದೇವರ ರಾಜ್ಯದಲ್ಲಿ ಪ್ರಮೋದವನವು ಮಾನವಕುಲಕ್ಕೆ ಭೂವ್ಯಾಪಕವಾಗಿ ಏನನ್ನು ಅರ್ಥೈಸುವುದೆಂಬುದರ ಕುರಿತು ಒಂದು ಸಣ್ಣ ಪ್ರಮಾಣದ ಮಾದರಿಯನ್ನು ಒದಗಿಸಿತು!—ಯೆಶಾಯ 11:9.
ತನ್ನ ಭೂಶುಶ್ರೂಷೆಯ ಸಮಯದಲ್ಲಿ ಪ್ರಾಯೋಗಿಕ ಪಾಠಗಳನ್ನು ಕಲಿಸಲು, ಯೇಸು ಕ್ರಿಸ್ತನು ವಾಗ್ದತ್ತ ದೇಶದಲ್ಲಿನ ಸಾಮಾನ್ಯ ನೋಟಗಳನ್ನು ಬಳಸಿದನು. (ಮತ್ತಾಯ 13:24-32; 25:31-46; ಲೂಕ 13:6-9) ಪ್ರಾಚೀನ ಪ್ಯಾಲಸ್ಟೈನ್‌ನ ಕೆಲವೊಂದು ವೈಶಿಷ್ಟ್ಯಗಳ ಪರಿಗಣನೆಯಿಂದ, ನಾವು ಸಹ ಒಂದು ಪ್ರಾಯೋಗಿಕ ವಿಧದಲ್ಲಿ ಹೆಚ್ಚನ್ನು ಕಲಿಯಬಲ್ಲೆವು. ಸಾಂಕೇತಿಕವಾಗಿ ಮಾತಾಡುವುದಾದರೆ, ಅದರ ಕೋಣೆಗಳಲ್ಲಿ ಕೆಲವೊಂದರ ಒಳಗೆ ನಡೆದಾಡಿ, ಅನೇಕ ಶತಮಾನಗಳ ವರೆಗೆ ದೇವರ ಜನರಿಗೆ ಮನೆಯಾಗಿ ಕಾರ್ಯಮಾಡಿದ ಈ ದೇಶದ ಕೆಲವು ಭಿನ್ನವಾದ ವೈಶಿಷ್ಟ್ಯಗಳನ್ನು ಪರಿಶೀಲಿಸೋಣ. ನಾವು ನೋಡಲಿರುವಂತೆ, ವಾಗ್ದತ್ತ ದೇಶದಿಂದ ನಾವು ಕಲಿಯಸಾಧ್ಯವಿರುವ ವಿಷಯವು ಬಹಳಷ್ಟಿದೆ.
[ಪಾದಟಿಪ್ಪಣಿ]
a ಈ ಲೇಖನಗಳಲ್ಲಿ “ವಾಗ್ದತ್ತ ದೇಶ” ಎಂಬುದರ ಉಪಯೋಗವು, ಬೈಬಲಿನಲ್ಲಿ ಪ್ರಸ್ತುತಪಡಿಸಲ್ಪಟ್ಟಂತೆ, ಪ್ರಾಚೀನ ಸಮಯಗಳ ಕುರಿತಾದ ಯಥಾದೃಷ್ಟಿಯಿಂದ ವಿಷಯಗಳನ್ನು ವೀಕ್ಷಿಸುತ್ತದೆ. ಇದಕ್ಕೆ ಪ್ರದೇಶದಲ್ಲಿನ ಆಧುನಿಕ ರಾಜಕೀಯ/ಧಾರ್ಮಿಕ ಕರಾರುಗಳಲ್ಲಿ ಒಳಗೊಳ್ಳುವಿಕೆಯಿರುವುದಿಲ್ಲ.
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover: Pictorial Archive (Near Eastern History) Est.
[ಪುಟ 3 ರಲ್ಲಿರುವ ಚಿತ್ರ ಕೃಪೆ]
Garo Nalbandian