ವಾಗ್ದತ್ತ ದೇಶದಿಂದ ಪ್ರಾಯೋಗಿಕ ಪಾಠಗಳು
ಬೈಬಲ್ ದಾಖಲೆಯ ವಾಗ್ದತ್ತ ದೇಶವು ನಿಶ್ಚಯವಾಗಿಯೂ ಅದ್ವಿತೀಯವಾಗಿತ್ತು. ಸಾಪೇಕ್ಷವಾಗಿ ಚಿಕ್ಕದಾಗಿರುವ ಈ ಕ್ಷೇತ್ರದಲ್ಲಿ ನಾವು ಮಹಾ ವೈವಿಧ್ಯದ ಭೌಗೋಳಿಕ ವೈಶಿಷ್ಟ್ಯಗಳನ್ನು ಕಂಡುಕೊಳ್ಳುತ್ತೇವೆ. ಉತ್ತರದಲ್ಲಿ, ಹಿಮಾವೃತವಾದ ಪರ್ವತಗಳಿವೆ; ದಕ್ಷಿಣದಲ್ಲಿ ಉಷ್ಣವಲಯಗಳಿವೆ. ಫಲವತ್ತಾದ ತಗ್ಗು ಪ್ರದೇಶಗಳು, ನಿರ್ಜನವಾದ ಅರಣ್ಯ ಪ್ರದೇಶಗಳು ಮತ್ತು ಹಣ್ಣುತೋಟಗಳು ಮತ್ತು ಪಶುಗಳನ್ನು ಮೇಯಿಸಲಿಕ್ಕಾಗಿ ಗುಡ್ಡ ಪ್ರದೇಶವಿದೆ.
ಔನ್ನತ್ಯ, ಹವಾಮಾನ ಮತ್ತು ಮಣ್ಣಿನ ವಿವಿಧತೆಯು ವ್ಯಾಪಕವಾದ ತೆರದ ಮರಗಳು, ಪೊದರುಗಳು ಮತ್ತು ಇತರ ಸಸ್ಯಗಳು ಬೆಳೆಯುವಂತೆ ಅನುಮತಿಸುತ್ತದೆ; ಇವುಗಳಲ್ಲಿ ಶೀತಲವಾದ ಆಲ್ಪೈನ್ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುವ ಕೆಲವು ಸಸ್ಯಗಳು, ಸುಡುಬಿಸಿಲಿನ ಮರುಭೂಮಿಯಲ್ಲಿ ಬೆಳೆಯುವ ಬೇರೆ ಸಸ್ಯಗಳು ಮತ್ತು ನೆರೆಮಣ್ಣಿನ ಬಯಲಿನಲ್ಲಿ ಅಥವಾ ಶಿಲಾಮಯ ಪ್ರಸ್ಥಭೂಮಿಯಲ್ಲಿ ಹಸನಾಗಿ ಬೆಳೆಯುವ ಇನ್ನಿತರ ಸಸ್ಯಗಳು ಸೇರಿವೆ. ಆ ಪ್ರದೇಶದಲ್ಲಿ ಸುಮಾರು 2,600 ಸಸ್ಯ ಜಾತಿಗಳನ್ನು ಕಂಡುಕೊಳ್ಳಸಾಧ್ಯವಿದೆಯೆಂದು ಒಬ್ಬ ಸಸ್ಯವಿಜ್ಞಾನಿಯು ಅಂದಾಜುಮಾಡುತ್ತಾನೆ! ಈ ಪ್ರದೇಶವನ್ನು ಪರಿಶೋಧಿಸಿದ ಪ್ರಥಮ ಇಸ್ರಾಯೇಲ್ಯರು ಅದರ ಸಾಮರ್ಥ್ಯದ ಸಿದ್ಧ ರುಜುವಾತನ್ನು ಕಂಡರು. ಒಂದು ತೊರೆ ಕಣಿವೆಯಿಂದ ಅವರು ಎಷ್ಟು ದೊಡ್ಡ ದ್ರಾಕ್ಷಿ ಗೊಂಚಲನ್ನು ಹಿಂದಕ್ಕೆ ತಂದರೆಂದರೆ, ಅದನ್ನು ಅಡ್ಡದಂಡಿಗೆಯ ಮೇಲೆ ಇಬ್ಬರು ಪುರುಷರು ಹೊರಬೇಕಾಗಿತ್ತು! ಆ ಕಣಿವೆಯನ್ನು ಯೋಗ್ಯವಾಗಿಯೇ “[ದ್ರಾಕ್ಷಿಗಳ] ಗೊಂಚಲು” ಎಂಬ ಅರ್ಥವಿರುವ ಎಷ್ಕೋಲ್ ಎಂದು ಕರೆಯಲಾಯಿತು.a—ಅರಣ್ಯಕಾಂಡ 13:21-24.
ಆದರೆ ನಾವೀಗ ಈ ಅದ್ವಿತೀಯವಾದ ಜಮೀನು ತುಂಡಿನ, ವಿಶೇಷವಾಗಿ ಅದರ ದಕ್ಷಿಣ ವಿಭಾಗದ, ಭೌಗೋಳಿಕ ವೈಶಿಷ್ಟ್ಯಗಳಲ್ಲಿ ಕೆಲವನ್ನು ಹೆಚ್ಚು ನಿಕಟವಾಗಿ ಪರೀಕ್ಷಿಸೋಣ.
ಶೆಫೆಲಾ
ವಾಗ್ದತ್ತ ದೇಶದ ಪಶ್ಚಿಮ ತೀರವು ಅದರ ಭೂಮಧ್ಯ (ಮೆಡಿಟರೇನಿಯನ್) ಸಮುದ್ರ ಕರಾವಳಿಯಾಗಿದೆ. ಸುಮಾರು 40 ಕಿಲೊಮೀಟರುಗಳಷ್ಟು ಒಳನಾಡಿನಲ್ಲಿ ಶೆಫೆಲಾವಿದೆ. “ಶೆಫೆಲಾ” ಎಂಬ ಪದದ ಅರ್ಥವು “ತಗ್ಗುಪ್ರದೇಶ” ಎಂದಾದರೂ, ವಾಸ್ತವವಾಗಿ, ಅದು ಗುಡ್ಡ ಪ್ರದೇಶವಾಗಿದ್ದು, ಪೂರ್ವದಲ್ಲಿರುವ ಯೆಹೂದದ ಪರ್ವತಗಳಿಗೆ ಹೋಲಿಸುವಾಗ ಮಾತ್ರ ಅದನ್ನು ತಗ್ಗೆಂದು ಕರೆಯಸಾಧ್ಯವಿದೆ.
ಇದರೊಂದಿಗಿರುವ ಅಡ್ಡಛೇದ ಭೂಪಟವನ್ನು ನೋಡಿ, ಶೆಫೆಲಾಕ್ಕೆ ಅದರ ಸುತ್ತಮುತ್ತಲಿನ ಪ್ರದೇಶಗಳ ಸಂಬಂಧವನ್ನು ಗಮನಿಸಿರಿ. ಪೂರ್ವಕ್ಕೆ ಯೆಹೂದದ ಪರ್ವತಗಳು, ಪಶ್ಚಿಮಕ್ಕೆ ಫಿಲಿಷ್ಟಿಯ ಕರಾವಳಿ ಬಯಲಿದೆ. ಹೀಗೆ ಶೆಫೆಲಾವು ಒಂದು ಮಧ್ಯವರ್ತಿ ವಲಯವಾಗಿ, ಬೈಬಲ್ ಕಾಲಗಳಲ್ಲಿ ದೇವರ ಜನರನ್ನು ಅವರ ಹಳೆಯ ವೈರಿಗಳಿಂದ ಪ್ರತ್ಯೇಕಿಸಿದ ಅಡ್ಡತಡೆಯಾಗಿ ಕೆಲಸಮಾಡಿತು. ಪಶ್ಚಿಮದಿಂದ ಆಕ್ರಮಿಸುವ ಯಾವುದೇ ಸೈನ್ಯವು, ಇಸ್ರಾಯೇಲಿನ ರಾಜಧಾನಿ ನಗರವಾದ ಯೆರೂಸಲೇಮಿಗೆ ಎದುರಾಗಿ ಹೋಗುವ ಮೊದಲು ಆ ಶೆಫೆಲಾವನ್ನು ದಾಟಿ ಹೋಗಲೇಬೇಕಾಗಿತ್ತು.
ಇಂತಹ ಒಂದು ಘಟನೆಯು ಸಾ.ಶ.ಪೂ. ಒಂಬತ್ತನೆಯ ಶತಮಾನದಲ್ಲಿ ನಡೆಯಿತು. ಸಿರಿಯದ ರಾಜ ಹಜಾಯೇಲನು “ಬಂದು ಗತ್ [ಶೆಫೆಲಾದ ಮೇರೆಯಲ್ಲಿ ಇದ್ದಿರಬಹುದು] ಊರಿಗೆ ಮುತ್ತಿಗೆಹಾಕಿ ಅದನ್ನು ಸ್ವಾಧೀನಪಡಿಸಿಕೊಂಡು ಅಲ್ಲಿಂದ ಯೆರೂಸಲೇಮಿಗೆ ವಿರೋಧವಾಗಿ ಹೊರಟನು” ಎಂದು ಬೈಬಲು ವರದಿಸುತ್ತದೆ. ರಾಜ ಯೆಹೋವಾಷನು ದೇವಾಲಯದಿಂದ ಮತ್ತು ಅರಮನೆಯಿಂದ ನಾನಾಬಗೆಯ ಬೆಲೆಬಾಳುವ ವಸ್ತುಗಳನ್ನು ಲಂಚಕೊಟ್ಟು ಹಜಾಯೇಲನನ್ನು ನಿಲ್ಲಿಸಶಕ್ತನಾದನು. ಆದರೂ, ಯೆರೂಸಲೇಮಿನ ಭದ್ರತೆಗೆ ಆ ಶೆಫೆಲಾವು ನಿರ್ಣಾಯಕ ಪ್ರಮುಖತೆಯದ್ದಾಗಿತ್ತೆಂದು ಈ ವೃತ್ತಾಂತವು ಚಿತ್ರಿಸುತ್ತದೆ.—2 ಅರಸುಗಳು 12:17, 18.
ಇದರಿಂದ ನಾವೊಂದು ಪ್ರಾಯೋಗಿಕ ಪಾಠವನ್ನು ಕಲಿಯಬಹುದು. ಹಜಾಯೇಲನು ಯೆರೂಸಲೇಮನ್ನು ಜಯಿಸಲು ಬಯಸಿದನು, ಆದರೆ ಮೊದಲಾಗಿ ಅವನು ಶೆಫೆಲಾವನ್ನು ದಾಟಿ ಹೋಗಬೇಕಾಗಿತ್ತು. ತದ್ರೀತಿ, ಪಿಶಾಚನಾದ ಸೈತಾನನು ದೇವರ ಸೇವಕರನ್ನು ‘ನುಂಗಲಿಕ್ಕೆ ಹುಡುಕುತ್ತಾ’ ಇದ್ದಾನೆ, ಆದರೆ ಅನೇಕ ವೇಳೆ ಅವನು ಮೊದಲಾಗಿ ಬಲಾಢ್ಯವಾದೊಂದು ಮಧ್ಯವರ್ತಿ ವಲಯವನ್ನು—ದುಸ್ಸಹವಾಸ ಮತ್ತು ಪ್ರಾಪಂಚಿಕತೆಯಂತಹವುಗಳ ಕುರಿತ ಬೈಬಲ್ ಮೂಲತತ್ವಗಳಿಗೆ ಅವರ ಅಂಟಿಕೊಳ್ಳುವಿಕೆಯನ್ನು—ಭೇದಿಸಿಕೊಂಡು ಹೋಗಬೇಕು. (1 ಪೇತ್ರ 5:8; 1 ಕೊರಿಂಥ 15:33; 1 ತಿಮೊಥೆಯ 6:10) ಬೈಬಲಿನ ಮೂಲತತ್ವಗಳ ವಿಷಯದಲ್ಲಿ ಸಂಧಾನವು ಅನೇಕ ವೇಳೆ ಗುರುತರವಾದ ಪಾಪಗಳನ್ನು ಮಾಡುವುದರ ಕಡೆಗೆ ಇಡುವ ಪ್ರಥಮ ಹೆಜ್ಜೆಯಾಗಿದೆ. ಆದಕಾರಣ ಆ ಮಧ್ಯವರ್ತಿ ವಲಯವನ್ನು ಭದ್ರವಾಗಿರಿಸಿಕೊಳ್ಳಿರಿ. ಬೈಬಲ್ ಮೂಲತತ್ವಗಳನ್ನು ಇಂದೇ ಅನುಸರಿಸಿರಿ, ಆಗ ನಾಳೆ ನೀವು ದೇವರ ನಿಯಮಗಳನ್ನು ಮುರಿಯದಿರುವಿರಿ.
ಯೆಹೂದದ ಗುಡ್ಡ ಪ್ರದೇಶ
ಶೆಫೆಲಾದಿಂದ ಒಳನಾಡಿನಲ್ಲಿ ಇನ್ನೂ ಮುಂದಕ್ಕೆ ಯೆಹೂದದ ಗುಡ್ಡ ಪ್ರದೇಶವಿದೆ. ಇದು ಉತ್ತಮವಾದ ಧಾನ್ಯ, ಆಲೀವ್ ಎಣ್ಣೆ ಮತ್ತು ದ್ರಾಕ್ಷಾಮದ್ಯವನ್ನು ಉತ್ಪಾದಿಸುವ ಬೆಟ್ಟ ಪ್ರದೇಶವಾಗಿದೆ. ಅದರ ಔನ್ನತ್ಯದ ಕಾರಣ ಯೆಹೂದವು ಒಂದು ಶ್ರೇಷ್ಠ ಆಶ್ರಯಸ್ಥಾನವೂ ಆಗಿತ್ತು. ಆದಕಾರಣ, ರಾಜ ಯೋತಾಮನು ಅಲ್ಲಿ “ದುರ್ಗಗಳನ್ನೂ ಬುರುಜುಗಳನ್ನೂ” ಕಟ್ಟಿದನು. ಉಪದ್ರವದ ಸಮಯಗಳಲ್ಲಿ, ಜನರು ಸುರಕ್ಷಿತತೆಗಾಗಿ ಇವುಗಳಿಗೆ ಪಲಾಯನಮಾಡಸಾಧ್ಯವಿತ್ತು.—2 ಪೂರ್ವಕಾಲವೃತ್ತಾಂತ 27:4.
ಚೀಯೋನ್ ಎಂದೂ ಕರೆಯಲ್ಪಟ್ಟ ಯೆರೂಸಲೇಮು, ಯೆಹೂದದ ಗುಡ್ಡ ಪ್ರದೇಶದ ಒಂದು ಪ್ರಮುಖ ಭಾಗವಾಗಿತ್ತು. ಮೂರು ಕಡೆಗಳಲ್ಲಿ ಕಡಿದಾದ ಕಣಿವೆಗಳಿಂದಾವೃತವಾಗಿದ್ದುದರಿಂದ ಮತ್ತು ಪ್ರಥಮ ಶತಮಾನದ ಇತಿಹಾಸಕಾರ ಜೋಸೀಫಸನಿಗನುಸಾರ, ಉತ್ತರ ದಿಕ್ಕಿನಲ್ಲಿ, ಮುಮ್ಮಡಿ ಗೋಡೆಗಳಿಂದ ಸಂರಕ್ಷಿಸಲ್ಪಟ್ಟಿದ್ದುದರಿಂದ ಯೆರೂಸಲೇಮು ಸುಭದ್ರವಾಗಿದೆಯೆಂದು ಕಂಡಿತು. ಆದರೆ ಒಂದು ಆಶ್ರಯ ಸ್ಥಾನಕ್ಕೆ, ಅದರ ಭದ್ರತೆಯನ್ನು ಕಾಪಾಡಲು, ಗೋಡೆಗಳು ಮತ್ತು ಅಸ್ತ್ರಗಳಿಗಿಂತ ಹೆಚ್ಚಿನದ್ದು ಅಗತ್ಯ. ಅದರಲ್ಲಿ ನೀರೂ ಇರಬೇಕು. ಮುತ್ತಿಗೆಯ ಸಮಯದಲ್ಲಿ ಇದು ಅತ್ಯಾವಶ್ಯಕ, ಏಕೆಂದರೆ ನೀರಿಲ್ಲದೆ, ಸಿಕ್ಕಿಸಿ ಹಾಕಲ್ಪಟ್ಟಿರುವ ಪೌರರು ಬೇಗನೆ ಶರಣಾಗತರಾಗುವಂತೆ ನಿರ್ಬಂಧಿಸಲ್ಪಡುವರು.
ಯೆರೂಸಲೇಮು, ಸಿಲೋವ ಕೊಳದಿಂದ ಒಂದು ಜಲಸಂಗ್ರಹವನ್ನು ಸೇದಿತು. ಹಾಗಿದ್ದರೂ, ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ, ಅಶ್ಶೂರದವರಿಂದ ಮುತ್ತಿಗೆಯೊಂದರ ನಿರೀಕ್ಷಣೆಯಿಂದ, ಅರಸನಾದ ಹಿಜ್ಕೀಯನು ಸಿಲೋವ ಕೊಳವನ್ನು ಸಂರಕ್ಷಿಸಲು, ಅದನ್ನು ನಗರದೊಳಕ್ಕೆ ಸೇರಿಸಿ ಹೊರಗೋಡೆಯೊಂದನ್ನು ಕಟ್ಟಿದನು. ಮುತ್ತಿಗೆ ಹಾಕುವ ಅಶ್ಶೂರದವರಿಗೆ ನೀರನ್ನು ಕಂಡುಕೊಳ್ಳುವುದು ಕಷ್ಟಕರವಾಗುವಂತೆ ಅವನು ನಗರದ ಹೊರಗಿದ್ದ ಒರತೆಗಳನ್ನು ಮುಚ್ಚಿಸಿದನು. (2 ಪೂರ್ವಕಾಲವೃತ್ತಾಂತ 32:2-5; ಯೆಶಾಯ 22:11) ಅಷ್ಟೇ ಅಲ್ಲ. ಒಂದು ಹೆಚ್ಚಿಗೆಯ ನೀರಿನ ಸರಬರಾಯಿಯನ್ನು ನೇರವಾಗಿ ಯೆರೂಸಲೇಮಿನೊಳಗೆ ತಿರುಗಿಸುವಂತೆ ಮಾರ್ಗವೊಂದನ್ನು ಹಿಜ್ಕೀಯನು ಕಂಡುಹಿಡಿದನು!
ಪ್ರಾಚೀನಕಾಲದ ಮಹಾ ವಾಸ್ತುಶಿಲ್ಪ ಸಾಧನೆಗಳಲ್ಲೊಂದೆಂದು ಕರೆಯಲ್ಪಟ್ಟಿರುವುವುಗಳಲ್ಲಿ, ಹಿಜ್ಕೀಯನು ಗೀಹೋನ್ ಒರತೆಯಿಂದ ಸಿಲೋವ ಕೊಳದಷ್ಟೂ ದೂರಕ್ಕೆ ಒಂದು ಸುರಂಗವನ್ನು ತೋಡಿದನು.b ಸರಾಸರಿ 1.8 ಮೀಟರ್ ಎತ್ತರವಿರುವ ಈ ಸುರಂಗವು 533 ಮೀಟರ್ ಉದ್ದದ್ದಾಗಿತ್ತು. ಒಂದಿಷ್ಟು ಯೋಚಿಸಿರಿ—ಸುಮಾರು ಅರ್ಧ ಕಿಲೊಮೀಟರ್ ಉದ್ದದ, ಬಂಡೆಯನ್ನು ಕೆತ್ತಿಮಾಡಿದ ಸುರಂಗ! ಇಂದು, ಸುಮಾರು 2,700 ವರ್ಷಗಳ ತರುವಾಯ, ಸಾಧಾರಣವಾಗಿ ಹಿಜ್ಕೀಯನ ಸುರಂಗವೆಂದು ಕರೆಯಲಾಗುವ, ವಾಸ್ತುಶಿಲ್ಪದ ಈ ನಾಯಕಕೃತಿಯ ಮೂಲಕ ಯೆರೂಸಲೇಮಿಗೆ ಭೇಟಿಕೊಡುವವರು ಹಾದುಹೋಗಸಾಧ್ಯವಿದೆ.—2 ಅರಸುಗಳು 20:20; 2 ಪೂರ್ವಕಾಲವೃತ್ತಾಂತ 32:30.
ಯೆರೂಸಲೇಮಿನ ನೀರಿನ ಸರಬರಾಯಿಯನ್ನು ಸಂರಕ್ಷಿಸಿ, ಅದನ್ನು ಹೆಚ್ಚಿಸಲು ಹಿಜ್ಕೀಯನು ಮಾಡಿದ ಪ್ರಯತ್ನಗಳು, ನಮಗೊಂದು ಪ್ರಾಯೋಗಿಕ ಪಾಠವನ್ನು ಕಲಿಸಬಲ್ಲವು. ಯೆಹೋವನು “ಜೀವಜಲದ ಬುಗ್ಗೆ”ಯಾಗಿದ್ದಾನೆ. (ಯೆರೆಮೀಯ 2:13) ಬೈಬಲಿನಲ್ಲಿ ಅಡಕವಾಗಿರುವ ಆತನ ಆಲೋಚನೆಗಳು ಜೀವಪೋಷಕವಾಗಿವೆ. ಆದಕಾರಣವೇ ವ್ಯಕ್ತಿಗತವಾದ ಬೈಬಲ್ ಅಧ್ಯಯನವು ಆವಶ್ಯಕವಾಗಿದೆ. ಆದರೆ ಅಧ್ಯಯನ ಮಾಡುವ ಅವಕಾಶ ಹಾಗೂ ಅದರ ಪರಿಣಾಮವಾದ ಜ್ಞಾನವು ನಿಮ್ಮ ಕಡೆಗೆ ಕೇವಲ ಹರಿದು ಬರುವುದಿಲ್ಲ. ಅದಕ್ಕೆ ಅವಕಾಶವನ್ನು ಮಾಡಲು ನಿಮ್ಮ ನಿತ್ಯದ ಕಾರ್ಯಮಗ್ನ ಕಾರ್ಯಕಲಾಪಗಳಂತಹವುಗಳಲ್ಲಿ ನಿಮಗೆ ‘ಸುರಂಗಗಳನ್ನು ತೋಡ’ಬೇಕಾದೀತು. (ಜ್ಞಾನೋಕ್ತಿ 2:1-5; ಎಫೆಸ 5:15, 16) ಒಮ್ಮೆ ನೀವು ಇದನ್ನು ಆರಂಭಿಸಿದ್ದರೆ, ನಿಮ್ಮ ವೇಳಾಪಟ್ಟಿಗೆ ಅಂಟಿಕೊಂಡಿದ್ದು ನಿಮ್ಮ ಸ್ವಂತ ಅಧ್ಯಯನಕ್ಕೆ ವಿಶೇಷ ಆದ್ಯತೆಯನ್ನು ಕೊಡಿರಿ. ಯಾರೇ ಆಗಲಿ, ಯಾವುದೇ ಆಗಲಿ, ಈ ಅಮೂಲ್ಯ ಜಲ ಸರಬರಾಯಿಯನ್ನು ನಿಮ್ಮಿಂದ ಕಸಿದುಕೊಳ್ಳದಂತೆ ಜಾಗರೂಕತೆಯಿಂದಿರ್ರಿ.—ಫಿಲಿಪ್ಪಿ 1:9, 10.
ಅರಣ್ಯ ಪ್ರದೇಶಗಳು
ಯೆಹೂದದ ಪರ್ವತಗಳ ಪೂರ್ವ ದಿಕ್ಕಿಗೆ, “ಮರುಭೂಮಿ” ಎಂಬ ಅರ್ಥವಿರುವ ಯೆಷೀಮೋನ್ ಎಂದೂ ಕರೆಯಲ್ಪಡುವ ಯೆಹೂದದ ಅರಣ್ಯವಿದೆ. (1 ಸಮುವೇಲ 23:19, NW, ಪಾದಟಿಪ್ಪಣಿ) ಲವಣ ಸಮುದ್ರದ ಬಳಿ, ಈ ಬಂಜರು ಪ್ರದೇಶವು ಶಿಲಾ ಕಮರಿಗಳ ಮತ್ತು ಮೊನಚಾದ ಕಡಿದುಬಂಡೆಗಳ ವೈಶಿಷ್ಟ್ಯವುಳ್ಳದ್ದಾಗಿದೆ. ಕೇವಲ 24 ಕಿಲೊಮೀಟರುಗಳಲ್ಲಿ ಸುಮಾರು 1,200 ಮೀಟರ್ಗಳಷ್ಟು ಇಳಿತವಿರುವ ಯೆಹೂದದ ಅರಣ್ಯವು ಪಶ್ಚಿಮದಿಂದ ಬರುವ ಮಳೆಧಾರಕ ಮಾರುತಗಳ ಎದುರಾಗಿ ಕಾಪಾಡಲ್ಪಟ್ಟು, ಹೀಗೆ ಕೇವಲ ಪರಿಮಿತ ಮೊತ್ತದ ಮಳೆಯನ್ನು ಪಡೆಯುತ್ತದೆ. ವಾರ್ಷಿಕ ದೋಷಪರಿಹಾರಕ ದಿನದಂದು ಅಜಾಜೇಲನ ಆಡು ಯಾವುದರೊಳಗೆ ಕಳುಹಿಸಲ್ಪಟ್ಟಿತೊ ಆ ಅರಣ್ಯವು ಇದಾಗಿತ್ತೆಂಬುದು ನಿಸ್ಸಂಶಯ. ದಾವೀದನು ಸೌಲನಿಂದ ಓಡಿಹೋದ ಸ್ಥಳವೂ ಇದೇ. ಇಲ್ಲಿ ಯೇಸು ನಲವತ್ತು ದಿನಗಳ ಉಪವಾಸವನ್ನು ಮಾಡಿ, ಆ ಬಳಿಕ ಪಿಶಾಚನಿಂದ ಶೋಧಿಸಲ್ಪಟ್ಟನು.—ಯಾಜಕಕಾಂಡ 16:21, 22; ಕೀರ್ತನೆ 63, ಮೇಲ್ಬರಹ; ಮತ್ತಾಯ 4:1-11.
ಯೆಹೂದದ ಅರಣ್ಯಕ್ಕೆ ಹೆಚ್ಚುಕಡಮೆ 160 ಕಿಲೊಮೀಟರ್ ನೈರುತ್ಯದಲ್ಲಿ ಪಾರಾನ್ ಅರಣ್ಯವಿದೆ. ಐಗುಪ್ತದಿಂದ ವಾಗ್ದತ್ತ ದೇಶಕ್ಕೆ ಮಾಡಿದ ಇಸ್ರಾಯೇಲ್ಯರ ನಲವತ್ತು ವರ್ಷಗಳ ಪ್ರಯಾಣದಲ್ಲಿ ಅವರ ಅನೇಕ ಪಾಳೆಯ ನಿವೇಶನಗಳು ಇಲ್ಲಿ ಸ್ಥಾಪಿಸಲ್ಪಟ್ಟಿದ್ದವು. (ಅರಣ್ಯಕಾಂಡ 33:1-49) “ವಿಷಸರ್ಪಗಳೂ ಚೇಳುಗಳೂ ಇದ್ದ ಆ ಘೋರವಾದ ಮಹಾರಣ್ಯ” ಮತ್ತು “ನೀರು ಬತ್ತಿಹೋದ ಭೂಮಿಗಳ” ವಿಷಯ ಮೋಶೆಯು ಬರೆದನು. (ಧರ್ಮೋಪದೇಶಕಾಂಡ 8:15) ಲಕ್ಷಗಟ್ಟಲೆ ಇಸ್ರಾಯೇಲ್ಯರು ಪಾರಾಗಸಾಧ್ಯವಾದದ್ದು ಆಶ್ಚರ್ಯವೇ ಸರಿ! ಆದರೂ ಯೆಹೋವನು ಅವರನ್ನು ಪೋಷಿಸಿದನು.
ಯೆಹೋವನು ನಮ್ಮನ್ನೂ—ಈ ಆತ್ಮಿಕವಾಗಿ ಬಂಜರಾಗಿರುವ ಲೋಕದಲ್ಲಿಯೂ—ಪೋಷಿಸಬಲ್ಲನೆಂಬುದಕ್ಕೆ ಇದು ಒಂದು ಜ್ಞಾಪನವಾಗಿರಲಿ. ಹೌದು, ನಾವು ಕೂಡ ಸರ್ಪಗಳ ಮತ್ತು ಚೇಳುಗಳ ಮಧ್ಯೆ—ಅವು ಅಕ್ಷರಾರ್ಥಕವಾದವುಗಳಲ್ಲದಿದ್ದರೂ—ನಡೆಯುತ್ತೇವೆ. ನಮ್ಮ ಯೋಚನೆಗಳನ್ನು ಸುಲಭವಾಗಿ ತಟ್ಟಬಲ್ಲ ವಿಷಭರಿತ ಮಾತನ್ನು ಕಾರುವುದರಲ್ಲಿ ಯಾವ ಮನದಳುಕೂ ಇಲ್ಲದ ಜನರೊಂದಿಗೆ ನಾವು ದಿನಾಲೂ ಸಂಪರ್ಕವನ್ನಿಡಬೇಕಾದೀತು. (ಎಫೆಸ 5:3, 4; 1 ತಿಮೊಥೆಯ 6:20) ಈ ತಡೆಗಳ ಹೊರತೂ ದೇವರನ್ನು ಸೇವಿಸಲು ಪ್ರಯತ್ನಿಸುವವರು ಪ್ರಶಂಸಿಸಲ್ಪಡಬೇಕು. ಯೆಹೋವನು ನಿಶ್ಚಯವಾಗಿಯೂ ಅವರನ್ನು ಪೋಷಿಸುತ್ತಿದ್ದಾನೆಂಬುದಕ್ಕೆ ಅವರ ನಂಬಿಗಸ್ತಿಕೆಯೇ ಬಲವಾದ ಪುರಾವೆಯಾಗಿದೆ.
ಕರ್ಮೆಲಿನ ಬೆಟ್ಟಗಳು
ಕರ್ಮೆಲ್ ಎಂಬ ಹೆಸರಿನ ಅರ್ಥವು “ಹಣ್ಣುತೋಟ.” ಉತ್ತರಕ್ಕೆ, ಸುಮಾರು 50 ಕಿಲೊಮೀಟರ್ಗಳು ಉದ್ದವಿರುವ ಈ ಫಲವತ್ತಾದ ಪ್ರದೇಶವು ದ್ರಾಕ್ಷಿ ತೋಟಗಳು, ಆಲೀವ್ ತೋಟಗಳು ಮತ್ತು ಫಲವೃಕ್ಷಗಳಿಂದ ಅಲಂಕರಿಸಲ್ಪಟ್ಟಿದೆ. ಈ ಬೆಟ್ಟ ಪ್ರದೇಶದ ಭೂಶಿರವು ಅದರ ರಮ್ಯತೆ ಮತ್ತು ಸೌಂದರ್ಯದಲ್ಲಿ ಅವಿಸ್ಮರಣೀಯವಾಗಿದೆ. ಯೆಶಾಯ 35:2, “ಕರ್ಮೆಲಿನ . . . ವೈಭವ”ವನ್ನು ಪುನಸ್ಸ್ಥಾಪಿತವಾದ ಇಸ್ರಾಯೇಲ್ ದೇಶದ ಫಲಪ್ರದ ಮಹಿಮೆಯ ದ್ಯೋತಕವೆಂಬುದಾಗಿ ಮಾತಾಡುತ್ತದೆ.
ಕರ್ಮೆಲಿನಲ್ಲಿ ಅನೇಕ ಗಮನಾರ್ಹವಾದ ಘಟನೆಗಳು ನಡೆದವು. ಎಲೀಯನು ಬಾಳನ ಪ್ರವಾದಿಗಳನ್ನು ಪಂಥಾಹ್ವಾನಿಸಿದ್ದು ಮತ್ತು ಯೆಹೋವನ ಪಾರಮ್ಯದ ರುಜುವಾತಾಗಿ “ಯೆಹೋವನ ಕಡೆಯಿಂದ ಬೆಂಕಿ” ಬಿದ್ದದ್ದು ಇಲ್ಲಿಯೇ. ಅಲ್ಲದೆ, ದೊಡ್ಡ ಮಳೆಯಾಗಿ ಪರಿಣಮಿಸಿ ಇಸ್ರಾಯೇಲಿನ ಅನಾವೃಷ್ಟಿಯನ್ನು ಅದ್ಭುತಕರವಾಗಿ ಮುಗಿಸಿದ ಆ ಚಿಕ್ಕ ಮೋಡಕ್ಕೆ ಎಲೀಯನು ಗಮನವನ್ನು ಸೆಳೆದದ್ದು ಕರ್ಮೆಲಿನ ನೆತ್ತಿಯಿಂದಲೇ. (1 ಅರಸುಗಳು 18:17-46) ಮೃತನಾಗಿದ್ದ ಮತ್ತು ಆ ಬಳಿಕ ಎಲೀಷನು ಪುನರುತ್ಥಾನಮಾಡಿದ ತನ್ನ ಮಗನಿಗಾಗಿ ಸಹಾಯವನ್ನು ಕೇಳುತ್ತ ಶೂನೇಮಿನ ಸ್ತ್ರೀಯು ಬಂದಾಗ ಎಲೀಯನ ಉತ್ತರಾಧಿಕಾರಿಯಾದ ಎಲೀಷನು ಕರ್ಮೆಲ್ ಬೆಟ್ಟದಲ್ಲಿದ್ದನು.—2 ಅರಸುಗಳು 4:8, 20, 25-37.
ಕರ್ಮೆಲಿನ ಇಳುಕಲಿನಲ್ಲಿ ಈಗಲೂ ಹಣ್ಣುತೋಟಗಳು, ಆಲೀವ್ ತೋಟಗಳು ಮತ್ತು ದ್ರಾಕ್ಷಿ ಬಳ್ಳಿಗಳಿವೆ. ವಸಂತ ಕಾಲದಲ್ಲಿ, ಈ ಇಳುಕಲುಗಳು ಪುಷ್ಪಗಳ ಉಜ್ವಲ ಪ್ರದರ್ಶನದ ಹಾಸುಗಂಬಳಿಗಳಾಗುತ್ತವೆ. “ನಿನ್ನ ಶಿರಸ್ಸು ಕರ್ಮೆಲ್ ಬೆಟ್ಟದಂತೆ ಗಂಭೀರ,” ಎಂದನು ಸೊಲೊಮೋನನು ಶೂಲೇಮ್ಯ ಕನ್ಯೆಗೆ. ಅವನು ಆಕೆಯ ಸೊಂಪಾಗಿ ಬೆಳೆದ ಕೂದಲನ್ನು ಸೂಚಿಸಿ ಅಥವಾ ಆಕೆಯ ಆಕಾರ ಸೌಷ್ಠವವುಳ್ಳ ತಲೆಯು ಆಕೆಯ ಕತ್ತಿನಿಂದ ಘನತೆಯಿಂದ ಮೇಲೆದ್ದಿದ್ದ ವಿಧವನ್ನು ಸೂಚಿಸಿ ಪ್ರಾಯಶಃ ಹಾಗೆ ಹೇಳಿರಬಹುದು.—ಪರಮಗೀತ 7:5.
ಕರ್ಮೆಲ್ ಬೆಟ್ಟಗಳಿಗೆ ವಿಶಿಷ್ಟವಾಗಿದ್ದ ವೈಭವವು ನಮಗೆ, ಯೆಹೋವನು ತನ್ನ ಆರಾಧಕರ ಆಧುನಿಕ ದಿನದ ಸಂಸ್ಥೆಯ ಮೇಲೆ ಅನುಗ್ರಹಿಸಿರುವ ಆತ್ಮಿಕ ಸೌಂದರ್ಯದ ಜ್ಞಾಪಕವನ್ನು ಹುಟ್ಟಿಸುತ್ತದೆ. (ಯೆಶಾಯ 35:1, 2) ಯೆಹೋವನ ಸಾಕ್ಷಿಗಳು ನಿಜವಾಗಿಯೂ ಆತ್ಮಿಕ ಪ್ರಮೋದವನವೊಂದರಲ್ಲಿ ಜೀವಿಸುತ್ತಾರೆ, ಮತ್ತು ರಾಜ ದಾವೀದನ ರಸಭಾವವನ್ನು ಅವರು ಸಮ್ಮತಿಸುತ್ತಾರೆ. ಅವನು ಬರೆದುದು: “ನನಗೆ ಪ್ರಾಪ್ತವಾಗಿರುವ ಸ್ವಾಸ್ತ್ಯವು ರಮಣೀಯವಾದದ್ದು; ಅದು ನನಗೆ ಸಂತೃಪ್ತಿಕರವಾಗಿದೆ.”—ಕೀರ್ತನೆ 16:6.
ನಿಜ, ಪುರಾತನ ಕಾಲದ ಇಸ್ರಾಯೇಲ್ಯರು ದೇವರ ವೈರಿಗಳಿಂದ ಮುಂದುವರಿದ ವಿರೋಧವನ್ನು ಎದುರಿಸಿದಂತೆಯೇ ಇಂದು ದೇವರ ಆತ್ಮಿಕ ಜನಾಂಗವು ಎದುರಿಸಲೇಬೇಕಾದ ಕಷ್ಟಕರವಾದ ಪಂಥಾಹ್ವಾನಗಳಿವೆ. ಆದರೂ, ನಿಜ ಕ್ರೈಸ್ತರು ಯೆಹೋವನು ಒದಗಿಸಿರುವ ಆಶೀರ್ವಾದಗಳನ್ನು—ಬೈಬಲ್ ಸತ್ಯದ ಸದಾ ಹೆಚ್ಚುತ್ತಿರುವ ಬೆಳಕು, ಲೋಕವ್ಯಾಪಕವಾದ ಸಹೋದರತ್ವ ಮತ್ತು ಪ್ರಮೋದವನವಾದೊಂದು ಭೂಮಿಯ ಮೇಲೆ ನಿತ್ಯಜೀವವನ್ನು ಪಡೆಯುವ ಸಂದರ್ಭವು ಸೇರಿರುವ ಆಶೀರ್ವಾದಗಳನ್ನು ಗಮನಿಸುವುದರಲ್ಲಿ ಎಂದೂ ತಪ್ಪಿಹೋಗುವುದಿಲ್ಲ.—ಜ್ಞಾನೋಕ್ತಿ 4:18; ಯೋಹಾನ 3:16; 13:35.
“ಯೆಹೋವನ ವನದಂತೆ”
ಹಳೆಯ ವಾಗ್ದತ್ತ ದೇಶವು ನೋಡಲು ಸುಂದರವಾಗಿತ್ತು. “ಹಾಲೂ ಜೇನೂ ಹರಿಯುವ” ದೇಶವೆಂದು ಅದನ್ನು ತಕ್ಕದ್ದಾಗಿಯೇ ವರ್ಣಿಸಲಾಗಿದೆ. (ಆದಿಕಾಂಡ 13:10; ವಿಮೋಚನಕಾಂಡ 3:8) “ನಿಮ್ಮ ದೇವರಾದ ಯೆಹೋವನು ಉತ್ತಮದೇಶಕ್ಕೆ ನಿಮ್ಮನ್ನು ಸೇರಿಸುತ್ತಾನೆ. ಆ ದೇಶದ ಹಳ್ಳಗಳಲ್ಲಿ ನೀರು ಯಾವಾಗಲೂ ಹರಿಯುತ್ತದೆ; ಮತ್ತು ತಗ್ಗುಗಳಲ್ಲಾಗಲಿ ಗುಡ್ಡಗಳಲ್ಲಾಗಲಿ ಎಲ್ಲಾ ಕಡೆಯೂ ಬಾವಿಗಳಲ್ಲಿಯೂ ಬುಗ್ಗೆಗಳಿಂದಲೂ ನೀರು ಉಕ್ಕುತ್ತದೆ. ಆ ದೇಶದಲ್ಲಿ ಗೋದಿ, ಜವೆಗೋದಿ, ದ್ರಾಕ್ಷೆ, ಅಂಜೂರ, ದಾಳಿಂಬ ಇವುಗಳು ಬೆಳೆಯುತ್ತವೆ; ಎಣ್ಣೆಮರಗಳೂ ಜೇನೂ ಸಿಕ್ಕುತ್ತವೆ. ಅಲ್ಲಿ ನೀವು ದುರ್ಭಿಕ್ಷವನ್ನೇ ಕಾಣದೆ ಸಮೃದ್ಧಿಯಾಗಿ ಉಂಡು ಯಾವ ಕೊರತೆಯೂ ಇಲ್ಲದೆ ಇರುವಿರಿ. ಆ ದೇಶದಲ್ಲಿ ಕಬ್ಬಿಣದ ಕಲ್ಲು ಸಿಕ್ಕುತ್ತದೆ; ಅಲ್ಲಿಯ ಬೆಟ್ಟಗಳಲ್ಲಿ ತಾಮ್ರದ ಗಣಿಗಳುಂಟು” ಎಂದು ಮೋಶೆಯು ಅದನ್ನು ಕರೆದನು.—ಧರ್ಮೋಪದೇಶಕಾಂಡ 8:7-9.
ಯೆಹೋವನು ತನ್ನ ಪ್ರಾಚೀನ ಕಾಲದ ಜನರಿಗಾಗಿ ಅಂತಹ ಸಂಪತ್ತಿನ, ಸುಂದರ ಸ್ವದೇಶವನ್ನು ಒದಗಿಸಶಕ್ತನಾಗಿದ್ದರೆ, ತನ್ನ ಆಧುನಿಕ ದಿನದ ನಂಬಿಗಸ್ತ ಸೇವಕರಿಗೆ ಭೂವ್ಯಾಪಕವಾಗಿ ಹರಡಿರುವ—ಬೆಟ್ಟಗಳು, ಕಣಿವೆಗಳು, ನದಿಗಳು ಮತ್ತು ಸರೋವರಗಳಿರುವ—ಮಹಿಮಾಭರಿತವಾದ ಪ್ರಮೋದವನವೊಂದನ್ನು ಆತನು ಖಂಡಿತವಾಗಿಯೂ ಕೊಡಬಲ್ಲನು. ಹೌದು, ಸಕಲ ವಿವಿಧತೆಗಳಿದ್ದ ಪುರಾತನ ಕಾಲದ ವಾಗ್ದತ್ತ ದೇಶವು ಇಂದು ಆತನ ಸಾಕ್ಷಿಗಳು ಅನುಭವಿಸುವ ಆತ್ಮಿಕ ಪ್ರಮೋದವನದ ಮತ್ತು ನೂತನ ಲೋಕದ ಭಾವೀ ಪ್ರಮೋದವನದ ಕುರಿತಾದ ಕೇವಲ ಒಂದು ಮುನ್ರುಚಿಯಾಗಿತ್ತು. ಅಲ್ಲಿ, ಕೀರ್ತನೆ 37:29ರಲ್ಲಿ ದಾಖಲೆಯಾಗಿರುವ ವಾಗ್ದಾನವು ನೆರವೇರುವುದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” ಯೆಹೋವನು ವಿಧೇಯ ಮಾನವಕುಲಕ್ಕೆ ಆ ಪ್ರಮೋದವನ ಬೀಡನ್ನು ಕೊಡುವಾಗ, ಅದರ ಸಕಲ “ಕೋಣೆಗಳನ್ನು” ಪರೀಕ್ಷಿಸಿ ನೋಡಲು ಮತ್ತು ಹಾಗೆ ಮಾಡಲು ಶಾಶ್ವತ ಕಾಲವಿದೆಯೆಂದು ನೋಡಲು ಅವರೆಷ್ಟು ಆನಂದಿತರಾಗಿರುವರು!
[ಅಧ್ಯಯನ ಪ್ರಶ್ನೆಗಳು]
a ಈ ಪ್ರದೇಶದ ಒಂದು ದ್ರಾಕ್ಷಿ ಗೊಂಚಲು 12 ಕಿಲೊಗ್ರ್ಯಾಮ್, ಇನ್ನೊಂದು 20ಕ್ಕೂ ಹೆಚ್ಚು ಕಿಲೊಗ್ರ್ಯಾಮ್ ಭಾರವುಳ್ಳದ್ದಾಗಿತ್ತೆಂದು ದಾಖಲೆಯಾಗಿತ್ತು.
b ಗೀಹೋನಿನ ಒರತೆಯು ಯೆರೂಸಲೇಮಿನ ಪೂರ್ವ ಮೇರೆಯ ತುಸು ಹೊರಗಿತ್ತು. ಅದು ಒಂದು ಗುಹೆಯಲ್ಲಿ ಮರೆಯಾಗಿತ್ತು; ಆದಕಾರಣ, ಅಶ್ಶೂರದವರಿಗೆ ಅದರ ಅಸ್ತಿತ್ವ ತಿಳಿಯದೆ ಇದ್ದಿರುವುದು ಸಂಭವನೀಯ.
[ಪುಟ 4ರಲ್ಲಿರುವಚಿತ್ರ]
ಗಲಿಲಾಯ
ಕರ್ಮೆಲ್ ಬೆಟ್ಟ
ಗಲಿಲಾಯ ಸಮುದ್ರ
ಸಮಾರ್ಯ
ಶೆಫಲಾ
ಯೆಹೂದದ ಬೆಟ್ಟಗಳು
ಲವಣ ಸಮುದ್ರ
[ಕೃಪೆ]
NASA photo
[ಪುಟ 4ರಲ್ಲಿರುವಚಿತ್ರ]
ಶೆಫೆಲಾವು ದೇವರ ಜನರ ಮತ್ತು ಅವರ ಶತ್ರುಗಳ ಮಧ್ಯೆ ಒಂದು ಅಡ್ಡಗಟ್ಟಾಗಿತ್ತು
MI 0 5 10
KM 0 8 16
ಫಿಲಿಷ್ಟಿಯದ ಬಯಲು
ಶೆಫೆಲಾ
ಯೆಹೂದದ ಗುಡ್ಡ ಪ್ರದೇಶ
ಯೆಹೂದದ ಅರಣ್ಯ
ನೆಲಬಿರುಕಿನ ಕಮರಿ
ಲವಣ ಸಮುದ್ರ
ಅಮ್ಮೋನ್ ಮತ್ತು ಮೋವಾಬ್ ದೇಶ
[ಪುಟ 5ರಲ್ಲಿರುವಚಿತ್ರ]
ಹಿಜ್ಕೀಯನ ಸುರಂಗ: 533 ಮೀಟರ್ ಉದ್ದ, ಗಟ್ಟಿ ಬಂಡೆಯನ್ನು ಕೆತ್ತಿಮಾಡಿದ್ದು
ಟೈರೋಪಿಯನ್ ಕಣಿವೆ
ಸಿಲೋವ
ದಾವೀದನ ನಗರ
ಕಿದ್ರೋನ್ ಕಣಿವೆ
ಗೀಹೋನ್
[ಪುಟ 6 ರಲ್ಲಿರುವ ಚಿತ್ರಗಳು]
ಯೆಹೂದದ ಅರಣ್ಯದಲ್ಲಿ, ದಾವೀದನು ಸೌಲನಿಂದ ತಪ್ಪಿಸಿಕೊಳ್ಳಲು ಆಶ್ರಯವನ್ನು ಹುಡುಕಿದನು. ಸಮಯಾನಂತರ ಯೇಸು ಇಲ್ಲಿ ಪಿಶಾಚನಿಂದ ಶೋಧಿಸಲ್ಪಟ್ಟನು
[ಕೃಪೆ]
Pictorial Archive (Near Eastern History) Est.
[ಪುಟ 7 ರಲ್ಲಿರುವ ಚಿತ್ರಗಳು]
ಎಲೀಯನು ಎಲ್ಲಿ ಬಾಳನ ಪ್ರವಾದಿಗಳಿಗೆ ಅವಮಾನಮಾಡಿದನೊ ಆ ಕರ್ಮೆಲ್ ಬೆಟ್ಟ
[ಕೃಪೆ]
Pictorial Archive (Near Eastern History) Est.
[ಪುಟ 8 ರಲ್ಲಿರುವ ಚಿತ್ರಗಳು]
“ನಿಮ್ಮ ದೇವರಾದ ಯೆಹೋವನು ಉತ್ತಮದೇಶಕ್ಕೆ ನಿಮ್ಮನ್ನು ಸೇರಿಸುತ್ತಾನೆ. ಆ ದೇಶದ ಹಳ್ಳಗಳಲ್ಲಿ ನೀರು ಯಾವಾಗಲೂ ಹರಿಯುತ್ತದೆ; ಮತ್ತು ತಗ್ಗುಗಳಲ್ಲಾಗಲಿ ಗುಡ್ಡಗಳಲ್ಲಾಗಲಿ ಎಲ್ಲಾ ಕಡೆಯೂ ಬಾವಿಗಳಲ್ಲಿಯೂ ಬುಗ್ಗೆಗಳಿಂದಲೂ ನೀರು ಉಕ್ಕುತ್ತದೆ.”—ಧರ್ಮೋಪದೇಶಕಾಂಡ 8:7