ನಿಜ ಸಂತೋಷವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
ಭೌತಿಕ ಸ್ವತ್ತುಗಳನ್ನು ಸಂಪಾದಿಸುವ ಮೂಲಕ ಸಂತೋಷವನ್ನು ಕಂಡುಕೊಳ್ಳಸಾಧ್ಯವಿದೆಯೆಂದು ಅನೇಕ ಜನರಿಗೆ ಅನಿಸುತ್ತದೆ. ನಿಮ್ಮ ಕುರಿತಾಗಿ ಏನು? ಭೌತಿಕ ವಿಷಯಗಳು ಖಂಡಿತವಾಗಿಯೂ ನಮ್ಮ ಸಂತೋಷಕ್ಕೆ ನೆರವನ್ನೀಯಲು ಸಾಧ್ಯವಿದ್ದರೂ, ಅವುಗಳು ಅದರ ಖಾತರಿಯನ್ನು ಕೊಡುವುದಿಲ್ಲ. ಶಾರೀರಿಕ ಸುಖಗಳು ನಂಬಿಕೆಯನ್ನು ಕಟ್ಟುವುದಿಲ್ಲ ಅಥವಾ ಆತ್ಮಿಕ ಅಗತ್ಯಗಳನ್ನು ಪೂರೈಸುವುದಿಲ್ಲ.
ತನ್ನ ಪರ್ವತ ಪ್ರಸಂಗದಲ್ಲಿ ಯೇಸು ಕ್ರಿಸ್ತನು ಹೇಳಿದ್ದು: “ತಮ್ಮ ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು. ಪರಲೋಕರಾಜ್ಯವು ಅವರದು.” (ಮತ್ತಾಯ 5:3, NW) ಯೇಸು ಇದನ್ನೂ ಹೇಳಿದನು: “ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.”—ಲೂಕ 12:15.
ಅನೇಕರು ನಿಷಿದ್ಧ ಕಾಮದಲ್ಲಿ ಮತ್ತು ಇತರ “ಶರೀರಭಾವದ ಕರ್ಮಗಳಲ್ಲಿ” ಒಳಗೂಡುವ ಮೂಲಕ ಸಂತೋಷವನ್ನು ಹುಡುಕುತ್ತಾರೆ. (ಗಲಾತ್ಯ 5:19-21) ಆದಾಗಲೂ, ಇಂದ್ರಿಯ ಸುಖಾನುಭೋಗಗಳಿಗೆ ಮಣಿಯುವುದು, ನಿಜವಾದ ಮತ್ತು ಬಾಳುವ ಸಂತೋಷವನ್ನು ತರುವುದಿಲ್ಲ. ವಾಸ್ತವದಲ್ಲಿ, ಅಂತಹ ವಿಷಯಗಳನ್ನು ರೂಢಿಮಾಡಿಕೊಳ್ಳುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.—1 ಕೊರಿಂಥ 6:9, 10.
ಇತರರು, ತಮ್ಮ ಸ್ವಯೋಗ್ಯತೆಯನ್ನು ಕಟ್ಟಲು ಪ್ರಯತ್ನಿಸುವ ಮೂಲಕ, ಸಂತೋಷಕ್ಕಾಗಿರುವ ಶೋಧದಲ್ಲಿ ಆಂತರಿಕವಾಗಿ ತಿರುಗಿಕೊಳ್ಳುತ್ತಾರೆ. ಗ್ರಂಥಾಲಯಗಳು ಮತ್ತು ಪುಸ್ತಕದ ಅಂಗಡಿಗಳು, ವೈಯಕ್ತಿಕ ವಿಕಸನ ಅಥವಾ ಅಭಿವೃದ್ಧಿಗಾಗಿರುವ ಮಾರ್ಗದರ್ಶಿ ಪುಸ್ತಕಗಳಿಂದ ತುಂಬಿವೆಯಾದರೂ, ಅಂತಹ ಪ್ರಕಾಶನಗಳು ಜನರಿಗೆ ಬಾಳುವ ಸಂತೋಷವನ್ನು ತಂದಿಲ್ಲ. ಹಾಗಾದರೆ ನಿಜವಾದ ಸಂತೋಷವನ್ನು ನಾವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
ನಿಜವಾಗಿಯೂ ಸಂತೋಷಿತರಾಗಿರಲು, ನಾವು ನಮ್ಮ ಸ್ವಭಾವಸಿದ್ಧ ಆತ್ಮಿಕ ಅಗತ್ಯವನ್ನು ಅಂಗೀಕರಿಸಬೇಕು. ಯೇಸು ಹೇಳಿದ್ದು: “ತಮ್ಮ ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.” ಈ ಅಗತ್ಯವನ್ನು ಗ್ರಹಿಸಿ, ಅದರ ಕುರಿತಾಗಿ ಏನನ್ನೂ ಮಾಡದೆ ಇರುವುದು, ನಮಗೆ ಯಾವುದೇ ಒಳಿತನ್ನು ಮಾಡದು ನಿಶ್ಚಯ. ದೃಷ್ಟಾಂತಕ್ಕಾಗಿ: ಒಬ್ಬ ಮ್ಯಾರತಾನ್ ಓಟಗಾರನು, ಓಟದ ನಂತರ ತನ್ನ ದೇಹದ ನೀರಿನ ತೃಷೆಗೆ ಪ್ರತಿಕ್ರಿಯೆ ತೋರಿಸದಿದ್ದಲ್ಲಿ ಏನು ಆಗುವುದು? ಅವನು ಬೇಗನೆ ನಿರ್ಜಲತೆ ಮತ್ತು ಇತರ ಗಂಭೀರ ಪರಿಣಾಮಗಳನ್ನು ಎದುರಿಸುವುದಿಲ್ಲವೊ? ತದ್ರೀತಿಯಲ್ಲಿ, ಆತ್ಮಿಕ ಪೋಷಣೆಗಾಗಿರುವ ನಮ್ಮ ಅಗತ್ಯಕ್ಕೆ ನಾವು ಪ್ರತಿಕ್ರಿಯೆ ತೋರಿಸಲು ತಪ್ಪುವಲ್ಲಿ, ನಾವು ಕೊನೆಗೆ ಆತ್ಮಿಕವಾಗಿ ಬಾಡಿಹೋಗುವೆವು. ಇದು ಆನಂದ ಮತ್ತು ಸಂತೋಷದ ನಷ್ಟಕ್ಕೆ ನಡಿಸುವುದು.
ದೇವರ ವಾಕ್ಯವನ್ನು ಕ್ರಮವಾಗಿ ಅಭ್ಯಾಸಿಸುತ್ತಾ, ಅದರ ಕುರಿತಾಗಿ ಮನನ ಮಾಡುತ್ತಾ, ಯೇಸು ತನ್ನ ಆತ್ಮಿಕ ಅಗತ್ಯವನ್ನು ಪೂರ್ಣವಾಗಿ ಅಂಗೀಕರಿಸಿದನು. ಅವನು ಪವಿತ್ರ ಶಾಸ್ತ್ರವಚನಗಳ ಭಾಗಗಳನ್ನು ಸುಲಭವಾಗಿ ಹುಡುಕಿತೆಗೆದು, ಓದಸಾಧ್ಯವಿತ್ತು ಮತ್ತು ಇತರರು ಅದನ್ನೇ ಮಾಡುವಂತೆ ಅವನು ಕಲಿಸಿದನು. (ಲೂಕ 4:16-21; ಎಫೆಸ 4:20, 21ನ್ನು ಹೋಲಿಸಿರಿ.) ಯೇಸು ತನ್ನ ಸ್ವರ್ಗೀಯ ತಂದೆಯ ಚಿತ್ತವನ್ನು ಮಾಡುವುದನ್ನು ಆಹಾರಕ್ಕೆ ಹೋಲಿಸಿದನು. ದೇವರ ಚಿತ್ತವನ್ನು ಮಾಡುವುದು ಅವನಿಗೆ ತುಂಬ ಸಂತೋಷವನ್ನು ತಂದಿತು.—ಯೋಹಾನ 4:34.
ಹೌದು, ಭೌತಿಕ ವಿಷಯಗಳನ್ನು ಗಳಿಸುವ ಮೂಲಕ ನಿಜ ಸಂತೋಷವನ್ನು ಪಡೆಯಲು ಸಾಧ್ಯವಿಲ್ಲ; ಪಾಪಪೂರ್ಣ ಶರೀರವನ್ನು ಮೆಚ್ಚಿಸುವುದರಿಂದಲೂ ಸಂತೋಷವು ಫಲಿಸುವುದಿಲ್ಲ. ನಿಜ ಸಂತೋಷವು ಹೃದಯದ ಒಂದು ಸ್ಥಿತಿಯಾಗಿದ್ದು, ನಿಜವಾದ ನಂಬಿಕೆ ಮತ್ತು ಯೆಹೋವ ದೇವರೊಂದಿಗಿನ ಒಂದು ಒಳ್ಳೆಯ ಸಂಬಂಧದ ಮೇಲೆ ಆಧಾರಿತವಾಗಿದೆ. ಹಾಗಾದರೆ, ಕೀರ್ತನೆಗಾರನಾದ ದಾವೀದನು ಸೂಕ್ತವಾಗಿಯೇ ಹೀಗೆ ಹಾಡಿದನು: “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಸಂತುಷ್ಟರು.”—ಕೀರ್ತನೆ 144:15ಬಿ, NW.
[ಪುಟ 23 ರಲ್ಲಿರುವ ಚಿತ್ರ]
ನಂಬಿಕೆ ಮತ್ತು ದೇವರೊಂದಿಗಿನ ಒಂದು ಒಳ್ಳೆಯ ಸಂಬಂಧವು, ನಿಮಗೆ ನಿಜ ಸಂತೋಷವನ್ನು ತರುವುದು