ವಿವೇಚನಾಶಕ್ತಿಯು ನಿಮ್ಮನ್ನು ಕಾಪಾಡಲಿ
“ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು [“ವಿವೇಚನಾಶಕ್ತಿಯು,” NW] ನಿನ್ನನ್ನು ಕಾಪಾಡುವದು.”—ಜ್ಞಾನೋಕ್ತಿ 2:11.
1. ವಿವೇಚನಾಶಕ್ತಿಯು ನಮ್ಮನ್ನು ಯಾವುದರಿಂದ ಕಾಪಾಡಬಲ್ಲದು?
ನೀವು ವಿವೇಚನಾಶಕ್ತಿಯನ್ನು ಪ್ರಯೋಗಿಸಬೇಕೆಂದು ಯೆಹೋವನು ಬಯಸುತ್ತಾನೆ. ಯಾಕೆ? ಯಾಕೆಂದರೆ ಅದು ನಿಮ್ಮನ್ನು ವಿವಿಧ ಅಪಾಯಗಳಿಂದ ಕಾಪಾಡುವುದೆಂದು ಆತನಿಗೆ ತಿಳಿದಿದೆ. ಜ್ಞಾನೋಕ್ತಿ 2:10-19 ಹೀಗೆ ಹೇಳುವ ಮೂಲಕ ಆರಂಭಗೊಳ್ಳುತ್ತದೆ: “ಜ್ಞಾನವು ನಿನ್ನ ಹೃದಯದೊಳಗೆ ಪ್ರವೇಶಿಸುವದು, ತಿಳುವಳಿಕೆಯು ನಿನ್ನ ಆತ್ಮಕ್ಕೆ ಅಂದವಾಗಿರುವದು. ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು [“ವಿವೇಚನಾಶಕ್ತಿಯು,” NW] ನಿನ್ನನ್ನು ಕಾಪಾಡುವದು.” ಯಾವುದರಿಂದ ನಿಮ್ಮನ್ನು ಕಾಪಾಡುವುದು? “ದುಮಾರ್ಗ”ದಂತಹ ವಿಷಯಗಳಿಂದ, ಧರ್ಮಮಾರ್ಗಗಳನ್ನು ತೊರೆದುಬಿಡುವವರಿಂದ, ಮತ್ತು ತಮ್ಮ ಸಾಮಾನ್ಯವಾದ ಜೀವನಕ್ರಮದಲ್ಲಿ ವಂಚಕರಾಗಿರುವ ಜನರಿಂದಲೇ.
2. ವಿವೇಚನಾಶಕ್ತಿಯು ಏನಾಗಿದೆ, ಮತ್ತು ಕ್ರೈಸ್ತರು ಯಾವ ರೀತಿಯ ವಿವೇಚನಾಶಕ್ತಿಯನ್ನು ವಿಶೇಷವಾಗಿ ಬಯಸುತ್ತಾರೆ?
2 ವಿವೇಚನಾಶಕ್ತಿಯು, ಒಂದು ವಿಷಯದಿಂದ ಇನ್ನೊಂದರ ವ್ಯತ್ಯಾಸವನ್ನು ಮಾಡುವ ಮನಸ್ಸಿನ ಒಂದು ಸಾಮರ್ಥ್ಯವಾಗಿದೆಯೆಂಬುದನ್ನು ನೀವು ಪ್ರಾಯಶಃ ಜ್ಞಾಪಿಸಿಕೊಳ್ಳುವಿರಿ. ವಿವೇಚನಾಶಕ್ತಿಯುಳ್ಳ ಒಬ್ಬ ವ್ಯಕ್ತಿಯು, ವಿಚಾರಗಳ ಅಥವಾ ವಿಷಯಗಳ ನಡುವಣ ವ್ಯತ್ಯಾಸಗಳನ್ನು ಗ್ರಹಿಸುತ್ತಾನೆ ಮತ್ತು ಒಳ್ಳೆಯ ವಿಮರ್ಶನಾಶಕ್ತಿಯನ್ನು ಹೊಂದಿರುತ್ತಾನೆ. ಕ್ರೈಸ್ತರೋಪಾದಿ ನಾವು, ದೇವರ ವಾಕ್ಯವಾದ ಬೈಬಲಿನ ನಿಷ್ಕೃಷ್ಟ ಜ್ಞಾನದ ಮೇಲೆ ಆಧಾರಿತವಾದ ಆತ್ಮಿಕ ವಿವೇಚನಾಶಕ್ತಿಯನ್ನು ವಿಶೇಷವಾಗಿ ಬಯಸುತ್ತೇವೆ. ನಾವು ಶಾಸ್ತ್ರವಚನಗಳನ್ನು ಅಭ್ಯಾಸಿಸುವಾಗ, ಅದು ಆತ್ಮಿಕ ವಿವೇಚನಾಶಕ್ತಿಯ ಕಟ್ಟಡದ ಕಲ್ಲುಗಳನ್ನು ಗಣಿಯಿಂದ ಎತ್ತಿತೆಗೆಯುತ್ತಿರುವಂತೆ ಇದೆ. ನಾವು ಏನು ಕಲಿಯುತ್ತೇವೊ ಅದು, ಯೆಹೋವನಿಗೆ ಮೆಚ್ಚಿಕೆಯಾಗುವ ನಿರ್ಣಯಗಳನ್ನು ಮಾಡುವಂತೆ ನಮಗೆ ಸಹಾಯ ಮಾಡಬಲ್ಲದು.
3. ನಾವು ಆತ್ಮಿಕ ವಿವೇಚನಾಶಕ್ತಿಯನ್ನು ಹೇಗೆ ಗಳಿಸಸಾಧ್ಯವಿದೆ?
3 ಇಸ್ರಾಯೇಲಿನ ರಾಜನಾದ ಸೊಲೊಮೋನನು ಯಾವ ಆಶೀರ್ವಾದವನ್ನು ಬಯಸುತ್ತಾನೆಂದು ದೇವರು ಅವನನ್ನು ಕೇಳಿದಾಗ, ಆ ಯುವ ಅಧಿಪತಿಯು ಹೇಳಿದ್ದು: “ಅದನ್ನು [“ನಿನ್ನ ಜನರನ್ನು,” NW] ಆಳುವದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವದಕ್ಕೂ ನನಗೆ ವಿವೇಕವನ್ನು [“ವಿವೇಚನಾಶಕ್ತಿಯನ್ನು,” NW] ದಯಪಾಲಿಸು.” ಸೊಲೊಮೋನನು ವಿವೇಚನಾಶಕ್ತಿಗಾಗಿ ಬೇಡಿಕೊಂಡನು, ಮತ್ತು ಯೆಹೋವನು ಅದನ್ನು ಅವನಿಗೆ ಒಂದು ಅಸಾಮಾನ್ಯ ಪ್ರಮಾಣದಲ್ಲಿ ಕೊಟ್ಟನು. (1 ಅರಸುಗಳು 3:9; 4:30) ವಿವೇಚನಾಶಕ್ತಿಯನ್ನು ಗಳಿಸಲು, ನಾವು ಪ್ರಾರ್ಥಿಸುವ ಅಗತ್ಯವಿದೆ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಒದಗಿಸಲ್ಪಡುವ ಜ್ಞಾನೋದಯಗೊಳಿಸುವ ಪ್ರಕಾಶನಗಳ ಸಹಾಯದಿಂದ ದೇವರ ವಾಕ್ಯವನ್ನು ಅಭ್ಯಾಸಿಸುವ ಅಗತ್ಯವಿದೆ. (ಮತ್ತಾಯ 24:45-47) “ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಾಗಲು [“ವಿವೇಚಿಸಲು,” NW]” ಶಕ್ತರಾಗಿರುತ್ತಾ, “ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥ”ರಾಗುವಷ್ಟರ ಮಟ್ಟಿಗೆ ಆತ್ಮಿಕ ವಿವೇಚನಾಶಕ್ತಿಯನ್ನು ವಿಕಸಿಸುವಂತೆ ಇದು ನಮಗೆ ಸಹಾಯ ಮಾಡುವುದು.—1 ಕೊರಿಂಥ 14:20; ಇಬ್ರಿಯ 5:14.
ವಿವೇಚನಾಶಕ್ತಿಯ ವಿಶೇಷ ಅಗತ್ಯ
4. ಒಂದು “ಸರಳ” ಕಣ್ಣನ್ನು ಹೊಂದಿರುವುದರ ಅರ್ಥವೇನು, ಮತ್ತು ಅದು ನಮಗೆ ಹೇಗೆ ಪ್ರಯೋಜನ ತರಬಲ್ಲದು?
4 ಯೋಗ್ಯವಾದ ವಿವೇಚನಾಶಕ್ತಿಯೊಂದಿಗೆ, ನಾವು ಯೇಸು ಕ್ರಿಸ್ತನ ಮಾತುಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯಸಾಧ್ಯವಿದೆ: “ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ [ಭೌತಿಕವಾದ] ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:33) ಯೇಸು ಇದನ್ನೂ ಹೇಳಿದನು: “ನಿನ್ನ ಕಣ್ಣು ದೇಹಕ್ಕೆ ದೀಪವಾಗಿದೆ; ನಿನ್ನ ಕಣ್ಣು ನೆಟ್ಟಗಿರುವಾಗ [“ಸರಳವಾಗಿರುವಾಗ,” NW] ಅದರಂತೆ ನಿನ್ನ ದೇಹವೆಲ್ಲಾ ಬೆಳಕಾಗಿರುವದು.” (ಲೂಕ 11:34) ಕಣ್ಣು ಒಂದು ಸಾಂಕೇತಿಕ ದೀಪವಾಗಿದೆ. “ಸರಳ”ವಾಗಿರುವ ಒಂದು ಕಣ್ಣು ಪ್ರಾಮಾಣಿಕವಾಗಿದ್ದು, ಕೇಂದ್ರ ಬಿಂದುವಿನ ಮೇಲೆ ನೆಟ್ಟಿರುತ್ತದೆ. ಅಂತಹ ಒಂದು ಕಣ್ಣಿನೊಂದಿಗೆ, ನಾವು ವಿವೇಚನಾಶಕ್ತಿಯನ್ನು ತೋರಿಸಿ, ಆತ್ಮಿಕವಾಗಿ ಎಡವದೆ ನಡೆಯಸಾಧ್ಯವಿದೆ.
5. ವ್ಯಾಪಾರ ವ್ಯವಹಾರಗಳ ವಿಷಯದಲ್ಲಿ, ಕ್ರೈಸ್ತ ಸಭೆಯ ಉದ್ದೇಶದ ಕುರಿತಾಗಿ ನಾವು ಏನನ್ನು ಮನಸ್ಸಿನಲ್ಲಿಡತಕ್ಕದ್ದು?
5 ಕೆಲವರು ತಮ್ಮ ಕಣ್ಣನ್ನು ಸರಳವಾಗಿಡುವುದರ ಬದಲಿಗೆ, ತಮ್ಮ ಮತ್ತು ಇತರರ ಜೀವನಗಳನ್ನು ಆಕರ್ಷಕ ವ್ಯಾಪಾರ ವ್ಯವಹಾರಗಳಿಂದ ಜಟಿಲಗೊಳಿಸಿದ್ದಾರೆ. ಆದರೆ ಕ್ರೈಸ್ತ ಸಭೆಯು “ಸತ್ಯದ ಸ್ತಂಭವೂ ಆಧಾರವೂ” ಆಗಿದೆಯೆಂಬುದನ್ನು ನಾವು ನೆನಪಿನಲ್ಲಿಡತಕ್ಕದ್ದು. (1 ತಿಮೊಥೆಯ 3:15) ಒಂದು ಕಟ್ಟಡದ ಆಧಾರಸ್ತಂಭಗಳಂತೆ, ಸಭೆಯು ದೇವರ ಸತ್ಯವನ್ನು ಎತ್ತಿಹಿಡಿಯುತ್ತದೆ; ಯಾವನೇ ವ್ಯಕ್ತಿಯ ವ್ಯಾಪಾರ ಉದ್ಯಮವನ್ನಲ್ಲ. ಯೆಹೋವನ ಸಾಕ್ಷಿಗಳ ಸಭೆಗಳು ವ್ಯಾಪಾರಾಭಿರುಚಿಗಳನ್ನು, ಸಾಮಾನುಗಳನ್ನು ಅಥವಾ ಸೇವಾ ಸೌಲಭ್ಯಗಳನ್ನು ಪ್ರವರ್ಧಿಸುವ ನಿವೇಶನಗಳಾಗಿ ಸ್ಥಾಪಿಸಲ್ಪಟ್ಟಿಲ್ಲ. ರಾಜ್ಯ ಸಭಾಗೃಹದಲ್ಲಿ ವೈಯಕ್ತಿಕ ವ್ಯಾಪಾರ ವ್ಯವಹಾರಗಳನ್ನು ಬೆನ್ನಟ್ಟುವುದರಿಂದ ನಾವು ದೂರವಿರಬೇಕು. ರಾಜ್ಯ ಸಭಾಗೃಹಗಳು, ಸಭಾ ಪುಸ್ತಕ ಅಭ್ಯಾಸಗಳು, ಸಮ್ಮೇಳನಗಳು ಮತ್ತು ಯೆಹೋವನ ಸಾಕ್ಷಿಗಳ ಅಧಿವೇಶನಗಳು, ಕ್ರೈಸ್ತ ಸಹವಾಸ ಮತ್ತು ಆತ್ಮಿಕ ಚರ್ಚೆಗಾಗಿರುವ ಸ್ಥಳಗಳಾಗಿವೆಯೆಂಬುದನ್ನು ಮನಗಾಣಲು ವಿವೇಚನಾಶಕ್ತಿಯು ನಮಗೆ ಸಹಾಯ ಮಾಡುತ್ತದೆ. ಯಾವುದೇ ರೀತಿಯ ವ್ಯಾಪಾರ ಮನೋಭಾವವನ್ನು ಪ್ರವರ್ಧಿಸಲಿಕ್ಕಾಗಿ ನಾವು ಆತ್ಮಿಕ ಸಂಬಂಧಗಳನ್ನು ಉಪಯೋಗಿಸಿದರೆ, ಅದು ಆತ್ಮಿಕ ಮೌಲ್ಯಗಳಿಗಾಗಿ ಕಡಿಮೆಪಕ್ಷ ಸ್ವಲ್ಪವಾದರೂ ಗಣ್ಯತೆಯ ಕೊರತೆಯನ್ನು ತೋರಿಸದೊ? ಸಭಾ ಸಂಬಂಧಗಳನ್ನು ಎಂದಿಗೂ, ಹಣಕಾಸಿನ ಲಾಭಕ್ಕೋಸ್ಕರ ಸ್ವಪ್ರಯೋಜನಕ್ಕಾಗಿ ಉಪಯೋಗಿಸಬಾರದು.
6. ಸಭಾ ಕೂಟಗಳಲ್ಲಿ ವ್ಯಾಪಾರದ ಉತ್ಪನ್ನಗಳು ಅಥವಾ ಸೇವಾ ಸೌಲಭ್ಯಗಳು ಏಕೆ ಮಾರಲ್ಪಡಬಾರದು ಅಥವಾ ಪ್ರವರ್ಧಿಸಲ್ಪಡಬಾರದು?
6 ಕೆಲವರು, ಆರೋಗ್ಯ ಅಥವಾ ಸೌಂದರ್ಯ ವರ್ಧಕಗಳನ್ನು, ಜೀವಸ್ವತ ಉತ್ಪನ್ನಗಳನ್ನು, ದೂರಸಂಪರ್ಕ ಸೇವಾ ಸೌಲಭ್ಯಗಳನ್ನು, ಕಟ್ಟಡ ರಚನೆಯ ಸಾಮಗ್ರಿಗಳನ್ನು, ಪ್ರಯಾಣ ಯೋಜನೆಗಳನ್ನು, ಕಂಪ್ಯೂಟರ್ ಪ್ರೋಗ್ರಾಮ್ಗಳು ಮತ್ತು ಸಲಕರಣೆ ಮುಂತಾದವುಗಳನ್ನು ಮಾರಲಿಕ್ಕಾಗಿ, ದೇವಪ್ರಭುತ್ವ ಸಂಪರ್ಕಗಳನ್ನು ಉಪಯೋಗಿಸಿದ್ದಾರೆ. ಆದಾಗಲೂ, ಸಭಾ ಕೂಟಗಳು, ವ್ಯಾಪಾರದ ಉತ್ಪನ್ನಗಳು ಅಥವಾ ಸೇವಾ ಸೌಲಭ್ಯಗಳನ್ನು ಮಾರುವ ಅಥವಾ ಪ್ರವರ್ಧಿಸುವ ಸ್ಥಳವಾಗಿರುವುದಿಲ್ಲ. ಯೇಸು “ಕುರಿ ದನ ಸಹಿತ ಎಲ್ಲರನ್ನು ದೇವಾಲಯದ ಹೊರಕ್ಕೆ ಅಟ್ಟಿ ಚಿನಿವಾರರ ರೊಕ್ಕವನ್ನು ಚೆಲ್ಲಿ ಮೇಜುಗಳನ್ನು ಕೆಡವಿದನು. ಪಾರಿವಾಳಮಾರುವವರಿಗೆ—ಇವುಗಳನ್ನು ಇಲ್ಲಿಂದ ತಕ್ಕೊಂಡು ಹೋಗಿರಿ; ನನ್ನ ತಂದೆಯ ಮನೆಯನ್ನು ಸಂತೆ ಮಾಡಬೇಡಿರಿ ಎಂದು ಹೇಳಿದನು.” ಇದನ್ನು ನಾವು ನೆನಪಿನಲ್ಲಿಡುವುದಾದರೆ, ಮೂಲಭೂತ ಸೂತ್ರವನ್ನು ನಾವು ವಿವೇಚಿಸಸಾಧ್ಯವಿದೆ.—ಯೋಹಾನ 2:15, 16.
ಬಂಡವಾಳಗಳ ಕುರಿತಾಗಿ ಏನು?
7. ಬಂಡವಾಳಗಳ ವಿಷಯದಲ್ಲಿ ವಿವೇಚನಾಶಕ್ತಿ ಮತ್ತು ಎಚ್ಚರಿಕೆಯು ಏಕೆ ಅಗತ್ಯ?
7 ಸಾಹಸ ವ್ಯಾಪಾರ ಉದ್ಯಮಗಳಲ್ಲಿ ಬಂಡವಾಳ ಹೂಡುವುದನ್ನು ಪರಿಗಣಿಸುವಾಗ, ವಿವೇಚನಾಶಕ್ತಿ ಮತ್ತು ಎಚ್ಚರಿಕೆಯು ಎರಡೂ ಆವಶ್ಯಕ. ಯಾರಾದರೂ ಹಣವನ್ನು ಎರವು ತೆಗೆದುಕೊಳ್ಳಲು ಬಯಸುತ್ತಾರೆ ಮತ್ತು ಈ ರೀತಿಯ ಮಾತುಕೊಡುವಿಕೆಗಳನ್ನು ಮಾಡುತ್ತಾರೆಂದು ಇಟ್ಟುಕೊಳ್ಳಿರಿ: “ನೀವು ಹಣವನ್ನು ಸಂಪಾದಿಸುವಿರೆಂದು ನಾನು ಖಾತರಿ ಕೊಡುತ್ತೇನೆ.” “ನಿಮಗೆ ಯಾವುದೇ ನಷ್ಟವಾಗಲು ಸಾಧ್ಯವಿಲ್ಲ. ಖಂಡಿತವಾಗಿಯೂ ನನಗೆ ಇದರಿಂದ ಲಾಭ ಸಿಗುತ್ತದೆ.” ಯಾರಾದರೂ ಅಂತಹ ಆಶ್ವಾಸನೆಗಳನ್ನು ಕೊಡುವಾಗ ಎಚ್ಚರವಾಗಿರಿ. ಒಂದೇ ಅವನು ವ್ಯಾವಹಾರಿಕನಾಗಿಲ್ಲ, ಇಲ್ಲವೇ ಅವನು ಅಪ್ರಾಮಾಣಿಕನಾಗಿದ್ದಾನೆ, ಯಾಕಂದರೆ ಬಂಡವಾಳ ಹೂಡುವುದು, ಒಂದು ಖಚಿತ ವಿಷಯವಾಗಿರುವುದು ವಿರಳ. ವಾಸ್ತವದಲ್ಲಿ, ಕೆಲವು ನಯವಂಚಕ, ನೀತಿನಿಷ್ಠೆಗಳಿಲ್ಲದ ವ್ಯಕ್ತಿಗಳು, ಸಭೆಯ ಸದಸ್ಯರನ್ನು ಮೋಸಗೊಳಿಸಿದ್ದಾರೆ. ಇದು, ಪ್ರಥಮ ಶತಮಾನದ ಸಭೆಯಲ್ಲಿ ನುಸುಳಿದ್ದ ಮತ್ತು ‘ದೇವರ ಕೃಪೆಯನ್ನು ನೆವಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವವರೂ’ ಆಗಿದ್ದ “ಭಕ್ತಿಹೀನರ”ನ್ನು ನಮ್ಮ ಮನಸ್ಸಿಗೆ ತರುತ್ತದೆ. ಅವರು ಈಜುಗಾರರನ್ನು ಸೀಳಿ ಕೊಲ್ಲಸಾಧ್ಯವಿದ್ದ ಮೊನಚಾದ ಚಾಚುಗಳುಳ್ಳ, ನೀರಿನ ಕೆಳಗಿನ ಬಂಡೆಗಳಂತಿದ್ದರು. (ಯೂದ 4, 12) ಮೋಸಗಾರರ ಹೇತುಗಳು ಧರ್ಮಭ್ರಷ್ಟರ ಹೇತುಗಳಿಗಿಂತ ಭಿನ್ನವಾಗಿವೆ ನಿಜ, ಆದರೆ ಅವರೂ ಸಭೆಯ ಸದಸ್ಯರನ್ನು ಬೇಟೆಯಾಗಿ ಆರಿಸಿಕೊಂಡುಹೋಗುತ್ತಾರೆ.
8. ಲಾಭಕರವೆಂದು ತೋರುವ ಕೆಲವು ಸಾಹಸ ವ್ಯಾಪಾರ ಉದ್ಯಮಗಳ ಸಂಬಂಧದಲ್ಲಿ ಏನು ಸಂಭವಿಸಿದೆ?
8 ಸದುದ್ದೇಶವುಳ್ಳ ಸಹೋದರರು ಸಹ, ಲಾಭಕರವೆಂದು ತೋರುವ ಸಾಹಸ ಉದ್ಯಮಗಳ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಮಾದರಿಯನ್ನು ಹಿಂಬಾಲಿಸಿದವರೊಂದಿಗೆ ಅವರು ಬಂಡವಾಳ ಹಾಕಿದ ಹಣವನ್ನು ಕಳೆದುಕೊಂಡಿರುವ ಸ್ಥಿತಿಯಲ್ಲಿ ತಮ್ಮನ್ನು ಕಂಡುಕೊಳ್ಳುತ್ತಾರೆ. ಫಲಿತಾಂಶವಾಗಿ, ಅನೇಕ ಕ್ರೈಸ್ತರು ಸಭೆಯಲ್ಲಿನ ಸುಯೋಗಗಳನ್ನು ಕಳೆದುಕೊಂಡಿದ್ದಾರೆ. ಕ್ಷಿಪ್ರವಾಗಿ ಐಶ್ವರ್ಯವಂತರನ್ನಾಗಿ ಮಾಡಿಸುವ ಸಾಹಸ ಉದ್ಯಮಗಳು, ಮೋಸಕರವಾದ ಯೋಜನೆಗಳಾಗಿ ಪರಿಣಮಿಸುವಾಗ, ಪ್ರಯೋಜನಪಡೆಯುವ ಏಕಮಾತ್ರ ವ್ಯಕ್ತಿಯು ವಂಚಕನಾಗಿದ್ದಾನೆ; ಮತ್ತು ಅವನು ತಡವಿಲ್ಲದೆ ಕಣ್ಮರೆಯಾಗುತ್ತಾನೆ. ಅಂತಹ ಸನ್ನಿವೇಶಗಳನ್ನು ಹೋಗಲಾಡಿಸಲು ವಿವೇಚನಾಶಕ್ತಿಯು ಒಬ್ಬನಿಗೆ ಹೇಗೆ ಸಹಾಯ ಮಾಡಬಲ್ಲದು?
9. ಬಂಡವಾಳಗಳ ಕುರಿತಾದ ವಾದಗಳ ಮೌಲ್ಯಮಾಪನಮಾಡಲು ವಿವೇಚನಾಶಕ್ತಿಯು ಬೇಕಾಗಿದೆ ಏಕೆ?
9 ವಿವೇಚನಾಶಕ್ತಿಯು, ಅವ್ಯಕ್ತವಾದ ವಿಷಯವನ್ನು ಗ್ರಹಿಸಲು ಶಕ್ತರಾಗಿರುವ ಅರ್ಥವನ್ನು ಹೊಂದಿರುತ್ತದೆ. ಬಂಡವಾಳಗಳ ಕುರಿತಾದ ವಾದಗಳ ಗುಣವಿಮರ್ಶೆಮಾಡಲು ಈ ಸಾಮರ್ಥ್ಯವು ಆವಶ್ಯಕವಾಗಿದೆ. ಕ್ರೈಸ್ತರು ಒಬ್ಬರು ಇನ್ನೊಬ್ಬರ ಮೇಲೆ ಭರವಸೆಯಿಡುತ್ತಾರೆ ಮತ್ತು ಜೊತೆ ವಿಶ್ವಾಸಿಗಳ ಸಂಪನ್ಮೂಲಗಳನ್ನು ಅಪಾಯಕ್ಕೀಡುಮಾಡುವ ಒಂದು ಸಾಹಸ ಉದ್ಯಮದಲ್ಲಿ ತಮ್ಮ ಆತ್ಮಿಕ ಸಹೋದರ ಸಹೋದರಿಯರು ಒಳಗೂಡುವುದಿಲ್ಲ ಎಂದು ಕೆಲವರು ತರ್ಕಿಸಬಹುದು. ಆದರೆ ಒಬ್ಬ ವ್ಯಾಪಾರಸ್ಥನು ಒಬ್ಬ ಕ್ರೈಸ್ತನಾಗಿದ್ದಾನೆಂಬ ವಾಸ್ತವಾಂಶವು, ಅವನು ವ್ಯಾಪಾರದ ವಿಷಯಗಳಲ್ಲಿ ಅತಿಶಯಿಸುತ್ತಾನೆಂಬುದರ ಅಥವಾ ಅವನ ಉದ್ಯಮವು ಯಶಸ್ವಿಗೊಳ್ಳುವುದೆಂಬುದರ ಖಾತರಿಯನ್ನು ಕೊಡುವುದಿಲ್ಲ.
10. ಕೆಲವು ಕ್ರೈಸ್ತರು ಜೊತೆ ವಿಶ್ವಾಸಿಗಳಿಂದ ವ್ಯಾಪಾರ ಸಾಲಗಳನ್ನು ಪಡೆಯಲು ಪ್ರಯತ್ನಿಸುವುದೇಕೆ, ಮತ್ತು ಅಂತಹ ಬಂಡವಾಳಗಳಿಗೆ ಏನು ಸಂಭವಿಸಸಾಧ್ಯವಿದೆ?
10 ತಮ್ಮ ಅಪಾಯಕಾರಿ ಉದ್ಯಮಗಳಿಗಾಗಿ, ಸಾಲನೀಡುವ ಪ್ರಖ್ಯಾತ ಏಜೆನ್ಸಿಗಳು ಎಂದಿಗೂ ಹಣವನ್ನು ಒದಗಿಸವು ಎಂಬ ಕಾರಣದಿಂದ, ಕೆಲವು ಕ್ರೈಸ್ತರು ಸಹೋದರ ಸಹೋದರಿಯರಿಂದ ವ್ಯಾಪಾರ ಸಾಲಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ತಮ್ಮ ಹಣವನ್ನು ಕೇವಲ ಬಂಡವಾಳ ಹೂಡುವ ಮೂಲಕ, ಹೆಚ್ಚು ಕೆಲಸವನ್ನು ಮಾಡದೇ ಅಥವಾ ಯಾವುದೇ ಕೆಲಸ ಮಾಡದೇ ತಾವು ಕ್ಷಿಪ್ರವಾಗಿ ಸಂಪತ್ತನ್ನು ಗಳಿಸಬಹುದೆಂದು ನಂಬುವಂತೆ ಅನೇಕರು ಮೋಸಗೊಳಿಸಲ್ಪಟ್ಟಿದ್ದಾರೆ. ಕೆಲವರು ಅದರೊಂದಿಗೆ ಸೇರಿರುವ ಮೋಹಕ ಲಾವಣ್ಯದ ಕಾರಣ ಬಂಡವಾಳಕ್ಕೆ ಆಕರ್ಷಿತರಾಗಿ, ಜೀವನದುದ್ದದ ಉಳಿತಾಯಗಳನ್ನು ನಷ್ಟಗೊಳಿಸಿಕೊಂಡಿದ್ದಾರೆ! ಕೇವಲ ಎರಡು ವಾರಗಳಲ್ಲಿ 25 ಪ್ರತಿಶತ ಪ್ರಮಾಣದ ಲಾಭವನ್ನು ನಿರೀಕ್ಷಿಸುತ್ತಾ, ಒಬ್ಬ ಸಹೋದರನು ಒಂದು ದೊಡ್ಡ ಮೊತ್ತದ ಹಣವನ್ನು ಬಂಡವಾಳ ಹೂಡಿದನು. ಆ ಬಂಡವಾಳದ ಕಂಪೆನಿಯಿಂದ ದಿವಾಳಿತನವು ಪ್ರಕಟಿಸಲ್ಪಟ್ಟಾಗ, ಅವನು ಆ ಎಲ್ಲಾ ಹಣವನ್ನು ಕಳೆದುಕೊಂಡನು. ಇನ್ನೊಂದು ಸಾಹಸ ವ್ಯಾಪಾರ ಉದ್ಯಮದಲ್ಲಿ, ಒಬ್ಬ ಸ್ಥಿರಾಸ್ತಿ ಅಭಿವರ್ಧಕನು ಸಭೆಯಲ್ಲಿದ್ದ ಇತರರಿಂದ ಹಣದ ದೊಡ್ಡ ಮೊತ್ತಗಳನ್ನು ಎರವು ತೆಗೆದುಕೊಂಡನು. ಅವನು ಅಸಾಮಾನ್ಯವಾದ ದೊಡ್ಡ ಲಾಭಗಳ ಕುರಿತಾಗಿ ಮಾತು ಕೊಟ್ಟನು, ಆದರೆ ಅವನು ದಿವಾಳಿಯಾಗಿ, ಎರವು ತೆಗೆದುಕೊಂಡಿದ್ದ ಹಣವನ್ನು ಕಳೆದುಕೊಂಡನು.
ವ್ಯಾಪಾರ ಉದ್ಯಮಗಳು ಸೋಲುವಾಗ
11. ಲೋಭ ಮತ್ತು ಹಣದಾಸೆಯ ಕುರಿತಾಗಿ ಪೌಲನು ಯಾವ ಸಲಹೆಯನ್ನು ಕೊಟ್ಟನು?
11 ವ್ಯಾಪಾರ ಸೋಲುಗಳು, ಅಸ್ಥಿರವಾದ ಸಾಹಸ ಉದ್ಯಮಗಳೊಳಗೆ ಪ್ರವೇಶಿಸಿದ ಕೆಲವು ಕ್ರೈಸ್ತರನ್ನು ನಿರಾಶೆ ಮತ್ತು ಆತ್ಮಿಕತೆಯ ನಷ್ಟಕ್ಕೂ ನಡಿಸಿವೆ. ವಿವೇಚನಾಶಕ್ತಿಯು ಒಂದು ರಕ್ಷೆಯಾಗಿ ಕಾರ್ಯವೆಸಗುವಂತೆ ಅನುಮತಿಸದಿರುವುದರಿಂದ, ಮನೋವ್ಯಥೆ ಮತ್ತು ಕಹಿಭಾವನೆಯು ಫಲಿಸಿದೆ. ಲೋಭವು ಅನೇಕರನ್ನು ಪಾಶದೊಳಕ್ಕೆ ಸಿಕ್ಕಿಸಿದೆ. “ದ್ರವ್ಯಾಶೆ [“ಲೋಭ,” NW] ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು. ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು” ಎಂದು ಪೌಲನು ಬರೆದನು. (ಎಫೆಸ 5:3) ಮತ್ತು ಅವನು ಎಚ್ಚರಿಸಿದ್ದು: “ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶಗಳಲ್ಲಿ ಮುಳುಗಿಸುತ್ತವೆ. ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.”—1 ತಿಮೊಥೆಯ 6:9, 10.
12. ಕ್ರೈಸ್ತರು ಒಬ್ಬರೊಂದಿಗೊಬ್ಬರು ವ್ಯಾಪಾರ ಮಾಡುವಲ್ಲಿ, ಅವರು ವಿಶೇಷವಾಗಿ ಏನನ್ನು ನೆನಪಿನಲ್ಲಿಡತಕ್ಕದ್ದು?
12 ಒಬ್ಬ ಕ್ರೈಸ್ತನು ಹಣದಾಸೆಯನ್ನು ವಿಕಸಿಸಿಕೊಳ್ಳುವುದಾದರೆ, ಅವನು ತನಗೇ ತುಂಬ ಆತ್ಮಿಕ ಹಾನಿಯನ್ನು ಉಂಟುಮಾಡಿಕೊಳ್ಳುವನು. ಫರಿಸಾಯರು ಹಣದಾಸೆಯುಳ್ಳವರಾಗಿದ್ದರು, ಮತ್ತು ಇದು ಈ ಕಡೇ ದಿವಸಗಳಲ್ಲಿನ ಹೆಚ್ಚಿನ ಜನರ ಗುಣಲಕ್ಷಣಗಳಲ್ಲಿ ಒಂದಾಗಿದೆ. (ಲೂಕ 16:14; 2 ತಿಮೊಥೆಯ 3:1, 2) ಇದಕ್ಕೆ ವ್ಯತಿರಿಕ್ತವಾಗಿ, ಒಬ್ಬ ಕ್ರೈಸ್ತನ ಜೀವನ ರೀತಿಯು “ಹಣದಾಸೆಯಿಂದ ಮುಕ್ತವಾಗಿರಬೇಕು.” (ಇಬ್ರಿಯ 13:5, NW) ಖಂಡಿತವಾಗಿಯೂ, ಕ್ರೈಸ್ತರು ಒಬ್ಬರು ಇನ್ನೊಬ್ಬರೊಂದಿಗೆ ವ್ಯಾಪಾರವನ್ನು ಮಾಡಸಾಧ್ಯವಿದೆ ಅಥವಾ ಜೊತೆಯಾಗಿ ವ್ಯಾಪಾರಗಳನ್ನು ಆರಂಭಿಸಸಾಧ್ಯವಿದೆ. ಆದಾಗಲೂ, ಅವರು ಹಾಗೆ ಮಾಡುವಲ್ಲಿ, ಚರ್ಚೆಗಳು ಮತ್ತು ಸಮಾಲೋಚನೆಗಳು ಸಭಾ ವಿಷಯಗಳಿಂದ ಪ್ರತ್ಯೇಕವಾಗಿರಿಸಲ್ಪಡಬೇಕು. ಮತ್ತು ನೆನಪಿನಲ್ಲಿಡಿರಿ: ಆತ್ಮಿಕ ಸಹೋದರರ ನಡುವೆಯೂ, ವ್ಯಾಪಾರ ಒಪ್ಪಂದಗಳನ್ನು ಯಾವಾಗಲೂ ಲಿಖಿತ ರೂಪದಲ್ಲಿ ದಾಖಲಿಸಿರಿ. ಈ ವಿಷಯದಲ್ಲಿ 1983, ಫೆಬ್ರವರಿ 8ರ ಅವೇಕ್! ಪತ್ರಿಕೆಯಲ್ಲಿ, 13ರಿಂದ 15ನೆಯ ಪುಟಗಳಲ್ಲಿ ಪ್ರಕಾಶಿಸಲ್ಪಟ್ಟ “ಅದನ್ನು ಬರವಣಿಗೆಯಲ್ಲಿ ದಾಖಲಿಸಿರಿ!” ಎಂಬ ಲೇಖನವು ಸಹಾಯಕರವಾಗಿದೆ.
13. ಜ್ಞಾನೋಕ್ತಿ 22:7ನ್ನು ನೀವು ಸಾಹಸ ವ್ಯಾಪಾರ ಉದ್ಯಮಗಳಿಗೆ ಹೇಗೆ ಅನ್ವಯಿಸುವಿರಿ?
13 ಜ್ಞಾನೋಕ್ತಿ 22:7 ನಮಗೆ ಹೇಳುವುದು: “ಸಾಲಗಾರನು ಸಾಲಕೊಟ್ಟವನಿಗೆ ಸೇವಕ.” ನಮ್ಮನ್ನು ಅಥವಾ ನಮ್ಮ ಸಹೋದರನನ್ನು, ಅಂತಹ ಒಬ್ಬ ಸೇವಕನ ಸ್ಥಾನದಲ್ಲಿ ಇರಿಸುವುದು ಅನೇಕ ವೇಳೆ ಅವಿವೇಕವಾಗಿದೆ. ಒಂದು ಸಾಹಸ ವ್ಯಾಪಾರ ಉದ್ಯಮಕ್ಕಾಗಿ ಯಾರಾದರೊಬ್ಬರು ನಮ್ಮಿಂದ ಹಣವನ್ನು ಎರವಲಾಗಿ ಕೇಳುವಾಗ, ಆ ಮೊತ್ತವನ್ನು ಹಿಂದಿರುಗಿಸಲು ಅವನಿಗಿರುವ ಸಾಮರ್ಥ್ಯವನ್ನು ಪರಿಗಣಿಸುವುದು ಯುಕ್ತ. ಅವನು ಭರವಸಾರ್ಹನೂ ವಿಶ್ವಾಸಾರ್ಹನೂ ಆಗಿರುವುದಕ್ಕೆ ಜ್ಞಾತನಾಗಿದ್ದಾನೊ? ನಿಶ್ಚಯವಾಗಿಯೂ, ಅಂತಹ ಒಂದು ಸಾಲವನ್ನು ಮಾಡುವುದು ಹಣದ ನಷ್ಟವನ್ನು ಅರ್ಥೈಸಸಾಧ್ಯವೆಂದು ನಾವು ಗ್ರಹಿಸಬೇಕು, ಯಾಕಂದರೆ ಅನೇಕ ಸಾಹಸ ಉದ್ಯಮಗಳು ಸೋಲುತ್ತವೆ. ಒಂದು ಕಾಂಟ್ರ್ಯಾಕ್ಟ್ ತಾನೇ ಒಂದು ಯಶಸ್ವೀ ಉದ್ಯಮವನ್ನು ಖಚಿತಪಡಿಸುವುದಿಲ್ಲ. ಮತ್ತು ನಿಶ್ಚಯವಾಗಿಯೂ ಯಾರೇ ಒಬ್ಬನು, ತಾನು ನಷ್ಟಪಡಲು ಶಕ್ತನಾಗಿರುವುದಕ್ಕಿಂತ ಹೆಚ್ಚು ಹಣವನ್ನು ಒಂದು ಉದ್ಯಮಕ್ಕಾಗಿ ಎರವು ಕೊಡುವ ಅಪಾಯವನ್ನು ತೆಗೆದುಕೊಳ್ಳುವುದು ವಿವೇಕಯುತವಲ್ಲ.
14. ಯಾರ ವ್ಯಾಪಾರವು ಸೋಲುತ್ತದೊ ಆ ಒಬ್ಬ ಜೊತೆ ಕ್ರೈಸ್ತನಿಗೆ ನಾವು ಹಣವನ್ನು ನೀಡಿರುವಲ್ಲಿ, ನಾವು ವಿವೇಚನಾಶಕ್ತಿಯನ್ನು ಏಕೆ ತೋರಿಸಬೇಕಾಗಿದೆ?
14 ವ್ಯಾಪಾರ ಉದ್ದೇಶಗಳಿಗಾಗಿ ನಾವು ಕ್ರೈಸ್ತನೊಬ್ಬನಿಗೆ ಹಣವನ್ನು ಎರವಲಾಗಿ ಕೊಟ್ಟಿರುವುದಾದರೆ ಮತ್ತು ಯಾವುದೇ ಅಪ್ರಾಮಾಣಿಕ ಆಚಾರಗಳು ಒಳಗೂಡಿರದಿದ್ದರೂ ಆ ಹಣವು ನಷ್ಟವಾಗಿರುವುದಾದರೆ, ನಾವು ವಿವೇಚನಾಶಕ್ತಿಯನ್ನು ತೋರಿಸುವ ಅಗತ್ಯವಿದೆ. ಆ ವ್ಯಾಪಾರದ ಸೋಲು, ನಮ್ಮಿಂದ ಹಣವನ್ನು ಎರವಲಾಗಿ ಪಡೆದ ಜೊತೆ ವಿಶ್ವಾಸಿಯ ದೋಷವಾಗಿರದಿದ್ದಲ್ಲಿ, ನಮಗೆ ಯಾವುದೊ ರೀತಿಯಲ್ಲಿ ಅನ್ಯಾಯ ಆಗಿದೆಯೆಂದು ನಾವು ಹೇಳಬಹುದೊ? ಇಲ್ಲ, ಯಾಕಂದರೆ ನಾವು ಸ್ವಇಚ್ಛೆಯಿಂದ ಆ ಸಾಲವನ್ನು ಕೊಟ್ಟೆವು, ನಾವು ಅದರ ಬಡ್ಡಿಯನ್ನು ವಸೂಲು ಮಾಡುತ್ತಿದ್ದಿರಬಹುದು, ಮತ್ತು ಯಾವುದೇ ಅಪ್ರಾಮಾಣಿಕ ಸಂಗತಿಯು ನಡೆದಿಲ್ಲ. ಯಾವ ಅಪ್ರಾಮಾಣಿಕತೆಯೂ ಇಲ್ಲದಿದ್ದುದರಿಂದ, ಸಾಲಗಾರನ ವಿರುದ್ಧ ಕಾನೂನುಬದ್ಧ ಕ್ರಮವನ್ನು ಕೈಕೊಳ್ಳಲು ನಮಗೆ ಯಾವ ಆಧಾರವೂ ಇಲ್ಲ. ವಾಸ್ತವವಾಗಿ, ಒಂದು ಒಳ್ಳೇ ಉದ್ದೇಶವನ್ನು ಹೊಂದಿದ ಸಾಹಸ ವ್ಯಾಪಾರ ಉದ್ಯಮವು ಸೋತುಹೋದ ಕಾರಣದಿಂದ, ದಿವಾಳಿತನಕ್ಕಾಗಿ ದಾಖಲಾಗಬೇಕಾದ ಒಬ್ಬ ಪ್ರಾಮಾಣಿಕ ಜೊತೆ ಕ್ರೈಸ್ತನ ಮೇಲೆ, ನ್ಯಾಯಸ್ಥಾನದಲ್ಲಿ ಮೊಕದ್ದಮೆ ಹಾಕುವುದರಿಂದ ಏನು ಒಳಿತಾಗುವುದು?—1 ಕೊರಿಂಥ 6:1.
15. ದಿವಾಳಿತನವು ಪ್ರಕಟಿಸಲ್ಪಡುವಲ್ಲಿ ಯಾವ ಅಂಶಗಳು ಪರಿಗಣಿಸಲ್ಪಡಬೇಕು?
15 ವ್ಯಾಪಾರ ಸೋಲುಗಳನ್ನು ಅನುಭವಿಸುತ್ತಿರುವವರು ಕೆಲವೊಮ್ಮೆ ದಿವಾಳಿತನವನ್ನು ಪ್ರಕಟಿಸುವ ಮೂಲಕ ಪರಿಹಾರವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಋಣದ ಕುರಿತಾಗಿ ಕ್ರೈಸ್ತರು ಅಲಕ್ಷ್ಯಭಾವದವರು ಆಗಿರದಿರುವುದರಿಂದ, ನಿರ್ದಿಷ್ಟ ಸಾಲಗಳಿಂದ ಕಾನೂನುಬದ್ಧವಾಗಿ ಮುಕ್ತಗೊಳಿಸಲ್ಪಟ್ಟ ನಂತರವೂ, ತಮಗೆ ಸಾಲಕೊಟ್ಟವರು ಪಾವತಿಯನ್ನು ಸ್ವೀಕರಿಸುವುದಾದರೆ, ರದ್ದುಮಾಡಲ್ಪಟ್ಟ ಸಾಲಗಳನ್ನು ಪಾವತಿಮಾಡಲು ಪ್ರಯತ್ನಿಸುವ ಹಂಗು ತಮಗಿದೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ, ಸಾಲಗಾರನೊಬ್ಬನು ತನ್ನ ಸಹೋದರನ ಹಣವನ್ನು ನಷ್ಟಮಾಡಿ, ಅನಂತರ ಭೋಗಪ್ರದವಾದ ಜೀವನವೊಂದನ್ನು ನಡಿಸುವುದಾದರೆ ಆಗೇನು? ಅಥವಾ ಸಾಲಗಾರನು, ಎರವಲಾಗಿ ತೆಗೆದುಕೊಳ್ಳಲಾದ ಹಣವನ್ನು ಹಿಂದೆ ತೆರುವಷ್ಟು ಹಣವನ್ನು ಗಳಿಸಿರುವುದಾದರೂ, ಹಣಕಾಸಿನ ವಿಷಯದಲ್ಲಿ ತನ್ನ ಸಹೋದರನ ಕಡೆಗೆ ತನಗಿರುವ ನೈತಿಕ ಹಂಗನ್ನು ಅಲಕ್ಷಿಸುವುದಾದರೆ ಆಗೇನು? ಆಗ, ಹಣವನ್ನು ಎರವಲಾಗಿ ಪಡೆದುಕೊಂಡವನು, ಸಭೆಯಲ್ಲಿ ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಸೇವೆಸಲ್ಲಿಸುವ ಯೋಗ್ಯತೆಗಳ ಕುರಿತಾಗಿ ಸಂದೇಹಗಳಿರುವವು.—1 ತಿಮೊಥೆಯ 3:3, 8; ಕಾವಲಿನಬುರುಜು, ಸೆಪ್ಟಂಬರ್ 15, 1994ರ 30-1ನೆಯ ಪುಟಗಳನ್ನು ನೋಡಿರಿ.
ಮೋಸವು ಒಳಗೂಡಿರುವುದಾದರೆ ಆಗೇನು?
16. ನಾವು ಮೋಸದ ವ್ಯಾಪಾರಕ್ಕೆ ಬಲಿಯಾಗಿರುವಂತೆ ತೋರುವಲ್ಲಿ, ನಾವು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು?
16 ಎಲ್ಲಾ ಬಂಡವಾಳಗಳಿಂದ ಲಾಭಗಳು ಫಲಿಸುವುದಿಲ್ಲವೆಂಬುದನ್ನು ಗ್ರಹಿಸಲು ವಿವೇಚನಾಶಕ್ತಿಯು ನಮಗೆ ಸಹಾಯ ಮಾಡುತ್ತದೆ. ಆದರೂ, ಮೋಸವು ಒಳಗೂಡಿರುವಲ್ಲಿ ಆಗೇನು? “ಇನ್ನೊಬ್ಬ ವ್ಯಕ್ತಿಗೆ ಸೇರಿರುವ ಯಾವುದೊ ಬೆಲೆಬಾಳುವ ವಸ್ತುವನ್ನು ಅವನು ತ್ಯಜಿಸುವಂತೆ ಅಥವಾ ಒಂದು ಕಾನೂನುಬದ್ಧ ಹಕ್ಕನ್ನು ಬಿಟ್ಟುಕೊಡುವಂತೆ ಪ್ರೇರಿಸುವ ಉದ್ದೇಶಕ್ಕಾಗಿ, ಠಕ್ಕು, ಕೃತ್ರಿಮತೆ ಅಥವಾ ಸತ್ಯದ ಅಪಪ್ರಯೋಗದ ಉದ್ದೇಶಪೂರ್ವಕ ಬಳಕೆ”ಯೇ ಮೋಸವಾಗಿದೆ. ಒಬ್ಬ ಜೊತೆ ಆರಾಧಕನಿಂದ ತಾನು ಮೋಸಕ್ಕೊಳಗಾಗಿದ್ದೇನೆಂದು ಒಬ್ಬ ವ್ಯಕ್ತಿಗೆ ಅನಿಸುವಾಗ, ತೆಗೆದುಕೊಳ್ಳಬಹುದಾದ ಹೆಜ್ಜೆಗಳನ್ನು ಯೇಸು ಕ್ರಿಸ್ತನು ರೇಖಿಸಿದನು. ಮತ್ತಾಯ 18:15-17ಕ್ಕನುಸಾರ, ಯೇಸು ಹೇಳಿದ್ದು: “ನಿನ್ನ ಸಹೋದರನು ತಪ್ಪುಮಾಡಿದರೆ ನೀನು ಹೋಗಿ ನೀನೂ ಅವನೂ ಇಬ್ಬರೇ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ. ಅವನು ಕೇಳದೆಹೋದರೆ ಎರಡು ಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪನೆಯಾಗುವ ಹಾಗೆ ಇನ್ನೂ ಒಬ್ಬಿಬ್ಬರನ್ನು ನಿನ್ನ ಸಂಗಡ ಕರಕೊಂಡು ಹೋಗು. ಅವನು ಅವರ ಮಾತನ್ನು ಕೇಳದೆಹೋದರೆ ಸಭೆಗೆ ಹೇಳು; ಆದರೆ ಸಭೆಯ ಮಾತನ್ನೂ ಕೇಳದೆಹೋದರೆ ಅವನು ನಿನಗೆ ಅಜ್ಞಾನಿಯಂತೆಯೂ ಭ್ರಷ್ಟನಂತೆಯೂ ಇರಲಿ.” ತದನಂತರ ಯೇಸು ಕೊಟ್ಟ ದೃಷ್ಟಾಂತವು, ಮೋಸವನ್ನು ಒಳಗೂಡಿಸಿ, ಹಣಕಾಸಿನ ವಿಷಯಗಳನ್ನು ಒಳಗೊಂಡಿರುವಂತಹ ಪಾಪಗಳು ಅವನ ಮನಸ್ಸಿನಲ್ಲಿದ್ದವು ಎಂಬುದನ್ನು ಸೂಚಿಸುತ್ತದೆ.—ಮತ್ತಾಯ 18:23-35.
17, 18. ಕ್ರೈಸ್ತನೆಂದು ಹೇಳಿಕೊಳ್ಳುವವನೊಬ್ಬನು ನಮ್ಮನ್ನು ಮೋಸಗೊಳಿಸುವಲ್ಲಿ, ವಿವೇಚನಾಶಕ್ತಿಯು ನಮ್ಮನ್ನು ಹೇಗೆ ಕಾಪಾಡಬಲ್ಲದು?
17 ವ್ಯಾಪಾರದ ವಿಷಯಗಳಲ್ಲಿ, ಮೋಸದ ಯಾವುದೇ ಸಾಕ್ಷ್ಯ ಅಥವಾ ಸೂಚನೆಯು ಸಹ ಇರದಿದ್ದಲ್ಲಿ, ಮತ್ತಾಯ 18:15-17ರಲ್ಲಿ ರೇಖಿಸಲ್ಪಟ್ಟಿರುವ ಹೆಜ್ಜೆಗಳನ್ನು ತೆಗೆದುಕೊಳ್ಳಲು ಯಾವ ಶಾಸ್ತ್ರೀಯ ಆಧಾರವೂ ಇರಲಿಕ್ಕಿಲ್ಲ, ನಿಶ್ಚಯ. ಆದರೂ, ಕ್ರೈಸ್ತನೆಂದು ಹೇಳಿಕೊಳ್ಳುವವನೊಬ್ಬನು ವಾಸ್ತವವಾಗಿ ನಮ್ಮನ್ನು ಮೋಸಗೊಳಿಸಿದರೆ ಆಗೇನು? ಸಭೆಯ ಖ್ಯಾತಿಯನ್ನು ಹಾನಿಗೊಳಿಸಬಹುದಾದ ಯಾವುದೇ ಕ್ರಮವನ್ನು ಕೈಕೊಳ್ಳುವುದರಿಂದ ವಿವೇಚನಾಶಕ್ತಿಯು ನಮ್ಮನ್ನು ಕಾಪಾಡಬಲ್ಲದು. ಒಬ್ಬ ಸಹೋದರನನ್ನು ನ್ಯಾಯಾಲಯಕ್ಕೆ ಕರೆದೊಯ್ಯುವುದಕ್ಕಿಂತ, ಅವರು ಸ್ವತಃ ಅನ್ಯಾಯವನ್ನು ಸಹಿಸಿ, ಮೋಸಕ್ಕೊಳಗಾಗುವುದನ್ನೂ ಅನುಮತಿಸುವಂತೆ ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ ಬುದ್ಧಿವಾದವನ್ನು ಕೊಟ್ಟನು.—1 ಕೊರಿಂಥ 6:7.
18 ನಮ್ಮ ಪ್ರಾಮಾಣಿಕ ಸಹೋದರ ಸಹೋದರಿಯರು, ಬಾರ್ಯೇಸು ಎಂಬ ಮಾಂತ್ರಿಕನಂತೆ, ‘ಮೋಸ ಮತ್ತು ಕೆಟ್ಟತನದಿಂದ ತುಂಬಿ’ರುವುದಿಲ್ಲ. (ಅ. ಕೃತ್ಯಗಳು 13:6-12) ಆದುದರಿಂದ ಜೊತೆ ವಿಶ್ವಾಸಿಗಳನ್ನು ಒಳಗೂಡಿರುವ ಸಾಹಸ ಉದ್ಯಮಗಳಲ್ಲಿ ಹಣವು ನಷ್ಟಗೊಂಡಿರುವಾಗ, ನಾವು ವಿವೇಚನಾಶಕ್ತಿಯನ್ನು ಉಪಯೋಗಿಸೋಣ. ಕಾನೂನುಬದ್ಧ ಕ್ರಮವನ್ನು ತೆಗೆದುಕೊಳ್ಳುವುದರ ಕುರಿತಾಗಿ ನಾವು ಯೋಚಿಸುತ್ತಿರುವಲ್ಲಿ, ವೈಯಕ್ತಿಕವಾಗಿ ನಮ್ಮ ಮೇಲೆ, ಮತ್ತು ಇತರ ವ್ಯಕ್ತಿ ಅಥವಾ ವ್ಯಕ್ತಿಗಳ ಮೇಲೆ, ಸಭೆಯ ಮೇಲೆ ಮತ್ತು ಹೊರಗಿನವರ ಮೇಲೆ ಆಗುವ ಸಂಭಾವ್ಯ ಪರಿಣಾಮಗಳನ್ನು ನಾವು ಪರಿಗಣಿಸತಕ್ಕದ್ದು. ಪರಿಹಾರ ಹಣವನ್ನು ಬೆನ್ನಟ್ಟುವುದು, ನಮ್ಮ ಸಮಯ, ಶಕ್ತಿ ಮತ್ತು ಇತರ ಸಂಪನ್ಮೂಲಗಳಲ್ಲಿ ಹೆಚ್ಚನ್ನು ಕಬಳಿಸಬಲ್ಲದು. ಅದು ವಕೀಲರನ್ನು ಮತ್ತು ಇತರ ವೃತ್ತಿಗಾರರನ್ನು ಧನವಂತರನ್ನಾಗಿ ಮಾಡುವುದರಲ್ಲಿ ಮಾತ್ರ ಫಲಿಸಬಹುದು. ವಿಷಾದಕರವಾಗಿ, ಕೆಲವು ಕ್ರೈಸ್ತರು, ಈ ವಿಷಯಗಳಲ್ಲಿ ತೀರ ಹೆಚ್ಚು ತಲ್ಲೀನರಾದ ಕಾರಣದಿಂದ, ದೇವಪ್ರಭುತ್ವ ಸುಯೋಗಗಳನ್ನು ತ್ಯಾಗಮಾಡಿದ್ದಾರೆ. ಈ ರೀತಿಯಲ್ಲಿ ನಾವು ಅಡ್ಡದಾರಿಹಿಡಿದಿರುವುದು ಸೈತಾನನನ್ನು ಸಂತೋಷಿಸುವಂತೆ ಮಾಡುತ್ತಿರಬೇಕು, ಅದರೆ ನಾವು ಯೆಹೋವನ ಹೃದಯವನ್ನು ಹರ್ಷಗೊಳಿಸಲು ಬಯಸುತ್ತೇವೆ. (ಜ್ಞಾನೋಕ್ತಿ 27:11) ಇನ್ನೊಂದು ಕಡೆಯಲ್ಲಿ, ನಷ್ಟವನ್ನು ಸ್ವೀಕರಿಸುವುದು, ನಾವು ಮನೋವ್ಯಥೆಗಳನ್ನು ದೂರವಿರಿಸಲು ಸಹಾಯ ಮಾಡುವುದು ಮತ್ತು ನಮಗೂ ಹಿರಿಯರಿಗೂ ತುಂಬ ಸಮಯವನ್ನು ಉಳಿಸುವುದು. ಇದು ಸಭೆಯ ಶಾಂತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುವುದು ಮತ್ತು ನಾವು ರಾಜ್ಯವನ್ನು ಪ್ರಥಮವಾಗಿ ಹುಡುಕುತ್ತಾ ಇರುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುವುದು.
ವಿವೇಚನಾಶಕ್ತಿ ಮತ್ತು ನಿರ್ಣಯ ಮಾಡುವಿಕೆ
19. ನಾವು ಒತ್ತಡಭರಿತವಾದ ನಿರ್ಣಯಗಳನ್ನು ಮಾಡುತ್ತಿರುವಾಗ, ವಿವೇಚನಾಶಕ್ತಿ ಮತ್ತು ಪ್ರಾರ್ಥನೆಯು ನಮಗಾಗಿ ಏನನ್ನು ಮಾಡಸಾಧ್ಯವಿದೆ?
19 ಆರ್ಥಿಕ ಅಥವಾ ವ್ಯಾಪಾರದ ವಿಷಯಗಳಲ್ಲಿ ನಿರ್ಣಯಗಳನ್ನು ಮಾಡುವುದು, ತೀರ ಒತ್ತಡದಾಯಕವಾಗಿರಸಾಧ್ಯವಿದೆ. ಆದರೆ ಆತ್ಮಿಕ ವಿವೇಚನಾಶಕ್ತಿಯು, ನಾವು ಅಂಶಗಳನ್ನು ತೂಗಿನೋಡಿ, ವಿವೇಕಯುತವಾದ ನಿರ್ಣಯಗಳನ್ನು ಮಾಡುವಂತೆ ನಮಗೆ ಸಹಾಯ ಮಾಡಸಾಧ್ಯವಿದೆ. ಇನ್ನೂ ಹೆಚ್ಚಾಗಿ, ಯೆಹೋವನ ಮೇಲೆ ಪ್ರಾರ್ಥನಾಪೂರ್ವಕವಾದ ಆತುಕೊಳ್ಳುವಿಕೆಯು, ನಮಗೆ “ದೇವಶಾಂತಿ”ಯನ್ನು ತರಸಾಧ್ಯವಿದೆ. (ಫಿಲಿಪ್ಪಿ 4:6, 7) ಅದು ಯೆಹೋವನೊಂದಿಗಿನ ಒಂದು ನಿಕಟವಾದ ವೈಯಕ್ತಿಕ ಸಂಬಂಧದಿಂದ ಫಲಿಸುವ ಒಂದು ಶಾಂತತೆ ಮತ್ತು ನೆಮ್ಮದಿಯಾಗಿದೆ. ನಾವು ಕಷ್ಟಕರವಾದ ನಿರ್ಣಯಗಳಿಂದ ಎದುರಿಸಲ್ಪಟ್ಟಾಗ, ನಮ್ಮ ಸಮತೋಲನವನ್ನು ಕಾಪಾಡಿಕೊಳ್ಳುವಂತೆ ಅಂತಹ ಶಾಂತಿಯು ನಿಶ್ಚಯವಾಗಿಯೂ ನಮಗೆ ಸಹಾಯ ಮಾಡುವುದು.
20. ವ್ಯಾಪಾರದ ವಿಷಯಗಳು ಮತ್ತು ಸಭೆಯ ಕುರಿತಾಗಿ ನಾವು ಏನನ್ನು ಮಾಡಲು ದೃಢನಿರ್ಧಾರವುಳ್ಳವರಾಗಿರಬೇಕು?
20 ವ್ಯಾಪಾರದ ವಾಗ್ವಾದಗಳು, ನಮ್ಮ ಅಥವಾ ಸಭೆಯ ಶಾಂತಿಯನ್ನು ಭಂಗಗೊಳಿಸಲು ಅನುಮತಿಸದಿರುವಂತೆ ನಾವು ದೃಢನಿರ್ಧಾರವುಳ್ಳವರಾಗಿರೋಣ. ಕ್ರೈಸ್ತ ಸಭೆಯು ನಮಗೆ ಆತ್ಮಿಕವಾಗಿ ಸಹಾಯ ಮಾಡಲು ಕಾರ್ಯನಡಿಸುತ್ತದೆ ಹೊರತು, ವ್ಯಾಪಾರದ ಬೆನ್ನಟ್ಟುವಿಕೆಗಳಿಗಾಗಿ ಒಂದು ಕೇಂದ್ರವಾಗಿ ಕಾರ್ಯನಡಿಸುವುದಿಲ್ಲವೆಂಬುದನ್ನು ನಾವು ನೆನಪಿನಲ್ಲಿಡುವ ಅಗತ್ಯವಿದೆ. ವ್ಯಾಪಾರದ ವಿಷಯಗಳನ್ನು ಯಾವಾಗಲೂ ಸಭೆಯ ಚಟುವಟಿಕೆಗಳಿಂದ ಪ್ರತ್ಯೇಕವಾಗಿರಿಸತಕ್ಕದ್ದು. ಸಾಹಸ ಉದ್ಯಮಗಳಲ್ಲಿ ತೊಡಗುವಾಗ, ನಾವು ವಿವೇಚನಾಶಕ್ತಿ ಮತ್ತು ಎಚ್ಚರಿಕೆಯನ್ನು ಉಪಯೋಗಿಸುವ ಅಗತ್ಯವಿದೆ. ಮತ್ತು ರಾಜ್ಯಾಭಿರುಚಿಗಳನ್ನು ಪ್ರಥಮವಾಗಿ ಹುಡುಕುತ್ತಾ, ನಾವು ಯಾವಾಗಲೂ ಅಂತಹ ವಿಷಯಗಳ ಕುರಿತಾಗಿ ಒಂದು ಸಮತೂಕದ ನೋಟವನ್ನು ಕಾಪಾಡಿಕೊಳ್ಳೋಣ. ಜೊತೆ ಆರಾಧಕರನ್ನು ಒಳಗೂಡಿರುವ ಒಂದು ಸಾಹಸ ವ್ಯಾಪಾರ ಉದ್ಯಮವು ಸೋಲುವಲ್ಲಿ, ಒಳಗೂಡಿರುವವರೆಲ್ಲರಿಗೆ ಅತ್ಯುತ್ತಮವಾಗಿರುವ ವಿಷಯವನ್ನು ನಾವು ಮಾಡಲು ಪ್ರಯತ್ನಿಸೋಣ.
21. ನಾವು ವಿವೇಚನಾಶಕ್ತಿಯನ್ನು ಉಪಯೋಗಿಸಿ, ಫಿಲಿಪ್ಪಿ 1:9-11ಕ್ಕೆ ಹೊಂದಿಕೆಯಲ್ಲಿ ಹೇಗೆ ಕ್ರಿಯೆಗೈಯಬಲ್ಲೆವು?
21 ಆರ್ಥಿಕ ವಿಷಯಗಳು ಮತ್ತು ಇತರ ಕಡಿಮೆ ಪ್ರಾಮುಖ್ಯದ ವಿಷಯಗಳ ಕುರಿತಾಗಿ ಅತಿ ಚಿಂತಿತರಾಗಿರುವ ಬದಲಿಗೆ, ನಾವೆಲ್ಲರೂ ನಮ್ಮ ಹೃದಯಗಳನ್ನು ವಿವೇಚನಾಶಕ್ತಿಯ ಕಡೆಗೆ ತಿರುಗಿಸೋಣ, ದೇವರ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸೋಣ ಮತ್ತು ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡೋಣ. ಪೌಲನ ಪ್ರಾರ್ಥನೆಗೆ ಹೊಂದಿಕೆಯಲ್ಲಿ, ‘ನಾವು ಹೆಚ್ಚು ಪ್ರಮುಖ ವಿಷಯಗಳನ್ನು ಖಾತರಿಮಾಡಿಕೊಳ್ಳುವಂತಾಗಲು ಮತ್ತು ಇತರರನ್ನು’ ಅಥವಾ ನಮ್ಮನ್ನೇ ‘ಮುಗ್ಗರಿಸದಿರುವಂತೆ ನಿಷ್ಕೃಷ್ಟ ಜ್ಞಾನ ಮತ್ತು ಪೂರ್ಣ ವಿವೇಚನಾಶಕ್ತಿಯಲ್ಲಿ ನಮ್ಮ ಪ್ರೀತಿಯು ಹೆಚ್ಚೆಚ್ಚಾಗಲಿ’ (NW). ರಾಜನಾದ ಕ್ರಿಸ್ತನು ಈಗ ತನ್ನ ಸ್ವರ್ಗೀಯ ಸಿಂಹಾಸನದಲ್ಲಿರುವುದರಿಂದ, ಜೀವನದ ಪ್ರತಿಯೊಂದು ಭಾಗದಲ್ಲಿ ನಾವು ಆತ್ಮಿಕ ವಿವೇಚನಾಶಕ್ತಿಯನ್ನು ತೋರಿಸೋಣ. ಮತ್ತು ‘ಯೇಸು ಕ್ರಿಸ್ತನ ಮೂಲಕವಾಗಿರುವ ಸುನೀತಿಯೆಂಬ ಫಲದಿಂದ ತುಂಬಿದವರಾಗಿದ್ದು,’ ಪರಮಾಧಿಕಾರಿ ಕರ್ತನಾಗಿರುವ ಯೆಹೋವ ‘ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ನಾವು ತರುವಂತಾಗಲಿ.’—ಫಿಲಿಪ್ಪಿ 1:9-11.
ನೀವು ಹೇಗೆ ಪ್ರತಿಕ್ರಿಯಿಸುವಿರಿ?
◻ ವಿವೇಚನಾಶಕ್ತಿಯು ಏನಾಗಿದೆ?
◻ ಕ್ರೈಸ್ತರ ನಡುವೆ ವ್ಯಾಪಾರ ವ್ಯವಹಾರಗಳ ವಿಷಯದಲ್ಲಿ ವಿವೇಚನಾಶಕ್ತಿಯನ್ನು ತೋರಿಸಲು ಒಂದು ವಿಶೇಷ ಅಗತ್ಯವಿದೆ ಏಕೆ?
◻ ಒಬ್ಬ ಜೊತೆ ವಿಶ್ವಾಸಿಯು ನಮ್ಮನ್ನು ಮೋಸಗೊಳಿಸಿದ್ದಾನೆಂದು ನಮಗೆ ಅನಿಸುವಲ್ಲಿ, ವಿವೇಚನಾಶಕ್ತಿಯು ನಮಗೆ ಹೇಗೆ ಸಹಾಯ ಮಾಡಬಲ್ಲದು?
◻ ನಿರ್ಣಯ ಮಾಡುವಿಕೆಯಲ್ಲಿ ವಿವೇಚನಾಶಕ್ತಿಯು ಯಾವ ಪಾತ್ರವನ್ನು ವಹಿಸಬೇಕು?
[ಪುಟ 18 ರಲ್ಲಿರುವ ಚಿತ್ರ]
ರಾಜ್ಯವನ್ನು ಪ್ರಥಮವಾಗಿ ಹುಡುತ್ತಾ ಇರಬೇಕೆಂಬ ಯೇಸುವಿನ ಸಲಹೆಯನ್ನು ಅನ್ವಯಿಸಲು, ವಿವೇಚನಾಶಕ್ತಿಯು ನಮಗೆ ಸಹಾಯ ಮಾಡುವುದು
[ಪುಟ 20 ರಲ್ಲಿರುವ ಚಿತ್ರ]
ವ್ಯಾಪಾರ ಒಪ್ಪಂದಗಳನ್ನು ಯಾವಾಗಲೂ ಲಿಖಿತ ರೂಪದಲ್ಲಿ ದಾಖಲಿಸಿರಿ