ವಾಚಕರಿಂದ ಪ್ರಶ್ನೆಗಳು
ದುಷ್ಕರ್ಮಿಗಳಿಗೆ ನೀಡಲ್ಪಡುವ ವಧಾರ್ಹ ಶಿಕ್ಷೆ, ಮರಣದಂಡನೆಯ ವಿಷಯದಲ್ಲಿ ಬೈಬಲ್ ಏನನ್ನು ಸೂಚಿಸುತ್ತದೆ?
ಜೀವಿತದಲ್ಲಿ ನಮ್ಮ ಅನುಭವ ಮತ್ತು ಪರಿಸ್ಥಿತಿಯನ್ನು ಆಧಾರಿಸಿ ನಮ್ಮಲ್ಲಿ ಪ್ರತಿಯೊಬ್ಬರಿಗೆ ವೈಯಕ್ತಿಕ ಅನಿಸಿಕೆಗಳಿದ್ದಾವೆಂಬುದು ಗ್ರಾಹ್ಯ. ಆದರೂ ಯೆಹೋವನ ಸಾಕ್ಷಿಗಳೋಪಾದಿ ನಾವು, ಈ ವಿವಾದಾಂಶದ ಕುರಿತು ಅನೇಕರು ತೆಗೆದುಕೊಳ್ಳುವಂತಹ ರಾಜಕೀಯ ನಿಲುವುಗಳ ವಿಷಯದಲ್ಲಿ ತಟಸ್ಥರಾಗಿ ಉಳಿಯುತ್ತಾ, ವಧಾರ್ಹ ಶಿಕ್ಷೆಯ ಕುರಿತಾದ ದೇವರ ಆಲೋಚನೆಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸಬೇಕು.
ಚುಟುಕಾಗಿ ಹೇಳುವುದಾದರೆ, ತನ್ನ ಲಿಖಿತ ವಾಕ್ಯದಲ್ಲಿ, ವಧಾರ್ಹ ಶಿಕ್ಷೆಯು ತಪ್ಪು ಎಂಬುದಾಗಿ ದೇವರು ಸೂಚಿಸುವುದಿಲ್ಲ.
ಆದಿಕಾಂಡ 9ನೆಯ ಅಧ್ಯಾಯದಲ್ಲಿ ನಾವು ಓದುವ ಪ್ರಕಾರ, ಮಾನವ ಇತಿಹಾಸದ ಆರಂಭದಲ್ಲಿ, ಯೆಹೋವನು ಈ ವಿಷಯದ ಕುರಿತ ತನ್ನ ವಿಚಾರಗಳನ್ನು ವ್ಯಕ್ತಪಡಿಸಿದನು. ಇದು ಇಡೀ ಮಾನವ ಕುಟುಂಬದ ಮೂಲಪಿತೃಗಳಾದ ನೋಹ ಮತ್ತು ಅವನ ಕುಟುಂಬವನ್ನು ಒಳಗೊಂಡಿತು. ಅವರು ನಾವೆಯಿಂದ ಹೊರಗೆ ಬಂದ ಬಳಿಕ, ಅವರು ಪ್ರಾಣಿಗಳನ್ನು ತಿನ್ನಸಾಧ್ಯವಿತ್ತೆಂದು ದೇವರು ಹೇಳಿದನು—ಅಂದರೆ ಅವುಗಳನ್ನು ಕೊಂದು, ರಕ್ತವನ್ನು ಬಸಿದು, ತಿನ್ನಸಾಧ್ಯವಿತ್ತು. ಬಳಿಕ, ಆದಿಕಾಂಡ 9:5, 6ರಲ್ಲಿ ದೇವರು ಹೇಳಿದ್ದು: “ಇದಲ್ಲದೆ ನಿಮ್ಮ ರಕ್ತವನ್ನು ಸುರಿಸಿ ಜೀವತೆಗೆಯುವವರಿಗೆ ಮುಯ್ಯಿತೀರಿಸುವೆನು. ಮೃಗವಾಗಿದ್ದರೆ ಅದಕ್ಕೂ ಮನುಷ್ಯನಾಗಿದ್ದರೆ, ಹತನಾದವನು ಅವನ ಸಹೋದರನಾಗಿರುವದರಿಂದ, ಅವರಿಗೂ ಮುಯ್ಯಿತೀರಿಸುವೆನೆಂದು ತಿಳಿದುಕೊಳ್ಳಿರಿ. ನರಹತ್ಯವು ಸಹೋದರಹತ್ಯವಲ್ಲವೇ. ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲಿಯೇ ಉಂಟುಮಾಡಿದನಾದ್ದರಿಂದ ಯಾರು ಮನುಷ್ಯನ ರಕ್ತವನ್ನು ಸುರಿಸುತ್ತಾರೋ ಅವರ ರಕ್ತವನ್ನು ಮನುಷ್ಯರೇ ಸುರಿಸುವರು.” ಹೀಗೆ ಯೆಹೋವನು ಕೊಲೆಪಾತಕಿಗಳ ಸಂಬಂಧದಲ್ಲಿ ವಧಾರ್ಹ ಶಿಕ್ಷೆಯನ್ನು ಆಜ್ಞಾಪಿಸಿದನು.
ದೇವರು ಇಸ್ರಾಯೇಲಿನೊಂದಿಗೆ ತನ್ನ ಜನರೋಪಾದಿ ವ್ಯವಹರಿಸುತ್ತಿದ್ದಾಗ, ದೈವಿಕ ನಿಯಮಕ್ಕೆ ವಿರುದ್ಧವಾಗಿ ಮಾಡಲ್ಪಟ್ಟ ಇತರ ಅನೇಕ ಗಂಭೀರ ಪಾಪಗಳಿಗೂ ಮರಣ ಶಿಕ್ಷೆಯು ವಿಧಿಸಲ್ಪಡುತ್ತಿತ್ತು. ಅರಣ್ಯಕಾಂಡ 15:30ರಲ್ಲಿ, ವಿಸ್ತಾರವಾಗಿ ಅನ್ವಯಿಸುವ ಈ ಹೇಳಿಕೆಯನ್ನು ನಾವು ಓದುತ್ತೇವೆ: “ಸ್ವದೇಶದವನಾಗಲಿ ಅನ್ಯದೇಶದವನಾಗಲಿ ಯಾವನಾದರೂ ಮನಃಪೂರ್ವಕವಾಗಿ ಹಟದಿಂದ ಪಾಪವನ್ನು ಮಾಡಿದರೆ ಅವನು ಯೆಹೋವನನ್ನು ದೂಷಿಸಿದವನಾದ್ದರಿಂದ ಕುಲದಿಂದ ತೆಗೆದುಹಾಕಲ್ಪಡಬೇಕು.”
ಆದರೆ ಕ್ರೈಸ್ತ ಸಭೆಯು ಸ್ಥಾಪಿಸಲ್ಪಟ್ಟ ಬಳಿಕ ಸಂಭವಿಸಿದ ವಿಷಯದ ಕುರಿತಾಗಿ ಏನು? ಒಳ್ಳೇದು, ಮಾನವ ಸರಕಾರಗಳು ಅಸ್ತಿತ್ವದಲ್ಲಿರಲು ಯೆಹೋವನು ಅಧಿಕಾರಕೊಟ್ಟಿದ್ದಾನೆಂದು ನಮಗೆ ಗೊತ್ತಿದೆ, ಮತ್ತು ಆತನು ಅವರನ್ನು ಮೇಲಧಿಕಾರಿಗಳೆಂದು ಕರೆದನು. ವಾಸ್ತವಿಕವಾಗಿ, ಅಂತಹ ಸರಕಾರಿ ಅಧಿಕಾರಿಗಳಿಗೆ ಅಧೀನರಾಗಿರುವಂತೆ ಕ್ರೈಸ್ತರಿಗೆ ಬುದ್ಧಿವಾದ ನೀಡಿದ ಬಳಿಕ, ಇಂಥವನು “ನಿನ್ನ ಹಿತಕ್ಕಾಗಿ ದೇವರ ಸೇವಕನಾಗಿದ್ದಾನಲ್ಲಾ. ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು; ಅವನು ಸುಮ್ಮನೆ ಕೈಯಲ್ಲಿ ಕತ್ತಿಯನ್ನು ಹಿಡಿದಿಲ್ಲ; ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ನಡಿಸುವವನಿಗೆ ದೇವರ ದಂಡನೆಯನ್ನು ವಿಧಿಸುತ್ತಾನೆ” ಎಂದು ಬೈಬಲ್ ಹೇಳುತ್ತದೆ.—ರೋಮಾಪುರ 13:1-4.
ಗಂಭೀರ ಅಪರಾಧಗಳನ್ನು ಮಾಡುವ ಪಾತಕಿಗಳ ಜೀವವನ್ನು ಸಹ ತೆಗೆಯಲು ಸರಕಾರಗಳು ಅಧಿಕಾರವನ್ನು ಹೊಂದಿರುತ್ತವೆಂದು ಇದರರ್ಥವೊ? 1 ಪೇತ್ರ 4:15ರಲ್ಲಿ ಕಂಡುಬರುವ ಮಾತುಗಳಿಂದ, ನಾವು ಹೌದು ಎಂದೇ ತೀರ್ಮಾನಿಸಬೇಕಾಗುವುದು. ಆ ಭಾಗದಲ್ಲಿ ಅಪೊಸ್ತಲನು ತನ್ನ ಸಹೋದರರಿಗೆ ಪ್ರೋತ್ಸಾಹಿಸಿದ್ದು: “ನಿಮ್ಮಲ್ಲಿ ಯಾವನಾದರೂ ಕೊಲೆಗಾರನು ಕಳ್ಳನು ದುಷ್ಟನು ಪರಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಶಿಕ್ಷಾಪಾತ್ರನಾಗಬಾರದು.” “ಕೊಲೆಗಾರನು . . . ಆಗಿದ್ದು ಶಿಕ್ಷಾಪಾತ್ರನಾಗಬಾರದು” ಎಂಬುದನ್ನು ನೀವು ಗಮನಿಸಿದಿರೊ? ಒಬ್ಬ ಕೊಲೆಪಾತಕಿಯು ತನ್ನ ಪಾತಕಕ್ಕಾಗಿ ಶಿಕ್ಷೆ ಅನುಭವಿಸುವಂತೆ ಮಾಡಲು ಸರಕಾರಗಳಿಗೆ ಯಾವ ಹಕ್ಕೂ ಇರಲಿಲ್ಲವೆಂದು ಪೇತ್ರನು ಸೂಚಿಸಲಿಲ್ಲ. ವ್ಯತಿರಿಕ್ತವಾಗಿ, ಒಬ್ಬ ಕೊಲೆಪಾತಕಿಗೆ ಸಲ್ಲತಕ್ಕ ಶಿಕ್ಷೆ ಅವನಿಗೆ ಯೋಗ್ಯವಾಗಿಯೇ ಸಿಗಬಹುದೆಂದು ಅವನು ಸೂಚಿಸಿದನು. ಮರಣದ ಶಿಕ್ಷೆಯೂ ಅದರಲ್ಲಿ ಒಳಗೊಳ್ಳಲಿತ್ತೊ?
ಒಳಗೊಳ್ಳಸಾಧ್ಯವಿತ್ತು. ಅಪೊಸ್ತಲರ ಕೃತ್ಯಗಳು 25ನೆಯ ಅಧ್ಯಾಯದಲ್ಲಿ ಕಂಡುಬರುವ ಪೌಲನ ಮಾತುಗಳಿಂದ ಇದು ಸ್ಪಷ್ಟವಾಗುತ್ತದೆ. ಯೆಹೂದ್ಯರು ಪೌಲನ ಮೇಲೆ ತಮ್ಮ ಧರ್ಮಶಾಸ್ತ್ರದ ವಿರುದ್ಧ ತಪ್ಪುಗಳನ್ನು ಮಾಡಿದವನೆಂಬ ದೋಷಾರೋಪಣೆಯನ್ನು ಹೊರಿಸಿದ್ದರು. ಮಿಲಿಟರಿ ಸೇನಾಪತಿಯು ತನ್ನ ಸೆರೆಯವನಾದ ಪೌಲನನ್ನು ರೋಮನ್ ರಾಜ್ಯಪಾಲನ ಬಳಿಗೆ ಕಳುಹಿಸುತ್ತಾ, ಅಪೊಸ್ತಲರ ಕೃತ್ಯಗಳು 23:29ರಲ್ಲಿ ಬರೆಯಲ್ಪಟ್ಟಿರುವಂತೆ ವರದಿಸಿದ್ದು: “ಅಲ್ಲಿ ಅವರು ತಮ್ಮ ಧರ್ಮಶಾಸ್ತ್ರದ ವಿಷಯಗಳನ್ನು ಹಿಡಿದು ಅವನ ಮೇಲೆ ತಪ್ಪುಹೊರಿಸಿದರೇ ಹೊರತು ಮರಣದಂಡನೆಗಾಗಲಿ ಬೇಡಿಗಾಗಲಿ ಆಧಾರವಾದ ಯಾವ ಅಪರಾಧವನ್ನೂ ಹೊರಿಸಲಿಲ್ಲವೆಂದು ನನಗೆ ಕಂಡುಬಂತು.” (ಓರೆಅಕ್ಷರಗಳು ನಮ್ಮವು.) ಎರಡು ವರ್ಷಗಳ ತರುವಾಯ ಪೌಲನು ರಾಜ್ಯಪಾಲ ಫೆಸ್ತನ ಸಮಕ್ಷಮದಲ್ಲಿ ಹಾಜರಾದನು. ಅಪೊಸ್ತಲರ ಕೃತ್ಯಗಳು 25:8ರಲ್ಲಿ ನಾವು ಓದುವುದು: “ಪೌಲನು—ಯೆಹೂದ್ಯರ ಧರ್ಮಶಾಸ್ತ್ರದ ವಿಷಯದಲ್ಲಾಗಲಿ ದೇವಾಲಯದ ವಿಷಯದಲ್ಲಾಗಲಿ ಚಕ್ರವರ್ತಿಯ ವಿಷಯದಲ್ಲಾಗಲಿ ನಾನು ಯಾವ ತಪ್ಪನ್ನೂ ಮಾಡಲಿಲ್ಲವೆಂದು ಪ್ರತ್ಯುತ್ತರ ಹೇಳಿದನು.” ಆದರೆ ಈಗ ಶಿಕ್ಷೆಯ ಕುರಿತಾದ, ವಧಾರ್ಹ ಶಿಕ್ಷೆಯ ಕುರಿತೂ ಅವನು ಮಾಡಿದ ಹೇಳಿಕೆಗಳ ಮೇಲೆ ಕೇಂದ್ರೀಕರಿಸಿರಿ. ನಾವು ಅಪೊಸ್ತಲರ ಕೃತ್ಯಗಳು 25:10, 11ರಲ್ಲಿ ಓದುವುದು:
“ಪೌಲನು—ನಾನು ಚಕ್ರವರ್ತಿಯ ನ್ಯಾಯಸ್ಥಾನದ ಮುಂದೆ ನಿಂತಿದ್ದೇನೆ; ಇಲ್ಲಿಯೇ ನನ್ನ ವಿಚಾರಣೆಯಾಗತಕ್ಕದ್ದು. ಯೆಹೂದ್ಯರಿಗೆ ನಾನು ಅನ್ಯಾಯವೇನೂ ಮಾಡಲಿಲ್ಲ; ಅದು ನಿನಗೂ ಚೆನ್ನಾಗಿ ತಿಳಿದೇ ಇದೆ. ನಾನು ಅನ್ಯಾಯ ಮಾಡಿದವನಾಗಿ ಮರಣದಂಡನೆಗೆ ಕಾರಣವಾದ ಯಾವದನ್ನಾದರೂ ನಡಿಸಿದ್ದಾದರೆ ಮರಣದಂಡನೆಯನ್ನು ಬೇಡವೆನ್ನುವದಿಲ್ಲ. ಇವರು ನನ್ನ ಮೇಲೆ ಹೊರಿಸುವ ತಪ್ಪುಗಳಲ್ಲಿ ಒಂದೂ ನಿಜವಲ್ಲದ ಮೇಲೆ ಇವರ ಮೇಲಣ ದಯೆಯಿಂದ ನನ್ನನ್ನು ಒಪ್ಪಿಸಿಕೊಡುವದಕ್ಕೆ ಒಬ್ಬರಿಗೂ ಅಧಿಕಾರವಿಲ್ಲ. ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ.” (ಓರೆಅಕ್ಷರಗಳು ನಮ್ಮವು.)
ಯುಕ್ತವಾಗಿ ನಿಯಮಿತನಾದ ಅಧಿಕಾರಿಯ ಮುಂದೆ ನಿಲ್ಲುತ್ತಾ, ಪೌಲನು, ತಪ್ಪಿತಸ್ಥರನ್ನು ಶಿಕ್ಷಿಸುವ, ಅವರನ್ನು ವಧಿಸುವ ಅಧಿಕಾರವೂ ಕೈಸರಿನಿಗಿತ್ತು ಎಂಬುದನ್ನು ಒಪ್ಪಿಕೊಂಡನು. ತಾನು ದೋಷಪಾತ್ರನಾಗಿದ್ದಲ್ಲಿ ಅದಕ್ಕಾಗಿ ಶಿಕ್ಷೆಹೊಂದುವುದಕ್ಕೆ ಅವನು ಆಕ್ಷೇಪಿಸಲಿಲ್ಲ. ಇದಲ್ಲದೆ, ಕೈಸರನು ವಧಾರ್ಹ ಶಿಕ್ಷೆಯನ್ನು ಕೇವಲ ಕೊಲೆಪಾತಕಿಗಳಿಗಾಗಿ ಉಪಯೋಗಿಸಸಾಧ್ಯವೆಂದು ಅವನು ಹೇಳಲಿಲ್ಲ.
ರೋಮನ್ ನ್ಯಾಯನಿರ್ಣಾಯಕ ವ್ಯವಸ್ಥೆಯು ಪರಿಪೂರ್ಣವಾಗಿರಲಿಲ್ಲ ಎಂಬುದು ಒಪ್ಪತಕ್ಕ ಮಾತು; ಇಂದಿನ ನ್ಯಾಯಾಂಗ ವ್ಯವಸ್ಥೆಗಳೂ ಪರಿಪೂರ್ಣವಲ್ಲ. ಕೆಲವು ನಿರಪರಾಧಿಗಳು, ಆಗಿನ ಕಾಲದಲ್ಲಿ ಮತ್ತು ಈಗಲೂ ತಪ್ಪಿತಸ್ಥರೆಂದು ನಿರ್ಣಯಿಸಲ್ಪಟ್ಟು, ಶಿಕ್ಷೆ ಹೊಂದಿದ್ದಾರೆ. ಪಿಲಾತನು ಸಹ ಯೇಸುವಿನ ಕುರಿತಾಗಿ ಹೇಳಿದ್ದು: “ನಾನು ಇವನಲ್ಲಿ ಮರಣದಂಡನೆಗೆ ತಕ್ಕ ಅಪರಾಧವೇನೂ ಕಾಣಲಿಲ್ಲ; ಆದದರಿಂದ ಇವನನ್ನು ಹೊಡಿಸಿಬಿಟ್ಟುಬಿಡುತ್ತೇನೆ.” ಹೌದು, ಯೇಸು ನಿರ್ದೋಷಿಯಾಗಿದ್ದನೆಂಬುದನ್ನು ಸರಕಾರಿ ಅಧಿಕಾರಿಯು ಒಪ್ಪಿಕೊಂಡನಾದರೂ, ಈ ನಿರ್ದೋಷಿಯು ವಧಿಸಲ್ಪಟ್ಟನು.—ಲೂಕ 23:22-25.
ಅಂತಹ ಅನ್ಯಾಯಗಳು, ವಧಾರ್ಹ ಶಿಕ್ಷೆಯು ಮೂಲಭೂತವಾಗಿ ನೀತಿಗೆಟ್ಟದ್ದೆಂದು ವಾದಿಸಲು ಪೌಲನನ್ನೊ ಪೇತ್ರನನ್ನೊ ಪ್ರೇರಿಸಲಿಲ್ಲ. ಬದಲಿಗೆ, ಆ ವಿಷಯದ ಕುರಿತಾಗಿ ದೇವರ ಆಲೋಚನೆಯು ಏನಾಗಿದೆಯೆಂದರೆ, ಕೈಸರನ ಕೈಕೆಳಗಿರುವ ಮೇಲಧಿಕಾರಿಗಳು ಅಸ್ತಿತ್ವದಲ್ಲಿರುವ ತನಕ, ಅವರು ‘ಕೆಟ್ಟದ್ದನ್ನು ನಡಿಸುವವನಿಗೆ ದಂಡನೆಯನ್ನು ವಿಧಿಸುವುದಕ್ಕೆ ಕತ್ತಿಯನ್ನು ಹಿಡಿದಿರುತ್ತಾರೆ.’ ಆ ಕತ್ತಿಯನ್ನು ವಧಾರ್ಹ ಶಿಕ್ಷೆ ವಿಧಿಸುವ ಅರ್ಥದಲ್ಲಿ ಹಿಡಿದಿರುವುದನ್ನೂ ಅದು ಒಳಗೊಳ್ಳುತ್ತದೆ. ಆದರೆ ಈ ಲೋಕದ ಯಾವುದೇ ಸರಕಾರವು, ಕೊಲೆಪಾತಕಿಗಳನ್ನು ವಧಿಸುವ ತನ್ನ ಹಕ್ಕನ್ನು ನಿರ್ವಹಿಸಬೇಕೊ ಎಂಬ ವಿವಾದಾತ್ಮಕ ಪ್ರಶ್ನೆಯ ವಿಷಯದಲ್ಲಿ, ನಿಜ ಕ್ರೈಸ್ತರು ಜಾಗರೂಕತೆಯಿಂದ ತಟಸ್ಥರಾಗಿ ಉಳಿಯುತ್ತಾರೆ. ಕ್ರೈಸ್ತಪ್ರಪಂಚದ ವೈದಿಕರಿಗೆ ಅಸದೃಶವಾಗಿ, ಈ ವಿಷಯದ ಕುರಿತಾದ ಯಾವುದೇ ವಾಗ್ವಾದದಿಂದ ಅವರು ಹೊರಗಿರುತ್ತಾರೆ.