ನೀವು ಪಾಪವನ್ನು ಹೇಗೆ ವೀಕ್ಷಿಸುತ್ತೀರಿ?
“ನಿನ್ನಲ್ಲಿ ಪಾಪವಿಲ್ಲ, ದುರವಸ್ಥೆ ನಿನ್ನಲ್ಲಿಲ್ಲ; ನೀನು ಸರ್ವಶಕ್ತಿಯ ಭಂಡಾರ.” ಪವಿತ್ರ ಹಿಂದೂ ಗ್ರಂಥವಾದ ಭಗವದ್ಗೀತೆ ಇಂದ ಒಂದು ಉದ್ಧೃತ ಭಾಗವನ್ನು ವಿವರಿಸಿದಾಗ, ಪ್ರಸಿದ್ಧ ಹಿಂದೂ ತತ್ತ್ವಜ್ಞಾನಿ ವಿವೇಕಾನಂದರು ಈ ಹೇಳಿಕೆಯನ್ನು ನುಡಿದರು. ವೇದಾಂತವನ್ನು ಉದ್ಧರಿಸುತ್ತ, ಅವರು ಹೇಳಿದ್ದು: “ನೀವು ದುರ್ಬಲರೆಂದು, ಪಾಪಿಗಳೆಂದು ಹೇಳುವುದೇ ಅತ್ಯಂತ ಮಹಾ ತಪ್ಪು.”a
ಆದರೆ ಮನುಷ್ಯನಲ್ಲಿ ಪಾಪವೇ ಇಲ್ಲವೆಂಬುದು ಸತ್ಯವೊ? ಮತ್ತು ಜನನದಲ್ಲಿ ಒಬ್ಬ ವ್ಯಕ್ತಿಯು ಯಾವುದನ್ನಾದರೂ ಪಿತ್ರಾರ್ಜಿತವಾಗಿ ಪಡೆಯುವುದಾದರೆ ಅದೇನು? ಕೇವಲ “ಶಾರೀರಿಕ ಸ್ವಭಾವ ಲಕ್ಷಣಗಳು ಆನುವಂಶಿಕತೆಯಿಂದ ನಿರ್ಧರಿಸಲ್ಪಡುತ್ತವೆ.” ಇತರ ವೈಲಕ್ಷಣ್ಯಗಳು ಒಬ್ಬನ “ಹಿಂದಿನ ಜೀವನಗಳ ವರ್ತನೆಗಳಿಂದ” ನಿರ್ಧರಿಸಲ್ಪಡುತ್ತವೆ ಎಂದು ಹಿಂದೂ ಚಿಂತನಕಾರ ನಿಖಿಲಾನಂದರು ಹೇಳುತ್ತಾರೆ. ವಿವೇಕಾನಂದರಿಗನುಸಾರ, “ನಿಮ್ಮ ಅದೃಷ್ಟದ ನಿರ್ಮಾತೃ ನೀವೇ.” ಹಿಂದೂಮತವು ಪಿತ್ರಾರ್ಜಿತ ಪಾಪದ ಕುರಿತು ಏನೂ ಹೇಳುವುದಿಲ್ಲ.
ಸೊರಾಸ್ಟ್ರಿಯನರು, ಶಿಂಟೋಮತದವರು, ಕನ್ಫ್ಯೂಷಿಯನಿಸ್ಟರು ಮತ್ತು ಬೌದ್ಧರ ಮಧ್ಯೆಯೂ ಪಿತ್ರಾರ್ಜಿತವಾದ ಪಾಪದ ಕಲ್ಪನೆಯಿಲ್ಲ. ಸಾಂಪ್ರದಾಯಿಕವಾಗಿ ಪಿತ್ರಾರ್ಜಿತ ಪಾಪದ ಸಿದ್ಧಾಂತವನ್ನು ಕಲಿಸುತ್ತಿದ್ದ ಯೆಹೂದಿ-ಕ್ರೈಸ್ತ ಧರ್ಮಗಳಲ್ಲಿಯೂ, ಪಾಪದ ಕಡೆಗಿನ ಮನೋಭಾವವು ಬದಲಾಗುತ್ತಿದೆ. ಇಂದು ಹೆಚ್ಚೆಚ್ಚು ಜನರು ತಾವು ಪಾಪಪೂರ್ಣರೆಂದು ನಂಬುವುದಿಲ್ಲ.
“ಆಧುನಿಕ ಪ್ರಜ್ಞೆಯು ನೈತಿಕ ಖಂಡನೆಯನ್ನು ಪ್ರೋತ್ಸಾಹಿಸುವುದಿಲ್ಲ; ವಿಶೇಷವಾಗಿ, ಆತ್ಮಖಂಡನೆಯನ್ನು ಅದು ಪ್ರೋತ್ಸಾಹಿಸುವುದಿಲ್ಲ,” ಎಂದು ದೇವತಾಶಾಸ್ತ್ರಜ್ಞ ಕಾರ್ನೀಲ್ಯಸ್ ಪ್ಲ್ಯಾಂಟಿಗ್ ಜೂನ್ಯರ್ ಹೇಳುತ್ತಾರೆ. ಪಾಪವನ್ನು ಕ್ಷುಲ್ಲಕವಾಗಿ ಮಾಡಿರುವ ದೋಷದಲ್ಲಿ ಕ್ರೈಸ್ತ ಪ್ರಪಂಚದ ಚರ್ಚುಗಳಿಗೆ ತುಸು ಭಾಗವಿದೆ. “ಪಾಪದ ವಿಷಯ ಕೇಳಲು ಬಯಸುವಲ್ಲಿ ಚರ್ಚಿಗೆ ಹೋಗಬೇಡಿ” ಎನ್ನುತ್ತಾರೆ, ಡ್ಯೂಕ್ ವಿಶ್ವವಿದ್ಯಾನಿಲಯದ ಪಾದ್ರಿಯೊಬ್ಬರು. ಮತ್ತು ಪ್ಲ್ಯಾಟಿಂಗರಿಗನುಸಾರ, ಕೆಲವು ಚರ್ಚುಗಳು ಸಾಮಾಜಿಕ ವಿವಾದಾಂಶಗಳ ಸಂಬಂಧದಲ್ಲಿ ಮಾತ್ರ ಪಾಪದ ಕುರಿತು ಸಾಮಾನ್ಯವಾಗಿ ಮಾತಾಡುತ್ತವೆ.
ಇಂದು ಸಾಮಾಜಿಕ ದುರ್ಗತಿಗಳು ಅನೇಕ ಎಂಬುದು ಒಪ್ಪಬೇಕಾದ ವಿಷಯ. ಹಿಂಸಾಚಾರ, ಪಾತಕ, ಯುದ್ಧಗಳು, ಕುಲಸಂಬಂಧವಾದ ಕಲಹಗಳು, ಅಮಲೌಷಧದ ದುರುಪಯೋಗ, ಅಪ್ರಾಮಾಣಿಕತೆ, ಶೋಷಣೆ ಮತ್ತು ಮಕ್ಕಳ ವಿರುದ್ಧ ಹಿಂಸಾಚಾರಗಳು ಬಹಳವಾಗಿ ಹಬ್ಬಿವೆ. ವಾಸ್ತವವೇನಂದರೆ, ಈ ಇಪ್ಪತ್ತನೆಯ ಶತಮಾನವು, ಮಾನವಕುಲಕ್ಕೆ ತಿಳಿದಿರುವ ಅತ್ಯಂತ ನೆತ್ತರು ಹರಿಸಿದ ಶತಮಾನಗಳಲ್ಲಿ ಒಂದೆಂದು ಕರೆಯಲ್ಪಟ್ಟಿದೆ. ಇದಕ್ಕೆ, ಕಾಯಿಲೆ, ವಾರ್ಧಕ್ಯ ಮತ್ತು ಮರಣದ ಪರಿಣಾಮವಾಗಿ ಬರುವ ನೋವು ಮತ್ತು ಕಷ್ಟಾನುಭವವನ್ನು ಕೂಡಿಸಿರಿ. ಇಂದು ಜಗತ್ತಿನಲ್ಲಿರುವ ಈ ಭಾರೀ ಸಮಸ್ಯೆಗಳಿಂದ ವಿಮುಕ್ತಿಗಾಗಿ ಯಾರು ತಾನೇ ಹಾರೈಸದಿರುತ್ತಾರೆ?
ಹಾಗಾದರೆ, ಪಾಪದ ಕುರಿತು ನಿಮ್ಮ ವೀಕ್ಷಣವೇನು? ಪಾಪವು ಪಿತ್ರಾರ್ಜಿತವೊ? ನಾವು ಎಂದಾದರೂ ವೇದನೆ ಮತ್ತು ಕಷ್ಟಾನುಭವದಿಂದ ಮುಕ್ತಿಯನ್ನು ಅನುಭವಿಸುವೆವೊ? ಈ ಪ್ರಶ್ನೆಗಳನ್ನು ಮುಂದಿನ ಲೇಖನವು ಚರ್ಚಿಸುವುದು.
[ಅಧ್ಯಯನ ಪ್ರಶ್ನೆಗಳು]
a ಹಿಂದೂ ಶಾಸ್ತ್ರಗಳಾದ ವೇದಗಳ ಕೊನೆಯಲ್ಲಿ ಬರುವ ಉಪನಿಷತ್ತುಗಳ ಮೇಲೆ ವೇದಾಂತ ತತ್ತ್ವಜ್ಞಾನವು ಆಧಾರಿತವಾಗಿದೆ.